ಶಾಂತಿ ಪರ್ವ: ರಾಜಧರ್ಮ ಪರ್ವ
೭೪
ಬ್ರಾಹ್ಮಣ-ಕ್ಷತ್ರಿಯರ ಸಂಬಂಧದ ಕುರಿತು ಐಲ-ಕಶ್ಯಪ ಸಂವಾದ (೧-೩೨).
12074001 ಭೀಷ್ಮ ಉವಾಚ|
12074001a ರಾಜ್ಞಾ ಪುರೋಹಿತಃ ಕಾರ್ಯೋ ಭವೇದ್ವಿದ್ವಾನ್ಬಹುಶ್ರುತಃ|
12074001c ಉಭೌ ಸಮೀಕ್ಷ್ಯ ಧರ್ಮಾರ್ಥಾವಪ್ರಮೇಯಾವನಂತರಮ್||
ಭೀಷ್ಮನು ಹೇಳಿದನು: “ಧರ್ಮ-ಅರ್ಥ ಇವೆರಡರ ಗತಿಯೂ ಅತ್ಯಂತ ಗಹನವಾದುದೆಂದು ತಿಳಿದು ರಾಜನಾದವನು ಬಹುಶ್ರುತ ವಿದ್ವಾಂಸನನ್ನು ರಾಜಪುರೋಹಿತನನ್ನಾಗಿ ಮಾಡಿಕೊಳ್ಳಬೇಕು.
12074002a ಧರ್ಮಾತ್ಮಾ ಧರ್ಮವಿದ್ಯೇಷಾಂ ರಾಜ್ಞಾಂ ರಾಜನ್ಪುರೋಹಿತಃ|
12074002c ರಾಜಾ ಚೈವಂ ಗುಣೋ ಯೇಷಾಂ ಕುಶಲಂ ತೇಷು ಸರ್ವಶಃ||
ರಾಜನ್! ರಾಜಪುರೋಹಿತನು ಧರ್ಮಾತ್ಮನೂ, ಧರ್ಮವಿದನೂ ಆಗಿರುವ ಮತ್ತು ರಾಜನೂ ಅದೇ ಗುಣಗಳನ್ನು ಹೊಂದಿರುವ ರಾಷ್ಟ್ರದಲ್ಲಿ ಎಲ್ಲರೂ ಕುಶಲವಾಗಿಯೇ ಇರುತ್ತಾರೆ.
12074003a ಉಭೌ ಪ್ರಜಾ ವರ್ಧಯತೋ ದೇವಾನ್ಪೂರ್ವಾನ್ಪರಾನ್ಪಿತೃನ್|
12074003c ಯೌ ಸಮೇಯಾಸ್ಥಿತೌ ಧರ್ಮೇ ಶ್ರದ್ಧೇಯೌ ಸುತಪಸ್ವಿನೌ||
12074004a ಪರಸ್ಪರಸ್ಯ ಸುಹೃದೌ ಸಂಮತೌ ಸಮಚೇತಸೌ|
12074004c ಬ್ರಹ್ಮಕ್ಷತ್ರಸ್ಯ ಸಂಮಾನಾತ್ಪ್ರಜಾಃ ಸುಖಮವಾಪ್ನುಯುಃ||
ರಾಜ ಮತ್ತು ಪುರೋಹಿತ ಇಬ್ಬರೂ ಧರ್ಮನಿಷ್ಠರಾಗಿದ್ದುಕೊಂಡು ಯೋಗ-ಕ್ಷೇಮಗಳಲ್ಲಿ ಶ್ರದ್ಧಾವಂತರಾಗಿದ್ದರೆ ಮತ್ತು ಸಮಾನ ಮನಸ್ಕರಾಗಿದ್ದರೆ ಇಬ್ಬರೂ ಸೇರಿ ರಾಷ್ಟ್ರವನ್ನೂ ಪ್ರಜೆಗಳನ್ನೂ ಅಭಿವೃದ್ಧಿಗೊಳಿಸುತ್ತಾರೆ. ದೇವತೆಗಳನ್ನೂ ಪಿತೃಗಳನ್ನೂ ತೃಪ್ತಿಗೊಳಿಸುತ್ತಾರೆ. ಅಂತಹ ಬ್ರಾಹ್ಮಣ ಮತ್ತ ಕ್ಷತ್ರಯರನ್ನು ಸಮ್ಮಾನಿಸಿದ ಪ್ರಜೆಗಳು ಸುಖವನ್ನು ಹೊಂದುತ್ತಾರೆ.
12074005a ವಿಮಾನನಾತ್ತಯೋರೇವ ಪ್ರಜಾ ನಶ್ಯೇಯುರೇವ ಹ|
12074005c ಬ್ರಹ್ಮಕ್ಷತ್ರಂ ಹಿ ಸರ್ವೇಷಾಂ ಧರ್ಮಾಣಾಂ ಮೂಲಮುಚ್ಯತೇ||
ಅವರಿಬ್ಬರನ್ನೂ ಸಮ್ಮಾನಿಸದೇ ಇದ್ದರೆ ಪ್ರಜೆಗಳು ನಾಶವಾಗುತ್ತಾರೆ. ಬ್ರಾಹ್ಮಣ-ಕ್ಷತ್ರಿಯರೇ ಸರ್ವಧರ್ಮಗಳ ಮೂಲವೆಂದು ಹೇಳುತ್ತಾರೆ.
