ಸ್ತ್ರೀ ಪರ್ವ
೨೫
11025001 ಗಾಂಧಾರ್ಯುವಾಚ
11025001a ಕಾಂಬೋಜಂ ಪಶ್ಯ ದುರ್ಧರ್ಷಂ ಕಾಂಬೋಜಾಸ್ತರಣೋಚಿತಮ್|
11025001c ಶಯಾನಮೃಷಭಸ್ಕಂಧಂ ಹತಂ ಪಾಂಸುಶು ಮಾಧವ||
ಗಾಂಧಾರಿಯು ಹೇಳಿದಳು: “ಮಾಧವ! ಕಾಂಬೋಜದ ಮೆತ್ತನೆಯ ಶಯನದಲ್ಲಿ ಮಲಗಲು ಯೋಗ್ಯನಾದ ಋಷಭಸ್ಕಂಧ ದುರ್ಧರ್ಷ ಕಾಂಬೋಜನು ಹತನಾಗಿ ಕೆಸರಿನಲ್ಲಿ ಮಲಗಿರುವುದನ್ನು ನೋಡು!
11025002a ಯಸ್ಯ ಕ್ಷತಜಸಂದಿಗ್ಧೌ ಬಾಹೂ ಚಂದನರೂಷಿತೌ|
11025002c ಅವೇಕ್ಷ್ಯ ಕೃಪಣಂ ಭಾರ್ಯಾ ವಿಲಪತ್ಯತಿದುಃಖಿತಾ||
ಆ ಕೃಪಣನ ಚಂದನಲೇಪಿತ ಬಾಹುಗಳು ಗಾಯಗೊಂಡು ರಕ್ತದಿಂದ ತೋಯ್ದುಹೋಗಿರುವುದನ್ನು ನೋಡಿ ಅವನ ಭಾರ್ಯೆಯು ದುಃಖಿತಳಾಗಿ ವಿಲಪಿಸುತ್ತಿದ್ದಾಳೆ.
11025003a ಇಮೌ ತೌ ಪರಿಘಪ್ರಖ್ಯೌ ಬಾಹೂ ಶುಭತಲಾಂಗುಲೀ|
11025003c ಯಯೋರ್ವಿವರಮಾಪನ್ನಾಂ ನ ರತಿರ್ಮಾಂ ಪುರಾಜಹತ್||
“ಶುಭ ಅಂಗೈ-ಬೆರಳುಗಳಿಂದ ಕೂಡಿದ್ದ ಪರಿಘದಂತಿದ್ದ ನಿನ್ನ ಬಾಹುಗಳ ಮಧ್ಯದಲ್ಲಿ ಸೇರಿಕೊಂಡು ಹಿಂದೆ ರಮಿಸುತ್ತಿದ್ದ ನನ್ನನ್ನು ಅನುರಾಗವು ಬಿಟ್ಟುಹೋಗಿಲ್ಲ.
11025004a ಕಾಂ ಗತಿಂ ನು ಗಮಿಷ್ಯಾಮಿ ತ್ವಯಾ ಹೀನಾ ಜನೇಶ್ವರ|
11025004c ದೂರಬಂಧುರನಾಥೇವ ಅತೀವ ಮಧುರಸ್ವರಾ||
ಜನೇಶ್ವರ! ನೀನಿಲ್ಲದೇ ನಾನು ಯಾವ ಮಾರ್ಗದಲ್ಲಿ ಹೋಗುವೆನೋ!” ಎಂಬುದಾಗಿ ಬಂಧುಗಳಿಲ್ಲದ ಅನಾಥಳಂತೆ ಅವಳು ಮಧುರಸ್ವರದಲ್ಲಿ ರೋದಿಸುತ್ತಿದ್ದಾಳೆ.
11025005a ಆತಪೇ ಕ್ಲಾಮ್ಯಮಾನಾನಾಂ ವಿವಿಧಾನಾಮಿವ ಸ್ರಜಾಮ್|
11025005c ಕ್ಲಾಂತಾನಾಮಪಿ ನಾರೀಣಾಂ ನ ಶ್ರೀರ್ಜಹತಿ ವೈ ತನುಮ್||
ಬಿಸಿಲಿನಲ್ಲಿ ಬಾಡಿಹೋಗಿರುವ ವಿವಿಧ ಹೂವಿನ ಮಾಲೆಗಳಂತೆ ಬಾಡಿಹೋಗಿದ್ದರೂ ಈ ನಾರಿಯರ ಸೌಂದರ್ಯವು ಅವರ ದೇಹಗಳನ್ನು ಬಿಟ್ಟುಹೋಗಿಲ್ಲ.
11025006a ಶಯಾನಮಭಿತಃ ಶೂರಂ ಕಾಲಿಂಗಂ ಮಧುಸೂದನ|
11025006c ಪಶ್ಯ ದೀಪ್ತಾಂಗದಯುಗಪ್ರತಿಬದ್ಧಮಹಾಭುಜಮ್||
ಮಧುಸೂದನ! ಇಲ್ಲಿಯೇ ಹತ್ತಿರದಲ್ಲಿ ಬೆಳಗುತ್ತಿರುವ ಅಂಗದಗಳನ್ನು ಕಟ್ಟಿಕೊಂಡಿರುವ ಆ ಮಹಾಭುಜ ಶೂರ ಕಲಿಂಗನು ಮಲಗಿರುವುದನ್ನು ನೋಡು.
