Udyoga Parva: Chapter 64

ಉದ್ಯೋಗ ಪರ್ವ: ಯಾನಸಂಧಿ ಪರ್ವ

೬೪

“ವಾಸುದೇವನ ನಂತರ ಅರ್ಜುನನು ಹೇಳಿದುದರಲ್ಲಿ ನಮಗೆ ಹೇಳದೇ ಬಿಟ್ಟಿದ್ದುದನ್ನು ಹೇಳು” ಎಂದು ಧೃತರಾಷ್ಟ್ರನು ಸಂಜಯನನ್ನು ಕೇಳಲು, ಸಂಜಯನು ಅರ್ಜುನನ ಸಂದೇಶವನ್ನು ಪೂರ್ಣಗೊಳಿಸುವುದು (೧-೧೬).

05064001 ವೈಶಂಪಾಯನ ಉವಾಚ|

05064001a ಏವಮುಕ್ತ್ವಾ ಮಹಾಪ್ರಾಜ್ಞೋ ಧೃತರಾಷ್ಟ್ರಃ ಸುಯೋಧನಂ|

05064001c ಪುನರೇವ ಮಹಾಭಾಗಃ ಸಂಜಯಂ ಪರ್ಯಪೃಚ್ಚತ||

ವೈಶಂಪಾಯನನು ಹೇಳಿದನು: “ಸುಯೋಧನನಿಗೆ ಹೀಗೆ ಹೇಳಿ ಮಹಾಪ್ರಾಜ್ಞ, ಮಹಾಭಾಗ ಧೃತರಾಷ್ಟ್ರನು ಸಂಜಯನನ್ನು ಪುನಃ ಪ್ರಶ್ನಿಸಿದನು.

05064002a ಬ್ರೂಹಿ ಸಂಜಯ ಯಚ್ಚೇಷಂ ವಾಸುದೇವಾದನಂತರಂ|

05064002c ಯದರ್ಜುನ ಉವಾಚ ತ್ವಾಂ ಪರಂ ಕೌತೂಹಲಂ ಹಿ ಮೇ||

“ಸಂಜಯ! ವಾಸುದೇವನ ನಂತರ ಅರ್ಜುನನು ಹೇಳಿದುದರಲ್ಲಿ ನಮಗೆ ಹೇಳದೇ ಬಿಟ್ಟಿದ್ದುದನ್ನು ಹೇಳು. ಏಕೆಂದರೆ ಅದರಲ್ಲಿ ನನಗೆ ಅತ್ಯಂತ ಕುತೂಹಲವಿದೆ.”

05064003 ಸಂಜಯ ಉವಾಚ|

05064003a ವಾಸುದೇವವಚಃ ಶ್ರುತ್ವಾ ಕುಂತೀಪುತ್ರೋ ಧನಂಜಯಃ|

05064003c ಉವಾಚ ಕಾಲೇ ದುರ್ಧರ್ಷೋ ವಾಸುದೇವಸ್ಯ ಶೃಣ್ವತಃ||

ಸಂಜಯನು ಹೇಳಿದನು: “ವಾಸುದೇವನ ಮಾತನ್ನು ಕೇಳಿ ಕುಂತೀಪುತ್ರ ಧನಂಜಯನು ದುರ್ಧರ್ಷ ವಾಸುದೇವನು ಕೇಳುವಂತೆ ಕಾಲೋಚಿತ ಮಾತನ್ನಾಡಿದನು:

