ವಿರಾಟ ಪರ್ವ: ಗೋಹರಣ ಪರ್ವ
೩೪
ಸ್ತ್ರೀಯರ ಮುಂದೆ ಉತ್ತರನ ಪೌರುಷ
ಸಮರ್ಥ ಸಾರಥಿಯಿದ್ದರೆ ತನ್ನ ಪರಾಕ್ರಮದಿಂದ ಗೋವುಗಳನ್ನು ಬಿಡಿಸಿಕೊಂಡು ಬರುತ್ತಿದ್ದೆ ಎಂದು ಭೂಮಿಂಜಯ ಉತ್ತರನು ತನ್ನ ಪೌರುಷವನ್ನು ಕೊಚ್ಚಿಕೊಳ್ಳುವುದು (೧-೯). ಅದನ್ನು ನೋಡಿ ಸೈರಿಸಲಾರದೇ ಸೈರಂಧ್ರಿಯು ಅಂತಃಪುರದಲ್ಲಿದ್ದ ಬೃಹನ್ನಡೆಯು ಅರ್ಜುನನ ಸಾರಥಿಯಾಗಿದ್ದನೆನ್ನಲು (೧೦-೧೭), ಉತ್ತರನು ಬೃಹನ್ನಡೆಯನ್ನು ಕರೆತರಲು ತಂಗಿ ಉತ್ತರೆಯನ್ನು ಕಳುಹಿಸಿದುದು (೧೮-೧೯).
04034001 ಉತ್ತರ ಉವಾಚ|
04034001a ಅದ್ಯಾಹಮನುಗಚ್ಛೇಯಂ ದೃಢಧನ್ವಾ ಗವಾಂ ಪದಂ|
04034001c ಯದಿ ಮೇ ಸಾರಥಿಃ ಕಶ್ಚಿದ್ಭವೇದಶ್ವೇಷು ಕೋವಿದಃ||
ಉತ್ತರನು ಹೇಳಿದನು: “ಅಶ್ವಕೋವಿದನಾದ ಯಾವನಾದರೂ ನನಗೆ ಸಾರಥಿಯಾಗುವುದಾದರೆ ದೃಢಧನುರ್ಧರನಾದ ನಾನು ಈ ದಿವಸವೇ ಹಸುಗಳ ಜಾಡನ್ನು ಅನುಸರಿಸುತ್ತೇನೆ.
04034002a ತಮೇವ ನಾಧಿಗಚ್ಛಾಮಿ ಯೋ ಮೇ ಯಂತಾ ಭವೇನ್ನರಃ|
04034002c ಪಶ್ಯಧ್ವಂ ಸಾರಥಿಂ ಕ್ಷಿಪ್ರಂ ಮಮ ಯುಕ್ತಂ ಪ್ರಯಾಸ್ಯತಃ||
ನನಗೆ ಸಾರಥಿಯಾಗುವ ವ್ಯಕ್ತಿಯನ್ನೇ ನಾನು ಅರಿಯೆನಲ್ಲ! ಆದ್ದರಿಂದ ಹೊರಟಿರುವ ನನಗೆ ತಕ್ಕ ಸಾರಥಿಯನ್ನು ಬೇಗ ಹುಡುಕಿ!
04034003a ಅಷ್ಟಾವಿಂಶತಿರಾತ್ರಂ ವಾ ಮಾಸಂ ವಾ ನೂನಮಂತತಃ|
04034003c ಯತ್ತದಾಸೀನ್ಮಹದ್ಯುದ್ಧಂ ತತ್ರ ಮೇ ಸಾರಥಿರ್ಹತಃ||
ಇಪ್ಪತ್ತೆಂಟು ರಾತ್ರಿಯೋ ಒಂದು ತಿಂಗಳೋ ನಡೆದ ಮಹಾಯುದ್ಧದಲ್ಲಿ ನನ್ನ ಸಾರಥಿ ಹತನಾದುದು ನಿಶ್ಚಯವಷ್ಟೇ!