11025007a ಮಾಗಧಾನಾಮಧಿಪತಿಂ ಜಯತ್ಸೇನಂ ಜನಾರ್ದನ|
11025007c ಪರಿವಾರ್ಯ ಪ್ರರುದಿತಾ ಮಾಗಧ್ಯಃ ಪಶ್ಯ ಯೋಷಿತಃ||
ಜನಾರ್ದನ! ಅಲ್ಲಿ ಮಾಗಧ ಸ್ತ್ರೀಯರು ಮಾಗಧರ ಅಧಿಪನನ್ನು ಸುತ್ತುವರೆದು ರೋದಿಸುತ್ತಿರುವುದನ್ನು ನೋಡು!
11025008a ಆಸಾಮಾಯತನೇತ್ರಾಣಾಂ ಸುಸ್ವರಾಣಾಂ ಜನಾರ್ದನ|
11025008c ಮನಃಶ್ರುತಿಹರೋ ನಾದೋ ಮನೋ ಮೋಹಯತೀವ ಮೇ||
ಜನಾರ್ದನ! ಆ ವಿಶಾಲನೇತ್ರೆಯರು ಕೇಳಿದವರ ಮನಸ್ಸನ್ನು ಅಪಹರಿಸುವ ಸುಸ್ವರದಲ್ಲಿ ಕೂಗಿಕೊಳ್ಳುತ್ತಿರುವುದನ್ನು ಕೇಳಿ ನನ್ನ ಮನಸ್ಸು ಅತೀವವಾಗಿ ಮೋಹಗೊಳ್ಳುತ್ತಿದೆ.
11025009a ಪ್ರಕೀರ್ಣಸರ್ವಾಭರಣಾ ರುದಂತ್ಯಃ ಶೋಕಕರ್ಶಿತಾಃ|
11025009c ಸ್ವಾಸ್ತೀರ್ಣಶಯನೋಪೇತಾ ಮಾಗಧ್ಯಃ ಶೇರತೇ ಭುವಿ||
ಸರ್ವಾಭರಣಗಳನ್ನೂ ಕಿತ್ತು ಹರಡಿ ಸುಂದರ ಹಚ್ಚಡವನ್ನು ಹಾಸಿದ ಹಾಸಿಗೆಯ ಮೇಲೆ ಮಲಗಲು ಯೋಗ್ಯರಾಗಿದ್ದ ಈ ಮಾಗಧ ನಾರಿಯರು ಶೋಕಕರ್ಶಿತರಾಗಿ ರೋದಿಸುತ್ತಾ ನೆಲದ ಮೇಲೆ ಮಲಗಿದ್ದಾರೆ!
11025010a ಕೋಸಲಾನಾಮಧಿಪತಿಂ ರಾಜಪುತ್ರಂ ಬೃಹದ್ಬಲಮ್|
11025010c ಭರ್ತಾರಂ ಪರಿವಾರ್ಯೈತಾಃ ಪೃಥಕ್ಪ್ರರುದಿತಾಃ ಸ್ತ್ರಿಯಃ||
ಕೋಸಲರ ಅಧಿಪತಿ ರಾಜಪುತ್ರ ಬೃಹದ್ಬಲನನ್ನು ಅವನ ಪತ್ನಿಯರು ಸುತ್ತುವರೆದು ಪ್ರತ್ಯೇಕ-ಪ್ರತ್ಯೇಕವಾಗಿ ರೋದಿಸುತ್ತಿದ್ದಾರೆ.
11025011a ಅಸ್ಯ ಗಾತ್ರಗತಾನ್ಬಾಣಾನ್ಕಾರ್ಷ್ಣಿಬಾಹುಬಲಾರ್ಪಿತಾನ್|
11025011c ಉದ್ಧರಂತ್ಯಸುಖಾವಿಷ್ಟಾ ಮೂರ್ಚಮಾನಾಃ ಪುನಃ ಪುನಃ||
ಅಭಿಮನ್ಯುವಿನ ಬಲದಿಂದ ಪ್ರಯೋಗಿಸಲ್ಪಟ್ಟು ಅವನ ಶರೀರವನ್ನು ಹೊಕ್ಕಿರುವ ಬಾಣಗಳನ್ನು ಕಷ್ಟದಿಂದ ಕಿತ್ತು ತೆಗೆಯುತ್ತಾ ಅವರು ಪುನಃ ಪುನಃ ಮೂರ್ಛಿತರಾಗುತ್ತಿದ್ದಾರೆ.
11025012a ಆಸಾಂ ಸರ್ವಾನವದ್ಯಾನಾಮಾತಪೇನ ಪರಿಶ್ರಮಾತ್|
11025012c ಪ್ರಮ್ಲಾನನಲಿನಾಭಾನಿ ಭಾಂತಿ ವಕ್ತ್ರಾಣಿ ಮಾಧವ||
ಮಾಧವ! ಪರಿಶ್ರಮದಿಂದಾಗಿ ಸರ್ವಸುಂದರಿಯರಾದ ಅವರ ಮುಖಗಳು ಬಿಸಿಲಿನಲ್ಲಿ ಬಾಡಿದ ಕಮಲಗಳಂತೆ ಕಾಣುತ್ತಿವೆ.
