Udyoga Parva: Chapter 126

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೨೬

ಕೋಪಗೊಂಡ ಕೃಷ್ಣನು ದ್ಯೂತಪ್ರಸಂಗವನ್ನೇ ಮುಖ್ಯವಾಗಿಟ್ಟುಕೊಂಡು ದುರ್ಯೋಧನನು ಪಾಂಡವರೊಂದಿಗೆ ಅಧರ್ಮವಾಗಿ ನಡೆದುಕೊಂಡಿದುದನ್ನು ಹೇಳುವುದು (೧-೨೦). ಆಗ ಕುರು ವೃದ್ಧರು ನಮ್ಮನ್ನು ಸೆರೆಹಿಡಿಯಲು ಯೋಚಿಸುತ್ತಿದ್ದಾರೆ ಎಂದು ದುಃಶಾಸನನು ದುರ್ಯೋಧನನಿಗೆ ಹೇಳಲು ಅವನು ಸಭೆಯಿಂದ ಹೊರ ಹೋದುದು, ಇತರರು ಅವನನ್ನು ಅನುಸರಿಸಿದ್ದುದು (೨೧-೨೮). ಭೀಷ್ಮನೂ ತನ್ನ ಅಸಹಾಯಕತೆಯನ್ನು ತೋರಿಸಲು ಕೃಷ್ಣನು “ಬಲವನ್ನುಪಯೋಗಿಸಿ ದುರ್ಯೋಧನನನ್ನು ನಿಯಂತ್ರಿಸದೇ ಇರುವುದು ಎಲ್ಲ ಕುರುವೃದ್ಧರ ಮಹಾ ಅನ್ಯಾಯ ಮತ್ತು ಅಪರಾಧ...ದುರ್ಯೋಧನ, ಕರ್ಣ, ಶಕುನಿ, ದುಃಶಾಸನರನ್ನು ಬಂಧಿಸಿ ಪಾಂಡವರಿಗೆ ಸಲ್ಲಿಸಿ” ಎಂದು ಸೂಚಿಸುವುದು (೨೯-೪೯).

05126001 ವೈಶಂಪಾಯನ ಉವಾಚ|

05126001a ತತಃ ಪ್ರಹಸ್ಯ ದಾಶಾರ್ಹಃ ಕ್ರೋಧಪರ್ಯಾಕುಲೇಕ್ಷಣಃ|

05126001c ದುರ್ಯೋಧನಮಿದಂ ವಾಕ್ಯಮಬ್ರವೀತ್ಕುರುಸಂಸದಿ||

ವೈಶಂಪಾಯನನು ಹೇಳಿದನು: “ಆಗ ದಾಶಾರ್ಹನು ಜೋರಾಗಿ ನಕ್ಕು, ಸಿಟ್ಟಿನಿಂದ ಕಣ್ಣುಗಳನ್ನು ತಿರುಗಿಸುತ್ತಾ, ಕುರುಸಂಸದಿಯಲ್ಲಿ ದುರ್ಯೋಧನನಿಗೆ ಈ ಮಾತುಗಳನ್ನಾಡಿದನು.

05126002a ಲಪ್ಸ್ಯಸೇ ವೀರಶಯನಂ ಕಾಮಮೇತದವಾಪ್ಸ್ಯಸಿ|

05126002c ಸ್ಥಿರೋ ಭವ ಸಹಾಮಾತ್ಯೋ ವಿಮರ್ದೋ ಭವಿತಾ ಮಹಾನ್||

“ವೀರ ಶಯನವನ್ನು ಬಯಸುತ್ತೀಯಾ? ಅದು ನಿನಗೆ ದೊರೆಯುತ್ತದೆ! ಅಮಾತ್ಯರೊಂದಿಗೆ ಸ್ಥಿರನಾಗು. ಮಹಾ ನಾಶವು ನಡೆಯಲಿದೆ!

05126003a ಯಚ್ಚೈವಂ ಮನ್ಯಸೇ ಮೂಢ ನ ಮೇ ಕಶ್ಚಿದ್ವ್ಯತಿಕ್ರಮಃ|

05126003c ಪಾಂಡವೇಷ್ವಿತಿ ತತ್ಸರ್ವಂ ನಿಬೋಧತ ನರಾಧಿಪಾಃ||

ಮೂಢ! ಪಾಂಡವರ ಕುರಿತು ಕೆಟ್ಟದ್ದನ್ನು ಏನನ್ನೂ ಮಾಡಲಿಲ್ಲ ಎಂದು ನೀನು ತಿಳಿದುಕೊಂಡಿರುವೆಯಲ್ಲ! ಅವೆಲ್ಲವೂ ನರಾಧಿಪರಿಗೆ ತಿಳಿದೇ ಇದೆ.

05126004a ಶ್ರಿಯಾ ಸಂತಪ್ಯಮಾನೇನ ಪಾಂಡವಾನಾಂ ಮಹಾತ್ಮನಾಂ|

05126004c ತ್ವಯಾ ದುರ್ಮಂತ್ರಿತಂ ದ್ಯೂತಂ ಸೌಬಲೇನ ಚ ಭಾರತ||

ಭಾರತ! ಮಹಾತ್ಮ ಪಾಂಡವರ ಐಶ್ವರ್ಯವನ್ನು ನೋಡಿ ಹೊಟ್ಟೆಕಿಚ್ಚಿನಿಂದ ಬೆಂದು ನೀನು ಮತ್ತು ಸೌಬಲನು ದ್ಯೂತದ ಕೆಟ್ಟ ಉಪಾಯವನ್ನು ಮಾಡಿದಿರಿ!

