Udyoga Parva: Chapter 67

ಉದ್ಯೋಗ ಪರ್ವ: ಯಾನಸಂಧಿ ಪರ್ವ

೬೭

ವ್ಯಾಸ-ಗಾಂಧಾರಿಯರು ಸಂಧಿಗೆ ಪ್ರೋತ್ಸಾಹಿಸಿದುದು

ಧೃತರಾಷ್ಟ್ರ-ಗಾಂಧಾರಿಯರು ಹೇಳಿದರೂ ದುರ್ಯೋಧನನು ಒಪ್ಪಿಕೊಳ್ಳದಿರಲು (೧-೧೦), ವ್ಯಾಸನು ಧೃತರಾಷ್ಟ್ರನಿಗೆ ಸಂಜಯನ ಮಾತನ್ನು ಕೇಳು ಎಂದು ಉಪದೇಶಿಸುವುದು (೧೧-೨೧).

05067001 ಧೃತರಾಷ್ಟ್ರ ಉವಾಚ|

05067001a ಕಥಂ ತ್ವಂ ಮಾಧವಂ ವೇತ್ಥ ಸರ್ವಲೋಕಮಹೇಶ್ವರಂ|

05067001c ಕಥಮೇನಂ ನ ವೇದಾಹಂ ತನ್ಮಮಾಚಕ್ಷ್ವ ಸಂಜಯ||

ಧೃತರಾಷ್ಟ್ರನು ಹೇಳಿದನು: “ಸಂಜಯ! ನೀನು ಹೇಗೆ ಸರ್ವಲೋಕಮಹೇಶ್ವರ ಮಾಧವನನ್ನು ತಿಳಿದಿರುವೆ? ನಾನು ಹೇಗೆ ಅವನನ್ನು ತಿಳಿದಿಲ್ಲ ಎನ್ನುವುದನ್ನು ನನಗೆ ಹೇಳು.”

05067002 ಸಂಜಯ ಉವಾಚ|

05067002a ವಿದ್ಯಾ ರಾಜನ್ನ ತೇ ವಿದ್ಯಾ ಮಮ ವಿದ್ಯಾ ನ ಹೀಯತೇ|

05067002c ವಿದ್ಯಾಹೀನಸ್ತಮೋಧ್ವಸ್ತೋ ನಾಭಿಜಾನಾತಿ ಕೇಶವಂ||

ಸಂಜಯನು ಹೇಳಿದನು: “ರಾಜನ್! ನಿನಗೆ ವಿದ್ಯೆ-ತಿಳುವಳಿಕೆಯಿಲ್ಲ. ನನ್ನ ವಿದ್ಯೆ-ತಿಳುವಳಿಕೆಯಲ್ಲಿ ಕಡಿಮೆಯಿಲ್ಲ. ವಿದ್ಯಾಹೀನನಾಗಿ, ಕತ್ತಲೆಯಿಂದ ಆವರಿಸಿದವನಾಗಿ ನಿನಗೆ ಕೇಶವನು ಅರ್ಥವಾಗುತ್ತಿಲ್ಲ.

05067003a ವಿದ್ಯಯಾ ತಾತ ಜಾನಾಮಿ ತ್ರಿಯುಗಂ ಮಧುಸೂದನಂ|

05067003c ಕರ್ತಾರಮಕೃತಂ ದೇವಂ ಭೂತಾನಾಂ ಪ್ರಭವಾಪ್ಯಯಂ||

ಅಯ್ಯಾ! ವಿದ್ಯೆಯಿಂದಲೇ ನಾನು ಮೂರೂ ಯುಗಗಳ ಮಧುಸೂದನನನ್ನು, ಸ್ವತಃ ಪಾಡಲ್ಪಟ್ಟಿಲ್ಲದಿದ್ದರೂ ಬೇರೆ ಎಲ್ಲವನ್ನೂ ಮಾಡುವ, ಇರುವ ಎಲ್ಲವಕ್ಕೂ ಒಡೆಯನಾದ, ಪ್ರಭು ಅಪ್ಯಯನನ್ನು ತಿಳಿದಿದ್ದೇನೆ.”