11025013a ದ್ರೋಣೇನ ನಿಹತಾಃ ಶೂರಾಃ ಶೇರತೇ ರುಚಿರಾಂಗದಾಃ|
11025013c ದ್ರೋಣೇನಾಭಿಮುಖಾಃ ಸರ್ವೇ ಭ್ರಾತರಃ ಪಂಚ ಕೇಕಯಾಃ||
ಸುಂದರ ಅಂಗದಗಳನ್ನು ಧರಿಸಿದ್ದ ಐವರು ಶೂರ ಕೇಕಯ ಸಹೋದರರೆಲ್ಲರೂ ದ್ರೋಣನನ್ನು ಎದುರಿಸಿ ದ್ರೋಣನಿಂದ ಹತರಾಗಿ ಮಲಗಿದ್ದಾರೆ.
[1]11025014a ತಪ್ತಕಾಂಚನವರ್ಮಾಣಸ್ತಾಮ್ರಧ್ವಜರಥಸ್ರಜಃ|
11025014c ಭಾಸಯಂತಿ ಮಹೀಂ ಭಾಸಾ ಜ್ವಲಿತಾ ಇವ ಪಾವಕಾಃ||
ಅಪ್ಪಟ ಚಿನ್ನದ ಕವಚಗಳನ್ನು ಧರಿಸಿ ತಾಮ್ರಧ್ವಜ ರಥ ಸಮೂಹಗಳನ್ನೇ ಹೊಂದಿದ್ದ ಕೇಕಯರು ಪ್ರಜ್ವಲಿಸುವ ಅಗ್ನಿಗಳೋ ಎಂಬಂತೆ ತಮ್ಮ ಕಾಂತಿಯಿಂದ ಭೂಮಿಯನ್ನೇ ಬೆಳಗಿಸುತ್ತಿದ್ದಾರೆ!
11025015a ದ್ರೋಣೇನ ದ್ರುಪದಂ ಸಂಖ್ಯೇ ಪಶ್ಯ ಮಾಧವ ಪಾತಿತಮ್|
11025015c ಮಹಾದ್ವಿಪಮಿವಾರಣ್ಯೇ ಸಿಂಹೇನ ಮಹತಾ ಹತಮ್||
ಮಾಧವ! ಅರಣ್ಯದಲ್ಲಿ ಮಹಾಗಜವೊಂದು ಸಿಂಹದಿಂದ ಹತವಾದಂತೆ ರಣದಲ್ಲಿ ದ್ರೋಣನಿಂದ ಹತನಾಗಿ ಬಿದ್ದಿರುವ ದ್ರುಪದನನ್ನು ನೋಡು!
11025016a ಪಾಂಚಾಲರಾಜ್ಞೋ ವಿಪುಲಂ ಪುಂಡರೀಕಾಕ್ಷ ಪಾಂಡುರಮ್|
11025016c ಆತಪತ್ರಂ ಸಮಾಭಾತಿ ಶರದೀವ ದಿವಾಕರಃ||
ಪುಂಡರೀಕಾಕ್ಷ! ಪಾಂಚಲರಾಜನ ಶ್ವೇತಚ್ಛತ್ರವು ಶರತ್ಕಾಲದ ಚಂದ್ರನಂತೆ ವಿಪುಲವಾಗಿ ಬೆಳಗುತ್ತಿದೆ.
11025017a ಏತಾಸ್ತು ದ್ರುಪದಂ ವೃದ್ಧಂ ಸ್ನುಷಾ ಭಾರ್ಯಾಶ್ಚ ದುಃಖಿತಾಃ|
11025017c ದಗ್ಧ್ವಾ ಗಚ್ಚಂತಿ ಪಾಂಚಾಲ್ಯಂ ರಾಜಾನಮಪಸವ್ಯತಃ||
ವೃದ್ಧ ಪಾಂಚಾಲ್ಯ ದ್ರುಪದನನ್ನು ಚಿತೆಯೇರಿಸಿ ದುಃಖಿತರಾದ ಅವನ ಭಾರ್ಯೆಯರು ಮತ್ತು ಸೊಸೆಯಂದಿರು ರಾಜನನ್ನು ಪ್ರದಕ್ಷಿಣೆ ಮಾಡಿ ಹೋಗುತ್ತಿದ್ದಾರೆ!
11025018a ಧೃಷ್ಟಕೇತುಂ ಮಹೇಷ್ವಾಸಂ ಚೇದಿಪುಂಗವಮಂಗನಾಃ|
11025018c ದ್ರೋಣೇನ ನಿಹತಂ ಶೂರಂ ಹರಂತಿ ಹೃತಚೇತಸಃ||
ದ್ರೋಣನಿಂದ ಹತನಾದ ಚೇದಿರಾಜ ಮಹೇಷ್ವಾಸ ಶೂರ ಧೃಷ್ಟಕೇತುವನ್ನು ಅವನ ಪತ್ನಿಯರು ಬುದ್ಧಿಯನ್ನೇ ಕಳೆದುಕೊಂಡವರಾಗಿ ದಹನಕ್ಕೆ ಕೊಂಡೊಯ್ಯುತ್ತಿದ್ದಾರೆ!
11025019a ದ್ರೋಣಾಸ್ತ್ರಮಭಿಹತ್ಯೈಷ ವಿಮರ್ದೇ ಮಧುಸೂದನ|
11025019c ಮಹೇಷ್ವಾಸೋ ಹತಃ ಶೇತೇ ನದ್ಯಾ ಹೃತ ಇವ ದ್ರುಮಃ||
ಮಧುಸೂದನ! ದ್ರೋಣನ ಅಸ್ತ್ರಗಳಿಂದ ಪ್ರಹರಿಸಲ್ಪಟ್ಟ ಆ ಮಹೇಷ್ವಾಸನು ನದಿಯ ಪ್ರವಾಹದಿಂದ ಕೆಳಗುರುಳಿಸಲ್ಪಟ್ಟ ವೃಕ್ಷದಂತೆ ಹತನಾಗಿ ಮಲಗಿದ್ದಾನೆ.
