Shanti Parva: Chapter 76

ಶಾಂತಿ ಪರ್ವ: ರಾಜಧರ್ಮ ಪರ್ವ

೭೬

12076001 ಯುಧಿಷ್ಠಿರ ಉವಾಚ|

12076001a ಯಯಾ ವೃತ್ತ್ಯಾ ಮಹೀಪಾಲೋ ವಿವರ್ಧಯತಿ ಮಾನವಾನ್|

12076001c ಪುಣ್ಯಾಂಶ್ಚ ಲೋಕಾಂಜಯತಿ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹೀಪಾಲನು ಹೇಗೆ ನಡೆದುಕೊಂಡರೆ ಪ್ರಜೆಗಳ ವೃದ್ಧಿಯಾಗುತ್ತದೆ? ಮತ್ತು ಪುಣ್ಯ ಲೋಕಗಳನ್ನು ಜಯಿಸಬಲ್ಲ? ಇದನ್ನು ನನಗೆ ಹೇಳು.”

12076002 ಭೀಷ್ಮ ಉವಾಚ|

12076002a ದಾನಶೀಲೋ ಭವೇದ್ರಾಜಾ ಯಜ್ಞಶೀಲಶ್ಚ ಭಾರತ|

12076002c ಉಪವಾಸತಪಃಶೀಲಃ ಪ್ರಜಾನಾಂ ಪಾಲನೇ ರತಃ||

ಭೀಷ್ಮನು ಹೇಳಿದನು: “ಭಾರತ! ರಾಜನಾದವನು ದಾನಶೀಲನೂ ಯಜ್ಞಶೀಲನೂ ಆಗಿರಬೇಕು. ಉಪವಾಸ ಮತ್ತು ತಪಃಶೀಲನಾಗಿ ಪ್ರಜೆಗಳ ಪಾಲನೆಯಲ್ಲಿಯೇ ನಿರತನಾಗಿರಬೇಕು.

12076003a ಸರ್ವಾಶ್ಚೈವ ಪ್ರಜಾ ನಿತ್ಯಂ ರಾಜಾ ಧರ್ಮೇಣ ಪಾಲಯೇತ್|

12076003c ಉತ್ಥಾನೇನಾಪ್ರಮಾದೇನ ಪೂಜಯೇಚ್ಚೈವ ಧಾರ್ಮಿಕಾನ್||

ಸರ್ವ ಪ್ರಜೆಗಳನ್ನು ರಾಜನು ನಿತ್ಯವೂ ಧರ್ಮದಿಂದ ಪಾಲಿಸಬೇಕು. ಧಾರ್ಮಿಕರನ್ನು ಅಪ್ರಮಾದದಿಂದ ಮೇಲೆದ್ದು ಪೂಜಿಸಬೇಕು.

12076004a ರಾಜ್ಞಾ ಹಿ ಪೂಜಿತೋ ಧರ್ಮಸ್ತತಃ ಸರ್ವತ್ರ ಪೂಜ್ಯತೇ|

12076004c ಯದ್ಯದಾಚರತೇ ರಾಜಾ ತತ್ಪ್ರಜಾನಾಂ ಹಿ ರೋಚತೇ||

ರಾಜನಿಂದ ಪೂಜಿಸಲ್ಪಟ್ಟ ಧರ್ಮವು ಸರ್ವತ್ರ ಪೂಜಿಸಲ್ಪಡುತ್ತದೆ. ಆಗ ರಾಜನು ಆಚರಿಸಿದುದೆಲ್ಲವೂ ಪ್ರಜೆಗಳಿಗೆ ಹಿತವೆನಿಸುತ್ತವೆ.

12076005a ನಿತ್ಯಮುದ್ಯತದಂಡಶ್ಚ ಭವೇನ್ಮೃತ್ಯುರಿವಾರಿಷು|

12076005c ನಿಹನ್ಯಾತ್ಸರ್ವತೋ ದಸ್ಯೂನ್ನ ಕಾಮಾತ್ಕಸ್ಯ ಚಿತ್ ಕ್ಷಮೇತ್||

ನಿತ್ಯವೂ ದಂಡವನ್ನು ಎತ್ತಿ ಹಿಡಿದು ಶತ್ರುಗಳಿಗೆ ಮೃತ್ಯುವಿನಂತಿರಬೇಕು. ಎಲ್ಲಕಡೆ ಎಲ್ಲ ದಸ್ಯುಗಳನ್ನೂ ಸಂಹರಿಸಬೇಕು. ಯಾರಿಗೂ ಕ್ಷಮೆಯನ್ನು ನೀಡಬಾರದು.