04034004a ಸ ಲಭೇಯಂ ಯದಿ ತ್ವನ್ಯಂ ಹಯಯಾನವಿದಂ ನರಂ|
04034004c ತ್ವರಾವಾನದ್ಯ ಯಾತ್ವಾಹಂ ಸಮುಚ್ಛ್ರಿತಮಹಾಧ್ವಜಂ||
04034005a ವಿಗಾಹ್ಯ ತತ್ಪರಾನೀಕಂ ಗಜವಾಜಿರಥಾಕುಲಂ|
04034005c ಶಸ್ತ್ರಪ್ರತಾಪನಿರ್ವೀರ್ಯಾನ್ಕುರೂಂ ಜಿತ್ವಾನಯೇ ಪಶೂನ್||
ರಥವನ್ನು ನಡೆಸಬಲ್ಲ ಮತ್ತೊಬ್ಬ ವ್ಯಕ್ತಿ ಸಿಗುವುದಾದಲ್ಲಿ, ನಾನಿಂದು ಮಹಾಧ್ವಜವನ್ನೇರಿಸಿ, ಶೀಘ್ರವಾಗಿ ಹೋಗಿ, ಆನೆ, ಕುದುರೆ ರಥಗಳಿಂದ ಕಿಕ್ಕಿರಿದ ಆ ಶತ್ರುಸೈನ್ಯವನ್ನು ಹೊಕ್ಕು, ಶಸ್ತ್ರ-ಪ್ರತಾಪಗಳಲ್ಲಿ ನಿರ್ವೀರ್ಯ ಕುರುಗಳನ್ನು ಗೆದ್ದು ಹಸುಗಳನ್ನು ಬಿಡಿಸಿ ತರುತ್ತೇನೆ.
04034006a ದುರ್ಯೋಧನಂ ಶಾಂತನವಂ ಕರ್ಣಂ ವೈಕರ್ತನಂ ಕೃಪಂ|
04034006c ದ್ರೋಣಂ ಚ ಸಹ ಪುತ್ರೇಣ ಮಹೇಷ್ವಾಸಾನ್ಸಮಾಗತಾನ್||
04034007a ವಿತ್ರಾಸಯಿತ್ವಾ ಸಂಗ್ರಾಮೇ ದಾನವಾನಿವ ವಜ್ರಭೃತ್|
04034007c ಅನೇನೈವ ಮುಹೂರ್ತೇನ ಪುನಃ ಪ್ರತ್ಯಾನಯೇ ಪಶೂನ್||
ಅಲ್ಲಿ ಸೇರಿರುವ ದುರ್ಯೋಧನ, ಭೀಷ್ಮ, ಸೂರ್ಯಪುತ್ರ ಕರ್ಣ, ಕೃಪ, ಪುತ್ರಸಹಿತ ದ್ರೋಣ – ಈ ಎಲ್ಲ ದೊಡ್ಡ ಬಿಲ್ಗಾರರನ್ನೂ ಯುದ್ಧದಲ್ಲಿ ಇಂದ್ರನು ರಾಕ್ಷಸರನ್ನು ಹೆದರಿಸಿದಂತೆ ಹೆದರಿಸಿ, ಈ ಗಳಿಗೆಯಲ್ಲಿ ಹಸುಗಳನ್ನು ಮರಳಿ ತರುತ್ತೇನೆ.
04034008a ಶೂನ್ಯಮಾಸಾದ್ಯ ಕುರವಃ ಪ್ರಯಾಂತ್ಯಾದಾಯ ಗೋಧನಂ|
04034008c ಕಿಂ ನು ಶಕ್ಯಂ ಮಯಾ ಕರ್ತುಂ ಯದಹಂ ತತ್ರ ನಾಭವಂ||
ಯಾರೂ ಇಲ್ಲದಿರುವುದನ್ನು ಕಂಡು ಕುರುಗಳು ನಮ್ಮ ಗೋಧನವನ್ನು ಹಿಡಿದುಕೊಂಡು ಹೋಗುತ್ತಿದ್ದಾರೆ. ಅಲ್ಲಿಲ್ಲದಿರುವಾಗ ನಾನು ಏನು ತಾನೆ ಮಾಡುವುದು ಸಾಧ್ಯ?
04034009a ಪಶ್ಯೇಯುರದ್ಯ ಮೇ ವೀರ್ಯಂ ಕುರವಸ್ತೇ ಸಮಾಗತಾಃ|
04034009c ಕಿಂ ನು ಪಾರ್ಥೋಽರ್ಜುನಃ ಸಾಕ್ಷಾದಯಮಸ್ಮಾನ್ಪ್ರಬಾಧತೇ||
ನಮ್ಮನ್ನು ಬಾಧಿಸುತ್ತಿರುವ ಇವನು ಸಾಕ್ಷಾತ್ ಕುಂತೀಪುತ್ರ ಅರ್ಜುನನೇನು? ಎಂದು ನೆರೆದಿರುವ ಕೌರವರು ಮಾತನಾಡಿಕೊಳ್ಳುತ್ತಾ ನನ್ನ ಪರಾಕ್ರಮವನ್ನಿಂದು ಕಾಣುವರು.””
