ಉದ್ಯೋಗ ಪರ್ವ: ಭಗವದ್ಯಾನ ಪರ್ವ
೯೮
ನಾರದನು ದೈತ್ಯ-ದಾನವರ ಹಿರಣ್ಯಪುರವನ್ನು ಮಾತಲಿಗೆ ತೋರಿಸಿದುದು (೧-೧೫).
05098001 ನಾರದ ಉವಾಚ|
05098001a ಹಿರಣ್ಯಪುರಮಿತ್ಯೇತತ್ಖ್ಯಾತಂ ಪುರವರಂ ಮಹತ್|
05098001c ದೈತ್ಯಾನಾಂ ದಾನವಾನಾಂ ಚ ಮಾಯಾಶತವಿಚಾರಿಣಾಂ||
ನಾರದನು ಹೇಳಿದನು: “ಇದು ಪುರಗಳಲ್ಲಿಯೇ ಶ್ರೇಷ್ಠವೆನಿಸಿಕೊಂಡಿರುವ, ದೈತ್ಯ-ದಾನವರ, ನೂರಾರು ಮಾಯಾವಿಚಾರಗಳನ್ನುಳ್ಳ ಮಹಾ ಹಿರಣ್ಯಪುರ.
05098002a ಅನಲ್ಪೇನ ಪ್ರಯತ್ನೇನ ನಿರ್ಮಿತಂ ವಿಶ್ವಕರ್ಮಣಾ|
05098002c ಮಯೇನ ಮನಸಾ ಸೃಷ್ಟಂ ಪಾತಾಲತಲಮಾಶ್ರಿತಂ||
ಪಾತಾಲತಲದಲ್ಲಿರುವ ಇದನ್ನು ಮಯನು ಮನಸ್ಸಿನಲ್ಲಿಯೇ ರಚಿಸಿದನು ಮತ್ತು ವಿಶ್ವಕರ್ಮನು ತುಂಬಾ ಪ್ರಯತ್ನಪಟ್ಟು ನಿರ್ಮಿಸಿದನು.
05098003a ಅತ್ರ ಮಾಯಾಸಹಸ್ರಾಣಿ ವಿಕುರ್ವಾಣಾ ಮಹೌಜಸಃ|
05098003c ದಾನವಾ ನಿವಸಂತಿ ಸ್ಮ ಶೂರಾ ದತ್ತವರಾಃ ಪುರಾ||
ಹಿಂದೆ ವರಗಳನ್ನು ಪಡೆದ, ಸಹಸ್ರಾರು ಮಾಯೆಗಳನ್ನು ಮಾಡುವ, ಮಹೌಜಸ, ಶೂರ ದಾನವರು ಅಲ್ಲಿ ವಾಸಿಸುತ್ತಾರೆ.
05098004a ನೈತೇ ಶಕ್ರೇಣ ನಾನ್ಯೇನ ವರುಣೇನ ಯಮೇನ ವಾ|
05098004c ಶಕ್ಯಂತೇ ವಶಮಾನೇತುಂ ತಥೈವ ಧನದೇನ ಚ||
ಇದನ್ನು ಶಕ್ರನಿಂದಾಗಲೀ, ಇತರರಿಂದಾಗಲೀ - ವರುಣ, ಯಮ, ಮತ್ತು ಧನದನಿಂದಾಗಲೀ - ವಶಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
05098005a ಅಸುರಾಃ ಕಾಲಖಂಜಾಶ್ಚ ತಥಾ ವಿಷ್ಣುಪದೋದ್ಭವಾಃ|
05098005c ನೈರೃತಾ ಯಾತುಧಾನಾಶ್ಚ ಬ್ರಹ್ಮವೇದೋದ್ಭವಾಶ್ಚ ಯೇ||
ಅಲ್ಲಿ ವಿಷ್ಣುಪದದಿಂದ ಉದ್ಭವಿಸಿದ ಕಾಲಖಂಜ ಅಸುರರೂ, ಬ್ರಹ್ಮವೇದದಿಂದ ಉದ್ಭವಿಸಿದ ನೈರೃತಾ ಯಾತುಧಾನರೂ ವಾಸಿಸುತ್ತಾರೆ.
