ಉದ್ಯೋಗ ಪರ್ವ: ಭಗವದ್ಯಾನ ಪರ್ವ
೧೨೮
ದುರ್ಯೋಧನನು ಶ್ರೀಕೃಷ್ಣನನ್ನು ಬಂಧಿಸಲು ಪ್ರಯತ್ನಿಸಿದುದು
ತಾಯಿಯ ಮಾತನ್ನು ಕೇಳಿ ಕೋಪಗೊಂಡು ಪುನಃ ಸಭಾತ್ಯಾಗ ಮಾಡಿದ ದುರ್ಯೋಧನನು ತನ್ನ ಆಪ್ತರೊಂದಿಗೆ ಸಮಾಲೋಚನೆಮಾಡಿ ಕೃಷ್ಣನನ್ನೇ ಸೆರೆಹಿಡಿಯಲು ಯೋಚಿಸಿದುದು (೧-೮). ಸನ್ನೆಗಳನ್ನು ಅರ್ಥಮಾಡಿಕೊಳ್ಳುವ ಸಾತ್ಯಕಿಯು ಅವರ ಇಂಗಿತವನ್ನು ತಿಳಿದು ಕೃತವರ್ಮನಿಗೆ ಸೇನೆಯನ್ನು ಸಿದ್ಧಮಾಡಿ ದ್ವಾರದಲ್ಲಿರುವಂತೆ ಹೇಳಿ ಸಭೆಗೆ ಬಂದು ಕೃಷ್ಣನಿಗೂ ವಿದುರ-ಧೃತರಾಷ್ಟ್ರರಿಗೂ ಅವರ ಯೋಜನೆಯನ್ನು ತಿಳಿಸಿದುದು (೯-೧೬). ಆಗ ವಿದುರನು ಧೃತರಾಷ್ಟ್ರನಿಗೆ ಕೃಷ್ಣನ ನಿಜಸ್ವರೂಪವನ್ನು ವರ್ಣಿಸಿದುದು (೧೭-೨೨). “ಈ ದುರ್ಯೋಧನನನಿಗೆ ಮತ್ತು ಇತರ ಎಲ್ಲರಿಗೂ ಏನು ಮಾಡಬೇಕೆಂದು ಬಯಸಿರುವರೋ ಅದನ್ನು ಮಾಡಲು ಒಪ್ಪಿಗೆಯನ್ನು ಕೊಡುತ್ತೇನೆ.” ಎಂದು ಕೃಷ್ಣನು ಹೇಳಲು (೨೩-೨೯) ಧೃತರಾಷ್ಟ್ರನು ದುರ್ಯೋಧನನನ್ನು ಕರೆಯಿಸಿ “ಕೈಯಲ್ಲಿ ಹಿಡಿದಿಟ್ಟುಕೊಳ್ಳಲಾರದ ಗಾಳಿಯಂತೆ, ಕೈಯಿಂದ ಮುಟ್ಟಲಾಗದ ಶಶಿಯಂತೆ, ತಲೆಯಲ್ಲಿ ಹೊರಲಿಕ್ಕಾಗದ ಭೂಮಿಯಂತೆ ಕೇಶವನನ್ನು ಬಲವನ್ನುಪಯೋಗಿಸಿ ಹಿಡಿಯಲಿಕ್ಕಾಗುವುದಿಲ್ಲ!” ಎಂದು ಎಚ್ಚರಿಸಿದುದು (೩೦-೩೯). ವಿದುರನೂ ದುರ್ಯೋಧನನಿಗೆ ಕೃಷ್ಣನು ಯಾರು ಮತ್ತು ಅವನ ಪರಾಕ್ರಮವೇನೆಂದು ತಿಳಿಸಿದುದು (೪೦-೫೨).
05128001 ವೈಶಂಪಾಯನ ಉವಾಚ|
05128001a ತತ್ತು ವಾಕ್ಯಮನಾದೃತ್ಯ ಸೋಽರ್ಥವನ್ಮಾತೃಭಾಷಿತಂ|
05128001c ಪುನಃ ಪ್ರತಸ್ಥೇ ಸಂರಂಭಾತ್ಸಕಾಶಮಕೃತಾತ್ಮನಾಂ||
ವೈಶಂಪಾಯನನು ಹೇಳಿದನು: “ತಾಯಿಯು ಹೇಳಿದ ಅರ್ಥವತ್ತಾದ ಮಾತುಗಳನ್ನು ಅನಾದರಿಸಿ ಪುನಃ ಸಿಟ್ಟಿನಿಂದ ಅವನು ಹೊರಟು ಅಕೃತಾತ್ಮರ ಬಳಿ ಹೋದನು.
05128002a ತತಃ ಸಭಾಯಾ ನಿರ್ಗಮ್ಯ ಮಂತ್ರಯಾಮಾಸ ಕೌರವಃ|
05128002c ಸೌಬಲೇನ ಮತಾಕ್ಷೇಣ ರಾಜ್ಞಾ ಶಕುನಿನಾ ಸಹ||
ಆಗ ಸಭೆಯಿಂದ ನಿರ್ಗಮಿಸಿ ಕೌರವನು ಜೂಜುಕೋರ ರಾಜ ಸೌಬಲ ಶಕುನಿಯೊಡನೆ ಮಂತ್ರಾಲೋಚನೆ ಮಾಡಿದನು.