04034010 ವೈಶಂಪಾಯನ ಉವಾಚ|
04034010a ತಸ್ಯ ತದ್ವಚನಂ ಸ್ತ್ರೀಷು ಭಾಷತಃ ಸ್ಮ ಪುನಃ ಪುನಃ|
04034010c ನಾಮರ್ಷಯತ ಪಾಂಚಾಲೀ ಬೀಭತ್ಸೋಃ ಪರಿಕೀರ್ತನಂ||
ವೈಶಂಪಾಯನನು ಹೇಳಿದನು: “ಸ್ತ್ರೀಯರ ನಡುವೆ ಮತ್ತೆ ಮತ್ತೆ ಆಡುತ್ತಿದ್ದ ಅವನ ಆ ಮಾತನ್ನೂ ಅವನು ಅರ್ಜುನನ ಹೆಸರನ್ನೆತ್ತಿದುದನ್ನೂ ದ್ರೌಪದಿಯು ಸೈರಿಸದಾದಳು.
04034011a ಅಥೈನಮುಪಸಂಗಮ್ಯ ಸ್ತ್ರೀಮಧ್ಯಾತ್ಸಾ ತಪಸ್ವಿನೀ|
04034011c ವ್ರೀಡಮಾನೇವ ಶನಕೈರಿದಂ ವಚನಮಬ್ರವೀತ್||
ಬಳಿಕ ಆ ಬಡಪಾಯಿಯು ಸ್ತ್ರೀಮಧ್ಯದಿಂದ ಎದ್ದು ಬಂದು, ಲಜ್ಜೆಯಿಂದೆಂಬಂತೆ ಮೆಲ್ಲಗೆ ಈ ಮಾತುಗಳನ್ನಾಡಿದಳು:
04034012a ಯೋಽಸೌ ಬೃಹದ್ವಾರಣಾಭೋ ಯುವಾ ಸುಪ್ರಿಯದರ್ಶನಃ|
04034012c ಬೃಹನ್ನಡೇತಿ ವಿಖ್ಯಾತಃ ಪಾರ್ಥಸ್ಯಾಸೀತ್ಸ ಸಾರಥಿಃ||
“ದೊಡ್ಡ ಆನೆಯಂತಿರುವವನೂ, ಸುಂದರನೂ ಆದ ಬೃಹನ್ನಡೆ ಎಂಬ ಈ ಯುವಕನು ಪಾರ್ಥನ ಪ್ರಸಿದ್ಧ ಸಾರಥಿಯಾಗಿದ್ದನು.
04034013a ಧನುಷ್ಯನವರಶ್ಚಾಸೀತ್ತಸ್ಯ ಶಿಷ್ಯೋ ಮಹಾತ್ಮನಃ|
04034013c ದೃಷ್ಟಪೂರ್ವೋ ಮಯಾ ವೀರ ಚರಂತ್ಯಾ ಪಾಂಡವಾನ್ಪ್ರತಿ||
ವೀರ! ಆ ಮಹಾತ್ಮನ ಶಿಷ್ಯನೂ ಧನುರ್ವಿದ್ಯೆಯಲ್ಲಿ ಯಾರಿಗೂ ಕಡಿಮೆಯಿಲ್ಲದವನೂ ಆದ ಇವನನ್ನು ಹಿಂದೆ ನಾನು ಪಾಂಡವರೊಡನಿದ್ದಾಗ ನೋಡಿದ್ದೆ.
04034014a ಯದಾ ತತ್ಪಾವಕೋ ದಾವಮದಹತ್ಖಾಂಡವಂ ಮಹತ್|
04034014c ಅರ್ಜುನಸ್ಯ ತದಾನೇನ ಸಂಗೃಹೀತಾ ಹಯೋತ್ತಮಾಃ||
ಆ ದೊಡ್ಡ ಖಾಂಡವವನವನ್ನು ದಾವಾಗ್ನಿಯು ಸುಟ್ಟು ಹಾಕಿದಾಗ ಅರ್ಜನನ ಶ್ರೇಷ್ಠ ಕುದುರೆಗಳನ್ನು ಹಿಡಿದಿದ್ದವನು ಇವನೇ!
