Udyoga Parva: Chapter 150

ಉದ್ಯೋಗ ಪರ್ವ: ಸೈನ್ಯನಿರ್ಯಾಣ ಪರ್ವ

೧೫೦

ಪ್ರಯಾಣಕ್ಕೆ ಕೌರವ ಸೇನೆಯ ಸಿದ್ಧತೆ

ಕೃಷ್ಣನು ಹೊರಟುಹೋದ ನಂತರ ದುರ್ಯೋಧನನು ಯುದ್ಧದ ತಯಾರಿ ನಡೆಸಿ ಮರುದಿನವೇ ಸೇನೆಯು ಕುರುಕ್ಷೇತ್ರಕ್ಕೆ ಹೊರಡಬೇಕೆಂದು ಆಜ್ಞಾಪಿಸಿದುದು (೧-೧೬). ಹಸ್ತಿನಾಪುರದಲ್ಲಿ ನಡೆದ ಯುದ್ಧ ಸಿದ್ಧತೆ (೧೭-೨೭).

05150001 ಜನಮೇಜಯ ಉವಾಚ|

05150001a ಯುಧಿಷ್ಠಿರಂ ಸಹಾನೀಕಮುಪಯಾಂತಂ ಯುಯುತ್ಸಯಾ|

05150001c ಸಂನಿವಿಷ್ಟಂ ಕುರುಕ್ಷೇತ್ರೇ ವಾಸುದೇವೇನ ಪಾಲಿತಂ||

05150002a ವಿರಾಟದ್ರುಪದಾಭ್ಯಾಂ ಚ ಸಪುತ್ರಾಭ್ಯಾಂ ಸಮನ್ವಿತಂ|

05150002c ಕೇಕಯೈರ್ವೃಷ್ಣಿಭಿಶ್ಚೈವ ಪಾರ್ಥಿವೈಃ ಶತಶೋ ವೃತಂ||

05150003a ಮಹೇಂದ್ರಮಿವ ಚಾದಿತ್ಯೈರಭಿಗುಪ್ತಂ ಮಹಾರಥೈಃ|

05150003c ಶ್ರುತ್ವಾ ದುರ್ಯೋಧನೋ ರಾಜಾ ಕಿಂ ಕಾರ್ಯಂ ಪ್ರತ್ಯಪದ್ಯತ||

ಜನಮೇಜಯನು ಹೇಳಿದನು: “ವಾಸುದೇವನಿಂದ ಪಾಲಿತನಾಗಿ, ವಿರಾಟ-ದ್ರುಪದರು ಮತ್ತು ಅವರ ಮಕ್ಕಳೊಡಗೂಡಿ, ಮಹೇಂದ್ರನು ಆದಿತ್ಯರಿಂದ ಕಾಯಲ್ಪಡುವಂತೆ ಕೇಕಯ-ವೃಷ್ಣಿಗಳ ನೂರಾರು ಮಹಾರಥ ಪಾರ್ಥಿವರಿಂದ ಸುತ್ತುವರೆಯಲ್ಪಟ್ಟು, ಯುಧಿಷ್ಠಿರನು ಯುದ್ಧಮಾಡಲು ತನ್ನ ಸೇನೆಯೊಂದಿಗೆ ಬಂದು ಕುರುಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾನೆ ಎಂದು ಕೇಳಿ ರಾಜಾ ದುರ್ಯೋಧನನು ಏನು ಮಾಡಿದನು?

05150004a ಏತದಿಚ್ಚಾಮ್ಯಹಂ ಶ್ರೋತುಂ ವಿಸ್ತರೇಣ ತಪೋಧನ|

05150004c ಸಂಭ್ರಮೇ ತುಮುಲೇ ತಸ್ಮಿನ್ಯದಾಸೀತ್ಕುರುಜಾಂಗಲೇ||

ತಪೋಧನ! ಕುರುಜಾಂಗಲದಲ್ಲಿ ನಡೆದ ತುಮುಲ-ಸಂಭ್ರಮಗಳನ್ನು ವಿಸ್ತಾರವಾಗಿ ಕೇಳಲು ಬಯಸುತ್ತೇನೆ.