05126005a ಕಥಂ ಚ ಜ್ಞಾತಯಸ್ತಾತ ಶ್ರೇಯಾಂಸಃ ಸಾಧುಸಮ್ಮತಾಃ|

05126005c ತಥಾನ್ಯಾಯ್ಯಮುಪಸ್ಥಾತುಂ ಜಿಹ್ಮೇನಾಜಿಹ್ಮಚಾರಿಣಃ||

ಅಯ್ಯಾ! ಹೇಗೆ ತಾನೇ ಶ್ರೇಯಸ್ಕರರಾದ, ಸಾಧುಗಳಾದ ನಿನ್ನ ಬಾಂಧವರು ಅದಕ್ಕೆ ಸಮ್ಮತಿಯನ್ನು ಕೊಟ್ಟರು?

05126006a ಅಕ್ಷದ್ಯೂತಂ ಮಹಾಪ್ರಾಜ್ಞಾ ಸತಾಮರತಿನಾಶನಂ|

05126006c ಅಸತಾಂ ತತ್ರ ಜಾಯಂತೇ ಭೇದಾಶ್ಚ ವ್ಯಸನಾನಿ ಚ||

ಮಹಾಪ್ರಾಜ್ಞ! ಅಕ್ಷದ್ಯೂತವು ಸಂತರ ಜ್ಞಾನವನ್ನೂ ಅಪಹರಿಸುತ್ತದೆ. ಅಸಂತರು ಅಲ್ಲಿ ಭೇದ-ವ್ಯಸನಗಳನ್ನು ಹುಟ್ಟಿಸುತ್ತಾರೆ.

05126007a ತದಿದಂ ವ್ಯಸನಂ ಘೋರಂ ತ್ವಯಾ ದ್ಯೂತಮುಖಂ ಕೃತಂ|

05126007c ಅಸಮೀಕ್ಷ್ಯ ಸದಾಚಾರೈಃ ಸಾರ್ಧಂ ಪಾಪಾನುಬಂಧನೈಃ||

ನಿನ್ನ ಪಾಪಿ ಅನುಯಾಯಿಗಳೊಂದಿಗೆ ಸೇರಿಕೊಂಡು, ಸದಾಚಾರಗಳನ್ನು ಕಡೆಗಣಿಸಿ, ಈ ಘೋರ ವ್ಯಸನವನ್ನು ತರುವ ದ್ಯೂತದ ಮುಖವಾಡವನ್ನು ನೀನೇ ಮಾಡಿರುವುದು.

05126008a ಕಶ್ಚಾನ್ಯೋ ಜ್ಞಾತಿಭಾರ್ಯಾಂ ವೈ ವಿಪ್ರಕರ್ತುಂ ತಥಾರ್ಹತಿ|

05126008c ಆನೀಯ ಚ ಸಭಾಂ ವಕ್ತುಂ ಯಥೋಕ್ತಾ ದ್ರೌಪದೀ ತ್ವಯಾ||

ಬೇರೆ ಯಾರುತಾನೇ ಅಣ್ಣನ ಭಾರ್ಯೆಯನ್ನು ನೀನು ಮಾಡಿದಂತೆ ಸಭೆಗೆ ಎಳೆದು ತಂದು ದ್ರೌಪದಿಗೆ ಮಾತನಾಡಿದಂತೆ ಮಾತನಾಡಿಯಾರು?

05126009a ಕುಲೀನಾ ಶೀಲಸಂಪನ್ನಾ ಪ್ರಾಣೇಭ್ಯೋಽಪಿ ಗರೀಯಸೀ|

05126009c ಮಹಿಷೀ ಪಾಂಡುಪುತ್ರಾಣಾಂ ತಥಾ ವಿನಿಕೃತಾ ತ್ವಯಾ||

ಕುಲೀನೆ, ಶೀಲಸಂಪನ್ನೆ, ಪಾಂಡುಪುತ್ರರ ಮಹಿಷಿ, ಅವರ ಪ್ರಾಣಕ್ಕಿಂತಲೂ ಹೆಚ್ಚಿನವಳಾದ ಅವಳನ್ನು ನೀನು ಉಲ್ಲಂಘಿಸಿ ನಡೆದುಕೊಂಡೆ.

05126010a ಜಾನಂತಿ ಕುರವಃ ಸರ್ವೇ ಯಥೋಕ್ತಾಃ ಕುರುಸಂಸದಿ|

05126010c ದುಃಶಾಸನೇನ ಕೌಂತೇಯಾಃ ಪ್ರವ್ರಜಂತಃ ಪರಂತಪಾಃ||

ಆ ಪರಂತಪ ಕೌಂತೇಯರು ಹೊರಡುವಾಗ ದುಃಶಾಸನನು ಕುರುಸಂಸದಿಯಲ್ಲಿ ಹೇಳಿದುದು ಕುರುಗಳೆಲ್ಲರಿಗೂ ಗೊತ್ತು.

05126011a ಸಮ್ಯಗ್ವೃತ್ತೇಷ್ವಲುಬ್ಧೇಷು ಸತತಂ ಧರ್ಮಚಾರಿಷು|

05126011c ಸ್ವೇಷು ಬಂಧುಷು ಕಃ ಸಾಧುಶ್ಚರೇದೇವಮಸಾಂಪ್ರತಂ||

ನೀನಲ್ಲದೇ ಬೇರೆ ಯಾರುತಾನೆ ಸತತವೂ ಧರ್ಮಚಾರಿಗಳಾಗಿರುವ, ಕಷ್ಟದಲ್ಲಿಯೂ ಸಾಧುಗಳಂತೆ ನಡೆದುಕೊಂಡಿರುವ ತನ್ನದೇ ಬಂಧುಗಳಿಗೆ ಈ ರೀತಿ ಬಹಳ ಕಷ್ಟಗಳನ್ನು ಕೊಡುತ್ತಾನೆ?

