Virata Parva: Chapter 35

ವಿರಾಟ ಪರ್ವ: ಗೋಹರಣ ಪರ್ವ

೩೫

ಅರ್ಜುನನು ಉತ್ತರನಿಗೆ ಸಾರಥಿಯಾದುದು

ಉತ್ತರೆಯು ಬೃಹನ್ನಡೆಯನ್ನು ಒತ್ತಾಯಿಸಿ ಅಣ್ಣನಿದ್ದಲ್ಲಿಗೆ ಕರೆದುಕೊಂಡು ಬರುವುದು (೧-೯). ಉತ್ತರನು ಬೃಹನ್ನಡೆಯನ್ನು ತನ್ನ ಸಾರಥಿಯನ್ನಾಗಿ ನಿಯೋಜಿಸುವುದು (೧೦-೧೬). ಕವಚವನ್ನು ತೊಡುವಾಗ ಬೃಹನ್ನಡೆಯು ವಿನೋದದಿಂದ ನಡೆದುಕೊಂಡಿದುದು (೧೭-೨೧). ಗೊಂಬೆಗಳಿಗೆ ಕೌರವರ ಬಣ್ಣ ಬಣ್ಣದ ವಸ್ತ್ರಗಳನ್ನು ತೆಗೆದುಕೊಂಡು ಬನ್ನಿ ಎಂದು ಉತ್ತರೆಯು ಹೇಳಿಕಳುಹಿಸುವುದು (೨೨-೨೬).

04035001 ವೈಶಂಪಾಯನ ಉವಾಚ|

04035001a ಸ ತಾಂ ದೃಷ್ಟ್ವಾ ವಿಶಾಲಾಕ್ಷೀಂ ರಾಜಪುತ್ರೀಂ ಸಖೀಂ ಸಖಾ|

04035001c ಪ್ರಹಸನ್ನಬ್ರವೀದ್ರಾಜನ್ಕುತ್ರಾಗಮನಮಿತ್ಯುತ||

ವೈಶಂಪಾಯನನು ಹೇಳಿದನು: “ರಾಜ! ತನ್ನ ಸಖಿ ಆ ವಿಶಾಲಾಕ್ಷಿ ರಾಜಪುತ್ರಿಯನ್ನು ಕಂಡು ಅವಳ ಮಿತ್ರ ಅರ್ಜುನನು ನಗುತ್ತ “ಬಂದುದೇಕೆ?” ಎಂದು ಕೇಳಿದನು.

04035002a ತಮಬ್ರವೀದ್ರಾಜಪುತ್ರೀ ಸಮುಪೇತ್ಯ ನರರ್ಷಭಂ|

04035002c ಪ್ರಣಯಂ ಭಾವಯಂತೀ ಸ್ಮ ಸಖೀಮಧ್ಯ ಇದಂ ವಚಃ||

ರಾಜಪುತ್ರಿಯು ಆ ನರಶ್ರೇಷ್ಠನನ್ನು ಸಮೀಪಿಸಿ ವಿನಯವನ್ನು ತೋರುತ್ತಾ ಸಖಿಯರ ನಡುವೆ ಈ ಮಾತನ್ನಾಡಿದಳು:

04035003a ಗಾವೋ ರಾಷ್ಟ್ರಸ್ಯ ಕುರುಭಿಃ ಕಾಲ್ಯಂತೇ ನೋ ಬೃಹನ್ನಡೇ|

04035003c ತಾನ್ವಿಜೇತುಂ ಮಮ ಭ್ರಾತಾ ಪ್ರಯಾಸ್ಯತಿ ಧನುರ್ಧರಃ||

“ಬೃಹನ್ನಡೇ! ನಮ್ಮ ನಾಡಿನ ಗೋವುಗಳನ್ನು ಕುರುಗಳು ಒಯ್ಯುತ್ತಿದ್ದಾರೆ. ಅವರನ್ನು ಗೆಲ್ಲಲು ನನ್ನ ಸೋದರನು ಧನುರ್ಧರನಾಗಿ ಹೋಗುವನು.