05128003a ದುರ್ಯೋಧನಸ್ಯ ಕರ್ಣಸ್ಯ ಶಕುನೇಃ ಸೌಬಲಸ್ಯ ಚ|
05128003c ದುಃಶಾಸನಚತುರ್ಥಾನಾಮಿದಮಾಸೀದ್ವಿಚೇಷ್ಟಿತಂ||
ದುರ್ಯೋಧನ, ಕರ್ಣ, ಸೌಬಲ ಶಕುನಿ ಮತ್ತು ದುಃಶಾಸನ ಈ ನಾಲ್ವರ ನಡುವೆ ಈ ಚರ್ಚೆಯಾಯಿತು:
05128004a ಪುರಾಯಮಸ್ಮಾನ್ಗೃಹ್ಣಾತಿ ಕ್ಷಿಪ್ರಕಾರೀ ಜನಾರ್ದನಃ|
05128004c ಸಹಿತೋ ಧೃತರಾಷ್ಟ್ರೇಣ ರಾಜ್ಞಾ ಶಾಂತನವೇನ ಚ||
05128005a ವಯಮೇವ ಹೃಷೀಕೇಶಂ ನಿಗೃಹ್ಣೀಮ ಬಲಾದಿವ|
05128005c ಪ್ರಸಹ್ಯ ಪುರುಷವ್ಯಾಘ್ರಮಿಂದ್ರೋ ವೈರೋಚನಿಂ ಯಥಾ||
“ಕ್ಷಿಪ್ರಕಾರೀ ಜನಾರ್ದನನು ರಾಜ ಧೃತರಾಷ್ಟ್ರ ಮತ್ತು ಶಾಂತನವನ ಸಹಾಯದಿಂದ ನಮ್ಮನ್ನು ಸೆರೆಹಿಡಿಯುವ ಮೊದಲು ನಾವೇ ಇಂದ್ರನು ವೈರೋಚನಿಯನ್ನು ಹೇಗೋ ಹಾಗೆ ಬಲವನ್ನುಪಯೋಗಿಸಿ ಸೋಲಿಸಿ ಪುರುಷವ್ಯಾಘ್ರ ಹೃಷೀಕೇಶನನ್ನು ಬಂಧಿಸೋಣ!
05128006a ಶ್ರುತ್ವಾ ಗೃಹೀತಂ ವಾರ್ಷ್ಣೇಯಂ ಪಾಂಡವಾ ಹತಚೇತಸಃ|
05128006c ನಿರುತ್ಸಾಹಾ ಭವಿಷ್ಯಂತಿ ಭಗ್ನದಂಷ್ಟ್ರಾ ಇವೋರಗಾಃ||
ವಾರ್ಷ್ಣೇಯನು ಬಂಧಿಯಾದುದನ್ನು ಕೇಳಿ ಹತಚೇತಸರಾದ ಪಾಂಡವರು ಹಲ್ಲು ಮುರಿದ ಹಾವಿನಂತೆ ನಿರುತ್ಸಾಹಿಗಳಾಗುತ್ತಾರೆ.
05128007a ಅಯಂ ಹ್ಯೇಷಾಂ ಮಹಾಬಾಹುಃ ಸರ್ವೇಷಾಂ ಶರ್ಮ ವರ್ಮ ಚ|
05128007c ಅಸ್ಮಿನ್ಗೃಹೀತೇ ವರದೇ ಋಷಭೇ ಸರ್ವಸಾತ್ವತಾಂ||
05128007e ನಿರುದ್ಯಮಾ ಭವಿಷ್ಯಂತಿ ಪಾಂಡವಾಃ ಸೋಮಕೈಃ ಸಹ||
ಏಕೆಂದರೆ ಈ ಮಹಾಬಾಹುವು ಅವರೆಲ್ಲರಿಗೆ ನೆರಳು ಮತ್ತು ರಕ್ಷೆ. ಸರ್ವಸಾತ್ವತರ ವರದ ಈ ಋಷಭನನ್ನು ಸೆರೆಹಿಡಿದರೆ ಸೋಮಕರೊಂದಿಗೆ ಪಾಂಡವರು ನಿರುದ್ಯಮರಾಗುತ್ತಾರೆ.
05128008a ತಸ್ಮಾದ್ವಯಮಿಹೈವೈನಂ ಕೇಶವಂ ಕ್ಷಿಪ್ರಕಾರಿಣಂ|
05128008c ಕ್ರೋಶತೋ ಧೃತರಾಷ್ಟ್ರಸ್ಯ ಬದ್ಧ್ವಾ ಯೋತ್ಸ್ಯಾಮಹೇ ರಿಪೂನ್||
ಆದುದರಿಂದ ಈ ಕ್ಷಿಪ್ರಕಾರಿಣೀ ಕೇಶವನನ್ನು ನಾವೇ, ಧೃತರಾಷ್ಟ್ರನು ಕೂಗಾಡಿದರೂ, ಬಂಧಿಸಿಟ್ಟು, ಶತ್ರುಗಳ ಮೇಲೆ ಆಕ್ರಮಣ ಮಾಡೋಣ!”
05128009a ತೇಷಾಂ ಪಾಪಮಭಿಪ್ರಾಯಂ ಪಾಪಾನಾಂ ದುಷ್ಟಚೇತಸಾಂ|
05128009c ಇಂಗಿತಜ್ಞಾಃ ಕವಿಃ ಕ್ಷಿಪ್ರಮನ್ವಬುಧ್ಯತ ಸಾತ್ಯಕಿಃ||
ಸನ್ನೆಗಳನ್ನು ಅರ್ಥಮಾಡಿಕೊಳ್ಳುವ ಕವಿ ಸಾತ್ಯಕಿಯು ಆ ಪಾಪಿ ದುಷ್ಟಚೇತಸರ ಅಭಿಪ್ರಾಯವನ್ನು ಕೂಡಲೇ ತಿಳಿದುಕೊಂಡನು.
05128010a ತದರ್ಥಮಭಿನಿಷ್ಕ್ರಮ್ಯ ಹಾರ್ದಿಕ್ಯೇನ ಸಹಾಸ್ಥಿತಃ|
05128010c ಅಬ್ರವೀತ್ಕೃತವರ್ಮಾಣಂ ಕ್ಷಿಪ್ರಂ ಯೋಜಯ ವಾಹಿನೀಂ||
ಅದಕ್ಕಾಗಿ ಹೊರಬಂದು ಹತ್ತಿರದಲ್ಲಿ ನಿಂತಿದ್ದ ಹಾರ್ದಿಕ್ಯ ಕೃತವರ್ಮನಿಗೆ ಹೇಳಿದನು: “ಬೇಗನೇ ಸೇನೆಯನ್ನು ಸಿದ್ಧಗೊಳಿಸು!
