|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ: ಭೀಷ್ಮಾಭಿಷೇಚನ ಪರ್ವ
೧೫೩
ಭೀಷ್ಮಸೇನಾಪತ್ಯ
ದುರ್ಯೋಧನನು ಭೀಷ್ಮನಿಗೆ ತನ್ನ ಸೇನಾಪತಿಯಾಗೆಂದು ಕೇಳಿಕೊಳ್ಳುವುದು (೧-೧೬). ಎರಡು ನಿಯಮಗಳನ್ನನುಸರಿಸಿ ಸೇನಾಧಿಪತ್ಯವನ್ನು ನಡೆಸುತ್ತೇನೆಂದು - ಪಾಂಡವರನ್ನು ಕೊಲ್ಲಲು ಮನಸ್ಸಿಲ್ಲದಿದ್ದರೂ ಪ್ರತಿದಿನ ಹತ್ತು ಸಾವಿರ ಯೋಧರನ್ನು ಸಂಹರಿಸುತ್ತೇನೆಂದು ಮತ್ತು “ಕರ್ಣನು ಮೊದಲು ಯುದ್ಧಮಾಡುತ್ತಾನೆ ಅಥವಾ ನಾನು” ಎಂದು ಭೀಷ್ಮನು ನುಡಿದುದು (೧೭-೨೪). ಭೀಷ್ಮನು ಜೀವಿಸಿರುವವರೆಗೆ ತಾನು ಯುದ್ಧಮಾಡುವುದಿಲ್ಲವೆಂದು ಕರ್ಣನು ಹೇಳಲು ದುರ್ಯೋಧನನು ಭೀಷ್ಮನಿಗೆ ಸೇನಾಪತ್ಯವನ್ನಿತ್ತುದು (೨೫-೩೫).
05153001 ವೈಶಂಪಾಯನ ಉವಾಚ|
05153001a ತತಃ ಶಾಂತನವಂ ಭೀಷ್ಮಂ ಪ್ರಾಂಜಲಿರ್ಧೃತರಾಷ್ಟ್ರಜಃ|
05153001c ಸಹ ಸರ್ವೈರ್ಮಹೀಪಾಲೈರಿದಂ ವಚನಮಬ್ರವೀತ್||
ವೈಶಂಪಾಯನನು ಹೇಳಿದನು: “ಆಗ ಧೃತರಾಷ್ಟ್ರಜನು ಸರ್ವ ಮಹೀಪಾಲರೊಂದಿಗೆ ಅಂಜಲೀಬದ್ಧನಾಗಿ ಶಾಂತನವ ಭೀಷ್ಮನಿಗೆ ಹೇಳಿದನು:
05153002a ಋತೇ ಸೇನಾಪ್ರಣೇತಾರಂ ಪೃತನಾ ಸುಮಹತ್ಯಪಿ|
05153002c ದೀರ್ಯತೇ ಯುದ್ಧಮಾಸಾದ್ಯ ಪಿಪೀಲಿಕಪುಟಂ ಯಥಾ||
“ಸೇನಾಪ್ರಣೇತಾರನಿಲ್ಲದೇ ಯುದ್ಧವನ್ನು ಎದುರಿಸುವ ಅತಿದೊಡ್ಡ ಸೇನೆಯೂ ಕೂಡಾ ಇರುವೆಗಳ ಗುಂಪಿನಂತೆ ನಾಶಗೊಳ್ಳುತ್ತದೆ.
05153003a ನ ಹಿ ಜಾತು ದ್ವಯೋರ್ಬುದ್ಧಿಃ ಸಮಾ ಭವತಿ ಕರ್ಹಿ ಚಿತ್|
05153003c ಶೌರ್ಯಂ ಚ ನಾಮ ನೇತೄಣಾಂ ಸ್ಪರ್ಧತೇ ಚ ಪರಸ್ಪರಂ||
ಬುದ್ಧಿವಂತರಾದ ಇಬ್ಬರ ಬುದ್ಧಿಗಳು ಎಂದೂ ಒಪ್ಪಂದದಲ್ಲಿರುವುದಿಲ್ಲ. ತಮ್ಮ ತಮ್ಮ ಶೌರ್ಯಕ್ಕಾಗಿ ಪರಸ್ಪರರೊಂದಿಗೆ ಸ್ಪರ್ಧಿಸುತ್ತಿರುತ್ತಾರೆ.