05067004 ಧೃತರಾಷ್ಟ್ರ ಉವಾಚ|

05067004a ಗಾವಲ್ಗಣೇಽತ್ರ ಕಾ ಭಕ್ತಿರ್ಯಾ ತೇ ನಿತ್ಯಾ ಜನಾರ್ದನೇ|

05067004c ಯಯಾ ತ್ವಮಭಿಜಾನಾಸಿ ತ್ರಿಯುಗಂ ಮಧುಸೂದನಂ||

ಧೃತರಾಷ್ಟ್ರನು ಹೇಳಿದನು: “ಗಾವಲ್ಗಣೇ! ಜನಾರ್ದನನಲ್ಲಿ ನಿತ್ಯವೂ ನೀನು ತೋರಿಸುವ ಈ ಭಕ್ತಿ - ಯಾವುದರಿಂದ ನೀನು ತ್ರಿಯುಗಗಳ ಮಧುಸೂದನನನ್ನು ತಿಳಿದಿದ್ದೀಯೋ - ಆ ಭಕ್ತಿಯೇನು?”

05067005 ಸಂಜಯ ಉವಾಚ|

05067005a ಮಾಯಾಂ ನ ಸೇವೇ ಭದ್ರಂ ತೇ ನ ವೃಥಾಧರ್ಮಮಾಚರೇ|

05067005c ಶುದ್ಧಭಾವಂ ಗತೋ ಭಕ್ತ್ಯಾ ಶಾಸ್ತ್ರಾದ್ವೇದ್ಮಿ ಜನಾರ್ದನಂ||

ಸಂಜಯನು ಹೇಳಿದನು: “ನಿನಗೆ ಮಂಗಳವಾಗಲಿ! ಮಾಯೆಯನ್ನು ನಾನು ಸೇವಿಸುವುದಿಲ್ಲ. ನಾನು ಸ್ವಲ್ಪವೂ ಅಧರ್ಮವನ್ನು ಆಚರಿಸುವುದಿಲ್ಲ. ಶುದ್ಧ ಭಕ್ತಿ ಭಾವದಿಂದ ನಡೆಯುತ್ತೇನೆ. ಶಾಸ್ತ್ರಗಳಿಂದ ಜನಾರ್ದನನನ್ನು ತಿಳಿದಿದ್ದೇನೆ.”

05067006 ಧೃತರಾಷ್ಟ್ರ ಉವಾಚ|

05067006a ದುರ್ಯೋಧನ ಹೃಷೀಕೇಶಂ ಪ್ರಪದ್ಯಸ್ವ ಜನಾರ್ದನಂ|

05067006c ಆಪ್ತೋ ನಃ ಸಂಜಯಸ್ತಾತ ಶರಣಂ ಗಚ್ಚ ಕೇಶವಂ||

ಧೃತರಾಷ್ಟ್ರನು ಹೇಳಿದನು: “ದುರ್ಯೋಧನ! ಹೃಷೀಕೇಶ ಜನಾರ್ದನನನ್ನು ಮೆಚ್ಚಿಸು. ಮಗೂ! ಸಂಜಯನಷ್ಟು ಆಪ್ತರಿಲ್ಲ. ಕೇಶವನನ್ನು ಶರಣು ಹೋಗು!”

05067007 ದುರ್ಯೋಧನ ಉವಾಚ|

05067007a ಭಗವಾನ್ದೇವಕೀಪುತ್ರೋ ಲೋಕಂ ಚೇನ್ನಿಹನಿಷ್ಯತಿ|

05067007c ಪ್ರವದನ್ನರ್ಜುನೇ ಸಖ್ಯಂ ನಾಹಂ ಗಚ್ಚೇಽದ್ಯ ಕೇಶವಂ||

ದುರ್ಯೋಧನನು ಹೇಳಿದನು: “ಅರ್ಜುನನ ಸಖನೆಂದು ಹೇಳಿಕೊಂಡು ಆ ಭಗವಾನ್ ದೇವಕಿಪುತ್ರನು ಲೋಕವನ್ನು ನಾಶಪಡಿಸುವವನಾದರೆ, ನಾನು ಕೇಶವನ ಮೊರೆಹೋಗುವುದಿಲ್ಲ!”

05067008 ಧೃತರಾಷ್ಟ್ರ ಉವಾಚ|

05067008a ಅವಾಗ್ಗಾಂಧಾರಿ ಪುತ್ರಾಸ್ತೇ ಗಚ್ಚತ್ಯೇಷ ಸುದುರ್ಮತಿಃ|

05067008c ಈರ್ಷ್ಯುರ್ದುರಾತ್ಮಾ ಮಾನೀ ಚ ಶ್ರೇಯಸಾಂ ವಚನಾತಿಗಃ||

ಧೃತರಾಷ್ಟ್ರನು ಹೇಳಿದನು: “ಇಗೋ ಗಾಂಧಾರೀ! ನಿನ್ನ ಈ ಸುದುರ್ಮತಿ ದುರಾತ್ಮ ಮಗನು ತನ್ನ ಈರ್ಷ್ಯೆ, ಅಭಿಮಾನಗಳಿಂದಾಗಿ ಶ್ರೇಯಸ್ಕರ ಮಾತುಗಳಂತೆ ನಡೆದುಕೊಳ್ಳದೇ ಅಧೋಗತಿಗಿಳಿಯುತ್ತಿದ್ದಾನೆ!”