05098006a ದಂಷ್ಟ್ರಿಣೋ ಭೀಮರೂಪಾಶ್ಚ ನಿವಸಂತ್ಯಾತ್ಮರಕ್ಷಿಣಃ|
05098006c ಮಾಯಾವೀರ್ಯೋಪಸಂಪನ್ನಾ ನಿವಸಂತ್ಯಾತ್ಮರಕ್ಷಿಣಃ||
ಅವರು ಕೋರೆದಾಡೆಗಳುಳ್ಳವರು, ಭೀಮರೂಪರು, ಮಾಯಾವಿಗಳು, ವೀರ್ಯಸಂಪನ್ನರು ಮತ್ತು ತಮ್ಮನ್ನು ತಾವೇ ರಕ್ಷಿಸಿಕೊಂಡಿರುವವರು.
05098007a ನಿವಾತಕವಚಾ ನಾಮ ದಾನವಾ ಯುದ್ಧದುರ್ಮದಾಃ|
05098007c ಜಾನಾಸಿ ಚ ಯಥಾ ಶಕ್ರೋ ನೈತಾಂ ಶಕ್ನೋತಿ ಬಾಧಿತುಂ||
ಇವರಲ್ಲದೇ ಯುದ್ಧದುರ್ಮದ ನಿವಾತಕವಚರೆಂಬ ದಾನವರೂ ನೆಲೆಸಿದ್ದಾರೆ. ಶಕ್ರನೂ ಕೂಡ ಹೇಗೆ ಇವರನ್ನು ಬಾಧಿಸಲು ಶಕ್ಯನಾಗಿಲ್ಲ ಎನ್ನುವುದು ನಿನಗೆ ತಿಳಿದೇ ಇದೆ.
05098008a ಬಹುಶೋ ಮಾತಲೇ ತ್ವಂ ಚ ತವ ಪುತ್ರಶ್ಚ ಗೋಮುಖಃ|
05098008c ನಿರ್ಭಗ್ನೋ ದೇವರಾಜಶ್ಚ ಸಹಪುತ್ರಃ ಶಚೀಪತಿಃ||
ಮಾತಲೀ! ಬಹಳಷ್ಟು ಬಾರಿ ನೀನು ನಿನ್ನ ಪುತ್ರ ಗೋಮುಖನೊಡನೆ ಮತ್ತು ಶಚೀಪತಿ ದೇವರಾಜನು ಅವನು ಪುತ್ರನೊಡನೆ ಅವರೊಂದಿಗೆ ನಿರ್ಭಗ್ನನಾಗಿ ಹಿಂದಿರುಗಬೇಕಾಗಿತ್ತು.
05098009a ಪಶ್ಯ ವೇಶ್ಮಾನಿ ರೌಕ್ಮಾಣಿ ಮಾತಲೇ ರಾಜತಾನಿ ಚ|
05098009c ಕರ್ಮಣಾ ವಿಧಿಯುಕ್ತೇನ ಯುಕ್ತಾನ್ಯುಪಗತಾನಿ ಚ||
05098010a ವೈಡೂರ್ಯಹರಿತಾನೀವ ಪ್ರವಾಲರುಚಿರಾಣಿ ಚ|
05098010c ಅರ್ಕಸ್ಫಟಿಕಶುಭ್ರಾಣಿ ವಜ್ರಸಾರೋಜ್ಜ್ವಲಾನಿ ಚ||
ಮಾತಲೀ! ಚಿನ್ನ-ಬೆಳ್ಳಿಗಳಿಂದ ಮಾಡಲ್ಪಟ್ಟ, ವೈಡೂರ್ಯದ ಹಸಿರಿನಿಂದ, ಬಣ್ಣಬಣ್ಣದ ಪ್ರವಾಲಗಳಿಂದ, ಅರ್ಕಸ್ಫಟಿಕದ ಹೊಳಪಿನಿಂದ, ವಜ್ರಸಾರದಿಂದ ಬೆಳಗುತ್ತಿರುವ, ವಿಧಿಯುಕ್ತವಾಗಿ ಕಟ್ಟಲ್ಪಟ್ಟ ಅವರ ಮನೆಗಳನ್ನು ನೋಡು!
