ಉದ್ಯೋಗ ಪರ್ವ: ಭಗವದ್ಯಾನ ಪರ್ವ
೧೨೯
ಕುರುಸಭೆಯಲ್ಲಿ ಶ್ರೀಕೃಷ್ಣನ ವಿಶ್ವರೂಪ ದರ್ಶನ
ತಾನೊಬ್ಬನೇ ಇದ್ದೇನೆಂದು ತಿಳಿದುಕೊಳ್ಳಬೇಡವೆಂದು ದುರ್ಯೋಧನನಿಗೆ ಹೇಳಿ ಜೋರಾಗಿ ನಕ್ಕು ಕೃಷ್ಣನು ತನ್ನ ವಿಶ್ವರೂಪವನ್ನು ಕುರುಸಭೆಯಲ್ಲಿ ಪ್ರಕಟಪಡಿಸಿದುದು (೧-೧೫). ಕುರುಸಭೆಯು ದಿಗ್ಭ್ರಮೆಗೊಳ್ಳಲು ತನ್ನ ನಿಜಸ್ವರೂಪವನ್ನು ಹಿಂತೆಗೆದುಕೊಂಡು ಋಷಿಗಳ ಅಪ್ಪಣೆಪಡೆದು ಸಾತ್ಯಕಿ-ಕೃತವರ್ಮರೊಡನೆ ಅವನು ಸಭೆಯಿಂದ ಹೊರಬಂದುದು (೧೬-೧೮). ಹೊರಟುಹೋಗುತ್ತಿದ್ದ ಕೃಷ್ಣನನ್ನು ಹಿಂಬಾಲಿಸಿ ಹೋಗಿ, ಧೃತರಾಷ್ಟ್ರನು ತನ್ನ ಅಸಹಾಯಕತೆಯನ್ನು ಹೇಳಿಕೊಂಡು ತನ್ನನ್ನು ಶಂಕಿಸಬಾರದೆಂದು ಹೇಳಲು ಕೃಷ್ಣನು ಅವರಿಂದ ಬೀಳ್ಕೊಂಡು ಕುಂತಿಯನ್ನು ಕಾಣಲು ಹೋದುದು (೧೯-೩೪).
05129001 ವೈಶಂಪಾಯನ ಉವಾಚ|
05129001a ವಿದುರೇಣೈವಮುಕ್ತೇ ತು ಕೇಶವಃ ಶತ್ರುಪೂಗಹಾ|
05129001c ದುರ್ಯೋಧನಂ ಧಾರ್ತರಾಷ್ಟ್ರಮಭ್ಯಭಾಷತ ವೀರ್ಯವಾನ್||
ವೈಶಂಪಾಯನನು ಹೇಳಿದನು: “ವಿದುರನು ಹೀಗೆ ಹೇಳಲು ಶತ್ರುಪೂಗಹ ವೀರ್ಯವಾನ್ ಕೇಶವನು ಧಾರ್ತರಾಷ್ಟ್ರ ದುರ್ಯೋಧನನಿಗೆ ಹೇಳಿದನು.
05129002a ಏಕೋಽಹಮಿತಿ ಯನ್ಮೋಹಾನ್ಮನ್ಯಸೇ ಮಾಂ ಸುಯೋಧನ|
05129002c ಪರಿಭೂಯ ಚ ದುರ್ಬುದ್ಧೇ ಗ್ರಹೀತುಂ ಮಾಂ ಚಿಕೀರ್ಷಸಿ||
“ಸುಯೋಧನ! ನಾನು ಒಬ್ಬನೇ ಎಂದು ಮೋಹದಿಂದ ನೀನು ತಿಳಿದುಕೊಂಡಿದ್ದೀಯೆ. ಆದುದರಿಂದ ದುರ್ಬುದ್ಧೇ! ನನ್ನನ್ನು ಬಲವನ್ನುಪಯೋಗಿಸಿ ಸೆರೆಹಿಡಿಯಲು ಬಯಸುತ್ತಿರುವೆ.