11025020a ಏಷ ಚೇದಿಪತಿಃ ಶೂರೋ ಧೃಷ್ಟಕೇತುರ್ಮಹಾರಥಃ|
11025020c ಶೇತೇ ವಿನಿಹತಃ ಸಂಖ್ಯೇ ಹತ್ವಾ ಶತ್ರೂನ್ಸಹಸ್ರಶಃ||
ಈ ಚೇದಿಪತಿ ಶೂರ ಮಹಾರಥ ಧೃಷ್ಟಕೇತುವು ಯುದ್ಧದಲ್ಲಿ ಸಹಸ್ರಾರು ಶತ್ರುಗಳನ್ನು ಸಂಹರಿಸಿ ತಾನೇ ಹತನಾಗಿ ಮಲಗಿದ್ದಾನೆ!
11025021a ವಿತುದ್ಯಮಾನಂ ವಿಹಗೈಸ್ತಂ ಭಾರ್ಯಾಃ ಪ್ರತ್ಯುಪಸ್ಥಿತಾಃ|
11025021c ಚೇದಿರಾಜಂ ಹೃಷೀಕೇಶ ಹತಂ ಸಬಲಬಾಂಧವಮ್||
ಹೃಷೀಕೇಶ! ಸೇನೆ-ಬಾಂಧವರೊಂದಿಗೆ ಹತನಾಗಿ, ಪಕ್ಷಿಗಳಿಂದ ಕುಕ್ಕಲ್ಪಟ್ಟಿರುವ ಚೇದಿರಾಜನನ್ನು ಅವನ ಭಾರ್ಯೆಯರು ಸುತ್ತುವರೆದು ಕುಳಿತಿದ್ದಾರೆ!
11025022a ದಾಶಾರ್ಹೀಪುತ್ರಜಂ ವೀರಂ ಶಯಾನಂ ಸತ್ಯವಿಕ್ರಮಮ್|
11025022c ಆರೋಪ್ಯಾಂಕೇ ರುದಂತ್ಯೇತಾಶ್ಚೇದಿರಾಜವರಾಂಗನಾಃ||
ಮಲಗಿರುವ ವೀರ, ಸತ್ಯವಿಕ್ರಮ, ದಾಶಾರ್ಹೀ ಶ್ರುತಶ್ರವಳ ಮೊಮ್ಮಗನನ್ನು ತೊಡೆಯಮೇಲೆ ಇಟ್ಟುಕೊಂಡು ಚೇದಿರಾಜನ ವರಾಂಗನೆಯರು ರೋದಿಸುತ್ತಿದ್ದಾರೆ!
11025023a ಅಸ್ಯ ಪುತ್ರಂ ಹೃಷೀಕೇಶ ಸುವಕ್ತ್ರಂ ಚಾರುಕುಂಡಲಮ್|
11025023c ದ್ರೋಣೇನ ಸಮರೇ ಪಶ್ಯ ನಿಕೃತ್ತಂ ಬಹುಧಾ ಶರೈಃ||
ಹೃಷೀಕೇಶ! ಸುಂದರವದನ, ಸುಂದರ ಕುಂಡಲಗಳನ್ನು ಧರಿಸಿರುವ ಧೃಷ್ಟಕೇತುವಿನ ಮಗನನ್ನು ಸಮರದಲ್ಲಿ ದ್ರೋಣನು ಅನೇಕ ಶರಗಳಿಂದ ಗಾಯಗೊಳಿಸಿರುವುದನ್ನು ನೋಡು!
11025024a ಪಿತರಂ ನೂನಮಾಜಿಸ್ಥಂ ಯುಧ್ಯಮಾನಂ ಪರೈಃ ಸಹ|
11025024c ನಾಜಹಾತ್ಪೃಷ್ಠತೋ ವೀರಮದ್ಯಾಪಿ ಮಧುಸೂದನ||
ಮಧುಸೂದನ! ಶತ್ರುಗಳೊಂದಿಗೆ ಯುದ್ಧಮಾಡುತ್ತಿದ್ದ ತನ್ನ ತಂದೆಯನ್ನು ಬಿಟ್ಟುಹೋಗದೇ ಇದ್ದ ಈ ವೀರನು ಹತನಾದ ಮೇಲೂ ಅವನ ಜೊತೆಯೇ ಮಲಗಿದ್ದಾನೆ!
11025025a ಏವಂ ಮಮಾಪಿ ಪುತ್ರಸ್ಯ ಪುತ್ರಃ ಪಿತರಮನ್ವಗಾತ್|
11025025c ದುರ್ಯೋಧನಂ ಮಹಾಬಾಹೋ ಲಕ್ಷ್ಮಣಃ ಪರವೀರಹಾ||
ಮಹಾಬಾಹೋ! ಹಾಗೆಯೇ ನನ್ನ ಮಗನ ಮಗ ಪರವೀರಹ ಲಕ್ಷ್ಮಣನು ತಂದೆ ದುರ್ಯೋಧನನನ್ನು ಅಸುಸರಿಸಿಯೇ ಹೋಗುತ್ತಿದ್ದನು.
