ಉದ್ಯೋಗ ಪರ್ವ: ಪ್ರಜಾಗರ ಪರ್ವ
೪೦
ವಿದುರನು ಧೃತರಾಷ್ಟ್ರನಿಗೆ ತನ್ನ ನೀತಿವಾಕ್ಯಗಳನ್ನು ಮುಂದುವರೆಸಿದುದು (೧-೩೦).
05040001 ವಿದುರ ಉವಾಚ|
05040001a ಯೋಽಭ್ಯರ್ಥಿತಃ ಸದ್ಭಿರಸಜ್ಜಮಾನಃ
ಕರೋತ್ಯರ್ಥಂ ಶಕ್ತಿಮಹಾಪಯಿತ್ವಾ|
05040001c ಕ್ಷಿಪ್ರಂ ಯಶಸ್ತಂ ಸಮುಪೈತಿ ಸಂತಮಲಂ
ಪ್ರಸನ್ನಾ ಹಿ ಸುಖಾಯ ಸಂತಃ||
ವಿದುರನು ಹೇಳಿದನು: “ಒಳ್ಳೆಯವರು ಹೇಳಿದಂತೆ, ಏನೂ ಸಿದ್ಧತೆಗಳಿಲ್ಲದೇ, ಬಹಳ ಶಕ್ತಿಯನ್ನುಪಯೋಗಿಸಿದೇ ಕಾರ್ಯವನ್ನು ಮಾಡುವವರಿಗೆ ಬೇಗನೇ ಯಶಸ್ಸು ದೊರೆಯುತ್ತದೆ. ಪ್ರಸನ್ನವಾಗಿದ್ದಾಗಲೇ ಒಳ್ಳೆಯದು ಸುಖವನ್ನು ತರುತ್ತದೆ.
05040002a ಮಹಾಂತಮಪ್ಯರ್ಥಮಧರ್ಮಯುಕ್ತಂ
ಯಃ ಸಂತ್ಯಜತ್ಯನುಪಾಕ್ರುಷ್ಟ ಏವ|
05040002c ಸುಖಂ ಸ ದುಃಖಾನ್ಯವಮುಚ್ಯ ಶೇತೇ
ಜೀರ್ಣಾಂ ತ್ವಚಂ ಸರ್ಪ ಇವಾವಮುಚ್ಯ||
ಅಧರ್ಮಯುಕ್ತವಾದ ಮಹಾ ಕಾರ್ಯವನ್ನು ಯಾವ ಸಂತನು ಎಚ್ಚರಿಕೆಯನ್ನು ನೀಡದೇ ನಿಲ್ಲಿಸುತ್ತಾನೋ ಅವನು ಸುಖವಾದ ನಿದ್ದೆಯನ್ನು ಪಡೆಯುತ್ತಾನೆ ಮತ್ತು ಸರ್ಪವು ಪೊರೆಬಿಡುವಂತೆ ತನ್ನ ದುಃಖಗಳನ್ನು ಕಳಚಿಕೊಳ್ಳುತ್ತಾನೆ.
05040003a ಅನೃತಂ ಚ ಸಮುತ್ಕರ್ಷೇ ರಾಜಗಾಮಿ ಚ ಪೈಶುನಂ|
05040003c ಗುರೋಶ್ಚಾಲೀಕನಿರ್ಬಂಧಃ ಸಮಾನಿ ಬ್ರಹ್ಮಹತ್ಯಯಾ||
ಒಳ್ಳೆಯದಕ್ಕಾಗಿ ಚರ್ಚೆನಡೆಯುತ್ತಿರುವಾಗ ಸುಳ್ಳನ್ನು ಹೇಳುವುದು, ರಾಜ ದ್ರೋಹ, ಮತ್ತು ಗುರುವಿನ ಎದಿರು ಅಪ್ರಮಾಣೀಕನಾಗಿರುವುದು ಇವು ಬ್ರಹ್ಮಹತ್ಯೆಯ ಸಮ.
05040004a ಅಸೂಯೈಕಪದಂ ಮೃತ್ಯುರತಿವಾದಃ ಶ್ರಿಯೋ ವಧಃ|
05040004c ಅಶುಶ್ರೂಷಾ ತ್ವರಾ ಶ್ಲಾಘಾ ವಿದ್ಯಾಯಾಃ ಶತ್ರವಸ್ತ್ರಯಃ||
ಅಸೂಯೆ, ಮೃತ್ಯು ಮತ್ತು ಅತಿವಾದದ ಒಂದೇ ಒಂದು ಪದವೂ ಶ್ರೀಯನ್ನು ಕೊಲ್ಲುತ್ತದೆ. ಅವಿಧೇಯತೆ, ಅವಸರ ಮತ್ತು ಶ್ಲಾಘನೆಗಳು ವಿದ್ಯೆಯ ಮೂರು ಶತ್ರುಗಳು.