05150005a ವ್ಯಥಯೇಯುರ್ಹಿ ದೇವಾನಾಂ ಸೇನಾಮಪಿ ಸಮಾಗಮೇ|

05150005c ಪಾಂಡವಾ ವಾಸುದೇವಶ್ಚ ವಿರಾಟದ್ರುಪದೌ ತಥಾ||

05150006a ಧೃಷ್ಟದ್ಯುಮ್ನಶ್ಚ ಪಾಂಚಾಲ್ಯಃ ಶಿಖಂಡೀ ಚ ಮಹಾರಥಃ|

05150006c ಯುಯುಧಾನಶ್ಚ ವಿಕ್ರಾಂತೋ ದೇವೈರಪಿ ದುರಾಸದಃ||

ದೇವಸೇನೆಯೊಂದಿಗೆ ದೇವತೆಗಳೂ ಈ ದುರಾಸದ ಪಾಂಡವರು, ವಾಸುದೇವ, ವಿರಾಟ, ದ್ರುಪದ, ಪಾಂಚಾಲ್ಯ ಧೃಷ್ಟದ್ಯುಮ್ನ, ಮಹಾರಥಿ ಶಿಖಂಡೀ ಮತ್ತು ವಿಕ್ರಾಂತ ಯುಯುಧಾನರನ್ನು ಸಮರದಲ್ಲಿ ಎದುರಿಸುವ ಮೊದಲು ತತ್ತರಿಸಿಯಾರು.

05150007a ಏತದಿಚ್ಚಾಮ್ಯಹಂ ಶ್ರೋತುಂ ವಿಸ್ತರೇಣ ತಪೋಧನ|

05150007c ಕುರೂಣಾಂ ಪಾಂಡವಾನಾಂ ಚ ಯದ್ಯದಾಸೀದ್ವಿಚೇಷ್ಟಿತಂ||

ತಪೋದನ! ಕುರು ಮತ್ತು ಪಾಂಡವರು ಆಗ ಮಾಡಿದುದನ್ನು ವಿಸ್ತಾರವಾಗಿ ಕೇಳಲು ಬಯಸುತ್ತೇನೆ.”

05150008 ವೈಶಂಪಾಯನ ಉವಾಚ|

05150008a ಪ್ರತಿಯಾತೇ ತು ದಾಶಾರ್ಹೇ ರಾಜಾ ದುರ್ಯೋಧನಸ್ತದಾ|

05150008c ಕರ್ಣಂ ದುಃಶಾಸನಂ ಚೈವ ಶಕುನಿಂ ಚಾಬ್ರವೀದಿದಂ||

ವೈಶಂಪಾಯನನು ಹೇಳಿದನು: “ದಾಶಾರ್ಹನು ಹೊರಟು ಹೋದ ನಂತರ ರಾಜಾ ದುರ್ಯೋಧನನು ಕರ್ಣ, ದುಃಶಾಸನ ಮತ್ತು ಶಕುನಿಯರಿಗೆ ಹೇಳಿದನು:

05150009a ಅಕೃತೇನೈವ ಕಾರ್ಯೇಣ ಗತಃ ಪಾರ್ಥಾನಧೋಕ್ಷಜಃ|

05150009c ಸ ಏನಾನ್ಮನ್ಯುನಾವಿಷ್ಟೋ ಧ್ರುವಂ ವಕ್ಷ್ಯತ್ಯಸಂಶಯಂ||

“ಅಧೋಕ್ಷಜನು ಕಾರ್ಯವು ನಡೆಯಲಿಲ್ಲವೆಂದು ಪಾರ್ಥರಲ್ಲಿಗೆ ಹೋಗಿ ಸಿಟ್ಟಿನಿಂದ ಖಂಡಿತವಾಗಿಯೂ ಮಾತನಾಡಿರುತ್ತಾನೆ. ಇದರಲ್ಲಿ ಸಂಶಯವಿಲ್ಲ.

05150010a ಇಷ್ಟೋ ಹಿ ವಾಸುದೇವಸ್ಯ ಪಾಂಡವೈರ್ಮಮ ವಿಗ್ರಹಃ|

05150010c ಭೀಮಸೇನಾರ್ಜುನೌ ಚೈವ ದಾಶಾರ್ಹಸ್ಯ ಮತೇ ಸ್ಥಿತೌ||

ಏಕೆಂದರೆ ವಾಸುದೇವನು ಪಾಂಡವರು ಮತ್ತು ನನ್ನ ನಡುವೆ ಯುದ್ಧವಾಗಲೆಂದೇ ಇಷ್ಟಪಡುತ್ತಾನೆ. ಭೀಮಾರ್ಜುನರೂ ಕೂಡ ದಾಶಾರ್ಹನ ಅಭಿಮತವನ್ನು ಒಪ್ಪಿಕೊಳ್ಳುತ್ತಾರೆ.

05150011a ಅಜಾತಶತ್ರುರಪ್ಯದ್ಯ ಭೀಮಾರ್ಜುನವಶಾನುಗಃ|

05150011c ನಿಕೃತಶ್ಚ ಮಯಾ ಪೂರ್ವಂ ಸಹ ಸರ್ವೈಃ ಸಹೋದರೈಃ||

ಅಜಾತಶತ್ರುವು ಇಂದು ಭೀಮಾರ್ಜುನರ ವಶದಲ್ಲಿ ಬಂದು ಅವರನ್ನು ಅನುಸರಿಸುತ್ತಾನೆ. ನಾನು ಹಿಂದೆ ಆ ಎಲ್ಲ ಸಹೋದರರೊಂದಿಗೆ ಕೆಟ್ಟದ್ದಾಗಿ ವ್ಯವಹರಿಸಿದ್ದೇನೆ.

05150012a ವಿರಾಟದ್ರುಪದೌ ಚೈವ ಕೃತವೈರೌ ಮಯಾ ಸಹ|

05150012c ತೌ ಚ ಸೇನಾಪ್ರಣೇತಾರೌ ವಾಸುದೇವವಶಾನುಗೌ||

ವಿರಾಟ-ದ್ರುಪದರಿಗೂ ಕೂಡ ನನ್ನ ಮೇಲೆ ವೈರವಿತ್ತು. ಆ ಇಬ್ಬರು ಸೇನಾಪ್ರಣೇತಾರರೂ ವಾಸುದೇವನ ವಶಾನುಗರು.

05150013a ಭವಿತಾ ವಿಗ್ರಹಃ ಸೋಽಯಂ ತುಮುಲೋ ಲೋಮಹರ್ಷಣ|

05150013c ತಸ್ಮಾತ್ಸಾಂಗ್ರಾಮಿಕಂ ಸರ್ವಂ ಕಾರಯಧ್ವಮತಂದ್ರಿತಾಃ||

ತುಮುಲವೂ ಲೋಮಹರ್ಷಣವೂ ಆದ ಯುದ್ಧವಾಗಲಿದೆ. ಆದುದರಿಂದ ತೆರವಿಲ್ಲದ ಎಲ್ಲ ಸಿದ್ಧತೆಗಳೂ ನಡೆಯಲಿ.

05150014a ಶಿಬಿರಾಣಿ ಕುರುಕ್ಷೇತ್ರೇ ಕ್ರಿಯಂತಾಂ ವಸುಧಾಧಿಪಾಃ|

05150014c ಸುಪರ್ಯಾಪ್ತಾವಕಾಶಾನಿ ದುರಾದೇಯಾನಿ ಶತ್ರುಭಿಃ||

05150015a ಆಸನ್ನಜಲಕಾಷ್ಠಾನಿ ಶತಶೋಽಥ ಸಹಸ್ರಶಃ|

05150015c ಅಚ್ಚೇದ್ಯಾಹಾರಮಾರ್ಗಾಣಿ ರತ್ನೋಚ್ಚಯಚಿತಾನಿ ಚ||

05150015e ವಿವಿಧಾಯುಧಪೂರ್ಣಾನಿ ಪತಾಕಾಧ್ವಜವಂತಿ ಚ||

ಶತ್ರುಗಳು ಸುಲಭವಾಗಿ ಆಕ್ರಮಣಿಸಲು ಅವಕಾಶವಿಲ್ಲದಂತೆ ವಸುಧಾಧಿಪರು ಕುರುಕ್ಷೇತ್ರದಲ್ಲಿ ಶಿಬಿರಗಳನ್ನು ನಿರ್ಮಿಸಿಕೊಳ್ಳಲಿ. ನೂರಾರು ಸಹಸ್ರಾರು ನೀರು-ಕಟ್ಟಿಗೆಗಳ ಸೌಕರ್ಯವಾಗಲಿ. ರತ್ನಗಳು, ಸಂಪತ್ತು, ವಿವಿಧ ಆಯುಧಗಳು, ಪತಾಕ-ಧ್ವಜಗಳನ್ನು ತಲುಪಿಸುವ ಅವಿಚ್ಛಿನ್ನ ಮಾರ್ಗವು ತಯಾರಿಸಲ್ಪಡಲಿ.

05150016a ಸಮಾಶ್ಚ ತೇಷಾಂ ಪಂಥಾನಃ ಕ್ರಿಯಂತಾಂ ನಗರಾದ್ಬಹಿಃ|

05150016c ಪ್ರಯಾಣಂ ಘುಷ್ಯತಾಮದ್ಯ ಶ್ವೋಭೂತ ಇತಿ ಮಾಚಿರಂ||

ನಗರದಿಂದ ಹೊರಗೆ ಹೋಗುವ ದಾರಿಗಳನ್ನು ಸಮಮಾಡಲಿ. ನಾಳೆಯೇ ಪ್ರಯಾಣವೆಂದು ಘೋಷಿಸಿರಿ.”

05150017a ತೇ ತಥೇತಿ ಪ್ರತಿಜ್ಞಾಯ ಶ್ವೋಭೂತೇ ಚಕ್ರಿರೇ ತಥಾ|

05150017c ಹೃಷ್ಟರೂಪಾ ಮಹಾತ್ಮಾನೋ ವಿನಾಶಾಯ ಮಹೀಕ್ಷಿತಾಂ||

“ಹಾಗೆಯೇ ಮಾಡುತ್ತೇವೆ!” ಎಂದು ಭರವಸೆಯನ್ನು ನೀಡಿ ಅವರು ಕಾರ್ಯನಿರತರಾದರು. ಮರುದಿನ ಹೃಷ್ಟರೂಪರಾಗಿ ಆ ಮಹಾತ್ಮರು ಮಹೀಕ್ಷಿತರ ವಿನಾಶಕ್ಕೆ ಹೊರಟರು.

