ಉದ್ಯೋಗ ಪರ್ವ: ಸಂಜಯಯಾನ ಪರ್ವ
೨೩
ಉಪಪ್ಲವ್ಯಕ್ಕೆ ಸಂಜಯನ ಆಗಮನ
ಸಂಜಯನು ಉಪಪ್ಲವ್ಯಕ್ಕೆ ಬಂದು ಧೃತರಾಷ್ಟ್ರನು ಪಾಂಡವರ ಕುಶಲವನ್ನು ಕೇಳಿದ್ದಾನೆಂದು ಹೇಳಲು (೧-೫), ಯುಧಿಷ್ಠಿರನು ಕೌರವರ ಕುಶಲವನ್ನೂ (೬-೧೪), ಅವರು ಭೀಮಾರ್ಜುನರ ಪರಾಕ್ರಮವನ್ನು ನೆನಪಿಸಿಕೊಳ್ಳುತ್ತಿದ್ದಾರೆಯೇ ಎಂದು ಕೇಳುವುದು (೧೫-೨೭).
05023001 ವೈಶಂಪಾಯನ ಉವಾಚ|
05023001a ರಾಜ್ಞಾಸ್ತು ವಚನಂ ಶ್ರುತ್ವಾ ಧೃತರಾಷ್ಟ್ರಸ್ಯ ಸಂಜಯಃ|
05023001c ಉಪಪ್ಲವ್ಯಂ ಯಯೌ ದ್ರಷ್ಟುಂ ಪಾಂಡವಾನಮಿತೌಜಸಃ||
ವೈಶಂಪಾಯನನು ಹೇಳಿದನು: “ರಾಜಾ ಧೃತರಾಷ್ಟ್ರನ ಮಾತನ್ನು ಕೇಳಿ ಸಂಜಯನು ಅಮಿತೌಜಸ ಪಾಂಡವರನ್ನು ಕಾಣಲು ಉಪಪ್ಲವ್ಯಕ್ಕೆ ಬಂದನು.
05023002a ಸ ತು ರಾಜಾನಮಾಸಾದ್ಯ ಧರ್ಮಾತ್ಮಾನಂ ಯುಧಿಷ್ಠಿರಂ|
05023002c ಪ್ರಣಿಪತ್ಯ ತತಃ ಪೂರ್ವಂ ಸೂತಪುತ್ರೋಽಭ್ಯಭಾಷತ||
ರಾಜಾ ಧರ್ಮಾತ್ಮ ಯುಧಿಷ್ಠಿರನ ಬಳಿಬಂದು ಮೊದಲಿಗೆ ನಮಸ್ಕರಿಸಿ ಸೂತಪುತ್ರನು ಮಾತನಾಡಿದನು.
05023003a ಗಾವಲ್ಗಣಿಃ ಸಂಜಯಃ ಸೂತಸೂನುರ್|
ಅಜಾತಶತ್ರುಮವದತ್ಪ್ರತೀತಃ|
05023003c ದಿಷ್ಟ್ಯಾ ರಾಜಂಸ್ತ್ವಾಮರೋಗಂ ಪ್ರಪಶ್ಯೇ|
ಸಹಾಯವಂತಂ ಚ ಮಹೇಂದ್ರಕಲ್ಪಂ||
ಗಾವಲ್ಗಣಿ ಸೂತಸೂನು ಸಂಜಯನು ಅಜಾತಶತ್ರುವಿಗೆ ಸಂತೋಷದಿಂದ ಹೇಳಿದನು: “ರಾಜನ್! ಒಳ್ಳೆಯದಾಯಿತು ಮಹೇಂದ್ರ ಸಮನಾದವರ ಸಹಾಯವನ್ನು ಪಡೆದಿರುವ, ಆರೋಗ್ಯದಿಂದಿರುವ ನಿನ್ನನ್ನು ನೋಡುತ್ತಿದ್ದೇನೆ.
