ಶಾಂತಿ ಪರ್ವ: ರಾಜಧರ್ಮ ಪರ್ವ
೯೨
ರಾಜನ ಕರ್ತ್ಯವ್ಯಗಳ ಕುರಿತು ಉತಥ್ಯನು ಮಾಂಧಾತನಿಗೆ ಉಪದೇಶಿಸಿದುದು (1-56).
12092001 ಉತಥ್ಯ ಉವಾಚ|
12092001a ಕಾಲವರ್ಷೀ ಚ ಪರ್ಜನ್ಯೋ ಧರ್ಮಚಾರೀ ಚ ಪಾರ್ಥಿವಃ|
12092001c ಸಂಪದ್ಯದೈಷಾ ಭವತಿ ಸಾ ಬಿಭರ್ತಿ ಸುಖಂ ಪ್ರಜಾಃ||
ಉತಥ್ಯನು ಹೇಳಿದನು: “ಪರ್ಜನ್ಯನು ಕಾಲಕ್ಕೆ ತಕ್ಕಂತೆ ಮಳೆಗರೆಯಬೇಕು. ಪಾರ್ಥಿವನು ಧರ್ಮಚಾರಿಯಾಗಿರಬೇಕು. ಧರ್ಮ ಸಂಪತ್ತು ಹೀಗಿರುವಾಗ ಪ್ರಜೆಗಳು ಸುಖದಿಂದ ಪರಿಪಾಲಿತರಾಗಿರುತ್ತಾರೆ.
12092002a ಯೋ ನ ಜಾನಾತಿ ನಿರ್ಹಂತುಂ ವಸ್ತ್ರಾಣಾಂ ರಜಕೋ ಮಲಮ್|
12092002c ರಕ್ತಾನಿ ವಾ ಶೋಧಯಿತುಂ ಯಥಾ ನಾಸ್ತಿ ತಥೈವ ಸಃ||
ಬಟ್ಟೆಯ ಕೊಳೆಯನ್ನು ತೆಗೆದುಹಾಕುವುದನ್ನು ತಿಳಿಯದಿರುವ ಮತ್ತು ಕೆಂಪು ಬಣ್ಣದ ಬಟ್ಟೆಯನ್ನು ಹೊಳೆಯುವಂತೆ ಮಾಡಲು ಅರಿಯದಿರುವ ಅಗಸನು ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ.
12092003a ಏವಮೇವ ದ್ವಿಜೇಂದ್ರಾಣಾಂ ಕ್ಷತ್ರಿಯಾಣಾಂ ವಿಶಾಮಪಿ|
12092003c ಶೂದ್ರಾಶ್ಚತುರ್ಣಾಂ ವರ್ಣಾನಾಂ ನಾನಾಕರ್ಮಸ್ವವಸ್ಥಿತಾಃ||
ಹಾಗೆಯೇ ಬ್ರಾಹ್ಮಣರಾಗಲೀ, ಕ್ಷತ್ರಿಯರಾಗಲೀ, ವೈಶ್ಯರಾಗಲೀ ಮತ್ತು ಶೂದ್ರರಾಗಲೀ ಅವರವರ ವರ್ಣದ ಕರ್ಮಗಳನ್ನು ತಿಳಿದವರಾಗಿರಬೇಕು. ಇಲ್ಲದಿದ್ದರೆ ಇವರೆಲ್ಲರೂ ನಿಷ್ಪ್ರಯೋಜಕರಾಗುತ್ತಾರೆ.
12092004a ಕರ್ಮ ಶೂದ್ರೇ ಕೃಷಿರ್ವೈಶ್ಯೇ ದಂಡನೀತಿಶ್ಚ ರಾಜನಿ|
12092004c ಬ್ರಹ್ಮಚರ್ಯಂ ತಪೋ ಮಂತ್ರಾಃ ಸತ್ಯಂ ಚಾಪಿ ದ್ವಿಜಾತಿಷು||
ಶೂದ್ರನಲ್ಲಿ ಸೇವೆ, ವೈಶ್ಯನಲ್ಲಿ ಕೃಷಿ, ರಾಜನಲ್ಲಿ ದಂಡನೀತಿ, ಬ್ರಾಹ್ಮಣನಲ್ಲಿ ಬ್ರಹ್ಮಚರ್ಯ, ತಪಸ್ಸು, ಸತ್ಯನಿಷ್ಠೆ ಮತ್ತು ವೇದಾಧ್ಯಯನಗಳು ಪ್ರಧಾನ ಕರ್ತವ್ಯಗಳಾಗಿವೆ.
12092005a ತೇಷಾಂ ಯಃ ಕ್ಷತ್ರಿಯೋ ವೇದ ವಸ್ತ್ರಾಣಾಮಿವ ಶೋಧನಮ್|
12092005c ಶೀಲದೋಷಾನ್ವಿನಿರ್ಹಂತುಂ ಸ ಪಿತಾ ಸ ಪ್ರಜಾಪತಿಃ||
ಯಾವ ಕ್ಷತ್ರಿಯನು – ಅಗಸನು ವಸ್ತ್ರಗಳ ಕೊಳೆಯನ್ನು ತೆಗೆದು ಶುದ್ಧಗೊಳಿಸುವಂತೆ – ಇತರರ ಶೀಲದಲ್ಲಿರುವ ದೋಷಗಳನ್ನು ಹೋಗಲಾಡಿಸಿ ಶುದ್ಧಚಾರಿತ್ರ್ಯವನ್ನು ಮೈಗೂಡಿಸಿಕೊಳ್ಳುವಂತೆ ಮಾಡಲು ಸಮರ್ಥನಾಗುತ್ತಾನೋ ಅವನೇ ಪ್ರಜೆಗಳಿಗೆ ಪಿತೃಸಮಾನನಾಗುತ್ತಾನೆ. ಅಧಿಪತಿಯೂ ಅವನೇ ಆಗುತ್ತಾನೆ.
12092006a ಕೃತಂ ತ್ರೇತಾ ದ್ವಾಪರಶ್ಚ ಕಲಿಶ್ಚ ಭರತರ್ಷಭ|
12092006c ರಾಜವೃತ್ತಾನಿ ಸರ್ವಾಣಿ ರಾಜೈವ ಯುಗಮುಚ್ಯತೇ||
ಭರತರ್ಷಭ! ಕೃತ, ತ್ರೇತ, ದ್ವಾಪರ ಮತ್ತು ಕಲಿ ಯುಗಗಳು ಎಲ್ಲವೂ ರಾಜನ ಆಚರಣೆಯನ್ನೇ ಅನುಸರಿಸಿ ಪರಿವರ್ತನೆ ಹೊಂದುತ್ತವೆ. ರಾಜನೇ ಯುಗಸ್ವರೂಪನೆಂದು ಹೇಳುತ್ತಾರೆ.
