ಸ್ತ್ರೀ ಪರ್ವ
೧೯
ಹತರಾಗಿದ್ದ ತನ್ನ ಮಕ್ಕಳು ವಿಕರ್ಣ, ದುರ್ಮುಖ, ಚಿತ್ರಸೇನ, ವಿವಿಂಶತಿ, ಮತ್ತು ದುಃಸ್ಸಹರನ್ನು ಕೃಷ್ಣನಿಗೆ ತೋರಿಸುತ್ತಾ ಗಾಂಧಾರಿಯು ವಿಲಪಿಸಿದುದು (೧-೨೧).
11019001 ಗಾಂಧಾರ್ಯುವಾಚ
11019001a ಏಷ ಮಾಧವ ಪುತ್ರೋ ಮೇ ವಿಕರ್ಣಃ ಪ್ರಾಜ್ಞಸಂಮತಃ|
11019001c ಭೂಮೌ ವಿನಿಹತಃ ಶೇತೇ ಭೀಮೇನ ಶತಧಾ ಕೃತಃ||
ಗಾಂಧಾರಿಯು ಹೇಳಿದಳು: “ಮಾಧವ! ಪ್ರಾಜ್ಞಸಮ್ಮತನಾಗಿದ್ದ ನನ್ನ ಮಗ ಈ ವಿಕರ್ಣನೂ ಕೂಡ ಭೀಮನಿಂದ ನೂರು ಚೂರಾಗಿಸಲ್ಪಟ್ಟು ಇಲ್ಲಿ ನೆಲದ ಮೇಲೆ ಮಲಗಿದ್ದಾನೆ!
11019002a ಗಜಮಧ್ಯಗತಃ ಶೇತೇ ವಿಕರ್ಣೋ ಮಧುಸೂದನ|
11019002c ನೀಲಮೇಘಪರಿಕ್ಷಿಪ್ತಃ ಶರದೀವ ದಿವಾಕರಃ||
ಮಧುಸೂದನ! ಆನೆಗಳ ಮಧ್ಯ ಮಲಗಿರುವ ವಿಕರ್ಣನು ಶರತ್ಕಾಲದಲ್ಲಿ ಕಪ್ಪುಮೋಡಗಳಿಂದ ಮುಚ್ಚಲ್ಪಟ್ಟ ದಿವಾಕರನಂತೆ ತೋರುತ್ತಿದ್ದಾನೆ.
11019003a ಅಸ್ಯ ಚಾಪಗ್ರಹೇಣೈಷ ಪಾಣಿಃ ಕೃತಕಿಣೋ ಮಹಾನ್|
11019003c ಕಥಂ ಚಿಚ್ಚಿದ್ಯತೇ ಗೃಧ್ರೈರತ್ತುಕಾಮೈಸ್ತಲತ್ರವಾನ್||
ಧನುಸ್ಸನ್ನು ಹಿಡಿಯುತ್ತಿದ್ದುದರಿಂದ ಅವನ ಕೈಯು ಜಡ್ಡುಗಟ್ಟಿಹೋಗಿದೆ. ಕೈಚೀಲವನ್ನು ಧರಿಸಿದ್ದ ಅವನ ಕೈಗಳನ್ನು ತಿನ್ನಲು ಬಯಸಿ ಹದ್ದುಗಳು ಕುಕ್ಕಲು ಪ್ರಯತ್ನಿಸುತ್ತಿವೆ.
11019004a ಅಸ್ಯ ಭಾರ್ಯಾಮಿಷಪ್ರೇಪ್ಸೂನ್ಗೃಧ್ರಾನೇತಾಂಸ್ತಪಸ್ವಿನೀ|
11019004c ವಾರಯತ್ಯನಿಶಂ ಬಾಲಾ ನ ಚ ಶಕ್ನೋತಿ ಮಾಧವ||
ಮಾಧವ! ಮಾಂಸವನ್ನು ತಿನ್ನಲು ಬಯಸುತ್ತಿರುವ ಹದ್ದುಗಳನ್ನು ಓಡಿಸಲು ಅವನ ಪತ್ನಿ ಬಾಲ ತಪಸ್ವಿನಿಯು ಪ್ರಯತ್ನಿಸುತ್ತಿದ್ದರೂ ಅವಳಿಗೆ ಅದು ಸಾಧ್ಯವಾಗುತ್ತಿಲ್ಲ!