05023004a ಅನಾಮಯಂ ಪೃಚ್ಚತಿ ತ್ವಾಂಬಿಕೇಯೋ|
ವೃದ್ಧೋ ರಾಜಾ ಧೃತರಾಷ್ಟ್ರೋ ಮನೀಷೀ|
05023004c ಕಚ್ಚಿದ್ಭೀಮಃ ಕುಶಲೀ ಪಾಂಡವಾಗ್ರ್ಯೋ|
ಧನಂಜಯಸ್ತೌ ಚ ಮಾದ್ರೀತನೂಜೌ||
ಅಂಬಿಕೇಯ, ವೃದ್ಧ ರಾಜಾ ಮನೀಷೀ ಧೃತರಾಷ್ಟ್ರನು ಪಾಂಡವಾಗ್ರಜನ, ಭೀಮನ, ಧನಂಜಯನ ಮತ್ತು ಮಾದ್ರೀಸುತರ ಕುಶಲವನ್ನು ಕೇಳುತ್ತಾನೆ.
05023005a ಕಚ್ಚಿತ್ಕೃಷ್ಣಾ ದ್ರೌಪದೀ ರಾಜಪುತ್ರೀ
ಸತ್ಯವ್ರತಾ ವೀರಪತ್ನೀ ಸಪುತ್ರಾ|
05023005c ಮನಸ್ವಿನೀ ಯತ್ರ ಚ ವಾಂಚಸಿ ತ್ವಂ
ಇಷ್ಟಾನ್ಕಾಮಾನ್ಭಾರತ ಸ್ವಸ್ತಿಕಾಮಃ||
ಯಾರ ಕಾಮ-ಇಷ್ಟಗಳನ್ನು ನೀನು ಪೂರೈಸುತ್ತೀಯೋ ಆ ಕೃಷ್ಣೆ, ದ್ರೌಪದೀ, ಮನಸ್ವಿನೀ, ಸತ್ಯವ್ರತೆ, ವೀರಪತ್ನಿಯು ಕೂಡ ಪುತ್ರರೊಂದಿಗೆ ಚೆನ್ನಾಗಿದ್ದಾಳೆ ತಾನೇ?”
05023006 ಯುಧಿಷ್ಠಿರ ಉವಾಚ|
05023006a ಗಾವಲ್ಗಣೇ ಸಂಜಯ ಸ್ವಾಗತಂ ತೇ
ಪ್ರೀತಾತ್ಮಾಹಂ ತ್ವಾಭಿವದಾಮಿ ಸೂತ|
05023006c ಅನಾಮಯಂ ಪ್ರತಿಜಾನೇ ತವಾಹಂ
ಸಹಾನುಜೈಃ ಕುಶಲೀ ಚಾಸ್ಮಿ ವಿದ್ವನ್||
ಯುಧಿಷ್ಠಿರನು ಹೇಳಿದನು: “ಗಾವಲ್ಗಣಿ! ಸಂಜಯ! ನಿನಗೆ ಸ್ವಾಗತ! ನಿನ್ನನ್ನು ನೋಡಿ ನಾವು ಸಂತೋಷಗೊಂಡಿದ್ದೇವೆ. ಸೂತ! ಹಿಂದಿರುಗಿ ನಿನ್ನ ಕುಶಲವನ್ನು ಕೇಳುತ್ತೇನೆ. ವಿದ್ವನ್! ನಾನು ಅನುಜರೊಂದಿಗೆ ಕುಶಲನಾಗಿದ್ದೇನೆ ಎಂದು ತಿಳಿ.
05023007a ಚಿರಾದಿದಂ ಕುಶಲಂ ಭಾರತಸ್ಯ
ಶ್ರುತ್ವಾ ರಾಜ್ಞಾಃ ಕುರುವೃದ್ಧಸ್ಯ ಸೂತ|
05023007c ಮನ್ಯೇ ಸಾಕ್ಷಾದ್ದೃಷ್ಟಮಹಂ ನರೇಂದ್ರಂ
ದೃಷ್ಟ್ವೈವ ತ್ವಾಂ ಸಂಜಯ ಪ್ರೀತಿಯೋಗಾತ್||
ಸೂತ! ಬಹಳ ಸಮಯದ ನಂತರ ಈಗ ಆ ಭಾರತ ಕುರುವೃದ್ಧ ರಾಜನ ಕುಶಲತೆಯ ಕುರಿತು ಕೇಳುತ್ತಿದ್ದೇನೆ. ಸಂಜಯ! ನಿನ್ನನ್ನು ನೋಡಿ ಆ ನರೇಂದ್ರನನ್ನೇ ನೋಡಿದ್ದೇನೋ ಎನ್ನುವಷ್ಟು ಸಂತೋಷವಾಗುತ್ತಿದೆ.