05150018a ತತಸ್ತೇ ಪಾರ್ಥಿವಾಃ ಸರ್ವೇ ತಚ್ಚ್ರುತ್ವಾ ರಾಜಶಾಸನಂ|

05150018c ಆಸನೇಭ್ಯೋ ಮಹಾರ್ಹೇಭ್ಯ ಉದತಿಷ್ಠನ್ನಮರ್ಷಿತಾಃ||

05150019a ಬಾಹೂನ್ಪರಿಘಸಂಕಾಶಾನ್ಸಂಸ್ಪೃಶಂತಃ ಶನೈಃ ಶನೈಃ|

05150019c ಕಾಂಚನಾಂಗದದೀಪ್ತಾಂಶ್ಚ ಚಂದನಾಗರುಭೂಷಿತಾನ್||

ಆ ರಾಜಶಾಸನವನ್ನು ಕೇಳಿ ಪಾರ್ಥಿವರೆಲ್ಲರೂ ಉತ್ಸಾಹದಿಂದ ಬೆಲೆಬಾಳುವ ಆಸನಗಳಿಂದ ಮೇಲೆದ್ದು, ನಿಧಾನವಾಗಿ ಪರಿಘಗಳಂತಿದ್ದ ಕಾಂಚನ ಅಂಗದಗಳನ್ನು ಧರಿಸಿದ್ದ, ಚಂದನ ಅಗರುಗಳಿಂದ ಭೂಷಿತವಾದ ತಮ್ಮ ಬಾಹುಗಳನ್ನು ಮುಟ್ಟಿಕೊಂಡರು.

05150020a ಉಷ್ಣೀಷಾಣಿ ನಿಯಚ್ಚಂತಃ ಪುಂಡರೀಕನಿಭೈಃ ಕರೈಃ|

05150020c ಅಂತರೀಯೋತ್ತರೀಯಾಣಿ ಭೂಷಣಾನಿ ಚ ಸರ್ವಶಃ||

ಪುಂಡರೀಕಗಳಂತಿದ್ದ ತಮ್ಮ ಕೈಗಳಿಂದ ಮುಂಡಾಸುಗಳನ್ನು ಕಟ್ಟಿಕೊಂಡು, ಅಂತರೀಯ-ಉತ್ತರೀಯಗಳನ್ನೂ ಎಲ್ಲ ಭೂಷಣಗಳನ್ನೂ ತೊಟ್ಟುಕೊಂಡರು.

05150021a ತೇ ರಥಾನ್ರಥಿನಃ ಶ್ರೇಷ್ಠಾ ಹಯಾಂಶ್ಚ ಹಯಕೋವಿದಾಃ|

05150021c ಸಜ್ಜಯಂತಿ ಸ್ಮ ನಾಗಾಂಶ್ಚ ನಾಗಶಿಕ್ಷಾಸು ನಿಷ್ಠಿತಾಃ||

ಅವರ ಸಾರಥಿ ಶ್ರೇಷ್ಠರು ರಥಗಳನ್ನೂ, ಹಯಕೋವಿದರು ಕುದುರೆಗಳನ್ನೂ, ನಿಷ್ಠೆಯುಳ್ಳ ಮಾವುತರು ಆನೆಗಳನ್ನೂ ಸಜ್ಜುಗೊಳಿಸಿದರು.

05150022a ಅಥ ವರ್ಮಾಣಿ ಚಿತ್ರಾಣಿ ಕಾಂಚನಾನಿ ಬಹೂನಿ ಚ|

05150022c ವಿವಿಧಾನಿ ಚ ಶಸ್ತ್ರಾಣಿ ಚಕ್ರುಃ ಸಜ್ಜಾನಿ ಸರ್ವಶಃ||

ಅನಂತರ ಬಹಳಷ್ಟು ಬಣ್ಣ ಬಣ್ಣದ ಕಾಂಚನ ಕವಚಗಳನ್ನು ಮತ್ತು ಎಲ್ಲ ವಿವಿಧ ಶಸ್ತ್ರಗಳನ್ನೂ ಸಜ್ಜುಗೊಳಿಸಿದರು.

05150023a ಪದಾತಯಶ್ಚ ಪುರುಷಾಃ ಶಸ್ತ್ರಾಣಿ ವಿವಿಧಾನಿ ಚ|

05150023c ಉಪಜಹ್ರುಃ ಶರೀರೇಷು ಹೇಮಚಿತ್ರಾಣ್ಯನೇಕಶಃ||

ಪದಾತಿ ಪುರುಷರು ವಿವಿಧ ಶಸ್ತ್ರಗಳನ್ನೂ ಬಂಗಾರದ ಚಿತ್ರಗಳನ್ನುಳ್ಳ ಕವಚಗಳನ್ನೂ ಧರಿಸಿದರು.

