Stri Parva: Chapter 13

ಸ್ತ್ರೀ ಪರ್ವ

೧೩

ಕೃಷ್ಣ ಮತ್ತು ಪಾಂಡವರು ಗಾಂಧಾರಿಯನ್ನು ಸಂದರ್ಶಿಸುವುದಕ್ಕೆ ಮೊದಲೇ ಪುತ್ರಶೋಕದಿಂದ ಕುಪಿತಳಾಗಿ ಯುಧಿಷ್ಠಿರನನ್ನು ಶಪಿಸಲು ಬಯಸುತ್ತಿದ್ದ ಗಾಂಧಾರಿಯನ್ನು ವ್ಯಾಸನು ಸಮಾಧಾನಗೊಳಿಸಿದುದು (೧-೧೯).

Image result for dhritarashtra embraces bhima11013001 ವೈಶಂಪಾಯನ ಉವಾಚ

11013001a ಧೃತರಾಷ್ಟ್ರಾಭ್ಯನುಜ್ಞಾತಾಸ್ತತಸ್ತೇ ಕುರುಪುಂಗವಾಃ|

11013001c ಅಭ್ಯಯುರ್ಭ್ರಾತರಃ ಸರ್ವೇ ಗಾಂಧಾರೀಂ ಸಹಕೇಶವಾಃ||

ವೈಶಂಪಾಯನನು ಹೇಳಿದನು: “ಧೃತರಾಷ್ಟ್ರನಿಂದ ಅನುಜ್ಞೆಯನ್ನು ಪಡೆದು ಆ ಕುರುಪುಂಗವ ಭ್ರಾತರರೆಲ್ಲರೂ ಕೇಶವನೊಡಗೂಡಿ ಗಾಂಧಾರಿಯ ಬಳಿಬಂದರು.

11013002a ತತೋ ಜ್ಞಾತ್ವಾ ಹತಾಮಿತ್ರಂ ಧರ್ಮರಾಜಂ ಯುಧಿಷ್ಠಿರಮ್|

11013002c ಗಾಂಧಾರೀ ಪುತ್ರಶೋಕಾರ್ತಾ ಶಪ್ತುಮೈಚ್ಚದನಿಂದಿತಾ||

11013003a ತಸ್ಯಾಃ ಪಾಪಮಭಿಪ್ರಾಯಂ ವಿದಿತ್ವಾ ಪಾಂಡವಾನ್ಪ್ರತಿ|

11013003c ಋಷಿಃ ಸತ್ಯವತೀಪುತ್ರಃ ಪ್ರಾಗೇವ ಸಮಬುಧ್ಯತ||

ಋಷಿ ಸತ್ಯವತೀ ಪುತ್ರನು ಪುತ್ರಶೋಕಾರ್ತಳಾಗಿದ್ದ ಅನಿಂದಿತೆ ಗಾಂಧಾರಿಯು ಅಮಿತ್ರರನ್ನು ಸಂಹರಿಸಿದ್ದ ಧರ್ಮರಾಜ ಯುಧಿಷ್ಠಿರನನ್ನು ಶಪಿಸಲು ಇಚ್ಛಿಸುತ್ತಿದ್ದಾಳೆಂದು ಮತ್ತು ಪಾಂಡವರ ಕುರಿತು ಅವಳಿಗಿದ್ದ ಅಭಿಪ್ರಾಯವನ್ನು ಆ ಮೊದಲೇ ತಿಳಿದುಕೊಂಡನು.

11013004a ಸ ಗಂಗಾಯಾಮುಪಸ್ಪೃಶ್ಯ ಪುಣ್ಯಗಂಧಂ ಪಯಃ ಶುಚಿ|

11013004c ತಂ ದೇಶಮುಪಸಂಪೇದೇ ಪರಮರ್ಷಿರ್ಮನೋಜವಃ||

ಆ ಪರಮ ಋಷಿಯು ಪವಿತ್ರವೂ ಸುಗಂಧಿತವೂ ಆದ ಗಂಗೆಯ ಶುದ್ಧನೀರಿನಲ್ಲಿ ಆಚಮನ ಮಾಡಿ ಮನೋವೇಗದಲ್ಲಿ ಅವಳಿದ್ದ ಪ್ರದೇಶಕ್ಕೆ ಆಗಮಿಸಿದನು.

