ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ
೬
ದ್ರುಪದನು ದೂತನನ್ನು ಕಳುಹಿಸಿದುದು
ದ್ರುಪದನು ತನ್ನ ವೃದ್ಧ ಪುರೋಹಿತನಿಗೆ “ಧರ್ಮಯುಕ್ತನಾದ ನೀನು ಅವರೊಡನೆಯೂ ಧರ್ಮಯುಕ್ತನಾಗಿ ನಡೆದುಕೊಂಡು, ಕೃಪಾಳುಗಳಲ್ಲಿ ಪಾಂಡವರ ಪರಿಕ್ಲೇಶಗಳನ್ನು ಮತ್ತು ಪೂರ್ವಜರು ಅನುಷ್ಠಾನಮಾಡಿಕೊಂಡು ಬಂದಿರುವ ಕುಲಧರ್ಮವನ್ನು ವೃದ್ಧರಲ್ಲಿ ಹೇಳಿಕೊಂಡು ಅವರ ಮನಸ್ಸುಗಳನ್ನು ಒಡೆಯಬೇಕು” ಎಂದು ಹೇಳಿ ದೂತನನ್ನಾಗಿ ಧೃತರಾಷ್ಟ್ರನಲ್ಲಿಗೆ ಕಳುಹಿಸುವುದು (೧-೧೮).
05006001 ದ್ರುಪದ ಉವಾಚ|
05006001a ಭೂತಾನಾಂ ಪ್ರಾಣಿನಃ ಶ್ರೇಷ್ಠಾಃ ಪ್ರಾಣಿನಾಂ ಬುದ್ಧಿಜೀವಿನಃ|
05006001c ಬುದ್ಧಿಮತ್ಸು ನರಾಃ ಶ್ರೇಷ್ಠಾ ನರಾಣಾಂ ತು ದ್ವಿಜಾತಯಃ||
ದ್ರುಪದನು ಹೇಳಿದನು: “ಇರುವವುಗಳಲ್ಲಿ ಪ್ರಾಣಿಗಳು ಶ್ರೇಷ್ಠರು; ಪ್ರಾಣಿಗಳಲ್ಲಿ ಬುದ್ಧಿಜೀವಿಗಳು ಶ್ರೇಷ್ಠರು; ಬುದ್ಧಿಯಿರುವವರಲ್ಲಿ ನರರು ಶ್ರೇಷ್ಠರು ಮತ್ತು ನರರಲ್ಲಿ ದ್ವಿಜರು ಶ್ರೇಷ್ಠರು.
05006002a ದ್ವಿಜೇಷು ವೈದ್ಯಾಃ ಶ್ರೇಯಾಂಸೋ ವೈದ್ಯೇಷು ಕೃತಬುದ್ಧಯಃ|
05006002c ಸ ಭವಾನ್ಕೃತಬುದ್ಧೀನಾಂ ಪ್ರಧಾನ ಇತಿ ಮೇ ಮತಿಃ||
ದ್ವಿಜರಲ್ಲಿ ವೇದವನ್ನು ತಿಳಿದವರು ಶ್ರೇಯಸ್ಕರು, ವೇದಗಳನ್ನು ತಿಳಿದವರಲ್ಲಿ ಆ ತಿಳುವಳಿಕೆಯನ್ನು ಕಾರ್ಯದಲ್ಲಿ ಅಳವಡಿಸಿಕೊಂಡವರು ಶ್ರೇಯಸ್ಕರು. ಹೀಗೆ ತಿಳುವಳಿಕೆಯನ್ನು ಅಳವಡಿಸಿಕೊಂಡವರಲ್ಲಿ ನೀನು ಪ್ರಧಾನನೆಂದು ನನಗನ್ನಿಸುತ್ತದೆ.
05006003a ಕುಲೇನ ಚ ವಿಶಿಷ್ಟೋಽಸಿ ವಯಸಾ ಚ ಶ್ರುತೇನ ಚ|
05006003c ಪ್ರಜ್ಞಾಯಾನವಮಶ್ಚಾಸಿ ಶುಕ್ರೇಣಾಂಗಿರಸೇನ ಚ||
ನೀನು ಕುಲದಲ್ಲಿ, ವಯಸ್ಸಿನಲ್ಲಿ ಮತ್ತು ತಿಳುವಳಿಕೆಯಲ್ಲಿ ವಿಶಿಷ್ಟನಾಗಿದ್ದೀಯೆ. ಪ್ರಜ್ಞೆಯಲ್ಲಿ ಶುಕ್ರ ಅಥವಾ ಆಂಗೀರಸ ಬೃಹಸ್ಪತಿಯನ್ನು ಹೋಲುವೆ.