05040005a ಸುಖಾರ್ಥಿನಃ ಕುತೋ ವಿದ್ಯಾ ನಾಸ್ತಿ ವಿದ್ಯಾರ್ಥಿನಃ ಸುಖಂ|
05040005c ಸುಖಾರ್ಥೀ ವಾ ತ್ಯಜೇದ್ವಿದ್ಯಾಂ ವಿದ್ಯಾರ್ಥೀ ವಾ ಸುಖಂ ತ್ಯಜೇತ್||
ಸುಖಾರ್ಥಿಯು ಹೇಗೆ ವಿದ್ಯೆಯನ್ನು ಪಡೆಯುತ್ತಾನೆ? ವಿದ್ಯಾರ್ಥಿಗೆ ಸುಖವಿಲ್ಲ. ಸುಖಾರ್ಥಿಯು ವಿದ್ಯೆಯನ್ನು ತೊರೆಯಬೇಕು ಅಥವಾ ವಿದ್ಯಾರ್ಥಿಯು ಸುಖವನ್ನು ತ್ಯಜಿಸಬೇಕು.
05040006a ನಾಗ್ನಿಸ್ತೃಪ್ಯತಿ ಕಾಷ್ಠಾನಾಂ ನಾಪಗಾನಾಂ ಮಹೋದಧಿಃ|
05040006c ನಾಂತಕಃ ಸರ್ವಭೂತಾನಾಂ ನ ಪುಂಸಾಂ ವಾಮಲೋಚನಾ||
ಅಗ್ನಿಗೆ ಕಟ್ಟಿಗೆಯ ತೃಪ್ತಿಯೆಂಬುದಿಲ್ಲ, ಸಾಗರಕ್ಕೆ ನದಿಗಳ ತೃಪ್ತಿಯಾಯಿತು ಎನ್ನುವುದಿಲ್ಲ, ಯಮನಿಗೆ ಸರ್ವಭೂತಗಳ ಮತ್ತು ಪುರುಷರಿಗೆ ಸುಂದರ ಕಣ್ಣಿನ ಸ್ತ್ರೀಯರ ತೃಪ್ತಿಯೆನ್ನುವುದಿಲ್ಲ.
05040007a ಆಶಾ ಧೃತಿಂ ಹಂತಿ ಸಮೃದ್ಧಿಮಂತಕಃ
ಕ್ರೋಧಃ ಶ್ರಿಯಂ ಹಂತಿ ಯಶಃ ಕದರ್ಯತಾ|
05040007c ಅಪಾಲನಂ ಹಂತಿ ಪಶೂಂಶ್ಚ ರಾಜನ್ನ್
ಏಕಃ ಕ್ರುದ್ಧೋ ಬ್ರಾಹ್ಮಣೋ ಹಂತಿ ರಾಷ್ಟ್ರಂ||
ರಾಜನ್! ಆಸೆಯು ಧೃತಿಯನ್ನು ಕೊಲ್ಲುತ್ತದೆ. ಸಮೃದ್ಧಿಯನ್ನು ಮರಣವು ಕೊಲ್ಲುತ್ತದೆ. ಕ್ರೋಧವು ಶ್ರೀಯನ್ನು ಮತ್ತು ಕದರ್ಯತೆಯು ಯಶಸ್ಸನ್ನು ಕೊಲ್ಲುತ್ತದೆ. ಅಪಾಲನೆಯು ಪಶುಗಳನ್ನು ಕೊಲ್ಲುತ್ತದೆ ಮತ್ತು ಕೃದ್ಧನಾದ ಒಬ್ಬನೇ ಬ್ರಾಹ್ಮಣನು ರಾಷ್ಟ್ರವನ್ನು ಕೊಲ್ಲುತ್ತಾನೆ.
