Udyoga Parva: Chapter 127

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೨೭

ಗಾಂಧಾರಿಯ ಹಿತವಚನ

ಕೃಷ್ಣನ ಮಾತನ್ನು ಕೇಳಿ ಧೃತರಾಷ್ಟ್ರನು ದುರ್ಯೋಧನನ್ನು ಸರಿದಾರಿಗೆ ತರಲು ಸಭೆಗೆ ಗಾಂಧಾರಿಯನ್ನು ಕರೆಯಿಸಿದ್ದುದು (೧-೮). ಗಾಂಧಾರಿಯು ದುರ್ಯೋಧನನಿಗೆ ಸಭೆಗೆ ಬರಲು ಹೇಳಿ ಕಳುಹಿಸಿ, ಇದಕ್ಕೆಲ್ಲ ನೀನೇ ಜವಾಬ್ಧಾರನೆಂದು ಧೃತರಾಷ್ಟ್ರನನ್ನು ನಿಂದಿಸಿದುದು (೯-೧೫). ದುರ್ಯೋಧನನು ಸಭೆಗೆ ಹಿಂದಿರುಗಲು ಗಾಂಧಾರಿಯು ಅವನಿಗೆ ಹಿತವಚನಗಳನ್ನಾಡಿದುದು (೧೬-೫೩).

Image result for gandhari advises duryodhana"

05127001 ವೈಶಂಪಾಯನ ಉವಾಚ|

05127001a ಕೃಷ್ಣಸ್ಯ ವಚನಂ ಶ್ರುತ್ವಾ ಧೃತರಾಷ್ಟ್ರೋ ಜನೇಶ್ವರಃ|

05127001c ವಿದುರಂ ಸರ್ವಧರ್ಮಜ್ಞಾಂ ತ್ವರಮಾಣೋಽಭ್ಯಭಾಷತ||

ವೈಶಂಪಾಯನನು ಹೇಳಿದನು: “ಕೃಷ್ಣನ ಮಾತನ್ನು ಕೇಳಿ ಜನೇಶ್ವರ ಧೃತರಾಷ್ಟ್ರನು ಸರ್ವಧರ್ಮಜ್ಞ  ವಿದುರನಿಗೆ ಅವಸರದಲ್ಲಿ ಹೇಳಿದನು:

05127002a ಗಚ್ಚ ತಾತ ಮಹಾಪ್ರಾಜ್ಞಾಂ ಗಾಂಧಾರೀಂ ದೀರ್ಘದರ್ಶಿನೀಂ|

05127002c ಆನಯೇಹ ತಯಾ ಸಾರ್ಧಮನುನೇಷ್ಯಾಮಿ ದುರ್ಮತಿಂ||

“ಅಯ್ಯಾ! ಹೋಗು! ಮಹಾಪ್ರಾಜ್ಞೆ, ದೀರ್ಘದರ್ಶಿನೀ ಗಾಂಧಾರಿಯನ್ನು ಕರೆದುಕೊಂಡು ಬಾ! ಅವಳ ಸಹಾಯದಿಂದ ನಾನು ಈ ದುರ್ಮತಿಯನ್ನು ಸರಿದಾರಿಗೆ ತರುತ್ತೇನೆ.

05127003a ಯದಿ ಸಾಪಿ ದುರಾತ್ಮಾನಂ ಶಮಯೇದ್ದುಷ್ಟಚೇತಸಂ|

05127003c ಅಪಿ ಕೃಷ್ಣಾಯ ಸುಹೃದಸ್ತಿಷ್ಠೇಮ ವಚನೇ ವಯಂ||

ಅವಳು ಆ ದುರಾತ್ಮ ದುಷ್ಟಚೇತಸನನ್ನು ಶಾಂತಿಗೊಳಿಸಿದರೆ ಈ ಸುಹೃದಯಿ ಕೃಷ್ಣನ ವಚನದಂತೆ ನಾವು ನಡೆದುಕೊಳ್ಳಬಹುದು.

05127004a ಅಪಿ ಲೋಭಾಭಿಭೂತಸ್ಯ ಪಂಥಾನಮನುದರ್ಶಯೇತ್|

05127004c ದುರ್ಬುದ್ಧೇರ್ದುಃಸ್ಸಹಾಯಸ್ಯ ಸಮರ್ಥಂ ಬ್ರುವತೀ ವಚಃ||

ಅವಳು ಸರಿಯಾದ ಮಾತುಗಳನ್ನಾಡಿ ಲೋಭದಿಂದ ತುಂಬಿದ, ದುರ್ಬುದ್ಧಿ, ದುಷ್ಟ ಸಹಾಯಕರನ್ನು ಹೊಂದಿದ ಇವನಿಗೆ ಸರಿಯಾದ ದಾರಿಯನ್ನು ತೋರಿಸಲು ಸಮರ್ಥಳಾದಾಳು.

05127005a ಅಪಿ ನೋ ವ್ಯಸನಂ ಘೋರಂ ದುರ್ಯೋಧನಕೃತಂ ಮಹತ್|

05127005c ಶಮಯೇಚ್ಚಿರರಾತ್ರಾಯ ಯೋಗಕ್ಷೇಮವದವ್ಯಯಂ||

ಅವಳು ದುರ್ಯೋಧನನು ಮಾಡಿ ತರುವ ಈ ಮಹಾ ಘೋರ ವ್ಯಸನವನ್ನು ನಿಲ್ಲಿಸಿ ನಮಗೆ ಅವ್ಯಯವಾದ ಚಿರರಾತ್ರಿಯ ಯೋಗಕ್ಷೇಮಗಳನ್ನು ತರಬಹುದು.”

05127006a ರಾಜ್ಞಾಸ್ತು ವಚನಂ ಶ್ರುತ್ವಾ ವಿದುರೋ ದೀರ್ಘದರ್ಶಿನೀಂ|

05127006c ಆನಯಾಮಾಸ ಗಾಂಧಾರೀಂ ಧೃತರಾಷ್ಟ್ರಸ್ಯ ಶಾಸನಾತ್||

ರಾಜನ ಮಾತನ್ನು ಕೇಳಿ ವಿದುರನು ಧೃತರಾಷ್ಟ್ರನ ಶಾಸನದಂತೆ ದೀರ್ಘದರ್ಶಿನೀ ಗಾಂಧಾರಿಯನ್ನು ಕರೆತಂದನು.