05126012a ನೃಶಂಸಾನಾಮನಾರ್ಯಾಣಾಂ ಪರುಷಾಣಾಂ ಚ ಭಾಷಣಂ|

05126012c ಕರ್ಣದುಃಶಾಸನಾಭ್ಯಾಂ ಚ ತ್ವಯಾ ಚ ಬಹುಶಃ ಕೃತಂ||

ಕ್ರೂರಿಗಳ, ಅನಾರ್ಯರ, ದುಷ್ಟ ಬಹಳಷ್ಟು ಮಾತುಗಳನ್ನು ಕರ್ಣ-ದುಃಶಾಸನರು ಮತ್ತು ನೀನೂ ಆಡಿದಿರಿ.

05126013a ಸಹ ಮಾತ್ರಾ ಪ್ರದಗ್ಧುಂ ತಾನ್ಬಾಲಕಾನ್ವಾರಣಾವತೇ|

05126013c ಆಸ್ಥಿತಃ ಪರಮಂ ಯತ್ನಂ ನ ಸಮೃದ್ಧಂ ಚ ತತ್ತವ||

ತಾಯಿಯೊಂದಿಗೆ ಆ ಬಾಲಕರನ್ನು ವಾರಣಾವತದಲ್ಲಿ ಸುಟ್ಟುಹಾಕಲು ಪರಮ ಪ್ರಯತ್ನವನ್ನು ನೀನು ಮಾಡಿದೆ. ಆದರೆ ಅದು ಯಶಸ್ವಿಯಾಗಲಿಲ್ಲ.

05126014a ಊಷುಶ್ಚ ಸುಚಿರಂ ಕಾಲಂ ಪ್ರಚ್ಚನ್ನಾಃ ಪಾಂಡವಾಸ್ತದಾ|

05126014c ಮಾತ್ರಾ ಸಹೈಕಚಕ್ರಾಯಾಂ ಬ್ರಾಹ್ಮಣಸ್ಯ ನಿವೇಶನೇ||

ಆಗ ಬಹುಕಾಲ ಪಾಂಡವರು ಮರೆಸಿಕೊಂಡು ತಾಯಿಯೊಂದಿಗೆ ಏಕಚಕ್ರದಲ್ಲಿ ಬ್ರಾಹ್ಮಣನ ಮನೆಯಲ್ಲಿ ವಾಸಿಸಬೇಕಾಯಿತು.

05126015a ವಿಷೇಣ ಸರ್ಪಬಂಧೈಶ್ಚ ಯತಿತಾಃ ಪಾಂಡವಾಸ್ತ್ವಯಾ|

05126015c ಸರ್ವೋಪಾಯೈರ್ವಿನಾಶಾಯ ನ ಸಮೃದ್ಧಂ ಚ ತತ್ತವ||

ವಿಷಭರಿತ ಸರ್ಪಗಳಿಂದ ಕಟ್ಟಿಹಾಕುವ ಸರ್ವ ಉಪಾಯಗಳಿಂದ ಪಾಂಡವರನ್ನು ವಿನಾಶಗೊಳಿಸಲು ಪ್ರಯತ್ನಿಸಿದೆ. ಯಾವುದೂ ಯಶಸ್ವಿಯಾಗಲಿಲ್ಲ.

05126016a ಏವಂಬುದ್ಧಿಃ ಪಾಂಡವೇಷು ಮಿಥ್ಯಾವೃತ್ತಿಃ ಸದಾ ಭವಾನ್|

05126016c ಕಥಂ ತೇ ನಾಪರಾಧೋಽಸ್ತಿ ಪಾಂಡವೇಷು ಮಹಾತ್ಮಸು||

ಇದೇ ಬುದ್ಧಿಯಿಂದ ನೀನು ಸದಾ ಪಾಂಡವರೊಂದಿಗೆ ಮೋಸಗಾರನಂತೆ ನಡೆದುಕೊಂಡಿರುವೆ! ಆ ಮಹಾತ್ಮ ಪಾಂಡವರ ವಿರುದ್ಧ ಅಪರಾಧಿಯಲ್ಲ ಎಂದು ನೀನು ಹೇಗೆ ಹೇಳುತ್ತೀಯೆ?

05126017a ಕೃತ್ವಾ ಬಹೂನ್ಯಕಾರ್ಯಾಣಿ ಪಾಂಡವೇಷು ನೃಶಂಸವತ್|

05126017c ಮಿಥ್ಯಾವೃತ್ತಿರನಾರ್ಯಃ ಸನ್ನದ್ಯ ವಿಪ್ರತಿಪದ್ಯಸೇ||

ಕ್ರೂರಿಯಾಗಿ ಬಹಳ ಮಾಡಬಾರದವುಗಳನ್ನು ಮಾಡಿ, ಅನಾರ್ಯನಂತೆ ಮೋಸದಿಂದ ನಡೆದುಕೊಂಡು ಈಗ ಬೇರೆಯೇ ವೇಷವನ್ನು ತೋರಿಸುತ್ತಿದ್ದೀಯೆ!

