ಸ್ತ್ರೀ ಪರ್ವ
೧೪
ಭೀಮಸೇನ-ಗಾಂಧಾರೀ ಸಂವಾದ (೧-೨೨).
11014001 ವೈಶಂಪಾಯನ ಉವಾಚ
11014001a ತಚ್ಚ್ರುತ್ವಾ ವಚನಂ ತಸ್ಯಾ ಭೀಮಸೇನೋಽಥ ಭೀತವತ್|
11014001c ಗಾಂಧಾರೀಂ ಪ್ರತ್ಯುವಾಚೇದಂ ವಚಃ ಸಾನುನಯಂ ತದಾ||
ವೈಶಂಪಾಯನನು ಹೇಳಿದನು: “ಅವಳ ಆ ಮಾತನ್ನು ಕೇಳಿದ ಭೀಮಸೇನನು ಭಯಗೊಂಡು ಗಾಂಧಾರಿಗೆ ಈ ಅನುನಯ ಮಾತುಗಳನ್ನಾಡಿದನು:
11014002a ಅಧರ್ಮೋ ಯದಿ ವಾ ಧರ್ಮಸ್ತ್ರಾಸಾತ್ತತ್ರ ಮಯಾ ಕೃತಃ|
11014002c ಆತ್ಮಾನಂ ತ್ರಾತುಕಾಮೇನ ತನ್ಮೇ ತ್ವಂ ಕ್ಷಂತುಮರ್ಹಸಿ||
“ನನ್ನ ಪ್ರಾಣಗಳನ್ನು ಉಳಿಸಿಕೊಳ್ಳಲೋಸುಗ, ಭಯದಿಂದ ನಾನು ಅಲ್ಲಿ ಅಧರ್ಮದ ಅಥವಾ ಧರ್ಮದ ಆ ಕೃತ್ಯವನ್ನು ಮಾಡಿದೆ. ನನ್ನನ್ನು ನೀನು ಕ್ಷಮಿಸಬೇಕು!
11014003a ನ ಹಿ ಯುದ್ಧೇನ ಪುತ್ರಸ್ತೇ ಧರ್ಮೇಣ ಸ ಮಹಾಬಲಃ|
11014003c ಶಕ್ಯಃ ಕೇನ ಚಿದುದ್ಯಂತುಮತೋ ವಿಷಮಮಾಚರಮ್||
ಧರ್ಮಪೂರ್ವಕವಾಗಿ ನಿನ್ನ ಮಗನೊಂದಿಗೆ ಯುದ್ಧಮಾಡಲು ಮಹಾಬಲಶಾಲಿಗೂ ಶಕ್ಯವಾಗಿರಲಿಲ್ಲ. ಆದುದರಿಂದಲೇ ನಾನು ಧರ್ಮಕ್ಕೆ ವಿಪರೀತವಾಗಿ ನಡೆದುಕೊಂಡೆನು.
11014004a ಸೈನ್ಯಸ್ಯೈಕೋಽವಶಿಷ್ಟೋಽಯಂ ಗದಾಯುದ್ಧೇ ಚ ವೀರ್ಯವಾನ್|
11014004c ಮಾಂ ಹತ್ವಾ ನ ಹರೇದ್ರಾಜ್ಯಮಿತಿ ಚೈತತ್ಕೃತಂ ಮಯಾ||
ಸೈನ್ಯಗಳಲ್ಲಿ ಉಳಿದುಕೊಂಡಿರುವ ಆ ಒಬ್ಬನೇ ವೀರ್ಯವಾನನು ಗದಾಯುದ್ಧದಲ್ಲಿ ನನ್ನನ್ನು ಸಂಹರಿಸಿ ರಾಜ್ಯವನ್ನು ಅಪಹರಿಸಬಹುದು ಎಂದು ನಾನು ಹಾಗೆ ಮಾಡಿದೆ.