05127007 ಧೃತರಾಷ್ಟ್ರ ಉವಾಚ|

05127007a ಏಷ ಗಾಂಧಾರಿ ಪುತ್ರಸ್ತೇ ದುರಾತ್ಮಾ ಶಾಸನಾತಿಗಃ|

05127007c ಐಶ್ವರ್ಯಲೋಭಾದೈಶ್ವರ್ಯಂ ಜೀವಿತಂ ಚ ಪ್ರಹಾಸ್ಯತಿ||

ಧೃತರಾಷ್ಟ್ರನು ಹೇಳಿದನು: “ಗಾಂಧಾರಿ! ಇಗೋ ನಿನ್ನ ಈ ದುರಾತ್ಮ ಮಗನು ನನ್ನ ಶಾಸನವನ್ನು ಮೀರಿ ನಡೆಯುತ್ತಿದ್ದಾನೆ. ಐಶ್ವರ್ಯಲೋಭದಿಂದ ಇದ್ದ ಐಶ್ವರ್ಯವನ್ನೂ ಜೀವವನ್ನೂ ನಗೆಗೀಡು ಮಾಡುತ್ತಿದ್ದಾನೆ.

05127008a ಅಶಿಷ್ಟವದಮರ್ಯಾದಃ ಪಾಪೈಃ ಸಹ ದುರಾತ್ಮಭಿಃ|

05127008c ಸಭಾಯಾ ನಿರ್ಗತೋ ಮೂಢೋ ವ್ಯತಿಕ್ರಮ್ಯ ಸುಹೃದ್ವಚಃ||

ಶಿಷ್ಟಾಚಾರವಿಲ್ಲದ ಮರ್ಯಾದೆಯಿಲ್ಲದ ಆ ಮೂಢನು ಸುಹೃದಯರ ಮಾತನ್ನು ನಿರಾದರಿಸಿ ಪಾಪಿ ದುರಾತ್ಮರೊಡನೆ ಸಭೆಯಿಂದ ಹೊರ ಹೋಗಿದ್ದಾನೆ.””

05127009 ವೈಶಂಪಾಯನ ಉವಾಚ|

05127009a ಸಾ ಭರ್ತುರ್ವಚನಂ ಶ್ರುತ್ವಾ ರಾಜಪುತ್ರೀ ಯಶಸ್ವಿನೀ|

05127009c ಅನ್ವಿಚ್ಚಂತೀ ಮಹಚ್ಚ್ರೇಯೋ ಗಾಂಧಾರೀ ವಾಕ್ಯಮಬ್ರವೀತ್||

ವೈಶಂಪಾಯನನು ಹೇಳಿದನು: “ಪತಿಯ ಮಾತನ್ನು ಕೇಳಿ ಯಶಸ್ವಿನೀ, ರಾಜಪುತ್ರೀ, ಗಾಂಧಾರಿಯು ಮಹಾಶ್ರೇಯಸ್ಕರವಾದುದನ್ನು ಬಯಸಿ ಈ ಮಾತನ್ನಾಡಿದಳು:

05127010a ಆನಯೇಹ ಸುತಂ ಕ್ಷಿಪ್ರಂ ರಾಜ್ಯಕಾಮುಕಮಾತುರಂ|

05127010c ನ ಹಿ ರಾಜ್ಯಮಶಿಷ್ಟೇನ ಶಕ್ಯಂ ಧರ್ಮಾರ್ಥಲೋಪಿನಾ||

“ರಾಜ್ಯವನ್ನಾಳಲು ಬಯಸುವ ಮಗನನ್ನು ಕೂಡಲೇ ಬರಹೇಳಿ! ಏಕೆಂದರೆ ಧರ್ಮಾರ್ಥಗಳನ್ನು ಕಳೆದುಕೊಂಡವನು ರಾಜ್ಯವನ್ನು ಆಳಲು ಶಕ್ಯನಲ್ಲ.

05127011a ತ್ವಂ ಹ್ಯೇವಾತ್ರ ಭೃಶಂ ಗರ್ಹ್ಯೋ ಧೃತರಾಷ್ಟ್ರ ಸುತಪ್ರಿಯಃ|

05127011c ಯೋ ಜಾನನ್ಪಾಪತಾಮಸ್ಯ ತತ್ಪ್ರಜ್ಞಾಮನುವರ್ತಸೇ||

ಧೃತರಾಷ್ಟ್ರ! ಈ ವಿಷಯದಲ್ಲಿ ನೀನೇ ಹೆಚ್ಚು ನಿಂದನೆಗೊಳಬೇಕಾದವನು. ಮಗನ ಮೇಲಿನ ಪ್ರೀತಿಯಿಂದ ಅವನು ಪಾಪಿಯೆಂದು ತಿಳಿದೂ ಅವನ ಮನಸ್ಸನ್ನು ಅನುಸರಿಸುತ್ತಾ ಬಂದಿರುವೆ.

05127012a ಸ ಏಷ ಕಾಮಮನ್ಯುಭ್ಯಾಂ ಪ್ರಲಬ್ಧೋ ಮೋಹಮಾಸ್ಥಿತಃ|

05127012c ಅಶಕ್ಯೋಽದ್ಯ ತ್ವಯಾ ರಾಜನ್ವಿನಿವರ್ತಯಿತುಂ ಬಲಾತ್||

ರಾಜನ್! ಇಂದು ಕಾಮ-ಕ್ರೋಧಗಳಿಂದ ಪ್ರಲಬ್ಧನಾಗಿ ಹುಚ್ಚುಹಿಡಿದಿರುವ ಅವನನ್ನು ಬಲಾತ್ಕಾರವಾಗಿ ನೀನು ಹಿಂದೆ ತರಲು ಅಶಕ್ಯನಾಗಿದ್ದೀಯೆ.