11013005a ದಿವ್ಯೇನ ಚಕ್ಷುಷಾ ಪಶ್ಯನ್ಮನಸಾನುದ್ಧತೇನ ಚ|

11013005c ಸರ್ವಪ್ರಾಣಭೃತಾಂ ಭಾವಂ ಸ ತತ್ರ ಸಮಬುಧ್ಯತ||

ಮನಸ್ಸನ್ನು ಕೇಂದ್ರೀಕರಿಸಿ ದಿವ್ಯ ದೃಷ್ಟಿಯಿಂದ ಅವನು ಸರ್ವ ಪ್ರಾಣಿಗಳ ಭಾವವನ್ನು ತಿಳಿದುಕೊಳ್ಳುತ್ತಿದ್ದನು.

11013006a ಸ ಸ್ನುಷಾಮಬ್ರವೀತ್ಕಾಲೇ ಕಲ್ಯವಾದೀ ಮಹಾತಪಾಃ|

11013006c ಶಾಪಕಾಲಮವಾಕ್ಷಿಪ್ಯ ಶಮಕಾಲಮುದೀರಯನ್||

ಹಿತವಾದೀ ಮಹಾತಪಸ್ವಿಯು ಶಾಪಕಾಲವನ್ನು ಕಳೆದು ಶಾಂತಿಯ ಕಾಲವನ್ನು ಬರಗೊಳಿಸಲೋಸುಗ ತನ್ನ ಸೊಸೆಗೆ ಕಾಲಕ್ಕೆ ತಕ್ಕಂತಹ ಮಾತುಗಳನ್ನಾಡಿದನು:

11013007a ನ ಕೋಪಃ ಪಾಂಡವೇ ಕಾರ್ಯೋ ಗಾಂಧಾರಿ ಶಮಮಾಪ್ನುಹಿ|

11013007c ರಜೋ ನಿಗೃಹ್ಯತಾಮೇತಚ್ಚೃಣು ಚೇದಂ ವಚೋ ಮಮ||

“ಗಾಂಧಾರೀ! ಪಾಂಡವರ ಮೇಲೆ ಕೋಪಿಸಬೇಡ! ಶಾಂತಳಾಗು! ಸಿಟ್ಟನ್ನು ನಿಯಂತಿಸಿಕೋ! ನನ್ನ ಈ ಮಾತನ್ನು ಕೇಳು!

11013008a ಉಕ್ತಾಸ್ಯಷ್ಟಾದಶಾಹಾನಿ ಪುತ್ರೇಣ ಜಯಮಿಚ್ಚತಾ|

11013008c ಶಿವಮಾಶಾಸ್ಸ್ವ ಮೇ ಮಾತರ್ಯುಧ್ಯಮಾನಸ್ಯ ಶತ್ರುಭಿಃ||

ಹದಿನೆಂಟು ದಿನಗಳ ಹಿಂದೆ ವಿಜಯವನ್ನು ಇಚ್ಛಿಸಿದ ನಿನ್ನ ಪುತ್ರನು “ಅಮ್ಮಾ! ಶತ್ರುಗಳೊಂದಿಗೆ ಯುದ್ಧಮಾಡುವ ನನಗೆ ಮಂಗಳವನ್ನು ಆಶೀರ್ವದಿಸು!” ಎಂದು ನಿನ್ನಲ್ಲಿ ಕೇಳಿಕೊಂಡಿದ್ದನು.

11013009a ಸಾ ತಥಾ ಯಾಚ್ಯಮಾನಾ ತ್ವಂ ಕಾಲೇ ಕಾಲೇ ಜಯೈಷಿಣಾ|

11013009c ಉಕ್ತವತ್ಯಸಿ ಗಾಂಧಾರಿ ಯತೋ ಧರ್ಮಸ್ತತೋ ಜಯಃ||

ವಿಜಯೈಷಿಣಿಯಾದ ಅವನು ನಿನ್ನಲ್ಲಿ ಪದೇ ಪದೇ ಅದನ್ನೇ ಬೇಡುತ್ತಿದ್ದನು. ಗಾಂಧಾರೀ! ಆಗ “ಧರ್ಮವೆಲ್ಲಿರುವುದೋ ಅಲ್ಲಿ ಜಯವಿರುತ್ತದೆ!” ಎಂದು ಹೇಳುತ್ತಿದ್ದೆ.