05098011a ಪಾರ್ಥಿವಾನೀವ ಚಾಭಾಂತಿ ಪುನರ್ನಗಮಯಾನಿ ಚ|
05098011c ಶೈಲಾನೀವ ಚ ದೃಶ್ಯಂತೇ ತಾರಕಾಣೀವ ಚಾಪ್ಯುತ||
ಪುನಃ ನಾಗಗಳಿಂದ ತುಂಬಿದ ಆ ರಾಜಗೃಹಗಳು ತಾರಕ ಶೈಲಗಳಂತೆ ತೋರುತ್ತಿವೆ.
05098012a ಸೂರ್ಯರೂಪಾಣಿ ಚಾಭಾಂತಿ ದೀಪ್ತಾಗ್ನಿಸದೃಶಾನಿ ಚ|
05098012c ಮಣಿಜಾಲವಿಚಿತ್ರಾಣಿ ಪ್ರಾಂಶೂನಿ ನಿಬಿಡಾನಿ ಚ||
ಆ ಮನೆಗಳ ನಿಬಿಡಗಳು ಸೂರ್ಯನಂತೆ ಹೊಳೆಯುತ್ತಿವೆ, ವಿಚಿತ್ರ ಮಣಿಜಾಲಗಳಿಂದ ಉರಿಯುತ್ತಿರುವ ಅಗ್ನಿಯಂತೆ ತೋರುತ್ತಿವೆ.
05098013a ನೈತಾನಿ ಶಕ್ಯಂ ನಿರ್ದೇಷ್ಟುಂ ರೂಪತೋ ದ್ರವ್ಯತಸ್ತಥಾ|
05098013c ಗುಣತಶ್ಚೈವ ಸಿದ್ಧಾನಿ ಪ್ರಮಾಣಗುಣವಂತಿ ಚ||
ಇವುಗಳ ರೂಪವನ್ನು ಮತ್ತು ದ್ರವ್ಯಗಳನ್ನು ನಿರ್ದಿಷ್ಟಗೊಳಿಸಲು ಶಕ್ಯವಿಲ್ಲ. ಅವುಗಳನ್ನು ಅತೀವ ಗುಣಗಳಿಂದ ಸಿದ್ಧಪಡಿಸಿದ್ದಾರೆ.
05098014a ಆಕ್ರೀಡಾನ್ಪಶ್ಯ ದೈತ್ಯಾನಾಂ ತಥೈವ ಶಯನಾನ್ಯುತ|
05098014c ರತ್ನವಂತಿ ಮಹಾರ್ಹಾಣಿ ಭಾಜನಾನ್ಯಾಸನಾನಿ ಚ||
ದೈತ್ಯರ ಕ್ರೀಡಾಂಗಣಗಳನ್ನು ನೋಡು, ಹಾಗೆಯೇ ಅವರ ಉತ್ತಮ ಹಾಸಿಗೆಗಳನ್ನು, ರತ್ನಗಳಿಂದ ಮಾಡಿದ ಮಹಾಬೆಲೆಬಾಳುವ ಪಾತ್ರೆಗಳು, ಆಸನಗಳನ್ನೂ ನೋಡು!
05098015a ಜಲದಾಭಾಂಸ್ತಥಾ ಶೈಲಾಂಸ್ತೋಯಪ್ರಸ್ರವಣಾನ್ವಿತಾನ್|
05098015c ಕಾಮಪುಷ್ಪಫಲಾಂಶ್ಚೈವ ಪಾದಪಾನ್ಕಾಮಚಾರಿಣಃ||
ಮೋಡಗಳಂತೆ ತೋರುವ ಅವರ ಗುಡ್ಡಬೆಟ್ಟಗಳನ್ನು ನೋಡು, ನೀರಿನ ಆ ಕಾರಂಜಿಗಳನ್ನು, ಬೇಕಾದ ಪುಷ್ಪ ಫಲಗಳನ್ನು ನೀಡುವ, ಬೇಕಾದಲ್ಲಿಗೆ ಚಲಿಸಬಲ್ಲ ಮರಗಳನ್ನು ನೋಡು!