11014005a ರಾಜಪುತ್ರೀಂ ಚ ಪಾಂಚಾಲೀಮೇಕವಸ್ತ್ರಾಂ ರಜಸ್ವಲಾಮ್|
11014005c ಭವತ್ಯಾ ವಿದಿತಂ ಸರ್ವಮುಕ್ತವಾನ್ಯತ್ಸುತಸ್ತವ||
ಏಕವಸ್ತ್ರವನ್ನು ಧರಿಸಿದ್ದ ರಜಸ್ವಲೆ ರಾಜಪುತ್ರೀ ಪಾಂಚಾಲಿಯನ್ನು ಕಾಡಿದಾಗ ನಿನ್ನ ಮಗನಿಗೆ ನಾನು ಹೇಳಿದುದೆಲ್ಲವೂ ನಿನಗೆ ತಿಳಿದೇ ಇದೆ.
11014006a ಸುಯೋಧನಮಸಂಗೃಹ್ಯ ನ ಶಕ್ಯಾ ಭೂಃ ಸಸಾಗರಾ|
11014006c ಕೇವಲಾ ಭೋಕ್ತುಮಸ್ಮಾಭಿರತಶ್ಚೈತತ್ಕೃತಂ ಮಯಾ||
ದುರ್ಯೋಧನನನ್ನು ಇಲ್ಲವಾಗಿಸದೇ ಸಾಗರಗಳೊಂದಿಗೆ ಈ ಭೂಮಿಯನ್ನು ಭೋಗಿಸಲು ನಾವು ಶಕ್ಯರಾಗಿರಲಿಲ್ಲ. ಆದುದರಿಂದ ನಾನು ಹಾಗೆ ಮಾಡಿದೆ.
11014007a ತಚ್ಚಾಪ್ಯಪ್ರಿಯಮಸ್ಮಾಕಂ ಪುತ್ರಸ್ತೇ ಸಮುಪಾಚರತ್|
11014007c ದ್ರೌಪದ್ಯಾ ಯತ್ಸಭಾಮಧ್ಯೇ ಸವ್ಯಮೂರುಮದರ್ಶಯತ್||
ಸಭಾಮಧ್ಯದಲ್ಲಿ ದ್ರೌಪದಿಗೆ ತನ್ನ ಎಡತೊಡೆಯನ್ನು ತೋರಿಸಿ ನಿನ್ನ ಮಗನೂ ಕೂಡ ನಮ್ಮೊಡನೆ ಅಪ್ರಿಯವಾಗಿ ನಡೆದುಕೊಂಡಿದ್ದನು.
11014008a ತತ್ರೈವ ವಧ್ಯಃ ಸೋಽಸ್ಮಾಕಂ ದುರಾಚಾರೋಽಂಬ ತೇ ಸುತಃ|
11014008c ಧರ್ಮರಾಜಾಜ್ಞಯಾ ಚೈವ ಸ್ಥಿತಾಃ ಸ್ಮ ಸಮಯೇ ತದಾ||
ಅಮ್ಮಾ! ಆಗಲೇ ದುರಾಚಾರನಾದ ನಿನ್ನ ಮಗನನ್ನು ನಾವು ಸಂಹರಿಸಬೇಕಾಗಿತ್ತು. ಆದರೆ ಧರ್ಮರಾಜನ ಆಜ್ಞೆಯಂತೆ ನಿಯಮಕ್ಕೆ ಕಟ್ಟುಬಿದ್ದು ಸುಮ್ಮನೇ ಕುಳಿತಿದ್ದೆವು.
11014009a ವೈರಮುದ್ಧುಕ್ಷಿತಂ ರಾಜ್ಞಿ ಪುತ್ರೇಣ ತವ ತನ್ಮಹತ್|
11014009c ಕ್ಲೇಶಿತಾಶ್ಚ ವನೇ ನಿತ್ಯಂ ತತ ಏತತ್ಕೃತಂ ಮಯಾ||
ರಾಣೀ! ನಿನ್ನ ಮಗನೇ ಈ ವೈರವನ್ನು ಉರಿಸಿ ಬೆಳೆಸಿದನು. ವನದಲ್ಲಿಯೂ ನಿತ್ಯವೂ ಮಹಾ ಕಷ್ಟಗಳನ್ನು ಅನುಭವಿಸುವಂತೆ ಮಾಡಿದನು. ಆದುದರಿಂದಲೇ ನಾನು ಹೀಗೆ ಮಾಡಿದೆ.