05067009 ಗಾಂಧಾರ್ಯುವಾಚ|

05067009a ಐಶ್ವರ್ಯಕಾಮ ದುಷ್ಟಾತ್ಮನ್ವೃದ್ಧಾನಾಂ ಶಾಸನಾತಿಗ|

05067009c ಐಶ್ವರ್ಯಜೀವಿತೇ ಹಿತ್ವಾ ಪಿತರಂ ಮಾಂ ಚ ಬಾಲಿಶ||

05067010a ವರ್ಧಯನ್ದುರ್ಹೃದಾಂ ಪ್ರೀತಿಂ ಮಾಂ ಚ ಶೋಕೇನ ವರ್ಧಯನ್|

05067010c ನಿಹತೋ ಭೀಮಸೇನೇನ ಸ್ಮರ್ತಾಸಿ ವಚನಂ ಪಿತುಃ||

ಗಾಂಧಾರಿಯು ಹೇಳಿದಳು: “ಐಶ್ವರ್ಯಕಾಮೀ! ದುಷ್ಟಾತ್ಮ! ವೃದ್ಧರ ಶಾಸನವನ್ನು ಅಲ್ಲಗಳೆಯುವವನೇ! ಮೂಢ! ಐಶ್ವರ್ಯ-ಜೀವಗಳನ್ನು, ತಂದೆ ತಾಯಿಯರನ್ನು ತೊರೆದವನೇ! ಶತ್ರುಗಳ ಸಂತೋಷವನ್ನು ಹೆಚ್ಚಿಸುವವನೇ! ನನ್ನ ಶೋಕವನ್ನು ಹೆಚ್ಚಿಸುವವನೇ! ಭೀಮಸೇನನ ಪೆಟ್ಟು ತಿಂದಾಗ ನಿನ್ನ ತಂದೆಯ ಮಾತನ್ನು ನೆನಪಿಸಿಕೊಳ್ಳುವೆ!”

05067011 ವ್ಯಾಸ ಉವಾಚ|

05067011a ದಯಿತೋಽಸಿ ರಾಜನ್ ಕೃಷ್ಣಸ್ಯ ಧೃತರಾಷ್ಟ್ರ ನಿಬೋಧ ಮೇ|

05067011c ಯಸ್ಯ ತೇ ಸಂಜಯೋ ದೂತೋ ಯಸ್ತ್ವಾಂ ಶ್ರೇಯಸಿ ಯೋಕ್ಷ್ಯತೇ||

ವ್ಯಾಸನು ಹೇಳಿದನು: “ರಾಜನ್! ನೀನು ಕೃಷ್ಣನಿಗೆ ಬೇಕಾದವನು. ಧೃತರಾಷ್ಟ್ರ! ನನ್ನನ್ನು ಕೇಳು. ನಿನ್ನ ದೂತನಾಗಿರುವ ಸಂಜಯನು ನಿನ್ನನ್ನು ಶ್ರೇಯಸ್ಸಿನೆಡೆಗೆ ಕೊಂಡೊಯ್ಯುತ್ತಿದ್ದಾನೆ.

05067012a ಜಾನಾತ್ಯೇಷ ಹೃಷೀಕೇಶಂ ಪುರಾಣಂ ಯಚ್ಚ ವೈ ನವಂ|

05067012c ಶುಶ್ರೂಷಮಾಣಮೇಕಾಗ್ರಂ ಮೋಕ್ಷ್ಯತೇ ಮಹತೋ ಭಯಾತ್||

ಅವನು ಈ ಹೃಷೀಕೇಶನನ್ನು ಅವನ ಪುರಾತನ ಮತ್ತು ಹೊಸ ರೂಪಗಳಲ್ಲಿ ತಿಳಿದುಕೊಂಡಿದ್ದಾನೆ. ಅವನನ್ನು ಏಕಾಗ್ರನಾಗಿ ಕೇಳುವುದರಿಂದ ಮಹಾ ಭಯದಿಂದ ಮುಕ್ತನಾಗುತ್ತೀಯೆ.