12074006a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
12074006c ಐಲಕಶ್ಯಪಸಂವಾದಂ ತಂ ನಿಬೋಧ ಯುಧಿಷ್ಠಿರ||
ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ಐಲ ಮತ್ತು ಕಶ್ಯಪರ ಸಂವಾದವನ್ನು ಉದಾಹರಿಸುತ್ತಾರೆ. ಅದನ್ನು ಕೇಳು.
12074007 ಐಲ ಉವಾಚ|
12074007a ಯದಾ ಹಿ ಬ್ರಹ್ಮ ಪ್ರಜಹಾತಿ ಕ್ಷತ್ರಂ
ಕ್ಷತ್ರಂ ಯದಾ ವಾ ಪ್ರಜಹಾತಿ ಬ್ರಹ್ಮ|
12074007c ಅನ್ವಗ್ಬಲಂ ಕತಮೇಽಸ್ಮಿನ್ಭಜಂತೇ
ತಥಾಬಲ್ಯಂ ಕತಮೇಽಸ್ಮಿನ್ವಿಯಂತಿ||
ಐಲನು ಹೇಳಿದನು: “ಒಂದುವೇಳೆ ಬ್ರಾಹ್ಮಣರು ಕ್ಷತ್ರಿಯರನ್ನು ಪರಿತ್ಯಜಿಸಿದರೆ ಅಥವಾ ಒಂದು ವೇಳೆ ಕ್ಷತ್ರಿಯರು ಬ್ರಾಹ್ಮಣರನ್ನು ಪರಿತ್ಯಜಿಸಿದರೆ ಉಳಿದ ವರ್ಣದವರು ಯಾರ ಆಶ್ರಯವನ್ನು ಪಡೆದುಕೊಳ್ಳಬೇಕು? ಬ್ರಾಹ್ಮಣ-ಕ್ಷತ್ರಿಯ ಈ ಇಬ್ಬರಲ್ಲಿ ಎಲ್ಲರಿಗೂ ಅಶ್ರಯವನ್ನು ಕೊಡುವವರು ಯಾರು?”
12074008 ಕಶ್ಯಪ ಉವಾಚ
12074008a ವ್ಯೃದ್ಧಂ ರಾಷ್ಟ್ರಂ ಭವತಿ ಕ್ಷತ್ರಿಯಸ್ಯ
ಬ್ರಹ್ಮ ಕ್ಷತ್ರಂ ಯತ್ರ ವಿರುಧ್ಯತೇ ಹ|
12074008c ಅನ್ವಗ್ಬಲಂ ದಸ್ಯವಸ್ತದ್ಭಜಂತೇ
ಽಬಲ್ಯಂ ತಥಾ ತತ್ರ ವಿಯಂತಿ ಸಂತಃ||
ಕಶ್ಯಪನು ಹೇಳಿದನು: “ಬ್ರಾಹ್ಮಣ-ಕ್ಷತ್ರಿಯರ ಮಧ್ಯೆ ವಿರೋಧವುಂಟಾದ ರಾಷ್ಟ್ರವು ಒಡೆದುಹೋಗುತ್ತದೆ. ದಸ್ಯುಗಳ ಸೇನೆಗಳು ಬಂದು ಎಲ್ಲವನ್ನೂ ಎಲ್ಲ ವರ್ಣದವರನ್ನೂ ಸ್ವಾಧೀನಪಡೆದುಕೊಳ್ಳುತ್ತವೆ ಎಂದು ಸಂತರು ಹೇಳುತ್ತಾರೆ.
12074009a ನೈಷಾಮುಕ್ಷಾ ವರ್ಧತೇ ನೋತ ಉಸ್ರಾ
ನ ಗರ್ಗರೋ ಮಥ್ಯತೇ ನೋ ಯಜಂತೇ|
12074009c ನೈಷಾಂ ಪುತ್ರಾ ವೇದಮಧೀಯತೇ ಚ
ಯದಾ ಬ್ರಹ್ಮ ಕ್ಷತ್ರಿಯಾಃ ಸಂತ್ಯಜಂತಿ||
ಕ್ಷತ್ರಿಯರು ಬ್ರಾಹ್ಮಣರನ್ನು ತ್ಯಜಿಸಿದರೆ ಅವರ ಪುತ್ರರು ವೇದಗಳನ್ನು ಕಲಿತುಕೊಳ್ಳಲಾರರು. ಮೊಸರಿನ ಪಾತ್ರೆಯಲ್ಲಿ ಕಡೆಗೋಲು ಕಡೆಯುವುದಿಲ್ಲ ಮತ್ತು ಯಜ್ಞಗಳು ನಡೆಯುವುದಿಲ್ಲ.
