Shanti Parva: Chapter 82

ಶಾಂತಿ ಪರ್ವ: ರಾಜಧರ್ಮ ಪರ್ವ

೮೨

ಜ್ಞಾತಿ-ಬಾಂಧವರೊಡನೆ ಹೇಗೆ ವ್ಯವಹರಿಸಬೇಕು ಎನ್ನುವುದರ ಕುರಿತು ವಾಸುದೇವ-ನಾರದ ಸಂವಾದ (೧-೩೦).

12082001 ಯುಧಿಷ್ಠಿರ ಉವಾಚ|

12082001a ಏವಮಗ್ರಾಹ್ಯಕೇ ತಸ್ಮಿನ್ ಜ್ಞಾತಿಸಂಬಂಧಿಮಂಡಲೇ|

12082001c ಮಿತ್ರೇಷ್ವಮಿತ್ರೇಷ್ವಪಿ ಚ ಕಥಂ ಭಾವೋ ವಿಭಾವ್ಯತೇ||

ಯುಧಿಷ್ಠಿರನು ಹೇಳಿದನು: “ಪರಸ್ಪರ ಸ್ಪರ್ಧೆಯ ಕಾರಣದಿಂದ ಜ್ಞಾತಿಸಂಬಂಧಿಮಂಡಲದವರನ್ನು ಹತೋಟಿಯಲ್ಲಿಟ್ಟುಕೊಂಡಿರಲು ಸಾಧ್ಯವಾಗುವುದಿಲ್ಲ. ಒಂದು ಪಕ್ಷದವರನ್ನು ಆದರಿಸಿದರೆ ಇನ್ನೊಂದು ಪಕ್ಷದವರು ಕೋಪಗೊಳ್ಳುತ್ತಾರೆ. ಮಿತ್ರರು ಶತ್ರುಗಳೂ ಆಗಬಲ್ಲರು. ಇಂಥಹ ಸಂದರ್ಭದಲ್ಲಿ ಎಲ್ಲರ ಮನಸ್ಸನ್ನೂ ಹೇಗೆ ವಶೀಕರಿಸಿಕೊಳ್ಳಬಹುದು?”

12082002 ಭೀಷ್ಮ ಉವಾಚ|

12082002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12082002c ವಾಸುದೇವಸ್ಯ ಸಂವಾದಂ ಸುರರ್ಷೇರ್ನಾರದಸ್ಯ ಚ||

ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ವಾಸುದೇವ ಮತ್ತು ಸುರರ್ಷಿ ನಾರದರ ಸಂವಾದವನ್ನು ಉದಾಹರಿಸುತ್ತಾರೆ.

12082003 ವಾಸುದೇವ ಉವಾಚ|

12082003a ನಾಸುಹೃತ್ಪರಮಂ ಮಂತ್ರಂ ನಾರದಾರ್ಹತಿ ವೇದಿತುಮ್|

12082003c ಅಪಂಡಿತೋ ವಾಪಿ ಸುಹೃತ್ಪಂಡಿತೋ ವಾಪಿ ನಾತ್ಮವಾನ್||

ವಾಸುದೇವನು ಹೇಳಿದನು: “ನಾರದ! ಗುಹ್ಯ ವಿಷಯಗಳನ್ನು ಸುಹೃದನಲ್ಲದವನು ತಿಳಿಯಲು ಯೋಗ್ಯನಲ್ಲ. ಒಂದು ವೇಳೆ ಸುಹೃದನು ಅಪಂಡಿತನಾಗಿದ್ದರೆ ಅವನೂ ಗುಹ್ಯ ವಿಷಯಗಳನ್ನು ತಿಳಿಯಲು ಯೋಗ್ಯನಲ್ಲ. ವಿದ್ಯಾವಂತನೂ ಸುಹೃದನೂ ಆಗಿದ್ದರೂ ಜಿತೇಂದ್ರಿಯನಲ್ಲದವನು ಗೋಪನೀಯ ವಿಷಯಗಳನ್ನು ತಿಳಿದುಕೊಳ್ಳಲು ಯೋಗ್ಯನಲ್ಲ.