05067013a ವೈಚಿತ್ರವೀರ್ಯ ಪುರುಷಾಃ ಕ್ರೋಧಹರ್ಷತಮೋವೃತಾಃ|

05067013c ಸಿತಾ ಬಹುವಿಧೈಃ ಪಾಶೈರ್ಯೇ ನ ತುಷ್ಟಾಃ ಸ್ವಕೈರ್ಧನೈಃ||

ವೈಚಿತ್ರವೀರ್ಯ! ಕ್ರೋಧ-ಹರ್ಷಗಳ ಕತ್ತಲೆಯಿಂದ ಆವೃತರಾಗಿ, ಬಹುವಿಧದ ಪಾಶಗಳ ಬಂಧನಕ್ಕೊಳಗಾಗಿ, ತಮ್ಮಲ್ಲಿರುವ ಧನಗಳಿಂದ ಸಂತುಷ್ಟರಾಗಿರುವುದಿಲ್ಲ.

05067014a ಯಮಸ್ಯ ವಶಮಾಯಾಂತಿ ಕಾಮಮೂಢಾಃ ಪುನಃ ಪುನಃ|

05067014c ಅಂಧನೇತ್ರಾ ಯಥೈವಾಂಧಾ ನೀಯಮಾನಾಃ ಸ್ವಕರ್ಮಭಿಃ||

ಕಾಮಮೂಢರು ಕುರುಡನು ಕುರುಡನಿಂದ ಕರೆದೊಯ್ಯಲ್ಪಡುವಂತೆ ತಾವೇ ಮಾಡಿದ ಕರ್ಮಗಳಿಂದ ಪುನಃ ಪುನಃ ಯಮನ ವಶದಲ್ಲಿ ಬರುತ್ತಾರೆ.

05067015a ಏಷ ಏಕಾಯನಃ ಪಂಥಾ ಯೇನ ಯಾಂತಿ ಮನೀಷಿಣಃ|

05067015c ತಂ ದೃಷ್ಟ್ವಾ ಮೃತ್ಯುಮತ್ಯೇತಿ ಮಹಾಂಸ್ತತ್ರ ನ ಸಜ್ಜತೇ||

ಮನೀಷಿಗಳು ಹೋಗುವ ಒಂದೇ ಒಂದು ಮಾರ್ಗವಿದೆ. ಅದನ್ನು ನೋಡಿ ಮೃತ್ಯುವನ್ನು ಜಯಿಸುತ್ತಾರೆ. ಮಹಾತ್ಮರು ಅಲ್ಲಿ ಅಂಟಿಕೊಳ್ಳುವುದಿಲ್ಲ!”

05067016 ಧೃತರಾಷ್ಟ್ರ ಉವಾಚ|

05067016a ಅಂಗ ಸಂಜಯ ಮೇ ಶಂಸ ಪಂಥಾನಮಕುತೋಭಯಂ|

05067016c ಯೇನ ಗತ್ವಾ ಹೃಷೀಕೇಶಂ ಪ್ರಾಪ್ನುಯಾಂ ಶಾಂತಿಮುತ್ತಮಾಂ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಭಯವನ್ನು ಹೋಗಲಾಡಿಸುವ, ಯಾವುದರ ಮೂಲಕ ಹೃಷೀಕೇಶನನ್ನು ತಲುಪಿ ಉತ್ತಮ ಶಾಂತಿಯನ್ನು  ಪಡೆಯಬಲ್ಲೆನೋ ಆ ಮಾರ್ಗದ ಕುರಿತು ಹೇಳು ಬಾ!”

05067017 ಸಂಜಯ ಉವಾಚ|

05067017a ನಾಕೃತಾತ್ಮಾ ಕೃತಾತ್ಮಾನಂ ಜಾತು ವಿದ್ಯಾಜ್ಜನಾರ್ದನಂ|

05067017c ಆತ್ಮನಸ್ತು ಕ್ರಿಯೋಪಾಯೋ ನಾನ್ಯತ್ರೇಂದ್ರಿಯನಿಗ್ರಹಾತ್||

ಸಂಜಯನು ಹೇಳಿದನು: “ಅಕೃತಾತ್ಮನು ಕೃತಾತ್ಮನಾದ ಜನಾರ್ದನನನ್ನು ತಿಳಿಯಲಿಕ್ಕಾಗುವುದಿಲ್ಲ. ಇಂದ್ರಿಯನಿಗ್ರಹವಿಲ್ಲದೇ ತನ್ನ ಕ್ರಿಯೆಗಳನ್ನು ಮಾಡುವುದು ಉಪಾಯವಲ್ಲ.

05067018a ಇಂದ್ರಿಯಾಣಾಮುದೀರ್ಣಾನಾಂ ಕಾಮತ್ಯಾಗೋಽಪ್ರಮಾದತಃ|

05067018c ಅಪ್ರಮಾದೋಽವಿಹಿಂಸಾ ಚ ಜ್ಞಾನಯೋನಿರಸಂಶಯಂ||

ಉತ್ತೇಜನಗೊಂಡ ಇಂದ್ರಿಯಗಳು ಬಯಸುವ ವಸ್ತುಗಳನ್ನು ಅಪ್ರಮಾದನಾಗಿದ್ದುಕೊಂಡು ತ್ಯಜಿಸುವುದು, ಅಪ್ರಮಾದನಾಗಿರುವುದು, ಮತ್ತು ಅಹಿಂಸೆ ಇವು ಜ್ಞಾನವನ್ನು ಹುಟ್ಟಿಸುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.

05067019a ಇಂದ್ರಿಯಾಣಾಂ ಯಮೇ ಯತ್ತೋ ಭವ ರಾಜನ್ನತಂದ್ರಿತಃ|

05067019c ಬುದ್ಧಿಶ್ಚ ಮಾ ತೇ ಚ್ಯವತು ನಿಯಚ್ಚೈತಾಂ ಯತಸ್ತತಃ||

ರಾಜನ್! ಯಾವಾಗಲೂ ಆಯಾಸಗೊಳ್ಳದೇ ಇಂದ್ರಿಯಗಳನ್ನು ನಿಯಂತ್ರಿಸು. ನಿನ್ನ ಬುದ್ಧಿಯು ದಾರಿತಪ್ಪದಿರಲಿ. ಪ್ರತಿಸಾರಿಯೂ ನಿರ್ದಿಷ್ಟಪಡಿಸಿಕೋ.

05067020a ಏತಜ್ಞಾನಂ ವಿದುರ್ವಿಪ್ರಾ ಧ್ರುವಮಿಂದ್ರಿಯಧಾರಣಂ|

05067020c ಏತಜ್ಞಾನಂ ಚ ಪಂಥಾಶ್ಚ ಯೇನ ಯಾಂತಿ ಮನೀಷಿಣಃ||

ಈ ಇಂದ್ರಿಯ ಧಾರಣೆಯನ್ನು ವಿಪ್ರರು ನಿಶ್ಚಿತವಾಗಿಯೂ ಜ್ಞಾನವನ್ನು ನೀಡುತ್ತದೆಯೆಂದು ತಿಳಿದಿದ್ದಾರೆ. ಇದೇ ಮನೀಷಿಗಳು ಹೋಗುವ ಜ್ಞಾನದ ಮಾರ್ಗ.

05067021a ಅಪ್ರಾಪ್ಯಃ ಕೇಶವೋ ರಾಜನ್ನಿಂದ್ರಿಯೈರಜಿತೈರ್ನೃಭಿಃ|

05067021c ಆಗಮಾಧಿಗತೋ ಯೋಗಾದ್ವಶೀ ತತ್ತ್ವೇ ಪ್ರಸೀದತಿ||

ರಾಜನ್! ಇಂದ್ರಿಯಗಳನ್ನು ಗೆಲ್ಲದೇ ಕೇಶವನನ್ನು ಮನುಷ್ಯರು ತಲುಪುವುದಿಲ್ಲ. ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡು, ಆಗಮಗಳನ್ನು ತಿಳಿದುಕೊಂಡಿರುವವನು ಯೋಗದ ಮೂಲಕ ತತ್ವದಲ್ಲಿ ಶಾಂತನಾಗುತ್ತಾನೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗಪರ್ವಣಿ ಯಾನಸಂಧಿಪರ್ವಣಿ ಸಂಜಯವಾಕ್ಯೇ ಸಪ್ತಷಷ್ಟಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗಪರ್ವದಲ್ಲಿ ಯಾನಸಂಧಿಪರ್ವದಲ್ಲಿ ಸಂಜಯವಾಕ್ಯದಲ್ಲಿ ಅರವತ್ತೇಳನೆಯ ಅಧ್ಯಾಯವು.

Related image

Comments are closed.