05128011a ವ್ಯೂಢಾನೀಕಃ ಸಭಾದ್ವಾರಮುಪತಿಷ್ಠಸ್ವ ದಂಶಿತಃ|
05128011c ಯಾವದಾಖ್ಯಾಮ್ಯಹಂ ಚೈತತ್ಕೃಷ್ಣಾಯಾಕ್ಲಿಷ್ಟಕರ್ಮಣೇ||
ನಾನು ಅಕ್ಲಿಷ್ಟಕರ್ಮಿಗೆ ಹೇಳುವುದರೊಳಗೆ ನೀನು ಸನ್ನದ್ಧ ಸೇನೆಯನ್ನು ಸಭಾದ್ವಾರದಲ್ಲಿ ತಂದು ನಿಲ್ಲಿಸು.”
05128012a ಸ ಪ್ರವಿಶ್ಯ ಸಭಾಂ ವೀರಃ ಸಿಂಹೋ ಗಿರಿಗುಹಾಮಿವ|
05128012c ಆಚಷ್ಟ ತಮಭಿಪ್ರಾಯಂ ಕೇಶವಾಯ ಮಹಾತ್ಮನೇ||
ಸಿಂಹವು ಗಿರಿಗುಹೆಯನ್ನು ಪ್ರವೇಶಿಸುವಂತೆ ಆ ವೀರನು ಸಭೆಯನ್ನು ಪ್ರವೇಶಿಸಿ ಅವರ ಅಭಿಪ್ರಾಯವನ್ನು ಮಹಾತ್ಮ ಕೇಶವನಿಗೆ ಹೇಳಿದನು.
05128013a ಧೃತರಾಷ್ಟ್ರಂ ತತಶ್ಚೈವ ವಿದುರಂ ಚಾನ್ವಭಾಷತ|
05128013c ತೇಷಾಮೇತಮಭಿಪ್ರಾಯಮಾಚಚಕ್ಷೇ ಸ್ಮಯನ್ನಿವ||
ಧೃತರಾಷ್ಟ್ರ-ವಿದುರರಿಗೂ ಇದನ್ನು ಹೇಳಿದನು. ಅವರ ಉಪಾಯದ ಕುರಿತು ಹೇಳಿ ನಸುನಗುತ್ತಾ ಹೇಳಿದನು:
05128014a ಧರ್ಮಾದಪೇತಮರ್ಥಾಚ್ಚ ಕರ್ಮ ಸಾಧುವಿಗರ್ಹಿತಂ|
05128014c ಮಂದಾಃ ಕರ್ತುಮಿಹೇಚ್ಚಂತಿ ನ ಚಾವಾಪ್ಯಂ ಕಥಂ ಚನ||
“ಈ ಮೂಢರು ಇಲ್ಲಿ ಸಾಧುಗಳು ನಿಷೇಧಿಸುವ, ಧರ್ಮ-ಅರ್ಥ-ಕಾಮಗಳಿಗೆ ಸಲ್ಲದ ಕೆಲಸವನ್ನು ಮಾಡಲು ಬಯಸುತ್ತಿದ್ದಾರೆ. ಆದರೆ ಅವರು ಅದನ್ನು ಎಂದೂ ಸಾಧಿಸರಾರರು.
05128015a ಪುರಾ ವಿಕುರ್ವತೇ ಮೂಢಾಃ ಪಾಪಾತ್ಮಾನಃ ಸಮಾಗತಾಃ|
05128015c ಧರ್ಷಿತಾಃ ಕಾಮಮನ್ಯುಭ್ಯಾಂ ಕ್ರೋಧಲೋಭವಶಾನುಗಾಃ||
ಈ ಮೂಢರು ಪಾಪಾತ್ಮರು ಒಂದಾಗಿ ಕ್ರೋಧಲೋಭವಶಾನುಗರಾಗಿ, ಕಾಮ ಮತ್ತು ಸಿಟ್ಟಿನಿಂದ ಧರ್ಷಿತರಾಗಿ ಮಾಡಬಾರದುದನ್ನು ಮಾಡಲು ಹೊರಟಿದ್ದಾರೆ.
05128016a ಇಮಂ ಹಿ ಪುಂಡರೀಕಾಕ್ಷಂ ಜಿಘೃಕ್ಷಂತ್ಯಲ್ಪಚೇತಸಃ|
05128016c ಪಟೇನಾಗ್ನಿಂ ಪ್ರಜ್ವಲಿತಂ ಯಥಾ ಬಾಲಾ ಯಥಾ ಜಡಾಃ||
ಈ ಅಲ್ಪಚೇತಸರು ಉತ್ತರೀಯದಲ್ಲಿ ಉರಿಯುತ್ತಿರುವ ಬೆಂಕಿಯನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವ ಬಾಲಕರಂತೆ ಈ ಪುಂಡರೀಕಾಕ್ಷನನ್ನು ಸೆರೆಹಿಡಿಯಲು ಹೊರಟಿದ್ದಾರೆ.”
05128017a ಸಾತ್ಯಕೇಸ್ತದ್ವಚಃ ಶ್ರುತ್ವಾ ವಿದುರೋ ದೀರ್ಘದರ್ಶಿವಾನ್|
05128017c ಧೃತರಾಷ್ಟ್ರಂ ಮಹಾಬಾಹುಮಬ್ರವೀತ್ಕುರುಸಂಸದಿ||
ಸಾತ್ಯಕಿಯ ಆ ಮಾತನ್ನು ಕೇಳಿ ದೀರ್ಘದರ್ಶಿ ವಿದುರನು ಕುರುಸಂಸದಿಯಲ್ಲಿ ಮಹಾಬಾಹು ಧೃತರಾಷ್ಟ್ರನಿಗೆ ಹೇಳಿದನು.