12076006a ಯಂ ಹಿ ಧರ್ಮಂ ಚರಂತೀಹ ಪ್ರಜಾ ರಾಜ್ಞಾ ಸುರಕ್ಷಿತಾಃ|

12076006c ಚತುರ್ಥಂ ತಸ್ಯ ಧರ್ಮಸ್ಯ ರಾಜಾ ಭಾರತ ವಿಂದತಿ||

ಭಾರತ! ರಾಜನಿಂದ ಸುರಕ್ಷಿತರಾದ ಪ್ರಜೆಗಳು ಇಲ್ಲಿ ಯಾವ ಧರ್ಮಕರ್ಮಗಳನ್ನು ಮಾಡುತ್ತಾರೋ ಅದರ ನಾಲ್ಕನೆಯ ಒಂದು ಭಾಗವು ರಾಜನಿಗೆ ಸೇರುತ್ತದೆ.

12076007a ಯದಧೀತೇ ಯದ್ಯಜತೇ ಯದ್ದದಾತಿ ಯದರ್ಚತಿ|

12076007c ರಾಜಾ ಚತುರ್ಥಭಾಕ್ತಸ್ಯ ಪ್ರಜಾ ಧರ್ಮೇಣ ಪಾಲಯನ್||

ಪ್ರಜೆಗಳನ್ನು ಧರ್ಮದಿಂದ ಪಾಲಿಸಿದ ರಾಜನಿಗೆ ಅವರು ಅಧ್ಯಯನ ಮಾಡುವುದರ, ಯಜ್ಞಗಳ, ದಾನಗಳ ಮತ್ತು ಪೂಜೆಗಳ ನಾಲ್ಕನೆಯ ಒಂದು ಭಾಗವು ದೊರೆಯುತ್ತದೆ.

12076008a ಯದ್ರಾಷ್ಟ್ರೇಽಕುಶಲಂ ಕಿಂ ಚಿದ್ರಾಜ್ಞೋಽರಕ್ಷಯತಃ ಪ್ರಜಾಃ|

12076008c ಚತುರ್ಥಂ ತಸ್ಯ ಪಾಪಸ್ಯ ರಾಜಾ ಭಾರತ ವಿಂದತಿ||

ಭಾರತ! ಯಾವ ರಾಷ್ಟ್ರದಲ್ಲಿ ರಾಜನು ಪ್ರಜೆಗಳನ್ನು ರಕ್ಷಿಸುವುದಿಲ್ಲವೋ ಮತ್ತು ಪ್ರಜೆಗಳು ಅಕುಶಲರಾಗಿರುವರೋ ಆ ರಾಷ್ಟ್ರದಲ್ಲಿ ಪ್ರಜೆಗಳು ಮಾಡುವ ಪಾಪಕರ್ಮಗಳ ಫಲಗಳ ನಾಲ್ಕನೆಯ ಒಂದು ಭಾಗವು ರಾಜನಿಗೂ ದೊರೆಯುತ್ತದೆ.

12076009a ಅಪ್ಯಾಹುಃ ಸರ್ವಮೇವೇತಿ ಭೂಯೋಽರ್ಧಮಿತಿ ನಿಶ್ಚಯಃ|

12076009c ಕರ್ಮಣಃ ಪೃಥಿವೀಪಾಲ ನೃಶಂಸೋಽನೃತವಾಗಪಿ|

12076009e ತಾದೃಶಾತ್ಕಿಲ್ಬಿಷಾದ್ರಾಜಾ ಶೃಣು ಯೇನ ಪ್ರಮುಚ್ಯತೇ||

ಕೆಲವರು ಪಾಪಗಳೆಲ್ಲವೂ ರಾಜನಿಗೇ ಸೇರುತ್ತವೆ ಎನ್ನುತ್ತಾರೆ. ಇನ್ನು ಕೆಲವರು ಅರ್ಧ ಪಾಪವೇ ರಾಜನಿಗೆ ಸೇರುತ್ತದೆ ಎನ್ನುತ್ತಾರೆ. ಪೃಥಿವೀಪಾಲನು ತನ್ನ ಕರ್ಮದಿಂದ ಕ್ರೂರಿಯೆಂದೂ ಮಿಥ್ಯಾವಾದಿಯೆಂದು ಕರೆಯಲ್ಪಡುತ್ತಾನೆ. ಅಂಥಹ ಪಾಪಗಳಿಂದ ರಾಜನು ಹೇಗೆ ಮುಕ್ತನಾಗಬಲ್ಲ ಎನ್ನುವುದನ್ನು ಕೇಳು.