11014010a ವೈರಸ್ಯಾಸ್ಯ ಗತಃ ಪಾರಂ ಹತ್ವಾ ದುರ್ಯೋಧನಂ ರಣೇ|
11014010c ರಾಜ್ಯಂ ಯುಧಿಷ್ಠಿರಃ ಪ್ರಾಪ್ತೋ ವಯಂ ಚ ಗತಮನ್ಯವಃ||
ರಣದಲ್ಲಿ ದುರ್ಯೋಧನನನ್ನು ಸಂಹರಿಸಿ ನಾವು ವೈರವನ್ನು ದಾಟಿದ್ದೇವೆ. ಯುಧಿಷ್ಠಿರನು ರಾಜ್ಯವನ್ನು ಪಡೆದು ನಮ್ಮ ಕೋಪವೂ ಹೊರಟುಹೋಗಿದೆ.”
11014011 ಗಾಂಧಾರ್ಯುವಾಚ|
11014011a ನ ತಸ್ಯೈಷ ವಧಸ್ತಾತ ಯತ್ಪ್ರಶಂಸಸಿ ಮೇ ಸುತಮ್|
11014011c ಕೃತವಾಂಶ್ಚಾಪಿ ತತ್ಸರ್ವಂ ಯದಿದಂ ಭಾಷಸೇ ಮಯಿ||
ಗಾಂಧಾರಿಯು ಹೇಳಿದಳು: “ನನ್ನ ಮಗನನ್ನು ನೀನು ಪ್ರಶಂಸಿಸುತ್ತಿರುವೆಯಾದುದರಿಂದ ಅವನ ವಧೆಯೇ ನಡೆಯಲಿಲ್ಲವೆಂದು ತಿಳಿಯುತ್ತೇನೆ. ನನ್ನಲ್ಲಿ ಹೇಳಿದಂತೆ ನೀನು ಅವೆಲ್ಲವನ್ನೂ ಮಾಡಿದ್ದೀಯೆ ಹೌದು.
11014012a ಹತಾಶ್ವೇ ನಕುಲೇ ಯತ್ತದ್ವೃಷಸೇನೇನ ಭಾರತ|
11014012c ಅಪಿಬಃ ಶೋಣಿತಂ ಸಂಖ್ಯೇ ದುಃಶಾಸನಶರೀರಜಮ್||
ಭಾರತ! ವೃಷಸೇನನು ನಕುಲನ ಕುದುರೆಗಳನ್ನು ಸಂಹರಿಸಲು ರಣದಲ್ಲಿ ನೀನು ದುಃಶಾಸನನ ಶರೀರದ ರಕ್ತವನ್ನು ಕುಡಿದೆಯಲ್ಲವೇ?
11014013a ಸದ್ಭಿರ್ವಿಗರ್ಹಿತಂ ಘೋರಮನಾರ್ಯಜನಸೇವಿತಮ್|
11014013c ಕ್ರೂರಂ ಕರ್ಮಾಕರೋಃ ಕಸ್ಮಾತ್ತದಯುಕ್ತಂ ವೃಕೋದರ||
ಸತ್ಪುರುಷರಿಂದ ನಿಂದನೀಯವೂ, ಘೋರವೂ, ಅನಾರ್ಯರು ಮಾಡುವಂಥಹುದೂ ಆದ ಆ ಕ್ರೂರ ಕರ್ಮವನ್ನು ನೀನು ಮಾಡಿದ್ದೀಯೆ. ವೃಕೋದರ! ಅದು ನಿನಗೆ ಹೇಗೆ ಯುಕ್ತವಾದುದು?”