12074010a ನೈಷಾಮುಕ್ಷಾ ವರ್ಧತೇ ಜಾತು ಗೇಹೇ
ನಾಧೀಯತೇ ಸಪ್ರಜಾ ನೋ ಯಜಂತೇ|
12074010c ಅಪಧ್ವಸ್ತಾ ದಸ್ಯುಭೂತಾ ಭವಂತಿ
ಯೇ ಬ್ರಾಹ್ಮಣಾಃ ಕ್ಷತ್ರಿಯಾನ್ಸಂತ್ಯಜಂತಿ|[1]|
ಬ್ರಾಹ್ಮಣರು ಕ್ಷತ್ರಿಯರನ್ನು ತ್ಯಜಿಸಿದರೆ ಅವರ ಮಕ್ಕಳು ವೇದಾಧ್ಯಯನ ಮಾಡುವುದಿಲ್ಲ. ಅವರು ದಸ್ಯುಗಳಂತೆಯೇ ಆಗಿಹೋಗುತ್ತಾರೆ. ಅವರ ಮನೆಯಲ್ಲಿ ಧನದ ವೃದ್ಧಿಯಾಗುವುದಿಲ್ಲ.
12074011a ಏತೌ ಹಿ ನಿತ್ಯಸಂಯುಕ್ತಾವಿತರೇತರಧಾರಣೇ|
12074011c ಕ್ಷತ್ರಂ ಹಿ ಬ್ರಹ್ಮಣೋ ಯೋನಿರ್ಯೋನಿಃ ಕ್ಷತ್ರಸ್ಯ ಚ ದ್ವಿಜಾಃ||
ಹೀಗೆ ನಿತ್ಯವೂ ಬ್ರಾಹ್ಮಣ-ಕ್ಷತ್ರಿಯರು ಸಮ್ಮಿಳಿತರಾಗಿಯೇ ಇರಬೇಕು. ಹಾಗಿದ್ದಾಗಲೇ ಅವರು ಪರಸ್ಪರರನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಕ್ಷತ್ರಿಯನ ಅಭಿವೃದ್ಧಿಗೆ ಬ್ರಾಹ್ಮಣನು ಕಾರಣನು ಮತ್ತು ಬ್ರಾಹ್ಮಣನ ಅಭಿವೃದ್ಧಿಗೆ ಕ್ಷತ್ರಿಯನು ಕಾರಣನು.
12074012a ಉಭಾವೇತೌ ನಿತ್ಯಮಭಿಪ್ರಪನ್ನೌ
ಸಂಪ್ರಾಪತುರ್ಮಹತೀಂ ಶ್ರೀಪ್ರತಿಷ್ಠಾಮ್|
12074012c ತಯೋಃ ಸಂಧಿರ್ಭಿದ್ಯತೇ ಚೇತ್ಪುರಾಣಸ್
ತತಃ ಸರ್ವಂ ಭವತಿ ಹಿ ಸಂಪ್ರಮೂಢಮ್||
ಈ ಎರಡು ವರ್ಣದವರೂ ಯಾವಾಗಲೂ ಒಬ್ಬರು ಮತ್ತೊಬ್ಬರು ಆಶ್ರಯಭೂತರಾಗಿದ್ದರೆ ಆಗ ಬ್ರಹ್ಮ-ಕ್ಷತ್ರರಿಬ್ಬರೂ ಸುಪ್ರತಿಷ್ಠರಾಗಿರುತ್ತಾರೆ. ಪ್ರಾಚೀನಕಾಲದಿಂದ ಬಂದಿರುವ ಬ್ರಹ್ಮ-ಕ್ಷತ್ರರ ಮೈತ್ರಿಯು ಒಡೆದುಹೋದರೆ ಇಬ್ಬರೂ ವಿನಾಶಹೊಂದುವುದು ಮಾತ್ರವಲ್ಲ ಪ್ರಪಂಚವೇ ಮೋಹವಶವಾಗುತ್ತದೆ.
12074013a ನಾತ್ರ ಪ್ಲವಂ ಲಭತೇ ಪಾರಗಾಮೀ
ಮಹಾಗಾಧೇ ನೌರಿವ ಸಂಪ್ರಣುನ್ನಾ|
12074013c ಚಾತುರ್ವರ್ಣ್ಯಂ ಭವತಿ ಚ ಸಂಪ್ರಮೂಢಂ
ತತಃ ಪ್ರಜಾಃ ಕ್ಷಯಸಂಸ್ಥಾ ಭವಂತಿ||
ಮಹಾಸಾಗರದ ಮಧ್ಯೆ ಹಡಗು ಮುರಿದುಹೋದಾಗ ಪಾರಾಗುವವನಿಗೆ ಬೇರೆ ದೋಣಿಯು ದೊರೆಯದಂತೆ ನಾಲ್ಕು ವರ್ಣದವರೂ ಸಮ್ಮೂಢರಾಗಿ ಪ್ರಜೆಗಳ ನಾಶವಾಗುತ್ತದೆ.
12074014a ಬ್ರಹ್ಮವೃಕ್ಷೋ ರಕ್ಷ್ಯಮಾಣೋ ಮಧು ಹೇಮ ಚ ವರ್ಷತಿ|
12074014c ಅರಕ್ಷ್ಯಮಾಣಃ ಸತತಮಶ್ರು ಪಾಪಂ ಚ ವರ್ಷತಿ||
ಬ್ರಹ್ಮವೃಕ್ಷವನ್ನು ರಕ್ಷಿಸಿದರೆ ಜೇನು ಮತ್ತು ಚಿನ್ನಗಳ ಮಳೆಯಾಗುತ್ತದೆ. ಅದನ್ನು ರಕ್ಷಿಸದೇ ಇದ್ದರೆ ಸತತವೂ ಕಣ್ಣೀರು ಮತ್ತು ಪಾಪಗಳ ಮಳೆಯಾಗುತ್ತದೆ.
