Shanti Parva: Chapter 80

ಶಾಂತಿ ಪರ್ವ: ರಾಜಧರ್ಮ ಪರ್ವ

೮೦

ಋತ್ವಿಜರ ಲಕ್ಷಣ; ಯಜ್ಞ-ದಕ್ಷಿಣೆಗಳ ಮಹತ್ವ; ತಪಸ್ಸಿನ ಶ್ರೇಷ್ಠತೆ (೧-೨೦).

12080001 ಯುಧಿಷ್ಠಿರ ಉವಾಚ|

12080001a ಕ್ವಸಮುತ್ಥಾಃ ಕಥಂಶೀಲಾ ಋತ್ವಿಜಃ ಸ್ಯುಃ ಪಿತಾಮಹ|

12080001c ಕಥಂವಿಧಾಶ್ಚ ರಾಜೇಂದ್ರ ತದ್ಬ್ರೂಹಿ ವದತಾಂ ವರ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಾತನಾಡುವವರಲ್ಲಿ ಶ್ರೇಷ್ಠ! ರಾಜೇಂದ್ರ! ಋತ್ವಿಜರ ಉತ್ಪತ್ತಿಯು ಯಾವ ಕಾರಣದಿಂದಾಯಿತು? ಅವರ ಗುಣ-ಸ್ವಭಾವಗಳು ಹೇಗಿರಬೇಕು? ಅವರು ಯಾವ ರೀತಿಯಲ್ಲಿರುತ್ತಾರೆ? ಇದನ್ನು ಹೇಳು.”

12080002 ಭೀಷ್ಮ ಉವಾಚ|

12080002a ಪ್ರತಿಕರ್ಮ ಪುರಾಚಾರ ಋತ್ವಿಜಾಂ ಸ್ಮ ವಿಧೀಯತೇ|

12080002c ಆದೌ ಚಂದಾಂಸಿ ವಿಜ್ಞಾಯ ದ್ವಿಜಾನಾಂ ಶ್ರುತಮೇವ ಚ||

ಭೀಷ್ಮನು ಹೇಳಿದನು: “ದ್ವಿಜರ ಛಂದಸ್ಸುಗಳ ಮತ್ತು ಶ್ರುತಿಗಳ ಜ್ಞಾನಗಳನ್ನು ತಿಳಿದು ಪ್ರತಿ ಕರ್ಮಗಳಿಗೆ ಉತ್ತಮ ಆಚಾರವುಳ್ಳ ಋತ್ವಿಜರನ್ನು ನಿಯುಕ್ತಗೊಳಿಸಿಕೊಳ್ಳಬೇಕು.