12076010a ಪ್ರತ್ಯಾಹರ್ತುಮಶಕ್ಯಂ ಸ್ಯಾದ್ಧನಂ ಚೋರೈರ್ಹೃತಂ ಯದಿ|

12076010c ಸ್ವಕೋಶಾತ್ತತ್ಪ್ರದೇಯಂ ಸ್ಯಾದಶಕ್ತೇನೋಪಜೀವತಾ||

ಒಂದು ವೇಳೆ ಕಳ್ಳರು ಕದಿದುಕೊಂಡು ಹೋದ ಧನವನ್ನು ತಿರುಗಿ ಪಡೆಯಲು ಸಾಧ್ಯವಾಗದೇ ಇದ್ದರೆ ರಾಜನಾದವನು ಧನವನ್ನು ಕಳೆದುಕೊಂಡವನ ಉಪಜೀವನವನ್ನು ನಡೆಸಲು ತನ್ನ ಕೋಶದಿಂದಲೇ ಅಷ್ಟು ಧನವನ್ನು ಕೊಡಬೇಕು.

12076011a ಸರ್ವವರ್ಣೈಃ ಸದಾ ರಕ್ಷ್ಯಂ ಬ್ರಹ್ಮಸ್ವಂ ಬ್ರಾಹ್ಮಣಾಸ್ತಥಾ|

12076011c ನ ಸ್ಥೇಯಂ ವಿಷಯೇ ತೇಷು ಯೋಽಪಕುರ್ಯಾದ್ದ್ವಿಜಾತಿಷು||

ಬ್ರಾಹ್ಮಣರನ್ನು ಮತ್ತು ಬ್ರಾಹ್ಮಣರ ಸ್ವತ್ತನ್ನು ಇತರ ವರ್ಣದವರು ಸದಾ ರಕ್ಷಿಸಬೇಕು. ಬ್ರಾಹ್ಮಣರಿಗೆ ಅಪಕಾರವನ್ನು ಮಾಡುವವರನ್ನು ರಾಜನು ತನ್ನ ದೇಶದಲ್ಲಿ ಇಟ್ಟುಕೊಳ್ಳಬಾರದು.

12076012a ಬ್ರಹ್ಮಸ್ವೇ ರಕ್ಷ್ಯಮಾಣೇ ಹಿ ಸರ್ವಂ ಭವತಿ ರಕ್ಷಿತಮ್|

12076012c ತೇಷಾಂ ಪ್ರಸಾದೇ ನಿರ್ವೃತ್ತೇ ಕೃತಕೃತ್ಯೋ ಭವೇನ್ನೃಪಃ||

ಬ್ರಾಹ್ಮಣರು ರಕ್ಷಿತರಾದರೆ ಸರ್ವವೂ ರಕ್ಷಿತವಾಗಿರುತ್ತದೆ. ಅವರ ಪ್ರಸಾದದಿಂದಲೇ ನೃಪನು ಕೃತಕೃತ್ಯನಾಗುತ್ತಾನೆ.

12076013a ಪರ್ಜನ್ಯಮಿವ ಭೂತಾನಿ ಮಹಾದ್ರುಮಮಿವ ದ್ವಿಜಾಃ|

12076013c ನರಾಸ್ತಮುಪಜೀವಂತಿ ನೃಪಂ ಸರ್ವಾರ್ಥಸಾಧಕಮ್||

ಜೀವಿಗಳು ಮಳೆಗರೆಯುವ ಮೋಡಗಳನ್ನು ಮತ್ತು ಪಕ್ಷಿಗಳು ಮಹಾವೃಕ್ಷವನ್ನು ಹೇಗೋ ಹಾಗೆ ಸರ್ವಾರ್ಥಸಾಧಕ ನೃಪನನ್ನು ಮನುಷ್ಯರು ಅವಲಂಬಿಸಿ ಜೀವಿಸುತ್ತಾರೆ.

12076014a ನ ಹಿ ಕಾಮಾತ್ಮನಾ ರಾಜ್ಞಾ ಸತತಂ ಶಠಬುದ್ಧಿನಾ|

12076014c ನೃಶಂಸೇನಾತಿಲುಬ್ಧೇನ ಶಕ್ಯಾಃ ಪಾಲಯಿತುಂ ಪ್ರಜಾಃ||

ಕಾಮಾತ್ಮನಾಗಿ ಸತತವೂ ಕಾಮವಸ್ತುಗಳ ಕುರಿತು ಯೋಜಿಸುವ, ಕ್ರೂರಿ ಮತ್ತು ಅತಿ ಲುಬ್ಧ ರಾಜನು ಪ್ರಜೆಗಳನ್ನು ಪಾಲಿಸಲು ಶಕ್ಯನಾಗುವುದಿಲ್ಲ.”