04035004a ನಚಿರಂ ಚ ಹತಸ್ತಸ್ಯ ಸಂಗ್ರಾಮೇ ರಥಸಾರಥಿಃ|

04035004c ತೇನ ನಾಸ್ತಿ ಸಮಃ ಸೂತೋ ಯೋಽಸ್ಯ ಸಾರಥ್ಯಮಾಚರೇತ್||

ಅವನ ರಥದ ಸಾರಥಿಯು ಯುದ್ಧದಲ್ಲಿ ಸ್ವಲ್ಪ ಹಿಂದೆ ಹತನಾದನು. ಅವನಿಗೆ ಸಮನಾದ ಇವನ ಸಾರಥ್ಯವನ್ನು ಮಾಡುವ ಸೂತನು ಬೇರೆಯಿಲ್ಲ.

04035005a ತಸ್ಮೈ ಪ್ರಯತಮಾನಾಯ ಸಾರಥ್ಯರ್ಥಂ ಬೃಹನ್ನಡೇ|

04035005c ಆಚಚಕ್ಷೇ ಹಯಜ್ಞಾನೇ ಸೈರಂಧ್ರೀ ಕೌಶಲಂ ತವ||

ಬೃಹನ್ನಡೇ! ಸಾರಥಿಗಾಗಿ ಪ್ರಯತ್ನಿಸುತ್ತಿರುವ ಅವನಿಗೆ, ಅಶ್ವಜ್ಞಾನದಲ್ಲಿ ನಿನಗಿರುವ ಕೌಶಲವನ್ನು ಸೈರಂಧ್ರಿಯು ತಿಳಿಸಿದಳು.

04035006a ಸಾ ಸಾರಥ್ಯಂ ಮಮ ಭ್ರಾತುಃ ಕುರು ಸಾಧು ಬೃಹನ್ನಡೇ|

04035006c ಪುರಾ ದೂರತರಂ ಗಾವೋ ಹ್ರಿಯಂತೇ ಕುರುಭಿರ್ಹಿ ನಃ||

ಬೃಹನ್ನಡೇ! ನನ್ನ ಸೋದರನ ಸಾರಥ್ಯವನ್ನು ಚೆನ್ನಾಗಿ ಮಾಡು. ನಮ್ಮ ಗೋವುಗಳನ್ನು ಕುರುಗಳು ಇಷ್ಟರಲ್ಲಿ ಬಹುದೂರ ಅಟ್ಟಿಕೊಂಡು ಹೋಗಿರುತ್ತಾರೆ.

04035007a ಅಥೈತದ್ವಚನಂ ಮೇಽದ್ಯ ನಿಯುಕ್ತಾ ನ ಕರಿಷ್ಯಸಿ|

04035007c ಪ್ರಣಯಾದುಚ್ಯಮಾನಾ ತ್ವಂ ಪರಿತ್ಯಕ್ಷ್ಯಾಮಿ ಜೀವಿತಂ||

ವಿಶ್ವಾಸದಿಂದ ನಾನು ನಿಯೋಜಿಸಿ ಹೇಳುತ್ತಿರುವ ಮಾತನ್ನು ನೀನು ನಡೆಸಿಕೊಡದಿದ್ದರೆ ನಾನು ಪ್ರಾಣತ್ಯಾಗ ಮಾಡುತ್ತೇನೆ.”

04035008a ಏವಮುಕ್ತಸ್ತು ಸುಶ್ರೋಣ್ಯಾ ತಯಾ ಸಖ್ಯಾ ಪರಂತಪಃ|

04035008c ಜಗಾಮ ರಾಜಪುತ್ರಸ್ಯ ಸಕಾಶಮಮಿತೌಜಸಃ||

ಆ ಸುಂದರ ಗೆಳತಿಯು ಹೀಗೆ ಹೇಳಲು ಶತ್ರುನಾಶಕ ಅರ್ಜುನನು ಅಮಿತ ಶಕ್ತಿಶಾಲಿ ರಾಜಪುತ್ರನ ಬಳಿ ಹೋದನು.