05040008a ಅಜಶ್ಚ ಕಾಂಸ್ಯಂ ಚ ರಥಶ್ಚ ನಿತ್ಯಂ
ಮಧ್ವಾಕರ್ಷಃ ಶಕುನಿಃ ಶ್ರೋತ್ರಿಯಶ್ಚ|
05040008c ವೃದ್ಧೋ ಜ್ಞಾತಿರವಸನ್ನೋ ವಯಸ್ಯ
ಏತಾನಿ ತೇ ಸಂತು ಗೃಹೇ ಸದೈವ||
ಮನೆಯಲ್ಲಿ ಯಾವಾಗಲೂ ಇವುಗಳನ್ನು ಇಟ್ಟುಕೊಂಡಿರಬೇಕು: ಆಡು, ಕಂಚು, ರಥ, ಮಧು, ಔಷಧಿ, ಪಕ್ಷಿ, ಶ್ರೋತ್ರಿ, ಸಂಬಂಧಿಕನಾದ ವೃದ್ಧ, ಮತ್ತು ಕಷ್ಟದ ದಿನಗಳನ್ನು ಎದುರಿಸುತ್ತಿರುವ ಗೆಳೆಯ.
05040009a ಅಜೋಕ್ಷಾ ಚಂದನಂ ವೀಣಾ ಆದರ್ಶೋ ಮಧುಸರ್ಪಿಷೀ|
05040009c ವಿಷಮೌದುಂಬರಂ ಶಂಖಃ ಸ್ವರ್ಣಂ ನಾಭಿಶ್ಚ ರೋಚನಾ||
05040010a ಗೃಹೇ ಸ್ಥಾಪಯಿತವ್ಯಾನಿ ಧನ್ಯಾನಿ ಮನುರಬ್ರವೀತ್|
05040010c ದೇವಬ್ರಾಹ್ಮಣಪೂಜಾರ್ಥಮತಿಥೀನಾಂ ಚ ಭಾರತ||
ಭಾರತ! ಅದೃಷ್ಟಕ್ಕೆ ಮತ್ತು ದೇವ, ಬ್ರಾಹ್ಮಣ ಮತ್ತು ಅತಿಥಿಗಳ ಪೂಜನಕ್ಕಾಗಿ ಮನೆಯಲ್ಲಿ ಇವನ್ನು ಇಟ್ಟುಕೊಳ್ಳಬೇಕೆಂದು ಮನುವು ಹೇಳಿದ್ದಾನೆ: ಆಡು, ಎತ್ತು, ಚಂದನ, ವೀಣೆ, ಕನ್ನಡಿ, ಜೇನುತುಪ್ಪ ಮತ್ತು ಬೆಣ್ಣೆ, ವಿಷ, ಔದುಂಬರ, ಶಂಖ, ಸುವರ್ಣ, ಸುಗಂಧ, ಮತ್ತು ರೋಚನ.
05040011a ಇದಂ ಚ ತ್ವಾಂ ಸರ್ವಪರಂ ಬ್ರವೀಮಿ
ಪುಣ್ಯಂ ಪದಂ ತಾತ ಮಹಾವಿಶಿಷ್ಟಂ|
05040011c ನ ಜಾತು ಕಾಮಾನ್ನ ಭಯಾನ್ನ ಲೋಭಾದ್
ಧರ್ಮಂ ತ್ಯಜೇಜ್ಜೀವಿತಸ್ಯಾಪಿ ಹೇತೋಃ||
ಅಯ್ಯಾ! ಈಗ ನಾನು ಹೇಳುವುದು ಸರ್ವಪರವಾದುದು, ಪುಣ್ಯ ಪದವಾದುದು ಮತ್ತು ಮಹಾವಿಶಿಷ್ಟವಾದುದು. ಕಾಮಕ್ಕಾಗಲೀ, ಭಯಕ್ಕಾಗಲೀ, ಲೋಭಕ್ಕಾಗಲೀ ಮತ್ತು ಜೀವದ ಕಾರಣಕ್ಕಾಗಲೀ ಧರ್ಮವನ್ನು ತ್ಯಜಿಸಬಾರದು.
05040012a ನಿತ್ಯೋ ಧರ್ಮಃ ಸುಖದುಃಖೇ ತ್ವನಿತ್ಯೇ
ನಿತ್ಯೋ ಜೀವೋ ಧಾತುರಸ್ಯ ತ್ವನಿತ್ಯಃ|
05040012c ತ್ಯಕ್ತ್ವಾನಿತ್ಯಂ ಪ್ರತಿತಿಷ್ಠಸ್ವ ನಿತ್ಯೇ
ಸಂತುಷ್ಯ ತ್ವಂ ತೋಷಪರೋ ಹಿ ಲಾಭಃ||
ಧರ್ಮವು ನಿತ್ಯ. ಸುಖ-ದುಃಖಗಳು ಅನಿತ್ಯ. ಜೀವವು ನಿತ್ಯ. ದೇಹವು ಅನಿತ್ಯ. ಅನಿತ್ಯವನ್ನು ತೊರೆದು ನಿತ್ಯದಲ್ಲಿ ನೆಲೆಸು. ಅದರಿಂದ ಸಂತೋಷ, ಅತಿಯಾದ ತೃಪ್ತಿ, ಮತ್ತು ಲಾಭವನ್ನೂ ಪಡೆಯುತ್ತೀಯೆ.