05126018a ಮಾತಾಪಿತೃಭ್ಯಾಂ ಭೀಷ್ಮೇಣ ದ್ರೋಣೇನ ವಿದುರೇಣ ಚ|

05126018c ಶಾಮ್ಯೇತಿ ಮುಹುರುಕ್ತೋಽಸಿ ನ ಚ ಶಾಮ್ಯಸಿ ಪಾರ್ಥಿವ||

ಪಾರ್ಥಿವ! ತಂದೆ-ತಾಯಿಗಳು, ಭೀಷ್ಮ, ದ್ರೋಣ ಮತ್ತು ವಿದುರರು ಸಂಧಿ ಮಾಡಿಕೋ ಎಂದು ಪುನಃ ಪುನಃ ಹೇಳಿದರೂ ನೀನು ಸಂಧಿ ಮಾಡಿಕೊಳ್ಳುತ್ತಿಲ್ಲ.

05126019a ಶಮೇ ಹಿ ಸುಮಹಾನರ್ಥಸ್ತವ ಪಾರ್ಥಸ್ಯ ಚೋಭಯೋಃ|

05126019c ನ ಚ ರೋಚಯಸೇ ರಾಜನ್ಕಿಮನ್ಯದ್ಬುದ್ಧಿಲಾಘವಾತ್||

ನಿನಗೆ ಮತ್ತು ಪಾರ್ಥ ಇಬ್ಬರಿಗೂ ಬಹಳ ಒಳ್ಳೆಯದಾದುದು ಶಾಂತಿ-ಸಂಧಿ. ರಾಜನ್! ಆದರೆ ಇದು ನಿನಗೆ ಇಷ್ಟವಾಗುತ್ತಿಲ್ಲವೆಂದರೆ ಇದಕ್ಕೆ ಕಾರಣ ಬುದ್ಧಿಯ ಕೊರತೆಯಲ್ಲದೇ ಬೇರೆ ಏನಿರಬಹುದು?

05126020a ನ ಶರ್ಮ ಪ್ರಾಪ್ಸ್ಯಸೇ ರಾಜನ್ನುತ್ಕ್ರಮ್ಯ ಸುಹೃದಾಂ ವಚಃ|

05126020c ಅಧರ್ಮ್ಯಮಯಶಸ್ಯಂ ಚ ಕ್ರಿಯತೇ ಪಾರ್ಥಿವ ತ್ವಯಾ||

ರಾಜನ್! ಸುಹೃದರ ಮಾತುಗಳನ್ನು ಅತಿಕ್ರಮಿಸಿ ನಿನಗೆ ನೆಲೆಯು ದೊರಕುವುದಿಲ್ಲ. ಪಾರ್ಥಿವ! ನೀನು ಮಾಡಲು ಹೊರಟಿರುವುದು ಅಧರ್ಮ ಮತ್ತು ಅಯಶಸ್ಕರವಾದುದು.”

05126021a ಏವಂ ಬ್ರುವತಿ ದಾಶಾರ್ಹೇ ದುರ್ಯೋಧನಮಮರ್ಷಣಂ|

05126021c ದುಃಶಾಸನ ಇದಂ ವಾಕ್ಯಮಬ್ರವೀತ್ಕುರುಸಂಸದಿ||

ದಾಶಾರ್ಹನು ಹೀಗೆ ಹೇಳುತ್ತಿರಲು ದುಃಶಾಸನನು ಕುರುಸಂಸದಿಯಲ್ಲಿ ಕೋಪಿಷ್ಟ ದುರ್ಯೋಧನನಿಗೆ ಈ ಮಾತುಗಳನ್ನಾಡಿದನು.

05126022a ನ ಚೇತ್ಸಂಧಾಸ್ಯಸೇ ರಾಜನ್ಸ್ವೇನ ಕಾಮೇನ ಪಾಂಡವೈಃ|

05126022c ಬದ್ಧ್ವಾ ಕಿಲ ತ್ವಾಂ ದಾಸ್ಯಂತಿ ಕುಂತೀಪುತ್ರಾಯ ಕೌರವಾಃ||

“ರಾಜನ್! ಸ್ವ-ಇಚ್ಛೆಯಿಂದ ನೀನು ಪಾಂಡವರೊಂದಿಗೆ ಸಂಧಿ ಮಾಡಿಕೊಳ್ಳದೇ ಇದ್ದರೆ ಕೌರವರು ನಿನ್ನನ್ನು ಬಂಧಿಸಿ ಕುಂತೀಪುತ್ರನಿಗೆ ಕೊಡುತ್ತಾರೆ.

05126023a ವೈಕರ್ತನಂ ತ್ವಾಂ ಚ ಮಾಂ ಚ ತ್ರೀನೇತಾನ್ಮನುಜರ್ಷಭ|

05126023c ಪಾಂಡವೇಭ್ಯಃ ಪ್ರದಾಸ್ಯಂತಿ ಭೀಷ್ಮೋ ದ್ರೋಣಃ ಪಿತಾ ಚ ತೇ||

ಮನುಜರ್ಷಭ! ಭೀಷ್ಮ, ದ್ರೋಣ ಮತ್ತು ನಿನ್ನ ತಂದೆಯು ವೈಕರ್ತನನನ್ನು, ನಿನ್ನನ್ನು ಮತ್ತು ನನ್ನನ್ನು - ಈ ಮೂವರನ್ನು ಪಾಂಡವರಿಗೆ ಕೊಡಲಿದ್ದಾರೆ.”