12082004a ಸ ತೇ ಸೌಹೃದಮಾಸ್ಥಾಯ ಕಿಂ ಚಿದ್ವಕ್ಷ್ಯಾಮಿ ನಾರದ|

12082004c ಕೃತ್ಸ್ನಾಂ ಚ ಬುದ್ಧಿಂ ಸಂಪ್ರೇಕ್ಷ್ಯ ಸಂಪೃಚ್ಚೇ ತ್ರಿದಿವಂಗಮ||

ಮೂರು ಲೋಕಗಳನ್ನೂ ಸಂಚರಿಸುವ ನಾರದ! ನಮ್ಮ ಸೌಹಾರ್ದತೆಯಿಂದ ನಾನು ನಿನ್ನಲ್ಲಿ ಕೆಲವು ಮಾತುಗಳನ್ನಾಡುತ್ತೇನೆ. ಮತ್ತೊಬ್ಬನ ಬುದ್ಧಿಬಲವನ್ನು ಸಂಪೂರ್ಣವಾಗಿ ತಿಳಿದೇ ಅವನನ್ನು ಪ್ರಶ್ನಿಸಬೇಕು.

12082005a ದಾಸ್ಯಮೈಶ್ವರ್ಯವಾದೇನ ಜ್ಞಾತೀನಾಂ ವೈ ಕರೋಮ್ಯಹಮ್|

12082005c ಅರ್ಧಭೋಕ್ತಾಸ್ಮಿ ಭೋಗಾನಾಂ ವಾಗ್ದುರುಕ್ತಾನಿ ಚ ಕ್ಷಮೇ||

ನಾನು ನನ್ನ ಪ್ರಭುತ್ವವನ್ನು ಪ್ರದರ್ಶಿಸಿ ಜ್ಞಾತಿ-ಬಾಂಧವರನ್ನು ದಾಸರನ್ನಾಗಿಸಲು ಬಯಸುವುದಿಲ್ಲ. ಅರ್ಧ ಭೋಗಗಳನ್ನೇ ನಾನು ಭೋಗಿಸುತ್ತೇನೆ. ಆದರೂ ಅವರು ನನ್ನ ವಿಷಯದಲ್ಲಿ ಕೆಟ್ಟಮಾತನ್ನಾಡಿದರೆ ಅದನ್ನೂ ಕ್ಷಮಿಸುತ್ತೇನೆ.

12082006a ಅರಣೀಮಗ್ನಿಕಾಮೋ ವಾ ಮಥ್ನಾತಿ ಹೃದಯಂ ಮಮ|

12082006c ವಾಚಾ ದುರುಕ್ತಂ ದೇವರ್ಷೇ ತನ್ಮೇ ದಹತಿ ನಿತ್ಯದಾ||

ದೇವರ್ಷೇ! ಅಗ್ನಿಯನ್ನು ಹುಟ್ಟಿಸಲು ಯಾವ ರೀತಿಯಲ್ಲಿ ಮಥಿಸಲಾಗುತ್ತದೆಯೋ ಹಾಗೆಯೇ ನನ್ನ ಹೃದಯವನ್ನೂ ಕೂಡ ನಿತ್ಯವೂ ಈ ಕೆಟ್ಟ ಮಾತುಗಳು ಸುಡುತ್ತಿವೆ.

12082007a ಬಲಂ ಸಂಕರ್ಷಣೇ ನಿತ್ಯಂ ಸೌಕುಮಾರ್ಯಂ ಪುನರ್ಗದೇ|

12082007c ರೂಪೇಣ ಮತ್ತಃ ಪ್ರದ್ಯುಮ್ನಃ ಸೋಽಸಹಾಯೋಽಸ್ಮಿ ನಾರದ||

ನಾರದ! ಸಂಕರ್ಷಣನಲ್ಲಿ ನಿತ್ಯವೂ ಬಲವಿದೆ. ಪುನಃ ಗದನಲ್ಲಿ ಸೌಕುಮಾರ್ಯತ್ವವಿದೆ. ಪ್ರದ್ಯುಮ್ನನು ತನ್ನ ರೂಪದಿಂದ ಮತ್ತನಾಗಿದ್ದಾನೆ. ಆದುದರಿಂದ ನಾನು ಅಸಹಾಯಕನಾಗಿದ್ದೇನೆ.