05064004a ಪಿತಾಮಹಂ ಶಾಂತನವಂ ಧೃತರಾಷ್ಟ್ರಂ ಚ ಸಂಜಯ|

05064004c ದ್ರೋಣಂ ಕೃಪಂ ಚ ಕರ್ಣಂ ಚ ಮಹಾರಾಜಂ ಚ ಬಾಹ್ಲಿಕಂ||

05064005a ದ್ರೌಣಿಂ ಚ ಸೋಮದತ್ತಂ ಚ ಶಕುನಿಂ ಚಾಪಿ ಸೌಬಲಂ|

05064005c ದುಃಶಾಸನಂ ಶಲಂ ಚೈವ ಪುರುಮಿತ್ರಂ ವಿವಿಂಶತಿಂ||

05064006a ವಿಕರ್ಣಂ ಚಿತ್ರಸೇನಂ ಚ ಜಯತ್ಸೇನಂ ಚ ಪಾರ್ಥಿವಂ|

05064006c ವಿಂದಾನುವಿಂದಾವಾವಂತ್ಯೌ ದುರ್ಮುಖಂ ಚಾಪಿ ಕೌರವಂ||

05064007a ಸೈಂಧವಂ ದುಃಸಹಂ ಚೈವ ಭೂರಿಶ್ರವಸಮೇವ ಚ|

05064007c ಭಗದತ್ತಂ ಚ ರಾಜಾನಂ ಜಲಸಂಧಂ ಚ ಪಾರ್ಥಿವಂ||

05064008a ಯೇ ಚಾಪ್ಯನ್ಯೇ ಪಾರ್ಥಿವಾಸ್ತತ್ರ ಯೋದ್ಧುಂ

         ಸಮಾಗತಾಃ ಕೌರವಾಣಾಂ ಪ್ರಿಯಾರ್ಥಂ|

05064008c ಮುಮೂರ್ಷವಃ ಪಾಂಡವಾಗ್ನೌ ಪ್ರದೀಪ್ತೇ

         ಸಮಾನೀತಾ ಧಾರ್ತರಾಷ್ಟ್ರೇಣ ಸೂತ||

‘ಸೂತ! ಸಂಜಯ! ಕೌರವರ ಪ್ರೀತಿಗಾಗಿ ಯುದ್ಧಮಾಡಲು ಅಲ್ಲಿ ಸೇರಿರುವ ಪಿತಾಮಹ ಶಾಂತನವ, ಧೃತರಾಷ್ಟ್ರ, ದ್ರೋಣ, ಕೃಪ, ಕರ್ಣ, ಮಹಾರಾಜ ಬಾಹ್ಲೀಕ, ದ್ರೌಣಿ, ಸೋಮದತ್ತ, ಶಕುನಿ ಸೌಬಲ, ದುಃಶಾಸನ, ಶಲ, ಪುರುಮಿತ್ರ, ವಿವಿಂಶತಿ, ವಿಕರ್ಣ, ಚಿತ್ರಸೇನ, ಪಾರ್ಥಿವ ಜಯತ್ಸೇನ, ಅವಂತಿಯ ವಿಂದ-ಅನುವಿಂದರು, ಕೌರವ ದುರ್ಮುಖ, ಸೈಂಧವ, ದುಃಸಹ, ಭೂರಿಶ್ರವ, ರಾಜ ಭಗದತ್ತ, ಪಾರ್ಥಿವ ಜಲಸಂಧ - ಇವರು ಮತ್ತು ಇತರ ಪಾರ್ಥಿವರನ್ನು ಧಾರ್ತರಾಷ್ಟ್ರನು ಪಾಂಡವರ ಅಗ್ನಿಯಲ್ಲಿ ಆಹುತಿಯನ್ನಾಗಿಸಲು ಸೇರಿಸಿದ್ದಾನೆ.