04035009a ತಂ ಸಾ ವ್ರಜಂತಂ ತ್ವರಿತಂ ಪ್ರಭಿನ್ನಮಿವ ಕುಂಜರಂ|

04035009c ಅನ್ವಗಚ್ಛದ್ವಿಶಾಲಾಕ್ಷೀ ಶಿಶುರ್ಗಜವಧೂರಿವ||

ಒಡೆದ ಗಂಡಸ್ಥಲವುಳ್ಳ ಆನೆಯಂತೆ ವೇಗವಾಗಿ ಹೋಗುತ್ತಿದ್ದ ಅವನನ್ನು ಹೆಣ್ಣಾನೆಯನ್ನು ಅನುಸರಿಸುವ ಮರಿಯಂತೆ ಆ ವಿಶಾಲಾಕ್ಷಿಯು ಅನುಸರಿಸಿದಳು.

04035010a ದೂರಾದೇವ ತು ತಂ ಪ್ರೇಕ್ಷ್ಯ ರಾಜಪುತ್ರೋಽಭ್ಯಭಾಷತ|

04035010c ತ್ವಯಾ ಸಾರಥಿನಾ ಪಾರ್ಥಃ ಖಾಂಡವೇಽಗ್ನಿಮತರ್ಪಯತ್||

ಅವನನ್ನು ದೂರದಿಂದಲೇ ನೋಡಿ ರಾಜಪುತ್ರನು ಹೇಳಿದನು: “ನಿನ್ನನ್ನು ಸಾರಥಿಯನ್ನಾಗಿ ಮಾಡಿಕೊಂಡು ಪಾರ್ಥನು ಖಾಂಡವದಲ್ಲಿ ಅಗ್ನಿಯನ್ನು ತೃಪ್ತಿಪಡಿಸಿದನು.

04035011a ಪೃಥಿವೀಮಜಯತ್ಕೃತ್ಸ್ನಾಂ ಕುಂತೀಪುತ್ರೋ ಧನಂಜಯಃ|

04035011c ಸೈರಂಧ್ರೀ ತ್ವಾಂ ಸಮಾಚಷ್ಟ ಸಾ ಹಿ ಜಾನಾತಿ ಪಾಂಡವಾನ್||

ಅಲ್ಲದೇ ಕುಂತೀಪುತ್ರ ಧನಂಜಯನು ಪೃಥ್ವಿಯನ್ನು ಸಂಪೂರ್ಣವಾಗಿ ಜಯಿಸಿದನು ಎಂದು ಸೈರಂಧ್ರಿಯು ನಿನ್ನ ಕುರಿತು ಹೇಳಿದ್ದಾಳೆ. ಅವಳಿಗೆ ಪಾಂಡವರು ಗೊತ್ತು.

04035012a ಸಮ್ಯಚ್ಛ ಮಾಮಕಾನಶ್ವಾಂಸ್ತಥೈವ ತ್ವಂ ಬೃಹನ್ನಡೇ|

04035012c ಕುರುಭಿರ್ಯೋತ್ಸ್ಯಮಾನಸ್ಯ ಗೋಧನಾನಿ ಪರೀಪ್ಸತಃ||

ಆದ್ದರಿಂದ ಬೃಹನ್ನಡೇ! ಗೋಧನವನ್ನು ಮತ್ತೆ ತರಲು ಕುರುಗಳೊಡನೆ ಹೋರಾಡುವ ನನ್ನ ಕುದುರೆಗಳನ್ನು ನೀನು ಹಿಂದೆನಂತೆಯೇ ನಡೆಸು.