12092007a ಚಾತುರ್ವರ್ಣ್ಯಂ ತಥಾ ವೇದಾಶ್ಚಾತುರಾಶ್ರಮ್ಯಮೇವ ಚ|
12092007c ಸರ್ವಂ ಪ್ರಮುಹ್ಯತೇ ಹ್ಯೇತದ್ಯದಾ ರಾಜಾ ಪ್ರಮಾದ್ಯತಿ||
ರಾಜನು ಪ್ರಮತ್ತನಾದರೆ ಚಾತುರ್ವರ್ಣಗಳೂ, ವೇದಗಳೂ, ನಾಲ್ಕು ಆಶ್ರಮಗಳು ಎಲ್ಲವೂ ಪ್ರಮೋಹಕ್ಕೊಳಗಾಗುತ್ತವೆ.
12092008a ರಾಜೈವ ಕರ್ತಾ ಭೂತಾನಾಂ ರಾಜೈವ ಚ ವಿನಾಶಕಃ|
12092008c ಧರ್ಮಾತ್ಮಾ ಯಃ ಸ ಕರ್ತಾ ಸ್ಯಾದಧರ್ಮಾತ್ಮಾ ವಿನಾಶಕಃ||
ರಾಜನೇ ಭೂತಗಳ ಕರ್ತೃ. ರಾಜನೇ ಭೂತಗಳ ವಿನಾಶಕ. ಅವನು ಧರ್ಮಾತ್ಮನಾಗಿದ್ದರೆ ಕರ್ತೃವಾಗುತ್ತಾನೆ. ಅಧರ್ಮಾತ್ಮನಾಗಿದ್ದರೆ ವಿನಾಶಕನಾಗುತ್ತಾನೆ.
12092009a ರಾಜ್ಞೋ ಭಾರ್ಯಾಶ್ಚ ಪುತ್ರಾಶ್ಚ ಬಾಂಧವಾಃ ಸುಹೃದಸ್ತಥಾ|
12092009c ಸಮೇತ್ಯ ಸರ್ವೇ ಶೋಚಂತಿ ಯದಾ ರಾಜಾ ಪ್ರಮಾದ್ಯತಿ||
ರಾಜನು ಪ್ರಮತ್ತನಾದರೆ ರಾಜನ ಭಾರ್ಯೆಯರೂ, ಪುತ್ರರೂ, ಬಾಂಧವರೂ, ಸುಹೃದಯರೂ ಎಲ್ಲರೂ ಒಟ್ಟಿಗೇ ಶೋಕಕ್ಕೊಳಗಾಗುತ್ತಾರೆ.
12092010a ಹಸ್ತಿನೋಽಶ್ವಾಶ್ಚ ಗಾವಶ್ಚಾಪ್ಯುಷ್ಟ್ರಾಶ್ವತರಗರ್ದಭಾಃ|
12092010c ಅಧರ್ಮವೃತ್ತೇ ನೃಪತೌ ಸರ್ವೇ ಸೀದಂತಿ ಪಾರ್ಥಿವ||
ಪಾರ್ಥಿವ! ನೃಪತಿಯು ಅಧರ್ಮದಲ್ಲಿ ನಡೆದುಕೊಂಡರೆ ಆನೆಗಳು, ಕುದುರೆಗಳು, ಗೋವುಗಳು, ಒಂಟೆಗಳು, ಹೇಸರಗತ್ತೆಗಳು ಎಲ್ಲವೂ ನಾಶಹೊಂದುತ್ತವೆ.
12092011a ದುರ್ಬಲಾರ್ಥಂ ಬಲಂ ಸೃಷ್ಟಂ ಧಾತ್ರಾ ಮಾಂಧಾತರುಚ್ಯತೇ|
12092011c ಅಬಲಂ ತನ್ಮಹದ್ಭೂತಂ ಯಸ್ಮಿನ್ಸರ್ವಂ ಪ್ರತಿಷ್ಠಿತಮ್||
ಮಾಂಧಾತಾ! ದುರ್ಬಲರಿಗಾಗಿಯೇ ಧಾತ್ರುವು ಬಲವನ್ನು ಸೃಷ್ಟಿಸಿದನೆಂದು ಹೇಳುತ್ತಾರೆ. ಯಾವುದರ ಮೇಲೆ ಎಲ್ಲವೂ ಪ್ರತಿಷ್ಠಿತವಾಗಿವೆಯೋ ಆ ಮಹಾಭೂತಗಣಗಳು ಅಬಲವಾದವುಗಳು.
12092012a ಯಚ್ಚ ಭೂತಂ ಸ ಭಜತೇ ಭೂತಾ ಯೇ ಚ ತದನ್ವಯಾಃ|
12092012c ಅಧರ್ಮಸ್ಥೇ ಹಿ ನೃಪತೌ ಸರ್ವೇ ಸೀದಂತಿ ಪಾರ್ಥಿವ||
ಪಾರ್ಥಿವ! ನೃಪತಿಯು ಅಧರ್ಮಿಯಾದರೆ ಅವನನ್ನು ಸೇವಿಸುವ ಮತ್ತು ಅವನನ್ನೇ ಆಶ್ರಯಿಸಿರುವ ಭೂತಗಳೆಲ್ಲವೂ ದುಃಖಪಡುತ್ತವೆ.
12092013a ದುರ್ಬಲಸ್ಯ ಹಿ ಯಚ್ಚಕ್ಷುರ್ಮುನೇರಾಶೀವಿಷಸ್ಯ ಚ|
12092013c ಅವಿಷಹ್ಯತಮಂ ಮನ್ಯೇ ಮಾ ಸ್ಮ ದುರ್ಬಲಮಾಸದಃ||
ದುರ್ಬಲನ, ಮುನಿಯ ಮತ್ತು ಸರ್ಪದ ದೃಷ್ಟಿಗಳನ್ನು ತಡೆದುಕೊಳ್ಳುವುದು ಅಸಾಧ್ಯವೆಂದು ನಾನು ಭಾವಿಸುತ್ತೇನೆ. ಆದುದರಿಂದ ದುರ್ಬಲರನ್ನು ಎಂದೂ ಪೀಡಿಸಬಾರದು.
12092014a ದುರ್ಬಲಾಂಸ್ತಾತ ಬುಧ್ಯೇಥಾ ನಿತ್ಯಮೇವಾವಿಮಾನಿತಾನ್|
12092014c ಮಾ ತ್ವಾಂ ದುರ್ಬಲಚಕ್ಷೂಂಷಿ ಪ್ರದಹೇಯುಃ ಸಬಾಂಧವಮ್||
ಅಯ್ಯಾ! ದುರ್ಬಲರು ಅಪಮಾನಿತರಾಗದಂತೆ ಸರ್ವದಾ ನೋಡಿಕೊಂಡಿರಬೇಕು. ಅಪಮಾನಿತ ದುರ್ಬಲರ ಕ್ರೂರ ದೃಷ್ಟಿಗಳು ಬಂಧುಗಳ ಸಮೇತ ನಿನ್ನನ್ನು ಸುಟ್ಟುಹಾಕದಿರಲಿ!