05127013a ರಾಜ್ಯಪ್ರದಾನೇ ಮೂಢಸ್ಯ ಬಾಲಿಶಸ್ಯ ದುರಾತ್ಮನಃ|

05127013c ದುಃಸ್ಸಹಾಯಸ್ಯ ಲುಬ್ಧಸ್ಯ ಧೃತರಾಷ್ಟ್ರೋಽಶ್ನುತೇ ಫಲಂ||

ಧೃತರಾಷ್ಟ್ರನು ಈ ರಾಜ್ಯವನ್ನು ಮೂಢ, ಹುಡುಗುಬುದ್ಧಿಯ, ದುರಾತ್ಮ, ದುಷ್ಟರ ಸಹಾಯಪಡೆದಿರುವ, ಲುಬ್ಧನಿಗೆ ಕೊಡುವಂಥಹ ಫಲವನ್ನು ಬೆಳೆಯಿಸಿದ್ದಾನೆ.

05127014a ಕಥಂ ಹಿ ಸ್ವಜನೇ ಭೇದಮುಪೇಕ್ಷೇತ ಮಹಾಮತಿಃ|

05127014c ಭಿನ್ನಂ ಹಿ ಸ್ವಜನೇನ ತ್ವಾಂ ಪ್ರಸಹಿಷ್ಯಂತಿ ಶತ್ರವಃ||

ಏಕೆಂದರೆ ಯಾವ ಮಹಾಮತಿಯು ತನ್ನವರಲ್ಲಿಯೇ ಉಂಟಾದ ಭೇದವನ್ನು ಕಡೆಗಣಿಸಿಯಾನು? ನೀನೇ ಸ್ವಜನರಲ್ಲಿ ಒಡಕನ್ನು ತಂದರೆ ಶತ್ರುಗಳು ಸಂತೋಷಪಡುವುದಿಲ್ಲವೇ?

05127015a ಯಾ ಹಿ ಶಕ್ಯಾ ಮಹಾರಾಜ ಸಾಮ್ನಾ ದಾನೇನ ವಾ ಪುನಃ|

05127015c ನಿಸ್ತರ್ತುಮಾಪದಃ ಸ್ವೇಷು ದಂಡಂ ಕಸ್ತತ್ರ ಪಾತಯೇತ್||

ಮಹಾರಾಜ! ಸಾಮ-ದಾನಗಳಿಂದ ಆಪತ್ತನ್ನು ನಿಲ್ಲಿಸಬಹುದಾದಾಗ ಯಾರು ತಾನೇ ತನ್ನವರನ್ನು ದಂಡದಿಂದ ಹೊಡೆಯುತ್ತಾರೆ?”

05127016a ಶಾಸನಾದ್ಧೃತರಾಷ್ಟ್ರಸ್ಯ ದುರ್ಯೋಧನಮಮರ್ಷಣಂ|

05127016c ಮಾತುಶ್ಚ ವಚನಾತ್ಕ್ಷತ್ತಾ ಸಭಾಂ ಪ್ರಾವೇಶಯತ್ ಪುನಃ||

ಧೃತರಾಷ್ಟ್ರನ ಶಾಸನದಂತೆ ಮತ್ತು ತಾಯಿಯ ವಚನದಂತೆ ಕ್ಷತ್ತನು ಪುನಃ ಅಮರ್ಷಣ ದುರ್ಯೋಧನನನ್ನು ಪ್ರವೇಶಿಸಿದನು.

05127017a ಸ ಮಾತುರ್ವಚನಾಕಾಂಕ್ಷೀ ಪ್ರವಿವೇಶ ಸಭಾಂ ಪುನಃ|

05127017c ಅಭಿತಾಂರೇಕ್ಷಣಃ ಕ್ರೋಧಾನ್ನಿಃಶ್ವಸನ್ನಿವ ಪನ್ನಗಃ||

ತಾಯಿಯು ಏನು ಹೇಳುವಳೆಂದು ನಿರೀಕ್ಷಿಸಿದ್ದ ಅವನು ಕೆಂಪು ಕಣ್ಣುಗಳುಳ್ಳವನಾಗಿ, ಕೋಪದಿಂದ ಹಾವಿನಂತೆ ಭುಸುಗುಟ್ಟುತ್ತಾ ಪುನಃ ಸಭೆಯನ್ನು ಪ್ರವೇಶಿಸಿದನು.

05127018a ತಂ ಪ್ರವಿಷ್ಟಮಭಿಪ್ರೇಕ್ಷ್ಯ ಪುತ್ರಮುತ್ಪಥಮಾಸ್ಥಿತಂ|

05127018c ವಿಗರ್ಹಮಾಣಾ ಗಾಂಧಾರೀ ಸಮರ್ಥಂ ವಾಕ್ಯಮಬ್ರವೀತ್||

ಹಾರಾಡುತ್ತಿದ್ದ ತನ್ನ ಮಗನು ಪ್ರವೇಶಿಸಿದುದನ್ನು ಕಂಡು ಗಾಂಧಾರಿಯು ಬೈಯುತ್ತಾ ಈ ಸಮರ್ಥ ಮಾತುಗಳನ್ನಾಡಿದಳು:

05127019a ದುರ್ಯೋಧನ ನಿಬೋಧೇದಂ ವಚನಂ ಮಮ ಪುತ್ರಕ|

05127019c ಹಿತಂ ತೇ ಸಾನುಬಂಧಸ್ಯ ತಥಾಯತ್ಯಾಂ ಸುಖೋದಯಂ||

“ಮಗನೇ! ದುರ್ಯೋಧನ! ನಿನ್ನ ಮತ್ತು ನಿನ್ನ ಜೊತೆಯಿರುವವರ ಹಿತಕ್ಕಾಗಿ ಮತ್ತು ಮುಂದೆ ಸುಖವಾಗಲೆಂದು ಹೇಳುವ ನನ್ನ ಈ ಮಾತುಗಳನ್ನು ಅರ್ಥಮಾಡಿಕೋ!