04035013a ಅರ್ಜುನಸ್ಯ ಕಿಲಾಸೀಸ್ತ್ವಂ ಸಾರಥಿರ್ದಯಿತಃ ಪುರಾ|

04035013c ತ್ವಯಾಜಯತ್ಸಹಾಯೇನ ಪೃಥಿವೀಂ ಪಾಂಡವರ್ಷಭಃ||

ಹಿಂದೆ ನೀನು ಅರ್ಜುನನ ಪ್ರಿಯ ಸಾರಥಿಯಾಗಿದ್ದೆಯಷ್ಟೆ! ನಿನ್ನ ಸಹಾಯದಿಂದ ಆ ಪಾಂಡವಶ್ರೇಷ್ಠನು ಲೋಕವನ್ನು ಜಯಿಸಿದನು.”

04035014a ಏವಮುಕ್ತಾ ಪ್ರತ್ಯುವಾಚ ರಾಜಪುತ್ರಂ ಬೃಹನ್ನಡಾ|

04035014c ಕಾ ಶಕ್ತಿರ್ಮಮ ಸಾರಥ್ಯಂ ಕರ್ತುಂ ಸಂಗ್ರಾಮಮೂರ್ಧನಿ||

ಉತ್ತರನು ಹೀಗೆ ಹೇಳಲು ಬೃಹನ್ನಡೆಯು ರಾಜಪುತ್ರನಿಗೆ ಮರುನುಡಿದಳು: “ಯುದ್ಧರಂಗದಲ್ಲಿ ಸಾರಥ್ಯಮಾಡಲು ನನಗಾವ ಶಕ್ತಿಯಿದೆ?

04035015a ಗೀತಂ ವಾ ಯದಿ ವಾ ನೃತ್ತಂ ವಾದಿತ್ರಂ ವಾ ಪೃಥಗ್ವಿಧಂ|

04035015c ತತ್ಕರಿಷ್ಯಾಮಿ ಭದ್ರಂ ತೇ ಸಾರಥ್ಯಂ ತು ಕುತೋ ಮಯಿ||

ಗೀತವೋ ನೃತ್ಯವೋ ವಾದ್ಯವೋ ಮತ್ತಾವುದೋ ಆದರೆ ನಾನು ನಿರ್ವಹಿಸಬಲ್ಲೆ. ನನಗೆ ಸಾರಥ್ಯವೆಲ್ಲಿಯದು? ನಿನಗೆ ಮಂಗಳವಾಗಲಿ.”

04035016 ಉತ್ತರ ಉವಾಚ|

04035016a ಬೃಹನ್ನಡೇ ಗಾಯನೋ ವಾ ನರ್ತನೋ ವಾ ಪುನರ್ಭವ|

04035016c ಕ್ಷಿಪ್ರಂ ಮೇ ರಥಮಾಸ್ಥಾಯ ನಿಗೃಹ್ಣೀಷ್ವ ಹಯೋತ್ತಮಾನ್||

ಉತ್ತರನು ಹೇಳಿದನು: “ಬೃಹನ್ನಡೇ! ಮತ್ತೆ ನೀನು ಗಾಯಕನೋ ನರ್ತಕನೋ ಆಗುವೆಯಂತೆ. ಸದ್ಯಕ್ಕೆ ಈಗ ಬೇಗ ನನ್ನ ರಥವನ್ನೇರಿ ಉತ್ತಮಾಶ್ವಗಳನ್ನು ನಿಯಂತ್ರಿಸು.””

04035017 ವೈಶಂಪಾಯನ ಉವಾಚ|

04035017a ಸ ತತ್ರ ನರ್ಮಸಮ್ಯುಕ್ತಮಕರೋತ್ಪಾಂಡವೋ ಬಹು|

04035017c ಉತ್ತರಾಯಾಃ ಪ್ರಮುಖತಃ ಸರ್ವಂ ಜಾನನ್ನರಿಂದಮ||

ವೈಶಂಪಾಯನನು ಹೇಳಿದನು: “ಶತ್ರುನಾಶಕನೇ! ಆ ಪಾಂಡವನು ಎಲ್ಲವನ್ನೂ ಅರಿತಿದ್ದರೂ ಉತ್ತರೆಯ ಮುಂದೆ ವಿನೋದದಿಂದ ನಡೆದುಕೊಂಡನು.