05153004a ಶ್ರೂಯತೇ ಚ ಮಹಾಪ್ರಾಜ್ಞಾ ಹೈಹಯಾನಮಿತೌಜಸಃ|
05153004c ಅಭ್ಯಯುರ್ಬ್ರಾಹ್ಮಣಾಃ ಸರ್ವೇ ಸಮುಚ್ಚ್ರಿತಕುಶಧ್ವಜಾಃ||
ಮಹಾಪ್ರಾಜ್ಞ! ಕುಶಗಳ ಗುಚ್ಛಗಳನ್ನೇ ಧ್ವಜಗಳನ್ನಾಗಿಸಿಕೊಂಡು ಬ್ರಾಹ್ಮಣರು ಅಮಿತೋಜಸ ಹೈಹಯರನ್ನು ಎದುರಿಸಿದ್ದರೆಂದು ಕೇಳಿದ್ದೇವೆ.
05153005a ತಾನನ್ವಯುಸ್ತದಾ ವೈಶ್ಯಾಃ ಶೂದ್ರಾಶ್ಚೈವ ಪಿತಾಮಹ|
05153005c ಏಕತಸ್ತು ತ್ರಯೋ ವರ್ಣಾ ಏಕತಃ ಕ್ಷತ್ರಿಯರ್ಷಭಾಃ||
ಪಿತಾಮಹ! ಆಗ ಅವರನ್ನು ವೈಶ್ಯರು ಮತ್ತು ಶೂದ್ರರೂ ಕೂಡ ಅನುಸರಿಸಿದ್ದರು. ಮೂರು ವರ್ಣದವರೂ ಒಂದಾಗಿರಲು ಕ್ಷತ್ರಿಯರ್ಷಭರು ಒಬ್ಬರೇ ಒಂದು ಕಡೆ ಇದ್ದರು.
05153006a ತೇ ಸ್ಮ ಯುದ್ಧೇಷ್ವಭಜ್ಯಂತ ತ್ರಯೋ ವರ್ಣಾಃ ಪುನಃ ಪುನಃ|
05153006c ಕ್ಷತ್ರಿಯಾಸ್ತು ಜಯಂತ್ಯೇವ ಬಹುಲಂ ಚೈಕತೋ ಬಲಂ||
ಯುದ್ಧಮಾಡುವಾಗ ಆ ಮೂರು ವರ್ಣದವರಲ್ಲಿ ಪುನಃ ಪುನಃ ಒಡಕುಂಟಾಗುತ್ತಿತ್ತು. ಆದರೆ ಕ್ಷತ್ರಿಯರು ಒಬ್ಬರೇ ಆಗಿದ್ದರೂ ಆ ಮಹಾ ಬಲವನ್ನು ಜಯಿಸಿದರು.
05153007a ತತಸ್ತೇ ಕ್ಷತ್ರಿಯಾನೇವ ಪಪ್ರಚ್ಚುರ್ದ್ವಿಜಸತ್ತಮಾಃ|
05153007c ತೇಭ್ಯಃ ಶಶಂಸುರ್ಧರ್ಮಜ್ಞಾ ಯಾಥಾತಥ್ಯಂ ಪಿತಾಮಹ||
ಪಿತಾಮಹ! ಆಗ ದ್ವಿಜಸತ್ತಮರು ಕ್ಷತ್ರಿಯರನ್ನು ಕೇಳಿದರು. ಅವರಲ್ಲಿಯೇ ಧರ್ಮಜ್ಞರಾಗಿದ್ದವರು ಸತ್ಯವನ್ನು ಹೇಳಿದರು:
05153008a ವಯಮೇಕಸ್ಯ ಶೃಣುಮೋ ಮಹಾಬುದ್ಧಿಮತೋ ರಣೇ|
05153008c ಭವಂತಸ್ತು ಪೃಥಕ್ಸರ್ವೇ ಸ್ವಬುದ್ಧಿವಶವರ್ತಿನಃ||
“ರಣದಲ್ಲಿ ನಾವು ಒಬ್ಬನೇ ಮಹಾಬುದ್ಧಿಮತನನ್ನು ಕೇಳುತ್ತೇವೆ. ಆದರೆ ನೀವು ಪ್ರತಿಯೊಬ್ಬರೂ ತಮ್ಮದೇ ಬುದ್ಧಿಯಂತೆ ನಡೆದುಕೊಳ್ಳುತ್ತೀರಿ.”