05023008a ಪಿತಾಮಹೋ ನಃ ಸ್ಥವಿರೋ ಮನಸ್ವೀ
ಮಹಾಪ್ರಾಜ್ಞಾಃ ಸರ್ವಧರ್ಮೋಪಪನ್ನಃ|
05023008c ಸ ಕೌರವ್ಯಃ ಕುಶಲೀ ತಾತ ಭೀಷ್ಮೋ
ಯಥಾಪೂರ್ವಂ ವೃತ್ತಿರಪ್ಯಸ್ಯ ಕಚ್ಚಿತ್||
ತಾತ! ಪಿತಾಮಹ, ವೃದ್ಧ, ಮನಸ್ವಿ, ಮಹಾಪ್ರಾಜ್ಞ, ಸರ್ವಧರ್ಮೋಪಪನ್ನ, ಕೌರವ್ಯ ಭೀಷ್ಮನು ಕುಶಲನಾಗಿದ್ದಾನೆ ತಾನೇ? ಮೊದಲಿನಂತೆಯೇ ಈಗಲೂ ವೃತ್ತಿಪರನಾಗಿದ್ದಾನೆಯೇ?
05023009a ಕಶ್ಚಿದ್ರಾಜಾ ಧೃತರಾಷ್ಟ್ರಃ ಸಪುತ್ರೋ
ವೈಚಿತ್ರವೀರ್ಯಃ ಕುಶಲೀ ಮಹಾತ್ಮಾ|
05023009c ಮಹಾರಾಜೋ ಬಾಹ್ಲಿಕಃ ಪ್ರಾತಿಪೇಯಃ
ಕಚ್ಚಿದ್ವಿದ್ವಾನ್ಕುಶಲೀ ಸೂತಪುತ್ರ||
ಮಹಾತ್ಮ ವೈಚಿತ್ರವೀರ್ಯ, ಮಹಾರಾಜ ಧೃತರಾಷ್ಟ್ರನು ಪುತ್ರರೊಂದಿಗೆ ಕುಶಲನಾಗಿದ್ದಾನೆಯೇ? ಸೂತಪುತ್ರ! ಮಹಾರಾಜ ಬಾಹ್ಲೀಕ, ಪ್ರತೀಪನ ಮಗ, ವಿದ್ವಾನನು ಕುಶಲನಾಗಿದ್ದಾನೆಯೇ?
05023010a ಸ ಸೋಮದತ್ತಃ ಕುಶಲೀ ತಾತ ಕಚ್ಚಿದ್
ಭೂರಿಶ್ರವಾಃ ಸತ್ಯಸಂಧಃ ಶಲಶ್ಚ|
05023010c ದ್ರೋಣಃ ಸಪುತ್ರಶ್ಚ ಕೃಪಶ್ಚ ವಿಪ್ರೋ
ಮಹೇಷ್ವಾಸಾಃ ಕಚ್ಚಿದೇತೇಽಪ್ಯರೋಗಾಃ||
ತಾತ! ಸೋಮದತ್ತನು ಕುಶಲನಾಗಿದ್ದಾನೆಯೇ? ಹಾಗೆಯೇ ಭೂರಿಶ್ರವ, ಸತ್ಯಸಂಧ, ಶಲ, ಮಹೇಷ್ವಾಸ ವಿಪ್ರರಾದ ದ್ರೋಣ, ಅವನ ಮಗ ಮತ್ತು ಕೃಪರು ಆರೋಗ್ಯದಿಂದಿದ್ದಾರೆ ತಾನೇ?
05023011a ಮಹಾಪ್ರಾಜ್ಞಾಃ ಸರ್ವಶಾಸ್ತ್ರಾವದಾತಾ
ಧನುರ್ಭೃತಾಂ ಮುಖ್ಯತಮಾಃ ಪೃಥಿವ್ಯಾಂ|
05023011c ಕಚ್ಚಿನ್ಮಾನಂ ತಾತ ಲಭಂತ ಏತೇ
ಧನುರ್ಭೃತಃ ಕಚ್ಚಿದೇತೇಽಪ್ಯರೋಗಾಃ||
ತಾತ! ಮಹಾಪ್ರಾಜ್ಞರು, ಸರ್ವಶಾಸ್ತ್ರಾವದಾತರು, ಭೂಮಿಯಲ್ಲಿಯೇ ಧನುಭೃತರಲ್ಲಿ ಮುಖ್ಯತಮರು ಗೌರವವನ್ನು ಪಡೆಯುತ್ತಿದ್ದಾರೆಯೇ? ಈ ಧನುಭೃತರು ಆರೋಗ್ಯದಿಂದಾರಲ್ಲವೇ?
05023012a ಸರ್ವೇ ಕುರುಭ್ಯಃ ಸ್ಪೃಹಯಂತಿ ಸಂಜಯ
ಧನುರ್ಧರಾ ಯೇ ಪೃಥಿವ್ಯಾಂ ಯುವಾನಃ|
05023012c ಯೇಷಾಂ ರಾಷ್ಟ್ರೇ ನಿವಸತಿ ದರ್ಶನೀಯೋ
ಮಹೇಷ್ವಾಸಃ ಶೀಲವಾನ್ದ್ರೋಣಪುತ್ರಃ||
ಸಂಜಯ! ಇವರೆಲ್ಲರೂ ಕುರುಗಳಿಗೆ ಅಂಟಿಕೊಂಡಿದ್ದಾರೆ. ಪೃಥ್ವಿಯ ಧನುರ್ಧರ ಯುವಕರೆಲ್ಲಾ ಮತ್ತು ನೋಡಲು ಸುಂದರನಾದ ಮಹೇಷ್ವಾಸ ಶೀಲವಂತ ದ್ರೋಣಪುತ್ರನು ಅವರ ರಾಷ್ಟ್ರದಲ್ಲಿ ವಾಸಿಸುತ್ತಿದ್ದಾರೆ.
05023013a ವೈಶ್ಯಾಪುತ್ರಃ ಕುಶಲೀ ತಾತ ಕಚ್ಚಿನ್
ಮಹಾಪ್ರಾಜ್ಞೋ ರಾಜಪುತ್ರೋ ಯುಯುತ್ಸುಃ|
05023013c ಕರ್ಣೋಽಮಾತ್ಯಃ ಕುಶಲೀ ತಾತ ಕಚ್ಚಿತ್
ಸುಯೋಧನೋ ಯಸ್ಯ ಮಂದೋ ವಿಧೇಯಃ||
ತಾತ! ವೈಶ್ಯಾಪುತ್ರ, ಮಹಾಪ್ರಾಜ್ಞ, ರಾಜಪುತ್ರ ಯುಯುತ್ಸುವು ಕುಶಲನಾಗಿದ್ದಾನೆಯೇ? ತಾತ! ಮಂದ ಸುಯೋಧನ, ಮತ್ತು ಅವನಿಗೆ ವಿಧೇಯನಾಗಿರುವ ಅಮಾತ್ಯ ಕರ್ಣರು ಕುಶಲರಾಗಿದ್ದಾರೆಯೇ?
05023014a ಸ್ತ್ರಿಯೋ ವೃದ್ಧಾ ಭಾರತಾನಾಂ ಜನನ್ಯೋ
ಮಹಾನಸ್ಯೋ ದಾಸಭಾರ್ಯಾಶ್ಚ ಸೂತ|
05023014c ವಧ್ವಃ ಪುತ್ರಾ ಭಾಗಿನೇಯಾ ಭಗಿನ್ಯೋ
ದೌಹಿತ್ರಾ ವಾ ಕಚ್ಚಿದಪ್ಯವ್ಯಲೀಕಾಃ||
ಸೂತ! ಭಾರತರ ವೃದ್ಧ ಸ್ತ್ರೀಯರು, ಜನನಿಯರು, ಅಡುಗೆಮನೆಯ ದಾಸಿಯರು, ಭಾರ್ಯೆಯರ ದಾಸಿಯರು, ಸೊಸೆಯಂದಿರು, ಮಕ್ಕಳು, ಸಹೋದರಿಯರು, ಸಹೋದರಿಯರ ಮಕ್ಕಳು, ಮತ್ತು ಮಗಳ ಮಕ್ಕಳು ಆರೋಗ್ಯದಿಂದ ಇದ್ದಾರೆಯೇ?
05023015a ಕಚ್ಚಿದ್ರಾಜಾ ಬ್ರಾಹ್ಮಣಾನಾಂ ಯಥಾವತ್
ಪ್ರವರ್ತತೇ ಪೂರ್ವವತ್ತಾತ ವೃತ್ತಿಂ|
05023015c ಕಚ್ಚಿದ್ದಾಯಾನ್ಮಾಮಕಾನ್ಧಾರ್ತರಾಷ್ಟ್ರೋ
ದ್ವಿಜಾತೀನಾಂ ಸಂಜಯ ನೋಪಹಂತಿ||
ಸಂಜಯ! ತಾತ! ಹಿಂದಿನಂತೆ ರಾಜನು ಬ್ರಾಹ್ಮಣರ ವೃತ್ತಿಯನ್ನು ಯಥಾವತ್ತಾಗಿ ಮಾಡಲು ಬಿಡುತ್ತಾನೆಯೇ? ನನ್ನ ದಾಯಾದಿಗಳಾದ ಧಾರ್ತರಾಷ್ಟ್ರರು ದ್ವಿಜಾತಿಯವರಿಗೆ ನಾನು ನೀಡಿದ್ದ ದಾನಗಳನ್ನು ಕಸಿದುಕೊಂಡಿಲ್ಲ ತಾನೇ?
05023016a ಕಚ್ಚಿದ್ರಾಜಾ ಧೃತರಾಷ್ಟ್ರಃ ಸಪುತ್ರ
ಉಪೇಕ್ಷತೇ ಬ್ರಾಹ್ಮಣಾತಿಕ್ರಮಾನ್ವೈ|
05023016c ಕಚ್ಚಿನ್ನ ಹೇತೋರಿವ ವರ್ತ್ಮಭೂತ
ಉಪೇಕ್ಷತೇ ತೇಷು ಸ ನ್ಯೂನವೃತ್ತಿಂ||
ರಾಜ ಧೃತರಾಷ್ಟ್ರನು ಪುತ್ರರು ಬ್ರಾಹ್ಮಣರನ್ನು ಅತಿಕ್ರಮಿಸುವುದನ್ನು ಉಪೇಕ್ಷಿಸುತ್ತಾನೆ ತಾನೇ? ಅವರಲ್ಲಿ ಆ ನ್ಯೂನವೃತ್ತಿಯನ್ನು ಉಪೇಕ್ಷಿಸಬೇಕು. ಎಕೆಂದರೆ ಇದು ಸ್ವರ್ಗಕ್ಕಿರುವ ಒಂದೇ ಮಾರ್ಗ.
05023017a ಏತಜ್ಜ್ಯೋತಿರುತ್ತಮಂ ಜೀವಲೋಕೇ
ಶುಕ್ಲಂ ಪ್ರಜಾನಾಂ ವಿಹಿತಂ ವಿಧಾತ್ರಾ|
05023017c ತೇ ಚೇಲ್ಲೋಭಂ ನ ನಿಯಚ್ಚಂತಿ ಮಂದಾಃ
ಕೃತ್ಸ್ನೋ ನಾಶೋ ಭವಿತಾ ಕೌರವಾಣಾಂ||
ಇದೇ ಜೀವಲೋಕದಲ್ಲಿ ವಿಧಾತ್ರನು ಪ್ರಜೆಗಳಿಗೆ ವಿಹಿಸಿರುವ ಉತ್ತಮ ಶ್ವೇತವರ್ಣದ ಜ್ಯೋತಿ. ಆ ಮಂದರು ಅವರನ್ನು ಸರಿಯಾಗಿ ನೋಡಿಕೊಳ್ಳದೇ ಇದ್ದರೆ ಕೌರವರ ಸರ್ವನಾಶವಾಗುತ್ತದೆ.
05023018a ಕಚ್ಚಿದ್ರಾಜಾ ಧೃತರಾಷ್ಟ್ರಃ ಸಪುತ್ರೋ
ಬುಭೂಷತೇ ವೃತ್ತಿಮಮಾತ್ಯವರ್ಗೇ|
05023018c ಕಚ್ಚಿನ್ನ ಭೇದೇನ ಜಿಜೀವಿಷಂತಿ
ಸುಹೃದ್ರೂಪಾ ದುರ್ಹೃದಶ್ಚೈಕಮಿತ್ರಾಃ||
ರಾಜಾ ಧೃತರಾಷ್ಟ್ರನು ಪುತ್ರರೊಡನೆ ಅಮಾತ್ಯವರ್ಗಕ್ಕೆ ವೃತ್ತಿವೇತನವನ್ನು ಕೊಡುತ್ತಿದ್ದಾನೆಯೇ? ಅಮಿತ್ರರು ಸುಹೃದಯರಂತೆ ವೇಷಧರಿಸಿ ಅವರಲ್ಲಿ ಭೇದವನ್ನು ತರುವ ಶತ್ರುಗಳ್ಯಾರೂ ಅವರಿಗಿಲ್ಲ ತಾನೇ?
05023019a ಕಚ್ಚಿನ್ನ ಪಾಪಂ ಕಥಯಂತಿ ತಾತ
ತೇ ಪಾಂಡವಾನಾಂ ಕುರವಃ ಸರ್ವ ಏವ|
05023019c ಕಚ್ಚಿದ್ದೃಷ್ಟ್ವಾ ದಸ್ಯುಸಂಘಾನ್ಸಮೇತಾನ್
ಸ್ಮರಂತಿ ಪಾರ್ಥಸ್ಯ ಯುಧಾಂ ಪ್ರಣೇತುಃ||
ತಾತ! ಕೌರವರೆಲ್ಲರೂ ಪಾಂಡವರ ಪಾಪಗಳ ಕುರಿತು ಮಾತನಾಡಿಕೊಳ್ಳುವುದಿಲ್ಲ ತಾನೇ? ದಸ್ಯುಗಳ ದಂಡನ್ನು ನೋಡಿದಾಗ ಅವರು ಯುದ್ಧದಲ್ಲಿ ಪ್ರಣೀತನಾದ ಪಾರ್ಥನನ್ನು ಸ್ಮರಿಸಿಕೊಳ್ಳುತ್ತಾರೆ ತಾನೇ?
05023020a ಮೌರ್ವೀಭುಜಾಗ್ರಪ್ರಹಿತಾನ್ಸ್ಮ ತಾತ
ದೋಧೂಯಮಾನೇನ ಧನುರ್ಧರೇಣ|
05023020c ಗಾಂಡೀವಮುಕ್ತಾನ್ಸ್ತನಯಿತ್ನುಘೋಷಾನ್
ಅಜಿಹ್ಮಗಾನ್ಕಚ್ಚಿದನುಸ್ಮರಂತಿ||
ತಾತ! ಭುಜದ ಮೇಲೇರಿಸಿ ಗಾಂಡೀವ ಧನುಸ್ಸಿನಿಂದ ಬಿಟ್ಟ, ಗಾಳಿಯಲ್ಲಿ ನೇರವಾಗಿ, ಗುಡುಗಿನಂತೆ ಮೊಳಗುತ್ತ ಸಾಗುವ ಬಾಣಗಳನ್ನು ಅವರು ಸ್ಮರಿಸಿಕೊಳ್ಳುತ್ತಾರೆ ತಾನೇ?
05023021a ನ ಹ್ಯಪಶ್ಯಂ ಕಂ ಚಿದಹಂ ಪೃಥಿವ್ಯಾಂ
ಶ್ರುತಂ ಸಮಂ ವಾಧಿಕಮರ್ಜುನೇನ|
05023021c ಯಸ್ಯೈಕಷಷ್ಟಿರ್ನಿಶಿತಾಸ್ತೀಕ್ಷ್ಣಧಾರಾಃ
ಸುವಾಸಸಃ ಸಮ್ಮತೋ ಹಸ್ತವಾಪಃ||
ಒಂದೇ ಒಂದು ಹಸ್ತ ಚಳಕದಲ್ಲಿ ಅರವತ್ತೊಂದು ಖಡ್ಗಗಳಂತೆ ತೀಕ್ಷ್ಣ, ಗರಿಗಳುಳ್ಳ, ಹರಿತ ಬಾಣಗಳನ್ನು ಒಟ್ಟಿಗೇ ಬಿಡಬಲ್ಲ ಅರ್ಜುನನ್ನು ಹೋಲುವ ಅಥವಾ ಮೀರಿಸುವವರನ್ನು ಈ ಭೂಮಿಯಲ್ಲಿ ನಾನು ನೋಡಿಲ್ಲ ಅಥವಾ ಕೇಳಿಲ್ಲ.
05023022a ಗದಾಪಾಣಿರ್ಭೀಮಸೇನಸ್ತರಸ್ವೀ
ಪ್ರವೇಪಯಂ ಶತ್ರುಸಂಘಾನನೀಕೇ|
05023022c ನಾಗಃ ಪ್ರಭಿನ್ನ ಇವ ನಡ್ವಲಾಸು
ಚಂಕ್ರಮ್ಯತೇ ಕಚ್ಚಿದೇನಂ ಸ್ಮರಂತಿ||
ವ್ಯೂಹಗಳಲ್ಲಿ ರಚಿತಗೊಂಡ ಶತ್ರುಸಂಘಗಳನ್ನು ಭಯದಿಂದ ಕಂಪಿಸುವಂತೆ ಮಾಡುವ, ಕಪಾಲಗಳು ಒಡೆದ ಆನೆಯಂತೆ ಸಂಚರಿಸುವ ಗದಾಪಾಣೀ, ತರಸ್ವೀ ಭೀಮಸೇನನನ್ನು ಅವರು ಸ್ಮರಿಸಿಕೊಳ್ಳುತ್ತಾರೆ ತಾನೇ?
05023023a ಮಾದ್ರೀಪುತ್ರಃ ಸಹದೇವಃ ಕಲಿಂಗಾನ್
ಸಮಾಗತಾನಜಯದ್ದಂತಕೂರೇ|
05023023c ವಾಮೇನಾಸ್ಯನ್ದಕ್ಷಿಣೇನೈವ ಯೋ ವೈ
ಮಹಾಬಲಂ ಕಚ್ಚಿದೇನಂ ಸ್ಮರಂತಿ||
ಎಡ ಮತ್ತು ಬಲಗೈ ಎರಡರಿಂದಲೂ ಬಾಣಗಳನ್ನು ಪ್ರಯೋಗಿಸುತ್ತಾ ದಂತಕೂರದಲ್ಲಿ ಸೇರಿದ್ದ ಕಲಿಂಗರನ್ನು ಜಯಿಸಿದ ಮಾದ್ರೀಪುತ್ರ, ಮಹಾಬಲಿ, ಸಹದೇವನನ್ನು ಸ್ಮರಿಸಿಕೊಳ್ಳುತ್ತಾರೆ ತಾನೇ?
05023024a ಉದ್ಯನ್ನಯಂ ನಕುಲಃ ಪ್ರೇಷಿತೋ ವೈ
ಗಾವಲ್ಗಣೇ ಸಂಜಯ ಪಶ್ಯತಸ್ತೇ|
05023024c ದಿಶಂ ಪ್ರತೀಚೀಂ ವಶಮಾನಯನ್ಮೇ
ಮಾದ್ರೀಸುತಂ ಕಚ್ಚಿದೇನಂ ಸ್ಮರಂತಿ||
ಗಾವಲ್ಗಣೇ! ಸಂಜಯ! ನೀನು ನೋಡುತ್ತಿದ್ದಂತೇ ಪೂರ್ವದಿಕ್ಕಿಗೆ ಕಳುಹಿಸಲ್ಪಟ್ಟ, ಮತ್ತು ನನಗಾಗಿ ಪೂರ್ವದಿಕ್ಕನ್ನು ವಶಪಡಿಸಿಕೊಂಡು ಬಂದ ಮಾದ್ರೀಸುತ ನಕುಲನನ್ನು ಸ್ಮರಿಸಿಕೊಳ್ಳುತ್ತಾರೆ ತಾನೇ?
05023025a ಅಭ್ಯಾಭವೋ ದ್ವೈತವನೇ ಯ ಆಸೀದ್
ದುರ್ಮಂತ್ರಿತೇ ಘೋಷಯಾತ್ರಾಗತಾನಾಂ|
05023025c ಯತ್ರ ಮಂದಾಂ ಶತ್ರುವಶಂ ಪ್ರಯಾತಾನ್
ಅಮೋಚಯದ್ಭೀಮಸೇನೋ ಜಯಶ್ಚ||
05023026a ಅಹಂ ಪಶ್ಚಾದರ್ಜುನಮಭ್ಯರಕ್ಷಂ
ಮಾದ್ರೀಪುತ್ರೌ ಭೀಮಸೇನಶ್ಚ ಚಕ್ರೇ|
05023026c ಗಾಂಡೀವಭೃಚ್ಚತ್ರುಸಂಘಾನುದಸ್ಯ
ಸ್ವಸ್ತ್ಯಾಗಮತ್ಕಚ್ಚಿದೇನಂ ಸ್ಮರಂತಿ||
ಕೆಟ್ಟದಾಗಿ ಆಲೋಚಿಸಿ ಘೋಷಯಾತ್ರೆಗೆಂದು ದ್ವೈತವನಕ್ಕೆ ಬಂದಾಗ ಅಲ್ಲಿ ಆ ಮಂದಬುದ್ಧಿಗಳು ಶತ್ರುಗಳ ವಶವಾದಾಗ ಭೀಮಸೇನ ಮತ್ತು ಜಯರು ಅವರನ್ನು ಬಿಡುಗಡೆಗೊಳಿಸಿದ್ದುದನ್ನು, ನಾನು ಅರ್ಜುನನನ್ನು ಹಿಂಬಾಲಿಸಿ, ಮಾದ್ರೀಪುತ್ರರು ಭೀಮಸೇನನ ರಥಚಕ್ರವನ್ನು ರಕ್ಷಿಸಿದುದನ್ನು, ಗಾಂಡೀವಧರನು ಶತ್ರುಸಂಘಗಳನ್ನು ನಾಶಪಡಿಸಿ ಏನೂ ತೊಂದರೆಗೊಳಗಾಗದೇ ಹಿಂದಿರುಗಿ ಬಂದಿದ್ದುದನ್ನು ಅವರು ನೆನಪಿಸಿಕೊಳ್ಳುತ್ತಾರೆಯೇ?
05023027a ನ ಕರ್ಮಣಾ ಸಾಧುನೈಕೇನ ನೂನಂ
ಕರ್ತುಂ ಶಕ್ಯಂ ಭವತೀಹ ಸಂಜಯ|
05023027c ಸರ್ವಾತ್ಮನಾ ಪರಿಜೇತುಂ ವಯಂ ಚೇನ್
ನ ಶಕ್ನುಮೋ ಧೃತರಾಷ್ಟ್ರಸ್ಯ ಪುತ್ರಂ||
ಸಂಜಯ! ನಮ್ಮೆಲ್ಲರ ಆತ್ಮಗಳಿಂದಲೂ ನಾವು ಧೃತರಾಷ್ಟ್ರ ಪುತ್ರನನ್ನು ಗೆಲ್ಲಲು ಶಕ್ಯರಾಗಿಲ್ಲದಿರುವಾಗ ಒಂದೇ ಒಂದು ಒಳ್ಳೆಯ ಕೆಲಸದಿಂದ ಇದನ್ನು ಮಾಡಲು ಸಾದ್ಯವಿಲ್ಲ.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಯುಧಿಷ್ಠಿರಪ್ರಶ್ನೇ ತ್ರಯೋವಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಯುಧಿಷ್ಠಿರಪ್ರಶ್ನೆಯಲ್ಲಿ ಇಪ್ಪತ್ಮೂರನೆಯ ಅಧ್ಯಾಯವು.