05128018a ರಾಜನ್ಪರೀತಕಾಲಾಸ್ತೇ ಪುತ್ರಾಃ ಸರ್ವೇ ಪರಂತಪ|
05128018c ಅಯಶಸ್ಯಮಶಕ್ಯಂ ಚ ಕರ್ಮ ಕರ್ತುಂ ಸಮುದ್ಯತಾಃ||
“ರಾಜನ್! ಪರಂತಪ! ನಿನ್ನ ಮಕ್ಕಳೆಲ್ಲರಿಗೂ ಕೊನೆಯ ಗಳಿಗೆಯು ಬಂದುಬಿಟ್ಟಿದೆ! ಅಶಕ್ಯರಾಗಿದ್ದರೂ ಅಯಶಸ್ಸನ್ನು ತರುವ ಕೆಲಸವನ್ನು ಮಾಡಲು ಉದ್ಯುಕ್ತರಾಗಿದ್ದಾರೆ.
05128019a ಇಮಂ ಹಿ ಪುಂಡರೀಕಾಕ್ಷಮಭಿಭೂಯ ಪ್ರಸಹ್ಯ ಚ|
05128019c ನಿಗ್ರಹೀತುಂ ಕಿಲೇಚ್ಚಂತಿ ಸಹಿತಾ ವಾಸವಾನುಜಂ||
ಎಲ್ಲರೂ ಒಂದಾಗಿ ಈ ವಾಸವನ ಅನುಜ ಪುಂಡರೀಕಾಕ್ಷನ ಮೇಲೆ ಅಕ್ರಮಣ ಮಾಡಿ ಸೆರೆಹಿಡಿಯಲು ಬಯಸುತ್ತಿದ್ದಾರಲ್ಲ!
05128020a ಇಮಂ ಪುರುಷಶಾರ್ದೂಲಮಪ್ರಧೃಷ್ಯಂ ದುರಾಸದಂ|
05128020c ಆಸಾದ್ಯ ನ ಭವಿಷ್ಯಂತಿ ಪತಂಗಾ ಇವ ಪಾವಕಂ||
ಬೆಂಕಿಯ ಬಳಿ ಹೋಗಲು ಪತಂಗಗಳಿಗೆ ಹೇಗೆ ಅಸಾಧ್ಯವೋ ಹಾಗೆ ಈ ಪುರುಷ ಶಾರ್ದೂಲ, ಅಪ್ರಧೃಷ್ಯ, ದುರಾಸದನ ಬಳಿಹೋಗಲೂ ಅವರಿಗೆ ಸಾದ್ಯವಿಲ್ಲ.
05128021a ಅಯಮಿಚ್ಚನ್ ಹಿ ತಾನ್ಸರ್ವಾನ್ಯತಮಾನಾಂ ಜನಾರ್ದನಃ|
05128021c ಸಿಂಹೋ ಮೃಗಾನಿವ ಕ್ರುದ್ಧೋ ಗಮಯೇದ್ಯಮಸಾದನಂ||
ಜನಾರ್ದನನು ಬಯಸಿದರೆ ಪ್ರಯತ್ನಿಸುತ್ತಿರುವ ಇವರೆಲ್ಲರನ್ನೂ ಕೃದ್ಧ ಸಿಂಹವು ಮೃಗಗಳನ್ನು ಹೇಗೋ ಹಾಗೆ ಯಮಸಾದನಕ್ಕೆ ಕಳುಹಿಸುತ್ತಾನೆ.
05128022a ನ ತ್ವಯಂ ನಿಂದಿತಂ ಕರ್ಮ ಕುರ್ಯಾತ್ಕೃಷ್ಣಃ ಕಥಂ ಚನ|
05128022c ನ ಚ ಧರ್ಮಾದಪಕ್ರಾಮೇದಚ್ಯುತಃ ಪುರುಷೋತ್ತಮಃ||
ಆದರೆ ಕೃಷ್ಣನು ಈ ನಿಂದನೀಯ ಕೆಸಲವನ್ನು ಎಂದೂ ಮಾಡುವುದಿಲ್ಲ. ಈ ಅಚ್ಯುತ ಪುರುಷೋತ್ತಮನು ಧರ್ಮವನ್ನು ದಾಟುವವನಲ್ಲ.”
05128023a ವಿದುರೇಣೈವಮುಕ್ತೇ ತು ಕೇಶವೋ ವಾಕ್ಯಮಬ್ರವೀತ್|
05128023c ಧೃತರಾಷ್ಟ್ರಮಭಿಪ್ರೇಕ್ಷ್ಯ ಸುಹೃದಾಂ ಶೃಣ್ವತಾಂ ಮಿಥಃ||
ವಿದುರನು ಹೀಗೆ ಹೇಳಲು ಕೇಶವನು, ಧೃತರಾಷ್ಟ್ರನನ್ನು ನೋಡಿ, ಸುಹೃದಯರು ಕೇಳುವಂತೆ ಈ ಮಾತುಗಳನ್ನಾಡಿದನು.
05128024a ರಾಜನ್ನೇತೇ ಯದಿ ಕ್ರುದ್ಧಾ ಮಾಂ ನಿಗೃಹ್ಣೀಯುರೋಜಸಾ|
05128024c ಏತೇ ವಾ ಮಾಮಹಂ ವೈನಾನನುಜಾನೀಹಿ ಪಾರ್ಥಿವ||
“ರಾಜನ್! ಪಾರ್ಥಿವ! ಇವರು ತಮ್ಮ ಬಲವನ್ನುಪಯೋಗಿಸಿ ನನ್ನ ಸೆರೆಹಿಡಿಯ ಬಯಸಿದರೆ ಅವರಿಗೆ ಅದನ್ನು ಮಾಡುವುದಕ್ಕೆ ಬಿಡು. ಅವರನ್ನು ನಾನು ಏನು ಮಾಡಬೇಕೆಂದು ನನಗೆ ತಿಳಿದಿದೆ.