05150024a ತದುತ್ಸವ ಇವೋದಗ್ರಂ ಸಂಪ್ರಹೃಷ್ಟನರಾವೃತಂ|

05150024c ನಗರಂ ಧಾರ್ತರಾಷ್ಟ್ರಸ್ಯ ಭಾರತಾಸೀತ್ಸಮಾಕುಲಂ||

ಭಾರತ! ಧಾರ್ತರಾಷ್ಟ್ರನ ಆ ನಗರವು ಉತ್ಸವದ ತಯಾರಿಯಲ್ಲಿರುವ ಸಂಪ್ರಹೃಷ್ಟ ಜನಸಂದಣಿಯಿಂದ ತುಂಬಿಹೋಗಿತ್ತು.

05150025a ಜನೌಘಸಲಿಲಾವರ್ತೋ ರಥನಾಗಾಶ್ವಮೀನವಾನ್|

05150025c ಶಂಖದುಂದುಭಿನಿರ್ಘೋಷಃ ಕೋಶಸಂಚಯರತ್ನವಾನ್||

05150026a ಚಿತ್ರಾಭರಣವರ್ಮೋರ್ಮಿಃ ಶಸ್ತ್ರನಿರ್ಮಲಫೇನವಾನ್|

05150026c ಪ್ರಾಸಾದಮಾಲಾದ್ರಿವೃತೋ ರಥ್ಯಾಪಣಮಹಾಹ್ರದಃ||

05150027a ಯೋಧಚಂದ್ರೋದಯೋದ್ಭೂತಃ ಕುರುರಾಜಮಹಾರ್ಣವಃ|

05150027c ಅದೃಶ್ಯತ ತದಾ ರಾಜಂಶ್ಚಂದ್ರೋದಯ ಇವಾರ್ಣವಃ||

ರಾಜನ್! ಕುರುರಾಜ! ಜನಸಂದಣಿಯೆಂಬ ನೀರಿನಿಂದ, ರಥ-ಆನೆಗಳೆಂಬ ಮೀನುಗಳಿಂದ, ಶಂಖದುಂದುಭಿಗಳ ನಿರ್ಘೋಷದಿಂದ, ಕೋಶಸಂಚಯ ರತ್ನಗಳಿಂದ, ಚಿತ್ರಾಭರಣಗಳೆಂಬ ಅಲೆಗಳಿಂದ, ಶುಭ್ರ ಶಸ್ತ್ರಗಳೆಂಬ ನೊರೆಯಿಂದ, ಕರಾವಳಿಯ ಪರ್ವತಗಳಂತಿರುವ ಕಟ್ಟಡಗಳ ಸರಮಾಲೆಯಿಂದ ಆವೃತವಾಗಿ, ರಸ್ತೆ-ಮಾರುಕಟ್ಟೆಗಳ ಮಹಾಹ್ರದಗಳಿಂದ, ಉದಯಿಸುತ್ತಿರುವ ಚಂದ್ರನಂತಿರುವ ಯೋಧರಿಂದ ಅದು ಚಂದ್ರೋದಯದ ಸಮಯದಲ್ಲಿನ ಮಹಾಸಾಗರದಂತೆ ಕಂಡುಬಂದಿತು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೈನ್ಯನಿರ್ಯಾಣ ಪರ್ವಣಿ ದುರ್ಯೋಧನಸೈನ್ಯಸಜ್ಜನಕರಣೇ ಪಂಚಾಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೈನ್ಯನಿರ್ಯಾಣ ಪರ್ವದಲ್ಲಿ ದುರ್ಯೋಧನಸೈನ್ಯಸಜ್ಜನಕರಣದಲ್ಲಿ ನೂರಾಐವತ್ತನೆಯ ಅಧ್ಯಾಯವು.

Image result for flowers against white background

Comments are closed.