11019005a ಯುವಾ ವೃಂದಾರಕಃ ಶೂರೋ ವಿಕರ್ಣಃ ಪುರುಷರ್ಷಭ|
11019005c ಸುಖೋಚಿತಃ ಸುಖಾರ್ಹಶ್ಚ ಶೇತೇ ಪಾಂಸುಷು ಮಾಧವ||
ಪುರುಷರ್ಷಭ! ಮಾಧವ! ದೇವತೆಗಳಂತೆ ಕಾಂತಿಯುಕ್ತನಾಗಿದ್ದ ಯುವಕ ಶೂರ ವಿಕರ್ಣನು ಸುಖದಿಂದಲೇ ಬೆಳೆದವನು. ಸುಖದಿಂದಿರಲು ಯೋಗ್ಯನಾದ ಅವನು ಕೆಸರಿನಲ್ಲಿ ಮಲಗಿದ್ದಾನೆ!
11019006a ಕರ್ಣಿನಾಲೀಕನಾರಾಚೈರ್ಭಿನ್ನಮರ್ಮಾಣಮಾಹವೇ|
11019006c ಅದ್ಯಾಪಿ ನ ಜಹಾತ್ಯೇನಂ ಲಕ್ಷ್ಮೀರ್ಭರತಸತ್ತಮಮ್||
ಕರ್ಣಿ-ನಾಲೀಕ-ನಾರಾಚ ಬಾಣಗಳಿಂದ ಯುದ್ಧದಲ್ಲಿ ಮರ್ಮಸ್ಥಾನಗಳೆಲ್ಲವೂ ಗಾಯಗೊಂಡು ಹತನಾಗಿದ್ದರೂ ಶರೀರಕಾಂತಿಯು ಆ ಭರತಸತ್ತಮನನ್ನು ಇನ್ನೂ ಬಿಟ್ಟುಹೋಗಿಲ್ಲ!
11019007a ಏಷ ಸಂಗ್ರಾಮಶೂರೇಣ ಪ್ರತಿಜ್ಞಾಂ ಪಾಲಯಿಷ್ಯತಾ|
11019007c ದುರ್ಮುಖೋಽಭಿಮುಖಃ ಶೇತೇ ಹತೋಽರಿಗಣಹಾ ರಣೇ||
ರಣದಲ್ಲಿ ಶತ್ರುಗಣಗಳನ್ನು ಸಂಹರಿಸುತ್ತಿದ್ದ ದುರ್ಮುಖನೂ ಕೂಡ ಪ್ರತಿಜ್ಞೆಯನ್ನು ಪಾಲಿಸಿದ ಸಂಗ್ರಾಮ ಶೂರ ಭೀಮನಿಂದ ಹತನಾಗಿ ಇದೋ ಇಲ್ಲಿ ಅಂಗಾತನಾಗಿ ಮಲಗಿದ್ದಾನೆ!
11019008a ತಸ್ಯೈತದ್ವದನಂ ಕೃಷ್ಣ ಶ್ವಾಪದೈರರ್ಧಭಕ್ಷಿತಮ್|
11019008c ವಿಭಾತ್ಯಭ್ಯಧಿಕಂ ತಾತ ಸಪ್ತಮ್ಯಾಮಿವ ಚಂದ್ರಮಾಃ||
ಅಯ್ಯಾ ಕೃಷ್ಣ! ಕ್ರೂರಮೃಗಗಳಿಂದ ತಿನ್ನಲ್ಪಟ್ಟ ಅವನ ಮುಖವು ಸಪ್ತಮಿಯ ಚಂದ್ರನಂತೆ ಅಧಿಕವಾಗಿ ಬೆಳಗುತ್ತಿದೆ!