12076015 ಯುಧಿಷ್ಠಿರ ಉವಾಚ|

12076015a ನಾಹಂ ರಾಜ್ಯಸುಖಾನ್ವೇಷೀ ರಾಜ್ಯಮಿಚ್ಚಾಮ್ಯಪಿ ಕ್ಷಣಮ್|

12076015c ಧರ್ಮಾರ್ಥಂ ರೋಚಯೇ ರಾಜ್ಯಂ ಧರ್ಮಶ್ಚಾತ್ರ ನ ವಿದ್ಯತೇ||

ಯುಧಿಷ್ಠಿರನು ಹೇಳಿದನು: “ನಾನು ರಾಜ್ಯಸುಖವನ್ನು ಅರಸುತ್ತಿಲ್ಲ. ಒಂದು ಕ್ಷಣಕ್ಕಾದರೂ ರಾಜ್ಯವನ್ನು ಇಚ್ಛಿಸುವುದಿಲ್ಲ. ಧರ್ಮಸಿದ್ಧಿಗಾಗಿ ನಾನು ರಾಜ್ಯವನ್ನು ಇಷ್ಟಪಡುತ್ತೇನೆ. ಆದರೆ ಅದರಿಂದಲೂ ಧರ್ಮದ ಸಿದ್ಧಿಯಾಗುವುದಿಲ್ಲ.

12076016a ತದಲಂ ಮಮ ರಾಜ್ಯೇನ ಯತ್ರ ಧರ್ಮೋ ನ ವಿದ್ಯತೇ|

12076016c ವನಮೇವ ಗಮಿಷ್ಯಾಮಿ ತಸ್ಮಾದ್ಧರ್ಮಚಿಕೀರ್ಷಯಾ||

ಯಾವುದರಿಂದ ಧರ್ಮಸಿದ್ಧಿಯಾಗುವುದಿಲ್ಲವೋ ಆ ರಾಜ್ಯವು ನನಗೆ ಬೇಡ. ಆದುದರಿಂದ ಧರ್ಮವನ್ನು ಬಯಸಿ ನಾನು ವನಕ್ಕೇ ಹೋಗುತ್ತೇನೆ.

12076017a ತತ್ರ ಮೇಧ್ಯೇಷ್ವರಣ್ಯೇಷು ನ್ಯಸ್ತದಂಡೋ ಜಿತೇಂದ್ರಿಯಃ|

12076017c ಧರ್ಮಮಾರಾಧಯಿಷ್ಯಾಮಿ ಮುನಿರ್ಮೂಲಫಲಾಶನಃ||

ಪವಿತ್ರ ಆ ಅರಣ್ಯಗಳಲ್ಲಿ ದಂಡವನ್ನು ಕೆಳಗಿರಿಸಿ ಜಿತೇಂದ್ರಿಯನಾಗಿ ಫಲ-ಮೂಲಗಳನ್ನು ತಿಂದುಕೊಂಡು ಮುನಿಯಂತೆ ಧರ್ಮವನ್ನು ಆರಾಧಿಸುತ್ತೇನೆ.”

12076018 ಭೀಷ್ಮ ಉವಾಚ|

12076018a ವೇದಾಹಂ ತವ ಯಾ ಬುದ್ಧಿರಾನೃಶಂಸ್ಯಗುಣೈವ ಸಾ|

12076018c ನ ಚ ಶುದ್ಧಾನೃಶಂಸ್ಯೇನ ಶಕ್ಯಂ ಮಹದುಪಾಸಿತುಮ್||

ಭೀಷ್ಮನು ಹೇಳಿದನು: “ನಿನ್ನ ಬುದ್ಧಿಯು ದಯಾಪೂರ್ಣಗುಣಗಳಿಂದ ಕೂಡಿದೆಯೆನ್ನುವುದನ್ನು ನಾನು ಅರಿತಿದ್ದೇನೆ. ಸಂಪೂರ್ಣ ದಯಾಪೂರ್ಣನಾಗಿರುವವನಿಗೆ ರಾಜ್ಯಭಾರವನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ನಿನಗೆ ರಾಜ್ಯಭಾರದಿಂದ ತಪ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

12076019a ಅಪಿ ತು ತ್ವಾ ಮೃದುಂ ದಾಂತಮತ್ಯಾರ್ಯಮತಿಧಾರ್ಮಿಕಮ್|

12076019c ಕ್ಲೀಬಂ ಧರ್ಮಘೃಣಾಯುಕ್ತಂ ನ ಲೋಕೋ ಬಹು ಮನ್ಯತೇ||

ನೀನು ಅತ್ಯಂತ ಮೃದುವಾಗಿದ್ದರೂ, ಮಹಾ ಸತ್ಪುರುಷನಾಗಿದ್ದರೂ, ಅತ್ಯಂತ ಧರ್ಮಾತ್ಮನಾಗಿದ್ದರೂ, ರಾಜಧರ್ಮಕ್ಕೆ ವಿರುದ್ಧವಾಗಿರುವುದರಿಂದ ನಿನ್ನನ್ನು ಲೋಕದ ಬಹುಜನರು ನಪುಂಸಕನೆಂದೇ ಭಾವಿಸುತ್ತಾರೆ. ನಿನ್ನನ್ನು ಪ್ರಜೆಗಳು ಗೌರವಿಸುವುದಿಲ್ಲ.