05006004a ವಿದಿತಂ ಚಾಪಿ ತೇ ಸರ್ವಂ ಯಥಾವೃತ್ತಃ ಸ ಕೌರವಃ|
05006004c ಪಾಂಡವಶ್ಚ ಯಥಾವೃತ್ತಃ ಕುಂತೀಪುತ್ರೋ ಯುಧಿಷ್ಠಿರಃ||
ಕೌರವನು ಎಂಥವನು ಮತ್ತು ಪಾಂಡವ ಕುಂತೀಪುತ್ರ ಯುಧಿಷ್ಠಿರನು ಎಂಥವನು ಎಂದು ಎಲ್ಲವೂ ನಿನಗೆ ತಿಳಿದಿದೆ.
05006005a ಧೃತರಾಷ್ಟ್ರಸ್ಯ ವಿದಿತೇ ವಂಚಿತಾಃ ಪಾಂಡವಾಃ ಪರೈಃ|
05006005c ವಿದುರೇಣಾನುನೀತೋಽಪಿ ಪುತ್ರಮೇವಾನುವರ್ತತೇ||
ಧೃತರಾಷ್ಟ್ರನಿಗೆ ತಿಳಿದೇ ಪಾಂಡವರು ಪರರಿಂದ ವಂಚಿತರಾದರು. ವಿದುರನು ಹೇಳಿದರೂ ಅವನು ಪುತ್ರನನ್ನೇ ಅನುಸರಿಸುತ್ತಾನೆ.
05006006a ಶಕುನಿರ್ಬುದ್ಧಿಪೂರ್ವಂ ಹಿ ಕುಂತೀಪುತ್ರಂ ಸಮಾಹ್ವಯತ್|
05006006c ಅನಕ್ಷಜ್ಞಾಂ ಮತಾಕ್ಷಃ ಸನ್ ಕ್ಷತ್ರವೃತ್ತೇ ಸ್ಥಿತಂ ಶುಚಿಂ||
ಮೊದಲೇ ಯೋಚಿಸಿ ಅಕ್ಷದಲ್ಲಿ ಪಳಗಿದ್ದ ಶಕುನಿಯು ಅಕ್ಷವನ್ನು ತಿಳಿಯದೇ ಇದ್ದ ಆದರೆ ಕ್ಷತ್ರಿಯರ ನಡತೆಯನ್ನನುಸರಿಸಿದ್ದ ಶುಚಿ ಕುಂತೀಪುತ್ರನನ್ನು ಜೂಜಿಗೆ ಆಹ್ವಾನಿಸಿದನು.
05006007a ತೇ ತಥಾ ವಂಚಯಿತ್ವಾ ತು ಧರ್ಮಪುತ್ರಂ ಯುಧಿಷ್ಠಿರಂ|
05006007c ನ ಕಸ್ಯಾಂ ಚಿದವಸ್ಥಾಯಾಂ ರಾಜ್ಯಂ ದಾಸ್ಯಂತಿ ವೈ ಸ್ವಯಂ||
ಹೀಗೆ ಧರ್ಮಪುತ್ರ ಯುಧಿಷ್ಠಿರನನ್ನು ವಂಚಿಸಿದ ಅವರು ಯಾವುದೇ ಕಾರಣಕ್ಕಾಗಿ ತಾವಾಗಿಯೇ ರಾಜ್ಯವನ್ನು ಹಿಂದಿರುಗಿಸುವುದಿಲ್ಲ.
05006008a ಭವಾಂಸ್ತು ಧರ್ಮಸಂಯುಕ್ತಂ ಧೃತರಾಷ್ಟ್ರಂ ಬ್ರುವನ್ವಚಃ|
05006008c ಮನಾಂಸಿ ತಸ್ಯ ಯೋಧಾನಾಂ ಧ್ರುವಮಾವರ್ತಯಿಷ್ಯತಿ||
ಧೃತರಾಷ್ಟ್ರನಲ್ಲಿ ಧರ್ಮಸಂಯುಕ್ತ ಮಾತುಗಳನ್ನಾಡಿ ನೀನು ಆ ಯೋಧರ ಮನಸ್ಸನ್ನು ಖಂಡಿತವಾಗಿ ಹಿಂದಿರುಗಿಸಬಲ್ಲೆ.