05064009a ಯಥಾನ್ಯಾಯಂ ಕೌಶಲಂ ವಂದನಂ ಚ

         ಸಮಾಗತಾ ಮದ್ವಚನೇನ ವಾಚ್ಯಾಃ|

05064009c ಇದಂ ಬ್ರೂಯಾಃ ಸಂಜಯ ರಾಜಮಧ್ಯೇ

         ಸುಯೋಧನಂ ಪಾಪಕೃತಾಂ ಪ್ರಧಾನಂ||

ಸಂಜಯ! ಯಥಾನ್ಯಾಯವಾಗಿ ನನ್ನ ಮಾತಿನಲ್ಲಿಯೇ ಅಲ್ಲಿ ಸೇರಿರುವರಿಗೆ ಕುಶಲವನ್ನು ಕೇಳು ಮತ್ತು ವಂದನೆಗಳನ್ನು ಹೇಳಬೇಕು. ಪಾಪಕೃತರಲ್ಲಿ ಪ್ರಧಾನನಾಗಿರುವ ಸುಯೋಧನನಿಗೆ ರಾಜರ ಮಧ್ಯದಲ್ಲಿ ಇದನ್ನು ಹೇಳು.

05064010a ಅಮರ್ಷಣಂ ದುರ್ಮತಿಂ ರಾಜಪುತ್ರಂ

         ಪಾಪಾತ್ಮಾನಂ ಧಾರ್ತರಾಷ್ಟ್ರಂ ಸುಲುಬ್ಧಂ|

05064010c ಸರ್ವಂ ಮಮೈತದ್ವಚನಂ ಸಮಗ್ರಂ

         ಸಹಾಮಾತ್ಯಂ ಸಂಜಯ ಶ್ರಾವಯೇಥಾಃ||

ಸಂಜಯ! ನನ್ನ ಈ ಮಾತನ್ನು ಎಲ್ಲವನ್ನೂ ಸಮಗ್ರವಾಗಿ ಅಮಾತ್ಯರೊಂದಿಗೆ ಆ ಅಮರ್ಷಣ, ದುರ್ಮತಿ, ಲುಬ್ಧ, ರಾಜಪುತ್ರ ಧಾರ್ತರಾಷ್ಟ್ರನಿಗೆ ಕೇಳಿಸಬೇಕು.

05064011a ಏವಂ ಪ್ರತಿಷ್ಠಾಪ್ಯ ಧನಂಜಯೋ ಮಾಂ

         ತತೋಽರ್ಥವದ್ಧರ್ಮವಚ್ಚಾಪಿ ವಾಕ್ಯಂ|

05064011c ಪ್ರೋವಾಚೇದಂ ವಾಸುದೇವಂ ಸಮೀಕ್ಷ್ಯ

         ಪಾರ್ಥೋ ಧೀಮಾಽಲ್ಲೋಹಿತಾಂತಾಯತಾಕ್ಷಃ||

ಹೀಗೆ ಪೀಠಿಕೆಯನ್ನು ಹಾಕಿ ಕೆಂಪು ಕೊನೆಗಳ ದೊಡ್ಡ ಕಣ್ಣುಗಳ ಧೀಮಾನ್ ಧನಂಜಯ ಪಾರ್ಥನು ವಾಸುದೇವನನ್ನು ನೋಡುತ್ತಾ ಅರ್ಥ-ಧರ್ಮಗಳನ್ನೊಡಗೂಡಿದ ಈ ಮಾತನ್ನು ನನಗೆ ಹೇಳಿದನು.

05064012a ಯಥಾ ಶ್ರುತಂ ತೇ ವದತೋ ಮಹಾತ್ಮನೋ

         ಮಧುಪ್ರವೀರಸ್ಯ ವಚಃ ಸಮಾಹಿತಂ|

05064012c ತಥೈವ ವಾಚ್ಯಂ ಭವತಾ ಹಿ ಮದ್ವಚಃ

         ಸಮಾಗತೇಷು ಕ್ಷಿತಿಪೇಷು ಸರ್ವಶಃ||

“ನೀನು ಈಗಾಗಲೇ ಮಹಾತ್ಮ ಮಧುಪ್ರವೀರನು ಹೇಳಿದ ಸಮಾಹಿತ ಮಾತನ್ನು ಕೇಳಿದ್ದೀಯೆ. ಅದೇ ನನ್ನ ಮಾತುಗಳೂ ಕೂಡ ಎಂದು ಅಲ್ಲಿ ಸೇರಿರುವ ಎಲ್ಲ ಕ್ಷಿತಿಪರಿಗೆ ಹೇಳು.