11019009a ಶೂರಸ್ಯ ಹಿ ರಣೇ ಕೃಷ್ಣ ಯಸ್ಯಾನನಮಥೇದೃಶಮ್|
11019009c ಸ ಕಥಂ ನಿಹತೋಽಮಿತ್ರೈಃ ಪಾಂಸೂನ್ಗ್ರಸತಿ ಮೇ ಸುತಃ||
ಕೃಷ್ಣ! ರಣದಲ್ಲಿ ಆ ಶೂರನ ಮುಖವು ಈ ರೀತಿ ತೇಜಸ್ಸಿನಿಂದ ಕೂಡಿರುವುದನ್ನು ನೋಡಿದರೆ ಇವನು ಶತ್ರುಗಳಿಂದ ಹೇಗೆ ಹತನಾಗಿರಬಹುದು ಎಂದೆನಿಸುತ್ತದೆ. ಹೇಗೆ ನನ್ನ ಮಗನು ಕೆಸರಿನಲ್ಲಿ ಸಿಲುಕಿಕೊಂಡಿದ್ದಾನೆ!
11019010a ಯಸ್ಯಾಹವಮುಖೇ ಸೌಮ್ಯ ಸ್ಥಾತಾ ನೈವೋಪಪದ್ಯತೇ|
11019010c ಸ ಕಥಂ ದುರ್ಮುಖೋಽಮಿತ್ರೈರ್ಹತೋ ವಿಬುಧಲೋಕಜಿತ್||
ಸೌಮ್ಯ! ಯುದ್ಧದಲ್ಲಿ ಇವನನ್ನು ಎದುರಿಸಿ ಹೋರಾಡುವವರು ಯಾರೂ ಇರಲಿಲ್ಲ. ದೇವಲೋಕವನ್ನೇ ಜಯಿಸಲು ಸಮರ್ಥನಾಗಿದ್ದ ಈ ದುರ್ಮುಖನು ಹೇಗೆ ತಾನೇ ಶತ್ರುಗಳಿಂದ ಹತನಾದನು?
11019011a ಚಿತ್ರಸೇನಂ ಹತಂ ಭೂಮೌ ಶಯಾನಂ ಮಧುಸೂದನ|
11019011c ಧಾರ್ತರಾಷ್ಟ್ರಮಿಮಂ ಪಶ್ಯ ಪ್ರತಿಮಾನಂ ದನುಷ್ಮತಾಮ್||
ಮಧುಸೂದನ! ಧನುಷ್ಮತರಿಗೇ ಆದರ್ಶಪ್ರಾಯನಾದ ಧೃತರಾಷ್ಟ್ರನ ಮಗ ಚಿತ್ರಸೇನನು ಹತನಾಗಿ ಭೂಮಿಯ ಮೇಲೆ ಮಲಗಿರುವುದನ್ನು ನೋಡು!
11019012a ತಂ ಚಿತ್ರಮಾಲ್ಯಾಭರಣಂ ಯುವತ್ಯಃ ಶೋಕಕರ್ಶಿತಾಃ|
11019012c ಕ್ರವ್ಯಾದಸಂಘೈಃ ಸಹಿತಾ ರುದಂತ್ಯಃ ಪರ್ಯುಪಾಸತೇ||
ಚಿತ್ರತರ ಮಾಲ್ಯಾಭರಣಗಳನ್ನು ಧರಿಸಿರುವ ಅವನನ್ನು ಶೋಕಕರ್ಶಿತ ಯುವತಿಯರು ಮಾಂಸಾಶಿ ಪ್ರಾಣಿಗಳ ಮಧ್ಯೆ ರೋದಿಸುತ್ತಾ ಸುತ್ತುವರೆದಿದ್ದಾರೆ.
11019013a ಸ್ತ್ರೀಣಾಂ ರುದಿತನಿರ್ಘೋಷಃ ಶ್ವಾಪದಾನಾಂ ಚ ಗರ್ಜಿತಮ್|
11019013c ಚಿತ್ರರೂಪಮಿದಂ ಕೃಷ್ಣ ವಿಚಿತ್ರಂ ಪ್ರತಿಭಾತಿ ಮೇ||
ಕೃಷ್ಣ! ಸ್ತ್ರೀಯರ ರೋದನದ ಶಬ್ಧ ಮತ್ತು ಮಾಂಸಾಶಿ ಪ್ರಾಣಿಗಳ ಗರ್ಜನೆಗಳು ನನಗೆ ನೋಡಲು ಅದ್ಭುತವಾಗಿಯೂ ವಿಚಿತ್ರವಾಗಿಯೂ ಕಾಣುತ್ತಿವೆ!
11019014a ಯುವಾ ವೃಂದಾರಕೋ ನಿತ್ಯಂ ಪ್ರವರಸ್ತ್ರೀನಿಷೇವಿತಃ|
11019014c ವಿವಿಂಶತಿರಸೌ ಶೇತೇ ಧ್ವಸ್ತಃ ಪಾಂಸುಷು ಮಾಧವ||
ಮಾಧವ! ನಿತ್ಯವೂ ಶ್ರೇಷ್ಠ ಸ್ತ್ರೀಯರಿಂದ ಸೇವಿಸಲ್ಪಡುತ್ತಿದ್ದ, ದೇವಸದೃಶ ಯುವಕ ವಿವಿಂಶತಿಯು ವಿಧ್ವಸ್ತನಾಗಿ ಇಗೋ ಇಲ್ಲಿ ಧೂಳಿನಲ್ಲಿ ಮಲಗಿಕೊಂಡಿದ್ದಾನೆ!
11019015a ಶರಸಂಕೃತ್ತವರ್ಮಾಣಂ ವೀರಂ ವಿಶಸನೇ ಹತಮ್|
11019015c ಪರಿವಾರ್ಯಾಸತೇ ಗೃಧ್ರಾಃ ಪರಿವಿಂಶಾ ವಿವಿಂಶತಿಮ್||
ಶರಗಳಿಂದ ಕತ್ತರಿಸಲ್ಪಟ್ಟ ಕವಚವುಳ್ಳ, ಯುದ್ಧದಲ್ಲಿ ಹತನಾದ ವೀರ ವಿವಿಂಶತಿಯನ್ನು ಸುತ್ತುವರೆದು ಹದ್ದುಗಳು ಕುಳಿತುಕೊಂಡಿವೆ!
11019016a ಪ್ರವಿಶ್ಯ ಸಮರೇ ವೀರಃ ಪಾಂಡವಾನಾಮನೀಕಿನೀಮ್|
11019016c ಆವಿಶ್ಯ ಶಯನೇ ಶೇತೇ ಪುನಃ ಸತ್ಪುರುಷೋಚಿತಮ್||
ಆ ವೀರನು ಸಮರದಲ್ಲಿ ಪಾಂಡವರ ಸೇನೆಯನ್ನು ಪ್ರವೇಶಿಸಿ ಪುನಃ ಸತ್ಪುರುಷರಿಗೆ ಉಚಿತವಾದ ವೀರಶಯದಲ್ಲಿ ಮಲಗಿದ್ದಾನೆ!
11019017a ಸ್ಮಿತೋಪಪನ್ನಂ ಸುನಸಂ ಸುಭ್ರು ತಾರಾಧಿಪೋಪಮಮ್|
11019017c ಅತೀವ ಶುಭ್ರಂ ವದನಂ ಪಶ್ಯ ಕೃಷ್ಣ ವಿವಿಂಶತೇಃ||
ಕೃಷ್ಣ! ಮಂದಹಾಸವನ್ನು ಬೀರುತ್ತಿರುವ, ಸುಂದರ ಮುಖ ಮತ್ತು ಹುಬ್ಬುಗಳುಳ್ಳ, ತಾರಾಧಿಪ ಚಂದ್ರನಂತಿರುವ ವಿವಿಂಶತಿಯ ಶುಭ್ರ ವದನವನ್ನು ನೋಡು!
11019018a ಯಂ ಸ್ಮ ತಂ ಪರ್ಯುಪಾಸಂತೇ ವಸುಂ ವಾಸವಯೋಷಿತಃ|
11019018c ಕ್ರೀಡಂತಮಿವ ಗಂಧರ್ವಂ ದೇವಕನ್ಯಾಃ ಸಹಸ್ರಶಃ||
ಕ್ರೀಡಿಸುತ್ತಿರುವ ಗಂಧರ್ವನನ್ನು ಸಹಸ್ರಾರು ದೇವಕನ್ಯೆಯರು ಹೇಗೋ ಹಾಗೆ ವಿವಿಂಶತಿಯನ್ನು ಅನೇಕ ಸುಂದರ ಸ್ತ್ರೀಯರು ಸುತ್ತುವರೆದು ಕುಳಿತಿದ್ದಾರೆ!
11019019a ಹಂತಾರಂ ವೀರಸೇನಾನಾಂ ಶೂರಂ ಸಮಿತಿಶೋಭನಮ್|
11019019c ನಿಬರ್ಹಣಮಮಿತ್ರಾಣಾಂ ದುಃಸಹಂ ವಿಷಹೇತ ಕಃ||
ವೀರಸೇನೆಗಳನ್ನು ಸಂಹರಿಸುತ್ತಿದ್ದ, ಸಮಿತಿ ಶೋಭನ ಶೂರ ದುಃಸಹನನ್ನು ಯಾರುತಾನೇ ಎದುರಿಸಿ ನಿಲ್ಲುತ್ತಿದ್ದರು?
11019020a ದುಃಸಹಸ್ಯೈತದಾಭಾತಿ ಶರೀರಂ ಸಂವೃತಂ ಶರೈಃ|
11019020c ಗಿರಿರಾತ್ಮರುಹೈಃ ಫುಲ್ಲೈಃ ಕರ್ಣಿಕಾರೈರಿವಾವೃತಃ||
ಶರಗಳಿಂದ ಮುಚ್ಚಿಹೋಗಿರುವ ದುಃಸಹನ ಶರೀರವು ಹೂಬಿಟ್ಟಿರುವ ಕರ್ಣಿಕೆ ಗಿಡಗಳಿಂದ ತುಂಬಿಹೋಗಿರುವ ಪರ್ವತದಂತೆ ತೋರುತ್ತಿದೆ!
11019021a ಶಾತಕೌಂಭ್ಯಾ ಸ್ರಜಾ ಭಾತಿ ಕವಚೇನ ಚ ಭಾಸ್ವತಾ|
11019021c ಅಗ್ನಿನೇವ ಗಿರಿಃ ಶ್ವೇತೋ ಗತಾಸುರಪಿ ದುಃಸಹಃ||
ಶ್ವೇತಪರ್ವತವು ಅಗ್ನಿಯಿಂದ ಶೋಭಾಯಮಾನವಾಗಿ ಕಾಣುವಂತೆ ಪ್ರಾಣಹೋಗಿದ್ದರೂ ದುಃಸಹನು ಚಿನ್ನದ ಹಾರಗಳು ಮತ್ತು ಕವಚದಿಂದ ಹೊಳೆಯುತ್ತಿದ್ದಾನೆ!”
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಗಾಂಧಾರೀವಾಕ್ಯೇ ಏಕೋನವಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಗಾಂಧಾರೀವಾಕ್ಯ ಎನ್ನುವ ಹತ್ತೊಂಭತ್ತನೇ ಅಧ್ಯಾಯವು.