05127020a ಭೀಷ್ಮಸ್ಯ ತು ಪಿತುಶ್ಚೈವ ಮಮ ಚಾಪಚಿತಿಃ ಕೃತಾ|

05127020c ಭವೇದ್ದ್ರೋಣಮುಖಾನಾಂ ಚ ಸುಹೃದಾಂ ಶಾಮ್ಯತಾ ತ್ವಯಾ||

ನೀನು ಶಾಂತಿಯನ್ನುಂಟುಮಾಡುವುದರ ಮೂಲಕ ಭೀಷ್ಮನ, ತಂದೆಯ, ನನ್ನ ಮತ್ತು ದ್ರೋಣನೇ ಮೊದಲಾದ ಸುಹೃದಯರಿಗೆ ಗೌರವವನ್ನು ನೀಡುತ್ತೀಯೆ.

05127021a ನ ಹಿ ರಾಜ್ಯಂ ಮಹಾಪ್ರಾಜ್ಞಾ ಸ್ವೇನ ಕಾಮೇನ ಶಕ್ಯತೇ|

05127021c ಅವಾಪ್ತುಂ ರಕ್ಷಿತುಂ ವಾಪಿ ಭೋಕ್ತುಂ ವಾ ಭರತರ್ಷಭ||

ಮಹಾಪ್ರಾಜ್ಞ! ಭರತರ್ಷಭ! ಕೇವಲ ಸ್ವ-ಇಚ್ಛೆಯಂತೆ ರಾಜ್ಯವನ್ನು ಪಡೆಯುವುದಕ್ಕಾಗಲೀ, ರಕ್ಷಿಸುವುದಕ್ಕಾಗಲೀ ಅಥವಾ ಭೋಗಿಸುವುದಕ್ಕಾಗಲೀ ಸಾಧ್ಯವಿಲ್ಲ.

05127022a ನ ಹ್ಯವಶ್ಯೇಂದ್ರಿಯೋ ರಾಜ್ಯಮಶ್ನೀಯಾದ್ದೀರ್ಘಮಂತರಂ|

05127022c ವಿಜಿತಾತ್ಮಾ ತು ಮೇಧಾವೀ ಸ ರಾಜ್ಯಮಭಿಪಾಲಯೇತ್||

ಏಕೆಂದರೆ ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡಿರದವನು ತನ್ನ ರಾಜ್ಯವನ್ನು ಬಹುಕಾಲ ಇಟ್ಟುಕೊಳ್ಳುವುದಿಲ್ಲ. ವಿಜಿತಾತ್ಮ, ಮೇಧಾವಿಯೇ ರಾಜ್ಯವನ್ನು ಚೆನ್ನಾಗಿ ಪಾಲಿಸುತ್ತಾನೆ.

05127023a ಕಾಮಕ್ರೋಧೌ ಹಿ ಪುರುಷಮರ್ಥೇಭ್ಯೋ ವ್ಯಪಕರ್ಷತಃ|

05127023c ತೌ ತು ಶತ್ರೂ ವಿನಿರ್ಜಿತ್ಯ ರಾಜಾ ವಿಜಯತೇ ಮಹೀಂ||

ಕಾಮ-ಕ್ರೋಧಗಳು ಪುರುಷನನ್ನು ಅರ್ಥ-ಧರ್ಮಗಳಿಂದ ದೂರ ಎಳೆದೊಯ್ಯುತ್ತವೆ. ಈ ಇಬ್ಬರು ಶತ್ರುಗಳನ್ನು ಸೋಲಿಸಿ ರಾಜನು ಮಹಿಯನ್ನು ಗೆಲ್ಲುತ್ತಾನೆ.

05127024a ಲೋಕೇಶ್ವರಪ್ರಭುತ್ವಂ ಹಿ ಮಹದೇತದ್ದುರಾತ್ಮಭಿಃ|

05127024c ರಾಜ್ಯಂ ನಾಮೇಪ್ಸಿತಂ ಸ್ಥಾನಂ ನ ಶಕ್ಯಮಭಿರಕ್ಷಿತುಂ||

ಲೋಕೇಶ್ವರತ್ವವೂ ಪ್ರಭುತ್ವವೂ ಮಹತ್ತರವಾದವುಗಳು. ದುರಾತ್ಮರು ರಾಜ್ಯವನ್ನು ಪಡೆದರೂ ಆ ಸ್ಥಾನವನ್ನು ಬಹುಕಾಲ ರಕ್ಷಿಸಿಕೊಳ್ಳಲು ಶಕ್ಯರಿರುವುದಿಲ್ಲ.

05127025a ಇಂದ್ರಿಯಾಣಿ ಮಹತ್ಪ್ರೇಪ್ಸುರ್ನಿಯಚ್ಚೇದರ್ಥಧರ್ಮಯೋಃ|

05127025c ಇಂದ್ರಿಯೈರ್ನಿಯತೈರ್ಬುದ್ಧಿರ್ವರ್ಧತೇಽಗ್ನಿರಿವೇಂಧನೈಃ||

ಮಹತ್ತರವಾದುದನ್ನು ಬಯಸುವವನು ಇಂದ್ರಿಯಗಳನ್ನು ಅರ್ಥ-ಧರ್ಮಗಳ ನಿಯಂತ್ರಣದಲ್ಲಿರಿಸಿಕೊಂಡಿರಬೇಕು. ಇಂಧನಗಳನ್ನು ಸುಡುವುದರಿಂದ ಬೆಂಕಿಯು ಹೆಚ್ಚು ಉರಿಯುವಂತೆ ಇಂದ್ರಿಯಗಳನ್ನು ನಿಯಂತ್ರಿಸುವುದರಿಂದ ಬುದ್ಧಿಯು ಬೆಳೆಯುತ್ತದೆ.