12092015a ನ ಹಿ ದುರ್ಬಲದಗ್ಧಸ್ಯ ಕುಲೇ ಕಿಂ ಚಿತ್ಪ್ರರೋಹತಿ|
12092015c ಆಮೂಲಂ ನಿರ್ದಹತ್ಯೇವ ಮಾ ಸ್ಮ ದುರ್ಬಲಮಾಸದಃ||
ದುರ್ಬಲರ ಕ್ರೂರದೃಷ್ಟಿಯಿಂದ ಸುಟ್ಟುಹೋದವನ ಕುಲದಲ್ಲಿ ಅಂಕುರವೇ ಇಲ್ಲವಾಗುತ್ತದೆ. ಅದು ಆಮೂಲವಾಗಿ ಕುಲವನ್ನು ಸುಟ್ಟುಬಿಡುತ್ತದೆ. ಆದುದರಿಂದ ದುರ್ಬಲನನ್ನೆಂದಿಗೂ ಸಂಕಟಪಡಿಸಬೇಡ.
12092016a ಅಬಲಂ ವೈ ಬಲಾಚ್ಚ್ರೇಯೋ ಯಚ್ಚಾತಿಬಲವದ್ಬಲಮ್|
12092016c ಬಲಸ್ಯಾಬಲದಗ್ಧಸ್ಯ ನ ಕಿಂ ಚಿದವಶಿಷ್ಯತೇ||
ಬಲಿಷ್ಠನಿಗಿಂತಲೂ ಅಬಲನೇ ಶ್ರೇಷ್ಠನು. ಅಬಲನ ಬಲವು ಬಲಿಷ್ಠನ ಬಲಕ್ಕಿಂತಲೂ ಅತಿಯಾದುದು. ಅಬಲನು ಬಲಶಾಲಿಯ ಕುಲವನ್ನೇ ನಿಃಶೇಷವಾಗಿ ಸುಟ್ಟುಹಾಕಿಬಿಡಬಲ್ಲನು.
12092017a ವಿಮಾನಿತೋ ಹತೋತ್ಕ್ರುಷ್ಟಸ್ತ್ರಾತಾರಂ ಚೇನ್ನ ವಿಂದತಿ|
12092017c ಅಮಾನುಷಕೃತಸ್ತತ್ರ ದಂಡೋ ಹಂತಿ ನರಾಧಿಪಮ್||
ಅಪಮಾನಿತ, ಹಿಂಸಿತ ಮತ್ತು ರಕ್ಷಣೆಗಾಗಿ ಕೂಗಿಕೊಳ್ಳುವ ದುರ್ಬಲನು ರಾಜನನ್ನು ರಕ್ಷಕನನ್ನಾಗಿ ಪಡೆಯದೇ ಇದ್ದರೆ ಅಮಾನುಷ ದಂಡವೇ ನರಾಧಿಪನನ್ನು ಸಂಹರಿಸುತ್ತದೆ.
12092018a ಮಾ ಸ್ಮ ತಾತ ಬಲೇ ಸ್ಥೇಯಾ ಬಾಧಿಷ್ಠಾ ಮಾಪಿ ದುರ್ಬಲಮ್[1]|
12092018c ಮಾ ತ್ವಾ ದುರ್ಬಲಚಕ್ಷೂಂಷಿ ಧಕ್ಷ್ಯಂತ್ಯಗ್ನಿರಿವಾಶ್ರಯಮ್||
ಅಯ್ಯಾ! ಬಲಶಾಲಿಯೆಂದು ದುರ್ಬಲನನ್ನು ಬಾಧಿಸಬೇಡ. ಅಗ್ನಿಯು ಆಶ್ರಯಭೂತವಾದ ಮರವನ್ನೇ ಸುಟ್ಟುಭಸ್ಮಮಾಡುವಂತೆ ದುರ್ಬಲರ ಕ್ರೂರದೃಷ್ಟಿಗಳು ನಿನ್ನನ್ನು ಸುಟ್ಟು ಭಸ್ಮಮಾಡದಿರಲಿ.
12092019a ಯಾನಿ ಮಿಥ್ಯಾಭಿಶಸ್ತಾನಾಂ ಪತಂತ್ಯಶ್ರೂಣಿ ರೋದತಾಮ್|
12092019c ತಾನಿ ಪುತ್ರಾನ್ಪಶೂನ್ ಘ್ನಂತಿ ತೇಷಾಂ ಮಿಥ್ಯಾಭಿಶಾಸತಾಮ್||
ಮಿಥ್ಯಾಪವಾದವನ್ನು ಅನುಭವಿಸುವವರ ರೋದನದಿಂದ ಬೀಳುವ ಕಣ್ಣೀರು ಮಿಥ್ಯಾಪವಾದವನ್ನು ಹೊರಿಸಿದವರ ಮಕ್ಕಳನ್ನೂ ಪುತ್ರರನ್ನೂ ನಾಶಮಾಡುತ್ತವೆ.
12092020a ಯದಿ ನಾತ್ಮನಿ ಪುತ್ರೇಷು ನ ಚೇತ್ಪೌತ್ರೇಷು ನಪ್ತೃಷು|
12092020c ನ ಹಿ ಪಾಪಂ ಕೃತಂ ಕರ್ಮ ಸದ್ಯಃ ಫಲತಿ ಗೌರಿವ||
ಭೂಮಿಯಲ್ಲಿ ಬಿತ್ತಿದ ಬೀಜವು ಹೇಗೋ ಹಾಗೆ ಮಾಡಿದ ಪಾಪಕರ್ಮವು ಕೂಡಲೇ ಫಲಕೊಡದಿರಬಹುದು. ಪಾಪಮಾಡಿದವನಿಗಲ್ಲದಿದ್ದರೆ ಅವನ ಪುತ್ರ ಅಥವಾ ಪೌತ್ರರಿಗೆ ಫಲವನ್ನು ನೀಡುತ್ತದೆ.
12092021a ಯತ್ರಾಬಲೋ ವಧ್ಯಮಾನಸ್ತ್ರಾತಾರಂ ನಾಧಿಗಚ್ಚತಿ|
12092021c ಮಹಾನ್ದೈವಕೃತಸ್ತತ್ರ ದಂಡಃ ಪತತಿ ದಾರುಣಃ||
ಅಬಲನು ವಧಿಸಲ್ಪಡುತ್ತಿರುವಾಗ ತ್ರಾತಾರನನ್ನು ಹೊಂದದೇ ಇದ್ದರೆ ದೈವಕೃತ ಮಹಾ ದಾರುಣ ದಂಡವು ರಕ್ಷಣೆಯನ್ನು ಕೊಡಬೇಕಾಗಿದ್ದವನ ಮೇಲೆಯೇ ಬೀಳುತ್ತದೆ.
12092022a ಯುಕ್ತಾ ಯದಾ ಜಾನಪದಾ ಭಿಕ್ಷಂತೇ ಬ್ರಾಹ್ಮಣಾ ಇವ|
12092022c ಅಭೀಕ್ಷ್ಣಂ ಭಿಕ್ಷುದೋಷೇಣ ರಾಜಾನಂ ಘ್ನಂತಿ ತಾದೃಶಾಃ||
ಜನಪದದ ಎಲ್ಲರೂ ಬ್ರಾಹ್ಮಣರಂತೆ ಭಿಕ್ಷುರೂಪದಿಂದ ಭಿಕ್ಷೆಬೀಡಲು ತೊಡಗಿದರೆ ಅಂಥಹ ಸ್ಥಿತಿಗೆ ಕಾರಣನಾದ ರಾಜನು ವಿನಾಶಹೊಂದುತ್ತಾನೆ.