12074015a ಅಬ್ರಹ್ಮಚಾರೀ ಚರಣಾದಪೇತೋ
ಯದಾ ಬ್ರಹ್ಮಾ ಬ್ರಹ್ಮಣಿ ತ್ರಾಣಮಿಚ್ಚೇತ್|
12074015c ಆಶ್ಚರ್ಯಶೋ ವರ್ಷತಿ ತತ್ರ ದೇವಸ್
ತತ್ರಾಭೀಕ್ಷ್ಣಂ ದುಃಸಹಾಶ್ಚಾವಿಶಂತಿ||
ಬ್ರಾಹ್ಮಣ ಬ್ರಹ್ಮಚಾರಿಯು ದಸ್ಯುಗಳಿಂದ ತಡೆಯಲ್ಪಟ್ಟು ಬ್ರಾಹ್ಮಣರು ಬ್ರಹ್ಮನನ್ನು ಮೊರೆಹೊಗಬೇಕಾದ ಸನ್ನಿವೇಶವು ಬಂದಾಗ ಅಲ್ಲಿ ದೇವನು ಮಳೆಸುರಿಸುತ್ತಾನಾದರೆ ಅದು ಆಶ್ಚರ್ಯವೇ ಸರಿ. ಅಲ್ಲಿ ಸಹಿಸಲಸಾಧ್ಯ ದುರ್ಭಿಕ್ಷವಾಗುತ್ತದೆ.
12074016a ಸ್ತ್ರಿಯಂ ಹತ್ವಾ ಬ್ರಾಹ್ಮಣಂ ವಾಪಿ ಪಾಪಃ
ಸಭಾಯಾಂ ಯತ್ರ ಲಭತೇಽನುವಾದಮ್|
12074016c ರಾಜ್ಞಃ ಸಕಾಶೇ ನ ಬಿಭೇತಿ ಚಾಪಿ
ತತೋ ಭಯಂ ಜಾಯತೇ ಕ್ಷತ್ರಿಯಸ್ಯ||
ಸ್ತ್ರೀಯನ್ನು ಮತ್ತು ಬ್ರಾಹ್ಮಣನನ್ನು ಕೊಂದ ಪಾಪಿಯು ಸಭೆಗಳಲ್ಲಿ ಪ್ರಶಂಸಿಸಲ್ಪಡುವ ಮತ್ತು ರಾಜನ ಬಳಿಯಲ್ಲಿಯೇ ಇದ್ದರೂ ಅಂಥವನಿಗೆ ಭಯವಿಲ್ಲದರುವ ಕಾಲವು ಬಂದಾಗ ಕ್ಷತ್ರಿಯನಿಗೆ ಮಹಾ ಆಪತ್ತು ಕಾದಿರುವುದೆಂದು ಹೇಳಬಹುದು.
12074017a ಪಾಪೈಃ ಪಾಪೇ ಕ್ರಿಯಮಾಣೇಽತಿವೇಲಂ
ತತೋ ರುದ್ರೋ ಜಾಯತೇ ದೇವ ಏಷಃ|
12074017c ಪಾಪೈಃ ಪಾಪಾಃ ಸಂಜನಯಂತಿ ರುದ್ರಂ
ತತಃ ಸರ್ವಾನ್ಸಾಧ್ವಸಾಧೂನ್ ಹಿನಸ್ತಿ||
ಪಾಪಿಗಳಿಂದ ಪಾಪಕಾರ್ಯಗಳು ಅವ್ಯಾಹತವಾಗಿ ನಡೆಯುತ್ತಿರುವಾಗ ಅವರಿಂದಲೇ ರುದ್ರದೇವನು ಹುಟ್ಟುತ್ತಾನೆ. ಪಾಪಿಗಳು ತಮ್ಮ ಪಾಪಗಳಿಂದಲೇ ರುದ್ರನನ್ನು ಹುಟ್ಟಿಸುತ್ತಾರೆ. ಆಗ ಸಾಧು-ಅಸಾಧು ಎಲ್ಲವೂ ನಾಶವಾಗುತ್ತವೆ.”
12074018 ಐಲ ಉವಾಚ|
12074018a ಕುತೋ ರುದ್ರಃ ಕೀದೃಶೋ ವಾಪಿ ರುದ್ರಃ
ಸತ್ತ್ವೈಃ ಸತ್ತ್ವಂ ದೃಶ್ಯತೇ ವಧ್ಯಮಾನಮ್|
12074018c ಏತದ್ವಿದ್ವನ್ಕಶ್ಯಪ ಮೇ ಪ್ರಚಕ್ಷ್ವ
ಯತೋ ರುದ್ರೋ ಜಾಯತೇ ದೇವ ಏಷಃ||
ಐಲನು ಹೇಳಿದನು: “ಕಶ್ಯಪ! ರುದ್ರನು ಎಲ್ಲಿಂದ ಬರುತ್ತಾನೆ? ಅವನು ಎಂಥವನು? ಅಲ್ಲಿ ಸತ್ತ್ವಗಳನ್ನು ಸತ್ತ್ವಗಳೇ ವಧಿಸುವುದು ಕಂಡುಬರುತ್ತದೆ. ಈ ರುದ್ರದೇವನು ಎಲ್ಲಿಂದ ಹುಟ್ಟಿದನು? ಈ ನನ್ನ ಪ್ರಶ್ನೆಗಳಿಗೆ ಉತ್ತರಿಸು.”