05128025a ಏತಾನ್ ಹಿ ಸರ್ವಾನ್ಸಂರಬ್ಧಾನ್ನಿಯಂತುಮಹಮುತ್ಸಹೇ|
05128025c ನ ತ್ವಹಂ ನಿಂದಿತಂ ಕರ್ಮ ಕುರ್ಯಾಂ ಪಾಪಂ ಕಥಂ ಚನ||
ಇವರೆಲ್ಲರೂ ಸಿಟ್ಟಾಗಿ ಮಹಾ ಉತ್ಸಾಹದಿಂದ ಆಕ್ರಮಣ ಮಾಡಲು ಬಂದರೂ ನಾನು ನಿಂದನೀಯ ಪಾಪ ಕರ್ಮವನ್ನು ಎಂದೂ ಮಾಡುವುದಿಲ್ಲ.
05128026a ಪಾಂಡವಾರ್ಥೇ ಹಿ ಲುಭ್ಯಂತಃ ಸ್ವಾರ್ಥಾದ್ಧಾಸ್ಯಂತಿ ತೇ ಸುತಾಃ|
05128026c ಏತೇ ಚೇದೇವಮಿಚ್ಚಂತಿ ಕೃತಕಾರ್ಯೋ ಯುಧಿಷ್ಠಿರಃ||
ಪಾಂಡವರದ್ದನ್ನು ಹಿಡಿದಿಟ್ಟುಕೊಂಡು ನಿನ್ನ ಮಕ್ಕಳು ತಮ್ಮದ್ದನ್ನೂ ಕಳೆದುಕೊಳ್ಳುತ್ತಾರೆ. ಆದರೆ ಇದನ್ನೇ ಮಾಡಲು ಅವರು ಇಚ್ಛಿಸಿದರೆ, ಯುಧಿಷ್ಠಿರನ ಕೆಲಸವು ಮುಗಿದಂತೆ.
05128027a ಅದ್ಯೈವ ಹ್ಯಹಮೇತಾಂಶ್ಚ ಯೇ ಚೈತಾನನು ಭಾರತ|
05128027c ನಿಗೃಹ್ಯ ರಾಜನ್ಪಾರ್ಥೇಭ್ಯೋ ದದ್ಯಾಂ ಕಿಂ ದುಷ್ಕೃತಂ ಭವೇತ್||
ಏಕೆಂದರೆ ಭಾರತ! ರಾಜನ್! ಇಂದೇ ನಾನು ಇವರನ್ನು ಮತ್ತು ಇವರನ್ನು ಅನುಸರಿಸಿ ಬರುವವರನ್ನು ಹಿಡಿದು ಪಾರ್ಥರಿಗೆ ಕೊಡಬಹುದು. ನನಗೆ ಯಾವುದು ಅಸಾಧ್ಯವಾದುದು?
05128028a ಇದಂ ತು ನ ಪ್ರವರ್ತೇಯಂ ನಿಂದಿತಂ ಕರ್ಮ ಭಾರತ|
05128028c ಸನ್ನಿಧೌ ತೇ ಮಹಾರಾಜ ಕ್ರೋಧಜಂ ಪಾಪಬುದ್ಧಿಜಂ||
ಆದರೆ ಭಾರತ! ಮಹಾರಾಜ! ನಿನ್ನ ಸನ್ನಿಧಿಯಲ್ಲಿ ಕೋಪ ಮತ್ತು ಪಾಪಬುದ್ಧಿಯಲ್ಲಿ ಹುಟ್ಟುವ ಈ ನಿಂದನೀಯ ಕೆಲಸವನ್ನು ಮಾಡುವುದಿಲ್ಲ.
05128029a ಏಷ ದುರ್ಯೋಧನೋ ರಾಜನ್ಯಥೇಚ್ಚತಿ ತಥಾಸ್ತು ತತ್|
05128029c ಅಹಂ ತು ಸರ್ವಾನ್ಸಮಯಾನನುಜಾನಾಮಿ ಭಾರತ||
ರಾಜನ್! ಭಾರತ! ಈ ದುರ್ಯೋಧನನನಿಗೆ ಮತ್ತು ಇತರ ಎಲ್ಲರಿಗೂ ಏನು ಮಾಡಬೇಕೆಂದು ಬಯಸಿರುವರೋ ಅದನ್ನು ಮಾಡಲು ಒಪ್ಪಿಗೆಯನ್ನು ಕೊಡುತ್ತೇನೆ.”
05128030a ಏತಚ್ಚ್ರುತ್ವಾ ತು ವಿದುರಂ ಧೃತರಾಷ್ಟ್ರೋಽಭ್ಯಭಾಷತ|
05128030c ಕ್ಷಿಪ್ರಮಾನಯ ತಂ ಪಾಪಂ ರಾಜ್ಯಲುಬ್ಧಂ ಸುಯೋಧನಂ||
05128031a ಸಹಮಿತ್ರಂ ಸಹಾಮಾತ್ಯಂ ಸಸೋದರ್ಯಂ ಸಹಾನುಗಂ|
05128031c ಶಕ್ನುಯಾಂ ಯದಿ ಪಂಥಾನಮವತಾರಯಿತುಂ ಪುನಃ||
ಇದನ್ನು ಕೇಳಿ ಧೃತರಾಷ್ಟ್ರನು ವಿದುರನಿಗೆ ಹೇಳಿದನು: “ಆ ಪಾಪಿ, ರಾಜ್ಯಲುಬ್ಧ ಸುಯೋಧನನನ್ನು ಅವನ ಮಿತ್ರರು, ಅಮಾತ್ಯರು, ಸೋದರರು ಮತ್ತು ಅನುಯಾಯಿಗಳೊಂದಿಗೆ ಬೇಗನೆ ಕರೆದುಕೊಂಡು ಬಾ! ಅವರನ್ನು ದಾರಿಗೆ ತರಲು ಮತ್ತೊಮ್ಮೆ ಪ್ರಯತ್ನಿಸೋಣ.”