12092023a ರಾಜ್ಞೋ ಯದಾ ಜನಪದೇ ಬಹವೋ ರಾಜಪೂರುಷಾಃ|
12092023c ಅನಯೇನೋಪವರ್ತಂತೇ ತದ್ರಾಜ್ಞಃ ಕಿಲ್ಬಿಷಂ ಮಹತ್||
ರಾಜನ ಅನೇಕ ಅಧಿಕಾರಿಗಳೇ ಜನಪದದಲ್ಲಿ ಅನ್ಯಾಯವಾಗಿ ನಡೆದುಕೊಂಡರೆ ಆಗ ಮಹಾರಾಜಕಿಲ್ಬಿಷವು ಪರಿಣಮಿಸುತ್ತದೆ.
12092024a ಯದಾ ಯುಕ್ತಾ ನಯಂತ್ಯರ್ಥಾನ್ಕಾಮಾದರ್ಥವಶೇನ ವಾ|
12092024c ಕೃಪಣಂ ಯಾಚಮಾನಾನಾಂ ತದ್ರಾಜ್ಞೋ ವೈಶಸಂ ಮಹತ್||
ಕೃಪಣರಾಗಿ ಯಾಚಿಸುತ್ತಿದ್ದವರ ಧನವನ್ನು ಯುಕ್ತಿಯಿಂದಲೋ ಸ್ವೇಚ್ಛೆಯಿಂದಲೋ ಅಥವಾ ಲೋಭದಿಂದಲೋ ಕಸಿದುಕೊಂಡಿದ್ದೇ ಆದರೆ ಅದು ರಾಜನ ಮಹಾವಿನಾಶವನ್ನು ಸೂಚಿಸುತ್ತದೆ.
12092025a ಮಹಾವೃಕ್ಷೋ ಜಾಯತೇ ವರ್ಧತೇ ಚ
ತಂ ಚೈವ ಭೂತಾನಿ ಸಮಾಶ್ರಯಂತಿ|
12092025c ಯದಾ ವೃಕ್ಷಶ್ಚಿದ್ಯತೇ ದಹ್ಯತೇ ವಾ
ತದಾಶ್ರಯಾ ಅನಿಕೇತಾ ಭವಂತಿ||
ಹುಟ್ಟಿ ಬೆಳೆದ ಮಹಾವೃಕ್ಷವೊಂದು ಅನೇಕ ಭೂತಗಳಿಗೆ ಆಶ್ರಯವನ್ನು ನೀಡುತ್ತಿರುತ್ತದೆ. ಯಾವಾಗ ಆ ವೃಕ್ಷವು ಕಡಿಯಲ್ಪಡುತ್ತದೆಯೋ ಅಥವಾ ಸುಟ್ಟುಹೋಗುತ್ತದೆಯೋ ಆಗ ಅದರ ಆಶ್ರಯದಲ್ಲಿದ್ದ ಎಲ್ಲವೂ ಆಶ್ರಯರಹಿತವಾಗುತ್ತವೆ.
12092026a ಯದಾ ರಾಷ್ಟ್ರೇ ಧರ್ಮಮಗ್ರ್ಯಂ ಚರಂತಿ
ಸಂಸ್ಕಾರಂ ವಾ ರಾಜಗುಣಂ ಬ್ರುವಾಣಾಃ|
12092026c ತೈರೇವಾಧರ್ಮಶ್ಚರಿತೋ ಧರ್ಮಮೋಹಾತ್
ತೂರ್ಣಂ ಜಹ್ಯಾತ್ಸುಕೃತಂ ದುಷ್ಕೃತಂ ಚ||
ರಾಷ್ಟ್ರದಲ್ಲಿ ಧರ್ಮವೇ ಪ್ರಧಾನವಾಗಿ ನಡೆಯುತ್ತಿರುವಾಗ ಸಂಸ್ಕಾರವಂತರು ರಾಜನ ಗುಣಗಾನ ಮಾಡುತ್ತಾರೆ. ಅದೇ ರಾಷ್ಟ್ರದಲ್ಲಿ ಧರ್ಮದ ಗೊಂದಲದಿಂದ ಅಧರ್ಮವು ನಡೆಯುತ್ತಿದ್ದಾಗ ಆ ದುಷ್ಕೃತವು ಬೇಗನೇ ರಾಜನ ಸುಕೃತವನ್ನೂ ನಾಶಪಡಿಸುತ್ತದೆ.
12092027a ಯತ್ರ ಪಾಪಾ ಜ್ಞಾಯಮಾನಾಶ್ಚರಂತಿ
ಸತಾಂ ಕಲಿರ್ವಿಂದತಿ ತತ್ರ ರಾಜ್ಞಃ|
12092027c ಯದಾ ರಾಜಾ ಶಾಸ್ತಿ ನರಾನ್ನಶಿಷ್ಯಾನ್
ನ ತದ್ರಾಜ್ಯಂ ವರ್ಧತೇ ಭೂಮಿಪಾಲ||
ಭೂಮಿಪಾಲ! ಎಲ್ಲಿ ಪಾಪಿಗಳು ಬಹಿರಂಗವಾಗಿ ಓಡಾಡುತ್ತಾ ಸತ್ಪುರುಷರನ್ನು ಪೀಡಿಸುತ್ತಾರೋ ಅಲ್ಲಿಯ ರಾಜನು ಕಲಿ ಎಂದು ತಿಳಿಯುತ್ತಾರೆ. ಯಾವಾಗ ರಾಜನು ಪಾಪಿಷ್ಟರನ್ನು ಶಿಕ್ಷಿಸುವುದಿಲ್ಲವೋ ಆಗ ರಾಜ್ಯವು ಅಭಿವೃದ್ಧಿಯನ್ನು ಹೊಂದುವುದಿಲ್ಲ.
12092028a ಯಶ್ಚಾಮಾತ್ಯಂ ಮಾನಯಿತ್ವಾ ಯಥಾರ್ಹಂ
ಮಂತ್ರೇ ಚ ಯುದ್ಧೇ ಚ ನೃಪೋ ನಿಯುಂಜ್ಯಾತ್|
12092028c ಪ್ರವರ್ಧತೇ ತಸ್ಯ ರಾಷ್ಟ್ರಂ ನೃಪಸ್ಯ
ಭುಂಕ್ತೇ ಮಹೀಂ ಚಾಪ್ಯಖಿಲಾಂ ಚಿರಾಯ||
ಯಾವ ನೃಪನು ಅಮಾತ್ಯರನ್ನು ಗೌರವಿಸಿ ಯಥಾರ್ಹವಾಗಿ ಅವರನ್ನು ಮಂತ್ರಾಲೋಚನೆ ಮತ್ತು ಯುದ್ಧಗಳಲ್ಲಿ ನಿಯೋಜಿಸಿಕೊಳ್ಳುತ್ತಾನೋ ಅಂಥಹ ನೃಪನ ರಾಷ್ಟ್ರವು ವೃದ್ಧಿಯಾಗುತ್ತದೆ. ಮತ್ತು ಅವನು ಅಖಿಲ ಮಹಿಯನ್ನೂ ಬಹುಕಾಲ ಭೋಗಿಸುತ್ತಾನೆ.