05040013a ಮಹಾಬಲಾನ್ಪಶ್ಯ ಮಹಾನುಭಾವಾನ್
ಪ್ರಶಾಸ್ಯ ಭೂಮಿಂ ಧನಧಾನ್ಯಪೂರ್ಣಾಂ|
05040013c ರಾಜ್ಯಾನಿ ಹಿತ್ವಾ ವಿಪುಲಾಂಶ್ಚ ಭೋಗಾನ್
ಗತಾನ್ನರೇಂದ್ರಾನ್ವಶಮಂತಕಸ್ಯ||
ಮಹಾಸೇನೆಗಳನ್ನು ಮಹಾನುಭಾವರನ್ನು ನೋಡು: ಧನಧಾನ್ಯಗಳಿಂದ ತುಂಬಿದ ಭೂಮಿಯನ್ನು ಆಳಿ, ವಿಪುಲ ಭೋಗಗಳನ್ನೂ, ರಾಜ್ಯಗಳನ್ನೂ ತೊರೆದು ನರೇಂದ್ರರು ಅಂತಕನ ವಶರಾಗಿ ಹೋದರು.
05040014a ಮೃತಂ ಪುತ್ರಂ ದುಃಖಪುಷ್ಟಂ ಮನುಷ್ಯಾ
ಉತ್ಕ್ಷಿಪ್ಯ ರಾಜನ್ಸ್ವಗೃಹಾನ್ನಿರ್ಹರಂತಿ
05040014c ತಂ ಮುಕ್ತಕೇಶಾಃ ಕರುಣಂ ರುದಂತಶ್
ಚಿತಾಮಧ್ಯೇ ಕಾಷ್ಠಮಿವ ಕ್ಷಿಪಂತಿ||
ಮೃತನ ಪುತ್ರನು ದುಃಖದಿಂದ ತುಂಬಿರಲು ಮನುಷ್ಯರು ಅವನನ್ನು ಎತ್ತಿಕೊಂಡು ಸ್ವಗೃಹದ ಹೊರಗೆ ತೆಗೆದುಕೊಂಡು ಹೋಗಿ, ಆ ಕೂದಲು ಕೆದರಿದ, ಕರುಣವಾಗಿ ರೋದಿಸುತ್ತಿರುವವರು ಅವನನ್ನು ಚಿತೆಯ ಮಧ್ಯದಲ್ಲಿ ಕಟ್ಟಿಗೆಯಂತೆ ಎಸೆಯುತ್ತಾರೆ.
05040015a ಅನ್ಯೋ ಧನಂ ಪ್ರೇತಗತಸ್ಯ ಭುಂಕ್ತೇ
ವಯಾಂಸಿ ಚಾಗ್ನಿಶ್ಚ ಶರೀರಧಾತೂನ್|
05040015c ದ್ವಾಭ್ಯಾಮಯಂ ಸಹ ಗಚ್ಚತ್ಯಮುತ್ರ
ಪುಣ್ಯೇನ ಪಾಪೇನ ಚ ವೇಷ್ಟ್ಯಮಾನಃ||
ತೀರಿಕೊಂಡವನ ಶರೀರವನ್ನು ಕಾಗೆ-ಅಗ್ನಿಗಳು ಮುಗಿಸುವಂತೆ ಅವನ ಧನವನ್ನು ಬೇರೆಯವರು ಭೋಗಿಸುತ್ತಾರೆ. ಇಲ್ಲಿಂದ ಅಲ್ಲಿಗೆ ಎರಡೇ ವಿಷಯಗಳನ್ನು ತೆಗೆದುಕೊಂಡು ಹೋಗುತ್ತೇವೆ: ಪುಣ್ಯ ಮತ್ತು ಪಾಪ.