11025026a ವಿಂದಾನುವಿಂದಾವಾವಂತ್ಯೌ ಪತಿತೌ ಪಶ್ಯ ಮಾಧವ|
11025026c ಹಿಮಾಂತೇ ಪುಷ್ಪಿತೌ ಶಾಲೌ ಮರುತಾ ಗಲಿತಾವಿವ||
ಮಾಧವ! ಹೇಮಂತಋತುವಿನ ಕೊನೆಯಲ್ಲಿ ಪುಷ್ಪಿತ ಶಾಲವೃಕ್ಷಗಳು ಭಿರುಗಾಳಿಯ ಬಡಿತಕ್ಕೆ ಕೆಳಗೆ ಬಿದ್ದಿರುವಂತೆ ಅವಂತಿಯ ವಿಂದಾನುವಿಂದರು ಬಿದ್ದಿರುವುದನ್ನು ನೋಡು!
11025027a ಕಾಂಚನಾಂಗದವರ್ಮಾಣೌ ಬಾಣಖಡ್ಗಧನುರ್ಧರೌ|
11025027c ಋಷಭಪ್ರತಿರೂಪಾಕ್ಷೌ ಶಯಾನೌ ವಿಮಲಸ್ರಜೌ||
ವೃಷಭದ ಕಣ್ಣುಗಳಂತಹ ಕಣ್ಣುಗಳುಳ್ಳ ಅವರಿಬ್ಬರೂ ಕಾಂಚನದ ಅಂಗದ-ಕವಚಗಳನ್ನು ಧರಿಸಿ, ಬಾಣ-ಖಡ್ಗಗಳನ್ನು ಹಿಡಿದು ಮಲಗಿದ್ದಾರೆ.
11025028a ಅವಧ್ಯಾಃ ಪಾಂಡವಾಃ ಕೃಷ್ಣ ಸರ್ವ ಏವ ತ್ವಯಾ ಸಹ|
11025028c ಯೇ ಮುಕ್ತಾ ದ್ರೋಣಭೀಷ್ಮಾಭ್ಯಾಂ ಕರ್ಣಾದ್ವೈಕರ್ತನಾತ್ಕೃಪಾತ್||
11025029a ದುರ್ಯೋಧನಾದ್ದ್ರೋಣಸುತಾತ್ಸೈಂಧವಾಚ್ಚ ಮಹಾರಥಾತ್|
11025029c ಸೋಮದತ್ತಾದ್ವಿಕರ್ಣಾಚ್ಚ ಶೂರಾಚ್ಚ ಕೃತವರ್ಮಣಃ||
11025029e ಯೇ ಹನ್ಯುಃ ಶಸ್ತ್ರವೇಗೇನ ದೇವಾನಪಿ ನರರ್ಷಭಾಃ||
ಕೃಷ್ಣ! ನಿನ್ನ ರಕ್ಷಣೆಯಲ್ಲಿರುವ ಪಾಂಡವರೆಲ್ಲರೂ ಅವಧ್ಯರೇ ಸರಿ! ಅವರು ಮಹಾರಥರೂ ಶೂರರೂ ಆದ ದ್ರೋಣ, ಭೀಷ್ಮ, ವೈಕರ್ತನ ಕರ್ಣ, ಕೃಪ, ದುರ್ಯೋಧನ, ದ್ರೋಣಸುತ, ಸೈಂಧವ, ಸೋಮದತ್ತ, ವಿಕರ್ಣ ಮತ್ತು ಕೃತವರ್ಮರಿಂದ ಮುಕ್ತರಾಗಿದ್ದಾರೆ. ಈ ನರರ್ಷಭರು ದೇವತೆಗಳ ಶಸ್ತ್ರವೇಗದಿಂದಲೂ ಹತರಾಗುತ್ತಿರಲಿಲ್ಲ.
11025030a ತ ಇಮೇ ನಿಹತಾಃ ಸಂಖ್ಯೇ ಪಶ್ಯ ಕಾಲಸ್ಯ ಪರ್ಯಯಮ್|
11025030c ನಾತಿಭಾರೋಽಸ್ತಿ ದೈವಸ್ಯ ಧ್ರುವಂ ಮಾಧವ ಕಶ್ಚನ||
ಮಾಧವ! ಇವರೆಲ್ಲರೂ ಯುದ್ಧದಲ್ಲಿ ಹತರಾಗಿದ್ದಾರೆಂದರೆ ಕಾಲದ ಮಹಿಮೆಯನ್ನು ನೋಡು! ದೈವಕ್ಕೆ ಭಾರವಾದುದು ಯಾವುದೂ ಇಲ್ಲವೆನ್ನುವುದು ಸತ್ಯ!
11025030e ಯದಿಮೇ ನಿಹತಾಃ ಶೂರಾಃ ಕ್ಷತ್ರಿಯೈಃ ಕ್ಷತ್ರಿಯರ್ಷಭಾಃ||
11025031a ತದೈವ ನಿಹತಾಃ ಕೃಷ್ಣ ಮಮ ಪುತ್ರಾಸ್ತರಸ್ವಿನಃ|
11025031c ಯದೈವಾಕೃತಕಾಮಸ್ತ್ವಮುಪಪ್ಲವ್ಯಂ ಗತಃ ಪುನಃ||
ಈ ಶೂರ ಕ್ಷತ್ರಿಯರ್ಷಭರು ಕ್ಷತ್ರಿಯರಿಂದಲೇ ನಿಹತರಾದರು. ಕೃಷ್ಣ! ಯಾವಾಗ ನೀನು ನಿನ್ನ ಕಾರ್ಯವು ಸಫಲವಾಗದೇ ಪುನಃ ಉಪಪ್ಲವ್ಯಕ್ಕೆ ಹೋದೆಯೋ ಅಂದೇ ನನ್ನ ತರಸ್ವೀ ಪುತ್ರರು ಹತರಾದರು.