05153009a ತತಸ್ತೇ ಬ್ರಾಹ್ಮಣಾಶ್ಚಕ್ರುರೇಕಂ ಸೇನಾಪತಿಂ ದ್ವಿಜಂ|
05153009c ನಯೇಷು ಕುಶಲಂ ಶೂರಮಜಯನ್ ಕ್ಷತ್ರಿಯಾಂಸ್ತತಃ||
ಆಗ ಬ್ರಾಹ್ಮಣರು ಶೂರನಾದ ನ್ಯಾಯಗಳಲ್ಲಿ ಕುಶಲನಾದ ಒಬ್ಬ ದ್ವಿಜನನ್ನು ಸೇನಾಪತಿಯನ್ನಾಗಿ ಮಾಡಿದರು. ಆಗ ಅವರು ಕ್ಷತ್ರಿಯರನ್ನು ಗೆದ್ದರು.
05153010a ಏವಂ ಯೇ ಕುಶಲಂ ಶೂರಂ ಹಿತೇ ಸ್ಥಿತಮಕಲ್ಮಷಂ|
05153010c ಸೇನಾಪತಿಂ ಪ್ರಕುರ್ವಂತಿ ತೇ ಜಯಂತಿ ರಣೇ ರಿಪೂನ್||
ಹೀಗೆ ಕುಶಲನೂ, ಶೂರನೂ, ಹಿತಸ್ಥಿತನೂ, ಅಕಲ್ಮಷನೂ ಆದವನನ್ನು ಸೇನಾಪತಿಯನ್ನಾಗಿ ಮಾಡಿ ರಣದಲ್ಲಿ ರಿಪುಗಳನ್ನು ಗೆಲ್ಲುತ್ತಾರೆ.
05153011a ಭವಾನುಶನಸಾ ತುಲ್ಯೋ ಹಿತೈಷೀ ಚ ಸದಾ ಮಮ|
05153011c ಅಸಂಹಾರ್ಯಃ ಸ್ಥಿತೋ ಧರ್ಮೇ ಸ ನಃ ಸೇನಾಪತಿರ್ಭವ||
ಉಶನಸನ ಸಮನಾಗಿರುವ, ಸದಾ ನನ್ನ ಹಿತೈಷಿಯಾಗಿರುವ, ಸಂಹಾರಗೊಳಿಸಲಾಗದ, ಧರ್ಮದಲ್ಲಿ ನೆಲೆಸಿರುವ ನೀನು ನಮ್ಮ ಸೇನಾಪತಿಯಾಗು.