05129003a ಇಹೈವ ಪಾಂಡವಾಃ ಸರ್ವೇ ತಥೈವಾಂಧಕವೃಷ್ಣಯಃ|
05129003c ಇಹಾದಿತ್ಯಾಶ್ಚ ರುದ್ರಾಶ್ಚ ವಸವಶ್ಚ ಮಹರ್ಷಿಭಿಃ||
ಇಲ್ಲಿಯೇ ಪಾಂಡವರೂ, ಹಾಗೆಯೇ ಎಲ್ಲ ಅಂಧಕ-ವೃಷ್ಣಿಯರೂ ಇದ್ದಾರೆ. ಇಲ್ಲಿಯೇ ಆದಿತ್ಯರೂ, ರುದ್ರರು, ವಸುಗಳೂ, ಮಹರ್ಷಿಗಳೂ ಇದ್ದಾರೆ!”
05129004a ಏವಮುಕ್ತ್ವಾ ಜಹಾಸೋಚ್ಚೈಃ ಕೇಶವಃ ಪರವೀರಹಾ|
05129004c ತಸ್ಯ ಸಂಸ್ಮಯತಃ ಶೌರೇರ್ವಿದ್ಯುದ್ರೂಪಾ ಮಹಾತ್ಮನಃ|
05129004e ಅಂಗುಷ್ಠಮಾತ್ರಾಸ್ತ್ರಿದಶಾ ಮುಮುಚುಃ ಪಾವಕಾರ್ಚಿಷಃ||
ಹೀಗೆ ಹೇಳಿ ಪರವೀರಹ ಕೇಶವನು ಜೋರಾಗಿ ನಕ್ಕನು. ಹೀಗೆ ಆ ಮಹಾತ್ಮ ಶೌರಿಯು ನಗುತ್ತಿದ್ದಂತೆ ಅವನಿಂದ ಬೆಂಕಿಯಂತೆ ಪ್ರಕಾಶಮಾನರಾದ ಅಂಗುಷ್ಠ ಮಾತ್ರದ ತ್ರಿದಶರು ಹೊರಹೊಮ್ಮಿದರು.
05129005a ತಸ್ಯ ಬ್ರಹ್ಮಾ ಲಲಾಟಸ್ಥೋ ರುದ್ರೋ ವಕ್ಷಸಿ ಚಾಭವತ್|
05129005c ಲೋಕಪಾಲಾ ಭುಜೇಷ್ವಾಸನ್ನಗ್ನಿರಾಸ್ಯಾದಜಾಯತ||
ಅವನ ಹಣೆಯಲ್ಲಿ ಬ್ರಹ್ಮನಿದ್ದನು. ಎದೆಯಲ್ಲಿ ರುದ್ರನು ಕಾಣಿಸಿಕೊಂಡನು. ಭುಜದಿಂದ ಲೋಕಪಾಲಕರು ಮತ್ತು ಮುಖದಿಂದ ಅಗ್ನಿಯು ಹೊರಬಂದರು.
05129006a ಆದಿತ್ಯಾಶ್ಚೈವ ಸಾಧ್ಯಾಶ್ಚ ವಸವೋಽಥಾಶ್ವಿನಾವಪಿ|
05129006c ಮರುತಶ್ಚ ಸಹೇಂದ್ರೇಣ ವಿಶ್ವೇದೇವಾಸ್ತಥೈವ ಚ|
05129006e ಬಭೂವುಶ್ಚೈವ ರೂಪಾಣಿ ಯಕ್ಷಗಂಧರ್ವರಕ್ಷಸಾಂ||
ಆದಿತ್ಯರು, ಸಾಧ್ಯರು, ವಸವರು, ಅಶ್ವಿನಿಯರು, ಮರುತರು, ಇಂದ್ರನೊಂದಿಗೆ ವಿಶ್ವೇದೇವರು, ಮತ್ತು ಯಕ್ಷ ಗಂಧರ್ವ ರಾಕ್ಷಸರ ರೂಪಗಳು ಕಂಡುಬಂದವು.