11025032a ಶಂತನೋಶ್ಚೈವ ಪುತ್ರೇಣ ಪ್ರಾಜ್ಞೇನ ವಿದುರೇಣ ಚ|
11025032c ತದೈವೋಕ್ತಾಸ್ಮಿ ಮಾ ಸ್ನೇಹಂ ಕುರುಷ್ವಾತ್ಮಸುತೇಷ್ವಿತಿ||
ಶಂತನು ಪುತ್ರ ಮತ್ತು ಪ್ರಾಜ್ಞ ವಿದುರರು ನಿನ್ನ ಮಕ್ಕಳೊಂದಿಗೆ ಸ್ನೇಹವನ್ನಿಟ್ಟುಕೊಳ್ಳಬೇಡವೆಂದು ಆಗಲೇ ನನಗೆ ಹೇಳಿದ್ದರು.
11025033a ತಯೋರ್ನ ದರ್ಶನಂ ತಾತ ಮಿಥ್ಯಾ ಭವಿತುಮರ್ಹತಿ|
11025033c ಅಚಿರೇಣೈವ ಮೇ ಪುತ್ರಾ ಭಸ್ಮೀಭೂತಾ ಜನಾರ್ದನ||
ಜನಾರ್ದನ! ಮಗೂ! ಅವರು ಕಂಡಿದ್ದುದು ಮಿಥ್ಯವಾಗಲು ಸಾಧ್ಯವಿಲ್ಲ. ಅಲ್ಪಕಾಲದಲ್ಲಿಯೇ ನನ್ನ ಪುತ್ರರು ಭಸ್ಮೀಭೂತರಾದರು!””
11025034 ವೈಶಂಪಾಯನ ಉವಾಚ
11025034a ಇತ್ಯುಕ್ತ್ವಾ ನ್ಯಪತದ್ಭೂಮೌ ಗಾಂಧಾರೀ ಶೋಕಕರ್ಶಿತಾ|
11025034c ದುಃಖೋಪಹತವಿಜ್ಞಾನಾ ಧೈರ್ಯಮುತ್ಸೃಜ್ಯ ಭಾರತ||
ವೈಶಂಪಾಯನನು ಹೇಳಿದನು: “ಭಾರತ! ಹೀಗೆ ಹೇಳಿ ಶೋಕಕರ್ಶಿತ ಗಾಂಧಾರಿಯು ನೆಲದ ಮೇಲೆ ಬಿದ್ದಳು. ದುಃಖದಿಂದ ಅವಳ ವಿಶೇಷ ಜ್ಞಾನವೇ ಹೊರಟುಹೋಗಿತ್ತು. ಧೈರ್ಯವು ತೊಲಗಿಹೋಗಿತ್ತು.
11025035a ತತಃ ಕೋಪಪರೀತಾಂಗೀ ಪುತ್ರಶೋಕಪರಿಪ್ಲುತಾ|
11025035c ಜಗಾಮ ಶೌರಿಂ ದೋಷೇಣ ಗಾಂಧಾರೀ ವ್ಯಥಿತೇಂದ್ರಿಯಾ||
ಆಗ ಕೋಪದಿಂದ ಅವಳ ಅಂಗಾಂಗಗಳು ಉರಿಯುತ್ತಿರಲು, ಇಂದ್ರಿಯಗಳು ವ್ಯಥೆಗೊಂಡಿರಲು ಪುತ್ರಶೋಕದಲ್ಲಿ ಮುಳುಗಿಹೋಗಿದ್ದ ಗಾಂಧಾರಿಯು ಇವಕ್ಕೆಲ್ಲಾ ಶೌರಿಯನ್ನೇ ದೋಷಿತನೆಂದು ಪರಿಗಣಿಸಿದಳು.
11025036 ಗಾಂಧಾರ್ಯುವಾಚ
11025036a ಪಾಂಡವಾ ಧಾರ್ತರಾಷ್ಟ್ರಾಶ್ಚ ದ್ರುಗ್ಧಾಃ ಕೃಷ್ಣ ಪರಸ್ಪರಮ್|
11025036c ಉಪೇಕ್ಷಿತಾ ವಿನಶ್ಯಂತಸ್ತ್ವಯಾ ಕಸ್ಮಾಜ್ಜನಾರ್ದನ||
ಗಾಂಧಾರಿಯು ಹೇಳಿದಳು: “ಕೃಷ್ಣ! ಜನಾರ್ದನ! ಪಾಂಡವರು ಮತ್ತು ಧಾರ್ತರಾಷ್ಟ್ರರು ಪರಸ್ಪರ ಹೋರಾಡಿ ಸುಟ್ಟು ಭಸ್ಮವಾದರು. ನೀನೇಕೆ ಅವರು ವಿನಾಶವಾಗುತ್ತಿರುವುದನ್ನು ನೋಡುತ್ತಿದ್ದಂತೆಯೂ ಉಪೇಕ್ಷಿಸಿದೆ?