05153012a ರಶ್ಮೀವತಾಮಿವಾದಿತ್ಯೋ ವೀರುಧಾಮಿವ ಚಂದ್ರಮಾಃ|
05153012c ಕುಬೇರ ಇವ ಯಕ್ಷಾಣಾಂ ಮರುತಾಮಿವ ವಾಸವಃ||
05153013a ಪರ್ವತಾನಾಂ ಯಥಾ ಮೇರುಃ ಸುಪರ್ಣಃ ಪತತಾಮಿವ|
05153013c ಕುಮಾರ ಇವ ಭೂತಾನಾಂ ವಸೂನಾಮಿವ ಹವ್ಯವಾಟ್||
05153014a ಭವತಾ ಹಿ ವಯಂ ಗುಪ್ತಾಃ ಶಕ್ರೇಣೇವ ದಿವೌಕಸಃ|
05153014c ಅನಾಧೃಷ್ಯಾ ಭವಿಷ್ಯಾಮಸ್ತ್ರಿದಶಾನಾಮಪಿ ಧ್ರುವಂ||
ಆದಿತ್ಯರಿಗೆ ಸೂರ್ಯನಂತೆ, ಔಷಧಗಳಿಗೆ ಚಂದ್ರನಂತೆ, ಯಕ್ಷರಿಗೆ ಕುಬೇರನಂತೆ, ಮರುತರಿಗೆ ವಾಸವನಂತೆ, ಪರ್ವತಗಳಿಗೆ ಮೇರುವಂತೆ, ಪಕ್ಷಿಗಳಿಗೆ ಗರುಡನಂತೆ, ಭೂತಗಳಿಗೆ ಕುಮಾರನಂತೆ, ವಸುಗಳಿಗೆ ಅಗ್ನಿಯಂತೆ ನೀನು ನಮಗೆ. ಶಕ್ರನಿಂದ ರಕ್ಷಿಸಲ್ಪಟ್ಟ ದಿವೌಕಸರಂತೆ ನಾವೂ ಕೂಡ ನಿನ್ನ ರಕ್ಷಣೆಯಲ್ಲಿ ಖಂಡಿತವಾಗಿ ತ್ರಿದಶರಿಗೆ ಕೂಡ ಅನಾಧೃಷರಾಗುತ್ತೇವೆ.
05153015a ಪ್ರಯಾತು ನೋ ಭವಾನಗ್ರೇ ದೇವಾನಾಮಿವ ಪಾವಕಿಃ|
05153015c ವಯಂ ತ್ವಾಮನುಯಾಸ್ಯಾಮಃ ಸೌರಭೇಯಾ ಇವರ್ಷಭಂ||
ಪಾವಕಿಯು ದೇವತೆಗಳನ್ನು ಹೇಗೋ ಹಾಗೆ ನೀನು ನಮ್ಮನ್ನು ಮುಂದಿದ್ದುಕೊಂಡು ನಡೆಸು. ವೃಷಭನನ್ನು ಕರುಗಳು ಹೇಗೋ ಹಾಗೆ ನಿನ್ನನ್ನು ನಾವು ಹಿಂಬಾಲಿಸುತ್ತೇವೆ.”
05153016 ಭೀಷ್ಮ ಉವಾಚ|
05153016a ಏವಮೇತನ್ಮಹಾಬಾಹೋ ಯಥಾ ವದಸಿ ಭಾರತ|
05153016c ಯಥೈವ ಹಿ ಭವಂತೋ ಮೇ ತಥೈವ ಮಮ ಪಾಂಡವಾಃ||
ಭೀಷ್ಮನು ಹೇಳಿದನು: “ಮಹಾಬಾಹೋ! ಭಾರತ! ನೀನು ಹೇಳಿದಂತೆಯೇ ಆಗಲಿ. ಆದರೆ ನನಗೆ ನೀನು ಹೇಗೋ ಹಾಗೆ ಪಾಂಡವರೂ ಕೂಡ.
05153017a ಅಪಿ ಚೈವ ಮಯ ಶ್ರೇಯೋ ವಾಚ್ಯಂ ತೇಷಾಂ ನರಾಧಿಪ|
05153017c ಯೋದ್ಧವ್ಯಂ ತು ತವಾರ್ಥಾಯ ಯಥಾ ಸ ಸಮಯಃ ಕೃತಃ||
ನಾನು ಅವರ ಶ್ರೇಯಸ್ಸನ್ನೂ ಬಯಸುತ್ತೇನೆ. ನರಾಧಿಪ! ಆದರೆ ನಿನಗೋಸ್ಕರ ಹೋರಾಡುತ್ತೇನೆಂದು ಮಾತುಕೊಡುತ್ತೇನೆ. ಒಪ್ಪಂದದಂತೆ ಮಾಡುತ್ತೇನೆ.
05153018a ನ ತು ಪಶ್ಯಾಮಿ ಯೋದ್ಧಾರಮಾತ್ಮನಃ ಸದೃಶಂ ಭುವಿ|
05153018c ಋತೇ ತಸ್ಮಾನ್ನರವ್ಯಾಘ್ರಾತ್ಕುಂತೀಪುತ್ರಾದ್ಧನಂಜಯಾತ್||
ಆ ನರವ್ಯಾಘ್ರ ಕುಂತೀಪುತ್ರ ಧನಂಜಯನನ್ನು ಬಿಟ್ಟು ಈ ಭುವಿಯಲ್ಲಿ ನನ್ನ ಸಮಾನನಾದ ಬೇರೆ ಯಾವ ಯೋದ್ಧಾರನನ್ನೂ ನಾನು ಕಂಡಿಲ್ಲ.
05153019a ಸ ಹಿ ವೇದ ಮಹಾಬಾಹುರ್ದಿವ್ಯಾನ್ಯಸ್ತ್ರಾಣಿ ಸರ್ವಶಃ|
05153019c ನ ತು ಮಾಂ ವಿವೃತೋ ಯುದ್ಧೇ ಜಾತು ಯುಧ್ಯೇತ ಪಾಂಡವಃ||
ಆ ಮಹಾಬಾಹುವಿಗೆ ಎಲ್ಲ ದಿವ್ಯಾಸ್ತ್ರಗಳೂ ತಿಳಿದಿವೆ. ಆದರೆ ಆ ಪಾಂಡವನು ನನ್ನೊಡನೆ ಮುಕ್ತವಾಗಿ ಯುದ್ಧಮಾಡಲು ಹಿಂಜರಿಯುತ್ತಾನೆ.
05153020a ಅಹಂ ಸ ಚ ಕ್ಷಣೇನೈವ ನಿರ್ಮನುಷ್ಯಮಿದಂ ಜಗತ್|
05153020c ಕುರ್ಯಾಂ ಶಸ್ತ್ರಬಲೇನೈವ ಸಸುರಾಸುರರಾಕ್ಷಸಂ||
ನನ್ನ ಶಸ್ತ್ರಬಲದಿಂದಲೇ ಈ ಸಸುರಾಸುರರಾಕ್ಷಸರೊಂದಿಗೆ ಈ ಜಗತ್ತನ್ನು ಒಂದೇ ಕ್ಷಣದಲ್ಲಿ ನಿರ್ಮನುಷ್ಯರನ್ನಾಗಿಸಬಲ್ಲೆ.
05153021a ನ ತ್ವೇವೋತ್ಸಾದನೀಯಾ ಮೇ ಪಾಂಡೋಃ ಪುತ್ರಾ ನರಾಧಿಪ|
05153021c ತಸ್ಮಾದ್ಯೋಧಾನ್ ಹನಿಷ್ಯಾಮಿ ಪ್ರಯೋಗೇಣಾಯುತಂ ಸದಾ||
ನರಾಧಿಪ! ಆದರೆ ಪಾಂಡುವಿನ ಪುತ್ರರನ್ನು ನಾಶಗೊಳಿಸಲು ನನಗೆ ಉತ್ಸಾಹವಿಲ್ಲ. ಆದುದರಿಂದ ಪ್ರತಿದಿನವೂ ನಾನು ಹತ್ತುಸಾವಿರ ಯೋಧರನ್ನು ಸಂಹರಿಸುತ್ತೇನೆ.
05153022a ಏವಮೇಷಾಂ ಕರಿಷ್ಯಾಮಿ ನಿಧನಂ ಕುರುನಂದನ|
05153022c ನ ಚೇತ್ತೇ ಮಾಂ ಹನಿಷ್ಯಂತಿ ಪೂರ್ವಮೇವ ಸಮಾಗಮೇ||
ಕುರುನಂದನ! ಅವರು ನನ್ನನ್ನು ಮೊದಲು ಕೊಲ್ಲದೇ ಇದ್ದರೆ ನಾನು ಅವರ ಸೇನೆಯನ್ನು ಹೀಗೆ ಸಂಹರಿಸುವುದನ್ನು ಮುಂದುವರಿಸಿಕೊಂಡೇ ಇರುತ್ತೇನೆ.
05153023a ಸೇನಾಪತಿಸ್ತ್ವಹಂ ರಾಜನ್ಸಮಯೇನಾಪರೇಣ ತೇ|
05153023c ಭವಿಷ್ಯಾಮಿ ಯಥಾಕಾಮಂ ತನ್ಮೇ ಶ್ರೋತುಮಿಹಾರ್ಹಸಿ||
ರಾಜನ್! ನಾನು ಸ್ವಯಂ ನಿನ್ನ ಸೇನಾಪತಿಯಾಗಬೇಕಾದರೆ ನಾನು ಬಯಸುವ ಇನ್ನೊಂದು ಒಪ್ಪಂದದ ವಿಷಯವಿದೆ. ಅದನ್ನೂ ನೀನು ಕೇಳಬೇಕು.
05153024a ಕರ್ಣೋ ವಾ ಯುಧ್ಯತಾಂ ಪೂರ್ವಮಹಂ ವಾ ಪೃಥಿವೀಪತೇ|
05153024c ಸ್ಪರ್ಧತೇ ಹಿ ಸದಾತ್ಯರ್ಥಂ ಸೂತಪುತ್ರೋ ಮಯಾ ರಣೇ||
ಪೃಥಿವೀಪತೇ! ಕರ್ಣನು ಮೊದಲು ಯುದ್ಧಮಾಡುತ್ತಾನೆ ಅಥವಾ ನಾನು. ಸೂತಪುತ್ರನು ಸದಾ ರಣದಲ್ಲಿ ನನ್ನೊಂದಿಗೆ ಸ್ಪರ್ಧಿಸುತ್ತಿರುತ್ತಾನೆ.”
05153025 ಕರ್ಣ ಉವಾಚ|
05153025a ನಾಹಂ ಜೀವತಿ ಗಾಂಗೇಯೇ ಯೋತ್ಸ್ಯೇ ರಾಜನ್ಕಥಂ ಚನ|
05153025c ಹತೇ ಭೀಷ್ಮೇ ತು ಯೋತ್ಸ್ಯಾಮಿ ಸಹ ಗಾಂಡೀವಧನ್ವನಾ||
ಕರ್ಣನು ಹೇಳಿದನು: “ರಾಜನ್! ಗಾಂಗೇಯನು ಜೀವಿಸಿರುವವರೆಗೆ ನಾನು ಯುದ್ಧಮಾಡುವುದಿಲ್ಲ. ಭೀಷ್ಮನು ಹತನಾದ ನಂತರವೇ ಗಾಂಡೀವಧನ್ವಿಯೊಂದಿಗೆ ಯುದ್ಧಮಾಡುತ್ತೇನೆ.””
05153026 ವೈಶಂಪಾಯನ ಉವಾಚ|
05153026a ತತಃ ಸೇನಾಪತಿಂ ಚಕ್ರೇ ವಿಧಿವದ್ಭೂರಿದಕ್ಷಿಣಂ|
05153026c ಧೃತರಾಷ್ಟ್ರಾತ್ಮಜೋ ಭೀಷ್ಮಂ ಸೋಽಭಿಷಿಕ್ತೋ ವ್ಯರೋಚತ||
ವೈಶಂಪಾಯನನು ಹೇಳಿದನು: “ಆಗ ಧೃತರಾಷ್ಟ್ರಾತ್ಮಜನು ಭೂರಿದಕ್ಷಿಣ ಭೀಷ್ಮನನ್ನು ಸೇನಾಪತಿಯನ್ನಾಗಿ ಮಾಡಿದನು. ಅಭಿಷೇಕಿಸಿಸಲ್ಪಟ್ಟ ಭೀಷ್ಮನು ಮಿಂಚಿದನು.
05153027a ತತೋ ಭೇರೀಶ್ಚ ಶಂಖಾಂಶ್ಚ ಶತಶಶ್ಚೈವ ಪುಷ್ಕರಾನ್|
05153027c ವಾದಯಾಮಾಸುರವ್ಯಗ್ರಾಃ ಪುರುಷಾ ರಾಜಶಾಸನಾತ್||
ಆಗ ರಾಜಶಾಸನದಂತೆ ನೂರಾರು ಭೇರೀ-ಶಂಖಗಳು ನಿನಾದಿತಗೊಂಡವು, ವಾದ್ಯಗಾರರು ಸಂತೋಷದಿಂದ ವಾದ್ಯಗಳನ್ನು ನುಡಿಸಿದರು.
05153028a ಸಿಂಹನಾದಾಶ್ಚ ವಿವಿಧಾ ವಾಹನಾನಾಂ ಚ ನಿಸ್ವನಾಃ|
05153028c ಪ್ರಾದುರಾಸನ್ನನಭ್ರೇ ಚ ವರ್ಷಂ ರುಧಿರಕರ್ದಮಂ||
ಸಿಂಹನಾದಗಳು ಮತ್ತು ವಿವಿಧ ವಾಹನಗಳ ನಿಸ್ವನಗಳೂ ಕೇಳಿಬಂದವು. ಆಕಾಶವು ತಿಳಿಯಾಗಿದ್ದರೂ ರಕ್ತದ ಮಳೆಸುರಿದು ಕೆಸರುಮಾಡಿತು.
05153029a ನಿರ್ಘಾತಾಃ ಪೃಥಿವೀಕಂಪಾ ಗಜಬೃಂಹಿತನಿಸ್ವನಾಃ|
05153029c ಆಸಂಶ್ಚ ಸರ್ವಯೋಧಾನಾಂ ಪಾತಯಂತೋ ಮನಾಂಸ್ಯುತ||
ಸುಂಟರಗಾಳಿಗಳು, ಭೂಕಂಪ ಮತ್ತು ಆನೆಗಳ ಘೀಂಕಾರಗಳು ಎಲ್ಲ ಯೋಧರ ಮನಸ್ಸುಗಳನ್ನು ಬೀಳಿಸಿದವು.
05153030a ವಾಚಶ್ಚಾಪ್ಯಶರೀರಿಣ್ಯೋ ದಿವಶ್ಚೋಲ್ಕಾಃ ಪ್ರಪೇದಿರೇ|
05153030c ಶಿವಾಶ್ಚ ಭಯವೇದಿನ್ಯೋ ನೇದುರ್ದೀಪ್ತಸ್ವರಾ ಭೃಶಂ||
ಆಕಾಶದಿಂದ ಅಶರೀರವಾಣಿಗಳು ಕೇಳಿಸಿದವು. ದಿವದಲ್ಲಿ ಉಲ್ಕೆಗಳು ಬೆಳಗಿದವು. ನರಿಗಳು ಭಯದಿಂದ ಕೂಗಿ ಬರಲಿರುವ ಘೋರ ಘಟನೆಗಳನ್ನು ಸೂಚಿಸಿದವು.
05153031a ಸೇನಾಪತ್ಯೇ ಯದಾ ರಾಜಾ ಗಾಂಗೇಯಮಭಿಷಿಕ್ತವಾನ್|
05153031c ತದೈತಾನ್ಯುಗ್ರರೂಪಾಣಿ ಅಭವಂ ಶತಶೋ ನೃಪ||
ನೃಪ! ರಾಜನು ಗಾಂಗೇಯನನ್ನು ಸೇನಾಪತಿಯನ್ನಾಗಿ ಅಭಿಷೇಕಿಸಿದಾಗ ಇವು ಮತ್ತು ಇನ್ನೂ ಇತರ ನೂರಾರು ಉಗ್ರರೂಪಿ ಶಕುನಗಳುಂಟಾದವು.
05153032a ತತಃ ಸೇನಾಪತಿಂ ಕೃತ್ವಾ ಭೀಷ್ಮಂ ಪರಬಲಾರ್ದನಂ|
05153032c ವಾಚಯಿತ್ವಾ ದ್ವಿಜಶ್ರೇಷ್ಠಾನ್ನಿಷ್ಕೈರ್ಗೋಭಿಶ್ಚ ಭೂರಿಶಃ||
05153033a ವರ್ಧಮಾನೋ ಜಯಾಶೀರ್ಭಿರ್ನಿರ್ಯಯೌ ಸೈನಿಕೈರ್ವೃತಃ|
05153033c ಆಪಗೇಯಂ ಪುರಸ್ಕೃತ್ಯ ಭ್ರಾತೃಭಿಃ ಸಹಿತಸ್ತದಾ||
05153033e ಸ್ಕಂಧಾವಾರೇಣ ಮಹತಾ ಕುರುಕ್ಷೇತ್ರಂ ಜಗಾಮ ಹ||
ಆಗ ಅವನು ಪರಬಲಾರ್ದನ ಭೀಷ್ಮನನ್ನು ಸೇನಾಪತಿಯನ್ನಾಗಿ ಮಾಡಿ, ಗೋವು, ನಾಣ್ಯ ಮೊದಲಾದ ದಕ್ಷಿಣೆಗಳನ್ನಿತ್ತು ದ್ವಿಜಶ್ರೇಷ್ಠರಿಂದ ಆಶೀರ್ವಚನಗಳನ್ನು ಹೇಳಿಸಿ, ಜಯದ ಕಳೆಯನ್ನು ಹೆಚ್ಚಿಸಿಕೊಳ್ಳುತ್ತಾ, ಸೈನಿಕರಿಂದ ಸುತ್ತುವರೆಯಲ್ಪಟ್ಟು, ನದಿಯ ಮಗನನ್ನು ಮುಂದಿರಿಸಿಕೊಂಡು, ಸಹೋದರರೊಂದಿಗೆ ಮಹಾ ಕುರುಕ್ಷೇತ್ರಕ್ಕೆ ಹೊರಟನು.
05153034a ಪರಿಕ್ರಮ್ಯ ಕುರುಕ್ಷೇತ್ರಂ ಕರ್ಣೇನ ಸಹ ಕೌರವಃ|
05153034c ಶಿಬಿರಂ ಮಾಪಯಾಮಾಸ ಸಮೇ ದೇಶೇ ನರಾಧಿಪಃ||
ಕರ್ಣನೊಂದಿಗೆ ಕುರುಕ್ಷೇತ್ರಕ್ಕೆ ಸುತ್ತುಹಾಕಿ ನರಾಧಿಪ ಕೌರವನು ಸಮ ಪ್ರದೇಶದಲ್ಲಿ ಶಿಬಿರವನ್ನು ಅಳೆಯಿಸಿದನು.
05153035a ಮಧುರಾನೂಷರೇ ದೇಶೇ ಪ್ರಭೂತಯವಸೇಂಧನೇ|
05153035c ಯಥೈವ ಹಾಸ್ತಿನಪುರಂ ತದ್ವಚ್ಚಿಬಿರಮಾಬಭೌ||
ಮಧುರವಾದ ವಿಪುಲ ಪ್ರದೇಶದಲ್ಲಿ ಶಿಬಿರಗಳನ್ನು ನಿರ್ಮಿಸಲಾಯಿತು. ಅದು ಹಸ್ತಿನಾಪುರದಷ್ಟೇ ಸುಂದರವಾಗಿ ತೋರುತ್ತಿತ್ತು.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭೀಷ್ಮಾಭಿಷೇಚನ ಪರ್ವಣಿ ಭೀಷ್ಮಸೈನಾಪತ್ಯೇ ತ್ರಿಪಂಚಾಶದಧಿಕಶತತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭೀಷ್ಮಾಭಿಷೇಚನ ಪರ್ವದಲ್ಲಿ ಭೀಷ್ಮಸೈನಾಪತ್ಯದಲ್ಲಿ ನೂರಾಐವತ್ಮೂರನೆಯ ಅಧ್ಯಾಯವು.