12074019 ಕಶ್ಯಪ ಉವಾಚ|
12074019a ಆತ್ಮಾ ರುದ್ರೋ ಹೃದಯೇ ಮಾನವಾನಾಂ
ಸ್ವಂ ಸ್ವಂ ದೇಹಂ ಪರದೇಹಂ ಚ ಹಂತಿ|
12074019c ವಾತೋತ್ಪಾತೈಃ ಸದೃಶಂ ರುದ್ರಮಾಹುರ್
ದಾವೈರ್ಜೀಮೂತೈಃ ಸದೃಶಂ ರೂಪಮಸ್ಯ||
ಕಶ್ಯಪನು ಹೇಳಿದನು: “ಮಾನವರ ಹೃದಯದಲ್ಲಿರುವ ಆತ್ಮನೇ ರುದ್ರನು. ತನ್ನ ದೇಹವನ್ನು ತಾನೇ ಮತ್ತು ಪರದೇಹಗಳನ್ನೂ ತಾನೇ ಕೊಲ್ಲುತ್ತಾನೆ. ರುದ್ರನು ಚಂಡಮಾರುತ ಮತ್ತು ಉತ್ಪಾತಗಳಿಗೆ ಸಮನೆಂದು ಹೇಳುತ್ತಾರೆ. ಅವನಿಗೆ ಮೇಘಗಳ ರೂಪವಿದೆಯೆಂದೂ ಹೇಳುತ್ತಾರೆ.”
12074020 ಐಲ ಉವಾಚ|
12074020a ನ ವೈ ವಾತಂ ಪರಿವೃನೋತಿ ಕಶ್ಚಿನ್
ನ ಜೀಮೂತೋ ವರ್ಷತಿ ನೈವ ದಾವಃ|
12074020c ತಥಾಯುಕ್ತೋ ದೃಶ್ಯತೇ ಮಾನವೇಷು
ಕಾಮದ್ವೇಷಾದ್ಬಧ್ಯತೇ ಮುಚ್ಯತೇ ಚ||
ಐಲನು ಹೇಳಿದನು: “ಗಾಳಿಯು ಯಾರನ್ನೂ ಸುತ್ತಗಟ್ಟುವುದಿಲ್ಲ. ಮೇಘದೇವತೆಗಳು ಮಳೆಸುರಿಸುವುದಿಲ್ಲ. ಹಾಗೆಯೇ ಕಾಮ-ದ್ವೇಷಗಳು ಮಾನವನನ್ನು ಬಂಧಿಸುತ್ತವೆ ಮತ್ತು ಬಿಡುಗಡೆಮಾಡಿಸುತ್ತವೆ ಕೂಡ ಎಂದಾಯಿತು.”
12074021 ಕಶ್ಯಪ ಉವಾಚ|
12074021a ಯಥೈಕಗೇಹೇ ಜಾತವೇದಾಃ ಪ್ರದೀಪ್ತಃ
ಕೃತ್ಸ್ನಂ ಗ್ರಾಮಂ ಪ್ರದಹೇತ್ಸ ತ್ವರಾವಾನ್|
12074021c ವಿಮೋಹನಂ ಕುರುತೇ ದೇವ ಏಷ
ತತಃ ಸರ್ವಂ ಸ್ಪೃಶ್ಯತೇ ಪುಣ್ಯಪಾಪೈಃ||
ಕಶ್ಯಪನು ಹೇಳಿದನು: “ಒಂದೇ ಮನೆಯಲ್ಲಿ ಹುಟ್ಟಿದ ಅಗ್ನಿಯು ಉರಿದು ಬೇಗನೇ ಇಡೀ ಗ್ರಾಮವನ್ನೇ ಹೇಗೆ ಸುಟ್ಟುಬಿಡಬಲ್ಲದೋ ಹಾಗೆ ಈ ದೇವನು ವಿಮೋಹಗೊಳಿಸಿ ಎಲ್ಲವನ್ನೂ ಪಾಪ-ಪುಣ್ಯಗಳಿಂದ ಸ್ಪರ್ಶಿಸುತ್ತಾನೆ.”
12074022 ಐಲ ಉವಾಚ
12074022a ಯದಿ ದಂಡಃ ಸ್ಪೃಶತೇ ಪುಣ್ಯಭಾಜಂ
ಪಾಪೈಃ ಪಾಪೇ ಕ್ರಿಯಮಾಣೇಽವಿಶೇಷಾತ್|
12074022c ಕಸ್ಯ ಹೇತೋಃ ಸುಕೃತಂ ನಾಮ ಕುರ್ಯಾದ್
ದುಷ್ಕೃತಂ ವಾ ಕಸ್ಯ ಹೇತೋರ್ನ ಕುರ್ಯಾತ್||
ಐಲನು ಹೇಳಿದನು: “ಪಾಪಿಗಳೇ ವಿಶೇಷವಾಗಿ ಪಾಪಗಳನ್ನೇ ಮಾಡಿದ್ದರೂ ಪುಣ್ಯಮಾಡಿದವನನ್ನೂ ದಂಡವು ಸ್ಪರ್ಶಿಸುತ್ತದೆ ಎಂದಾಯಿತು. ಹಾಗಿದ್ದರೆ ಯಾವ ಕಾರಣಕ್ಕಾಗಿ ಸುಕೃತ ಎನ್ನುವುದನ್ನು ಮಾಡಬೇಕು ಅಥವಾ ಯಾವ ಕಾರಣಕ್ಕಾಗಿ ದುಷ್ಕೃತ ಎನ್ನುವುದನ್ನು ಮಾಡಬಾರದು?”
12074023 ಕಶ್ಯಪ ಉವಾಚ|
12074023a ಅಸಂತ್ಯಾಗಾತ್ಪಾಪಕೃತಾಮಪಾಪಾಂಸ್
ತುಲ್ಯೋ ದಂಡಃ ಸ್ಪೃಶತೇ ಮಿಶ್ರಭಾವಾತ್|
12074023c ಶುಷ್ಕೇಣಾರ್ದ್ರಂ ದಹ್ಯತೇ ಮಿಶ್ರಭಾವಾನ್
ನ ಮಿಶ್ರಃ ಸ್ಯಾತ್ಪಾಪಕೃದ್ಭಿಃ ಕಥಂ ಚಿತ್||
ಕಶ್ಯಪನು ಹೇಳಿದನು: “ಕಟ್ಟಿಗೆಯು ಹಸಿಯಾಗಿದ್ದರೂ ಅದಕ್ಕೆ ಒಣಗಿದ ಕಟ್ಟಿಗೆಯ ಮಿಶ್ರಭಾವವಿರುವುದರಿಂದ ಸುಟ್ಟು ಹೋಗುತ್ತದೆ. ಹಾಗೆಯೇ ದಂಡವು ಪಾಪಿಗಳ ಸಂಸರ್ಗವನ್ನು ಬಿಡದೇ ಇರುವುದರಿಂದ ಪಾಪರಹಿತ ಧರ್ಮಾತ್ಮರನ್ನೂ ಅವರ ಮಿಶ್ರಭಾವದಿಂದಾಗಿ ಸ್ಪರ್ಶಿಸುತ್ತದೆ. ಆದುದರಿಂದ ಸಂತರು ಪಾಪಿಗಳೊಡನೆ ಸೇರಿಕೊಳ್ಳಬಾರದು.”
12074024 ಐಲ ಉವಾಚ
12074024a ಸಾಧ್ವಸಾಧೂನ್ಧಾರಯತೀಹ ಭೂಮಿಃ
ಸಾಧ್ವಸಾಧೂಂಸ್ತಾಪಯತೀಹ ಸೂರ್ಯಃ|
12074024c ಸಾಧ್ವಸಾಧೂನ್ವಾತಯತೀಹ ವಾಯುರ್
ಆಪಸ್ತಥಾ ಸಾಧ್ವಸಾಧೂನ್ವಹಂತಿ||
ಐಲನು ಹೇಳಿದನು: “ಈ ಭೂಮಿಯು ಸಾಧು-ಅಸಾಧು ಇಬ್ಬರನ್ನೂ ಹೊತ್ತೊಕೊಂಡಿದೆ. ಸೂರ್ಯನು ಸಾಧು-ಅಸಾಧು ಇಬ್ಬರನ್ನೂ ಒಂದೇ ತೆರನಾಗಿ ಸುಡುತ್ತಾನೆ. ವಾಯುವು ಸಾಧು-ಅಸಾಧು ಇಬ್ಬರಿಗೂ ಒಂದೇ ತೆರನಾಗಿ ಬೀಸುತ್ತಾನೆ. ಹಾಗೆಯೇ ನೀರೂ ಕೂಡ ಸಾಧು-ಅಸಾಧು ಇಬ್ಬರನ್ನೂ ತೋಯಿಸುತ್ತದೆ.”
12074025 ಕಶ್ಯಪ ಉವಾಚ|
12074025a ಏವಮಸ್ಮಿನ್ವರ್ತತೇ ಲೋಕ ಏವ
ನಾಮುತ್ರೈವಂ ವರ್ತತೇ ರಾಜಪುತ್ರ|
12074025c ಪ್ರೇತ್ಯೈತಯೋರಂತರವಾನ್ವಿಶೇಷೋ
ಯೋ ವೈ ಪುಣ್ಯಂ ಚರತೇ ಯಶ್ಚ ಪಾಪಮ್||
ಕಶ್ಯಪನು ಹೇಳಿದನು: “ರಾಜಪುತ್ರ! ಹೀಗೆ ನಡೆಯುವುದು ಈ ಲೋಕದಲ್ಲಿ ಮಾತ್ರ. ಪರಲೋಕದಲ್ಲಿ ಹೀಗೆ ನಡೆಯುವುದಿಲ್ಲ. ಪುಣ್ಯ ಮತ್ತು ಪಾಪಗಳನ್ನು ಮಾಡಿದವರು ಈ ಲೋಕದಲ್ಲಿ ಸಮಾನ ಫಲಗಳನ್ನು ಅನುಭವಿಸಿದರೂ ಅವರಿಬ್ಬರೂ ಮೃತ್ಯುವಿನ ನಂತರ ಪರಲೋಕಕ್ಕ ಹೋದನಂತರ ಅಲ್ಲಿ ಅವರ ನಡುವೆ ಅಪಾರ ಅಂತರವಿರುತ್ತದೆ. ಪರಲೋಕದಲ್ಲಿ ಅವರ ಫಲಗಳು ಒಂದೇ ತೆರನಾಗಿ ಇರುವುದಿಲ್ಲ.
12074026a ಪುಣ್ಯಸ್ಯ ಲೋಕೋ ಮಧುಮಾನ್ ಘೃತಾರ್ಚಿರ್
ಹಿರಣ್ಯಜ್ಯೋತಿರಮೃತಸ್ಯ ನಾಭಿಃ|
12074026c ತತ್ರ ಪ್ರೇತ್ಯ ಮೋದತೇ ಬ್ರಹ್ಮಚಾರೀ
ನ ತತ್ರ ಮೃತ್ಯುರ್ನ ಜರಾ ನೋತ ದುಃಖಮ್||
ಪುಣ್ಯಮಾಡಿದವನ ಲೋಕವು ಮಧುರತಮ ಸುಖಗಳಿಂದ ತುಂಬಿರುತ್ತದೆ. ಅಲ್ಲಿ ಬ್ರಹ್ಮಾನಂದರೂಪದ ತುಪ್ಪದ ದೀಪವು ಬೆಳಗುತ್ತಿರುತ್ತದೆ. ಸುವರ್ಣಪ್ರಭೆಗೆ ಸಮಾನ ಬ್ರಹ್ಮಜ್ಞಾನದ ಪ್ರಭೆಯು ಆ ದೀಪದಿಂದ ಹೊರಸೂಸುತ್ತಿರುತ್ತದೆ. ಆ ಲೋಕವು ಅಮೃತಕ್ಕೆ ಕೇಂದ್ರವಾಗಿರುತ್ತದೆ. ಬ್ರಹ್ಮನಿಷ್ಠ ಬ್ರಹ್ಮಚಾರಿಯು ಆ ಲೋಕದಲ್ಲಿ ಆನಂದಿಸುತ್ತಾನೆ. ಅಲ್ಲಿ ಮೃತ್ಯುವಾಗಲೀ, ಮುಪ್ಪಾಗಲೀ, ದುಃಖವಾಗಲೀ ಇರುವುದಿಲ್ಲ.
12074027a ಪಾಪಸ್ಯ ಲೋಕೋ ನಿರಯೋಽಪ್ರಕಾಶೋ
ನಿತ್ಯಂ ದುಃಖಃ ಶೋಕಭೂಯಿಷ್ಠ ಏವ|
12074027c ತತ್ರಾತ್ಮಾನಂ ಶೋಚತೇ ಪಾಪಕರ್ಮಾ
ಬಹ್ವೀಃ ಸಮಾಃ ಪ್ರಪತನ್ನಪ್ರತಿಷ್ಠಃ||
ಪಾಪಿಯ ಲೋಕವು ನರಕ. ಯಾವಾಗಲೂ ಅಂಧಕಾರವು ಕವಿದಿರುತ್ತದೆ. ನಿತ್ಯ ದುಃಖವಿರುತ್ತದೆ. ಶೋಕದಿಂದಲೇ ತುಂಬಿಹೋಗಿರುತ್ತದೆ. ಅಲ್ಲಿ ಪಾಪಕರ್ಮಿಯು ಅನೇಕ ವರ್ಷಗಳ ಪರ್ಯಂತ ಆ ನರಕದಲ್ಲಿ ಬಿದ್ದು ನಿಂತಲ್ಲಿ ನಿಲ್ಲದೇ ತನ್ನ ಆತ್ಮನನ್ನು ದುಃಖಕ್ಕೀಡುಮಾಡಿಕೊಳ್ಳುತ್ತಾನೆ.
12074028a ಮಿಥೋ ಭೇದಾದ್ಬ್ರಾಹ್ಮಣಕ್ಷತ್ರಿಯಾಣಾಂ
ಪ್ರಜಾ ದುಃಖಂ ದುಃಸಹಂ ಚಾವಿಶಂತಿ|
12074028c ಏವಂ ಜ್ಞಾತ್ವಾ ಕಾರ್ಯ ಏವೇಹ ವಿದ್ವಾನ್
ಪುರೋಹಿತೋ ನೈಕವಿದ್ಯೋ ನೃಪೇಣ||
ಬ್ರಾಹ್ಮಣ-ಕ್ಷತ್ರಿಯರಲ್ಲಿ ಪರಸ್ಪರ ಭೇದವುಂಟಾಗುವುದರಿಂದ ಪ್ರಜೆಗಳು ದುಃಸ್ಸಹ ದುಃಖಕ್ಕೆ ಈಡಾಗುತ್ತಾರೆ. ಇವೆಲ್ಲವನ್ನೂ ಅರ್ಥಮಾಡಿಕೊಂಡು ರಾಜನಾದವನು ಸರ್ವಕಾಲಕ್ಕೂ ಬಹುಶ್ರುತ ಬ್ರಾಹ್ಮಣನನ್ನು ಪುರೋಹಿತನನ್ನಾಗಿ ಮಾಡಿಕೊಳ್ಳಬೇಕು.