05006009a ವಿದುರಶ್ಚಾಪಿ ತದ್ವಾಕ್ಯಂ ಸಾಧಯಿಷ್ಯತಿ ತಾವಕಂ|
05006009c ಭೀಷ್ಮದ್ರೋಣಕೃಪಾಣಾಂ ಚ ಭೇದಂ ಸಂಜನಯಿಷ್ಯತಿ||
ನಿನ್ನ ಆ ಮಾತುಗಳನ್ನು ವಿದುರನೂ ಬಳಸಿಕೊಳ್ಳುತ್ತಾನೆ ಮತ್ತು ಭೀಷ್ಮ-ದ್ರೋಣ-ಕೃಪರಲ್ಲಿ ಭೇದವನ್ನು ಹುಟ್ಟಿಸುತ್ತಾನೆ.
05006010a ಅಮಾತ್ಯೇಷು ಚ ಭಿನ್ನೇಷು ಯೋಧೇಷು ವಿಮುಖೇಷು ಚ|
05006010c ಪುನರೇಕಾಗ್ರಕರಣಂ ತೇಷಾಂ ಕರ್ಮ ಭವಿಷ್ಯತಿ||
ಅಮಾತ್ಯರಲ್ಲಿ ಭಿನ್ನಾಭಿಪ್ರಾಯವಾದರೆ, ಯೋಧರು ಹಿಂದೆ ಸರಿದರೆ ಪುನಃ ಒಂದುಗೂಡಿಸುವುದೇ ಅವರ ಕೆಲಸವಾಗುತ್ತದೆ.
05006011a ಏತಸ್ಮಿನ್ನಂತರೇ ಪಾರ್ಥಾಃ ಸುಖಮೇಕಾಗ್ರಬುದ್ಧಯಃ|
05006011c ಸೇನಾಕರ್ಮ ಕರಿಷ್ಯಂತಿ ದ್ರವ್ಯಾಣಾಂ ಚೈವ ಸಂಚಯಂ||
ಈ ಮಧ್ಯದಲ್ಲಿ ಪಾರ್ಥರು ಸುಖವಾಗಿ ಏಕಾಗ್ರಚಿತ್ತರಾಗಿ ಸೇನೆಯ ತಯಾರಿ ಮತ್ತು ದ್ರವ್ಯಗಳ ಸಂಗ್ರಹವನ್ನು ಮಾಡಿಕೊಳ್ಳುತ್ತಾರೆ.
05006012a ಭಿದ್ಯಮಾನೇಷು ಚ ಸ್ವೇಷು ಲಂಬಮಾನೇ ಚ ವೈ ತ್ವಯಿ|
05006012c ನ ತಥಾ ತೇ ಕರಿಷ್ಯಂತಿ ಸೇನಾಕರ್ಮ ನ ಸಂಶಯಃ||
ತಮ್ಮಲ್ಲಿಯೇ ಒಡಕು ಬಂದಾಗ, ನೀನೂ ಕೂಡ ಅಲ್ಲಿ ಬಹಳ ಸಮಯವನ್ನು ಕಳೆಯುವುದರಿಂದ, ಅವರಿಗೆ ಸೇನೆಯ ಕೆಲಸಗಳನ್ನು ಮಾಡಲಿಕ್ಕಾಗುವುದಿಲ್ಲ ಎನ್ನುವುದರಲ್ಲಿ ಸಂಶಯವಿಲ್ಲ.
05006013a ಏತತ್ಪ್ರಯೋಜನಂ ಚಾತ್ರ ಪ್ರಾಧಾನ್ಯೇನೋಪಲಭ್ಯತೇ|
05006013c ಸಂಗತ್ಯಾ ಧೃತರಾಷ್ಟ್ರಶ್ಚ ಕುರ್ಯಾದ್ಧರ್ಮ್ಯಂ ವಚಸ್ತವ||
ಇದರಲ್ಲಿ ಪ್ರಯೋಜನವಿದೆ. ಫಲಿತಾಂಶವು ದೊರೆಯುತ್ತದೆ. ಧೃತರಾಷ್ಟ್ರನನ್ನು ಭೇಟಿಯಾದ ನಂತರ ನಿನ್ನ ಮಾತಿನಂತೆಯೇ ಅವನು ಮಾಡಬಹುದು.