05129007a ಪ್ರಾದುರಾಸ್ತಾಂ ತಥಾ ದೋರ್ಭ್ಯಾಂ ಸಂಕರ್ಷಣಧನಂಜಯೌ|
05129007c ದಕ್ಷಿಣೇಽಥಾರ್ಜುನೋ ಧನ್ವೀ ಹಲೀ ರಾಮಶ್ಚ ಸವ್ಯತಃ||
ಅವನ ಎರಡು ತೋಳುಗಳಿಂದ ಸಂಕರ್ಷಣ-ಧನಂಜಯರು ಹೊರಬಂದರು. ಧನ್ವೀ ಅರ್ಜುನನು ಎಡಗಡೆಯಿಂದ ಮತ್ತು ಹಲಾಯುಧವನ್ನು ಹಿಡಿದ ರಾಮನು ಬಲಗಡೆಯಿಂದ.
05129008a ಭೀಮೋ ಯುಧಿಷ್ಠಿರಶ್ಚೈವ ಮಾದ್ರೀಪುತ್ರೌ ಚ ಪೃಷ್ಠತಃ|
05129008c ಅಂಧಕಾ ವೃಷ್ಣಯಶ್ಚೈವ ಪ್ರದ್ಯುಮ್ನಪ್ರಮುಖಾಸ್ತತಃ||
05129009a ಅಗ್ರೇ ಬಭೂವುಃ ಕೃಷ್ಣಸ್ಯ ಸಮುದ್ಯತಮಹಾಯುಧಾಃ|
ಭೀಮ, ಯುಧಿಷ್ಠಿರ, ಮತ್ತು ಮಾದ್ರೀಪುತ್ರರಿಬ್ಬರು ಅವನ ಬೆನ್ನಿನಿಂದ ಮತ್ತು ಪ್ರದ್ಯುಮ್ನನೇ ಮೊದಲಾದ ಅಂಧಕ ವೃಷ್ಣಿಯರು ಮುಖದಿಂದ ಹೊರಬಂದು ಮಹಾಯುಧಗಳನ್ನು ಹಿಡಿದು ಕೃಷ್ಣನ ಎದಿರು ಬಂದರು.
05129009c ಶಂಖಚಕ್ರಗದಾಶಕ್ತಿಶಾರ್ಮ್ಗಲಾಂಗಲನಂದಕಾಃ||
05129010a ಅದೃಶ್ಯಂತೋದ್ಯತಾನ್ಯೇವ ಸರ್ವಪ್ರಹರಣಾನಿ ಚ|
05129010c ನಾನಾಬಾಹುಷು ಕೃಷ್ಣಸ್ಯ ದೀಪ್ಯಮಾನಾನಿ ಸರ್ವಶಃ||
ಶಂಖ, ಚಕ್ರ, ಗದೆ, ಶಕ್ತಿ, ಶಾಂಙೃ, ಲಾಂಗಲ ಮತ್ತು ನಂದಕಗಳು ತೋರಿಸಿಕೊಂಡವು. ಇನ್ನೂ ಇತರ ಸರ್ವ ಆಯುಧಗಳು ಕೃಷ್ಣನ ಎಲ್ಲ ನಾನಾ ಬಾಹುಗಳಲ್ಲಿ ಬೆಳಗುತ್ತಿದ್ದವು.
05129011a ನೇತ್ರಾಭ್ಯಾಂ ನಸ್ತತಶ್ಚೈವ ಶ್ರೋತ್ರಾಭ್ಯಾಂ ಚ ಸಮಂತತಃ|
05129011c ಪ್ರಾದುರಾಸನ್ಮಹಾರೌದ್ರಾಃ ಸಧೂಮಾಃ ಪಾವಕಾರ್ಚಿಷಃ|
05129011e ರೋಮಕೂಪೇಷು ಚ ತಥಾ ಸೂರ್ಯಸ್ಯೇವ ಮರೀಚಯಃ||
ಅವನ ಎರಡೂ ಕಣ್ಣುಗಳಿಂದ, ಮೂಗಿನಿಂದ ಮತ್ತು ಎರಡು ಕಿವಿಗಳಿಂದ ಸುತ್ತಲೂ ಮಹಾರೌದ್ರವಾದ ಹೊಗೆಯಿಂದ ಕೂಡಿದ ಬೆಂಕಿಯು ಪ್ರಕಾಶಿಸಿ ಹೊರಬಂದಿತು. ಅವನ ರೂಮಕೂಪಗಳಿಂದ ಸೂರ್ಯನಂತೆ ಕಿರಣಗಳು ಹೊರಸೂಸಿದವು.