04034015a ತೇನ ಸಾರಥಿನಾ ಪಾರ್ಥಃ ಸರ್ವಭೂತಾನಿ ಸರ್ವಶಃ|
04034015c ಅಜಯತ್ಖಾಂಡವಪ್ರಸ್ಥೇ ನ ಹಿ ಯಂತಾಸ್ತಿ ತಾದೃಶಃ||
ಈ ಸಾರಥಿಯೊಡನೆಯೇ ಪಾರ್ಥನು ಖಾಂಡವಪ್ರಸ್ಥದಲ್ಲಿ ಎಲ್ಲ ಜೀವಿಗಳನ್ನೂ ಸಂಪೂರ್ಣವಾಗಿ ಗೆದ್ದನು. ಇವನಿಗೆ ಸದೃಶನಾದ ಸಾರಥಿಯಿಲ್ಲ.
04034016a ಯೇಯಂ ಕುಮಾರೀ ಸುಶ್ರೋಣೀ ಭಗಿನೀ ತೇ ಯವೀಯಸೀ|
04034016c ಅಸ್ಯಾಃ ಸ ವಚನಂ ವೀರ ಕರಿಷ್ಯತಿ ನ ಸಂಶಯಃ||
ವೀರ! ನಿನ್ನ ಈ ಕುಮಾರಿ ಸುಂದರಿ ತಂಗಿಯ ಮಾತನ್ನು ಅವನು ನಿಸ್ಸಂದೇಹವಾಗಿ ನಡೆಸಿಕೊಳ್ಳುತ್ತಾನೆ.
04034017a ಯದಿ ವೈ ಸಾರಥಿಃ ಸ ಸ್ಯಾತ್ಕುರೂನ್ಸರ್ವಾನಸಂಶಯಂ|
04034017c ಜಿತ್ವಾ ಗಾಶ್ಚ ಸಮಾದಾಯ ಧ್ರುವಮಾಗಮನಂ ಭವೇತ್||
ಅವನು ನಿನಗೆ ಸಾರಥಿಯಾದರೆ ನೀನು ಎಲ್ಲ ಕೌರವರನ್ನೂ ನಿಸ್ಸಂಶಯವಾಗಿ ಗೆದ್ದು ಗೋವುಗಳನ್ನು ಖಂಡಿತವಾಗಿಯೂ ಮರಳಿ ಪಡೆದು ಹಿಂದಿರುಗುವೆ.”
04034018a ಏವಮುಕ್ತಃ ಸ ಸೈರಂಧ್ರ್ಯಾ ಭಗಿನೀಂ ಪ್ರತ್ಯಭಾಷತ|
04034018c ಗಚ್ಛ ತ್ವಮನವದ್ಯಾಂಗಿ ತಾಮಾನಯ ಬೃಹನ್ನಡಾಂ||
ಸೈರಂಧ್ರಿಯು ಹೀಗೆ ಹೇಳಲು ಅವನು ಸೋದರಿಗೆ ನುಡಿದನು: “ಸುಂದರಿ! ನೀನು ಹೋಗು! ಆ ಬೃಹನ್ನಡೆಯನ್ನು ಕರೆದು ತಾ!”
04034019a ಸಾ ಭ್ರಾತ್ರಾ ಪ್ರೇಷಿತಾ ಶೀಘ್ರಮಗಚ್ಛನ್ನರ್ತನಾಗೃಹಂ|
04034019c ಯತ್ರಾಸ್ತೇ ಸ ಮಹಾಬಾಹುಶ್ಚನ್ನಃ ಸತ್ರೇಣ ಪಾಂಡವಃ||
ಸೋದರನಿಂದ ಕಳುಹಿಸಲ್ಪಟ್ಟ ಅವಳು ಆ ಮಹಾಬಾಹು ಅರ್ಜುನನು ವೇಷಮರೆಸಿಕೊಂಡು ವಾಸಿಸುತ್ತಿದ್ದ ನರ್ತನಗೃಹಕ್ಕೆ ಶೀಘ್ರವಾಗಿ ಹೋದಳು.”
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಬೃಹನ್ನಲಾಸಾರಥ್ಯಕಥನೇ ಚತುಸ್ತ್ರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಬೃಹನ್ನಲಾಸಾರಥ್ಯಕಥನದಲ್ಲಿ ಮೂವತ್ನಾಲ್ಕನೆಯ ಅಧ್ಯಾಯವು.