Stri Parva: Chapter 21

ಸ್ತ್ರೀ ಪರ್ವ

೨೧

ಹತನಾಗಿ ಬಿದ್ದಿದ್ದ ಕರ್ಣನನ್ನು ಕೃಷ್ಣನಿಗೆ ತೋರಿಸುತ್ತಾ ಗಾಂಧಾರಿಯು ವಿಲಪಿಸಿದುದು (೧-೧೪).

11021001 ಗಾಂಧಾರ್ಯುವಾಚ

11021001a ಏಷ ವೈಕರ್ತನಃ ಶೇತೇ ಮಹೇಷ್ವಾಸೋ ಮಹಾರಥಃ|

11021001c ಜ್ವಲಿತಾನಲವತ್ಸಂಖ್ಯೇ ಸಂಶಾಂತಃ ಪಾರ್ಥತೇಜಸಾ||

ಗಾಂಧಾರಿಯು ಹೇಳಿದಳು: “ಪಾರ್ಥನ ತೇಜಸ್ಸಿನಿಂದ ಯುದ್ಧದಲ್ಲಿ ಶಾಂತಗೊಂಡ ಪ್ರಜ್ವಲಿಸುತ್ತಿರುವ ಅಗ್ನಿಯಂತಿದ್ದ ಮಹಾರಥ ಮಹೇಷ್ವಾಸ ವೈಕರ್ತನನು ಇಲ್ಲಿ ಮಲಗಿದ್ದಾನೆ!

11021002a ಪಶ್ಯ ವೈಕರ್ತನಂ ಕರ್ಣಂ ನಿಹತ್ಯಾತಿರಥಾನ್ಬಹೂನ್|

11021002c ಶೋಣಿತೌಘಪರೀತಾಂಗಂ ಶಯಾನಂ ಪತಿತಂ ಭುವಿ||

ಅನೇಕ ಅತಿರಥರನ್ನು ಸಂಹರಿಸಿ ಅಂಗಾಂಗಗಳು ರಕ್ತದಿಂದ ತೋಯ್ದುಹೋಗಿ ಭೂಮಿಯ ಮೇಲೆ ಬಿದ್ದು ಮಲಗಿರುವ ವೈಕರ್ತನ ಕರ್ಣನನ್ನು ನೋಡು!

11021003a ಅಮರ್ಷೀ ದೀರ್ಘರೋಷಶ್ಚ ಮಹೇಷ್ವಾಸೋ ಮಹಾರಥಃ|

11021003c ರಣೇ ವಿನಿಹತಃ ಶೇತೇ ಶೂರೋ ಗಾಂಡೀವಧನ್ವನಾ||

ಅಸಹನಶೀಲನೂ, ದೀರ್ಘಕೋಪಿಯೂ ಆಗಿದ್ದ ಆ ಮಹೇಷ್ವಾಸ ಮಹಾರಥಿ ಶೂರನು ಗಾಂಡೀವಧನ್ವಿಯಿಂದ ರಣದಲ್ಲಿ ಹತನಾಗಿ ಮಲಗಿದ್ದಾನೆ!

11021004a ಯಂ ಸ್ಮ ಪಾಂಡವಸಂತ್ರಾಸಾನ್ಮಮ ಪುತ್ರಾ ಮಹಾರಥಾಃ|

11021004c ಪ್ರಾಯುಧ್ಯಂತ ಪುರಸ್ಕೃತ್ಯ ಮಾತಂಗಾ ಇವ ಯೂಥಪಮ್||

ಪಾಂಡವರಿಗೆ ಭಯಗೊಂಡ ನನ್ನ ಮಹಾರಥ ಪುತ್ರರು ಆನೆಗಳು ಸಲಗವನ್ನು ಮುಂದೆ ಬಿಟ್ಟುಕೊಂಡು ಹೋಗುವಂತೆ ಕರ್ಣನನ್ನು ಮುಂದಿಟ್ಟುಕೊಂಡು ಯುದ್ಧಮಾಡಿದರು.

11021005a ಶಾರ್ದೂಲಮಿವ ಸಿಂಹೇನ ಸಮರೇ ಸವ್ಯಸಾಚಿನಾ|

11021005c ಮಾತಂಗಮಿವ ಮತ್ತೇನ ಮಾತಂಗೇನ ನಿಪಾತಿತಮ್||

ಸಿಂಹವು ಇನ್ನೊಂದು ಸಿಂಹವನ್ನು ಹೇಗೋ ಹಾಗೆ ಮತ್ತು ಮದಿಸಿದ ಆನೆಯನ್ನು ಇನ್ನೊಂದು ಆನೆಯು ಹೇಗೋ ಹಾಗೆ ಸವ್ಯಸಾಚಿಯು ಸಮರದಲ್ಲಿ ಇವನನ್ನು ಕೆಳಗುರುಳಿಸಿದನು.