05129012a ತಂ ದೃಷ್ಟ್ವಾ ಘೋರಮಾತ್ಮಾನಂ ಕೇಶವಸ್ಯ ಮಹಾತ್ಮನಃ|
05129012c ನ್ಯಮೀಲಯಂತ ನೇತ್ರಾಣಿ ರಾಜಾನಸ್ತ್ರಸ್ತಚೇತಸಃ||
05129013a ಋತೇ ದ್ರೋಣಂ ಚ ಭೀಷ್ಮಂ ಚ ವಿದುರಂ ಚ ಮಹಾಮತಿಂ|
05129013c ಸಂಜಯಂ ಚ ಮಹಾಭಾಗಮೃಷೀಂಶ್ಚೈವ ತಪೋಧನಾನ್||
05129013e ಪ್ರಾದಾತ್ತೇಷಾಂ ಸ ಭಗವಾನ್ದಿವ್ಯಂ ಚಕ್ಷುರ್ಜನಾರ್ದನಃ||
ದ್ರೋಣ, ಭೀಷ್ಮ, ಮಹಾಮತಿ ವಿದುರ, ಮಹಾಭಾಗ ಸಂಜಯ ಮತ್ತು ತಪೋಧನ ಋಷಿಗಳನ್ನು ಬಿಟ್ಟು ಅಲ್ಲಿದ್ದ ರಾಜರು ಆ ಮಹಾತ್ಮ ಕೇಶವನ ಘೋರರೂಪವನ್ನು ನೋಡಿ ಚೇತನಗಳು ನಡುಗಿ ಕಣ್ಣುಗಳನ್ನು ಮುಚ್ಚಿದರು. ಭಗವಾನ್ ಜನಾರ್ದನನು ಅವರಿಗೆ ದಿವ್ಯ ದೃಷ್ಟಿಯನ್ನು ನೀಡಿದ್ದನು.
05129014a ತದ್ದೃಷ್ಟ್ವಾ ಮಹದಾಶ್ಚರ್ಯಂ ಮಾಧವಸ್ಯ ಸಭಾತಲೇ|
05129014c ದೇವದುಂದುಭಯೋ ನೇದುಃ ಪುಷ್ಪವರ್ಷಂ ಪಪಾತ ಚ||
ಸಭಾತಲದಲ್ಲಿ ಮಾಧವನ ಆ ಮಹದಾಶ್ಚರ್ಯವನ್ನು ನೋಡಿ ದೇವದುಂದುಭಿಗಳು ಮೊಳಗಿದವು ಮತ್ತು ಪುಷ್ಪವೃಷ್ಠಿಯು ಬಿದ್ದಿತು.
05129015a ಚಚಾಲ ಚ ಮಹೀ ಕೃತ್ಸ್ನಾ ಸಾಗರಶ್ಚಾಪಿ ಚುಕ್ಷುಭೇ|
05129015c ವಿಸ್ಮಯಂ ಪರಮಂ ಜಗ್ಮುಃ ಪಾರ್ಥಿವಾ ಭರತರ್ಷಭ||
ಇಡೀ ಭೂಮಿಯು ನಡುಗಿತು ಮತ್ತು ಸಾಗರವೂ ಕ್ಷೋಭೆಗೊಂಡಿತು. ಭರತರ್ಷಭ! ಪಾರ್ಥಿವರೆಲ್ಲರೂ ಪರಮ ವಿಸ್ಮಿತರಾದರು.