04035018a ಊರ್ಧ್ವಮುತ್ಕ್ಷಿಪ್ಯ ಕವಚಂ ಶರೀರೇ ಪ್ರತ್ಯಮುಂಚತ|

04035018c ಕುಮಾರ್ಯಸ್ತತ್ರ ತಂ ದೃಷ್ಟ್ವಾ ಪ್ರಾಹಸನ್ಪೃಥುಲೋಚನಾಃ||

ಅವನು ಕವಚವನ್ನು ಮಗುಚಿ ಮೈಗೆ ತೊಟ್ಟುಕೊಂಡನು. ಅದನ್ನು ನೋಡಿ ಅಲ್ಲಿದ್ದ ಬೊಗಸೆಗಣ್ಣಿನ ಕುಮಾರಿಯರು ನಕ್ಕುಬಿಟ್ಟರು.

04035019a ಸ ತು ದೃಷ್ಟ್ವಾ ವಿಮುಹ್ಯಂತಂ ಸ್ವಯಮೇವೋತ್ತರಸ್ತತಃ|

04035019c ಕವಚೇನ ಮಹಾರ್ಹೇಣ ಸಮನಹ್ಯದ್ಬೃಹನ್ನಡಾಂ||

ಆಗ ಅವನು ಗೊಂದಲಗೊಂಡಿದ್ದುದನ್ನು ಕಂಡು ಸ್ವತಃ ಉತ್ತರನು ಬೆಲೆಬಾಳುವ ಕವಚವನ್ನು ಬೃಹನ್ನಡೆಗೆ ತೊಡಿಸಿದನು.

04035020a ಸ ಬಿಭ್ರತ್ಕವಚಂ ಚಾಗ್ರ್ಯಂ ಸ್ವಯಮಪ್ಯಂಶುಮತ್ಪ್ರಭಂ|

04035020c ಧ್ವಜಂ ಚ ಸಿಂಹಮುಚ್ಛ್ರಿತ್ಯ ಸಾರಥ್ಯೇ ಸಮಕಲ್ಪಯತ್||

ಅವನು ಸ್ವತಃ ಸೂರ್ಯಪ್ರಭೆಯುಳ್ಳ ಶ್ರೇಷ್ಠ ಕವಚವನ್ನು ಧರಿಸಿ, ಸಿಂಹಧ್ವಜವನ್ನೇರಿಸಿ, ಬೃಹನ್ನಡೆಯನ್ನು ಸಾರಥ್ಯದಲ್ಲಿ ತೊಡಗಿಸಿದನು.

04035021a ಧನೂಂಷಿ ಚ ಮಹಾರ್ಹಾಣಿ ಬಾಣಾಂಶ್ಚ ರುಚಿರಾನ್ಬಹೂನ್|

04035021c ಆದಾಯ ಪ್ರಯಯೌ ವೀರಃ ಸ ಬೃಹನ್ನಡಸಾರಥಿಃ||

ಆ ವೀರನು ಬೃಹನ್ನಡೆಯನ್ನು ಸಾರಥಿಯನ್ನಾಗಿ ಮಾಡಿಕೊಂಡು ಅನರ್ಘ್ಯ ಬಿಲ್ಲುಗಳನ್ನೂ, ಹೊಳೆಹೊಳೆಯುವ ಬಹು ಬಾಣಗಳನ್ನೂ ತೆಗೆದುಕೊಂಡು ಹೊರಟನು.