05040016a ಉತ್ಸೃಜ್ಯ ವಿನಿವರ್ತಂತೇ ಜ್ಞಾತಯಃ ಸುಹೃದಃ ಸುತಾಃ|
05040016c ಅಗ್ನೌ ಪ್ರಾಸ್ತಂ ತು ಪುರುಷಂ ಕರ್ಮಾನ್ವೇತಿ ಸ್ವಯಂಕೃತಂ||
ಬಾಂಧವರು, ಸ್ನೇಹಿತರು ಮತ್ತು ಮಕ್ಕಳು ಅಗ್ನಿಗೆ ಹಾಕಿ ಹಿಂದಿರುಗಿ ಹೋಗುತ್ತಾರೆ. ಸ್ವಯಂಕೃತ ಕರ್ಮಗಳೇ ಪುರುಷನನ್ನು ಹಿಂಬಾಲಿಸಿ ಬರುತ್ತವೆ.
05040017a ಅಸ್ಮಾಲ್ಲೋಕಾದೂರ್ಧ್ವಮಮುಷ್ಯ ಚಾಧೋ
ಮಹತ್ತಮಸ್ತಿಷ್ಠತಿ ಹ್ಯಂಧಕಾರಂ|
05040017c ತದ್ವೈ ಮಹಾಮೋಹನಮಿಂದ್ರಿಯಾಣಾಂ
ಬುಧ್ಯಸ್ವ ಮಾ ತ್ವಾಂ ಪ್ರಲಭೇತ ರಾಜನ್||
ಈ ಲೋಕದ ಮೇಲೂ ಮತ್ತು ಕೆಳಗೂ ಮಹಾ ಅಂಧಕಾರದ ಲೋಕಗಳಿವೆ. ರಾಜನ್! ಅಲ್ಲಿಯೇ ಇಂದ್ರಿಯಗಳು ಮಹಾ ಮೋಹಕ್ಕೊಳಗಾಗುತ್ತವೆ ಎಂದು ತಿಳಿದುಕೋ.
05040018a ಇದಂ ವಚಃ ಶಕ್ಷ್ಯಸಿ ಚೇದ್ಯಥಾವನ್
ನಿಶಮ್ಯ ಸರ್ವಂ ಪ್ರತಿಪತ್ತುಮೇವಂ|
05040018c ಯಶಃ ಪರಂ ಪ್ರಾಪ್ಸ್ಯಸಿ ಜೀವಲೋಕೇ
ಭಯಂ ನ ಚಾಮುತ್ರ ನ ಚೇಹ ತೇಽಸ್ತಿ||
ಈ ಮಾತುಗಳನ್ನು ಜಾಗ್ರತೆಯಿಂದ ಕೇಳಿಕೊಂಡು ಅದರಂತೆಯೇ ನಡೆದುಕೊಂಡರೆ ನೀನು ಜೀವ ಲೋಕದಲ್ಲಿ ಪರಮ ಯಶಸ್ಸನ್ನು ಪಡೆಯುತ್ತೀಯೆ. ಇಲ್ಲಿ ಅಥವಾ ಅಲ್ಲಿ ನಿನಗೆ ಭಯವಿರುವುದಿಲ್ಲ.
05040019a ಆತ್ಮಾ ನದೀ ಭಾರತ ಪುಣ್ಯತೀರ್ಥಾ
ಸತ್ಯೋದಕಾ ಧೃತಿಕೂಲಾ ದಮೋರ್ಮಿಃ|
05040019c ತಸ್ಯಾಂ ಸ್ನಾತಃ ಪೂಯತೇ ಪುಣ್ಯಕರ್ಮಾ
ಪುಣ್ಯೋ ಹ್ಯಾತ್ಮಾ ನಿತ್ಯಮಂಭೋಂಽಭ ಏವ||
ಭಾರತ! ಆತ್ಮವನ್ನು ನದಿಯೆಂದೂ, ಮಾಡಿದ ಪುಣ್ಯಗಳು ಅದರ ತೀರ್ಥಗಳೆಂದು, ಸತ್ಯವು ಅದರಲ್ಲಿರುವ ನೀರೆಂದೂ, ಧೃತಿಯು ಅದರ ದಡವೆಂದೂ, ಕರುಣೆಯು ಅದರ ಅಲೆಗಳೆಂದೂ ಹೇಳುತ್ತಾರೆ. ಪುಣ್ಯಕರ್ಮಿಯು ಅದರಲ್ಲಿ ಸ್ನಾನಮಾಡಿ ಶುದ್ಧನಾಗುತ್ತಾನೆ. ಆತ್ಮವು ಪುಣ್ಯಕರವು.
05040020a ಕಾಮಕ್ರೋಧಗ್ರಾಹವತೀಂ ಪಂಚೇಂದ್ರಿಯಜಲಾಂ ನದೀಂ|
05040020c ಕೃತ್ವಾ ಧೃತಿಮಯೀಂ ನಾವಂ ಜನ್ಮದುರ್ಗಾಣಿ ಸಂತರ|
ಕಾಮಕ್ರೋಧಗಳು ಈ ನದಿಯ ಮೊಸಳೆಗಳು, ಪಂಚೇಂದ್ರಿಯಗಳು ನೀರು. ಧೃತಿಯನ್ನು ನಾವೆಯನ್ನಾಗಿ ಮಾಡಿಕೊಂಡು ಜನ್ಮವೆನ್ನುವ ಕಂದರವನ್ನು ದಾಟು.
05040021a ಪ್ರಜ್ಞಾವೃದ್ಧಂ ಧರ್ಮವೃದ್ಧಂ ಸ್ವಬಂಧುಂ
ವಿದ್ಯಾವೃದ್ಧಂ ವಯಸಾ ಚಾಪಿ ವೃದ್ಧಂ|
05040021c ಕಾರ್ಯಾಕಾರ್ಯೇ ಪೂಜಯಿತ್ವಾ ಪ್ರಸಾದ್ಯ
ಯಃ ಸಂಪೃಚ್ಚೇನ್ನ ಸ ಮುಹ್ಯೇತ್ಕದಾ ಚಿತ್|
ಯಾರು ಪ್ರಜ್ಞಾವೃದ್ಧ, ಧರ್ಮವೃದ್ಧ, ವಿದ್ಯಾವೃದ್ಧ ಮತ್ತು ವಯಸ್ಸಿನಲ್ಲಿಯೂ ವೃದ್ಧನಾದ ಸ್ವಬಂಧುವನ್ನು ಕಾರ್ಯಾಕಾರ್ಯಗಳಲ್ಲಿ ಪೂಜಿಸಿ, ಸಂತೋಷಗೊಳಿಸಿ, ಕೇಳಿ ತಿಳಿದುಕೊಳ್ಳುತ್ತಾನೋ ಅವನು ಎಂದೂ ದಾರಿ ತಪ್ಪುವುದಿಲ್ಲ.
05040022a ಧೃತ್ಯಾ ಶಿಶ್ನೋದರಂ ರಕ್ಷೇತ್ಪಾಣಿಪಾದಂ ಚ ಚಕ್ಷುಷಾ|
05040022c ಚಕ್ಷುಃಶ್ರೋತ್ರೇ ಚ ಮನಸಾ ಮನೋ ವಾಚಂ ಚ ಕರ್ಮಣಾ||
ಧೃತಿಯಿಂದ ಶಿಶ್ನ-ಹೊಟ್ಟೆಗಳನ್ನು, ಕಣ್ಣಿನಿಂದ ಕೈಕಾಲುಗಳನ್ನು, ಮನಸ್ಸಿನಿಂದ ಕಣ್ಣು-ಕಿವಿಗಳನ್ನು ಮತ್ತು ಕರ್ಮಗಳಿಂದ ಮನಸ್ಸು-ಮಾತುಗಳನ್ನು ರಕ್ಷಿಸಿಕೊಳ್ಳಬೇಕು.
05040023a ನಿತ್ಯೋದಕೀ ನಿತ್ಯಯಜ್ಞೋಪವೀತೀ
ನಿತ್ಯಸ್ವಾಧ್ಯಾಯೀ ಪತಿತಾನ್ನವರ್ಜೀ|
05040023c ಋತಂ ಬ್ರುವನ್ಗುರವೇ ಕರ್ಮ ಕುರ್ವನ್
ನ ಬ್ರಾಹ್ಮಣಶ್ಚ್ಯವತೇ ಬ್ರಹ್ಮಲೋಕಾತ್||
ನಿತ್ಯವೂ ಸ್ನಾನಮಾಡುವ, ನಿತ್ಯವೂ ಯಜ್ಞೋಪವೀತವನ್ನು ಧರಿಸುವ, ನಿತ್ಯವೂ ಸ್ವಾಧ್ಯಾಯದಲ್ಲಿ ತೊಡಗಿರುವ, ಅಶುದ್ಧ ಆಹಾರವನ್ನು ವರ್ಜಿಸುವ, ಸತ್ಯವನ್ನು ಹೇಳುವ, ಗುರುವಿನ ಕೆಲಸವನ್ನು ಮಾಡಿಕೊಡುವ ಬ್ರಾಹ್ಮಣನು ಬ್ರಹ್ಮಲೋಕದಿಂದ ಬೀಳುವುದಿಲ್ಲ.