05129016a ತತಃ ಸ ಪುರುಷವ್ಯಾಘ್ರಃ ಸಂಜಹಾರ ವಪುಃ ಸ್ವಕಂ|
05129016c ತಾಂ ದಿವ್ಯಾಮದ್ಭುತಾಂ ಚಿತ್ರಾಮೃದ್ಧಿಮತ್ತಾಮರಿಂದಮಃ||
ಆಗ ಆ ಪುರುಷವ್ಯಾಘ್ರ ಅರಿಂದಮನು ತನ್ನದೇ ಸ್ವರೂಪವಾದ ಆ ದಿವ್ಯ, ಅದ್ಭುತ, ವಿಚಿತ್ರ ವೈಭವಯುಕ್ತ ರೂಪವನ್ನು ಹಿಂದೆ ತೆಗೆದುಕೊಂಡನು.
05129017a ತತಃ ಸಾತ್ಯಕಿಮಾದಾಯ ಪಾಣೌ ಹಾರ್ದಿಕ್ಯಮೇವ ಚ|
05129017c ಋಷಿಭಿಸ್ತೈರನುಜ್ಞಾತೋ ನಿರ್ಯಯೌ ಮಧುಸೂದನಃ||
ಆಗ ಸಾತ್ಯಕಿ ಮತ್ತು ಹಾರ್ದಿಕ್ಯರಿಬ್ಬರ ಕೈಗಳನ್ನು ಹಿಡಿದು ಮಧುಸೂದನನು ಋಷಿಗಳಿಂದ ಅಪ್ಪಣೆಪಡೆದು ಹೊರಟನು.
05129018a ಋಷಯೋಽಂತರ್ಹಿತಾ ಜಗ್ಮುಸ್ತತಸ್ತೇ ನಾರದಾದಯಃ|
05129018c ತಸ್ಮಿನ್ಕೋಲಾಹಲೇ ವೃತ್ತೇ ತದದ್ಭುತಮಭೂತ್ತದಾ||
ನಾರದಾದಿ ಋಷಿಗಳು ಅಲ್ಲಿಯೇ ಅಂತರ್ಹಿತರಾದರು. ಆ ಕೋಲಾಹಲದಲ್ಲಿ ಅದೂ ಒಂದು ಅದ್ಭುತವಾಗಿಯೇ ನಡೆಯಿತು.
05129019a ತಂ ಪ್ರಸ್ಥಿತಮಭಿಪ್ರೇಕ್ಷ್ಯ ಕೌರವಾಃ ಸಹ ರಾಜಭಿಃ|
05129019c ಅನುಜಗ್ಮುರ್ನರವ್ಯಾಘ್ರಂ ದೇವಾ ಇವ ಶತಕ್ರತುಂ||
ಅವನು ಹೋಗುತ್ತಿರುವುದನ್ನು ನೋಡಿ ರಾಜರೊಂದಿಗೆ ಕೌರವರು ಶತಕ್ರತುವನ್ನು ದೇವತೆಗಳು ಹೇಗೋ ಹಾಗೆ ಆ ನರವ್ಯಾಘ್ರನನ್ನು ಹಿಂಬಾಲಿಸಿದರು.
05129020a ಅಚಿಂತಯನ್ನಮೇಯಾತ್ಮಾ ಸರ್ವಂ ತದ್ರಾಜಮಂಡಲಂ|
05129020c ನಿಶ್ಚಕ್ರಾಮ ತತಃ ಶೌರಿಃ ಸಧೂಮ ಇವ ಪಾವಕಃ||
ಆ ಸರ್ವ ರಾಜಮಂಡಲವನ್ನೂ ನಿರ್ಲಕ್ಷಿಸಿ ಆ ಅಮೇಯಾತ್ಮ ಶೌರಿಯು ಹೊಗೆಯಿಂದ ಹಿಂಬಾಲಿಸಲ್ಪಡುವ ಬೆಂಕಿಯಂತೆ ಹೊರ ಬಂದನು.