05127026a ಅವಿಧ್ಯೇಯಾನಿ ಹೀಮಾನಿ ವ್ಯಾಪಾದಯಿತುಮಪ್ಯಲಂ|

05127026c ಅವಿಧೇಯಾ ಇವಾದಾಂತಾ ಹಯಾಃ ಪಥಿ ಕುಸಾರಥಿಂ||

ಇವುಗಳನ್ನು ಕಟುವಾಗಿ ನಿಯಂತ್ರಿಸದೇ ಇದ್ದರೆ ಇವು ವಿಧೇಯವಲ್ಲದ ಪಳಗಿಸಲ್ಪಡದೇ ಇರುವ ಕುದುರೆಗಳು ದುರ್ಬಲ ಸಾರಥಿಯಿರುವ ರಥವನ್ನು ಹೇಗೋ ಹಾಗೆ ವಿನಾಶದ ದಾರಿಗೆ ಎಳೆದೊಯ್ಯುತ್ತವೆ.

05127027a ಅವಿಜಿತ್ಯ ಯ ಆತ್ಮಾನಮಮಾತ್ಯಾನ್ವಿಜಿಗೀಷತೇ|

05127027c ಅಜಿತಾತ್ಮಾಜಿತಾಮಾತ್ಯಃ ಸೋಽವಶಃ ಪರಿಹೀಯತೇ||

ತನ್ನನ್ನು ತಾನು ಗೆಲ್ಲದೇ ಅಮಾತ್ಯರನ್ನು ಗೆಲ್ಲಲು ಬಯಸುವವನು ತನ್ನನ್ನೂ ಅಮಾತ್ಯರನ್ನೂ ಗೆಲ್ಲದೇ ಅವಶನಾಗಿ ನಾಶಹೊಂದುತ್ತಾನೆ.

05127028a ಆತ್ಮಾನಮೇವ ಪ್ರಥಮಂ ದೇಶರೂಪೇಣ ಯೋ ಜಯೇತ್|

05127028c ತತೋಽಮಾತ್ಯಾನಮಿತ್ರಾಂಶ್ಚ ನ ಮೋಘಂ ವಿಜಿಗೀಷತೇ||

ಆದರೆ ಯಾರು ದೇಶರೂಪದಲ್ಲಿರುವ ಆತ್ಮವನ್ನೇ ಮೊದಲು ಗೆಲ್ಲುತ್ತಾರೋ ಅವರು ಅಮಾತ್ಯರು ಮತ್ತು ಮಿತ್ರರನ್ನು ಪಡೆಯುವುದರಲ್ಲಿ ಸೋಲುವುದಿಲ್ಲ.

05127029a ವಶ್ಯೇಂದ್ರಿಯಂ ಜಿತಾಮಾತ್ಯಂ ಧೃತದಂಡಂ ವಿಕಾರಿಷು|

05127029c ಪರೀಕ್ಷ್ಯಕಾರಿಣಂ ಧೀರಮತ್ಯಂತಂ ಶ್ರೀರ್ನಿಷೇವತೇ||

ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡಿರುವವನನ್ನು, ಅಮಾತ್ಯರನ್ನು ಗೆದ್ದಿರುವುವವನನ್ನು, ಉಲ್ಲಂಘಿಸುವವರನ್ನು ಧೃಢವಾಗಿ ಶಿಕ್ಷಿಸುವವರನ್ನು, ಪರಿಶೀಲಿಸಿ ಕೆಲಸಮಾಡುವವರನ್ನು, ಮತ್ತು ಧೀರರನ್ನು ಶ್ರೀಯು ಅತ್ಯಂತವಾಗಿ ಸೇವಿಸುತ್ತಾಳೆ.

05127030a ಕ್ಷುದ್ರಾಕ್ಷೇಣೇವ ಜಾಲೇನ ಝಷಾವಪಿಹಿತಾವುಭೌ|

05127030c ಕಾಮಕ್ರೋಧೌ ಶರೀರಸ್ಥೌ ಪ್ರಜ್ಞಾನಂ ತೌ ವಿಲುಂಪತಃ||

ರಂಧ್ರಗಳು ಮುಚ್ಚಲ್ಪಟ್ಟ ಜಾಲದಲ್ಲಿ ಸಿಲುಕಿದ ಎರಡು ಮೀನುಗಳಂತೆ ಪ್ರಜ್ಞಾನಿಯ ಶರೀರದಲ್ಲಿರುವ ಕಾಮ-ಕ್ರೋಧಗಳು ಶಕ್ತಿಯನ್ನು ಕಳೆದುಕೊಳ್ಳುತ್ತವೆ.

05127031a ಯಾಭ್ಯಾಂ ಹಿ ದೇವಾಃ ಸ್ವರ್ಯಾತುಃ ಸ್ವರ್ಗಸ್ಯಾಪಿದಧುರ್ಮುಖಂ|

05127031c ಬಿಭ್ಯತೋಽನುಪರಾಗಸ್ಯ ಕಾಮಕ್ರೋಧೌ ಸ್ಮ ವರ್ಧಿತೌ||

05127032a ಕಾಮಂ ಕ್ರೋಧಂ ಚ ಲೋಭಂ ಚ ದಂಭಂ ದರ್ಪಂ ಚ ಭೂಮಿಪಃ|

05127032c ಸಮ್ಯಗ್ವಿಜೇತುಂ ಯೋ ವೇದ ಸ ಮಹೀಮಭಿಜಾಯತೇ||

ಕಾಮ, ಕ್ರೋಧ, ಲೋಭ, ದಂಭ ಮತ್ತು ದರ್ಪಗಳನ್ನು ಗೆಲ್ಲಲು ಚೆನ್ನಾಗಿ ತಿಳಿದಿರುವ ಭೂಮಿಪನು ಇಡೀ ಮಹಿಯನ್ನು ಆಳುತ್ತಾನೆ.