12082008a ಅನ್ಯೇ ಹಿ ಸುಮಹಾಭಾಗಾ ಬಲವಂತೋ ದುರಾಸದಾಃ|

12082008c ನಿತ್ಯೋತ್ಥಾನೇನ ಸಂಪನ್ನಾ ನಾರದಾಂಧಕವೃಷ್ಣಯಃ||

ನಾರದ! ಅನ್ಯ ಅಂಧಕ-ವೃಷ್ಣಿಗಳೂ ಕೂಡ ಮಹಾಭಾಗರು. ಬಲವಂತರು. ದುರಾಸದರು. ನಿತ್ಯವೂ ಉದ್ಯೋಗಶೀಲ ಸಂಪನ್ನರು.

12082009a ಯಸ್ಯ ನ ಸ್ಯುರ್ನ ವೈ ಸ ಸ್ಯಾದ್ಯಸ್ಯ ಸ್ಯುಃ ಕೃಚ್ಚ್ರಮೇವ ತತ್|

12082009c ದ್ವಾಭ್ಯಾಂ ನಿವಾರಿತೋ ನಿತ್ಯಂ ವೃಣೋಮ್ಯೇಕತರಂ ನ ಚ||

ಅವರು ಯಾರ ಕಡೆ ಸೇರುವುದಿಲ್ಲವೋ ಅವರು ನಾಶವಾದಂತಯೇ ಸರಿ. ಅವರು ಯಾರ ಕಡೆ ಇದ್ದಾರೋ ಅವರು ಎಷ್ಟೇ ಕಷ್ಟದಲ್ಲಿರಲಿ ವಿಜಯಿಗಳಾಗುತ್ತಾರೆ. ಆದರೆ ಆಹುಕ-ಅಕ್ರೂರರು ಪರಸ್ಪರ ಬದ್ಧವೈರಿಗಳಾಗಿದ್ದಾರೆ. ಇನ್ನೊಬ್ಬರ ಕಡೆ ಹೋಗಬಾರದೆಂದು ಇಬ್ಬರಿಂದಲೂ ನಿತ್ಯವೂ ತಡೆಯಲ್ಪಟ್ಟ ನಾನು ಯಾವ ಪಕ್ಷವನ್ನೂ ಸೇರದೇ ಸುಮ್ಮನಿದ್ದುಬಿಟ್ಟಿದ್ದೇನೆ.

12082010a ಸ್ಯಾತಾಂ ಯಸ್ಯಾಹುಕಾಕ್ರೂರೌ ಕಿಂ ನು ದುಃಖತರಂ ತತಃ|

12082010c ಯಸ್ಯ ವಾಪಿ ನ ತೌ ಸ್ಯಾತಾಂ ಕಿಂ ನು ದುಃಖತರಂ ತತಃ||

ಇಂಥಹ ಆಹುಕ-ಅಕ್ರೂರರ ಬಂಧುಗಳಿಗೆ ಇದಕ್ಕಿಂತಲೂ ದುಃಖತರವಾದುದು ಬೇರೆ ಯಾವುದಿದೆ? ಅವರ ಸುಹೃದರಿಗೂ ಅದಕ್ಕಿಂತಲೂ ಹೆಚ್ಚಿನ ದುಃಖವು ಬೇರೆ ಯಾವುದಿದೆ?

12082011a ಸೋಽಹಂ ಕಿತವಮಾತೇವ ದ್ವಯೋರಪಿ ಮಹಾಮುನೇ|

12082011c ಏಕಸ್ಯ ಜಯಮಾಶಂಸೇ ದ್ವಿತೀಯಸ್ಯಾಪರಾಜಯಮ್||

ಮಹಾಮುನೇ! ನಾನಾದರೋ ಇಬ್ಬರು ಜೂಜುಗಾರ ಮಕ್ಕಳಲ್ಲಿ ಒಬ್ಬನಿಗೆ ಜಯವಾಗಲೆಂದು ಆಶೀರ್ವಾದವನ್ನಿತ್ತು ಇನ್ನೊಬ್ಬನಿಗೆ ಪರಾಜಯವಾಗದಿರಲೆಂದು ಆಶೀರ್ವಾದವನ್ನಿಡುವ ತಾಯಿಯಂತೆ ಇದ್ದುಬಿಡುತ್ತೇನೆ.

