Shanti Parva: Chapter 72

ಶಾಂತಿ ಪರ್ವ: ರಾಜಧರ್ಮ ಪರ್ವ

೭೨

ಪ್ರಜಾಪರಿಪಾಲನೆಯ ಅರ್ಥ (೧-೩೩).

12072001 ಯುಧಿಷ್ಠಿರ ಉವಾಚ|

12072001a ಕಥಂ ರಾಜಾ ಪ್ರಜಾ ರಕ್ಷನ್ನಾಧಿಬಂಧೇನ ಯುಜ್ಯತೇ|

12072001c ಧರ್ಮೇ ಚ ನಾಪರಾಧ್ನೋತಿ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ರಾಜನು ಹೇಗೆ ಪ್ರಜೆಗಳನ್ನು ರಕ್ಷಿಸುತ್ತಿದ್ದರೆ ಚಿಂತೆಯಲ್ಲಿ ಮಗ್ನನಾಗುವುದಿಲ್ಲ ಮತ್ತು ಧರ್ಮದ ವಿಷಯದಲ್ಲಿ ಅಪರಾಧಿಯಾಗುವುದಿಲ್ಲ ಎನ್ನುವುದನ್ನು ಹೇಳು.”

12072002 ಭೀಷ್ಮ ಉವಾಚ|

12072002a ಸಮಾಸೇನೈವ ತೇ ತಾತ ಧರ್ಮಾನ್ವಕ್ಷ್ಯಾಮಿ ನಿಶ್ಚಿತಾನ್|

12072002c ವಿಸ್ತರೇಣ ಹಿ ಧರ್ಮಾಣಾಂ ನ ಜಾತ್ವಂತಮವಾಪ್ನುಯಾತ್||

ಭೀಷ್ಮನು ಹೇಳಿದನು: “ಅಯ್ಯಾ! ನಿಶ್ಚಿತ ಧರ್ಮಗಳನ್ನು ಸಂಕ್ಷಿಪ್ತವಾಗಿಯೇ ನಿನಗೆ ಹೇಳುತ್ತೇನೆ. ಈ ಎಲ್ಲ ಧರ್ಮಗಳನ್ನು ವಿಸ್ತಾರವಾಗಿ ಹೇಳಹೊರಟರೆ ಅದು ಮುಗಿಯುವಂಥಹುದ್ದಲ್ಲ.

12072003a ಧರ್ಮನಿಷ್ಠಾನ್ ಶ್ರುತವತೋ ವೇದವ್ರತಸಮಾಹಿತಾನ್|

12072003c ಅರ್ಚಿತಾನ್ವಾಸಯೇಥಾಸ್ತ್ವಂ ಗೃಹೇ ಗುಣವತೋ ದ್ವಿಜಾನ್||

12072004a ಪ್ರತ್ಯುತ್ಥಾಯೋಪಸಂಗೃಹ್ಯ ಚರಣಾವಭಿವಾದ್ಯ ಚ|

12072004c ಅಥ ಸರ್ವಾಣಿ ಕುರ್ವೀಥಾಃ ಕಾರ್ಯಾಣಿ ಸಪುರೋಹಿತಃ||

ಧರ್ಮನಿಷ್ಠ, ಶ್ರುತವತ, ವೇದವ್ರತಸಮಾಹಿತ ಗುಣವಂತ ದ್ವಿಜರನ್ನು ನಿನ್ನ ಮನೆಗೆ ಕರೆಯಿಸಿ ಮೇಲೆದ್ದು ಅರ್ಚಸಿ ಸ್ವಾಗತಿಸಬೇಕು. ಅವರ ಚರಣಗಳಿಗೆ ವಂದಿಸಿ ಪುರೋಹಿತನೊಂದಿಗೆ ಸರ್ವ ಕರ್ಮಗಳನ್ನೂ ಮಾಡಿಸಬೇಕು.

12072005a ಧರ್ಮಕಾರ್ಯಾಣಿ ನಿರ್ವರ್ತ್ಯ ಮಂಗಲಾನಿ ಪ್ರಯುಜ್ಯ ಚ|

12072005c ಬ್ರಾಹ್ಮಣಾನ್ವಾಚಯೇಥಾಸ್ತ್ವಮರ್ಥಸಿದ್ಧಿಜಯಾಶಿಷಃ||

ಹೀಗೆ ಧರ್ಮಕಾರ್ಯಗಳನ್ನು ಮುಗಿಸಿ ಮಂಗಲ ವಸ್ತುಗಳನ್ನು ಮುಟ್ಟಿ ಅರ್ಥಸಿದ್ಧಿಗಾಗಿ ಜಯಾಶೀರ್ವಚನಗಳನ್ನು ಬ್ರಾಹ್ಮಣರ ಮುಖೇನ ಹೇಳಿಸಿಕೊಳ್ಳಬೇಕು.

12072006a ಆರ್ಜವೇನ ಚ ಸಂಪನ್ನೋ ಧೃತ್ಯಾ ಬುದ್ಧ್ಯಾ ಚ ಭಾರತ|

12072006c ಅರ್ಥಾರ್ಥಂ ಪರಿಗೃಹ್ಣೀಯಾತ್ಕಾಮಕ್ರೋಧೌ ಚ ವರ್ಜಯೇತ್||

ಭಾರತ! ಸರಳನಾಗಿರಬೇಕು. ಧೈರ್ಯ-ಬುದ್ಧಿಗಳಿಂದ ಸಂಪನ್ನನಾಗಿರಬೇಕು. ಯಥಾರ್ಥವಾದುದನ್ನೇ ಪ್ರತಿಗ್ರಹಿಸಬೇಕು. ಕಾಮ-ಕ್ರೋಧಗಳನ್ನು ಪರಿತ್ಯಜಿಸಬೇಕು.

12072007a ಕಾಮಕ್ರೋಧೌ ಪುರಸ್ಕೃತ್ಯ ಯೋಽರ್ಥಂ ರಾಜಾನುತಿಷ್ಠತಿ|

12072007c ನ ಸ ಧರ್ಮಂ ನ ಚಾಪ್ಯರ್ಥಂ ಪರಿಗೃಹ್ಣಾತಿ ಬಾಲಿಶಃ||

ಕಾಮ-ಕ್ರೋಧಗಳನ್ನು ಮುಂದಿಟ್ಟುಕೊಂಡು ಅರ್ಥವನ್ನು ಗಳಿಸಲು ಪ್ರಯತ್ನಿಸುವ ಮೂರ್ಖ ರಾಜನು ಧರ್ಮವನ್ನಾಗಲೀ ಅರ್ಥವನ್ನಾಗಲೀ ಪ್ರಹಿಗ್ರಹಿಸಲಾರನು.

12072008a ಮಾ ಸ್ಮ ಲುಬ್ಧಾಂಶ್ಚ ಮೂರ್ಖಾಂಶ್ಚ ಕಾಮೇ ಚಾರ್ಥೇಷು ಯೂಯುಜಃ|

12072008c ಅಲುಬ್ಧಾನ್ಬುದ್ಧಿಸಂಪನ್ನಾನ್ಸರ್ವಕರ್ಮಸು ಯೋಜಯೇತ್||

ಲುಬ್ಧರನ್ನು ಮೂರ್ಖರನ್ನೂ ಕಾಮಾರ್ಥಗಳ ಸಾಧನೆಗೆ ನಿಯೋಜಿಸಬೇಡ. ಅಲುಬ್ಧರನ್ನೂ ಬುದ್ಧಿಸಂಪನ್ನರನ್ನೂ ಎಲ್ಲ ಕಾರ್ಯಗಳಿಗೆ ನಿಯೋಜಿಸಬೇಕು.

12072009a ಮೂರ್ಖೋ ಹ್ಯಧಿಕೃತೋಽರ್ಥೇಷು ಕಾರ್ಯಾಣಾಮವಿಶಾರದಃ|

12072009c ಪ್ರಜಾಃ ಕ್ಲಿಶ್ನಾತ್ಯಯೋಗೇನ ಕಾಮದ್ವೇಷಸಮನ್ವಿತಃ||

ಕಾರ್ಯಗಳಲ್ಲಿ ಕುಶಲನಲ್ಲದ ಮತ್ತು ಕಾಮ-ದ್ವೇಷ ಸಮನ್ವಿತನಾದ ಮೂರ್ಖನನ್ನು ಅರ್ಥಸಂಗ್ರಹಕ್ಕೆ ಅಧಿಕಾರಿಯನ್ನಾಗಿ ನಿಯೋಜಿಸಿಕೊಂಡರೆ ಅವನು ಕುತ್ಸಿತ ಉಪಾಯಗಳಿಂದ ಪ್ರಜೆಗಳನ್ನು ಕಷ್ಟಕ್ಕೀಡುಮಾಡುತ್ತಾನೆ.

12072010a ಬಲಿಷಷ್ಠೇನ ಶುಲ್ಕೇನ ದಂಡೇನಾಥಾಪರಾಧಿನಾಮ್|

12072010c ಶಾಸ್ತ್ರನೀತೇನ ಲಿಪ್ಸೇಥಾ ವೇತನೇನ ಧನಾಗಮಮ್||

ಪ್ರಜೆಗಳ ಆದಾಯದ ಆರನೆಯ ಒಂದು ಭಾಗವನ್ನು ರಾಜಾದಯವನ್ನಾಗಿ ಪಡೆಯಬೇಕು. ಅಪರಾಧಿಗಳಿಗೆ ದಂದವನ್ನು ವಿಧಿಸಬೇಕು. ಶಾಸ್ತ್ರಾನುಸಾರವಾಗಿ ರಾಜಸೇವಕರಿಂದ ಸಂರಕ್ಷತ ವ್ಯಾಪಾರಿಗಳಿಂದ ಧನವನ್ನು ಸಂಗ್ರಹಿಸಬೇಕು.

12072011a ದಾಪಯಿತ್ವಾ ಕರಂ ಧರ್ಮ್ಯಂ ರಾಷ್ಟ್ರಂ ನಿತ್ಯಂ ಯಥಾವಿಧಿ|

12072011c ಅಶೇಷಾನ್ಕಲ್ಪಯೇದ್ರಾಜಾ ಯೋಗಕ್ಷೇಮಾನತಂದ್ರಿತಃ||

ಧರ್ಮಾನುಕೂಲವಾಗಿ ಕರವನ್ನು ತೆಗೆದುಕೊಂಡು ಧರ್ಮದಿಂದ ಯಥಾವಿಧಿಯಾಗಿ ನಿತ್ಯವೂ ಆಲಸಿಕೆಯಿಲ್ಲದೇ ರಾಷ್ಟ್ರದ ಯೋಗಕ್ಷೇಮಗಳನ್ನು ನೋಡಿಕೊಳ್ಳಬೇಕು.

12072012a ಗೋಪಾಯಿತಾರಂ ದಾತಾರಂ ಧರ್ಮನಿತ್ಯಮತಂದ್ರಿತಮ್|

12072012c ಅಕಾಮದ್ವೇಷಸಂಯುಕ್ತಮನುರಜ್ಯಂತಿ ಮಾನವಾಃ||

ರಕ್ಷಿಸುವ, ದಾನಮಾಡುವ, ಧರ್ಮನಿತ್ಯನೂ, ಆಲಸಿಕೆಯಿಲ್ಲದವನೂ,  ಕಾಮದ್ವೇಷಗಳಿಲ್ಲದವನೂ ಆದ ರಾಜನನ್ನು ಪ್ರಜೆಗಳು ಪ್ರೀತಿಸುತ್ತಾರೆ.

12072013a ಮಾ ಸ್ಮಾಧರ್ಮೇಣ ಲಾಭೇನ ಲಿಪ್ಸೇಥಾಸ್ತ್ವಂ ಧನಾಗಮಮ್|

12072013c ಧರ್ಮಾರ್ಥಾವಧ್ರುವೌ ತಸ್ಯ ಯೋಽಪಶಾಸ್ತ್ರಪರೋ ಭವೇತ್||

ನೀನು ಅಧರ್ಮಪೂರ್ವಕವಾಗಿ ಲಾಭದ ಆಸೆಯಿಂದ ಧನವನ್ನು ಸಂಗ್ರಹಿಸಬೇಡ. ನೀತಿಶಾಸ್ತ್ರಗಳನ್ನು ಉಲ್ಲಂಘಸಿರುವವನಲ್ಲಿ ಧರ್ಮ-ಅರ್ಥ ಇವೆರಡೂ ಸ್ಥಿರವಾಗಿ ನಿಲ್ಲುವುದಿಲ್ಲ.

12072014a ಅಪಶಾಸ್ತ್ರಪರೋ ರಾಜಾ ಸಂಚಯಾನ್ನಾಧಿಗಚ್ಚತಿ|

12072014c ಅಸ್ಥಾನೇ ಚಾಸ್ಯ ತದ್ವಿತ್ತಂ ಸರ್ವಮೇವ ವಿನಶ್ಯತಿ||

ಶಾಸ್ತ್ರಕ್ಕೆ ವಿರುದ್ಧವಾಗಿ ವರ್ತಿಸುವ ರಾಜನು ಧರ್ಮಮೂಲವಾಗಿ ಅಧಿಕ ಧನವನ್ನು ಸಂಗ್ರಹಿಸುವುದಿಲ್ಲ. ಅಧರ್ಮಮೂಲಕವಾಗಿ ಪಡೆದ ಎಲ್ಲ ಧನವೂ ದುರ್ವ್ಯಯವಾಗಿ ನಾಶವಾಗುತ್ತದೆ.

12072015a ಅರ್ಥಮೂಲೋಽಪಹಿಂಸಾಂ ಚ ಕುರುತೇ ಸ್ವಯಮಾತ್ಮನಃ|

12072015c ಕರೈರಶಾಸ್ತ್ರದೃಷ್ಟೈರ್ಹಿ ಮೋಹಾತ್ಸಂಪೀಡಯನ್ಪ್ರಜಾಃ||

ಅರ್ಥವನ್ನೇ ಪ್ರಧಾನವಾಗಿಟ್ಟುಕೊಂಡು ಲೋಭಿ ರಾಜನು ಶಾಸ್ತ್ರವಿರುದ್ಧವಾಗಿ ಪ್ರಜೆಗಳನ್ನು ಪೀಡಿಸಿ ಅಧಿಕ ತೆರಿಗೆಗಳ ಮೂಲಕ ಧನಸಂಪಾದಿಸಿದರೆ ಅದು ಅವನಿಗೇ ಪೀಡೆಯನ್ನು ತರುತ್ತದೆ.

12072016a ಊಧಶ್ಚಿಂದ್ಯಾದ್ಧಿ ಯೋ ಧೇನ್ವಾಃ ಕ್ಷೀರಾರ್ಥೀ ನ ಲಭೇತ್ಪಯಃ|

12072016c ಏವಂ ರಾಷ್ಟ್ರಮಯೋಗೇನ ಪೀಡಿತಂ ನ ವಿವರ್ಧತೇ||

ಹಾಲನ್ನು ಅಪೇಕ್ಷಿಸುವವನು ಹಸುವು ಕೊಡುವಷ್ಟು ಹಾಲನ್ನು ಕೆಚ್ಚಲಿನಿಂದ ಕರೆದುಕೊಂಡು ತೃಪ್ತನಾಗಬೇಕೇ ಹೊರತು ಕೆಚ್ಚಲನ್ನೇ ಕತ್ತರಿಸಬಿಡಬಾರದು. ಹಾಗೆ ಮಾಡುವುದರಿಂದ ಅವನಿಗೆ ಹಾಲಿನ ಒಂದು ಹನಿಯ ದೊರಕುವುದಿಲ್ಲ. ಹಾಗೆಯೇ ಕುತ್ಸಿತ ಉಪಾಯಗಳಿಂದ ಪ್ರಜೆಗಳನ್ನು ಪೀಡಿಸಿದರೆ ರಾಷ್ಟ್ರವು ಅಭಿವೃದ್ಧಿಹೊಂದುವುದಿಲ್ಲ.

12072017a ಯೋ ಹಿ ದೋಗ್ಧ್ರೀಮುಪಾಸ್ತೇ ತು ಸ ನಿತ್ಯಂ ಲಭತೇ ಪಯಃ|

12072017c ಏವಂ ರಾಷ್ಟ್ರಮುಪಾಯೇನ ಭುಂಜಾನೋ ಲಭತೇ ಫಲಮ್|

ಹಸುವನ್ನು ಸಾಕುವವನಿಗೆ ಹಾಲು ನಿತ್ಯವೂ ದೊರೆಯುತ್ತದೆ. ಹಾಗೆಯೇ ಉಪಾಯದಿಂದ ರಾಷ್ಟ್ರವನ್ನು ಭೋಗಿಸುವವನಿಗೆ ಫಲವು ದೊರೆಯುತ್ತದೆ.

12072018a ಅಥ ರಾಷ್ಟ್ರಮುಪಾಯೇನ ಭುಜ್ಯಮಾನಂ ಸುರಕ್ಷಿತಮ್|

12072018c ಜನಯತ್ಯತುಲಾಂ ನಿತ್ಯಂ ಕೋಶವೃದ್ಧಿಂ ಯುಧಿಷ್ಠಿರ||

ಯುಧಿಷ್ಠಿರ! ಸುರಕ್ಷಿತವಾಗಿಟ್ಟುಕೊಂಡು ಉಪಾಯದಿಂದ ಭೋಗಿಸುವವನ ರಾಷ್ಟ್ರದಲ್ಲಿ ನಿತ್ಯವೂ ಅತುಲ ಕೋಶವೃದ್ಧಿಯಾಗುತ್ತದೆ.

12072019a ದೋಗ್ಧಿ ಧಾನ್ಯಂ ಹಿರಣ್ಯಂ ಚ ಪ್ರಜಾ ರಾಜ್ಞಿ ಸುರಕ್ಷಿತಾ|

12072019c ನಿತ್ಯಂ ಸ್ವೇಭ್ಯಃ ಪರೇಭ್ಯಶ್ಚ ತೃಪ್ತಾ ಮಾತಾ ಯಥಾ ಪಯಃ||

ರಾಜನಿಂದ ಸುರಕ್ಷಿತವಾದ ಈ ಭೂಮಿಯು ತನ್ನ ಕರುವಿಗಲ್ಲದೇ ಇತರರಿಗೂ ಸಾಕಾಗುವಷ್ಟು ಹಾಲನ್ನು ಕೊಡುವ ತಾಯಿಹಸುವಿನಂತೆ ಹಸುಗಳು, ಧಾನ್ಯ, ಹಿರಣ್ಯ ಮತ್ತು ಸಂತಾನಗಳನ್ನು ನೀಡುತ್ತಿರುತ್ತದೆ.

12072020a ಮಾಲಾಕಾರೋಪಮೋ ರಾಜನ್ಭವ ಮಾಂಗಾರಿಕೋಪಮಃ|

12072020c ತಥಾ ಯುಕ್ತಶ್ಚಿರಂ ರಾಷ್ಟ್ರಂ ಭೋಕ್ತುಂ ಶಕ್ಯಸಿ ಪಾಲಯನ್||

ರಾಜನ್! ನೀನು ಹೂವಿನ ಮಾಲೆಕಟ್ಟುವವನಂತಾಗು. ಇದ್ದಿಲು ಮಾಡುವವನಂತಾಗಬೇಡ. ಹಾಗಿದ್ದರೆ ನೀನು ಬಹುಕಾಲ ರಾಷ್ಟ್ರವನ್ನು ಪಾಲಿಸಿಕೊಂಡು ಭೋಗಿಸಬಲ್ಲೆ.

12072021a ಪರಚಕ್ರಾಭಿಯಾನೇನ ಯದಿ ತೇ ಸ್ಯಾದ್ಧನಕ್ಷಯಃ|

12072021c ಅಥ ಸಾಮ್ನೈವ ಲಿಪ್ಸೇಥಾ ಧನಮಬ್ರಾಹ್ಮಣೇಷು ಯತ್||

ಶತ್ರುಗಳ ಆಕ್ರಮಣದಿಂದಾಗಿ ಒಂದುವೇಳೆ ನಿನ್ನ ಧನವು ಕಡಿಮೆಯಾದರೆ ಸಾಮದಿಂದ ಧನಿಕ ಕ್ಷತ್ರಿಯ, ವೈಶ್ಯ ಶೂದ್ರರಿಂದ ಧನವನ್ನು ಪಡೆದುಕೊಳ್ಳಬೇಕು.

12072022a ಮಾ ಸ್ಮ ತೇ ಬ್ರಾಹ್ಮಣಂ ದೃಷ್ಟ್ವಾ ಧನಸ್ಥಂ ಪ್ರಚಲೇನ್ಮನಃ|

12072022c ಅಂತ್ಯಾಯಾಮಪ್ಯವಸ್ಥಾಯಾಂ ಕಿಮು ಸ್ಫೀತಸ್ಯ ಭಾರತ||

ಭಾರತ! ನೀನು ಎಂತಹುದೇ ದುರವಸ್ಥೆಯಲ್ಲಿದ್ದರೂ, ಅಂತ್ಯಾವಸ್ಥೆಯಲ್ಲಿದ್ದರೂ, ಧನದ ಅಭಾವದಿಂದ ಪ್ರಾಣಹೋಗುವ ಸಮಯ ಬಂದರೂ ಐಶ್ವರ್ಯವಂತ ಬ್ರಾಹ್ಮಣರನ್ನು ನೋಡಿ ಅವರಿಂದ ಧನವನ್ನು ಸಂಗ್ರಹಿಸಬೇಕೆಂಬ ಚಾಂಚಲ್ಯವು ನಿನ್ನ ಮನಸ್ಸಿನಲ್ಲಿ ಮೂಡದಿರಲಿ. ಹೀಗಿರುವಾಗ ನೀನು ಐಶ್ವರ್ಯವಂತನಾಗಿರುವಾಗ ಬ್ರಾಹ್ಮಣನ ಸ್ವತ್ತಿನ ವಿಷಯದಲ್ಲಿ ಇನ್ನು ಹೇಳಬೇಕಾಗಿಲ್ಲ.

12072023a ಧನಾನಿ ತೇಭ್ಯೋ ದದ್ಯಾಸ್ತ್ವಂ ಯಥಾಶಕ್ತಿ ಯಥಾರ್ಹತಃ|

12072023c ಸಾಂತ್ವಯನ್ಪರಿರಕ್ಷಂಶ್ಚ ಸ್ವರ್ಗಮಾಪ್ಸ್ಯಸಿ ದುರ್ಜಯಮ್||

ಯಥಾಶಕ್ತಿ ಯಥಾರ್ಹವಾಗಿ ಬ್ರಾಹ್ಮಣರಿಗೆ ನೀನು ಧನವನ್ನು ನೀಡುತ್ತಲೇ ಇರಬೇಕು. ಅವರನ್ನು ಸಾಂತ್ವನಪೂರ್ವಕವಾಗಿ ಪರಿರಕ್ಷಿಸುವುದರಿಂದ ನೀನು ಜಯಿಸಲಸಾಧ್ಯ ಸ್ವರ್ಗವನ್ನು ಪಡೆದುಕೊಳ್ಳುತ್ತೀಯೆ.

12072024a ಏವಂ ಧರ್ಮೇಣ ವೃತ್ತೇನ ಪ್ರಜಾಸ್ತ್ವಂ ಪರಿಪಾಲಯನ್|

12072024c ಸ್ವಂತಂ ಪುಣ್ಯಂ ಯಶೋವಂತಂ ಪ್ರಾಪ್ಸ್ಯಸೇ ಕುರುನಂದನ||

ಕುರುನಂದನ! ಈ ರೀತಿಯಲ್ಲಿ ಧರ್ಮದಿಂದ ವ್ಯವಹರಿಸಿ ಪ್ರಜೆಗಳನ್ನು ನೀನು ಪರಿಪಾಲಿಸಿ ಸ್ವಂತ ಪುಣ್ಯವನ್ನೂ ಗಳಿಸುತ್ತೀಯೆ ಮತ್ತು ಯಶೋವಂತನೂ ಆಗುತ್ತೀಯೆ.

12072025a ಧರ್ಮೇಣ ವ್ಯವಹಾರೇಣ ಪ್ರಜಾಃ ಪಾಲಯ ಪಾಂಡವ|

12072025c ಯುಧಿಷ್ಠಿರ ತಥಾ ಯುಕ್ತೋ ನಾಧಿಬಂಧೇನ ಯೋಕ್ಷ್ಯಸೇ||

ಪಾಂಡವ! ಧರ್ಮವ್ಯವಹಾರಗಳಿಂದ ಪ್ರಜೆಗಳನ್ನು ಪಾಲಿಸು. ಯುಧಿಷ್ಠಿರ! ಆಗ ನೀನು ಮಾನಸಿಕ ವ್ಯಥೆಯ ಬಂಧನಕ್ಕೆ ಒಳಗಾಗುವುದಿಲ್ಲ.

12072026a ಏಷ ಏವ ಪರೋ ಧರ್ಮೋ ಯದ್ರಾಜಾ ರಕ್ಷತೇ ಪ್ರಜಾಃ|

12072026c ಭೂತಾನಾಂ ಹಿ ಯಥಾ ಧರ್ಮೇ ರಕ್ಷಣಂ ಚ ಪರಾ ದಯಾ||

ರಾಜನು ಪ್ರಜೆಗಳನ್ನು ರಕ್ಷಿಸುತ್ತಿದ್ದಾನೆ ಎನ್ನುವುದೇ ರಾಜನಾದವನಿಗೆ ಪರಮ ಧರ್ಮವು. ಸರ್ವವನ್ನೂ ರಕ್ಷಿಸುವುದು ಮತ್ತು ಇತರರನ್ನು ಪರಮ ದಯೆಯಿಂದ ಕಾಣುವುದು ಇವೇ ರಾಜನ ಧರ್ಮಗಳು.

12072027a ತಸ್ಮಾದೇವಂ ಪರಂ ಧರ್ಮಂ ಮನ್ಯಂತೇ ಧರ್ಮಕೋವಿದಾಃ|

12072027c ಯದ್ರಾಜಾ ರಕ್ಷಣೇ ಯುಕ್ತೋ ಭೂತೇಷು ಕುರುತೇ ದಯಾಮ್||

ಆದುದರಿಂದಲೇ ಜೀವಿಗಳಿಗೆ ದಯೆಯನ್ನು ತೋರಿಸುತ್ತಾ ರಾಜನು ರಕ್ಷಿಸುತ್ತಿದ್ದಾನಂದರೆ ಅದೇ ಪರಮ ಧರ್ಮವೆಂದು ಧರ್ಮಕೋವಿದರು ಮನ್ನಿಸುತ್ತಾರೆ.

12072028a ