ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ
೨
ಬಲದೇವನ ಮಾತು
ಬಲರಾಮನು ದೂತನನ್ನು ಕಳುಹಿಸಬೇಕೆಂಬ ಕೃಷ್ಣನ ಸೂಚನೆಯನ್ನು ಒಪ್ಪಿಕೊಂಡರೂ, ಯುಧಿಷ್ಠಿರನೇ ಸೌಬಲನನ್ನು ಆಹ್ವಾನಿಸಿ ಅವನೊಂದಿಗೆ ದ್ಯೂತವಾಡಿ ಸೋತುದರಿಂದ ದೂತನಾದವನು ವಿನಯನಾಗಿ, ಕುರುಗಳನ್ನು ಸಿಟ್ಟಿಗೇಳಿಸದ ರೀತಿಯಲ್ಲಿ ಯುಧಿಷ್ಠಿರನ ಹಿತದಲ್ಲಿರುವ ಮಾತುಗಳನ್ನು ಹೇಳಬೇಕೆಂದು ಸೂಚಿಸುವುದು (೧-೧೩).
05002001 ಬಲದೇವ ಉವಾಚ|
05002001a ಶ್ರುತಂ ಭವದ್ಭಿರ್ಗದಪೂರ್ವಜಸ್ಯ|
ವಾಕ್ಯಂ ಯಥಾ ಧರ್ಮವದರ್ಥವಚ್ಚ|
05002001c ಅಜಾತಶತ್ರೋಶ್ಚ ಹಿತಂ ಹಿತಂ ಚ|
ದುರ್ಯೋಧನಸ್ಯಾಪಿ ತಥೈವ ರಾಜ್ಞಾಃ||
ಬಲದೇವನು ಹೇಳಿದನು: “ನೀವೆಲ್ಲರೂ ಗದನ ಅಣ್ಣನ ಧರ್ಮಾರ್ಥವತ್ತಾದ ಅಜಾತಶತ್ರುವಿಗೂ ಹಿತವಾಗುವಂತಹ ಮತ್ತು ರಾಜಾ ದುರ್ಯೋಧನನಿಗೂ ಹಿತವಾಗುವಂತಹ ಮಾತುಗಳನ್ನು ಕೇಳಿದಿರಿ.
05002002a ಅರ್ಧಂ ಹಿ ರಾಜ್ಯಸ್ಯ ವಿಸೃಜ್ಯ ವೀರಾಃ|
ಕುಂತೀಸುತಾಸ್ತಸ್ಯ ಕೃತೇ ಯತಂತೇ|
05002002c ಪ್ರದಾಯ ಚಾರ್ಧಂ ಧೃತರಾಷ್ಟ್ರಪುತ್ರಃ|
ಸುಖೀ ಸಹಾಸ್ಮಾಭಿರತೀವ ಮೋದೇತ್||
ಕುಂತಿಯ ವೀರ ಮಕ್ಕಳು ಅರ್ಧ ರಾಜ್ಯವನ್ನೂ ಬಿಡಲು ಸಿದ್ಧರಿದ್ದಾರೆ. ಧೃತರಾಷ್ಟ್ರ ಪುತ್ರನು ಅವರಿಗೆ ಅರ್ಧವನ್ನು ಕೊಟ್ಟು ನಮ್ಮೊಂದಿಗೆ ಸುಖಿಗಳಾಗಿ ಮೋದದಿಂದಿರಬಹುದು.
05002003a ಲಬ್ಧ್ವಾ ಹಿ ರಾಜ್ಯಂ ಪುರುಷಪ್ರವೀರಾಃ|
ಸಮ್ಯಕ್ಪ್ರವೃತ್ತೇಷು ಪರೇಷು ಚೈವ|
05002003c ಧ್ರುವಂ ಪ್ರಶಾಂತಾಃ ಸುಖಮಾವಿಶೇಯುಸ್|
ತೇಷಾಂ ಪ್ರಶಾಂತಿಶ್ಚ ಹಿತಂ ಪ್ರಜಾನಾಂ|
ರಾಜ್ಯವನ್ನು ಪಡೆದು ಈ ಪುರುಷಪ್ರವೀರರು, ವಿರುದ್ಧ ಪಕ್ಷದವರು ಸರಿಯಾಗಿ ನಡೆದುಕೊಂಡಿದ್ದಾರೆಂದರೆ, ಪ್ರಶಾಂತರಾಗಿ ಸುಖದಿಂದಿರುವುದು ನಿಶ್ಚಯ. ಅವರು ಶಾಂತರಾಗಿರುವುದು ಪ್ರಜೆಗಳಿಗೆ ಹಿತವೇ ಸರಿ.
05002004a ದುರ್ಯೋಧನಸ್ಯಾಪಿ ಮತಂ ಚ ವೇತ್ತುಂ|
ವಕ್ತುಂ ಚ ವಾಕ್ಯಾನಿ ಯುಧಿಷ್ಠಿರಸ್ಯ|
05002004c ಪ್ರಿಯಂ ಮಮ ಸ್ಯಾದ್ಯದಿ ತತ್ರ ಕಶ್ಚಿದ್|
ವ್ರಜೇಚ್ಚಮಾರ್ಥಂ ಕುರುಪಾಂಡವಾನಾಂ||
ದುರ್ಯೋಧನನ ಮತವನ್ನು ತಿಳಿಯಲು ಮತ್ತು ಯುಧಿಷ್ಠಿರನ ಮಾತುಗಳನ್ನು ಹೇಳಲು ಕುರುಪಾಂಡವರ ಹಿತವನ್ನು ಬಯಸುವ ಯಾರಾದರನ್ನು ಅಲ್ಲಿಗೆ ಕಳುಹಿಸುವುದು ನನಗೂ ಸರಿಯೆನಿಸುತ್ತದೆ.
05002005a ಸ ಭೀಷ್ಮಮಾಮಂತ್ರ್ಯ ಕುರುಪ್ರವೀರಂ|
ವೈಚಿತ್ರವೀರ್ಯಂ ಚ ಮಹಾನುಭಾವಂ|
05002005c ದ್ರೋಣಂ ಸಪುತ್ರಂ ವಿದುರಂ ಕೃಪಂ ಚ|
ಗಾಂಧಾರರಾಜಂ ಚ ಸಸೂತಪುತ್ರಂ|
05002006a ಸರ್ವೇ ಚ ಯೇಽನ್ಯೇ ಧೃತರಾಷ್ಟ್ರಪುತ್ರಾ|
ಬಲಪ್ರಧಾನಾ ನಿಗಮಪ್ರಧಾನಾಃ|
05002006c ಸ್ಥಿತಾಶ್ಚ ಧರ್ಮೇಷು ಯಥಾ ಸ್ವಕೇಷು|
ಲೋಕಪ್ರವೀರಾಃ ಶ್ರುತಕಾಲವೃದ್ಧಾಃ||
05002007a ಏತೇಷು ಸರ್ವೇಷು ಸಮಾಗತೇಷು|
ಪೌರೇಷು ವೃದ್ಧೇಷು ಚ ಸಂಗತೇಷು|
05002007c ಬ್ರವೀತು ವಾಕ್ಯಂ ಪ್ರಣಿಪಾತಯುಕ್ತಂ|
ಕುಂತೀಸುತಸ್ಯಾರ್ಥಕರಂ ಯಥಾ ಸ್ಯಾತ್||
ಅವನು ಕುರುಪ್ರವೀರ ಭೀಷ್ಮ, ಮಹಾನುಭಾವ ವೈಚಿತ್ರವೀರ್ಯ, ಮಗನೊಂದಿಗೆ ದ್ರೋಣ, ವಿದುರ, ಕೃಪ, ಗಾಂಧಾರರಾಜನೊಂದಿಗೆ ಸೂತಪುತ್ರ, ಇತರ ಎಲ್ಲ ಧೃತರಾಷ್ಟ್ರನ ಮಕ್ಕಳು, ಸೇನಾಧಿಪತಿಗಳು, ಕೋಶಾಧಿಕಾರಿಗಳು, ಧರ್ಮದಲ್ಲಿ ಮತ್ತು ಸ್ವಕರ್ಮಗಳಲ್ಲಿ ನಿರತ ಲೋಕಪ್ರವೀರರೂ, ಕಾಲವನ್ನು ತಿಳಿದ ವೃದ್ಧರೂ ಮತ್ತು ಅಲ್ಲಿ ಸೇರಿರುವ ಎಲ್ಲರಿಗೂ ಕೈಮುಗಿದು ಗೌರವದಿಂದ ಸಂಬೋಧಿಸಿ ಕುಂತೀಸುತನಿಗೆ ಬೇಕಾಗುವ ಮಾತುಗಳನ್ನು ವಿನಯದಿಂದ ಹೇಳಬೇಕು.