05126024a ಭ್ರಾತುರೇತದ್ವಚಃ ಶ್ರುತ್ವಾ ಧಾರ್ತರಾಷ್ಟ್ರಃ ಸುಯೋಧನಃ|

05126024c ಕ್ರುದ್ಧಃ ಪ್ರಾತಿಷ್ಠತೋತ್ಥಾಯ ಮಹಾನಾಗ ಇವ ಶ್ವಸನ್||

ತಮ್ಮನ ಈ ಮಾತನ್ನು ಕೇಳಿ ಧಾರ್ತರಾಷ್ಟ್ರ ಸುಯೋಧನನು ಕ್ರುದ್ಧನಾಗಿ ಮಹಾನಾಗನಂತೆ ಭುಸುಗುಟ್ಟುತ್ತಾ ತನ್ನ ಆಸನದಿಂದ ಮೇಲೆದ್ದನು.

05126025a ವಿದುರಂ ಧೃತರಾಷ್ಟ್ರಂ ಚ ಮಹಾರಾಜಂ ಚ ಬಾಹ್ಲಿಕಂ|

05126025c ಕೃಪಂ ಚ ಸೋಮದತ್ತಂ ಚ ಭೀಷ್ಮಂ ದ್ರೋಣಂ ಜನಾರ್ದನಂ||

05126026a ಸರ್ವಾನೇತಾನನಾದೃತ್ಯ ದುರ್ಮತಿರ್ನಿರಪತ್ರಪಃ|

05126026c ಅಶಿಷ್ಟವದಮರ್ಯಾದೋ ಮಾನೀ ಮಾನ್ಯಾವಮಾನಿತಾ||

ಆ ಅಶಿಷ್ಟವಾಗಿ ಮಾತನಾಡುವ, ಮರ್ಯಾದೆಯನ್ನು ಕೊಡದ, ದುರಭಿಮಾನಿ ದುರ್ಮತಿಯು ಮಾನ್ಯರನ್ನು ಅವಮಾನಿಸಿ ವಿದುರ, ಮಹಾರಾಜ ಧೃತರಾಷ್ಟ್ರ, ಬಾಹ್ಲಿಕ, ಕೃಪ, ಸೋಮದತ್ತ, ಭೀಷ್ಮ, ದ್ರೋಣ, ಜನಾರ್ದನ ಎಲ್ಲರನ್ನೂ ಅನಾದರಿಸಿ ಹೊರ ಹೋದನು.

05126027a ತಂ ಪ್ರಸ್ಥಿತಮಭಿಪ್ರೇಕ್ಷ್ಯ ಭ್ರಾತರೋ ಮನುಜರ್ಷಭಂ|

05126027c ಅನುಜಗ್ಮುಃ ಸಹಾಮಾತ್ಯಾ ರಾಜಾನಶ್ಚಾಪಿ ಸರ್ವಶಃ||

ಅವನು ಹೊರಹೋಗುವುದನ್ನು ನೋಡಿ ಸಹೋದರರು ಮತ್ತು ಅಮಾತ್ಯರು ಸರ್ವ ರಾಜರೊಂದಿಗೆ ಆ ಮನುಜರ್ಷಭನನ್ನು ಹಿಂಬಾಲಿಸಿ ಹೋದರು.

05126028a ಸಭಾಯಾಮುತ್ಥಿತಂ ಕ್ರುದ್ಧಂ ಪ್ರಸ್ಥಿತಂ ಭ್ರಾತೃಭಿಃ ಸಹ|

05126028c ದುರ್ಯೋಧನಮಭಿಪ್ರೇಕ್ಷ್ಯ ಭೀಷ್ಮಃ ಶಾಂತನವೋಽಬ್ರವೀತ್||

ಕ್ರುದ್ಧನಾಗಿ ಸಭೆಯಿಂದ ಎದ್ದು ಭ್ರಾತೃಗಳೊಂದಿಗೆ ಹೊರಟು ಹೋದ ದುರ್ಯೋಧನನನ್ನು ನೋಡಿ ಭೀಷ್ಮ ಶಾಂತನವನು ಹೇಳಿದನು:

05126029a ಧರ್ಮಾರ್ಥಾವಭಿಸಂತ್ಯಜ್ಯ ಸಂರಂಭಂ ಯೋಽನುಮನ್ಯತೇ|

05126029c ಹಸಂತಿ ವ್ಯಸನೇ ತಸ್ಯ ದುರ್ಹೃದೋ ನಚಿರಾದಿವ||

“ಧರ್ಮಾರ್ಥಗಳನ್ನು ತ್ಯಜಿಸಿ ತನ್ನ ಮನೋವಿಕಾರಗಳನ್ನು ಅನುಸರಿಸುವವನು ಸ್ವಲ್ಪವೇ ಸಮಯದಲ್ಲಿ ಅವನ ದುಹೃದಯರ ನಗೆಗೀಡಾಗುತ್ತಾನೆ.

05126030a ದುರಾತ್ಮಾ ರಾಜಪುತ್ರೋಽಯಂ ಧಾರ್ತರಾಷ್ಟ್ರೋಽನುಪಾಯವಿತ್|

05126030c ಮಿಥ್ಯಾಭಿಮಾನೀ ರಾಜ್ಯಸ್ಯ ಕ್ರೋಧಲೋಭವಶಾನುಗಃ||

ಈ ರಾಜಪುತ್ರ ಧಾರ್ತರಾಷ್ಟ್ರನು ದುರಾತ್ಮನು. ಸರಿಯಾದುದನ್ನು ತಿಳಿಯದವನು. ಮಿಥ್ಯಾಭಿಮಾನೀ. ಮತ್ತು ರಾಜ್ಯಕ್ಕಾಗಿ ಕ್ರೋಧ-ಲೋಭಗಳಿಗೆ ವಶನಾಗಿ ನಡೆದುಕೊಳ್ಳುವವನು.