11021006a ಸಮೇತಾಃ ಪುರುಷವ್ಯಾಘ್ರ ನಿಹತಂ ಶೂರಮಾಹವೇ|

11021006c ಪ್ರಕೀರ್ಣಮೂರ್ಧಜಾಃ ಪತ್ನ್ಯೋ ರುದತ್ಯಃ ಪರ್ಯುಪಾಸತೇ||

ಪುರುಷವ್ಯಾಘ್ರ! ತಲೆಗೆದರಿದ ಅವನ ಪತ್ನಿಯರು ಗೋಳಾಡುತ್ತಾ ಯುದ್ಧದಲ್ಲಿ ಹತನಾಗಿರುವ ಆ ಶೂರನನ್ನು ಸುತ್ತುವರೆದು ಕುಳಿತಿದ್ದಾರೆ!

11021007a ಉದ್ವಿಗ್ನಃ ಸತತಂ ಯಸ್ಮಾದ್ಧರ್ಮರಾಜೋ ಯುಧಿಷ್ಠಿರಃ|

11021007c ತ್ರಯೋದಶ ಸಮಾ ನಿದ್ರಾಂ ಚಿಂತಯನ್ನ್ನಾಧ್ಯಗಚ್ಚತ||

11021008a ಅನಾಧೃಷ್ಯಃ ಪರೈರ್ಯುದ್ಧೇ ಶತ್ರುಭಿರ್ಮಘವಾನಿವ|

11021008c ಯುಗಾಂತಾಗ್ನಿರಿವಾರ್ಚಿಷ್ಮಾನ್ ಹಿಮವಾನಿವ ಚ ಸ್ಥಿರಃ||

11021009a ಸ ಭೂತ್ವಾ ಶರಣಂ ವೀರೋ ಧಾರ್ತರಾಷ್ಟ್ರಸ್ಯ ಮಾಧವ|

11021009c ಭೂಮೌ ವಿನಿಹತಃ ಶೇತೇ ವಾತರುಗ್ಣ ಇವ ದ್ರುಮಃ||

ಮಾಧವ! ಯಾರ ಪರಾಕ್ರಮದಿಂದ ಉದ್ವಿಗ್ನನಾಗಿ ಧರ್ಮರಾಜ ಯುಧಿಷ್ಠಿರನು ಹದಿಮೂರು ವರ್ಷಗಳು ಚಿಂತೆಯಿಂದ ನಿದ್ರೆಮಾಡಲಿಲ್ಲವೋ, ಇಂದ್ರನಂತೆ ಶತ್ರುಗಳು ಎದುರಿಸಲು ಅಸಾಧ್ಯನಾಗಿದ್ದ, ಯಾರು ಪ್ರಳಯಕಾಲದ ಅಗ್ನಿಯಂತೆ ತೇಜಸ್ವಿಯೂ ಹಿಮವಂತನಂತೆ ದೃಢನೂ ಆಗಿದ್ದನೋ, ಯಾವ ವೀರನನ್ನು ಧಾರ್ತರಾಷ್ಟ್ರರು ಶರಣುಹೊಂದಿದ್ದರೋ ಆ ಕರ್ಣನು ಭಿರುಗಾಳಿಸಿ ಸಿಲುಕಿದ ಮರದಂತೆ ಹತನಾಗಿ ನೆಲದಮೇಲೆ ಮಲಗಿದ್ದಾನೆ!

11021010a ಪಶ್ಯ ಕರ್ಣಸ್ಯ ಪತ್ನೀಂ ತ್ವಂ ವೃಷಸೇನಸ್ಯ ಮಾತರಮ್|

11021010c ಲಾಲಪ್ಯಮಾನಾಃ ಕರುಣಂ ರುದತೀಂ ಪತಿತಾಂ ಭುವಿ||

ಕರ್ಣನ ಪತ್ನಿ ಮತ್ತು ವೃಷಸೇನನ ತಾಯಿಯು ಭೂಮಿಯ ಮೇಲೆ ಬಿದ್ದುಕೊಂಡು ಕಾರುಣ್ಯದಿಂದ ರೋದಿಸುತ್ತಿರುವುದನ್ನು ನೋಡು!