05128032a ತತೋ ದುರ್ಯೋಧನಂ ಕ್ಷತ್ತಾ ಪುನಃ ಪ್ರಾವೇಶಯತ್ಸಭಾಂ|
05128032c ಅಕಾಮಂ ಭ್ರಾತೃಭಿಃ ಸಾರ್ಧಂ ರಾಜಭಿಃ ಪರಿವಾರಿತಂ||
ಆಗ ಕ್ಷತ್ತನು ಬೇಡವಂತಿದ್ದ, ರಾಜರಿಂದ ಸುತ್ತುವರೆಯಲ್ಪಟ್ಟಿದ್ದ ದುರ್ಯೋಧನನನ್ನು ಅವನ ಸಹೋದರರೊಂದಿಗೆ ಸಭೆಗೆ ಪ್ರವೇಶಗೊಳಿಸಿದನು.
05128033a ಅಥ ದುರ್ಯೋಧನಂ ರಾಜಾ ಧೃತರಾಷ್ಟ್ರೋಽಭ್ಯಭಾಷತ|
05128033c ಕರ್ಣದುಃಶಾಸನಾಭ್ಯಾಂ ಚ ರಾಜಭಿಶ್ಚಾಭಿಸಂವೃತಂ||
ಆಗ ರಾಜಾ ಧೃತರಾಷ್ಟ್ರನು ಕರ್ಣ-ದುಃಶಾಸನರೊಡನಿದ್ದ, ರಾಜರಿಂದ ಸುತ್ತುವರೆಯಲ್ಪಟ್ಟಿದ್ದ ದುರ್ಯೋಧನನಿಗೆ ಹೇಳಿದನು:
05128034a ನೃಶಂಸ ಪಾಪಭೂಯಿಷ್ಠ ಕ್ಷುದ್ರಕರ್ಮಸಹಾಯವಾನ್|
05128034c ಪಾಪೈಃ ಸಹಾಯೈಃ ಸಂಹತ್ಯ ಪಾಪಂ ಕರ್ಮ ಚಿಕೀರ್ಷಸಿ||
“ಕ್ರೂರಿ! ಪಾಪಭೂಯಿಷ್ಠ! ಕ್ಷುದ್ರಕರ್ಮಿಗಳ ಸಹಾಯದಿಂದ, ಪಾಪಿಗಳೊಂದಿಗೆ ಪಾಪ ಕರ್ಮವನ್ನೆಸಗಲು ಬಯಸುತ್ತಿದ್ದೀಯೆ!
05128035a ಅಶಕ್ಯಮಯಶಸ್ಯಂ ಚ ಸದ್ಭಿಶ್ಚಾಪಿ ವಿಗರ್ಹಿತಂ|
05128035c ಯಥಾ ತ್ವಾದೃಶಕೋ ಮೂಢೋ ವ್ಯವಸ್ಯೇತ್ಕುಲಪಾಂಸನಃ||
ಕುಲಪಾಂಸನ! ಅಶಕ್ಯವಾದರೂ ಅಯಶಸ್ಸನ್ನು ತರುವ, ಸಾಧುಗಳು ನಿಂದಿಸುವ, ಮೂಢನಾದ ನೀನೊಬ್ಬನೇ ಮಾಡಬಹುದಾದ ಕೆಲಸವನ್ನು ಮಾಡಲು ಹೊರಟಿರುವೆ.
05128036a ತ್ವಮಿಮಂ ಪುಂಡರೀಕಾಕ್ಷಮಪ್ರಧೃಷ್ಯಂ ದುರಾಸದಂ|
05128036c ಪಾಪೈಃ ಸಹಾಯೈಃ ಸಂಹತ್ಯ ನಿಗ್ರಹೀತುಂ ಕಿಲೇಚ್ಚಸಿ||
ಅಪ್ರಧೃಷ್ಠನಾದ, ದುರಾಸದನಾದ ಈ ಪುಂಡರೀಕಾಕ್ಷನನ್ನು ನೀನು ಪಾಪಿಗಳ ಸಹಾಯದಿಂದ ನಿರ್ಬಲನನ್ನಾಗಿಸಿ ಸೆರೆಹಿಡಿಯಲು ಬಯಸುತ್ತೀಯಲ್ಲಾ!
05128037a ಯೋ ನ ಶಕ್ಯೋ ಬಲಾತ್ಕರ್ತುಂ ದೇವೈರಪಿ ಸವಾಸವೈಃ|
05128037c ತಂ ತ್ವಂ ಪ್ರಾರ್ಥಯಸೇ ಮಂದ ಬಾಲಶ್ಚಂದ್ರಮಸಂ ಯಥಾ||
ಮಂದ! ಬಾಲಕನು ಚಂದ್ರನನ್ನು ಬಯಸುವಂತೆ ವಾಸವನೊಂದಿಗೆ ದೇವತೆಗಳೂ ಬಲಾತ್ಕರಿಸಲು ಶಕ್ಯನಲ್ಲದ ಇವನನ್ನು ಹಿಡಿಯಲು ನೀನು ಬಯಸುತ್ತಿದ್ದೀಯೆ.
05128038a ದೇವೈರ್ಮನುಷ್ಯೈರ್ಗಂಧರ್ವೈರಸುರೈರುರಗೈಶ್ಚ ಯಃ|
05128038c ನ ಸೋಢುಂ ಸಮರೇ ಶಕ್ಯಸ್ತಂ ನ ಬುಧ್ಯಸಿ ಕೇಶವಂ||
ಕೇಶವನನ್ನು ಸಮರದಲ್ಲಿ ದೇವ-ಮನುಷ್ಯ-ಗಂಧರ್ವ-ಸುರ-ಉರುಗರೂ ಕೂಡ ಸೋಲಿಸಲಾರರು ಎಂದು ನಿನಗೆ ತಿಳಿದಿಲ್ಲವೇ?
05128039a ದುರ್ಗ್ರಹಃ ಪಾಣಿನಾ ವಾಯುರ್ದುಃಸ್ಪರ್ಶಃ ಪಾಣಿನಾ ಶಶೀ|
05128039c ದುರ್ಧರಾ ಪೃಥಿವೀ ಮೂರ್ಧ್ನಾ ದುರ್ಗ್ರಹಃ ಕೇಶವೋ ಬಲಾತ್||
ಕೈಯಲ್ಲಿ ಹಿಡಿದಿಟ್ಟುಕೊಳ್ಳಲಾರದ ಗಾಳಿಯಂತೆ, ಕೈಯಿಂದ ಮುಟ್ಟಲಾಗದ ಶಶಿಯಂತೆ, ತಲೆಯಲ್ಲಿ ಹೊರಲಿಕ್ಕಾಗದ ಭೂಮಿಯಂತೆ ಕೇಶವನನ್ನು ಬಲವನ್ನುಪಯೋಗಿಸಿ ಹಿಡಿಯಲಿಕ್ಕಾಗುವುದಿಲ್ಲ!”
05128040a ಇತ್ಯುಕ್ತೇ ಧೃತರಾಷ್ಟ್ರೇಣ ಕ್ಷತ್ತಾಪಿ ವಿದುರೋಽಬ್ರವೀತ್|
05128040c ದುರ್ಯೋಧನಮಭಿಪ್ರೇಕ್ಷ್ಯ ಧಾರ್ತರಾಷ್ಟ್ರಮಮರ್ಷಣಂ||
ಧೃತರಾಷ್ಟ್ರನು ಹೀಗೆ ಹೇಳಲು ಕ್ಷತ್ತ ವಿದುರನೂ ಕೂಡ ಅಮರ್ಷಣ ಧಾರ್ತರಾಷ್ಟ್ರ ದುರ್ಯೋಧನನನ್ನು ನೋಡಿ ಹೇಳಿದನು:
05128041a ಸೌಭದ್ವಾರೇ ವಾನರೇಂದ್ರೋ ದ್ವಿವಿದೋ ನಾಮ ನಾಮತಃ|
05128041c ಶಿಲಾವರ್ಷೇಣ ಮಹತಾ ಚಾದಯಾಮಾಸ ಕೇಶವಂ||
“ಸೌಭದ್ವಾರದಲ್ಲಿ ದ್ವಿವಿದ ಎಂಬ ಹೆಸರಿನ ವಾನರೇಂದ್ರನು ಅತಿ ದೊಡ್ಡ ಶಿಲಾವರ್ಷದಿಂದ ಕೇಶವನನ್ನು ಮುಚ್ಚಿದನು.
05128042a ಗ್ರಹೀತುಕಾಮೋ ವಿಕ್ರಮ್ಯ ಸರ್ವಯತ್ನೇನ ಮಾಧವಂ|
05128042c ಗ್ರಹೀತುಂ ನಾಶಕತ್ತತ್ರ ತಂ ತ್ವಂ ಪ್ರಾರ್ಥಯಸೇ ಬಲಾತ್||
ಮಾಧವನನ್ನು ಹಿಡಿಯಲು ಬಯಸಿ ವಿಕ್ರಮದಿಂದ ಸರ್ವಯತ್ನಗಳನ್ನು ಮಾಡಿದರೂ ಹಿಡಿಯಲು ಆಗಲಿಲ್ಲ. ಅಂಥವನನ್ನು ಬಲವನ್ನುಪಯೋಗಿಸಿ ಹಿಡಿಯಲು ಬಯಸುತ್ತಿರುವೆ.
05128043a ನಿರ್ಮೋಚನೇ ಷಟ್ಸಹಸ್ರಾಃ ಪಾಶೈರ್ಬದ್ಧ್ವಾ ಮಹಾಸುರಾಃ|
05128043c ಗ್ರಹೀತುಂ ನಾಶಕಂಶ್ಚೈನಂ ತಂ ತ್ವಂ ಪ್ರಾರ್ಥಯಸೇ ಬಲಾತ್||
ನಿರ್ಮೋಚನದಲ್ಲಿ ಮಹಾಸುರರು ಆರುಸಾವಿರ ಪಾಶಗಳಿಂದಲೂ ಹಿಡಿಯಲು ಅಸಮರ್ಥರಾದ ಇವನನ್ನು ಬಲವನ್ನುಪಯೋಗಿಸಿ ಹಿಡಿಯಲು ಬಯಸುತ್ತಿರುವೆ.
05128044a ಪ್ರಾಗ್ಜ್ಯೋತಿಷಗತಂ ಶೌರಿಂ ನರಕಃ ಸಹ ದಾನವೈಃ|
05128044c ಗ್ರಹೀತುಂ ನಾಶಕತ್ತತ್ರ ತಂ ತ್ವಂ ಪ್ರಾರ್ಥಯಸೇ ಬಲಾತ್||
ಪ್ರಾಗ್ಜ್ಯೋತಿಷಕ್ಕೆ ಹೋಗಿದ್ದ ಶೌರಿಯನ್ನು ದಾನವರ ಸಹಿತ ನರಕನು ಹಿಡಿಯಲು ಅಸಮರ್ಥನಾದ. ಇವನನ್ನು ನೀನು ಬಲವನ್ನುಪಯೋಗಿಸಿ ಹಿಡಿಯಲು ಬಯಸುತ್ತಿರುವೆ.
05128045a ಅನೇನ ಹಿ ಹತಾ ಬಾಲ್ಯೇ ಪೂತನಾ ಶಿಶುನಾ ತಥಾ|
05128045c ಗೋವರ್ಧನೋ ಧಾರಿತಶ್ಚ ಗವಾರ್ಥೇ ಭರತರ್ಷಭ||
ಭರತರ್ಷಭ! ಇವನು ಬಾಲ್ಯದಲ್ಲಿಯೇ ಶಿಶುವಾಗಿದ್ದಾಗ ಪೂತನಿಯನ್ನು ಕೊಂದನು ಮತ್ತು ಗೋವುಗಳನ್ನು ರಕ್ಷಿಸಲು ಗೋವರ್ಧನವನ್ನು ಎತ್ತಿ ಹಿಡಿದನು.