12076020a ರಾಜಧರ್ಮಾನವೇಕ್ಷಸ್ವ ಪಿತೃಪೈತಾಮಹೋಚಿತಾನ್|

12076020c ನೈತದ್ರಾಜ್ಞಾಮಥೋ ವೃತ್ತಂ ಯಥಾ ತ್ವಂ ಸ್ಥಾತುಮಿಚ್ಚಸಿ||

ನಿನ್ನ ಪಿತೃ-ಪಿತಾಮಹರ ರಾಜಧರ್ಮಗಳನ್ನು ನೋಡಿಕೊಂಡು ನಿನಗೆ ಉಚಿತವಾದುದನ್ನು ಮಾಡು. ನೀನು ಏನು ಮಾಡಲು ಬಯಸುತ್ತಿರುವೆಯೋ ಅದು ರಾಜರ ವರ್ತನೆಯಲ್ಲ.

12076021a ನ ಹಿ ವೈಕ್ಲವ್ಯಸಂಸೃಷ್ಟಮಾನೃಶಂಸ್ಯಮಿಹಾಸ್ಥಿತಃ|

12076021c ಪ್ರಜಾಪಾಲನಸಂಭೂತಂ ಪ್ರಾಪ್ತಾ ಧರ್ಮಫಲಂ ಹ್ಯಸಿ||

ಆದರೆ ವ್ಯಾಕುಲತೆಯಿಂದ ಹುಟ್ಟಿರುವ ನಿನ್ನ ಈ ದಯಾಪೂರ್ಣತೆಯು ಪ್ರಜಾಪಾಲನೆಯಿಂದ ದೊರೆಯುವ ಧರ್ಮಫಲವನ್ನು ನೀನು ಪಡೆಯಲಾರೆ.

12076022a ನ ಹ್ಯೇತಾಮಾಶಿಷಂ ಪಾಂಡುರ್ನ ಚ ಕುಂತ್ಯನ್ವಯಾಚತ|

12076022c ನ ಚೈತಾಂ ಪ್ರಾಜ್ಞತಾಂ ತಾತ ಯಯಾ ಚರಸಿ ಮೇಧಯಾ||

ಮಗೂ! ನಿನ್ನ ಪ್ರಜ್ಞೆ ಮತ್ತು ಬುದ್ಧಿಯಿಂದ ವಿವೇಚಿಸಿ ನೀನು ಏನನ್ನು ಮಾಡಲು ಹೊರಟಿರುವೆಯೋ ಅದನ್ನು ನಿನ್ನಿಂದ ಪಾಂಡುವಾಗಲೀ ಕುಂತಿಯಾಗಲೀ ಆಶಿಸಿರಲಿಲ್ಲ.

12076023a ಶೌರ್ಯಂ ಬಲಂ ಚ ಸತ್ತ್ವಂ ಚ ಪಿತಾ ತವ ಸದಾಬ್ರವೀತ್|

12076023c ಮಾಹಾತ್ಮ್ಯಂ ಬಲಮೌದಾರ್ಯಂ ತವ ಕುಂತ್ಯನ್ವಯಾಚತ||

ನಿನ್ನ ತಂದೆಯು “ನನ್ನ ಈ ಮಗನು ಶೂರನೂ, ಬಲಶಾಲಿಯೂ ಮತ್ತು ಸತ್ಯನಿಷ್ಠನಾಗಿರಬೇಕು” ಎಂದು ಸದಾ ಹೇಳುತ್ತಿದ್ದನು. ಕುಂತಿಯು ನಿನ್ನಿಂದ ಮಹಾತ್ಮೆ, ಬಲ ಮತ್ತು ಔದಾರ್ಯಗಳನ್ನು ಬಯಸಿದ್ದಳು.

12076024a ನಿತ್ಯಂ ಸ್ವಾಹಾ ಸ್ವಧಾ ನಿತ್ಯಮುಭೇ ಮಾನುಷದೈವತೇ|

12076024c ಪುತ್ರೇಷ್ವಾಶಾಸತೇ ನಿತ್ಯಂ ಪಿತರೋ ದೈವತಾನಿ ಚ||

ಪಿತೃಗಳು ಪುತ್ರರಿಂದ ನಿತ್ಯವೂ ಮನುಷ್ಯ-ದೇವತೆಗಳಿಬ್ಬರಿಗೂ ಸ್ವಾಹಾ-ಸ್ವಧಾಗಳನ್ನು ಬಯಸುತ್ತಾರೆ.