12074029a ತಂ ಚೈವಾನ್ವಭಿಷಿಚ್ಯೇತ ತಥಾ ಧರ್ಮೋ ವಿಧೀಯತೇ|
12074029c ಅಗ್ರ್ಯೋ ಹಿ ಬ್ರಾಹ್ಮಣಃ ಪ್ರೋಕ್ತಃ ಸರ್ವಸ್ಯೈವೇಹ ಧರ್ಮತಃ||
ರಾಜನು ಮೊದಲು ಪುರೋಹಿತನನ್ನು ಮಾಡಿಕೊಳ್ಳಬೇಕು. ಬಳಿಕ ಅವನಿಂದ ತಾನು ಪಟ್ಟಾಭಿಷಿಕ್ತನಾಗಬೇಕು. ಧರ್ಮದ ವಿಧಿಯೇ ಹೀಗಿದೆ. ಧರ್ಮಾನುಸಾರವಾಗಿ ಬ್ರಾಹ್ಮಣನೇ ಎಲ್ಲರಿಗಿಂತ ಹಿರಿಯವನು.
12074030a ಪೂರ್ವಂ ಹಿ ಬ್ರಾಹ್ಮಣಾಃ ಸೃಷ್ಟಾ ಇತಿ ಧರ್ಮವಿದೋ ವಿದುಃ|
12074030c ಜ್ಯೇಷ್ಠೇನಾಭಿಜನೇನಾಸ್ಯ ಪ್ರಾಪ್ತಂ ಸರ್ವಂ ಯದುತ್ತರಮ್||
ಬ್ರಾಹ್ಮಣರ ಸೃಷ್ಟಿಯು ಮೊದಲಾಯಿತೆಂದು ಧರ್ಮವಿದುಗಳು ತಿಳಿದುಕೊಂಡಿದ್ದಾರೆ. ಜ್ಯೇಷ್ಠನಾದುದರಿಂದ ಮತ್ತು ಬ್ರಹ್ಮನ ಮುಖದಿಂದ ಹುಟ್ಟಿದುದರಿಂದ ಬ್ರಾಹ್ಮಣನಿಗೆ ಎಲ್ಲವುಗಳ ಮೇಲೂ ಮೊದಲ ಅಧಿಕಾರವಿದೆ.
12074031a ತಸ್ಮಾನ್ಮಾನ್ಯಶ್ಚ ಪೂಜ್ಯಶ್ಚ ಬ್ರಾಹ್ಮಣಃ ಪ್ರಸೃತಾಗ್ರಭುಕ್|
12074031c ಸರ್ವಂ ಶ್ರೇಷ್ಠಂ ವರಿಷ್ಠಂ ಚ ನಿವೇದ್ಯಂ ತಸ್ಯ ಧರ್ಮತಃ||
ಆದುದರಿಂದ ಬ್ರಾಹ್ಮಣರು ಎಲ್ಲರಿಗಿಂತ ಮೊದಲು ಊಟಮಾಡಬಹುದೆಂದೂ ಪೂಜ್ಯರೆಂದೂ ಸನ್ಮಾನ್ಯರೆಂದೂ ತಿಳಿಯುತ್ತಾರೆ. ಧರ್ಮತಃ ಎಲ್ಲ ಶ್ರೇಷ್ಠ ವರಿಷ್ಠ ವಸ್ತುಗಳನ್ನು ಬ್ರಾಹ್ಮಣನಿಗೇ ಒಪ್ಪಿಸಬೇಕು.
12074032a ಅವಶ್ಯಮೇತತ್ಕರ್ತವ್ಯಂ ರಾಜ್ಞಾ ಬಲವತಾಪಿ ಹಿ|
12074032c ಬ್ರಹ್ಮ ವರ್ಧಯತಿ ಕ್ಷತ್ರಂ ಕ್ಷತ್ರತೋ ಬ್ರಹ್ಮ ವರ್ಧತೇ||
ರಾಜನು ಬಲಶಾಲಿಯಾಗಿದ್ದರೂ ಇದನ್ನು ಮಾತ್ರ ಅವಶ್ಯ ಮಾಡಲೇ ಬೇಕು. ಬ್ರಹ್ಮವು ಕ್ಷತ್ರವನ್ನು ವರ್ಧಿಸುತ್ತದೆ. ಕ್ಷಾತ್ರತ್ವದಿಂದ ಬ್ರಹ್ಮವು ವೃದ್ಧಿಯಾಗುತ್ತದೆ.””
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಐಲಕಶ್ಯಪಸಂವಾದೇ ಚತುಃಸಪ್ತತಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಐಲಕಶ್ಯಪಸಂವಾದ ಎನ್ನುವ ಎಪ್ಪತ್ನಾಲ್ಕನೇ ಅಧ್ಯಾಯವು.
[1] ಯೋ ಬ್ರಾಹ್ಮಣಾನ್ ಕ್ಷತ್ರಿಯಾಃ ಸಂತ್ಯಜತಿ|| ಎಂಬ ಪಾಠಾಂತರವಿದೆ.