05129021a ತತೋ ರಥೇನ ಶುಭ್ರೇಣ ಮಹತಾ ಕಿಂಕಿಣೀಕಿನಾ|
05129021c ಹೇಮಜಾಲವಿಚಿತ್ರೇಣ ಲಘುನಾ ಮೇಘನಾದಿನಾ||
05129022a ಸೂಪಸ್ಕರೇಣ ಶುಭ್ರೇಣ ವೈಯಾಘ್ರೇಣ ವರೂಥಿನಾ|
05129022c ಸೈನ್ಯಸುಗ್ರೀವಯುಕ್ತೇನ ಪ್ರತ್ಯದೃಶ್ಯತ ದಾರುಕಃ||
ಆಗ ಶುಭ್ರವಾದ, ಗಂಟೆಗಳ ನಾದಮಾಡುತ್ತಿದ್ದ, ಹೇಮಜಾಲವಿಚಿತ್ರವಾದ, ಮಳೆಗಾಲದ ಮೋಡದಂತೆ ಜೋರಾಗಿ ಗುಡುಗುತ್ತ ಬಂದ, ವೈಯಾಘ್ರ ಚರ್ಮಗಳನ್ನು ಹೊದೆಸಿದ ಸೂಪಗಳಿರುವ, ಸೈನ್ಯ-ಸುಗ್ರೀವರನ್ನು ಕಟ್ಟಿದ್ದ ಮಹಾ ರಥದಲ್ಲಿ ದಾರುಕನು ಕಾಣಿಸಿಕೊಂಡನು.
05129023a ತಥೈವ ರಥಮಾಸ್ಥಾಯ ಕೃತವರ್ಮಾ ಮಹಾರಥಃ|
05129023c ವೃಷ್ಣೀನಾಂ ಸಮ್ಮತೋ ವೀರೋ ಹಾರ್ದಿಕ್ಯಃ ಪ್ರತ್ಯದೃಶ್ಯತ||
ಹಾಗೆಯೇ ವೃಷ್ಣಿಗಳ ನಾಯಕ, ವೀರ ಹಾರ್ದಿಕ್ಯ ಮಹಾರಥಿ ಕೃತವರ್ಮನು ರಥದಲ್ಲಿ ಕುಳಿತು ಕಾಣಿಸಿಕೊಂಡನು.
05129024a ಉಪಸ್ಥಿತರಥಂ ಶೌರಿಂ ಪ್ರಯಾಸ್ಯಂತಮರಿಂದಮಂ|
05129024c ಧೃತರಾಷ್ಟ್ರೋ ಮಹಾರಾಜಃ ಪುನರೇವಾಭ್ಯಭಾಷತ||
ರಥದಲ್ಲಿ ಕುಳಿತು ಹೊರಡುತ್ತಿದ್ದ ಅರಿಂದಮ ಶೌರಿಗೆ ಮಹಾರಾಜ ಧೃತರಾಷ್ಟ್ರನು ಪುನಃ ಹೇಳಿದನು:
05129025a ಯಾವದ್ಬಲಂ ಮೇ ಪುತ್ರೇಷು ಪಶ್ಯಸ್ಯೇತಜ್ಜನಾರ್ದನ|
05129025c ಪ್ರತ್ಯಕ್ಷಂ ತೇ ನ ತೇ ಕಿಂ ಚಿತ್ಪರೋಕ್ಷಂ ಶತ್ರುಕರ್ಶನ||
“ಜನಾರ್ದನ! ಪುತ್ರರ ಮೇಲೆ ನನಗೆ ಎಷ್ಟು ಬಲವಿದೆ ಎನ್ನುವುದನ್ನು ನೀನು ನೋಡಿದ್ದೀಯೆ. ಶತ್ರುಕರ್ಶನ! ಎಲ್ಲವೂ ನಿನ್ನ ಪ್ರತ್ಯಕ್ಷದಲ್ಲಿಯೇ ಇದೆ. ಪರೋಕ್ಷವಾಗಿ ಏನೂ ನಡೆಯುತ್ತಿಲ್ಲ.
05129026a ಕುರೂಣಾಂ ಶಮಮಿಚ್ಚಂತಂ ಯತಮಾನಂ ಚ ಕೇಶವ|
05129026c ವಿದಿತ್ವೈತಾಮವಸ್ಥಾಂ ಮೇ ನಾತಿಶಂಕಿತುಮರ್ಹಸಿ||
ಕೇಶವ! ಕುರುಗಳಲ್ಲಿ ಶಾಂತಿಯನ್ನು ಇಚ್ಛಿಸುವ, ಅದಕ್ಕಾಗಿ ಪ್ರಯತ್ನಿಸುತ್ತಿರುವ ನನ್ನ ಅವಸ್ಥೆಯು ನಿನಗೆ ತಿಳಿದೇ ಇದೆ. ನನ್ನ ಮೇಲೆ ಶಂಕಿಸಬಾರದು.
05129027a ನ ಮೇ ಪಾಪೋಽಸ್ತ್ಯಭಿಪ್ರಾಯಃ ಪಾಂಡವಾನ್ಪ್ರತಿ ಕೇಶವ|
05129027c ಜ್ಞಾತಮೇವ ಹಿ ತೇ ವಾಕ್ಯಂ ಯನ್ಮಯೋಕ್ತಃ ಸುಯೋಧನಃ||
ಕೇಶವ! ಪಾಂಡವರ ಕುರಿತು ನನಗೆ ಪಾಪತ್ವದ ಅಭಿಪ್ರಾಯವಿಲ್ಲ. ಏಕೆಂದರೆ ನಾನು ಸುಯೋಧನನಿಗೆ ಏನು ಹೇಳಿದೆನೆನ್ನುವುದು ನಿನಗೆ ತಿಳಿದೇ ಇದೆ.
05129028a ಜಾನಂತಿ ಕುರವಃ ಸರ್ವೇ ರಾಜಾನಶ್ಚೈವ ಪಾರ್ಥಿವಾಃ|
05129028c ಶಮೇ ಪ್ರಯತಮಾನಂ ಮಾಂ ಸರ್ವಯತ್ನೇನ ಮಾಧವ||
ಮಾಧವ! ನಾನು ಸರ್ವಯತ್ನಗಳಿಂದ ಶಾಂತಿಗೆ ಪ್ರಯತ್ನಪಟ್ಟಿದ್ದೇನೆ ಎನ್ನುವುದು ಎಲ್ಲ ಕುರುಗಳಿಗೂ ಪಾರ್ಥಿವ ರಾಜರಿಗೂ ತಿಳಿದಿದೆ.”
05129029a ತತೋಽಬ್ರವೀನ್ಮಹಾಬಾಹುರ್ಧೃತರಾಷ್ಟ್ರಂ ಜನೇಶ್ವರಂ|
05129029c ದ್ರೋಣಂ ಪಿತಾಮಹಂ ಭೀಷ್ಮಂ ಕ್ಷತ್ತಾರಂ ಬಾಹ್ಲಿಕಂ ಕೃಪಂ||
ಆಗ ಆ ಮಹಾಬಾಹುವು ಜನೇಶ್ವರ ಧೃತರಾಷ್ಟ್ರ, ದ್ರೋಣ, ಪಿತಾಮಹ ಭೀಷ್ಮ, ಕ್ಷತ್ತ, ಬಾಹ್ಲೀಕ ಮತ್ತು ಕೃಪರನ್ನು ಉದ್ದೇಶಿಸಿ ಹೇಳಿದನು:
05129030a ಪ್ರತ್ಯಕ್ಷಮೇತ್ಭವತಾಂ ಯದ್ವೃತ್ತಂ ಕುರುಸಂಸದಿ|
05129030c ಯಥಾ ಚಾಶಿಷ್ಟವನ್ಮಂದೋ ರೋಷಾದಸಕೃದುತ್ಥಿತಃ||
“ಕುರುಸಂಸದಿಯಲ್ಲಿ ಏನು ನಡೆಯಿತೋ ಅದು ನಿಮ್ಮ ಪ್ರತ್ಯಕ್ಷದಲ್ಲಿಯೇ ನಡೆಯಿತು. ಹೇಗೆ ಆ ಶಿಷ್ಟಾಚಾರಗಳಿಲ್ಲದ ಮೂಢನು ಸಿಟ್ಟಿನಿಂದ ಹಾರಿ ಮೇಲೇಳುತ್ತಿದ್ದನು!
05129031a ವದತ್ಯನೀಶಮಾತ್ಮಾನಂ ಧೃತರಾಷ್ಟ್ರೋ ಮಹೀಪತಿಃ|
05129031c ಆಪೃಚ್ಚೇ ಭವತಃ ಸರ್ವಾನ್ಗಮಿಷ್ಯಾಮಿ ಯುಧಿಷ್ಠಿರಂ||
ಮಹೀಪತಿ ಧೃತರಾಷ್ಟ್ರನು ತನ್ನನ್ನು ಅನೀಶನೆಂದು ಕರೆದುಕೊಳ್ಳುವುದು ಸರಿಯಾದುದೇ! ನಿಮ್ಮೆಲ್ಲರನ್ನೂ ಬೀಳ್ಕೊಳ್ಳುತ್ತಿದ್ದೇನೆ. ಯುಧಿಷ್ಠಿರನ ಬಳಿ ಹೋಗುತ್ತೇನೆ.”
05129032a ಆಮಂತ್ರ್ಯ ಪ್ರಸ್ಥಿತಂ ಶೌರಿಂ ರಥಸ್ಥಂ ಪುರುಷರ್ಷಭಂ|
05129032c ಅನುಜಗ್ಮುರ್ಮಹೇಷ್ವಾಸಾಃ ಪ್ರವೀರಾ ಭರತರ್ಷಭಾಃ||
05129033a ಭೀಷ್ಮೋ ದ್ರೋಣಃ ಕೃಪಃ ಕ್ಷತ್ತಾ ಧೃತರಾಷ್ಟ್ರೋಽಥ ಬಾಹ್ಲಿಕಃ|
05129033c ಅಶ್ವತ್ಥಾಮಾ ವಿಕರ್ಣಶ್ಚ ಯುಯುತ್ಸುಶ್ಚ ಮಹಾರಥಃ||
ಕೈಮುಗಿದು ರಥದಲ್ಲಿ ಕುಳಿತು ಹೊರಟ ಪುರುಷರ್ಷಭ ಶೌರಿಯನ್ನು ಭರತರ್ಷಭ ಪ್ರವೀರರಾದ, ಮಹೇಷ್ವಾಸರಾದ ಭೀಷ್ಮ, ದ್ರೋಣ, ಕ್ಷತ್ತ, ಧೃತರಾಷ್ಟ್ರ, ಬಾಹ್ಲೀಕ, ಅಶ್ವತ್ಥಾಮ, ವಿಕರ್ಣ ಮತ್ತು ಮಹಾರಥಿ ಯುಯುತ್ಸುವು ಹಿಂಬಾಲಿಸಿ ಹೋದರು.
05129034a ತತೋ ರಥೇನ ಶುಭ್ರೇಣ ಮಹತಾ ಕಿಂಕಿಣೀಕಿನಾ|
05129034c ಕುರೂಣಾಂ ಪಶ್ಯತಾಂ ಪ್ರಾಯಾತ್ಪೃಥಾಂ ದ್ರಷ್ಟುಂ ಪಿತೃಷ್ವಸಾಂ||
ಆಗ ಶುಭ್ರವಾದ, ಗಂಟೆಗಳ ನಾದಗೈಯುತ್ತಿದ್ದ ದೊಡ್ಡ ರಥದಲ್ಲಿ, ಕುರುಗಳು ನೋಡುತ್ತಿದ್ದಂತೆಯೇ ಕೃಷ್ಣನು ತನ್ನ ಸೋದರತ್ತೆಯನ್ನು ಕಾಣಲು ಹೊರಟನು.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ವಿಶ್ವರೂಪದರ್ಶನೇ ಏಕೋನತ್ರಿಂಶದಧಿಕಶತತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ವಿಶ್ವರೂಪದರ್ಶನದಲ್ಲಿ ನೂರಾಇಪ್ಪತ್ತೊಂಭತ್ತನೆಯ ಅಧ್ಯಾಯವು.