04035022a ಅಥೋತ್ತರಾ ಚ ಕನ್ಯಾಶ್ಚ ಸಖ್ಯಸ್ತಾಮಬ್ರುವಂಸ್ತದಾ|

04035022c ಬೃಹನ್ನಡೇ ಆನಯೇಥಾ ವಾಸಾಂಸಿ ರುಚಿರಾಣಿ ನಃ||

04035023a ಪಾಂಚಾಲಿಕಾರ್ಥಂ ಸೂಕ್ಷ್ಮಾಣಿ ಚಿತ್ರಾಣಿ ವಿವಿಧಾನಿ ಚ|

04035023c ವಿಜಿತ್ಯ ಸಂಗ್ರಾಮಗತಾನ್ಭೀಷ್ಮದ್ರೋಣಮುಖಾನ್ಕುರೂನ್||

ಅಗ ಉತ್ತರೆಯೂ ಸಖೀ ಕನ್ಯೆಯರೂ ಅವನಿಗೆ ಹೇಳಿದರು: “ಬೃಹನ್ನಡೇ! ಯುದ್ಧಕ್ಕೆ ಬಂದಿರುವ ಭೀಷ್ಮ-ದ್ರೋಣ ಪ್ರಮುಖ ಕುರುಗಳನ್ನು ಗೆದ್ದು, ನಮ್ಮ ಗೊಂಬೆಗಳಿಗಾಗಿ ಸುಂದರ ಸೂಕ್ಷ್ಮ ಬಣ್ಣಬಣ್ಣದ ವಿವಿಧ ವಸ್ತ್ರಗಳನ್ನು ತೆಗೆದುಕೊಂಡು ಬಾ.”

04035024a ಅಥ ತಾ ಬ್ರುವತೀಃ ಕನ್ಯಾಃ ಸಹಿತಾಃ ಪಾಂಡುನಂದನಃ|

04035024c ಪ್ರತ್ಯುವಾಚ ಹಸನ್ಪಾರ್ಥೋ ಮೇಘದುಂದುಭಿನಿಃಸ್ವನಃ||

ಬಳಿಕ, ಪಾಂಡುಪುತ್ರ ಪಾರ್ಥನು ನಗುತ್ತ ಹಾಗೆ ನುಡಿಯುತ್ತಿರುವ ಕನ್ಯೆಯರ ಗುಂಪಿಗೆ ಮೇಘ ದುಂದುಭಿ ಧ್ವನಿಯಿಂದ ಮರುನುಡಿದನು:

04035025a ಯದ್ಯುತ್ತರೋಽಯಂ ಸಂಗ್ರಾಮೇ ವಿಜೇಷ್ಯತಿ ಮಹಾರಥಾನ್|

04035025c ಅಥಾಹರಿಷ್ಯೇ ವಾಸಾಂಸಿ ದಿವ್ಯಾನಿ ರುಚಿರಾಣಿ ಚ||

“ಈ ಉತ್ತರನು ಯುದ್ಧದಲ್ಲಿ ಮಹಾರಥರನ್ನು ಗೆದ್ದರೆ ನಾನು ಆ ದಿವ್ಯ ಸುಂದರ ವಸ್ತ್ರಗಳನ್ನು ತರುತ್ತೇನೆ.”

04035026a ಏವಮುಕ್ತ್ವಾ ತು ಬೀಭತ್ಸುಸ್ತತಃ ಪ್ರಾಚೋದಯದ್ಧಯಾನ್|

04035026c ಕುರೂನಭಿಮುಖಾಂ ಶೂರೋ ನಾನಾಧ್ವಜಪತಾಕಿನಃ||

ಹೀಗೆ ನುಡಿದು ಶೂರ ಅರ್ಜುನನು ನಾನಾಧ್ವಜ ಪತಾಕೆಗಳಿಂದ ಕೂಡಿದ ಕುರುಸೇನೆಗೆ ಅಭಿಮುಖವಾಗಿ ಕುದುರೆಗಳನ್ನು ಪ್ರಚೋದಿಸಿದನು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಉತ್ತರನಿರ್ಯಾಣೇ ಪಂಚತ್ರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಉತ್ತರನಿರ್ಯಾಣದಲ್ಲಿ ಮೂವತ್ತೈದನೆಯ ಅಧ್ಯಾಯವು.

Image result for flowers against white background

Comments are closed.