05064013a ಶರಾಗ್ನಿಧೂಮೇ ರಥನೇಮಿನಾದಿತೇ

         ಧನುಃಸ್ರುವೇಣಾಸ್ತ್ರಬಲಾಪಹಾರಿಣಾ|

05064013c ಯಥಾ ನ ಹೋಮಃ ಕ್ರಿಯತೇ ಮಹಾಮೃಧೇ

         ತಥಾ ಸಮೇತ್ಯ ಪ್ರಯತಧ್ವಮಾದೃತಾಃ||

ನೀವೆಲ್ಲರೂ ಸೇರಿ ಶರಗಳೆಬ್ಬಿಸುವ ಅಗ್ನಿಧೂಮಗಳ, ರಥಗಾಲಿಗಳ ನಿನಾದದಿಂದ ಕೂಡಿದ, ಬಲಪ್ರಹಾರಿ ಧನುಸ್ಸುಗಳೆಂಬ ಹುಟ್ಟಿನಿಂದ ಮಹಾ ಯಜ್ಞದಲ್ಲಿ ಆಹುತಿಯಾಗದಂತೆ ಏನಾದರೂ ಪ್ರಯತ್ನ ಮಾಡಿ.

05064014a ನ ಚೇತ್ಪ್ರಯಚ್ಚಧ್ವಮಮಿತ್ರಘಾತಿನೋ

         ಯುಧಿಷ್ಠಿರಸ್ಯಾಂಶಮಭೀಪ್ಸಿತಂ ಸ್ವಕಂ|

05064014c ನಯಾಮಿ ವಃ ಸ್ವಾಶ್ವಪದಾತಿಕುಂಜರಾನ್

         ದಿಶಂ ಪಿತೄಣಾಮಶಿವಾಂ ಶಿತೈಃ ಶರೈಃ||

ಅಮಿತ್ರಘಾತಿ ಯುಧಿಷ್ಠಿರನು ಕೇಳುವ ತನ್ನ ಪಾಲನ್ನು ನೀವು ಕೊಡದೇ ಇದ್ದರೆ ನಾವು ಹರಿತ ಬಾಣಗಳಿಂದ ನಿಮ್ಮನ್ನು ಅಶ್ವ-ಪದಾತಿ-ಕುಂಜರಗಳ ಸಹಿತ ಅಮಂಗಳವಾದ ಪಿತ್ರುಗಳ ದಿಕ್ಕಿಗೆ ಕಳುಹಿಸುತ್ತೇವೆ.”

05064015a ತತೋಽಹಮಾಮಂತ್ರ್ಯ ಚತುರ್ಭುಜಂ ಹರಿಂ

         ಧನಂಜಯಂ ಚೈವ ನಮಸ್ಯ ಸತ್ವರಃ|

05064015c ಜವೇನ ಸಂಪ್ರಾಪ್ತ ಇಹಾಮರದ್ಯುತೇ

         ತವಾಂತಿಕಂ ಪ್ರಾಪಯಿತುಂ ವಚೋ ಮಹತ್||

ಅಮರದ್ಯುತೇ! ಆಗ ನಾನು ಚತುರ್ಭುಜ ಹರಿ ಮತ್ತು ಧನಂಜಯರಿಗೆ ನಮಸ್ಕರಿಸಿ ಬೀಳ್ಕೊಂಡು ವೇಗದಿಂದ ಆ ಮಹಾ ಮಾತನ್ನು ತಲುಪಿಸಲು ನಿನ್ನಲ್ಲಿಗೆ ಬಂದೆ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಸಂಜಯವಾಕ್ಯೇ ಚತುಃಷಷ್ಟಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಅರವತ್ನಾಲ್ಕನೆಯ ಅಧ್ಯಾಯವು.

Related image

Comments are closed.