05126031a ಕಾಲಪಕ್ವಮಿದಂ ಮನ್ಯೇ ಸರ್ವಕ್ಷತ್ರಂ ಜನಾರ್ದನ|

05126031c ಸರ್ವೇ ಹ್ಯನುಸೃತಾ ಮೋಹಾತ್ಪಾರ್ಥಿವಾಃ ಸಹ ಮಂತ್ರಿಭಿಃ||

ಜನಾರ್ದನ! ಸರ್ವ ಕ್ಷತ್ರಿಯರ ಕಾಲವೂ ಪಕ್ವವಾಗಿದೆ ಎನ್ನಿಸುತ್ತಿದೆ. ಏಕೆಂದರೆ ಎಲ್ಲ ಪಾರ್ಥಿವರೂ ಮಂತ್ರಿಗಳೂ ಮೋಹದಿಂದ ಅವನನ್ನೇ ಅನುಸರಿಸುತ್ತಿದ್ದಾರೆ.”

05126032a ಭೀಷ್ಮಸ್ಯಾಥ ವಚಃ ಶ್ರುತ್ವಾ ದಾಶಾರ್ಹಃ ಪುಷ್ಕರೇಕ್ಷಣಃ|

05126032c ಭೀಷ್ಮದ್ರೋಣಮುಖಾನ್ಸರ್ವಾನಭ್ಯಭಾಷತ ವೀರ್ಯವಾನ್||

ಭೀಷ್ಮನ ಆ ಮಾತುಗಳನ್ನು ಕೇಳಿ ಪುಷ್ಕರೇಕ್ಷಣ ವೀರ್ಯವಾನ್ ದಾಶಾರ್ಹನು ಭೀಷ್ಮ-ದ್ರೋಣ ಪ್ರಮುಖರೆಲ್ಲರನ್ನೂ ಉದ್ದೇಶಿಸಿ ಹೇಳಿದನು:

05126033a ಸರ್ವೇಷಾಂ ಕುರುವೃದ್ಧಾನಾಂ ಮಹಾನಯಮತಿಕ್ರಮಃ|

05126033c ಪ್ರಸಹ್ಯ ಮಂದಮೈಶ್ವರ್ಯೇ ನ ನಿಯಚ್ಚತ ಯನ್ನೃಪಂ||

“ಐಶ್ವರ್ಯದಿಂದ ಮಂದನಾಗಿರುವ ಈ ನೃಪನನ್ನು ಬಲವನ್ನುಪಯೋಗಿಸಿ ನಿಯಂತ್ರಿಸದೇ ಇರುವುದು ಎಲ್ಲ ಕುರುವೃದ್ಧರ ಮಹಾ ಅನ್ಯಾಯ ಮತ್ತು ಅಪರಾಧ.

05126034a ತತ್ರ ಕಾರ್ಯಮಹಂ ಮನ್ಯೇ ಪ್ರಾಪ್ತಕಾಲಮರಿಂದಮಾಃ|

05126034c ಕ್ರಿಯಮಾಣೇ ಭವೇಚ್ಚ್ರೇಯಸ್ತತ್ಸರ್ವಂ ಶೃಣುತಾನಘಾಃ||

05126035a ಪ್ರತ್ಯಕ್ಷಮೇತದ್ಭವತಾಂ ಯದ್ವಕ್ಷ್ಯಾಮಿ ಹಿತಂ ವಚಃ|

05126035c ಭವತಾಮಾನುಕೂಲ್ಯೇನ ಯದಿ ರೋಚೇತ ಭಾರತಾಃ||

ಅರಿಂದಮರೇ! ಆ ಕಾರ್ಯಕ್ಕೆ ಈಗ ಕಾಲವೊದಗಿದೆ ಎಂದು ನನಗನ್ನಿಸುತ್ತದೆ. ಹೀಗೆ ಮಾಡುವುದರಿಂದ ಎಲ್ಲವೂ ಒಳ್ಳೆಯದಾಗುತ್ತದೆ. ಅನಘರೇ! ನಿಮಗೆ ಪ್ರತ್ಯಕ್ಷವಾಗಿ ನಾನು ಹಿತವಾದ ಏನನ್ನು ಹೇಳುತ್ತೇನೋ ಅದನ್ನು, ಭಾರತರೇ! ನಿಮಗೆ ಅನುಕೂಲವಾದರೆ ಇಷ್ಟವಾದರೆ ಕೇಳಿ.

05126036a ಭೋಜರಾಜಸ್ಯ ವೃದ್ಧಸ್ಯ ದುರಾಚಾರೋ ಹ್ಯನಾತ್ಮವಾನ್|

05126036c ಜೀವತಃ ಪಿತುರೈಶ್ವರ್ಯಂ ಹೃತ್ವಾ ಮನ್ಯುವಶಂ ಗತಃ||

ವೃದ್ಧ ಭೋಜರಾಜನ ದುರಾಚಾರಿ ಅನಾತ್ಮವಂತ ಮಗನು ಕೋಪಾವಿಷ್ಟನಾಗಿ ತಂದೆಯು ಜೀವಂತವಿರುವಾಗಲೇ ಐಶ್ವರ್ಯವನ್ನು ಅಪಹರಿಸಿದನು.