12080003a ಯೇ ತ್ವೇಕರತಯೋ ನಿತ್ಯಂ ಧೀರಾ ನಾಪ್ರಿಯವಾದಿನಃ|

12080003c ಪರಸ್ಪರಸ್ಯ ಸುಹೃದಃ ಸಂಮತಾಃ ಸಮದರ್ಶಿನಃ||

12080004a ಯೇಷ್ವಾನೃಶಂಸ್ಯಂ ಸತ್ಯಂ ಚಾಪ್ಯಹಿಂಸಾ ತಪ ಆರ್ಜವಮ್|

12080004c ಅದ್ರೋಹೋ ನಾಭಿಮಾನಶ್ಚ ಹ್ರೀಸ್ತಿತಿಕ್ಷಾ ದಮಃ ಶಮಃ||

12080005a ಹ್ರೀಮಾನ್ಸತ್ಯಧೃತಿರ್ದಾಂತೋ ಭೂತಾನಾಮವಿಹಿಂಸಕಃ|

12080005c ಅಕಾಮದ್ವೇಷಸಂಯುಕ್ತಸ್ತ್ರಿಭಿಃ ಶುಕ್ಲೈಃ ಸಮನ್ವಿತಃ||

12080006a ಅಹಿಂಸಕೋ ಜ್ಞಾನತೃಪ್ತಃ ಸ ಬ್ರಹ್ಮಾಸನಮರ್ಹತಿ|

12080006c ಏತೇ ಮಹರ್ತ್ವಿಜಸ್ತಾತ ಸರ್ವೇ ಮಾನ್ಯಾ ಯಥಾತಥಮ್||

ನಿತ್ಯವೂ ಯಜಮಾನನ ಏಕಮಾತ್ರ ಹಿತದಲ್ಲಿಯೇ ನಿರತರಾಗಿರುವ ಧೀರ ಪ್ರಿಯವಾದಿ ಪರಸ್ಪರ ಸೌಹಾರ್ದತೆಯಿಂದಿರುವ ಸಮ್ಮತ ಸಮದರ್ಶಿಗಳು, ಅಕ್ರೂರಿಗಳು, ಸತ್ಯವಂತರು, ಅಹಿಂಸಕರು, ತಪಸ್ವಿಗಳು, ಸರಳಸ್ವಭಾವದವರು, ದ್ರೋಹವನ್ನಿಟ್ಟುಕೊಂಡಿಲ್ಲದವರು, ಅಭಿಮಾನವಿಲ್ಲದವರು, ಮುಜುಗುರ ಸ್ವಾಭಾವವುಳ್ಳವರು, ಸಹನಶೀಲರು, ಜೀವಿಗಳಿಗೆ ಹಿಂಸೆಯನ್ನುಂಟುಮಾಡದವರ್, ಕಾಮ-ದ್ವೇಷಗಳಿಲ್ಲದವರು, ಶಾಸ್ತ್ರಜ್ಞಾನ-ಸದಾಚಾರ-ಸತ್ಕುಲಪ್ರಸೂತಿ ಈ ಮೂರನ್ನೂ ಹೊಂದಿರುವ, ಅಹಿಂಸಕ, ಜ್ಞಾನತೃಪ್ತನು ಬ್ರಹ್ಮತ್ವಕ್ಕೆ ಯೋಗ್ಯನಾಗಿರುತ್ತಾನೆ.”

12080007 ಯುಧಿಷ್ಠಿರ ಉವಾಚ|

12080007a ಯದಿದಂ ವೇದವಚನಂ ದಕ್ಷಿಣಾಸು ವಿಧೀಯತೇ|

12080007c ಇದಂ ದೇಯಮಿದಂ ದೇಯಂ ನ ಕ್ವ ಚಿದ್ವ್ಯವತಿಷ್ಠತೇ||

ಯುಧಿಷ್ಠಿರನು ಹೇಳಿದನು: “ದಕ್ಷಿಣೆಗಳ ಕುರಿತು “ಇದನ್ನು ಕೊಡಬೇಕು. ಇದನ್ನು ಕೊಡಬೇಕು” ಎಂಬ ವೇದ ವಚನವು ಮುಗಿಯುವುದೇ ಇಲ್ಲ.

12080008a ನೇದಂ ಪ್ರತಿ ಧನಂ ಶಾಸ್ತ್ರಮಾಪದ್ಧರ್ಮಮಶಾಸ್ತ್ರತಃ|

12080008c ಆಜ್ಞಾ ಶಾಸ್ತ್ರಸ್ಯ ಘೋರೇಯಂ ನ ಶಕ್ತಿಂ ಸಮವೇಕ್ಷತೇ||

ಧನವನ್ನು ದಾನಮಾಡಬೇಕು ಎನ್ನುವ ಈ ವೇದವಚನವು ಆಪದ್ಧರ್ಮಶಾಸ್ತ್ರವನ್ನು ಅನುಸರಿಸುವುದಿಲ್ಲ. ಅಪಾರ ದಕ್ಷಿಣೆಯನ್ನು ಕೊಡುವ ಸಾಮರ್ಥ್ಯವಿದೆಯೋ ಇಲ್ಲವೋ ಎಂದು ಪರಗಣಿಸದೇ ಇರುವ ಈ ಶಾಸ್ತ್ರದ ಆಜ್ಞೆಯು ಘೋರವಾಗಿದೆ.

12080009a ಶ್ರದ್ಧಾಮಾರಭ್ಯ ಯಷ್ಟವ್ಯಮಿತ್ಯೇಷಾ ವೈದಿಕೀ ಶ್ರುತಿಃ|

12080009c ಮಿಥ್ಯೋಪೇತಸ್ಯ ಯಜ್ಞಸ್ಯ ಕಿಮು ಶ್ರದ್ಧಾ ಕರಿಷ್ಯತಿ||

“ಶ್ರದ್ಧಾವಂತನು ಯಾಗಮಾಡಬೇಕು” ಎನ್ನುವ ವೇದ ಶ್ರುತಿವಾಕ್ಯವೂ ಇದೆ. ಯಥೋಕ್ತ ದಕ್ಷಿಣೆಯನ್ನು ಕೊಡಲು ಆಗದೇ ಇದ್ದರೆ ಯಜ್ಞವು ನಿಷ್ಫಲವಾಗಬಹುದು. ಆಗ ಕೇವಲ ಶ್ರದ್ಧೆಯೇನು ಮಾಡುತ್ತದೆ?”

12080010 ಭೀಷ್ಮ ಉವಾಚ|

12080010a ನ ವೇದಾನಾಂ ಪರಿಭವಾನ್ನ ಶಾಠ್ಯೇನ ನ ಮಾಯಯಾ|

12080010c ಕಶ್ಚಿನ್ಮಹದವಾಪ್ನೋತಿ ಮಾ ತೇ ಭೂದ್ಬುದ್ಧಿರೀದೃಶೀ||

ಭೀಷ್ಮನು ಹೇಳದನು: “ಉದ್ಧಟತನದಿಂದ ಅಥವಾ ವಂಚನೆಯಿಂದ ವೇದಗಳನ್ನು ನಿಂದಿಸುವುದರಿಂದ ಯಾರೂ ಅಧಿಕನಾಗುವುದಿಲ್ಲ. ಆದುದರಿಂದ ನೀನು ಈ ರೀತಿ ಯೋಚಿಸದಿರು.

12080011a ಯಜ್ಞಾಂಗಂ ದಕ್ಷಿಣಾಸ್ತಾತ ವೇದಾನಾಂ ಪರಿಬೃಂಹಣಮ್|

12080011c ನ ಮಂತ್ರಾ ದಕ್ಷಿಣಾಹೀನಾಸ್ತಾರಯಂತಿ ಕಥಂ ಚನ||

ಮಗೂ! ಯಜ್ಞಾಂಗವಾದ ದಕ್ಷಿಣೆಗಳು ವದಗಳ ವಿಸ್ತಾರವೇ ಆಗಿದ್ದು ಯಜ್ಞದಲ್ಲಿ ಉಂಟಾಗಬಹುದಾದ ನ್ಯೂನತೆಗಳ ಪರಿಹಾರಕ್ಕೆಂದಿವೆ. ಮಂತ್ರ ಮತ್ತು ದಕ್ಷಿಣೆಗಳಿಂದ ಹೀನವಾದ ಯಜ್ಞವು ಯಜಮಾನನನ್ನು ಉದ್ಧರಿಸುವುದಿಲ್ಲ.

12080012a ಶಕ್ತಿಸ್ತು ಪೂರ್ಣಪಾತ್ರೇಣ ಸಂಮಿತಾನವಮಾ ಭವೇತ್|

12080012c ಅವಶ್ಯಂ ತಾತ ಯಷ್ಟವ್ಯಂ ತ್ರಿಭಿರ್ವರ್ಣೈರ್ಯಥಾವಿಧಿ||

ಪೂರ್ಣಪಾತ್ರೆ[1]ಯಿಂದ ಅಸಮ ಸಾಮರ್ಥ್ಯಗಳು ಸಮವಾಗುತ್ತವೆ. ಮಗೂ! ಆದುದರಿಂದ ಮೂರು ವರ್ಣದವರೂ ಯಥಾವಿಧಿಯಾಗಿ ಯಜ್ಞಮಾಡಬೇಕು.

12080013a ಸೋಮೋ ರಾಜಾ ಬ್ರಾಹ್ಮಣಾನಾಮಿತ್ಯೇಷಾ ವೈದಿಕೀ ಶ್ರುತಿಃ|

12080013c ತಂ ಚ ವಿಕ್ರೇತುಮಿಚ್ಚಂತಿ ನ ವೃಥಾ ವೃತ್ತಿರಿಷ್ಯತೇ|

12080013e ತೇನ ಕ್ರೀತೇನ ಧರ್ಮೇಣ ತತೋ ಯಜ್ಞಃ ಪ್ರತಾಯತೇ||

ಸೋಮನು ಬ್ರಾಹ್ಮಣರ ರಾಜನೆನ್ನುವ ವೇದವಾಕ್ಯವಿದೆ. ಅದನ್ನು ವಿಕ್ರಯಿಸಲು ಬಯಸಿದರೆ ಅದು ವ್ಯರ್ಥ ವೃತ್ತಿಯೇನೂ ಅಲ್ಲ. ಹಾಗೆ ವಿಕ್ರಯಿಸಿದ ಸೋಮದಿಂದ ಯಜ್ಞವು ವೃದ್ಧಿಯಾಗುತ್ತದೆ.

12080014a ಇತ್ಯೇವಂ ಧರ್ಮತಃ ಖ್ಯಾತಮೃಷಿಭಿರ್ಧರ್ಮವಾದಿಭಿಃ|

12080014c ಪುಮಾನ್ಯಜ್ಞಶ್ಚ ಸೋಮಶ್ಚ ನ್ಯಾಯವೃತ್ತೋ ಯಥಾ ಭವೇತ್|

12080014e ಅನ್ಯಾಯವೃತ್ತಃ ಪುರುಷೋ ನ ಪರಸ್ಯ ನ ಚಾತ್ಮನಃ||

ಹೀಗೆ ಧರ್ಮವಾದೀ ಖ್ಯಾತ ಋಷಿಗಳು ಧರ್ಮದ ಕುರಿತು ಹೇಳಿದ್ದಾರೆ. ಯಜ್ಞದ ಯಜಮಾನ, ಸೋಮ ಮತ್ತು ಯಜ್ಞ ಇವು ನ್ಯಾಯಸಂಪನ್ನವಾಗಿದ್ದರೆ ಯಜ್ಞವೂ ಯಥಾರ್ಥರೂಪದಲ್ಲಿ ಪರ್ಯವಸಾನವಾಗುತ್ತದೆ. ಅನ್ಯಾಯವೃತ್ತಿಯ ಪುರುಷನು ತನಗೂ ಮತ್ತ ಇತರರಿಗೂ ಒಳ್ಳೆಯದನ್ನುಂಟುಮಾಡುವುದಿಲ್ಲ.

12080015a ಶರೀರಂ ಯಜ್ಞಪಾತ್ರಾಣಿ[2] ಇತ್ಯೇಷಾ ಶ್ರೂಯತೇ ಶ್ರುತಿಃ|

12080015c ತಾನಿ ಸಮ್ಯಕ್ಪ್ರಣೀತಾನಿ[3] ಬ್ರಾಹ್ಮಣಾನಾಂ ಮಹಾತ್ಮನಾಮ್||

ಶರೀರವೇ ಯಜ್ಞಪಾತ್ರೆಗಳೆಂದು ಶ್ರುತಿಯ ಹೇಳುತ್ತದೆ. ಮಹಾತ್ಮ ಬ್ರಾಹ್ಮಣರಿಗೆ ಅದೇ ಪ್ರಣೀತಾಗ್ನಿಯಾಗುತ್ತದೆ.

12080016a ತಪೋ ಯಜ್ಞಾದಪಿ ಶ್ರೇಷ್ಠಮಿತ್ಯೇಷಾ ಪರಮಾ ಶ್ರುತಿಃ|

12080016c ತತ್ತೇ ತಪಃ ಪ್ರವಕ್ಷ್ಯಾಮಿ ವಿದ್ವಂಸ್ತದಪಿ ಮೇ ಶೃಣು||

ತಪಸ್ಸು ಯಜ್ಞಕ್ಕಿಂತಲೂ ಶ್ರೇಷ್ಠವಾದುದು ಎಂಬ ಪರಮ ಶ್ರುತಿವಚನವಿದೆ. ವಿದ್ವನ್! ಆ ತಪಸ್ಸು ಎಂಥಹುದು ಎನ್ನುವುದನ್ನು ಹೇಳುತ್ತೇನೆ. ಕೇಳು.

12080017a ಅಹಿಂಸಾ ಸತ್ಯವಚನಮಾನೃಶಂಸ್ಯಂ ದಮೋ ಘೃಣಾ|

12080017c ಏತತ್ತಪೋ ವಿದುರ್ಧೀರಾ ನ ಶರೀರಸ್ಯ ಶೋಷಣಮ್||

ಕೇವಲ ಶರೀರ ಶೋಷಣೆಯೇ ತಪಸ್ಸಲ್ಲ. ಅಹಿಂಸೆ, ಸತ್ಯವಚನ, ಅಕ್ರೌರ್ಯ, ಜಿತೇಂದ್ರಿಯತೆ ಮತ್ತು ದಯಾಪರತೆ ಇವುಗಳನ್ನು ತಪಸ್ಸೆಂದು ಧೀರರು ಹೇಳುತ್ತಾರೆ.