11021011a ಆಚಾರ್ಯಶಾಪೋಽನುಗತೋ ಧ್ರುವಂ ತ್ವಾಂ

         ಯದಗ್ರಸಚ್ಚಕ್ರಮಿಯಂ ಧರಾ ತೇ|

11021011c ತತಃ ಶರೇಣಾಪಹೃತಂ ಶಿರಸ್ತೇ

         ಧನಂಜಯೇನಾಹವೇ ಶತ್ರುಮಧ್ಯೇ||

“ನಿಶ್ಚಯವಾಗಿಯೂ ಆಚಾರ್ಯನ ಶಾಪವು ನಿನ್ನನ್ನೇ ಅನುಸರಿಸಿ ಬಂದು ನಿನ್ನ ರಥಚಕ್ರವು ಭೂಮಿಯಲ್ಲಿ ಹುಗಿದುಹೋಯಿತು! ಆಗ ಯುದ್ಧದಲ್ಲಿ ಶತ್ರುಗಳ ಮಧ್ಯೆ ಧನಂಜಯನು ಶರದಿಂದ ನಿನ್ನ ಶಿರವನ್ನು ಅಪಹರಿಸಿದನು!”

11021012a ಅಹೋ ಧಿಗೇಷಾ ಪತಿತಾ ವಿಸಚಿಜ್ಞಾ

         ಸಮೀಕ್ಷ್ಯ ಜಾಂಬೂನದಬದ್ಧನಿಷ್ಕಮ್|

11021012c ಕರ್ಣಂ ಮಹಾಬಾಹುಮದೀನಸತ್ತ್ವಂ

         ಸುಷೇಣಮಾತಾ ರುದತೀ ಭೃಶಾರ್ತಾ||

ಅಯ್ಯೋ! ಅಲ್ಲಿ ನೋಡು! ಸುಷೇಣನ ತಾಯಿಯು ಹೀಗೆ ಹೇಳುತ್ತಿರುವಂತೆಯೇ ಸುವರ್ಣಮಯ ಕವಚಧಾರಿ, ಮಹಾಬಾಹು, ಮಹಾಸತ್ವ ಕರ್ಣನನ್ನು ನೋಡಿ ಗಟ್ಟಿಯಾಗಿ ಅಳುತ್ತಾ ಅವಳು ಮೂರ್ಛಿತಳಾಗಿ ಕೆಳಗೆ ಬಿದ್ದಳು! ಯುದ್ಧಕ್ಕೆ ಧಿಕ್ಕಾರ!

11021013a ಅಲ್ಪಾವಶೇಷೋ ಹಿ ಕೃತೋ ಮಹಾತ್ಮಾ

         ಶರೀರಭಕ್ಷೈಃ ಪರಿಭಕ್ಷಯದ್ಭಿಃ|

11021013c ದ್ರಷ್ಟುಂ ನ ಸಂಪ್ರೀತಿಕರಃ ಶಶೀವ

         ಕೃಷ್ಣಶ್ಯ ಪಕ್ಷಸ್ಯ ಚತುರ್ದಶಾಹೇ||

ಶರೀರಗಳನ್ನು ಭಕ್ಷಿಸುವ ಪ್ರಾಣಿಗಳು ಮಹಾತ್ಮ ಕರ್ಣನ ಶರೀರವನ್ನು ಆತುರವಾಗಿ ಭಕ್ಷಿಸುತ್ತಿದ್ದು ಸ್ವಲ್ಪ ಭಾಗ ಮಾತ್ರವೇ ಉಳಿದುಕೊಂಡಿದೆ! ಕೃಷ್ಣಪಕ್ಷದ ಚತುರ್ದಶಿಯ ಚಂದ್ರನಂತೆ ಬಹುಭಾಗ ನಶಿಸಿಹೋದ ಶರೀರದಿಂದ ಕೂಡಿದ ಕರ್ಣನನ್ನು ನೋಡಲು ನಮಗೆ ಸಾಧ್ಯವೇ ಆಗುತ್ತಿಲ್ಲ!

11021014a ಸಾವರ್ತಮಾನಾ ಪತಿತಾ ಪೃಥಿವ್ಯಾಮ್

         ಉತ್ಥಾಯ ದೀನಾ ಪುನರೇವ ಚೈಷಾ|

11021014c ಕರ್ಣಸ್ಯ ವಕ್ತ್ರಂ ಪರಿಜಿಘ್ರಮಾಣಾ

         ರೋರೂಯತೇ ಪುತ್ರವಧಾಭಿತಪ್ತಾ||

ಭೂಮಿಯ ಮೇಲೆ ಬಿದ್ದು ಸುಷೇಣನ ತಾಯಿಯು ಪುನಃ ಎದ್ದು ಕರ್ಣನ ಮುಖವನ್ನು ಚುಂಬಿಸುತ್ತಾ ಪತ್ರವಧೆಯಿಂದ ಪರಿತಪ್ತಳಾಗಿ ರೋದಿಸುತ್ತಿದ್ದಾಳೆ!”

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಕರ್ಣದರ್ಶನೇ ಏಕವಿಂಶತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಕರ್ಣದರ್ಶನ ಎನ್ನುವ ಇಪ್ಪತ್ತೊಂದನೇ ಅಧ್ಯಾಯವು.

Comments are closed.