05002008a ಸರ್ವಾಸ್ವವಸ್ಥಾಸು ಚ ತೇ ನ ಕೌಟ್ಯಾದ್|
ಗ್ರಸ್ತೋ ಹಿ ಸೋಽರ್ಥೋ ಬಲಮಾಶ್ರಿತೈಸ್ತೈಃ|
05002008c ಪ್ರಿಯಾಭ್ಯುಪೇತಸ್ಯ ಯುಧಿಷ್ಠಿರಸ್ಯ|
ದ್ಯೂತೇ ಪ್ರಮತ್ತಸ್ಯ ಹೃತಂ ಚ ರಾಜ್ಯಂ||
ಯಾವುದೇ ಸಂದರ್ಭದಲ್ಲಿಯೂ ಅವನು ಚುಚ್ಚುಮಾತುಗಳನ್ನಾಡದಿರಲಿ. ಯಾಕೆಂದರೆ ಅವರು ಬಲವನ್ನೇ ಆಶ್ರಯಿಸಿ ಸಂಪತ್ತನ್ನು ಹಿಡಿದಿಟ್ಟುಕೊಂಡಿದ್ದಾರೆ. ಯುಧಿಷ್ಠಿರನಿಗೆ ಅಭ್ಯುದಯವಾಗಿ ಸುಖವಿದ್ದಾಗ ಅವನು ಪ್ರಮತ್ತನಾಗಿ ದ್ಯೂತದಲ್ಲಿ ರಾಜ್ಯವನ್ನು ಕಳೆದುಕೊಂಡ.
05002009a ನಿವಾರ್ಯಮಾಣಶ್ಚ ಕುರುಪ್ರವೀರೈಃ|
ಸರ್ವೈಃ ಸುಹೃದ್ಭಿರ್ಹ್ಯಯಮಪ್ಯತಜ್ಞಾಃ|
05002009c ಗಾಂಧಾರರಾಜಸ್ಯ ಸುತಂ ಮತಾಕ್ಷಂ|
ಸಮಾಹ್ವಯೇದ್ದೇವಿತುಮಾಜಮೀಢಃ||
ಈ ಆಜಮೀಢನು ಕುರುಪ್ರವೀರರು ಮತ್ತು ಎಲ್ಲ ಸುಹೃದಯಿಗಳು ಬೇಡವೆಂದರೂ ಆಟ ಗೊತ್ತಿಲ್ಲದಿದ್ದರೂ ಜೂಜನ್ನು ತಿಳಿದಿದ್ದ ಗಾಂಧಾರರಾಜನ ಮಗನೊಂದಿಗೆ ಪಗಡೆಯಾಟದ ಜೂಜಿನಲ್ಲಿ ಪಣವಿಟ್ಟಿದ್ದ.
05002010a ದುರೋದರಾಸ್ತತ್ರ ಸಹಸ್ರಶೋಽನ್ಯೇ|
ಯುಧಿಷ್ಠಿರೋ ಯಾನ್ವಿಷಹೇತ ಜೇತುಂ|
05002010c ಉತ್ಸೃಜ್ಯ ತಾನ್ಸೌಬಲಮೇವ ಚಾಯಂ|
ಸಮಾಹ್ವಯತ್ತೇನ ಜಿತೋಽಕ್ಷವತ್ಯಾಂ||
ಅಲ್ಲಿ ಸೋಲಿಸಬಹುದಾದ ಸಹಸ್ರಾರು ಇತರರಿದ್ದರು. ಆದರೆ ಯುಧಿಷ್ಠಿರನು ಅವರೆಲ್ಲರನ್ನು ಬಿಟ್ಟು ಸೌಬಲನನ್ನೇ ಆರಿಸಿ ಅಹ್ವಾನಿಸಿ ಅವನೊಂದಿಗೆ ಜೂಜಾಡಿ ಸೋತನು.
