Udyoga Parva: Chapter 66

ಉದ್ಯೋಗ ಪರ್ವ: ಯಾನಸಂಧಿ ಪರ್ವ

೬೬

“ಸಾರದಲ್ಲಿ ಜಗತ್ತಿಗಿಂತ ಜನಾರ್ದನನೇ ಹೆಚ್ಚಿನವನು” ಎಂದು ಕೃಷ್ಣನ ರೂಪದಲ್ಲಿದ್ದ ಭಗವಂತನ ಸ್ವರೂಪವನ್ನು ಸಂಜಯನು ಧೃತರಾಷ್ಟ್ರನಿಗೆ ಉಪದೇಶಿಸಿದುದು (೧-೧೫).

05066001 ಸಂಜಯ ಉವಾಚ|

05066001a ಅರ್ಜುನೋ ವಾಸುದೇವಶ್ಚ ಧನ್ವಿನೌ ಪರಮಾರ್ಚಿತೌ|

05066001c ಕಾಮಾದನ್ಯತ್ರ ಸಂಭೂತೌ ಸರ್ವಾಭಾವಾಯ ಸಮ್ಮಿತೌ||

ಸಂಜಯನು ಹೇಳಿದನು: “ಪರಮಾರ್ಚಿತ ಧನ್ವಿಗಳಾದ ಅರ್ಜುನ-ವಾಸುದೇವರಿಬ್ಬರೂ ಇಷ್ಟಪಟ್ಟು ಇನ್ನೊಂದು ಜನ್ಮವನ್ನು ತಾಳಿ ಎಲ್ಲವನ್ನೂ ಇಲ್ಲವಾಗಿಸಲು ಒಂದಾಗಿದ್ದಾರೆ.

05066002a ದ್ಯಾಮಂತರಂ ಸಮಾಸ್ಥಾಯ ಯಥಾಯುಕ್ತಂ ಮನಸ್ವಿನಃ|

05066002c ಚಕ್ರಂ ತದ್ವಾಸುದೇವಸ್ಯ ಮಾಯಯಾ ವರ್ತತೇ ವಿಭೋ||

ವಿಭೋ! ಆಕಾಶದಲ್ಲಿದ್ದುಕೊಂಡು, ಬೇಕಾದ ಹಾಗೆ ವಾಸುದೇವನ ಆ ಮನಸ್ವೀ ಚಕ್ರವು ಮಾಯೆಯಿಂದ ನಡೆಯುತ್ತದೆ.

05066003a ಸಾಪಹ್ನವಂ ಪಾಂಡವೇಷು ಪಾಂಡವಾನಾಂ ಸುಸಮ್ಮತಂ|

05066003c ಸಾರಾಸಾರಬಲಂ ಜ್ಞಾತ್ವಾ ತತ್ಸಮಾಸೇನ ಮೇ ಶೃಣು||

ಅದು ಪಾಂಡವರಿಗೆ ಕಾಣಿಸದೇ ಇದ್ದರೂ ಪಾಂಡವರು ಅದನ್ನು ಪೂಜಿಸುತ್ತಾರೆ. ಅವರ ಸಾರಾಸಾರ ಬಲಗಳನ್ನು ಕೇಳಿ ತಿಳಿದುಕೋ.

05066004a ನರಕಂ ಶಂಬರಂ ಚೈವ ಕಂಸಂ ಚೈದ್ಯಂ ಚ ಮಾಧವಃ|

05066004c ಜಿತವಾನ್ಘೋರಸಂಕಾಶಾನ್ಕ್ರೀಡನ್ನಿವ ಜನಾರ್ದನಃ||

ಆಟದಂತೆ ಮಾಧವ ಜನಾರ್ದನನು ಘೋರಸಂಕಾಶರಾದ ನರಕ, ಶಂಬರ, ಕಂಸ ಮತ್ತು ಚೈದ್ಯರನ್ನು ಗೆದ್ದಿದ್ದಾನೆ.

05066005a ಪೃಥಿವೀಂ ಚಾಂತರಿಕ್ಷಂ ಚ ದ್ಯಾಂ ಚೈವ ಪುರುಷೋತ್ತಮಃ|

05066005c ಮನಸೈವ ವಿಶಿಷ್ಟಾತ್ಮಾ ನಯತ್ಯಾತ್ಮವಶಂ ವಶೀ||

ಈ ವಿಶಿಷ್ಟಾತ್ಮ ಪುರುಷೋತ್ತಮನು ತನ್ನ ಮನಸ್ಸಿನಿಂದಲೇ ಭೂಮಿ-ಅಂತರಿಕ್ಷ-ದೇವಲೋಕಗಳನ್ನು ತನ್ನ ಆತ್ಮವಶ ಮಾಡಿಕೊಂಡಿದ್ದಾನೆ.