11014014 ಭೀಮಸೇನ ಉವಾಚ
11014014a ಅನ್ಯಸ್ಯಾಪಿ ನ ಪಾತವ್ಯಂ ರುಧಿರಂ ಕಿಂ ಪುನಃ ಸ್ವಕಮ್|
11014014c ಯಥೈವಾತ್ಮಾ ತಥಾ ಭ್ರಾತಾ ವಿಶೇಷೋ ನಾಸ್ತಿ ಕಶ್ಚನ||
ಭೀಮಸೇನನು ಹೇಳಿದನು: “ಬೇರೆಯವರಿಂದ ಸುರಿಯುತ್ತಿರುವ ರಕ್ತವನ್ನೇ ಕುಡಿಯಬಾರದೆಂದಿರುವಾಗ ನನ್ನದೇ ರಕ್ತವನ್ನು ನಾನೇಕೆ ಕುಡಿಯುತ್ತೇನೆ? ನನ್ನಂತೆಯೇ ನನ್ನ ಸಹೋದರ ದುಃಶಾಸನ ಕೂಡ. ನಮ್ಮಿಬ್ಬರಲ್ಲಿ ವ್ಯತ್ಯಾಸವೇ ಇರಲಿಲ್ಲ.
11014015a ರುಧಿರಂ ನ ವ್ಯತಿಕ್ರಾಮದ್ದಂತೋಷ್ಠಂ ಮೇಽಂಬ ಮಾ ಶುಚಃ|
11014015c ವೈವಸ್ವತಸ್ತು ತದ್ವೇದ ಹಸ್ತೌ ಮೇ ರುಧಿರೋಕ್ಷಿತೌ||
ಅಮ್ಮಾ! ಅವನ ರಕ್ತವು ನನ್ನ ತುಟಿ ಮತ್ತು ಹಲ್ಲುಗಳನ್ನು ದಾಟಿ ಒಳಗೆ ಹೋಗಲೇ ಇಲ್ಲ. ಶೋಕಿಸಬೇಡ! ಇದಕ್ಕೆ ಸೂರ್ಯಪುತ್ರ ಯಮನೇ ಸಾಕ್ಷಿ! ನನ್ನೆರಡು ಕೈಗಳೂ ರಕ್ತದಿಂದ ತೋಯ್ದುಹೋಗಿದ್ದವು.
11014016a ಹತಾಶ್ವಂ ನಕುಲಂ ದೃಷ್ಟ್ವಾ ವೃಷಸೇನೇನ ಸಂಯುಗೇ|
11014016c ಭ್ರಾತೄಣಾಂ ಸಂಪ್ರಹೃಷ್ಟಾನಾಂ ತ್ರಾಸಃ ಸಂಜನಿತೋ ಮಯಾ||
ಯುದ್ಧದಲ್ಲಿ ವೃಷಸೇನನಿಂದ ನಕುಲನ ಕುದುರೆಗಳು ಹತವಾದುದನ್ನು ಕಂಡು ಸಂಪ್ರಹೃಷ್ಟರಾದ ಸಹೋದರರು ನನ್ನಲ್ಲಿ ಭಯವನ್ನುಂಟುಮಾಡಿದರು.
11014017a ಕೇಶಪಕ್ಷಪರಾಮರ್ಶೇ ದ್ರೌಪದ್ಯಾ ದ್ಯೂತಕಾರಿತೇ|
11014017c ಕ್ರೋಧಾದ್ಯದಬ್ರುವಂ ಚಾಹಂ ತಚ್ಚ ಮೇ ಹೃದಿ ವರ್ತತೇ||
ದ್ಯೂತವಾಡುವಾಗ ದ್ರೌಪದಿಯ ಕೇಶಗಳನ್ನು ಹಿಡಿದು ಎಳೆದುತರುವಾಗ ನಾನು ಕ್ರೋಧದಿಂದ ಆಡಿದ ಮಾತು ನನ್ನ ಹೃದಯದಲ್ಲಿ ತಿರುಗುತ್ತಲೇ ಇತ್ತು.
11014018a ಕ್ಷತ್ರಧರ್ಮಾಚ್ಚ್ಯುತೋ ರಾಜ್ಞಿ ಭವೇಯಂ ಶಾಸ್ವತೀಃ ಸಮಾಃ|
11014018c ಪ್ರತಿಜ್ಞಾಂ ತಾಮನಿಸ್ತೀರ್ಯ ತತಸ್ತತ್ಕೃತವಾನಹಮ್||
ರಾಣೀ! ಆ ಪ್ರತಿಜ್ಞೆಯನ್ನು ಪೂರೈಸದಿದ್ದರೆ ಶಾಶ್ವತವಾಗಿ ಕ್ಷತ್ರಧರ್ಮದಿಂದ ಚ್ಯುತನಾಗುವೆನೆಂಬ ಭಯದಿಂದ ನಾನು ಹಾಗೆ ಮಾಡಿದೆ.