11025037a ಶಕ್ತೇನ ಬಹುಭೃತ್ಯೇನ ವಿಪುಲೇ ತಿಷ್ಠತಾ ಬಲೇ|
11025037c ಉಭಯತ್ರ ಸಮರ್ಥೇನ ಶ್ರುತವಾಕ್ಯೇನ ಚೈವ ಹ||
ನಿನ್ನಲ್ಲಿ ಶಕ್ತಿ, ಅನೇಕ ಸೇವಕರು ಮತ್ತು ಅಪಾರ ಸೇನೆಯು ಇತ್ತು. ಹೀಗೆಯೆ ನಡೆದುಕೊಳ್ಳಬೇಕೆಂದು ಎರಡೂ ಪಕ್ಷಗಳಿಗೆ ಆಜ್ಞಾಪಿಸಲೂ ನೀನು ಸಮರ್ಥನಾಗಿದ್ದೆ.
11025038a ಇಚ್ಚತೋಪೇಕ್ಷಿತೋ ನಾಶಃ ಕುರೂಣಾಂ ಮಧುಸೂದನ|
11025038c ಯಸ್ಮಾತ್ತ್ವಯಾ ಮಹಾಬಾಹೋ ಫಲಂ ತಸ್ಮಾದವಾಪ್ನುಹಿ||
ಮಧುಸೂದನ! ಮಹಾಬಾಹೋ! ಉದ್ದೇಶಪೂರ್ವಕವಾಗಿಯೇ ನೀನು ಕುರುಗಳ ನಾಶವನ್ನು ಉಪೇಕ್ಷಿಸಿದೆ! ಇದರ ಫಲವನ್ನು ನೀನು ಪಡೆಯುತ್ತೀಯೆ.
11025039a ಪತಿಶುಶ್ರೂಷಯಾ ಯನ್ಮೇ ತಪಃ ಕಿಂ ಚಿದುಪಾರ್ಜಿತಮ್|
11025039c ತೇನ ತ್ವಾಂ ದುರವಾಪಾತ್ಮನ್ ಶಪ್ಸ್ಯೇ ಚಕ್ರಗದಾಧರ||
ಚಕ್ರಗದಾಧರ! ಪತಿಶುಶ್ರೂಷೆಯಿಂದಾಗಿ ನಾನು ಯಾವ ಸ್ವಲ್ಪ ತಪಸ್ಸನ್ನು ಸಂಪಾದಿಸಿರುತ್ತೇನೆಯೋ ಆ ದುರ್ಲಭ ತಪಃಫಲದಿಂದ ನಾನು ನಿನ್ನನ್ನು ಶಪಿಸುತ್ತೇನೆ.
11025040a ಯಸ್ಮಾತ್ಪರಸ್ಪರಂ ಘ್ನಂತೋ ಜ್ಞಾತಯಃ ಕುರುಪಾಂಡವಾಃ|
11025040c ಉಪೇಕ್ಷಿತಾಸ್ತೇ ಗೋವಿಂದ ತಸ್ಮಾಜ್ಞಾತೀನ್ವಧಿಷ್ಯಸಿ||
ಗೋವಿಂದ! ನೀನು ತಡೆಯದೇ ಉಪೇಕ್ಷಿಸಿದುದಕ್ಕಾಗಿ ಹೇಗೆ ಕುರುಪಾಂಡವ ದಾಯಾದಿಗಳು ಪರಸ್ಪರರನ್ನು ಸಂಹರಿಸಿದರೋ ಹಾಗೆ ನಿನ್ನ ಬಾಂಧವರನ್ನೂ ನೀನು ವಧಿಸುತ್ತೀಯೆ.
11025041a ತ್ವಮಪ್ಯುಪಸ್ಥಿತೇ ವರ್ಷೇ ಷಟ್ತ್ರಿಂಶೇ ಮಧುಸೂದನ|
11025041c ಹತಜ್ಞಾತಿರ್ಹತಾಮಾತ್ಯೋ ಹತಪುತ್ರೋ ವನೇಚರಃ||
11025041e ಕುತ್ಸಿತೇನಾಭ್ಯುಪಾಯೇನ ನಿಧನಂ ಸಮವಾಪ್ಸ್ಯಸಿ||
ಮಧುಸೂದನ! ಇಂದಿನಿಂದ ಮೂವತ್ತಾರನೇ ವರ್ಷದಲ್ಲಿ ನಿನ್ನ ಬಾಂಧವ-ಅಮಾತ್ಯ-ಪುತ್ರರನ್ನು ಕಳೆದುಕೊಂಡು ನೀನು ವನದಲ್ಲಿ ಸಂಚರಿಸುತ್ತಿರುವಾಗ ಯಾವುದೋ ಒಂದು ಹೀನರೀತಿಯಲ್ಲಿ ನಿಧನವನ್ನು ಹೊಂದುತ್ತೀಯೆ!
11025042a ತವಾಪ್ಯೇವಂ ಹತಸುತಾ ನಿಹತಜ್ಞಾತಿಬಾಂಧವಾಃ|
11025042c ಸ್ತ್ರಿಯಃ ಪರಿಪತಿಷ್ಯಂತಿ ಯಥೈತಾ ಭರತಸ್ತ್ರಿಯಃ||
ಭರತಸ್ತ್ರೀಯರಂತೆ ನಿನ್ನ ಕುಲದ ಸ್ತ್ರೀಯರೂ ಪುತ್ರರನ್ನೂ, ಜ್ಞಾತಿ-ಬಾಂಧವರನ್ನೂ ಕಳೆದುಕೊಂಡು ಪರಿತಪಿಸುತ್ತಾರೆ!”