12092029a ಅತ್ರಾಪಿ ಸುಕೃತಂ ಕರ್ಮ ವಾಚಂ ಚೈವ ಸುಭಾಷಿತಾಮ್|
12092029c ಸಮೀಕ್ಷ್ಯ ಪೂಜಯನ್ರಾಜಾ ಧರ್ಮಂ ಪ್ರಾಪ್ನೋತ್ಯನುತ್ತಮಮ್||
ಅವರ ಸುಕೃತ ಕರ್ಮ ಮತ್ತು ಸುಭಾಷಿತ ಮಾತುಗಳನ್ನು ಸಮೀಕ್ಷಿಸಿ ಪೂಜಿಸುವ ರಾಜನು ಅನುತ್ತಮ ಧರ್ಮವನ್ನು ಪಡೆದುಕೊಳ್ಳುತ್ತಾನೆ.
12092030a ಸಂವಿಭಜ್ಯ ಯದಾ ಭುಂಕ್ತೇ ನ ಚಾನ್ಯಾನವಮನ್ಯತೇ|
12092030c ನಿಹಂತಿ ಬಲಿನಂ ದೃಪ್ತಂ ಸ ರಾಜ್ಞೋ ಧರ್ಮ ಉಚ್ಯತೇ||
ಸಂಪತ್ತನ್ನು ಸರಿಯಾಗಿ ವಿಭಜಿಸಿ ಉಪಭೋಗಿಸುವುದು, ಅನ್ಯರನ್ನು ಅಪಮಾನಿಸದಿರುವುದು, ಮದಾಂಧ ಬಲಿಷ್ಠರನ್ನು ಸಂಹರಿಸುವುದು – ಇದು ರಾಜಧರ್ಮವೆಂದೆನಿಸಿಕೊಳ್ಳುತ್ತದೆ.
12092031a ತ್ರಾಯತೇ ಹಿ ಯದಾ ಸರ್ವಂ ವಾಚಾ ಕಾಯೇನ ಕರ್ಮಣಾ|
12092031c ಪುತ್ರಸ್ಯಾಪಿ ನ ಮೃಷ್ಯೇಚ್ಚ ಸ ರಾಜ್ಞೋ ಧರ್ಮ ಉಚ್ಯತೇ||
ಮಾತು, ಶರೀರ ಮತ್ತು ಕಾರ್ಯಗಳಿಂದ ಎಲ್ಲವನ್ನೂ ರಕ್ಷಿಸುವುದು ಮತ್ತು ಮಗನ ಅಪರಾಧವನ್ನೂ ಕ್ಷಮಿಸದಿರುವುದು – ಇದು ರಾಜಧರ್ಮವೆಂದೆನಿಸಿಕೊಳ್ಳುತ್ತದೆ.
[2]12092032a ಯದಾ ಶಾರಣಿಕಾನ್ರಾಜಾ ಪುತ್ರವತ್ಪರಿರಕ್ಷತಿ|
12092032c ಭಿನತ್ತಿ ನ ಚ ಮರ್ಯಾದಾಂ ಸ ರಾಜ್ಞೋ ಧರ್ಮ ಉಚ್ಯತೇ||
ಶರಣುಬಂದವರನ್ನು ರಾಜನು ಪುತ್ರರಂತೆ ಪರಿರಕ್ಷಿಸುತ್ತಾನೆ. ಮತ್ತು ಅವನು ಮರ್ಯಾದೆಗಳನ್ನು ಮೀರಿ ನಡೆದುಕೊಳ್ಳುವುದಿಲ್ಲ. ಇದು ರಾಜಧರ್ಮವೆನಿಸಿಕೊಳ್ಳುತ್ತದೆ.
12092033a ಯದಾಪ್ತದಕ್ಷಿಣೈರ್ಯಜ್ಞೈರ್ಯಜತೇ ಶ್ರದ್ಧಯಾನ್ವಿತಃ|
12092033c ಕಾಮದ್ವೇಷಾವನಾದೃತ್ಯ ಸ ರಾಜ್ಞೋ ಧರ್ಮ ಉಚ್ಯತೇ||
ಕಾಮದ್ವೇಷಗಳನ್ನು ಅನಾದರಿಸಿ ಶದ್ಧಾನ್ವಿತನಾಗಿ ಆಪ್ತದಕ್ಷಿಣೆಗಳಿಂದ ಯಜ್ಞಗಳನ್ನು ಯಜಿಸುವುದು ರಾಜಧರ್ಮವೆನಿಸಿಕೊಳ್ಳುತ್ತದೆ.
12092034a ಕೃಪಣಾನಾಥವೃದ್ಧಾನಾಂ ಯದಾಶ್ರು ವ್ಯಪಮಾರ್ಷ್ಟಿ ವೈ|
12092034c ಹರ್ಷಂ ಸಂಜನಯನ್ನೃಣಾಂ ಸ ರಾಜ್ಞೋ ಧರ್ಮ ಉಚ್ಯತೇ||
ದೀನರು, ಅನಾಥರು ಮತ್ತು ವೃದ್ಧರ ಕಣ್ಣೀರನ್ನು ಒರೆಸಿ ಅವರಿಗೆ ಹರ್ಷವನ್ನುಂಟುಮಾಡುವುದು ರಾಜಧರ್ಮವೆನಿಸಿಕೊಳ್ಳುತ್ತದೆ.
12092035a ವಿವರ್ಧಯತಿ ಮಿತ್ರಾಣಿ ತಥಾರೀಂಶ್ಚಾಪಕರ್ಷತಿ|
12092035c ಸಂಪೂಜಯತಿ ಸಾಧೂಂಶ್ಚ ಸ ರಾಜ್ಞೋ ಧರ್ಮ ಉಚ್ಯತೇ||
ಮಿತ್ರರನ್ನು ಹೆಚ್ಚಿಸಿಕೊಳ್ಳುವುದು, ಶತ್ರುಗಳನ್ನು ಕಡಿಮೆಮಾಡಿಕೊಳ್ಳುವುದು ಮತ್ತು ಸಾಧುಗಳನ್ನು ಪೂಜಿಸುವುದು -ಇವು ರಾಜಧರ್ಮವೆಂದೆನಿಸಿಕೊಳ್ಳುತ್ತವೆ.