11014019a ನ ಮಾಮರ್ಹಸಿ ಗಾಂಧಾರಿ ದೋಷೇಣ ಪರಿಶಂಕಿತುಮ್|
11014019c ಅನಿಗೃಹ್ಯ ಪುರಾ ಪುತ್ರಾನಸ್ಮಾಸ್ವನಪಕಾರಿಷು||
ಗಾಂಧಾರೀ! ನಮಗೆ ಅಪಕಾರವನ್ನೆಸಗಿದ ಪುತ್ರರನ್ನು ಮೊದಲೇ ನಿಯಂತ್ರಿಸಿಟ್ಟುಕೊಳ್ಳದೇ ಈಗ ನನ್ನನ್ನು ದೋಷಿತನೆಂದು ಪರಿಶಂಕಿಸುವುದು ಸರಿಯಲ್ಲ.”
11014020 ಗಾಂಧಾರ್ಯುವಾಚ|
11014020a ವೃದ್ಧಸ್ಯಾಸ್ಯ ಶತಂ ಪುತ್ರಾನ್ನಿಘ್ನಂಸ್ತ್ವಮಪರಾಜಿತಃ|
11014020c ಕಸ್ಮಾನ್ನ ಶೇಷಯಃ ಕಂ ಚಿದ್ಯೇನಾಲ್ಪಮಪರಾಧಿತಮ್||
ಗಾಂಧಾರಿಯು ಹೇಳಿದಳು: “ಈ ವೃದ್ಧರ ನೂರು ಮಕ್ಕಳನ್ನೂ ಸಂಹರಿಸಿ ಅಪರಾಜಿತನಾಗಿರುವ ನೀನು ಅಲ್ಪ ಅಪರಾಧಮಾಡಿದ್ದ ಒಬ್ಬನನ್ನಾದರೂ ಏಕೆ ಉಳಿಸಲಿಲ್ಲ?
11014021a ಸಂತಾನಮಾವಯೋಸ್ತಾತ ವೃದ್ಧಯೋರ್ಹೃತರಾಜ್ಯಯೋಃ|
11014021c ಕಥಮಂಧದ್ವಯಸ್ಯಾಸ್ಯ ಯಷ್ಟಿರೇಕಾ ನ ವರ್ಜಿತಾ||
ಮಗನೇ! ರಾಜ್ಯವನ್ನು ಕಳೆದುಕೊಂಡ ಈ ವೃದ್ಧರಿಗೆ ಒಂದು ಸಂತಾನವೂ ಇಲ್ಲವಾಗಿದೆ. ಈ ಅಂಧರಿಬ್ಬರಿಗೆ ಊರುಗೋಲಾಗಿರಲು ಒಬ್ಬನನ್ನಾದರೂ ನೀನು ಏಕೆ ಜೀವಸಹಿತ ಬಿಡಲಿಲ್ಲ?
11014022a ಶೇಷೇ ಹ್ಯವಸ್ಥಿತೇ ತಾತ ಪುತ್ರಾಣಾಮಂತಕೇ ತ್ವಯಿ|
11014022c ನ ಮೇ ದುಃಖಂ ಭವೇದೇತದ್ಯದಿ ತ್ವಂ ಧರ್ಮಮಾಚರಃ||
ಮಗನೇ! ಪುತ್ರರನ್ನು ಕೊಲ್ಲುವಾಗ ನೀನು ಧರ್ಮವನ್ನಾಚರಿಸಿ ಒಬ್ಬನನ್ನಾದರೂ ಉಳಿಸಿದ್ದರೆ ನನಗೆ ಇಷ್ಟೊಂದು ದುಃಖವಾಗುತ್ತಿರಲಿಲ್ಲ!””
ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಗಾಂಧಾರೀಸಾಂತ್ವನಾಯಾಂ ಚತುರ್ದಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಗಾಂಧಾರೀಸಾಂತ್ವನ ಎನ್ನುವ ಹದಿನಾಲ್ಕನೇ ಅಧ್ಯಾಯವು.