12076025a ದಾನಮಧ್ಯಯನಂ ಯಜ್ಞಃ ಪ್ರಜಾನಾಂ ಪರಿಪಾಲನಮ್|

12076025c ಧರ್ಮಮೇತಮಧರ್ಮಂ ವಾ ಜನ್ಮನೈವಾಭ್ಯಜಾಯಿಥಾಃ||

ದಾನ, ಅಧ್ಯಯನ, ಯಜ್ಞ, ಪ್ರಜೆಗಳ ಪರಿಪಾಲನೆ – ಇವು ಜನ್ಮದಿಂದಲೇ ನಿನ್ನೊಡನೆ ಹುಟ್ಟಿಕೊಂಡ ಕರ್ಮಗಳು. ಇದು ಅಧರ್ಮವೆಂದು ಬಿಟ್ಟುಬಿಡುವುದು ಅಧರ್ಮವೇ ಆಗುತ್ತದೆ.

12076026a ಕಾಲೇ ಧುರಿ ನಿಯುಕ್ತಾನಾಂ ವಹತಾಂ ಭಾರ ಆಹಿತೇ|

12076026c ಸೀದತಾಮಪಿ ಕೌಂತೇಯ ನ ಕೀರ್ತಿರವಸೀದತಿ||

ಕೌಂತೇಯ! ನೊಗಕ್ಕೆ ಕಟ್ಟಿದ ಎತ್ತು ಮಹಾ ಭಾರವನ್ನು ಹೊರದೇ ಮುಗ್ಗರಿಸಿ ಬೀಳಬಹುದು. ಆದರೂ ಅದರ ಕೀರ್ತಿಯು ಕಡಿಮೆಯಾಗುವುದಿಲ್ಲ. ಹಾಗೆಯೇ ನೀನೂ ಕೂಡ ರಾಜ್ಯಭಾರದ ಜವಾಬ್ದಾರಿಯಿಂದ ಕುಸಿಯಬಹುದು. ಆದರೆ ನಿನ್ನ ಕೀರ್ತಿಯು ಕಡಿಮೆಯಾಗುವುದಿಲ್ಲ.

12076027a ಸಮಂತತೋ ವಿನಿಯತೋ ವಹತ್ಯಸ್ಖಲಿತೋ ಹಿ ಯಃ|

12076027c ನಿರ್ದೋಷಕರ್ಮವಚನಾತ್ಸಿದ್ಧಿಃ ಕರ್ಮಣ ಏವ ಸಾ||

ಎಲ್ಲ ಕಡೆಗಳಿಂದಲೂ ಮನಸ್ಸು-ಇಂದ್ರಿಯಗಳನ್ನು ಸ್ವಾಧೀನಪಡಿಸಿಕೊಂಡು ಅಸ್ಖಲಿತವಾಗಿ ತನ್ನ ಮೇಲಿರುವ ಜವಾಬ್ಧಾರಿಯನ್ನು ಹೊರುವವನು ನಿರ್ದೋಷಿಯಾಗುತ್ತಾನೆ. ಏಕೆಂದರೆ ಕರ್ಮಗಳಿಂದಲೇ ಸಿದ್ಧಿಯು ದೊರೆಯುತ್ತದೆ.

12076028a ನೈಕಾಂತವಿನಿಪಾತೇನ ವಿಚಚಾರೇಹ ಕಶ್ಚನ|

12076028c ಧರ್ಮೀ ಗೃಹೀ ವಾ ರಾಜಾ ವಾ ಬ್ರಹ್ಮಚಾರ್ಯಥ ವಾ ಪುನಃ||

ಧಾರ್ಮಿಕನಾಗಿರಲಿ, ಗೃಹಸ್ಥನಾಗಿರಲಿ, ರಾಜನಾಗಿರಲಿ ಅಥವಾ ಬ್ರಹ್ಮಚಾರಿಯಾಗಿರಲಿ ತಾನು ಮಾಡಬೇಕಾದ ಕರ್ಮಗಳನ್ನು ಸಂಪೂರ್ಣವಾಗಿ ಮಾಡಲು ಸಾಧ್ಯವಿಲ್ಲ. ಧರ್ಮಕಾರ್ಯಗಳಲ್ಲಿ ಯಾವುದಾದರೂ ನ್ಯೂನತೆಯು ಇದ್ದೇ ಇರುತ್ತದೆ.