11013010a ನ ಚಾಪ್ಯತೀತಾಂ ಗಾಂಧಾರಿ ವಾಚಂ ತೇ ವಿತಥಾಮಹಮ್|

11013010c ಸ್ಮರಾಮಿ ಭಾಷಮಾಣಾಯಾಸ್ತಥಾ ಪ್ರಣಿಹಿತಾ ಹ್ಯಸಿ||

ಗಾಂಧಾರೀ! ನೀನಾಡಿದ ಯಾವೊಂದು ಮಾತೂ ಇದಕ್ಕೆ ಮೊದಲು ಸುಳ್ಳಾದುದು ನನಗೆ ನೆನಪಿಲ್ಲ. ನೀನು ಯಾವಾಗಲೂ ಪ್ರಾಣಿಗಳ ಹಿತದಲ್ಲಿಯೇ ತತ್ಪರಳಾಗಿರುವವಳು.

11013011a ಸಾ ತ್ವಂ ಧರ್ಮಂ ಪರಿಸ್ಮೃತ್ಯ ವಾಚಾ ಚೋಕ್ತ್ವಾ ಮನಸ್ವಿನಿ|

11013011c ಕೋಪಂ ಸಂಯಚ್ಚ ಗಾಂಧಾರಿ ಮೈವಂ ಭೂಃ ಸತ್ಯವಾದಿನಿ||

ಮನಸ್ವಿನೀ! ಗಾಂಧಾರೀ! ಸತ್ಯವಾದಿನೀ! ನೀನಾಡಿದ ಆ ಧರ್ಮದ ಮಾತನ್ನು ನೆನಪಿಸಿಕೊಂಡು ಕೋಪವನ್ನು ಉಪಶಮನಗೊಳಿಸು! ಪುನಃ ಹೀಗೆ ಮಾಡಬೇಡ!”

11013012 ಗಾಂಧಾರ್ಯುವಾಚ

11013012a ಭಗವನ್ನಾಭ್ಯಸೂಯಾಮಿ ನೈತಾನಿಚ್ಚಾಮಿ ನಶ್ಯತಃ|

11013012c ಪುತ್ರಶೋಕೇನ ತು ಬಲಾನ್ಮನೋ ವಿಹ್ವಲತೀವ ಮೇ||

ಗಾಂಧಾರಿಯು ಹೇಳಿದಳು: “ಭಗವನ್! ನಾನು ಅಸೂಯೆಪಡುತ್ತಿಲ್ಲ. ಅವರ ನಾಶವನ್ನೂ ಬಯಸುತ್ತಿಲ್ಲ. ಆದರೆ ಪುತ್ರಶೋಕದಿಂದ ನನ್ನ ಮನೋಬಲವು ವಿಹ್ವಲಗೊಂಡಿದೆ.

11013013a ಯಥೈವ ಕುಂತ್ಯಾ ಕೌಂತೇಯಾ ರಕ್ಷಿತವ್ಯಾಸ್ತಥಾ ಮಯಾ|

11013013c ಯಥೈವ ಧೃತರಾಷ್ಟ್ರೇಣ ರಕ್ಷಿತವ್ಯಾಸ್ತಥಾ ಮಯಾ||

ಕುಂತಿಯು ಹೇಗೆ ಕೌಂತೇಯರನ್ನು ರಕ್ಷಿಸುವಳೋ ಹಾಗೆಯೇ ನಾನೂ ಅವರನ್ನು ರಕ್ಷಿಸಬೇಕು. ಧೃತರಾಷ್ಟ್ರನು ಹೇಗೆ ಅವರನ್ನು ರಕ್ಷಿಸುತ್ತಾನೋ ಹಾಗೆ ನಾನೂ ರಕ್ಷಿಸಬೇಕು.

11013014a ದುರ್ಯೋಧನಾಪರಾಧೇನ ಶಕುನೇಃ ಸೌಬಲಸ್ಯ ಚ|

11013014c ಕರ್ಣದುಃಶಾಸನಾಭ್ಯಾಂ ಚ ವೃತ್ತೋಽಯಂ ಕುರುಸಂಕ್ಷಯಃ||

ದುರ್ಯೋಧನ, ಸೌಬಲ ಶಕುನಿ, ಮತ್ತು ಕರ್ಣ-ದುಃಶಾಸನರ ಅಪರಾಧದಿಂದಾಗಿ ಈ ಕುರುಸಂಕ್ಷಯವು ನಡೆದುಹೋಯಿತು.

11013015a ನಾಪರಾಧ್ಯತಿ ಬೀಭತ್ಸುರ್ನ ಚ ಪಾರ್ಥೋ ವೃಕೋದರಃ|

11013015c ನಕುಲಃ ಸಹದೇವೋ ವಾ ನೈವ ಜಾತು ಯುಧಿಷ್ಠಿರಃ||

ಬೀಭತ್ಸುವಾಗಲೀ, ಪಾರ್ಥ ವೃಕೋದರನಾಗಲೀ, ನಕುಲ-ಸಹದೇವರಾಗಲೀ ಅಥವಾ ಯುಧಿಷ್ಠಿರನಾಗಲೀ ಅಪರಾಧ ಮಾಡಿರುವುದು ತಿಳಿದಿಲ್ಲ.

11013016a ಯುಧ್ಯಮಾನಾ ಹಿ ಕೌರವ್ಯಾಃ ಕೃಂತಮಾನಾಃ ಪರಸ್ಪರಮ್|

11013016c ನಿಹತಾಃ ಸಹಿತಾಶ್ಚಾನ್ಯೈಸ್ತತ್ರ ನಾಸ್ತ್ಯಪ್ರಿಯಂ ಮಮ||

ಕೌರವರು ಪರಸ್ಪರ ಯುದ್ಧಮಾಡುತ್ತಾ ಅನ್ಯರನ್ನು ಕೊಚ್ಚಿಹಾಕುತ್ತಾ ಹತರಾದರು. ಅದರಲ್ಲಿ ನನಗೆ ಅಸಮಾಧಾನವೇನೂ ಇಲ್ಲ.

11013017a ಯತ್ತು ಕರ್ಮಾಕರೋದ್ಭೀಮೋ ವಾಸುದೇವಸ್ಯ ಪಶ್ಯತಃ|

11013017c ದುರ್ಯೋಧನಂ ಸಮಾಹೂಯ ಗದಾಯುದ್ಧೇ ಮಹಾಮನಾಃ||

11013018a ಶಿಕ್ಷಯಾಭ್ಯಧಿಕಂ ಜ್ಞಾತ್ವಾ ಚರಂತಂ ಬಹುಧಾ ರಣೇ|

11013018c ಅಧೋ ನಾಭ್ಯಾಂ ಪ್ರಹೃತವಾಂಸ್ತನ್ಮೇ ಕೋಪಮವರ್ಧಯತ್||

ಆದರೆ ವಾಸುದೇವನು ನೋಡುತ್ತಿದ್ದಂತೆಯೇ ಮಹಾಮನಸ್ವಿ ಭೀಮನು ದುರ್ಯೋಧನನನ್ನು ಗದಾಯುದ್ಧಕ್ಕೆ ಆಹ್ವಾನಿಸಿ, ಶಿಕ್ಷಣದಲ್ಲಿ ಅವನು ತನಗಿಂತಲೂ ಅಧಿಕನೆಂದು ತಿಳಿದು, ರಣದಲ್ಲಿ ಅನೇಕ ರೀತಿಗಳಲ್ಲಿ ತಿರುಗುತ್ತಿದ್ದ ಅವನನ್ನು ನಾಭಿಯ ಕೆಳಗೆ ಹೊಡೆದನೆಂದು ನನ್ನ ಕೋಪವು ಹೆಚ್ಚುತ್ತಿದೆ.

11013019a ಕಥಂ ನು ಧರ್ಮಂ ಧರ್ಮಜ್ಞೈಃ ಸಮುದ್ದಿಷ್ಟಂ ಮಹಾತ್ಮಭಿಃ|

11013019c ತ್ಯಜೇಯುರಾಹವೇ ಶೂರಾಃ ಪ್ರಾಣಹೇತೋಃ ಕಥಂ ಚನ||

ಮಹಾತ್ಮರು ಹಾಕಿಕೊಟ್ಟ ಧರ್ಮವನ್ನು, ಯುದ್ಧದಲ್ಲಿ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಧರ್ಮಜ್ಞರು ಹೇಗೆ ತಾನೇ ತ್ಯಾಗಮಾಡುತ್ತಾರೆ?””

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಗಾಂಧಾರೀಸಾಂತ್ವನಾಯಾಂ ತ್ರಯೋದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಗಾಂಧಾರೀಸಾಂತ್ವನ ಎನ್ನುವ ಹದಿಮೂರನೇ ಅಧ್ಯಾಯವು.

Comments are closed.