12092036a ಸತ್ಯಂ ಪಾಲಯತಿ ಪ್ರಾಪ್ತ್ಯಾ ನಿತ್ಯಂ ಭೂಮಿಂ ಪ್ರಯಚ್ಚತಿ|
12092036c ಪೂಜಯತ್ಯತಿಥೀನ್ ಭೃತ್ಯಾನ್ಸ ರಾಜ್ಞೋ ಧರ್ಮ ಉಚ್ಯತೇ||
ಸತ್ಯವನ್ನು ಪಾಲಿಸುವುದು, ನಿತ್ಯವೂ ಭೂದಾನಮಾಡುವುದು, ಅತಿಥಿಗಳನ್ನು ಮತ್ತು ಭರಣ-ಪೋಷಣೆ ಮಾಡಬೇಕಾದವರನ್ನು ಗೌರವಿಸುವುದು ಇವು ರಾಜಧರ್ಮಗಳೆಂದೆನಿಸಿಕೊಳ್ಳುತ್ತವೆ.
12092037a ನಿಗ್ರಹಾನುಗ್ರಹೌ ಚೋಭೌ ಯತ್ರ ಸ್ಯಾತಾಂ ಪ್ರತಿಷ್ಠಿತೌ|
12092037c ಅಸ್ಮಿಽಲ್ಲೋಕೇ ಪರೇ ಚೈವ ರಾಜಾ ತತ್ಪ್ರಾಪ್ನುತೇ ಫಲಮ್||
ನಿಗ್ರಹ ಮತ್ತು ಅನುಗ್ರಹ ಇವೆರಡೂ ಯಾರಲ್ಲಿ ಪ್ರತಿಷ್ಠಿತವಾಗಿವೆಯೋ ಆ ರಾಜನು ಇಹ-ಪರಗಳೆರಡರಲ್ಲೂ ಉತ್ತಮ ಫಲವನ್ನು ಪಡೆದುಕೊಳ್ಳುತ್ತಾನೆ.
12092038a ಯಮೋ ರಾಜಾ ಧಾರ್ಮಿಕಾಣಾಂ ಮಾಂಧಾತಃ ಪರಮೇಶ್ವರಃ|
12092038c ಸಂಯಚ್ಚನ್ಭವತಿ ಪ್ರಾಣಾನ್ನಸಂಯಚ್ಚಂಸ್ತು ಪಾಪಕಃ||
ಮಾಂಧಾತಾ! ರಾಜನು ದುಷ್ಟರಿಗೆ ಯಮನಂತಿರುತ್ತಾನೆ ಮತ್ತು ಧಾರ್ಮಿಕರಿಗೆ ಪರಮೇಶ್ವರನಂತಿರುತ್ತಾನೆ. ಇಂದ್ರಿಯಗಳನ್ನು ನಿಗ್ರಹಿಸಿಕೊಂಡಿರುವವರೆಗೆ ಅವನು ಶಾಸನಮಾಡಲು ಸಮರ್ಥನಾಗಿರುತ್ತಾನೆ. ಇಂದ್ರಿಯಗಳಿಗೆ ದಾಸನಾದಾಗ ಪತಿತನಾಗುತ್ತಾನೆ.
12092039a ಋತ್ವಿಕ್ಪುರೋಹಿತಾಚಾರ್ಯಾನ್ಸತ್ಕೃತ್ಯಾನವಮನ್ಯ ಚ|
12092039c ಯದಾ ಸಮ್ಯಕ್ ಪ್ರಗೃಹ್ಣಾತಿ ಸ ರಾಜ್ಞೋ ಧರ್ಮ ಉಚ್ಯತೇ||
ಋತ್ವಿಜರನ್ನೂ ಪುರೋಹಿತರನ್ನೂ ಆಚಾರ್ಯರನ್ನೂ ಸತ್ಕರಿಸಿ ಅಪಮಾನಿಸದೇ ಬರಮಾಡಿಕೊಳ್ಳುವುದು ರಾಜಧರ್ಮವೆಂದೆನಿಸಿಕೊಳ್ಳುವುದು.
12092040a ಯಮೋ ಯಚ್ಚತಿ ಭೂತಾನಿ ಸರ್ವಾಣ್ಯೇವಾವಿಶೇಷತಃ|
12092040c ತಸ್ಯ ರಾಜ್ಞಾನುಕರ್ತವ್ಯಂ ಯಂತವ್ಯಾ ವಿಧಿವತ್ಪ್ರಜಾಃ||
ಯಮನು ಹೇಗೆ ಸರ್ವ ಭೂತಗಳಲ್ಲಿಯೂ ವ್ಯತ್ಯಾಸಮಾಡದೇ ನಿಯಂತ್ರಿಸುತ್ತಾನೋ ಹಾಗೆ ವಿಧಿವತ್ತಾಗಿ ಪ್ರಜೆಗಳನ್ನು ನಿಯಂತ್ರಿಸುವುದು ರಾಜನ ಕರ್ತವ್ಯವು.
12092041a ಸಹಸ್ರಾಕ್ಷೇಣ ರಾಜಾ ಹಿ ಸರ್ವ ಏವೋಪಮೀಯತೇ|
12092041c ಸ ಪಶ್ಯತಿ ಹಿ ಯಂ ಧರ್ಮಂ ಸ ಧರ್ಮಃ ಪುರುಷರ್ಷಭ||
ಪುರುಷರ್ಷಭ! ಆದುದರಿಂದಲೇ ರಾಜನನ್ನು ಸಹಸ್ರಾಕ್ಷ ಇಂದ್ರನಿಗೆ ಹೋಲಿಸುತ್ತಾರೆ. ಅವನು ಯಾವುದನ್ನು ಧರ್ಮವೆಂದು ತಿಳಿಯುತ್ತಾನೋ ಅದೇ ಧರ್ಮವೆನಿಸಿಕೊಳ್ಳುತ್ತದೆ.
12092042a ಅಪ್ರಮಾದೇನ ಶಿಕ್ಷೇಥಾಃ ಕ್ಷಮಾಂ ಬುದ್ಧಿಂ ಧೃತಿಂ ಮತಿಮ್|
12092042c ಭೂತಾನಾಂ ಸತ್ತ್ವಜಿಜ್ಞಾಸಾಂ ಸಾಧ್ವಸಾಧು ಚ ಸರ್ವದಾ||
ನೀನು ಅಪ್ರಮತ್ತನಾಗಿದ್ದುಕೊಂಡು ಕ್ಷಮೆ, ಬುದ್ಧಿ, ಧೃತಿ ಮತ್ತು ಮತಿಯನ್ನು ಯಾವಾಗ ಹೇಗೆ ಉಪಯೋಗಿಸಬೇಕೆನ್ನುವುದನ್ನು ಕಲಿಯಬೇಕು. ಭೂತಗಳಿಗೆ ಯಾವುದು ಒಳ್ಳೆಯದು ಮತ್ತು ಒಳ್ಳೆಯಲ್ಲ ಎನ್ನುವುದನ್ನು ಸರ್ವದಾ ತಿಳಿದುಕೊಳ್ಳುತ್ತಿರಬೇಕು.