05006014a ಸ ಭವಾನ್ಧರ್ಮಯುಕ್ತಶ್ಚ ಧರ್ಮ್ಯಂ ತೇಷು ಸಮಾಚರನ್|
05006014c ಕೃಪಾಲುಷು ಪರಿಕ್ಲೇಶಾನ್ಪಾಂಡವಾನಾಂ ಪ್ರಕೀರ್ತಯನ್||
ಧರ್ಮಯುಕ್ತನಾದ ನೀನು ಅವರೊಡನೆಯೂ ಧರ್ಮಯುಕ್ತನಾಗಿ ನಡೆದುಕೊಳ್ಳಬೇಕು. ಕೃಪಾಳುಗಳಲ್ಲಿ ಪಾಂಡವರ ಪರಿಕ್ಲೇಶಗಳನ್ನು ಹೇಳಿಕೊಳ್ಳಬೇಕು.
05006015a ವೃದ್ಧೇಷು ಕುಲಧರ್ಮಂ ಚ ಬ್ರುವನ್ಪೂರ್ವೈರನುಷ್ಠಿತಂ|
05006015c ವಿಭೇತ್ಸ್ಯತಿ ಮನಾಂಸ್ಯೇಷಾಮಿತಿ ಮೇ ನಾತ್ರ ಸಂಶಯಃ||
ಪೂರ್ವಜರು ಅನುಷ್ಠಾನಮಾಡಿಕೊಂಡು ಬಂದಿರುವ ಕುಲಧರ್ಮವನ್ನು ವೃದ್ಧರಲ್ಲಿ ಹೇಳಿಕೊಂಡು ಅವರ ಮನಸ್ಸುಗಳನ್ನು ಒಡೆಯಬೇಕು ಎನ್ನುವುದರಲ್ಲಿ ನನಗೆ ಸಂಶಯವೇ ಇಲ್ಲ.
05006016a ನ ಚ ತೇಭ್ಯೋ ಭಯಂ ತೇಽಸ್ತಿ ಬ್ರಾಹ್ಮಣೋ ಹ್ಯಸಿ ವೇದವಿತ್|
05006016c ದೂತಕರ್ಮಣಿ ಯುಕ್ತಶ್ಚ ಸ್ಥವಿರಶ್ಚ ವಿಶೇಷತಃ||
ಬ್ರಾಹ್ಮಣ! ನೀನು ವೇದವಿದು. ಅವರಿಂದ ನಿನಗೆ ಏನೂ ಭಯವಿರಕೂಡದು. ವಿಶೇಷವಾಗಿ ಹಿರಿಯವನಿಗೆ ದೂತ ಕರ್ಮವು ಸರಿಹೊಂದುತ್ತದೆ.
05006017a ಸ ಭವಾನ್ಪುಷ್ಯಯೋಗೇನ ಮುಹೂರ್ತೇನ ಜಯೇನ ಚ|
05006017c ಕೌರವೇಯಾನ್ಪ್ರಯಾತ್ವಾಶು ಕೌಂತೇಯಸ್ಯಾರ್ಥಸಿದ್ಧಯೇ||
ಕೌಂತೇಯನ ಅರ್ಥಸಿದ್ಧಿಗಾಗಿ ನೀನು ಪುಷ್ಯಯೋಗದ ಜಯ ಮುಹೂರ್ತದಲ್ಲಿ ಕೌರವನೆಡೆಗೆ ಪ್ರಯಾಣಿಸು.””
05006018 ವೈಶಂಪಾಯನ ಉವಾಚ|
05006018a ತಥಾನುಶಿಷ್ಟಃ ಪ್ರಯಯೌ ದ್ರುಪದೇನ ಮಹಾತ್ಮನಾ|
05006018c ಪುರೋಧಾ ವೃತ್ತಸಂಪನ್ನೋ ನಗರಂ ನಾಗಸಾಹ್ವಯಂ||
ವೈಶಂಪಾಯನನು ಹೇಳಿದನು: “ಹೀಗೆ ಮಹಾತ್ಮ ದ್ರುಪದನಿಂದ ಅನುಶಿಷ್ಟನಾಗಿ ವೃತ್ತಸಂಪನ್ನ ಪುರೋಹಿತನು ನಾಗಸಾಹ್ವಯಕ್ಕೆ ಹೊರಟನು.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಪುರೋಹಿತಯಾನೇ ಷಷ್ಠೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಪುರೋಹಿತಯಾನ ಎನ್ನುವ ಆರನೆಯ ಅಧ್ಯಾಯವು|