05098016a ಮಾತಲೇ ಕಶ್ಚಿದತ್ರಾಪಿ ರುಚಿತಸ್ತೇ ವರೋ ಭವೇತ್|
05098016c ಅಥ ವಾನ್ಯಾಂ ದಿಶಂ ಭೂಮೇರ್ಗಚ್ಚಾವ ಯದಿ ಮನ್ಯಸೇ||
ಮಾತಲೀ! ಇಲ್ಲಿ ಯಾರಾದರೂ ವರನು ಇಷ್ಟವಾದರೆ ಪಡೆಯಬಹುದು. ಅಥವಾ ನಿನಗೆ ಇಷ್ಟವಾದರೆ ಬೇರೆ ಯಾವ ಕಡೆಯಾದರೂ ಹೋಗೋಣ!””
05098017 ಕಣ್ವ ಉವಾಚ|
05098017a ಮಾತಲಿಸ್ತ್ವಬ್ರವೀದೇನಂ ಭಾಷಮಾಣಂ ತಥಾವಿಧಂ|
05098017c ದೇವರ್ಷೇ ನೈವ ಮೇ ಕಾರ್ಯಂ ವಿಪ್ರಿಯಂ ತ್ರಿದಿವೌಕಸಾಂ
ಕಣ್ವನು ಹೇಳಿದನು: “ಹೀಗೆ ಹೇಳಲು ಮಾತಲಿಯು ಉತ್ತರಿಸಿದನು – “ದೇವರ್ಷೇ! ತ್ರಿದಿವೌಕಸರಿಗೆ ವಿಪ್ರಿಯ ಕಾರ್ಯವನ್ನೆಸಗುವುದು ನನಗೆ ಬೇಡ.
05098018a ನಿತ್ಯಾನುಷಕ್ತವೈರಾ ಹಿ ಭ್ರಾತರೋ ದೇವದಾನವಾಃ|
05098018c ಅರಿಪಕ್ಷೇಣ ಸಂಬಂಧಂ ರೋಚಯಿಷ್ಯಾಮ್ಯಹಂ ಕಥಂ||
ಭ್ರಾತರಾಗಿದ್ದರೂ ದೇವ-ದಾನವರು ನಿತ್ಯವೂ ವೈರವನ್ನು ಸಾಧಿಸುವುದರಲ್ಲಿ ತೊಡಗಿದ್ದಾರೆ. ಹೀಗಿರುವಾಗ ನಾನು ಹೇಗೆ ತಾನೇ ಇವರೊಂದಿಗೆ ಸಂಬಂಧವನ್ನು ಬೆಳೆಸಲು ಇಚ್ಛಿಸಿಯೇನು?
05098019a ಅನ್ಯತ್ರ ಸಾಧು ಗಚ್ಚಾವೋ ದ್ರಷ್ಟುಂ ನಾರ್ಹಾಮಿ ದಾನವಾನ್|
05098019c ಜಾನಾಮಿ ತು ತಥಾತ್ಮಾನಂ ದಿತ್ಸಾತ್ಮಕಮಲಂ ಯಥಾ||
ಬೇರೆ ಕಡೆ ಹೋಗುವುದು ಒಳ್ಳೆಯದು. ದಾನವರಲ್ಲಿ ಹುಡುಕಲು ನಾನು ಅರ್ಹನಲ್ಲ. ನಿನ್ನ ಮನಸ್ಸು ಕಲಹವನ್ನು ಹುಟ್ಟಿಸುವುದರಲ್ಲಿದೆ ಎಂದು ನನಗೆ ತಿಳಿದಿದೆ.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾತಲಿವರಾನ್ವೇಷಣೇ ಅಷ್ಟನವತಿತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾತಲಿವರಾನ್ವೇಷಣೆಯಲ್ಲಿ ತೊಂಭತ್ತೆಂಟನೆಯ ಅಧ್ಯಾಯವು.