ಉದ್ಯೋಗ ಪರ್ವ: ಸಂಜಯಯಾನ ಪರ್ವ
೨೪
ಸಂಜಯನು ಧೃತರಾಷ್ಟ್ರನ ಸಂದೇಶವನ್ನು ಹೇಳಿದುದು
ಕೌರವರೆಲ್ಲರೂ ಕುಶಲದಿಂದಿದ್ದಾರೆಂದೂ, ಅವರು ಪಾಂಡವರ ಪರಾಕ್ರಮಗಳನ್ನು ಸ್ಮರಿಸಿಕೊಳ್ಳುತ್ತಿದ್ದಾರೆಂದೂ, ಆದರೆ ಪಾಂಡವರು ಕಾಮಕ್ಕಾಗಿ ಧರ್ಮವನ್ನು ಎಂದೂ ತ್ಯಜಿಸುವುದಿಲ್ಲವೆಂದೂ, ಯುಧಿಷ್ಠಿರನು ಶಾಂತಿಯನ್ನುಂಟುಮಾಡುತ್ತಾನೆಂದು ಧೃತರಾಷ್ಟ್ರನು ನಂಬಿದ್ದಾನೆಂದೂ ಸಂಜಯನು ಪಾಂಡವರಿಗೆ ತಿಳಿಸುವುದು (೧-೧೦).
05024001 ಸಂಜಯ ಉವಾಚ|
05024001a ಯಥಾರ್ಹಸೇ ಪಾಂಡವ ತತ್ತಥೈವ
ಕುರೂನ್ ಕುರುಶ್ರೇಷ್ಠ ಜನಂ ಚ ಪೃಚ್ಚಸಿ|
05024001c ಅನಾಮಯಾಸ್ತಾತ ಮನಸ್ವಿನಸ್ತೇ
ಕುರುಶ್ರೇಷ್ಠಾನ್ಪೃಚ್ಚಸಿ ಪಾರ್ಥ ಯಾಂಸ್ತ್ವಂ||
ಸಂಜಯನು ಹೇಳಿದನು: “ಪಾಂಡವ! ನೀನು ಹೇಳಿದಂತೆಯೇ ಇದೆ. ತಾತ! ಮನಸ್ವೀ! ಕುರುಗಳ ಮತ್ತು ಕುರುಶ್ರೇಷ್ಠ ಜನರ ಕುಶಲವನ್ನು ಕೇಳುತ್ತಿದ್ದೀಯಲ್ಲ. ಪಾರ್ಥ! ಯಾವ ಕುರುಶ್ರೇಷ್ಠರ ಕುರಿತು ನೀನು ಕೇಳುತ್ತಿದ್ದೀಯೋ ಅವರು ಅನಾಮಯರಾಗಿದ್ದಾರೆ.
05024002a ಸಂತ್ಯೇವ ವೃದ್ಧಾಃ ಸಾಧವೋ ಧಾರ್ತರಾಷ್ಟ್ರೇ
ಸಂತ್ಯೇವ ಪಾಪಾಃ ಪಾಂಡವ ತಸ್ಯ ವಿದ್ಧಿ|
05024002c ದದ್ಯಾದ್ರಿಪೋಶ್ಚಾಪಿ ಹಿ ಧಾರ್ತರಾಷ್ಟ್ರಃ
ಕುತೋ ದಾಯಾಽಲ್ಲೋಪಯೇದ್ಬ್ರಾಹ್ಮಣಾನಾಂ||
ಪಾಂಡವ! ಧಾರ್ತರಾಷ್ಟ್ರನ ಬಳಿ ಸಂತರೂ, ವೃದ್ಧರೂ ಮತ್ತು ಪಾಪಿಗಳೂ ಇದ್ದಾರೆಂದು ತಿಳಿ. ಧಾರ್ತರಾಷ್ಟ್ರನು ರಿಪುಗಳಿಗೂ ಕೊಡುತ್ತಾನೆ. ಹಾಗಿರುವಾಗ ಬ್ರಾಹ್ಮಣರಿಗೆ ಕೊಟ್ಟಿದ್ದುದನ್ನು ಹೇಗೆ ತಾನೇ ಕಸಿದುಕೊಳ್ಳುತ್ತಾನೆ?