12082012a ಮಮೈವಂ ಕ್ಲಿಶ್ಯಮಾನಸ್ಯ ನಾರದೋಭಯತಃ ಸದಾ|

12082012c ವಕ್ತುಮರ್ಹಸಿ ಯಚ್ಚ್ರೇಯೋ ಜ್ಞಾತೀನಾಮಾತ್ಮನಸ್ತಥಾ||

ನಾರದ! ಹೀಗೆ ಎರಡೂ ಕಡೆಗಳಿಂದ ಕಷ್ಟಕ್ಕೀಡಾಗಿರುವ ನಾನು ನನ್ನ ಜ್ಞಾತಿಬಾಂಧವರಿಗೆ ಶ್ರೇಯಸ್ಸುಂಟಾಗುವ ಹಾಗೆ ಏನನ್ನು ಮಾಡಬಹುದೆಂದು ಹೇಳಬೇಕು.”

12082013 ನಾರದ ಉವಾಚ|

12082013a ಆಪದೋ ದ್ವಿವಿಧಾಃ ಕೃಷ್ಣ ಬಾಹ್ಯಾಶ್ಚಾಭ್ಯಂತರಾಶ್ಚ ಹ|

12082013c ಪ್ರಾದುರ್ಭವಂತಿ ವಾರ್ಷ್ಣೇಯ ಸ್ವಕೃತಾ ಯದಿ ವಾನ್ಯತಃ||

ನಾರದನು ಹೇಳಿದನು: “ವಾರ್ಷ್ಣೇಯ! ಕೃಷ್ಣ! ಆಪತ್ತುಗಳಲ್ಲಿ ಎರಡು ವಿಧ: ಬಾಹ್ಯ (ಹೊರಗಿನದ್ದು) ಮತ್ತು ಅಭ್ಯಂತರ (ಒಳಗಿದ್ದುದು). ಇವು ಸ್ವಕೃತವಾಗಿರಬಹುದು ಅಥವಾ ಅನ್ಯರು ಮಾಡಿದ್ದಿರದಾಗಿರಬಹುದು.

12082014a ಸೇಯಮಾಭ್ಯಂತರಾ ತುಭ್ಯಮಾಪತ್ಕೃಚ್ಚ್ರಾ ಸ್ವಕರ್ಮಜಾ|

12082014c ಅಕ್ರೂರಭೋಜಪ್ರಭವಾಃ ಸರ್ವೇ ಹ್ಯೇತೇ ತದನ್ವಯಾಃ||

ಅಕ್ರೂರ ಮತ್ತು ಭೋಜರಿಂದ ನಿನಗೆ ಉಂಟಾಗಿರುವ ಈ ಕಷ್ಟವು ಅಭಂತರವಾಗಿದೆ ಮತ್ತು ಸ್ವಕೃತವಾಗಿದ್ದಾಗಿದೆ. ಏಕೆಂದರೆ ಇವರಿಬ್ಬರೂ ನಿನ್ನ ವಂಶದವರೇ ಆಗಿದ್ದಾರೆ.

12082015a ಅರ್ಥಹೇತೋರ್ಹಿ ಕಾಮಾದ್ವಾದ್ವಾರಾ ಬೀಭತ್ಸಯಾಪಿ ವಾ|

12082015c ಆತ್ಮನಾ ಪ್ರಾಪ್ತಮೈಶ್ವರ್ಯಮನ್ಯತ್ರ ಪ್ರತಿಪಾದಿತಮ್||

ಇದು ಸಂಪತ್ತಿನ ಕಾರಣದಿಂದಲೇ ಸಂಭವಿಸಿದೆ. ನಿನ್ನದೇ ಇಚ್ಛೆಯಿಂದಲೋ ಅಥವಾ ಬೇರೆಯವರು ನಿಂದಿಸಬಹುದೆಂಬ ಭಯದಿಂದಲೋ ನೀನು ನಿನಗೆ ಪ್ರಾಪ್ತವಾಗಿದ್ದ ಐಶ್ವರ್ಯವನ್ನು ಬೇರೆಯವರಿಗೆ ಕೊಟ್ಟುಬಿಟ್ಟಿರುವೆ!