05002011a ಸ ದೀವ್ಯಮಾನಃ ಪ್ರತಿದೇವನೇನ|
ಅಕ್ಷೇಷು ನಿತ್ಯಂ ಸುಪರಾಮ್ಮುಖೇಷು|
05002011c ಸಂರಂಭಮಾಣೋ ವಿಜಿತಃ ಪ್ರಸಹ್ಯ|
ತತ್ರಾಪರಾಧಃ ಶಕುನೇರ್ನ ಕಶ್ಚಿತ್|
ಆಟವು ಸದಾ ಅವನ ವಿರುದ್ಧ ಹೋಗುತಿದ್ದರೂ ಅವನನ್ನೇ ತನ್ನ ಪ್ರತಿಸ್ಪರ್ಧಿಯನ್ನಾಗಿ ಮುಂದುವರಿಸಿದನು. ಆಟದಲ್ಲಿ ಅವನಿಂದ ಸರಿಯಾಗಿಯೇ ಗೆಲ್ಲಲ್ಪಟ್ಟಿದ್ದಾನೆ. ಇದರಲ್ಲಿ ಶಕುನಿಯ ಅಪರಾದವೇನೂ ಇಲ್ಲ.
05002012a ತಸ್ಮಾತ್ಪ್ರಣಮ್ಯೈವ ವಚೋ ಬ್ರವೀತು|
ವೈಚಿತ್ರವೀರ್ಯಂ ಬಹುಸಾಮಯುಕ್ತಂ|
05002012c ತಥಾ ಹಿ ಶಕ್ಯೋ ಧೃತರಾಷ್ಟ್ರಪುತ್ರಃ|
ಸ್ವಾರ್ಥೇ ನಿಯೋಕ್ತುಂ ಪುರುಷೇಣತೇನ|
ಆದುದರಿಂದ ಪ್ರೀತಿಯಲ್ಲಿ ಮಾತನಾಡಿ ವೈಚಿತ್ರವೀರ್ಯನ ಮನವೊಲಿಸಲಿ. ಇದರಿಂದ ಧೃತರಾಷ್ಟ್ರಪುತ್ರನ ಉದ್ದೇಶವೇನೆಂದು ತಿಳಿದುಕೊಳ್ಳಬಹುದು. ಪೌರುಷದಿಂದ ಸಾದ್ಯವಿಲ್ಲ.””
05002013 ವೈಶಂಪಾಯನ ಉವಾಚ|
05002013a ಏವಂ ಬ್ರುವತ್ಯೇವ ಮಧುಪ್ರವೀರೇ|
ಶಿನಿಪ್ರವೀರಃ ಸಹಸೋತ್ಪಪಾತ|
05002013c ತಚ್ಚಾಪಿ ವಾಕ್ಯಂ ಪರಿನಿಂದ್ಯ ತಸ್ಯ|
ಸಮಾದದೇ ವಾಕ್ಯಮಿದಂ ಸಮನ್ಯುಃ||
ವೈಶಂಪಾಯನನು ಹೇಳಿದನು: “ಮಧುಪ್ರವೀರನು ಹೀಗೆ ಹೇಳಲು ಶಿನಿಪ್ರವೀರನು ಒಮ್ಮೆಲೇ ಎದ್ದು ಅವನ ಮಾತುಗಳನ್ನು ನಿಂದಿಸುತ್ತಾ ಕೋಪದಿಂದ ಈ ಮಾತುಗಳನ್ನಾಡಿದನು.
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಬಲದೇವವಾಕ್ಯೇ ದ್ವಿತೀಯೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಬಲದೇವವಾಕ್ಯ ಎನ್ನುವ ಎರಡನೆಯ ಅಧ್ಯಾಯವು|