05040024a ಅಧೀತ್ಯ ವೇದಾನ್ಪರಿಸಂಸ್ತೀರ್ಯ ಚಾಗ್ನೀನ್
ಇಷ್ಟ್ವಾ ಯಜ್ಞೈಃ ಪಾಲಯಿತ್ವಾ ಪ್ರಜಾಶ್ಚ|
05040024c ಗೋಬ್ರಾಹ್ಮಣಾರ್ಥೇ ಶಸ್ತ್ರಪೂತಾಂತರಾತ್ಮಾ
ಹತಃ ಸಂಗ್ರಾಮೇ ಕ್ಷತ್ರಿಯಃ ಸ್ವರ್ಗಮೇತಿ||
ವೇದಾಧ್ಯಯನ ಮಾಡಿ, ಅಗ್ನಿಯನ್ನು ಇಷ್ಟಿ-ಯಜ್ಞಗಳಿಂದ ಪರಿಪಾಲಿಸಿಕೊಂಡು ಪ್ರಜೆಗಳನ್ನು ಪಾಲಿಸುವ, ಗೋ-ಬ್ರಾಹ್ಮಣರ ಸಲುವಾಗಿ ಶಸ್ತ್ರಗಳನ್ನುಪಯೋಗಿಸಿ ಅಂತರಾತ್ಮನನ್ನು ಶುದ್ಧೀಕರಿಸಿಕೊಂಡ, ಮತ್ತು ಸಂಗ್ರಾಮದಲ್ಲಿ ಹತನಾದ ಕ್ಷತ್ರಿಯನು ಸ್ವರ್ಗವನ್ನೇರುತ್ತಾನೆ.
05040025a ವೈಶ್ಯೋಽಧೀತ್ಯ ಬ್ರಾಹ್ಮಣಾನ್ ಕ್ಷತ್ರಿಯಾಂಶ್ಚ
ಧನೈಃ ಕಾಲೇ ಸಂವಿಭಜ್ಯಾಶ್ರಿತಾಂಶ್ಚ|
05040025c ತ್ರೇತಾಪೂತಂ ಧೂಮಮಾಘ್ರಾಯ ಪುಣ್ಯಂ
ಪ್ರೇತ್ಯ ಸ್ವರ್ಗೇ ದೇವಸುಖಾನಿ ಭುಂಕ್ತೇ||
ಅಧ್ಯಯನ ಮಾಡಿದ, ಕಾಲಕ್ಕೆ ತಕ್ಕಂತೆ ಧನವನ್ನು ಬ್ರಾಹ್ಮಣರಲ್ಲಿ, ಕ್ಷತ್ರಿಯರಲ್ಲಿ ಮತ್ತು ಆಶ್ರಿತರಲ್ಲಿ ಹಂಚಿಕೊಂಡ, ಮೂರು ಅಗ್ನಿಗಳಿಂದ ಶುದ್ಧೀಕರಿಸಲ್ಪಟ್ಟ ಪುಣ್ಯ ಧೂಮವನ್ನು ಆಘ್ರಾಣಿಸಿದ ವೈಶ್ಯನು ಮರಣದ ನಂತರ ಸ್ವರ್ಗದಲ್ಲಿ ದೇವಸುಖವನ್ನು ಭೋಗಿಸುತ್ತಾನೆ.
05040026a ಬ್ರಹ್ಮಕ್ಷತ್ರಂ ವೈಶ್ಯವರ್ಣಂ ಚ ಶೂದ್ರಃ
ಕ್ರಮೇಣೈತಾನ್ನ್ಯಾಯತಃ ಪೂಜಯಾನಃ|
05040026c ತುಷ್ಟೇಷ್ವೇತೇಷ್ವವ್ಯಥೋ ದಗ್ಧಪಾಪಸ್
ತ್ಯಕ್ತ್ವಾ ದೇಹಂ ಸ್ವರ್ಗಸುಖಾನಿ ಭುಂಕ್ತೇ||
ಕ್ರಮೇಣವಾಗಿ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯವರ್ಣದವರನ್ನು ಸರಿಯಾಗಿ ಪೂಜಿಸಿದ ಶೂದ್ರನು, ತನ್ನ ಪಾಪಗಳನ್ನು ದಹಿಸಿಕೊಂಡು, ದೇಹವನ್ನು ತೊರೆದ ನಂತರ, ವ್ಯಥೆಗಳಿಲ್ಲದ ಸ್ವರ್ಗಸುಖಗಳನ್ನು ಭೋಗಿಸುತ್ತಾನೆ.