12082016a ಕೃತಮೂಲಮಿದಾನೀಂ ತಜ್ಜಾತಶಬ್ದಂ ಸಹಾಯವತ್|

12082016c ನ ಶಕ್ಯಂ ಪುನರಾದಾತುಂ ವಾಂತಮನ್ನಮಿವ ತ್ವಯಾ||

ಸಹಾಯವೆಂದು ಹೇಳಿ ನೀನು ಕೊಟ್ಟಿದ ಸಂಪತ್ತು ಅವರಲ್ಲಿ ದೃಢವಾಗಿ ಬೇರುಬಿಟ್ಟಿದೆ. ವಾಂತಿಮಾಡಿದ ಅನ್ನವನ್ನು ಪುನಃ ಸೇವಿಸಲು ಸಾಧ್ಯವಾಗದಂತೆ ಅವರಲ್ಲಿರುವ ಸಂಪತ್ತನ್ನು ಪುನಃ ತೆಗೆದುಕೊಳ್ಳಲು ನಿನಗೆ ಸಾಧ್ಯವಾಗುವುದಿಲ್ಲ.

12082017a ಬಭ್ರೂಗ್ರಸೇನಯೋ ರಾಜ್ಯಂ ನಾಪ್ತುಂ ಶಕ್ಯಂ ಕಥಂ ಚನ|

12082017c ಜ್ಞಾತಿಭೇದಭಯಾತ್ಕೃಷ್ಣ ತ್ವಯಾ ಚಾಪಿ ವಿಶೇಷತಃ||

ಕೃಷ್ಣ! ಜ್ಞಾತಿಗಳಲ್ಲಿ ಭೇದವುಂಟಾಗಬಹುದೆಂಬ ಭಯದಿಂದ ಬಭ್ರು ಮತ್ತು ಉಗ್ರಸೇನರ ರಾಜ್ಯವನ್ನು ಎಂದೂ ಹಿಂತೆಗೆದುಕೊಳ್ಳಲು, ಅದರಲ್ಲೂ ವಿಶೇಷವಾಗಿ ನಿನ್ನಿಂದ, ಸಾಧ್ಯವಿಲ್ಲ.

12082018a ತಚ್ಚೇತ್ಸಿಧ್ಯೇತ್ಪ್ರಯತ್ನೇನ ಕೃತ್ವಾ ಕರ್ಮ ಸುದುಷ್ಕರಮ್|

12082018c ಮಹಾಕ್ಷಯವ್ಯಯಂ ವಾ ಸ್ಯಾದ್ವಿನಾಶೋ ವಾ ಪುನರ್ಭವೇತ್||

ಒಂದು ವೇಳೆ ಬಹಳ ಪ್ರಯತ್ನದಿಂದ ಅತ್ಯಂತ ದುಷ್ಕರ ಬಹುಜನಸಂಹಾರಕ ಯುದ್ಧವನ್ನು ಮಾಡಿ ರಾಜ್ಯವನ್ನು ಪಡೆದುಕೊಳ್ಳಬಹುದು. ಆದರೆ ಅದರಿಂದ ಅಪಾರ ಧನವ್ಯಯವಾಗುತ್ತದೆ. ಸರ್ವವಿನಾಶವಾಗುತ್ತದೆ.