11025043 ವೈಶಂಪಾಯನ ಉವಾಚ
11025043a ತಚ್ಚ್ರುತ್ವಾ ವಚನಂ ಘೋರಂ ವಾಸುದೇವೋ ಮಹಾಮನಾಃ|
11025043c ಉವಾಚ ದೇವೀಂ ಗಾಂಧಾರೀಮೀಷದಭ್ಯುತ್ಸ್ಮಯನ್ನಿವ||
ವೈಶಂಪಾಯನನು ಹೇಳಿದನು: “ಆ ಘೋರ ಮಾತನ್ನು ಕೇಳಿ ಮಹಾಮನಸ್ವಿ ವಾಸುದೇವನು ನಸುನಗುತ್ತಿರುವನೋ ಎನ್ನುವಂತೆ ದೇವೀ ಗಾಂಧಾರಿಗೆ ಇಂತೆಂದನು:
11025044a ಸಂಹರ್ತಾ ವೃಷ್ಣಿಚಕ್ರಸ್ಯ ನಾನ್ಯೋ ಮದ್ವಿದ್ಯತೇ ಶುಭೇ|
11025044c ಜಾನೇಽಹಮೇತದಪ್ಯೇವಂ ಚೀರ್ಣಂ ಚರಸಿ ಕ್ಷತ್ರಿಯೇ[2]||
“ಕ್ಷತ್ರಿಯೇ! ಶುಭೇ! ವೃಷ್ಣಿಚಕ್ರವನ್ನು ಬೇರೆ ಯಾರೂ ಸಂಹರಿಸಲಾರದೆಂದು ನನಗೆ ತಿಳಿದಿದೆ. ಇದು ಹೀಗೆಯೇ ಆಗುತ್ತದೆಯೆಂದು ನನಗೆ ತಿಳಿದಿತ್ತು. ಅದನ್ನೇ ನೀನು ಮಾಡಿರುವೆ!
11025045a ಅವಧ್ಯಾಸ್ತೇ ನರೈರನ್ಯೈರಪಿ ವಾ ದೇವದಾನವೈಃ|
11025045c ಪರಸ್ಪರಕೃತಂ ನಾಶಮತಃ ಪ್ರಾಪ್ಸ್ಯಂತಿ ಯಾದವಾಃ||
ಅನ್ಯ ನರರಿಂದಾಗಲೀ ಅಥವಾ ದೇವದಾನವರಿಂದಾಗಲೀ ಅವರು ಅವಧ್ಯರು. ಆದುದರಿಂದ ಯಾದವರು ಪರಸ್ಪರರೊಡನೆಯೇ ಕಾದಾಡಿ ನಾಶಹೊಂದುತ್ತಾರೆ!”
11025046a ಇತ್ಯುಕ್ತವತಿ ದಾಶಾರ್ಹೇ ಪಾಂಡವಾಸ್ತ್ರಸ್ತಚೇತಸಃ|
11025046c ಬಭೂವುರ್ಭೃಶಸಂವಿಗ್ನಾ ನಿರಾಶಾಶ್ಚಾಪಿ ಜೀವಿತೇ||
ದಾಶಾರ್ಹನು ಹೀಗೆ ಹೇಳಲು ಭಯಭೀತರಾದ ಪಾಂಡವರು ತುಂಬಾ ಉದ್ವೇಗಗೊಂಡು ತಮ್ಮ ಜೀವಿತದಲ್ಲಿಯೇ ನಿರಾಶೆಹೊಂದಿದರು.”
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಗಾಂಧಾರೀಶಾಪದಾನೇ ಪಂಚವಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಗಾಂಧಾರೀಶಾಪದಾನ ಎನ್ನುವ ಇಪ್ಪತ್ತೈದನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಸ್ತ್ರೀಪರ್ವಣಿ ಸ್ತ್ರೀಪರ್ವಃ|
ಇದು ಶ್ರೀ ಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಸ್ತ್ರೀಪರ್ವವು|
ಇದೂವರೆಗಿನ ಒಟ್ಟು ಮಹಾಪರ್ವಗಳು – ೧೦/೧೮, ಉಪಪರ್ವಗಳು-೮೧/೧೦೦, ಅಧ್ಯಾಯಗಳು-೧೩೨೬/೧೯೯೫, ಶ್ಲೋಕಗಳು-೪೯೯೪೨/೭೩೭೮೪
[1] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಎರಡು ಶ್ಲೋಕಗಳಿವೆ: ರಥಾಗ್ನ್ಯಗಾರಂ ಚಾಪಾರ್ಚಿಃಶರಶಕ್ತಿಗದೇಂಧನಮ್| ದ್ರೋಣಮಾಸಾದ್ಯ ನಿರ್ದಗ್ಧಾಃ ಶಲಭಾ ಇವ ಪಾವಕಮ್|| ತಥೈವ ನಿಹತಾಃ ಶೂರಾಃ ಶೇರತೇ ರುಚಿರಾಂಗದಾಃ| ದ್ರೋಣೇನಾಭಿಮುಖಾಃ ಸರ್ವೇ ಭ್ರಾತರಃ ಪಂಚ ಕೇಕಯಾಃ||
[2] ಇದರ ನಂತರ ನೀಲಕಂಠೀಯದಲ್ಲಿ ಈ ಶ್ಲೋಕಾರ್ಧವಿದೆ: ದೈವಾದೇವ ವಿನಶ್ಯಂತಿ ವೃಷ್ಣಯೋ ನಾತ್ರ ಸಂಶಯಃ|