12080018a ಅಪ್ರಾಮಾಣ್ಯಂ ಚ ವೇದಾನಾಂ ಶಾಸ್ತ್ರಾಣಾಂ ಚಾತಿಲಂಘನಮ್|

12080018c ಅವ್ಯವಸ್ಥಾ ಚ ಸರ್ವತ್ರ ತದ್ವೈ ನಾಶನಮಾತ್ಮನಃ||

ವೇದಕ್ಕೆ ಪ್ರಮಾಣವಿಲ್ಲವೆಂದು ಹೇಳುವುದು, ಶಾಸ್ತ್ರಗಳನ್ನು ಉಲ್ಲಂಘಿಸಿ ನಡೆಯುವುದು ಮತ್ತು ಎಲ್ಲೆಡೆಗಳಲ್ಲಿಯೂ ಅವ್ಯವಸ್ಥೆಯಿಂದ ನಡೆದುಕೊಳ್ಳುವುದು – ಇವು ಆತ್ಮನಾಶಕವಾದವುಗಳು.

12080019a ನಿಬೋಧ ದಶಹೋತೃಣಾಂ ವಿಧಾನಂ ಪಾರ್ಥ ಯಾದೃಶಮ್|

12080019c ಚಿತ್ತಿಃ ಸ್ರುಕ್ಚಿತ್ತಮಾಜ್ಯಂ ಚ ಪವಿತ್ರಂ ಜ್ಞಾನಮುತ್ತಮಮ್||

ಪಾರ್ಥ! ಹೋತೃಗಳ ಹತ್ತು ವಿಧಾನಗಳ ಕುರಿತು ಕೇಳು[4]. ಬುದ್ಧಿಯೇ ಸ್ರುಕ್. ಮನಸ್ಸೇ ಆಜ್ಯ. ಉತ್ತಮ ಜ್ಞಾನವೇ ಯಜ್ಞಸಮಯದಲ್ಲಿ ಧರಿಸುವ ಪವಿತ್ರ.

12080020a ಸರ್ವಂ ಜಿಹ್ಮಂ ಮೃತ್ಯುಪದಮಾರ್ಜವಂ ಬ್ರಹ್ಮಣಃ ಪದಮ್|

12080020c ಏತಾವಾಂಜ್ಞಾನವಿಷಯಃ ಕಿಂ ಪ್ರಲಾಪಃ ಕರಿಷ್ಯತಿ||

ಎಲ್ಲ ತರಹದ ಕುಟಿಲತೆಗಳೂ ಮೃತ್ಯುಸ್ಥಾನಗಳು. ಸರಳತೆಯು ಬ್ರಹ್ಮಪದವು. ಜ್ಞಾನದ ವಿಷಯವು ಇಷ್ಟುಮಾತ್ರವಾಗಿದೆ. ಉಳಿದುದೆಲ್ಲವೂ ವ್ಯರ್ಥಪ್ರಲಾಪಗಳು. ಅವುಗಳೇನು ಮಾಡುತ್ತವೆ?”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಅಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಎಂಭತ್ತನೇ ಅಧ್ಯಾಯವು.

Single stem of peony on white background | Amazing flowers ...

[1] ೨೫೬ ಹಿಡಿಧಾನ್ಯ.

[2] ಶರೀರವೃತ್ತಮಾಸ್ಠಾಯ ಎಂಬ ಪಾಠಾಂತರವಿದೆ.

[3] ನಾತಿಸಮ್ಯಕ್ಪ್ರಣೀತಾನಿ ಎಂಬ ಪಾಠಾಂತರವಿದೆ.

[4] ಹೋತೃಗಳಿಗೆ ಸಂಬಂಧಿಸಿದ ದಶದ್ರವ್ಯಗಳ ಕುರಿತಾದ ಶ್ರುತಿಪಾಠವು ಹೀಗಿದೆ: ಚಿತ್ತಿಃಸ್ರುಕ್| ಚಿತ್ತಮಾಜ್ಯಂ| ವಾಗ್ವೇದಿಃ| ಅಧೀತಂ ಬರ್ಹಿಃ| ಕೇತೋ ಅಗ್ನಿಃ| ವಿಜ್ಞಾತಮಗ್ನಿಃ| ವಾಕ್ಪತಿರ್ಹೋತಾ| ಮನ ಉಪವಕ್ತಾ| ಪ್ರಾಣೋ ಹವಿಃ| ಸಾಮಾಧ್ವರ್ಯುಃ [ತೈತ್ತರೀಯ ಯಜುರಾರಣ್ಯಕ].

Comments are closed.