12082019a ಅನಾಯಸೇನ ಶಸ್ತ್ರೇಣ ಮೃದುನಾ ಹೃದಯಚ್ಚಿದಾ|

12082019c ಜಿಹ್ವಾಮುದ್ಧರ ಸರ್ವೇಷಾಂ ಪರಿಮೃಜ್ಯಾನುಮೃಜ್ಯ ಚ||

ಆದುದರಿಂದ ಹೃದಯವನ್ನು ಭೇದಿಸುವ ಮೃದುವಾದ ಲೋಹದ್ದಲ್ಲದ ಶಸ್ತ್ರದಿಂದ ನಿನ್ನ ಜ್ಞಾತಿಯವರ ನಾಲಿಗೆಯನ್ನು ಕ್ಷಮೆ, ಸರಳತೆ ಮುಂತಾದ ಗುಣಗಳಿಂದ ಪರಿಮಾರ್ಜನಗೊಳಿಸಿ ಸೇವಾ-ಸತ್ಕಾರಗಳಿಂದ ಅನುಮಾರ್ಜನಗೊಳಿಸಿ ತೆಗೆದುಹಾಕು.”

12082020 ವಾಸುದೇವ ಉವಾಚ|

12082020a ಅನಾಯಸಂ ಮುನೇ ಶಸ್ತ್ರಂ ಮೃದು ವಿದ್ಯಾಮಹಂ ಕಥಮ್|

12082020c ಯೇನೈಷಾಮುದ್ಧರೇ ಜಿಹ್ವಾಂ ಪರಿಮೃಜ್ಯಾನುಮೃಜ್ಯ ಚ||

ವಾಸುದೇವನು ಹೇಳಿದನು: “ಮುನೇ! ಲೋಹದ್ದಲ್ಲದ ಮೃದು ಶಸ್ತ್ರವು ಯಾವುದೆಂದು ಹೇಗೆ ತಿಳಿಯಬಲ್ಲೆನು? ಅಂತಹ ಅಲೋಹ ಶಸ್ತ್ರದಿಂದ ನಾನು ಹೇಗೆ ನನ್ನ ಜ್ಞಾತಿಗಳವರ ಮಾತನ್ನು ನಿಲ್ಲಿಸಬಲ್ಲೆನು?”

12082021 ನಾರದ ಉವಾಚ|

12082021a ಶಕ್ತ್ಯಾನ್ನದಾನಂ ಸತತಂ ತಿತಿಕ್ಷಾ ದಮ ಆರ್ಜವಮ್|

12082021c ಯಥಾರ್ಹಪ್ರತಿಪೂಜಾ ಚ ಶಸ್ತ್ರಮೇತದನಾಯಸಮ್||

ನಾರದನು ಹೇಳಿದನು: “ಯಥಾಶಕ್ತಿ ಸತತ ಅನ್ನದಾನ, ಕ್ಷಮೆ, ಸರಳತೆ, ಕೋಮಲತೆ, ಯಥಾಯೋಗ್ಯ ಪೂಜಾ-ಸತ್ಕಾರಗಳು ಇವು ಅಲೋಹಶಸ್ತ್ರಗಳು.

12082022a ಜ್ಞಾತೀನಾಂ ವಕ್ತುಕಾಮಾನಾಂ ಕಟೂನಿ ಚ ಲಘೂನಿ ಚ|

12082022c ಗಿರಾ ತ್ವಂ ಹೃದಯಂ ವಾಚಂ ಶಮಯಸ್ವ ಮನಾಂಸಿ ಚ||

ಜ್ಞಾತಿಗಳೇನಾದರೂ ನಿನ್ನ ವಿಷಯದಲ್ಲಿ ಕಟುವಾದ ಮತ್ತು ತುಚ್ಛವಾಗಿ ಮಾತನಾಡ ಬಯಸಿದರೆ ಆ ಸಮಯದಲ್ಲಿ ನೀನು ಸುಮಧುರ ಮಾತುಗಳಿಂದ ಅವರ ಕಠೋರ ಹೃದಯವನ್ನೂ, ಕಟು ವಾಕ್ಯಗಳನ್ನೂ ಉದ್ರಿಕ್ತ ಮನಸ್ಸನ್ನೂ ಶಮನಗೊಳಿಸು.