05128046a ಅರಿಷ್ಟೋ ಧೇನುಕಶ್ಚೈವ ಚಾಣೂರಶ್ಚ ಮಹಾಬಲಃ|
05128046c ಅಶ್ವರಾಜಶ್ಚ ನಿಹತಃ ಕಂಸಶ್ಚಾರಿಷ್ಟಮಾಚರನ್||
ಇವನು ಅರಿಷ್ಟ, ಧೇನುಕ, ಮಹಾಬಲ ಚಾಣೂರ, ಅಶ್ವರಾಜ ಮತ್ತು ದುರಾಚಾರಿ ಕಂಸನನ್ನು ಕೊಂದಿರುವನು.
05128047a ಜರಾಸಂಧಶ್ಚ ವಕ್ರಶ್ಚ ಶಿಶುಪಾಲಶ್ಚ ವೀರ್ಯವಾನ್|
05128047c ಬಾಣಶ್ಚ ನಿಹತಃ ಸಂಖ್ಯೇ ರಾಜಾನಶ್ಚ ನಿಷೂದಿತಾಃ||
ಇವನು ಜರಾಸಂಧ, ವಕ್ರ, ವೀರ್ಯವಾನ್ ಶಿಶುಪಾಲ ಮತ್ತು ಬಾಣರನ್ನು ಸಂಹರಿಸಿದ್ದಾನೆ. ಸಮರದಲ್ಲಿ ರಾಜರನ್ನು ಸದೆಬಡಿದಿದ್ದಾನೆ.
05128048a ವರುಣೋ ನಿರ್ಜಿತೋ ರಾಜಾ ಪಾವಕಶ್ಚಾಮಿತೌಜಸಾ|
05128048c ಪಾರಿಜಾತಂ ಚ ಹರತಾ ಜಿತಃ ಸಾಕ್ಷಾಚ್ಚಚೀಪತಿಃ||
ಇವನು ರಾಜಾ ವರುಣ ಮತ್ತು ಅಮಿತೌಜಸ ಪಾವಕನನ್ನು ಸೋಲಿಸಿದ್ದಾನೆ. ಸಾಕ್ಷಾತ್ ಶಚೀಪತಿಯನ್ನು ಗೆದ್ದು ಪಾರಿಜಾತವನ್ನು ಅಪಹರಿಸಿದನು.
05128049a ಏಕಾರ್ಣವೇ ಶಯಾನೇನ ಹತೌ ತೌ ಮಧುಕೈಟಭೌ|
05128049c ಜನ್ಮಾಂತರಮುಪಾಗಮ್ಯ ಹಯಗ್ರೀವಸ್ತಥಾ ಹತಃ||
ಏಕಾರ್ಣವದಲ್ಲಿ ಮಲಗಿರುವಾಗ ಇವನು ಮಧು-ಕೈಟಭರನ್ನು ಸಂಹರಿಸಿದನು. ಇನ್ನೊಂದು ಜನ್ಮದಲ್ಲಿ ಹಯಗ್ರೀವನನ್ನು ಕೊಂದನು.
05128050a ಅಯಂ ಕರ್ತಾ ನ ಕ್ರಿಯತೇ ಕಾರಣಂ ಚಾಪಿ ಪೌರುಷೇ|
05128050c ಯದ್ಯದಿಚ್ಚೇದಯಂ ಶೌರಿಸ್ತತ್ತತ್ಕುರ್ಯಾದಯತ್ನತಃ||
ಇವನು ಕರ್ತ. ಇವನನ್ನು ಯಾರೂ ಮಾಡಿಲ್ಲ. ಇವನು ಪೌರುಷಗಳ ಕಾರಣ. ಯಾವುದನ್ನು ಬಯಸುತ್ತಾನೋ ಅದನ್ನು ಶೌರಿಯು ನಿರಾಯಾಸವಾಗಿ ಮಾಡುತ್ತಾನೆ.
05128051a ತಂ ನ ಬುಧ್ಯಸಿ ಗೋವಿಂದಂ ಘೋರವಿಕ್ರಮಮಚ್ಯುತಂ|
05128051c ಆಶೀವಿಷಮಿವ ಕ್ರುದ್ಧಂ ತೇಜೋರಾಶಿಮನಿರ್ಜಿತಂ||
ಇಲ್ಲ! ನಿನಗೆ ಈ ಗೋವಿಂದ, ಘೋರವಿಕ್ರಮಿ, ಅಚ್ಯುತ, ಕೃದ್ಧನಾದರೆ ಘೋರವಿಷದಂತಿರುವ, ತೇಜೋರಾಶಿ, ಅನಿರ್ಜಿತನು ಗೊತ್ತಿಲ್ಲ!
05128052a ಪ್ರಧರ್ಷಯನ್ಮಹಾಬಾಹುಂ ಕೃಷ್ಣಮಕ್ಲಿಷ್ಟಕಾರಿಣಂ|
05128052c ಪತಂಗೋಽಗ್ನಿಮಿವಾಸಾದ್ಯ ಸಾಮಾತ್ಯೋ ನ ಭವಿಷ್ಯಸಿ||
ಅಗ್ನಿಯ ಬಳಿಸಾರುವ ಪತಂಗಗಳಂತೆ ಈ ಅಕ್ಲಿಷ್ಟಕರ್ಮಿ, ಮಹಾಬಾಹು ಕೃಷ್ಣನ ಮೇಲೆರಗಿ ನೀನು ಮತ್ತು ಅಮಾತ್ಯರು ಇಲ್ಲವಾಗುತ್ತೀರಿ!””
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ವಿದುರವಾಕ್ಯೇ ಅಷ್ಟಾವಿಂಶತ್ಯಧಿಕಶತತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ವಿದುರವಾಕ್ಯದಲ್ಲಿ ನೂರಾಇಪ್ಪತ್ತೆಂಟನೆಯ ಅಧ್ಯಾಯವು.