12092043a ಸಂಗ್ರಹಃ ಸರ್ವಭೂತಾನಾಂ ದಾನಂ ಚ ಮಧುರಾ ಚ ವಾಕ್|
12092043c ಪೌರಜಾನಪದಾಶ್ಚೈವ ಗೋಪ್ತವ್ಯಾಃ ಸ್ವಾ ಯಥಾ ಪ್ರಜಾಃ||
ಸರ್ವಭೂತಗಳಿಂದ ವಿಶ್ವಾಸ ಸಂಪಾದನೆ, ದಾನ ಮತ್ತು ಮಧುರವಾದ ಮಾತು ಹಾಗು ಪೌರಜಾನಪದರನ್ನು ತನ್ನ ಮಕ್ಕಳಂತೆಯೇ ರಕ್ಷಿಸುವುದು ಇವುಗಳನ್ನು ಮಾಡುತ್ತಿರಬೇಕು.
12092044a ನ ಜಾತ್ವದಕ್ಷೋ ನೃಪತಿಃ ಪ್ರಜಾಃ ಶಕ್ನೋತಿ ರಕ್ಷಿತುಮ್|
12092044c ಭಾರೋ ಹಿ ಸುಮಹಾಂಸ್ತಾತ ರಾಜ್ಯಂ ನಾಮ ಸುದುಷ್ಕರಮ್||
ಅಯ್ಯಾ! ಅದಕ್ಷನಾದ ನೃಪತಿಯು ಪ್ರಜೆಗಳನ್ನು ರಕ್ಷಿಸಲು ಶಕ್ಯನಾಗುವುದಿಲ್ಲ. ಆದುದರಿಂದ ರಾಜ್ಯದ ಇನ್ನೊಂದು ಹೆಸರು ಮಹತ್ತರ ಜವಾಬ್ದಾರಿ ಮತ್ತು ನಿರ್ವಹಿಸಲು ಕಷ್ಟಕರವಾದುದು ಎಂದಿದೆ.
12092045a ತದ್ದಂಡವಿನ್ನೃಪಃ ಪ್ರಾಜ್ಞಃ ಶೂರಃ ಶಕ್ನೋತಿ ರಕ್ಷಿತುಮ್|
12092045c ನ ಹಿ ಶಕ್ಯಮದಂಡೇನ ಕ್ಲೀಬೇನಾಬುದ್ಧಿನಾಪಿ ವಾ||
ದಂಡನೀತಿಯನ್ನು ತಿಳಿದಿರುವ ಪ್ರಾಜ್ಞ ಶೂರನೇ ಪ್ರಜೆಗಳನ್ನು ರಕ್ಷಿಸಲು ಶಕ್ಯನಾಗಿರುತ್ತಾನೆ. ದಂಡನೆ ನೀಡದ ಅಬುದ್ಧಿ ಹೇಡಿಗೆ ಪ್ರಜೆಗಳನ್ನು ರಕ್ಷಿಸಲು ಶಕ್ಯವಾಗುವುದಿಲ್ಲ.
12092046a ಅಭಿರೂಪೈಃ ಕುಲೇ ಜಾತೈರ್ದಕ್ಷೈರ್ಭಕ್ತೈರ್ಬಹುಶ್ರುತೈಃ|
12092046c ಸರ್ವಾ ಬುದ್ಧೀಃ ಪರೀಕ್ಷೇಥಾಸ್ತಾಪಸಾಶ್ರಮಿಣಾಮಪಿ||
ರೂಪವಂತರು, ಸತ್ಕುಲಪ್ರಸೂತರು, ದಕ್ಷರು, ಭಕ್ತರು ಮತ್ತು ಬಹುಶ್ರುತರಿಂದ ಆಶ್ರಮವಾಸಿಗಳನ್ನೂ ಸೇರಿ ಎಲ್ಲರ ಬುದ್ಧಿಗಳನ್ನು ಪರೀಕ್ಷಿಸಬೇಕು.
12092047a ತತಸ್ತ್ವಂ ಸರ್ವಭೂತಾನಾಂ ಧರ್ಮಂ ವೇತ್ಸ್ಯಸಿ ವೈ ಪರಮ್|
12092047c ಸ್ವದೇಶೇ ಪರದೇಶೇ ವಾ ನ ತೇ ಧರ್ಮೋ ವಿನಶ್ಯತಿ||
ಹಾಗೆ ಮಾಡುವುದರಿಂದ ನೀನು ಸರ್ವಭೂತಗಳ ಪರಮ ಧರ್ಮವನ್ನು ತಿಳಿದುಕೊಳ್ಳುತ್ತೀಯೆ. ಸ್ವದೇಶವಾಗಲೀ ಪರದೇಶವಾಗಲೀ ನಿನ್ನ ಧರ್ಮವು ನಾಶವಾಗುವುದಿಲ್ಲ.
12092048a ಧರ್ಮಶ್ಚಾರ್ಥಶ್ಚ ಕಾಮಶ್ಚ ಧರ್ಮ ಏವೋತ್ತರೋ ಭವೇತ್|
12092048c ಅಸ್ಮಿಽಲ್ಲೋಕೇ ಪರೇ ಚೈವ ಧರ್ಮವಿತ್ಸುಖಮೇಧತೇ||
ಧರ್ಮ-ಅರ್ಥ-ಕಾಮಗಳಲ್ಲಿ ಧರ್ಮವೇ ಉತ್ತಮವಾದುದು. ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ಕೂಡ ಧರ್ಮವೇ ಸುಖವನ್ನು ನೀಡುತ್ತದೆ.
12092049a ತ್ಯಜಂತಿ ದಾರಾನ್ಪ್ರಾಣಾಂಶ್ಚ ಮನುಷ್ಯಾಃ ಪ್ರತಿಪೂಜಿತಾಃ|
12092049c ಸಂಗ್ರಹಶ್ಚೈವ ಭೂತಾನಾಂ ದಾನಂ ಚ ಮಧುರಾ ಚ ವಾಕ್||
12092050a ಅಪ್ರಮಾದಶ್ಚ ಶೌಚಂ ಚ ತಾತ ಭೂತಿಕರಂ ಮಹತ್|
12092050c ಏತೇಭ್ಯಶ್ಚೈವ ಮಾಂಧಾತಃ ಸತತಂ ಮಾ ಪ್ರಮಾದಿಥಾಃ||
ಅಯ್ಯಾ! ಮಾಂಧಾತಾ! ನೀನು ಸಮ್ಮಾನಿಸಿದ ಮನುಷ್ಯರು ನಿನಗಾಗಿ ಪತ್ನಿಯರು ಮತ್ತು ಪ್ರಾಣಗಳನ್ನೂ ತೊರೆಯುತ್ತಾರೆ. ಪ್ರಜಾಸಂಗ್ರಹ, ದಾನ, ಮಧುರ ಮಾತು, ಅಪ್ರಮತ್ತತೆ ಮತ್ತು ಶೌಚ ಇವು ಮಹತ್ತರ ಐಶ್ವರ್ಯವನ್ನುಂಟುಮಾಡುತ್ತವೆ. ಇವುಗಳಿಂದ ನೀನು ಎಂದೂ ಚ್ಯುತನಾಗಬಾರದು.
12092051a ಅಪ್ರಮತ್ತೋ ಭವೇದ್ರಾಜಾ ಚಿದ್ರದರ್ಶೀ ಪರಾತ್ಮನೋಃ|
12092051c ನಾಸ್ಯ ಚಿದ್ರಂ ಪರಃ ಪಶ್ಯೇಚ್ಚಿದ್ರೇಷು ಪರಮನ್ವಿಯಾತ್||
ರಾಜನು ಅಪ್ರಮತ್ತನಾಗಿರಬೇಕು. ತನ್ನಲ್ಲಿ ಮತ್ತು ಇತರರಲ್ಲಿರುವ ದುರ್ಬಲತೆಗಳನ್ನು ಕಂಡುಕೊಂಡಿರಬೇಕು. ಆದರೆ ತನ್ನಲ್ಲಿರುವ ದೌರ್ಬಲ್ಯವು ಪರರಿಗೆ ಕಾಣದಂತಿರಬೇಕು. ಶತ್ರುಗಳ ದೌರ್ಬಲ್ಯದ ಮೇಲೆ ಗಮವವಿಟ್ಟಿರಬೇಕು.
12092052a ಏತದ್ವೃತ್ತಂ ವಾಸವಸ್ಯ ಯಮಸ್ಯ ವರುಣಸ್ಯ ಚ|
12092052c ರಾಜರ್ಷೀಣಾಂ ಚ ಸರ್ವೇಷಾಂ ತತ್ತ್ವಮಪ್ಯನುಪಾಲಯ||
ಇಂತರ ವರ್ತನೆಯು ವಾಸವ, ಯಮ, ವರುಣ ಮತ್ತು ರಾಜರ್ಷಿಗಳಲ್ಲಿವೆ. ಎಲ್ಲರೂ ಪರಿಪಾಲಿಸುತ್ತಿದ್ದ ಈ ರಾಜಧರ್ಮವನ್ನು ನೀನೂ ಪರಿಪಾಲಿಸು.
12092053a ತತ್ಕುರುಷ್ವ ಮಹಾರಾಜ ವೃತ್ತಂ ರಾಜರ್ಷಿಸೇವಿತಮ್|
12092053c ಆತಿಷ್ಠ ದಿವ್ಯಂ ಪಂಥಾನಮಹ್ನಾಯ ಭರತರ್ಷಭ||
ಮಹಾರಾಜಾ! ಭರತರ್ಷಭ! ರಾಜರ್ಷಿಸೇವಿತವಾದ ಈ ವರ್ತನೆಯಂತೆಯೇ ನಡೆದುಕೋ. ದಿವ್ಯ ಮಾರ್ಗವನ್ನು ಆಶ್ರಯಿಸು.
12092054a ಧರ್ಮವೃತ್ತಂ ಹಿ ರಾಜಾನಂ ಪ್ರೇತ್ಯ ಚೇಹ ಚ ಭಾರತ|
12092054c ದೇವರ್ಷಿಪಿತೃಗಂಧರ್ವಾಃ ಕೀರ್ತಯಂತ್ಯಮಿತೌಜಸಃ||
ಭಾರತ! ಧರ್ಮವ್ರತ ರಾಜನ ಕೀರ್ತಿಯನ್ನು ಅವನ ಮರಣಾನಂತರ ದೇವರ್ಷಿ-ಪಿತೃ-ಗಂಧರ್ವರು ಗಾನಮಾಡುತ್ತಿರುತ್ತಾರೆ.””
12092055 ಭೀಷ್ಮ ಉವಾಚ|
12092055a ಸ ಏವಮುಕ್ತೋ ಮಾಂಧಾತಾ ತೇನೋತಥ್ಯೇನ ಭಾರತ|
12092055c ಕೃತವಾನವಿಶಂಕಸ್ತದೇಕಃ ಪ್ರಾಪ ಚ ಮೇದಿನೀಮ್||
ಭೀಷ್ಮನು ಹೇಳಿದನು: “ಭಾರತ! ಉತಥ್ಯನು ಹೀಗೆ ಹೇಳಲು ಮಾಂಧಾತನು ಸಂದೇಹರಹಿತನಾಗಿ ಅವನು ಹೇಳಿದಂತೆಯೇ ಮಾಡಿ ಈ ಭೂಮಂಡಲಕ್ಕೆ ಏಕಚಕ್ರಾಧಿಪತಿಯಾದನು.
12092056a ಭವಾನಪಿ ತಥಾ ಸಮ್ಯಙ್ಮಾಂಧಾತೇವ ಮಹೀಪತಿಃ|
12092056c ಧರ್ಮಂ ಕೃತ್ವಾ ಮಹೀಂ ರಕ್ಷನ್ಸ್ವರ್ಗೇ ಸ್ಥಾನಮವಾಪ್ಸ್ಯಸಿ||
ನೀನೂ ಕೂಡ ಮಹೀಪತಿ ಮಾಂಧಾತನಂತೆ ಉತ್ತಮನಾಗಿ ಧರ್ಮವನ್ನಾಚರಿಸಿ ಮಹಿಯನ್ನು ರಕ್ಷಿಸಿ ಸ್ವರ್ಗದಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತೀಯೆ.”
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಉತಥ್ಯಗೀತಾಸು ದ್ವಿನವತಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಉತಥ್ಯಗೀತ ಎನ್ನುವ ತೊಂಭತ್ತೆರಡನೇ ಅಧ್ಯಾಯವು.
[1] ಮಾ ಸ್ಮತಾತ ರಣೇ ಸ್ಥಿತ್ವಾ ಭುಂಜೀಥಾ ದುರ್ಬಲಂ ಜನಮ್| ಎಂಬ ಪಾಠಾಂತರವಿದೆ (ಭಾರತ ದರ್ಶನ).
[2] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಮೂರು ಶ್ಲೋಕಗಳಿವೆ: ಸಂವಿಭಜ್ಯ ಯದಾ ಭುಂಕ್ತೇ ನೃಪತಿರ್ದುರ್ಬಲಾನ್ನರಾನ್| ತದಾ ಭವಂತಿ ಬಲಿನಃ ಸ ರಾಜ್ಞೋ ಧರ್ಮ ಉಚ್ಯತೇ|| ಯದಾ ರಕ್ಷತಿ ರಾಷ್ಟ್ರಾಣಿ ಯದಾ ದಸ್ಯೂನಪೋಹತಿ| ಯದಾ ಜಯತಿ ಸಂಗ್ರಾಮೇ ಸ ರಾಜ್ಞೋ ಧರ್ಮ ಉಚ್ಯತೇ|| ಪಾಪಮಾಚರತೋ ಯತ್ರ ಕರ್ಮಣಾ ವ್ಯಾಹೃತೇನ ವಾ| ಪ್ರಿಯಸ್ಯಾಪಿ ನ ಮೃಷ್ಯೇತ ಸ ರಾಜ್ಞೋ ಧರ್ಮ ಉಚ್ಯತೇ||