05024003a ಯದ್ಯುಷ್ಮಾಕಂ ವರ್ತತೇಽಸೌ ನ ಧರ್ಮ್ಯಂ
ಅದ್ರುಗ್ಧೇಷು ದ್ರುಗ್ಧವತ್ತನ್ನ ಸಾಧು|
05024003c ಮಿತ್ರಧ್ರುಕ್ಸ್ಯಾದ್ಧೃತರಾಷ್ಟ್ರಃ ಸಪುತ್ರೋ
ಯುಷ್ಮಾನ್ದ್ವಿಷನ್ಸಾಧುವೃತ್ತಾನಸಾಧುಃ||
ನಿಮ್ಮ ಈ ನಡವಳಿಕೆಯು ಧರ್ಮಯುತವಾದುದಲ್ಲ. ನಿಮಗೆ ಕೆಟ್ಟದ್ದನ್ನು ಬಯಸದೇ ಇರುವವರ ಮೇಲೂ ಹಗೆತನವನ್ನು ಸಾಧಿಸುವುದು ಒಳ್ಳೆಯದಲ್ಲ. ಪುತ್ರರೊಂದಿಗೆ ಧೃತರಾಷ್ಟ್ರನು ಸಾಧುನಡತೆಯುಳ್ಳ ನಿಮ್ಮೊಂದಿಗೆ ದ್ವೇಷಿಗಳಂತೆ ನಡೆದುಕೊಳ್ಳುವುದು ಸಾಧುವಲ್ಲ. ಇದು ಮಿತ್ರರೊಡನೆ ಹಗೆಸಾಧಿಸಿದಂತೆ.
05024004a ನ ಚಾನುಜಾನಾತಿ ಭೃಶಂ ಚ ತಪ್ಯತೇ
ಶೋಚತ್ಯಂತಃ ಸ್ಥವಿರೋಽಜಾತಶತ್ರೋ|
05024004c ಶೃಣೋತಿ ಹಿ ಬ್ರಾಹ್ಮಣಾನಾಂ ಸಮೇತ್ಯ
ಮಿತ್ರದ್ರೋಹಃ ಪಾತಕೇಭ್ಯೋ ಗರೀಯಾನ್||
ಅಜಾತಶತ್ರೋ! ಅವನು ಈ ರೀತಿ ಕಾಡಿಸುವುದನ್ನು ಒಪ್ಪಿಕೊಳ್ಳುವುದಿಲ್ಲ. ಆಗಿದ್ದುದಕ್ಕೆ ಅತ್ಯಂತ ದುಃಖಿತನಾಗಿದ್ದಾನೆ. ಮಿತ್ರದ್ರೋಹವು ಎಲ್ಲ ಪಾಪಗಳಿಗಿಂತಲೂ ಹೆಚ್ಚಿನದು ಎಂದು ಬ್ರಾಹ್ಮಣರು ಸೇರಿ ಅವನಿಗೆ ಹೇಳಿದ್ದಾರೆ.
05024005a ಸ್ಮರಂತಿ ತುಭ್ಯಂ ನರದೇವ ಸಂಗಮೇ
ಯುದ್ಧೇ ಚ ಜಿಷ್ಣೋಶ್ಚ ಯುಧಾಂ ಪ್ರಣೇತುಃ|
05024005c ಸಮುತ್ಕೃಷ್ಟೇ ದುಂದುಭಿಶಂಖಶಬ್ದೇ
ಗದಾಪಾಣಿಂ ಭೀಮಸೇನಂ ಸ್ಮರಂತಿ||
ನರದೇವ! ಯುದ್ಧಕ್ಕೆ ಸೇರಿದಾಗ ನಿನ್ನನ್ನು ಮತ್ತು ಯೋಧರ ನಾಯಕನಾದ ಜಿಷ್ಣುವನ್ನು ನೆನಪಿಸಿಕೊಳ್ಳುತ್ತಾರೆ. ಶಂಖ ಮತ್ತು ದುಂಧುಭಿಗಳ ಶಬ್ದವು ಕೇಳಿದಾಗಲೆಲ್ಲ ಗದಾಪಾಣಿ ಭೀಮಸೇನನನ್ನು ಸ್ಮರಿಸಿಕೊಳ್ಳುತ್ತಾರೆ.
05024006a ಮಾದ್ರೀಸುತೌ ಚಾಪಿ ರಣಾಜಿಮಧ್ಯೇ
ಸರ್ವಾ ದಿಶಃ ಸಂಪತಂತೌ ಸ್ಮರಂತಿ|
05024006c ಸೇನಾಂ ವರ್ಷಂತೌ ಶರವರ್ಷೈರಜಸ್ರಂ
ಮಹಾರಥೌ ಸಮರೇ ದುಷ್ಪ್ರಕಂಪ್ಯೌ||
ರಣದ ಮಧ್ಯದಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ಹೋಗಬಲ್ಲ, ಶತ್ರುಸೇನೆಯ ಮೇಲೆ ಒಂದೇಸಮನೆ ಶರಗಳ ಮಳೆಯನ್ನು ಸುರಿಸುವ, ಸಮರದಲ್ಲಿ ಇತರರನ್ನು ನಡುಗಿಸಬಲ್ಲ, ಮಹಾರಥಿ ಮಾದ್ರೀ ಸುತರಿಬ್ಬರನ್ನೂ ಎಲ್ಲರೂ ಸ್ಮರಿಸಿಕೊಳ್ಳುತ್ತಾರೆ.