05127033a ಸತತಂ ನಿಗ್ರಹೇ ಯುಕ್ತ ಇಂದ್ರಿಯಾಣಾಂ ಭವೇನ್ನೃಪಃ|

05127033c ಈಪ್ಸನ್ನರ್ಥಂ ಚ ಧರ್ಮಂ ಚ ದ್ವಿಷತಾಂ ಚ ಪರಾಭವಂ||

ಇಂದ್ರಿಯ ನಿಗ್ರಹದಲ್ಲಿ ಸತತವೂ ನಿರತನಾಗಿರುವ ನೃಪನು ಅರ್ಥ-ಧರ್ಮಗಳನ್ನು ಪಡೆದು ಶತ್ರುಗಳನ್ನು ಸೋಲಿಸುತ್ತಾನೆ.

05127034a ಕಾಮಾಭಿಭೂತಃ ಕ್ರೋಧಾದ್ವಾ ಯೋ ಮಿಥ್ಯಾ ಪ್ರತಿಪದ್ಯತೇ|

05127034c ಸ್ವೇಷು ಚಾನ್ಯೇಷು ವಾ ತಸ್ಯ ನ ಸಹಾಯಾ ಭವಂತ್ಯುತ||

ಕಾಮ ಕ್ರೋಧಗಳಿಂದ ತುಂಬಿ ಯಾರು ತನ್ನವರೊಡನೆ ಅಥವಾ ಇತರರೊಡನೆ ಸುಳ್ಳಾಗಿ ನಡೆದುಕೊಳ್ಳುತ್ತಾನೋ ಅವನಿಗೆ ಸಹಾಯಕರೇ ಇರುವುದಿಲ್ಲ.

05127035a ಏಕೀಭೂತೈರ್ಮಹಾಪ್ರಾಜ್ಞೈಃ ಶೂರೈರರಿನಿಬರ್ಹಣೈಃ|

05127035c ಪಾಂಡವೈಃ ಪೃಥಿವೀಂ ತಾತ ಭೋಕ್ಷ್ಯಸೇ ಸಹಿತಃ ಸುಖೀ||

ಮಗನೇ! ಒಂದಾಗಿರುವ, ಮಹಾಪ್ರಾಜ್ಞ, ಶೂರ, ಅರಿಗಳನ್ನು ಸದೆಬಡಿಯುವ ಪಾಂಡವರೊಡನೆ ನೀನು ಭೂಮಿಯನ್ನು ಸುಖವಾಗಿ ಭೋಗಿಸಬಲ್ಲೆ.

05127036a ಯಥಾ ಭೀಷ್ಮಃ ಶಾಂತನವೋ ದ್ರೋಣಶ್ಚಾಪಿ ಮಹಾರಥಃ|

05127036c ಆಹತುಸ್ತಾತ ತತ್ಸತ್ಯಮಜೇಯೌ ಕೃಷ್ಣಪಾಂಡವೌ||

ಮಗನೇ! ಭೀಷ್ಮ ಶಾಂತನವ ಮತ್ತು ಮಹಾರಥಿ ದ್ರೋಣನೂ ಕೂಡ ಹೇಳಿದಂತೆ ಕೃಷ್ಣ-ಪಾಂಡವರು ಅಜೇಯರು.

05127037a ಪ್ರಪದ್ಯಸ್ವ ಮಹಾಬಾಹುಂ ಕೃಷ್ಣಮಕ್ಲಿಷ್ಟಕಾರಿಣಂ|

05127037c ಪ್ರಸನ್ನೋ ಹಿ ಸುಖಾಯ ಸ್ಯಾದುಭಯೋರೇವ ಕೇಶವಃ||

ಈ ಅಕ್ಲಿಷ್ಟಕಾರಿಣಿ, ಮಹಾಬಾಹು ಕೃಷ್ಣನ ಶರಣು ಹೋಗು. ಕೇಶವನು ಪ್ರಸನ್ನನಾದರೆ ಎರಡೂ ಪಕ್ಷಗಳಿಗೂ ಸುಖವಾಗುತ್ತದೆ.

05127038a ಸುಹೃದಾಮರ್ಥಕಾಮಾನಾಂ ಯೋ ನ ತಿಷ್ಠತಿ ಶಾಸನೇ|

05127038c ಪ್ರಾಜ್ಞಾನಾಂ ಕೃತವಿದ್ಯಾನಾಂ ಸ ನರಃ ಶತ್ರುನಂದನಃ||

ಅರ್ಥವನ್ನು ಬಯಸುವ ಯಾವ ನರನು ಸುಹೃದಯಿಗಳ, ಪ್ರಾಜ್ಞರ ಮತ್ತು ವಿದ್ಯಾವಂತರ ಮಾತಿನಂತೆ ನಡೆಯುವುದಿಲ್ಲವೋ ಅವನು ಶತ್ರುಗಳಿಗೆ ಆನಂದವನ್ನು ನೀಡುತ್ತಾನೆ.

05127039a ನ ಯುದ್ಧೇ ತಾತ ಕಲ್ಯಾಣಂ ನ ಧರ್ಮಾರ್ಥೌ ಕುತಃ ಸುಖಂ|

05127039c ನ ಚಾಪಿ ವಿಜಯೋ ನಿತ್ಯಂ ಮಾ ಯುದ್ಧೇ ಚೇತ ಆಧಿಥಾಃ||

ಮಗನೇ! ಯುದ್ಧದಲ್ಲಿ ಕಲ್ಯಾಣವಿಲ್ಲ, ಧರ್ಮಾರ್ಥಗಳಿಲ್ಲ. ಸುಖವು ಎಲ್ಲಿಂದ? ಯಾವಾಗಲೂ ವಿಜಯವೂ ನಿಶ್ಚಿತವಾದುದಲ್ಲ. ಆದುದರಿಂದ ಯುದ್ಧದ ಕುರಿತು ಯೋಚಿಸಬೇಡ.

05127040a ಭೀಷ್ಮೇಣ ಹಿ ಮಹಾಪ್ರಾಜ್ಞಾ ಪಿತ್ರಾ ತೇ ಬಾಹ್ಲಿಕೇನ ಚ|

05127040c ದತ್ತೋಽಮ್ಶಃ ಪಾಂಡುಪುತ್ರಾಣಾಂ ಭೇದಾದ್ಭೀತೈರರಿಂದಮ||

ಅರಿಂದಮ! ಒಡಕಿನ ಭಯದಿಂದ ಬೀಷ್ಮ, ಮಹಾಪ್ರಾಜ್ಞನಾದ ನಿನ್ನ ತಂದೆ ಮತ್ತು ಬಾಹ್ಲೀಕರು ಪಾಂಡುಪುತ್ರರಿಗೆ ಕೊಟ್ಟಿದ್ದರು.

05127041a ತಸ್ಯ ಚೈತತ್ಪ್ರದಾನಸ್ಯ ಫಲಮದ್ಯಾನುಪಶ್ಯಸಿ|

05127041c ಯದ್ಭುಂಕ್ಷೇ ಪೃಥಿವೀಂ ಸರ್ವಾಂ ಶೂರೈರ್ನಿಹತಕಂಟಕಾಂ||

ಈಗ ನಿನ್ನಲ್ಲಿರುವುದು, ನೀನು ನೋಡಿರುವುದು ಆ ಶಾಂತಿಯ ಫಲ. ಆ ಶೂರರು ಕಂಟಕರನ್ನೆಲ್ಲ ನಾಶಗೊಳಿಸಿರುವ ಈ ಭೂಮಿಯನ್ನು ನೀನು ಭೋಗಿಸುತ್ತಿದ್ದೀಯೆ.

05127042a ಪ್ರಯಚ್ಚ ಪಾಂಡುಪುತ್ರಾಣಾಂ ಯಥೋಚಿತಮರಿಂದಮ|

05127042c ಯದೀಚ್ಚಸಿ ಸಹಾಮಾತ್ಯೋ ಭೋಕ್ತುಮರ್ಧಂ ಮಹೀಕ್ಷಿತಾಂ||

ಅರಿಂದಮ! ಯಥೋಚಿತವಾಗಿರುವುದನ್ನು ಪಾಂಡುಪುತ್ರರಿಗೆ ಕೊಟ್ಟುಬಿಡು. ಇಷ್ಟಪಟ್ಟರೆ ಅಮಾತ್ಯರೊಂದಿಗೆ ಅರ್ಧ ಭೂಮಿಯನ್ನು ಭೋಗಿಸು.

05127043a ಅಲಮರ್ಧಂ ಪೃಥಿವ್ಯಾಸ್ತೇ ಸಹಾಮಾತ್ಯಸ್ಯ ಜೀವನಂ|

05127043c ಸುಹೃದಾಂ ವಚನೇ ತಿಷ್ಠನ್ಯಶಃ ಪ್ರಾಪ್ಸ್ಯಸಿ ಭಾರತ||

ನಿನ್ನ ಅಮಾತ್ಯರೊಂದಿಗೆ ಜೀವನ ಮಾಡಲು ಅರ್ಧ ಭೂಮಿಯು ಸಾಕು. ಭಾರತ! ಸುಹೃದರ ಮಾತಿನಂತೆ ನಡೆದುಕೊಂಡರೆ ಯಶಸ್ಸನ್ನು ಪಡೆಯುತ್ತೀಯೆ.

05127044a ಶ್ರೀಮದ್ಭಿರಾತ್ಮವದ್ಭಿರ್ಹಿ ಬುದ್ಧಿಮದ್ಭಿರ್ಜಿತೇಂದ್ರಿಯೈಃ|

05127044c ಪಾಂಡವೈರ್ವಿಗ್ರಹಸ್ತಾತ ಭ್ರಂಶಯೇನ್ಮಹತಃ ಸುಖಾತ್||

ಮಗನೇ! ಶ್ರೀಮಂತರಾಗಿರುವ, ಆತ್ಮವನ್ನು ನಿಯಂತ್ರಿಸಿಕೊಂಡಿರುವ, ಬುದ್ಧಿವಂತರಾದ, ಜಿತೇಂದ್ರಿಯರಾದ ಪಾಂಡವರೊಂದಿಗೆ ಜಗಳವಾಡಿ ನೀನು ಮಹಾ ಸುಖದಿಂದ ವಂಚಿತನಾಗುತ್ತೀಯೆ.

05127045a ನಿಗೃಹ್ಯ ಸುಹೃದಾಂ ಮನ್ಯುಂ ಶಾಧಿ ರಾಜ್ಯಂ ಯಥೋಚಿತಂ|

05127045c ಸ್ವಮಂಶಂ ಪಾಂಡುಪುತ್ರೇಭ್ಯಃ ಪ್ರದಾಯ ಭರತರ್ಷಭ||

ಭರತರ್ಷಭ! ಸುಹೃದಯರ ಕೋಪವನ್ನು ತಡೆದು ಯಥೋಚಿತವಾಗಿ ಪಾಂಡುಪುತ್ರರಿಗೆ ಅವರ ಭಾಗವನ್ನು ಕೊಟ್ಟು ರಾಜ್ಯವನ್ನು ಆಳು.

05127046a ಅಲಮಹ್ನಾ ನಿಕಾರೋಽಯಂ ತ್ರಯೋದಶ ಸಮಾಃ ಕೃತಃ|

05127046c ಶಮಯೈನಂ ಮಹಾಪ್ರಾಜ್ಞಾ ಕಾಮಕ್ರೋಧಸಮೇಧಿತಂ||

ಅವರನ್ನು ಈ ಹದಿಮೂರು ವರ್ಷಗಳು ಕಾಡಿದ್ದುದು ಸಾಕು. ಮಹಾಪ್ರಾಜ್ಞ! ಕಾಮ-ಕ್ರೋಧಗಳಿಂದ ಉರಿಯುವುದನ್ನು  ಶಮನಗೊಳಿಸು.

05127047a ನ ಚೈಷ ಶಕ್ತಃ ಪಾರ್ಥಾನಾಂ ಯಸ್ತ್ವದರ್ಥಮಭೀಪ್ಸತಿ|

05127047c ಸೂತಪುತ್ರೋ ದೃಢಕ್ರೋಧೋ ಭ್ರಾತಾ ದುಃಶಾಸನಶ್ಚ ತೇ||

ಯಾರ ಸಂಪತ್ತನ್ನು ನಿನ್ನದಾಗಿರಿಸಿಕೊಂಡಿರುವೆಯೋ ಆ ಪಾರ್ಥರನ್ನು ಎದುರಿಸಲು ನೀನಾಗಲೀ, ಕ್ರುದ್ಧನಾದ ಸೂತಪುತ್ರನಾಗಲೀ, ನಿನ್ನ ತಮ್ಮ ದುಃಶಾಸನನಾಗಲೀ ಶಕ್ತರಿಲ್ಲ.

05127048a ಭೀಷ್ಮೇ ದ್ರೋಣೇ ಕೃಪೇ ಕರ್ಣೇ ಭೀಮಸೇನೇ ಧನಂಜಯೇ|

05127048c ಧೃಷ್ಟದ್ಯುಮ್ನೇ ಚ ಸಂಕ್ರುದ್ಧೇ ನ ಸ್ಯುಃ ಸರ್ವಾಃ ಪ್ರಜಾ ಧ್ರುವಂ||

ಭೀಷ್ಮ, ದ್ರೋಣ, ಕೃಪ, ಕರ್ಣ, ಭೀಮಸೇನ, ಧನಂಜಯ ಮತ್ತು ಧೃಷ್ಟದ್ಯುಮ್ನರು ಕುಪಿತರಾದರೆ ಎಲ್ಲ ಪ್ರಜೆಗಳೂ ಇಲ್ಲವಾಗುವುದು ಖಂಡಿತ.

05127049a ಅಮರ್ಷವಶಮಾಪನ್ನೋ ಮಾ ಕುರೂಂಸ್ತಾತ ಜೀಘನಃ|

05127049c ಸರ್ವಾ ಹಿ ಪೃಥಿವೀ ಸ್ಪೃಷ್ಟಾ ತ್ವತ್ಪಾಂಡವಕೃತೇ ವಧಂ||

ಮಗನೇ! ಕ್ರೋಧದ ವಶದಲ್ಲಿ ಬಂದು ಕುರುಗಳನ್ನು ಕೊಲ್ಲಿಸಬೇಡ.  ನಿನ್ನಿಂದಾಗಿ ಪಾಂಡವರು ಭೂಮಿಯಲ್ಲಿರುವ ಎಲ್ಲರನ್ನೂ ವಧಿಸದಿರಲಿ.

05127050a ಯಚ್ಚ ತ್ವಂ ಮನ್ಯಸೇ ಮೂಢ ಭೀಷ್ಮದ್ರೋಣಕೃಪಾದಯಃ|

05127050c ಯೋತ್ಸ್ಯಂತೇ ಸರ್ವಶಕ್ತ್ಯೇತಿ ನೈತದದ್ಯೋಪಪದ್ಯತೇ||

ಮೂಢ! ಭೀಷ್ಮ, ದ್ರೋಣ, ಕೃಪ ಮೊದಲಾದವರು ಸರ್ವ ಶಕ್ತಿಯನ್ನೂ ಉಪಯೋಗಿಸಿ ನಿನ್ನ ಪರವಾಗಿ ಹೋರಾಡುತ್ತಾರೆ ಎಂದು ನೀನು ತಿಳಿದುಕೊಂಡಿದ್ದೀಯೆ. ಆದರೆ ಅದು ಹಾಗೆ ಆಗುವುದಿಲ್ಲ.

05127051a ಸಮಂ ಹಿ ರಾಜ್ಯಂ ಪ್ರೀತಿಶ್ಚ ಸ್ಥಾನಂ ಚ ವಿಜಿತಾತ್ಮನಾಂ|

05127051c ಪಾಂಡವೇಷ್ವಥ ಯುಷ್ಮಾಸು ಧರ್ಮಸ್ತ್ವಭ್ಯಧಿಕಸ್ತತಃ||

ಏಕೆಂದರೆ ವಿಜಿತಾತ್ಮರಾದ ಇವರಿಗೆ ನಿನ್ನ ಮೇಲೆ ಮತ್ತು ಪಾಂಡವರ ಮೇಲೆ ಇರುವ ಪ್ರೀತಿಯು ಸಮನಾದುದು.

05127052a ರಾಜಪಿಂಡಭಯಾದೇತೇ ಯದಿ ಹಾಸ್ಯಂತಿ ಜೀವಿತಂ|

05127052c ನ ಹಿ ಶಕ್ಷ್ಯಂತಿ ರಾಜಾನಂ ಯುಧಿಷ್ಠಿರಮುದೀಕ್ಷಿತುಂ||

ಒಂದುವೇಳೆ ಇವರು ರಾಜಪಿಂಡದ ಭಯದಿಂದ ಜೀವನವನ್ನು ಮುಡುಪಾಗಿಟ್ಟರೂ ಅವರು ರಾಜ ಯುಧಿಷ್ಠಿರನ ಮುಖವನ್ನು ನೇರವಾಗಿ ನೋಡಲಾರರು.

05127053a ನ ಲೋಭಾದರ್ಥಸಂಪತ್ತಿರ್ನರಾಣಾಮಿಹ ದೃಶ್ಯತೇ|

05127053c ತದಲಂ ತಾತ ಲೋಭೇನ ಪ್ರಶಾಮ್ಯ ಭರತರ್ಷಭ||

ಭರತರ್ಷಭ! ಲೋಭದಿಂದ ಸಂಪತ್ತನ್ನು ಗಳಿಸುವ ನರರು ಇಲ್ಲಿ ಕಂಡುಬರುವುದಿಲ್ಲ. ಆದುದರಿಂದ ಮಗನೇ! ಲೋಭವನ್ನು ತಡೆದು ಶಾಂತನಾಗು.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಂಧಾರೀವಾಕ್ಯೇ ಸಪ್ತವಿಂಶತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಂಧಾರೀವಾಕ್ಯದಲ್ಲಿ ನೂರಾಇಪ್ಪತ್ತೇಳನೆಯ ಅಧ್ಯಾಯವು.

Image result for flowers against white background

Comments are closed.