12076029a ಅಲ್ಪಂ ತು ಸಾಧುಭೂಯಿಷ್ಠಂ ಯತ್ಕರ್ಮೋದಾರಮೇವ ತತ್|

12076029c ಕೃತಮೇವಾಕೃತಾಚ್ಚ್ರೇಯೋ ನ ಪಾಪೀಯೋಽಸ್ತ್ಯಕರ್ಮಣಃ||

ಕಾರ್ಯವು ಅಲ್ಪವಾಗಿದ್ದರೂ ಸಾರಭೂಯಿಷ್ಠವಾಗಿದ್ದರೆ ಅದು ಮಹಾ ಕಾರ್ಯವೆಂದೇ ಹೇಳಿಸಿಕೊಳ್ಳುತ್ತದೆ. ಕರ್ಮವನ್ನು ಮಾಡದೇ ಇರುವುದಕ್ಕಿಂತ ಕರ್ಮವನ್ನು ಮಾಡುವುದೇ ಶ್ರೇಯಸ್ಕರ. ಏಕೆಂದರೆ ಕರ್ಮಗಳನ್ನೇ ಮಾಡದಿರುವವನಷ್ಟು ಪಾಪಿಷ್ಠನು ಬೇರೊಬ್ಬನಿಲ್ಲ.

12076030a ಯದಾ ಕುಲೀನೋ ಧರ್ಮಜ್ಞಃ ಪ್ರಾಪ್ನೋತ್ಯೈಶ್ವರ್ಯಮುತ್ತಮಮ್|

12076030c ಯೋಗಕ್ಷೇಮಸ್ತದಾ ರಾಜನ್ಕುಶಲಾಯೈವ ಕಲ್ಪತೇ||

ಕುಲೀನ, ಧರ್ಮಜ್ಞ, ಮತ್ತು ಉತ್ತಮ ಐಶ್ವರ್ಯವನ್ನು ಹೊಂದಿದವನು ರಾಜ್ಯಾಧಿಕಾರವನ್ನು ವಹಿಸಿಕೊಂಡರೆ ರಾಜನ ಯೋಗ-ಕ್ಷೇಮಗಳು ರಾಜ್ಯದ ಒಳ್ಳೆಯದಕ್ಕೇ ಆಗುತ್ತದೆ.

12076031a ದಾನೇನಾನ್ಯಂ ಬಲೇನಾನ್ಯಮನ್ಯಂ ಸೂನೃತಯಾ ಗಿರಾ|

12076031c ಸರ್ವತಃ ಪರಿಗೃಹ್ಣೀಯಾದ್ರಾಜ್ಯಂ ಪ್ರಾಪ್ಯೇಹ ಧಾರ್ಮಿಕಃ||

ಧಾರ್ಮಿಕ ರಾಜನು ರಾಜ್ಯವನ್ನು ಪಡೆದುಕೊಂಡು ಕೆಲವರನ್ನು ದಾನಗಳಿಂದ, ಇತರರನ್ನು ಬಲದಿಂದ ಮತ್ತು ಕೆಲವರನ್ನು ಸುಮಧುರ ಮಾತುಗಲ ಮೂಲಕ ಎಲ್ಲಕಡೆಗಳಿಂದಲೂ ತನ್ನ ಅಧೀನರನ್ನಾಗಿ ಮಾಡಿಕೊಳ್ಳಬೇಕು.

12076032a ಯಂ ಹಿ ವೈದ್ಯಾಃ ಕುಲೇ ಜಾತಾ ಅವೃತ್ತಿಭಯಪೀಡಿತಾಃ|

12076032c ಪ್ರಾಪ್ಯ ತೃಪ್ತಾಃ ಪ್ರತಿಷ್ಠಂತಿ ಧರ್ಮಃ ಕೋಽಭ್ಯಧಿಕಸ್ತತಃ||

ವೃತ್ತಿಯಿಲ್ಲದೇ ಭಯಪೀಡಿತರಾದ ಉತ್ತಮ ಕುಲದಲ್ಲಿ ಹುಟ್ಟಿದ ವಿದ್ವಾಂಸರು ಯಾರನ್ನು ಸೇರಿ ತೃಪ್ತರಾಗುತ್ತಾರೋ ಅಂಥಹ ರಾಜನ ಧರ್ಮಕ್ಕಿಂತಲೂ ಅಧಿಕ ಧರ್ಮವು ಯಾವುದಿದೆ?”

12076033 ಯುಧಿಷ್ಠಿರ ಉವಾಚ|

12076033a ಕಿಂ ನ್ವತಃ ಪರಮಂ ಸ್ವರ್ಗ್ಯಂ ಕಾ ನ್ವತಃ ಪ್ರೀತಿರುತ್ತಮಾ|

12076033c ಕಿಂ ನ್ವತಃ ಪರಮೈಶ್ವರ್ಯಂ ಬ್ರೂಹಿ ಮೇ ಯದಿ ಮನ್ಯಸೇ||

ಯುಧಿಷ್ಠಿರನು ಹೇಳಿದನು: “ಸ್ವರ್ಗಪ್ರಾಪ್ತಿಗೆ ಶ್ರೇಷ್ಠ ಸಾಧನವು ಯಾವುದು? ಅದರಿಂದ ಎಂತಹ ಪ್ರಸನ್ನತೆಯುಂಟಾಗುತ್ತದೆ? ಅದಕ್ಕಿಂತಲೂ ಅತಿಶಯ ಪರಮೈಶ್ವರ್ಯವು ಯಾವುದು? ನಿನಗೆ ಅನಿಸಿದರೆ ಇದರ ಕುರಿತು ನನಗೆ ಹೇಳು.”