05024007a ನ ತ್ವೇವ ಮನ್ಯೇ ಪುರುಷಸ್ಯ ರಾಜನ್ನ್
ಅನಾಗತಂ ಜ್ಞಾಯತೇ ಯದ್ಭವಿಷ್ಯಂ|
05024007c ತ್ವಂ ಚೇದಿಮಂ ಸರ್ವಧರ್ಮೋಪಪನ್ನಃ
ಪ್ರಾಪ್ತಃ ಕ್ಲೇಶಂ ಪಾಂಡವ ಕೃಚ್ಚ್ರರೂಪಂ||
ರಾಜನ್! ಪುರುಷನಿಗೆ ಭವಿಷ್ಯದಲ್ಲಿ ಏನು ಬರುತ್ತದೆಯೋ ಎಂದು ತಿಳಿಯವುದು ಕಷ್ಟ. ಪಾಂಡವ! ಸರ್ವಧರ್ಮೋಪನ್ನನಾದ ನೀನೂ ಕೂಡ ಸಹಿಸಲಾಧ್ಯವಾದ ಕಷ್ಟಗಳನ್ನು ಪಡೆದೆ.
05024008a ತ್ವಮೇವೈತತ್ಸರ್ವಮತಶ್ಚ ಭೂಯಃ
ಸಮೀಕುರ್ಯಾಃ ಪ್ರಜ್ಞಾಯಾಜಾತಶತ್ರೋ|
05024008c ನ ಕಾಮಾರ್ಥಂ ಸಂತ್ಯಜೇಯುರ್ಹಿ ಧರ್ಮಂ
ಪಾಂಡೋಃ ಸುತಾಃ ಸರ್ವ ಏವೇಂದ್ರಕಲ್ಪಾಃ||
ಅಜಾತಶತ್ರೋ! ಪ್ರಜ್ಞೆಯಿಂದ ನೀನೇ ಆದ ಇವೆಲ್ಲವನ್ನೂ ಸರಿಪಡೆಸಿಕೊಳುತ್ತೀಯೆ ಎನ್ನುವುದು ಖಂಡಿತ. ಇಂದ್ರಸಮರಾದ ಪಾಂಡುವಿನ ಮಕ್ಕಳು ಕಾಮಕ್ಕಾಗಿ ಧರ್ಮವನ್ನು ಎಂದೂ ತ್ಯಜಿಸುವುದಿಲ್ಲ.
05024009a ತ್ವಮೇವೈತತ್ಪ್ರಜ್ಞಾಯಾಜಾತಶತ್ರೋ
ಶಮಂ ಕುರ್ಯಾ ಯೇನ ಶರ್ಮಾಪ್ನುಯುಸ್ತೇ|
05024009c ಧಾರ್ತರಾಷ್ಟ್ರಾಃ ಪಾಂಡವಾಃ ಸೃಂಜಯಾಶ್ಚ
ಯೇ ಚಾಪ್ಯನ್ಯೇ ಪಾರ್ಥಿವಾಃ ಸಮ್ನಿವಿಷ್ಟಾಃ||
ಅಜಾತಶತ್ರೋ! ಪ್ರಜ್ಞೆಯಿಂದಲೇ ನೀನು ಧಾರ್ತರಾಷ್ಟ್ರರು, ಪಾಂಡವರು, ಸೃಂಜಯರು ಮತ್ತು ಇಲ್ಲಿ ಸೇರಿರುವ ಇತರ ರಾಜರೂ ಕೂಡ ಶಾಂತಿಯನ್ನು ಹೊಂದುವಂತೆ ಮಾಡುತ್ತೀಯೆ.
05024010a ಯನ್ಮಾಬ್ರವೀದ್ಧೃತರಾಷ್ಟ್ರೋ ನಿಶಾಯಾಂ
ಅಜಾತಶತ್ರೋ ವಚನಂ ಪಿತಾ ತೇ|
05024010c ಸಹಾಮಾತ್ಯಃ ಸಹಪುತ್ರಶ್ಚ ರಾಜನ್
ಸಮೇತ್ಯ ತಾಂ ವಾಚಮಿಮಾಂ ನಿಬೋಧ||
ಅಜಾತಶತ್ರೋ! ರಾಜನ್! ನಿನ್ನ ತಂದೆ ಧೃತರಾಷ್ಟ್ರನ ಮಾತನ್ನು ನಾನು ಹೇಳಿದ್ದೇನೆ. ಅವನು ಅಮಾತ್ಯರೊಡನೆ ಮತ್ತು ಮಕ್ಕಳೊಂದಿಗೆ ವಿಚಾರಿಸಿ ನನಗೆ ಈ ಮಾತುಗಳನ್ನು ತಿಳಿಸಿದ್ದಾನೆ.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಸಂಜಯವಾಕ್ಯೇ ಚತುರ್ವಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಇಪ್ಪತ್ನಾಲ್ಕನೆಯ ಅಧ್ಯಾಯವು.