12082023a ನಾಮಹಾಪುರುಷಃ ಕಶ್ಚಿನ್ನಾನಾತ್ಮಾ ನಾಸಹಾಯವಾನ್|

12082023c ಮಹತೀಂ ಧುರಮಾದತ್ತೇ ತಾಮುದ್ಯಮ್ಯೋರಸಾ ವಹ||

ಮಹಾಪುರುಷನಾಗಿರದವನು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳದವನು ಮತ್ತು ಅಸಹಾಯಕನಾದವನು ಮಹಾಭಾರವನ್ನು ಹೊರಲಾರನು. ನೀನು ಅವೆಲ್ಲವೂ ಆಗಿರುವುದರಿಂದ ಈ ಮಹಾಭಾರವನ್ನು ಹೊರು.

12082024a ಸರ್ವ ಏವ ಗುರುಂ ಭಾರಮನಡ್ವಾನ್ವಹತೇ ಸಮೇ|

12082024c ದುರ್ಗೇ ಪ್ರತೀಕಃ ಸುಗವೋ ಭಾರಂ ವಹತಿ ದುರ್ವಹಮ್||

ಎಲ್ಲ ಎತ್ತುಗಳೂ ಸಮಪ್ರದೇಶದಲ್ಲಿ ಭಾರವನ್ನು ಹೊರುತ್ತವೆ. ಆದರೆ ದುರ್ಗಮ ಪ್ರದೇಶಗಳಲ್ಲಿ ಹೊರಲು ಕಷ್ಟವಾದ ಭಾರವನ್ನು ಮಹಾಬಲಿಷ್ಟ ಎತ್ತೇ ಹೊರಬಲ್ಲದು.

12082025a ಭೇದಾದ್ವಿನಾಶಃ ಸಂಘಾನಾಂ ಸಂಘಮುಖ್ಯೋಽಸಿ ಕೇಶವ|

12082025c ಯಥಾ ತ್ವಾಂ ಪ್ರಾಪ್ಯ ನೋತ್ಸೀದೇದಯಂ ಸಂಘಸ್ತಥಾ ಕುರು||

ಕೇಶವ! ನೀನು ಯಾವ ಸಂಘದ ಮುಖ್ಯನಾಗಿರುವೆಯೋ ಆ ಸಂಘಗಳಲ್ಲಿದ್ದವರ ಭೇದದಿಂದ ವಿನಾಶವಾಗುತ್ತದೆ. ಸಂಖಮುಖ್ಯನನ್ನಾಗಿ ನಿನ್ನನ್ನು ಪಡೆದ ಸಂಘವು ಒಡೆಯದಂತೆ ನೀನು ಮಾಡು.

12082026a ನಾನ್ಯತ್ರ ಬುದ್ಧಿಕ್ಷಾಂತಿಭ್ಯಾಂ ನಾನ್ಯತ್ರೇಂದ್ರಿಯನಿಗ್ರಹಾತ್|

12082026c ನಾನ್ಯತ್ರ ಧನಸಂತ್ಯಾಗಾದ್ಗಣಃ ಪ್ರಾಜ್ಞೇಽವತಿಷ್ಠತೇ||

ಬುದ್ಧಿ, ಕ್ಷಮೆ ಮತ್ತು ಇಂದ್ರಿಯನಿಗ್ರಹಗಳಲ್ಲದೇ ಮತ್ತು ಧನಸಂತ್ಯಾಗವಲ್ಲದೇ ಬೇರೆ ಯಾವುದರಿಂದಲೂ ಗಣವು ಪ್ರಾಜ್ಞನ ಆಜ್ಞೆಯನ್ನು ಸ್ವೀಕರಿಸುವಂತೆ ಮಾಡಲು ಸಾಧ್ಯವಿಲ್ಲ.

12082027a ಧನ್ಯಂ ಯಶಸ್ಯಮಾಯುಷ್ಯಂ ಸ್ವಪಕ್ಷೋದ್ಭಾವನಂ ಶುಭಮ್|

12082027c ಜ್ಞಾತೀನಾಮವಿನಾಶಃ ಸ್ಯಾದ್ಯಥಾ ಕೃಷ್ಣ ತಥಾ ಕುರು||

ಕೃಷ್ಣ! ಸ್ವಪಕ್ಷದವರಿಗೆ ಅಭಿವೃದ್ಧಿಯನ್ನು ತರುವುದು ಧನ್ಯವೂ, ಯಶಸ್ಕರವೂ, ಆಯುಷ್ಕರವೂ ಆಗಿದೆ. ನಿನ್ನ ಜ್ಞಾತಿಗಳ ವಿನಾಶವಾಗದಂತೆ ಮಾಡು.