05126037a ಉಗ್ರಸೇನಸುತಃ ಕಂಸಃ ಪರಿತ್ಯಕ್ತಃ ಸ ಬಾಂಧವೈಃ|

05126037c ಜ್ಞಾತೀನಾಂ ಹಿತಕಾಮೇನ ಮಯಾ ಶಸ್ತೋ ಮಹಾಮೃಧೇ||

ಬಾಂಧವರಿಂದ ಪರಿತ್ಯಕ್ತನಾದ ಈ ಉಗ್ರಸೇನ ಸುತ ಕಂಸನನ್ನು ಬಾಂಧವರ ಹಿತವನ್ನು ಬಯಸಿ, ನಾನು ಮಹಾಯುದ್ಧದಲ್ಲಿ ಶಿಕ್ಷಿಸಿದೆನು.

05126038a ಆಹುಕಃ ಪುನರಸ್ಮಾಭಿರ್ಜ್ಞಾತಿಭಿಶ್ಚಾಪಿ ಸತ್ಕೃತಃ|

05126038c ಉಗ್ರಸೇನಃ ಕೃತೋ ರಾಜಾ ಭೋಜರಾಜನ್ಯವರ್ಧನಃ||

ಅನಂತರ ಇತರ ಬಾಂಧವರೊಂದಿಗೆ ನಾವು ಆಹುಕ ಉಗ್ರಸೇನನನ್ನು ಸತ್ಕರಿಸಿ ಪುನಃ ರಾಜನನ್ನಾಗಿ ಮಾಡಿದೆವು. ಅವನಿಂದ ಭೋಜರಾಜ್ಯವು ವರ್ಧಿಸಿತು.

05126039a ಕಂಸಮೇಕಂ ಪರಿತ್ಯಜ್ಯ ಕುಲಾರ್ಥೇ ಸರ್ವಯಾದವಾಃ|

05126039c ಸಂಭೂಯ ಸುಖಮೇಧಂತೇ ಭಾರತಾಂಧಕವೃಷ್ಣಯಃ||

ಭಾರತ! ಕುಲಕ್ಕಾಗಿ ಕಂಸನೊಬ್ಬನನ್ನು ಪರಿತ್ಯಜಿಸಿ ಎಲ್ಲ ಯಾದವರೂ ಅಂಧಕ-ವೃಷ್ಣಿಯರೂ ಅಭಿವೃದ್ಧಿ ಹೊಂದಿ ಸುಖದಿಂದಿದ್ದಾರೆ.

05126040a ಅಪಿ ಚಾಪ್ಯವದದ್ರಾಜನ್ಪರಮೇಷ್ಠೀ ಪ್ರಜಾಪತಿಃ|

05126040c ವ್ಯೂಢೇ ದೇವಾಸುರೇ ಯುದ್ಧೇಽಭ್ಯುದ್ಯತೇಷ್ವಾಯುಧೇಷು ಚ||

ರಾಜನ್! ದೇವಾಸುರರು ತಮ್ಮ ತಮ್ಮ ಆಯುಧಗಳನ್ನು ಎತ್ತಿ ಹಿಡಿದು ಯುದ್ಧಕ್ಕೆ ತೊಡಗಿದಾಗ ಪರಮೇಷ್ಠೀ ಪ್ರಜಾಪತಿಯೂ ಹೇಳಿದ್ದನು.

05126041a ದ್ವೈಧೀಭೂತೇಷು ಲೋಕೇಷು ವಿನಶ್ಯತ್ಸು ಚ ಭಾರತ|

05126041c ಅಬ್ರವೀತ್ಸೃಷ್ಟಿಮಾನ್ದೇವೋ ಭಗವಾಽಲ್ಲೋಕಭಾವನಃ||

ಲೋಕದಲ್ಲಿರುವವೆಲ್ಲವೂ ಎರಡಾಗಿ ವಿನಾಶದ ಮಾರ್ಗದಲ್ಲಿರುವಾಗ ಭಗವಾನ್, ಲೋಕಭಾವನ, ದೇವ ಸೃಷ್ಟಿಕರ್ತನು ಹೇಳಿದನು:

05126042a ಪರಾಭವಿಷ್ಯಂತ್ಯಸುರಾ ದೈತೇಯಾ ದಾನವೈಃ ಸಹ|

05126042c ಆದಿತ್ಯಾ ವಸವೋ ರುದ್ರಾ ಭವಿಷ್ಯಂತಿ ದಿವೌಕಸಃ||

“ಅಸುರರು ದೈತ್ಯ ದಾನವರೊಂದಿಗೆ ಪರಾಭವ ಹೊಂದುತ್ತಾರೆ. ಆದಿತ್ಯ, ವಸುಗಳು ಮತ್ತು ರುದ್ರರು ದಿವೌಕಸರಾಗುತ್ತಾರೆ.

05126043a ದೇವಾಸುರಮನುಷ್ಯಾಶ್ಚ ಗಂಧರ್ವೋರಗರಾಕ್ಷಸಾಃ|

05126043c ಅಸ್ಮಿನ್ಯುದ್ಧೇ ಸುಸಮ್ಯತ್ತಾ ಹನಿಷ್ಯಂತಿ ಪರಸ್ಪರಂ||

ಈ ಯುದ್ಧದಲ್ಲಿ ದೇವ, ಅಸುರ, ಮನುಷ್ಯ, ಗಂಧರ್ವ, ಉರಗ, ರಾಕ್ಷಸರು ಅತಿಕೋಪದಿಂದ ಪರಸ್ಪರರನ್ನು ಸಂಹರಿಸುತ್ತಾರೆ.”