05066006a ಭೂಯೋ ಭೂಯೋ ಹಿ ಯದ್ರಾಜನ್ಪೃಚ್ಚಸೇ ಪಾಂಡವಾನ್ಪ್ರತಿ|

05066006c ಸಾರಾಸಾರಬಲಂ ಜ್ಞಾತುಂ ತನ್ಮೇ ನಿಗದತಃ ಶೃಣು||

ರಾಜನ್! ಮೇಲಿಂದ ಮೇಲೆ ನೀನು ಪಾಂಡವರ ಸಾರಾಸಾರಬಲಗಳ ಕುರಿತು ತಿಳಿದುಕೊಳ್ಳಲು ಕೇಳಿದ್ದೀಯೆ. ಈಗ ಹೇಳುವುದನ್ನು ಕೇಳು.

05066007a ಏಕತೋ ವಾ ಜಗತ್ಕೃತ್ಸ್ನಮೇಕತೋ ವಾ ಜನಾರ್ದನಃ|

05066007c ಸಾರತೋ ಜಗತಃ ಕೃತ್ಸ್ನಾದತಿರಿಕ್ತೋ ಜನಾರ್ದನಃ||

ಒಂದು ಕಡೆ ಇಡೀ ಈ ಜಗತ್ತು ಮತ್ತು ಇನ್ನೊಂದೆಡೆ ಜನಾರ್ದನನೊಬ್ಬನೇ ಇದ್ದರೂ ಸಾರದಲ್ಲಿ ಜಗತ್ತಿಗಿಂತ ಜನಾರ್ದನನೇ ಹೆಚ್ಚಿನವನು.

05066008a ಭಸ್ಮ ಕುರ್ಯಾಜ್ಜಗದಿದಂ ಮನಸೈವ ಜನಾರ್ದನಃ|

05066008c ನ ತು ಕೃತ್ಸ್ನಂ ಜಗಚ್ಚಕ್ತಂ ಭಸ್ಮ ಕರ್ತುಂ ಜನಾರ್ದನಂ||

ಮನಸ್ಸಿನಿಂದಲೇ ಜನಾರ್ದನನು ಈ ಜಗತ್ತನ್ನು ಭಸ್ಮಮಾಡಬಲ್ಲ. ಆದರೆ ಇಡೀ ಜಗತ್ತೇ ಸೇರಿದರೂ ಜನಾರ್ದನನನ್ನು ಭಸ್ಮಮಾಡಲಿಕ್ಕಾಗುವುದಿಲ್ಲ.

05066009a ಯತಃ ಸತ್ಯಂ ಯತೋ ಧರ್ಮೋ ಯತೋ ಹ್ರೀರಾರ್ಜವಂ ಯತಃ|

05066009c ತತೋ ಭವತಿ ಗೋವಿಂದೋ ಯತಃ ಕೃಷ್ಣಸ್ತತೋ ಜಯಃ||

ಎಲ್ಲಿ ಸತ್ಯವಿದೆಯೋ, ಎಲ್ಲಿ ಧರ್ಮವಿದೆಯೋ, ಎಲ್ಲಿ ವಿನಯ, ಪ್ರಾಮಾಣಿಕತೆಗಳಿವೆಯೋ ಅಲ್ಲಿ ಗೋವಿಂದನಿರುತ್ತಾನೆ. ಎಲ್ಲಿ ಕೃಷ್ಣನಿರುತ್ತಾನೋ ಅಲ್ಲಿ ಜಯವಿರುತ್ತದೆ.

05066010a ಪೃಥಿವೀಂ ಚಾಂತರಿಕ್ಷಂ ಚ ದಿವಂ ಚ ಪುರುಷೋತ್ತಮಃ|

05066010c ವಿಚೇಷ್ಟಯತಿ ಭೂತಾತ್ಮಾ ಕ್ರೀಡನ್ನಿವ ಜನಾರ್ದನಃ||

ಪುರುಷೋತ್ತಮ, ಭೂತಾತ್ಮ ಜನಾರ್ದನನು ಭೂಮಿ-ಅಂತರಿಕ್ಷ-ದೇವಲೋಕಗಳನ್ನು ಆಟದಂತೆ ನಡೆಯಿಸುತ್ತಾನೆ.

05066011a ಸ ಕೃತ್ವಾ ಪಾಂಡವಾನ್ಸತ್ರಂ ಲೋಕಂ ಸಮ್ಮೋಹಯನ್ನಿವ|

05066011c ಅಧರ್ಮನಿರತಾನ್ಮೂಢಾನ್ದಗ್ಧುಮಿಚ್ಚತಿ ತೇ ಸುತಾನ್||

ಅವನು ಪಾಂಡವರನ್ನು ನೆಪವನ್ನಾಗಿಸಿಕೊಂಡು ಲೋಕವನ್ನು ಸಮ್ಮೋಹಿಸುತ್ತಾ ನಿನ್ನ ಅಧರ್ಮನಿರತ ಮೂಢ ಮಕ್ಕಳನ್ನು ಸುಡಲು ಬಯಸುತ್ತಾನೆ.

05066012a ಕಾಲಚಕ್ರಂ ಜಗಚ್ಚಕ್ರಂ ಯುಗಚಕ್ರಂ ಚ ಕೇಶವಃ|

05066012c ಆತ್ಮಯೋಗೇನ ಭಗವಾನ್ಪರಿವರ್ತಯತೇಽನಿಶಂ||

ಆತ್ಮಯೋಗದಿಂದ ಭಗವಾನ್ ಕೇಶವನು ಕಾಲಚಕ್ರವನ್ನು, ಜಗಚ್ಚಕ್ರವನ್ನು ಮತ್ತು ಯುಗಚಕ್ರವನ್ನು ನಿಲ್ಲಿಸದೆಯೇ ತಿರುಗಿಸುತ್ತಿರುತ್ತಾನೆ.

05066013a ಕಾಲಸ್ಯ ಚ ಹಿ ಮೃತ್ಯೋಶ್ಚ ಜಂಗಮಸ್ಥಾವರಸ್ಯ ಚ|

05066013c ಈಶತೇ ಭಗವಾನೇಕಃ ಸತ್ಯಮೇತದ್ಬ್ರವೀಮಿ ತೇ||

ಆ ಭಗವಾನನು ಒಬ್ಬನೇ ಕಾಲ, ಮೃತ್ಯು, ಜಂಗಮ-ಸ್ಥಾವರಗಳನ್ನು ಆಳುತ್ತಾನೆ. ನಾನು ನಿನಗೆ ಈ ಸತ್ಯವನ್ನು ಹೇಳುತ್ತಿದ್ದೇನೆ.

05066014a ಈಶನ್ನಪಿ ಮಹಾಯೋಗೀ ಸರ್ವಸ್ಯ ಜಗತೋ ಹರಿಃ|

05066014c ಕರ್ಮಾಣ್ಯಾರಭತೇ ಕರ್ತುಂ ಕೀನಾಶ ಇವ ದುರ್ಬಲಃ||

ಮಹಾಯೋಗಿ ಹರಿಯು ಸರ್ವ ಜಗತ್ತುಗಳ ಈಶನಾದರೂ ದುರ್ಬಲ ರೈತನಂತೆ ಕರ್ಮಗಳಲ್ಲಿ ತೊಡಗಿರುತ್ತಾನೆ.

05066015a ತೇನ ವಂಚಯತೇ ಲೋಕಾನ್ಮಾಯಾಯೋಗೇನ ಕೇಶವಃ|

05066015c ಯೇ ತಮೇವ ಪ್ರಪದ್ಯಂತೇ ನ ತೇ ಮುಹ್ಯಂತಿ ಮಾನವಾಃ||

ಹೀಗೆ ಕೇಶವನು ತನ್ನ ಮಾಯಾಯೋಗದಿಂದ ಲೋಕಗಳನ್ನು ವಂಚಿಸುತ್ತಾನೆ. ಆದರೆ ಅವನನ್ನೇ ಶರಣು ಹೋಗುವ ಮಾನವರು ಮೋಸಹೋಗುವುದಿಲ್ಲ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಸಂಜಯವಾಕ್ಯೇ ಷಟ್‌ಷಷ್ಟಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಅರವತ್ತಾರನೆಯ ಅಧ್ಯಾಯವು.

Related image

Comments are closed.