12082028a ಆಯತ್ಯಾಂ ಚ ತದಾತ್ವೇ ಚ ನ ತೇಽಸ್ತ್ಯವಿದಿತಂ ಪ್ರಭೋ|

12082028c ಷಾಡ್ಗುಣ್ಯಸ್ಯ ವಿಧಾನೇನ ಯಾತ್ರಾಯಾನವಿಧೌ ತಥಾ||

ಪ್ರಭೋ! ಈಗ ಮತ್ತು ಮುಂದೆ ಮಾಡಬೇಕಾದ ಕಾರ್ಯಗಳು ನಿನಗೆ ತಿಳಿದೇ ಇವೆ. ಷಡ್ಗುಣ[1]ಗಳ ವಿಧಾನಗಳ ಪ್ರಯೋಗವನ್ನೂ, ಯಾತ್ರಾಯಾನ ವಿಧಿಗಳ ಪ್ರಯೋಗವನ್ನೂ ನೀನು ತಿಳಿದಿರುವೆ.

12082029a ಮಾಧವಾಃ ಕುಕುರಾ ಭೋಜಾಃ ಸರ್ವೇ ಚಾಂಧಕವೃಷ್ಣಯಃ|

12082029c ತ್ವಯ್ಯಾಸಕ್ತಾ ಮಹಾಬಾಹೋ ಲೋಕಾ ಲೋಕೇಶ್ವರಾಶ್ಚ ಯೇ||

12082030a ಉಪಾಸತೇ ಹಿ ತ್ವದ್ಬುದ್ಧಿಮೃಷಯಶ್ಚಾಪಿ ಮಾಧವ|

ಮಹಾಬಾಹೋ! ಮಾಧವ! ಮಾಧವರು, ಕುಕರರು, ಭೋಜರು, ಸರ್ವ ಅಂಧಕ-ವೃಷ್ಣಿಗಳೂ ನಿನ್ನಲ್ಲಿಯೇ ಆಸಕ್ತರಾಗಿದ್ದಾರೆ. ಲೋಕೇಶ್ವರರೂ, ಋಷಿಗಳೂ ನಿನ್ನ ಬುದ್ಧಿಯನ್ನೂ ಉಪಾಸಿಸುತ್ತಾರೆ.

12082030c ತ್ವಂ ಗುರುಃ ಸರ್ವಭೂತಾನಾಂ ಜಾನೀಷೇ ತ್ವಂ ಗತಾಗತಮ್|

12082030e ತ್ವಾಮಾಸಾದ್ಯ ಯದುಶ್ರೇಷ್ಠಮೇಧಂತೇ ಜ್ಞಾತಿನಃ ಸುಖಮ್||

ನೀನು ಸರ್ವಭೂತಗಳ ಗುರುವಾಗಿರುವೆ. ಆಗಿಹೋಗಿರುವವು ಮತ್ತು ಮುಂದೆ ಆಗುವವು ನಿನಗೆ ತಿಳಿದಿವೆ. ಯದುಶ್ರೇಷ್ಠ!  ನಿನ್ನನ್ನು ಆಶ್ರಯಿಸಿ ನಿನ್ನ ಜ್ಞಾತಿಗಳು ಸುಖವನ್ನು ಹೊಂದುತ್ತಾರೆ.””

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ವಾಸುದೇವನಾರದಸಂವಾದೇ ದ್ವ್ಯಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ವಾಸುದೇವನಾರದಸಂವಾದ ಎನ್ನುವ ಎಂಭತ್ತೆರಡನೇ ಅಧ್ಯಾಯವು.

Beautiful tropical red ginger flower on ... | Stock image | Colourbox

[1] ಸಂಧಿ, ವಿಗ್ರಹ, ಯಾನ, ಆಸನ, ದ್ವಿಧೀಭಾವ, ಮತ್ತು ಸಮಾಶ್ರಯ ಇವು ಷಡ್ಗುಣಗಳು.

Comments are closed.