05040027a ಚಾತುರ್ವರ್ಣ್ಯಸ್ಯೈಷ ಧರ್ಮಸ್ತವೋಕ್ತೋ
ಹೇತುಂ ಚಾತ್ರ ಬ್ರುವತೋ ಮೇ ನಿಬೋಧ|
05040027c ಕ್ಷಾತ್ರಾದ್ಧರ್ಮಾದ್ಧೀಯತೇ ಪಾಂಡುಪುತ್ರಸ್
ತಂ ತ್ವಂ ರಾಜನ್ರಾಜಧರ್ಮೇ ನಿಯುಂಕ್ಷ್ವ||
ನಾನು ಏಕೆ ನಿನಗೆ ಚಾತ್ರುರ್ವಣ್ಯಗಳ ಧರ್ಮದ ಕುರಿತು ಹೇಳಿದೆನೆನ್ನುವುದನ್ನು ಕೇಳು. ಪಾಂಡುಪುತ್ರನು ಕ್ಷಾತ್ರಧರ್ಮದ ಕೊರತೆಯಲ್ಲಿದ್ದಾನೆ. ರಾಜನ್! ನೀನು ಅವನಿಗೆ ರಾಜಧರ್ಮದೊಂದಿಗೆ ಜೋಡಿಸು.”
05040028 ಧೃತರಾಷ್ಟ್ರ ಉವಾಚ|
05040028a ಏವಮೇತದ್ಯಥಾ ಮಾಂ ತ್ವಮನುಶಾಸಸಿ ನಿತ್ಯದಾ|
05040028c ಮಮಾಪಿ ಚ ಮತಿಃ ಸೌಮ್ಯ ಭವತ್ಯೇವಂ ಯಥಾತ್ಥ ಮಾಂ||
ಧೃತರಾಷ್ಟ್ರನು ಹೇಳಿದನು: “ಸೌಮ್ಯ! ಇದನ್ನೇ ನೀನು ನಿತ್ಯವೂ ನನಗೆ ಹೇಳಿಕೊಂಡು ಬಂದಿದ್ದೀಯೆ. ನನ್ನ ಬುದ್ಧಿಯೂ ಕೂಡ ನೀನು ಹೇಳುವುದಕ್ಕೆ ಸ್ಪಂದಿಸುತ್ತದೆ.
05040029a ಸಾ ತು ಬುದ್ಧಿಃ ಕೃತಾಪ್ಯೇವಂ ಪಾಂಡವಾನ್ಪ್ರತಿ ಮೇ ಸದಾ|
05040029c ದುರ್ಯೋಧನಂ ಸಮಾಸಾದ್ಯ ಪುನರ್ವಿಪರಿವರ್ತತೇ||
ಸದಾ ನನ್ನ ಬುದ್ಧಿಯು ಪಾಂಡವರ ಕಡೆಯೇ ಇರುತ್ತದೆ. ಆದರೆ ದುರ್ಯೋಧನನೊಡನೆ ಇರುವಾಗ ಪುನಃ ಅದು ಹಿಂದಿರುಗುತ್ತದೆ.
05040030a ನ ದಿಷ್ಟಮಭ್ಯತಿಕ್ರಾಂತುಂ ಶಕ್ಯಂ ಮರ್ತ್ಯೇನ ಕೇನ ಚಿತ್|
05040030c ದಿಷ್ಟಮೇವ ಕೃತಂ ಮನ್ಯೇ ಪೌರುಷಂ ತು ನಿರರ್ಥಕಂ||
ಯಾವ ಮನುಷ್ಯನೂ ತನ್ನ ವಿಧಿಯನ್ನು ಅತಿಕ್ರಮಿಸಲು ಶಕ್ಯನಿಲ್ಲ. ವಿಧಿಯೇ ಎಲ್ಲವನ್ನೂ ಮಾಡುತ್ತದೆ. ಪುರುಷ ಪ್ರಯತ್ನವು ನಿರರ್ಥಕ ಎಂದು ನನಗನ್ನಿಸುತ್ತದೆ.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಣಿ ವಿದುರನೀತಿವಾಕ್ಯೇ ಚತ್ವಾರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವದಲ್ಲಿ ವಿದುರನೀತಿವಾಕ್ಯದಲ್ಲಿ ನಲ್ವತ್ತನೆಯ ಅಧ್ಯಾಯವು.