12076034 ಭೀಷ್ಮ ಉವಾಚ|

12076034a ಯಸ್ಮಿನ್ಪ್ರತಿಷ್ಠಿತಾಃ ಸಮ್ಯಕ್ಕ್ಷೇಮಂ ವಿಂದಂತಿ ತತ್ಕ್ಷಣಮ್|

12076034c ಸ ಸ್ವರ್ಗಜಿತ್ತಮೋಽಸ್ಮಾಕಂ ಸತ್ಯಮೇತದ್ಬ್ರವೀಮಿ ತೇ||

ಭೀಷ್ಮನು ಹೇಳಿದನು: “ನೆಲೆಯಿಲ್ಲದವನಿಗೆ ಒಂದು ಕ್ಷಣಕ್ಕಾಗಿಯಾದರೂ ಸಮಾಧಾನ ಹೊಂದಿ ಕ್ಷೇಮದಿಂದಿದ್ದರೆ ಆ ರಾಜನು ಸ್ವರ್ಗವನ್ನು ಜಯಿಸುವವರಲ್ಲಿ ಶ್ರೇಷ್ಠನಾಗುತ್ತಾನೆ. ಈ ವಿಷಯದಲ್ಲಿ ನಾನು ಸತ್ಯವನ್ನೇ ಹೇಳುತ್ತಿದ್ದೇನೆ.

12076035a ತ್ವಮೇವ ಪ್ರೀತಿಮಾಂಸ್ತಸ್ಮಾತ್ಕುರೂಣಾಂ ಕುರುಸತ್ತಮ|

12076035c ಭವ ರಾಜಾ ಜಯ ಸ್ವರ್ಗಂ ಸತೋ ರಕ್ಷಾಸತೋ ಜಹಿ||

ಕುರುಸತ್ತಮ! ಕುರುಗಳಿಗೆ ನೀನೇ ಪ್ರೀತಿಮಾನನು. ರಾಜನಾಗು. ಸ್ವರ್ಗವನ್ನು ಜಯಿಸು. ಸತ್ಪುರುಷರನ್ನು ರಕ್ಷಿಸು. ದುಷ್ಟರನ್ನು ಸಂಹರಿಸು.

12076036a ಅನು ತ್ವಾ ತಾತ ಜೀವಂತು ಸುಹೃದಃ ಸಾಧುಭಿಃ ಸಹ|

12076036c ಪರ್ಜನ್ಯಮಿವ ಭೂತಾನಿ ಸ್ವಾದುದ್ರುಮಮಿವಾಂಡಜಾಃ||

ಮಗೂ! ಜೀವಿಗಳು ಮೋಡಗಳ ಮೇಲೆ ಮತ್ತು ಪಕ್ಷಿಗಳು ಫಲಗಳಿರುವ ಮರವನ್ನು ಹೇಗೆ ಆಶ್ರಯಿಸಿರುತ್ತವೆಯೋ ನಿನ್ನ ಸುಹೃದಯರು ಮತ್ತು ಸಾಧುಗಳೊಂದಿಗೆ ನೀನು ಜೀವಿಸು.

12076037a ಧೃಷ್ಟಂ ಶೂರಂ ಪ್ರಹರ್ತಾರಮನೃಶಂಸಂ ಜಿತೇಂದ್ರಿಯಮ್|

12076037c ವತ್ಸಲಂ ಸಂವಿಭಕ್ತಾರಮನು ಜೀವಂತು ತ್ವಾಂ ಜನಾಃ||

ಭಯರಹಿತನಾದ ಶೂರ, ಪ್ರಹಾರಕುಶಲ, ದಯಾಳುವಾದ, ಜಿತೇಂದ್ರಿಯನಾದ, ಪ್ರಜಾವತ್ಸಲನಾದ ಮತ್ತು ದಾನಶೀಲ ರಾಜನ ಆಶ್ರಯವನ್ನು ಪಡೆದ ಪ್ರಜೆಗಳು ತಮ್ಮ ಜೀವನಿರ್ವಹಣೆಯನ್ನು ಮಾಡುತ್ತಾರೆ.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಷಟ್ಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಎಪ್ಪತ್ತಾರನೇ ಅಧ್ಯಾಯವು.

Image result for flowers against white background

Comments are closed.