05126044a ಇತಿ ಮತ್ವಾಬ್ರವೀದ್ಧರ್ಮಂ ಪರಮೇಷ್ಠೀ ಪ್ರಜಾಪತಿಃ|

05126044c ವರುಣಾಯ ಪ್ರಯಚ್ಚೈತಾನ್ಬದ್ಧ್ವಾ ದೈತೇಯದಾನವಾನ್||

ಹೀಗೆ ತನ್ನ ಮತವನ್ನು ಹೇಳಿ ಪರಮೇಷ್ಠೀ ಪ್ರಜಾಪತಿಯು ಧರ್ಮನಿಗೆ ಹೇಳಿದನು: “ದೈತ್ಯ-ದಾನವರನ್ನು ಬಂಧಿಸಿ ವರುಣನಿಗೆ ಒಪ್ಪಿಸು!”

05126045a ಏವಮುಕ್ತಸ್ತತೋ ಧರ್ಮೋ ನಿಯೋಗಾತ್ಪರಮೇಷ್ಠಿನಃ|

05126045c ವರುಣಾಯ ದದೌ ಸರ್ವಾನ್ಬದ್ಧ್ವಾ ದೈತೇಯದಾನವಾನ್||

ಪರಮೇಷ್ಠಿಯು ಹೀಗೆ ನಿಯೋಗವನ್ನು ನೀಡಲು ಧರ್ಮನು ಎಲ್ಲ ದೈತ್ಯ-ದಾನವರನ್ನೂ ಬಂದಿಸಿ ವರುಣನಿಗೆ ಕೊಟ್ಟನು.

05126046a ತಾನ್ಬದ್ಧ್ವಾ ಧರ್ಮಪಾಶೈಶ್ಚ ಸ್ವೈಶ್ಚ ಪಾಶೈರ್ಜಲೇಶ್ವರಃ|

05126046c ವರುಣಃ ಸಾಗರೇ ಯತ್ತೋ ನಿತ್ಯಂ ರಕ್ಷತಿ ದಾನವಾನ್||

ಅನಂತರ ಜಲೇಶ್ವರ ವರುಣನು ಆ ದಾನವರನ್ನು ಧರ್ಮಪಾಶಗಳಿಂದ ಮತ್ತು ಅವನದೇ ಪಾಶಗಳಿಂದ ಬಂಧಿಸಿ ಸಾಗರದಲ್ಲಿರಿಸಿ ನಿತ್ಯವೂ ರಕ್ಷಿಸುತ್ತಾನೆ.

05126047a ತಥಾ ದುರ್ಯೋಧನಂ ಕರ್ಣಂ ಶಕುನಿಂ ಚಾಪಿ ಸೌಬಲಂ|

05126047c ಬದ್ಧ್ವಾ ದುಃಶಾಸನಂ ಚಾಪಿ ಪಾಂಡವೇಭ್ಯಃ ಪ್ರಯಚ್ಚತ||

ಹಾಗೆಯೇ ದುರ್ಯೋಧನ, ಕರ್ಣ, ಸೌಬಲ ಶಕುನಿ ಮತ್ತು ದುಃಶಾಸನರನ್ನು ಬಂಧಿಸಿ ಪಾಂಡವರಿಗೆ ಸಲ್ಲಿಸಿ.

05126048a ತ್ಯಜೇತ್ಕುಲಾರ್ಥೇ ಪುರುಷಂ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್|

05126048c ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್||

ಕುಲಕ್ಕಾಗಿ ಪುರುಷನನ್ನು ತ್ಯಜಿಸಬೇಕು. ಗ್ರಾಮಕ್ಕಾಗಿ ಕುಲವನ್ನು ತ್ಯಜಿಸಬೇಕು. ಜನಪದಕ್ಕಾಗಿ ಗ್ರಾಮವನ್ನು, ಮತ್ತು ಆತ್ಮಕ್ಕಾಗಿ ಪೃಥ್ವಿಯನ್ನು ತ್ಯಜಿಸಬೇಕು.

05126049a ರಾಜನ್ದುರ್ಯೋಧನಂ ಬದ್ಧ್ವಾ ತತಃ ಸಂಶಾಮ್ಯ ಪಾಂಡವೈಃ|

05126049c ತ್ವತ್ಕೃತೇ ನ ವಿನಶ್ಯೇಯುಃ ಕ್ಷತ್ರಿಯಾಃ ಕ್ಷತ್ರಿಯರ್ಷಭ||

ರಾಜನ್! ಕ್ಷತ್ರಿಯರ್ಷಭ! ದುರ್ಯೋಧನನನ್ನು ಬಂಧಿಸಿ ಪಾಂಡವರೊಂದಿಗೆ ಸಂಧಿಮಾಡಿಕೊಂಡರೆ ನಿನ್ನಿಂದಾಗಿ ಕ್ಷತ್ರಿಯರು ವಿನಾಶ ಹೊಂದುವುದಿಲ್ಲ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಕೃಷ್ಣವಾಕ್ಯೇ ಷಡ್‌ವಿಂಶತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಕೃಷ್ಣವಾಕ್ಯದಲ್ಲಿ ನೂರಾಇಪ್ಪತ್ತಾರನೆಯ ಅಧ್ಯಾಯವು.

Image result for indian motifs

Comments are closed.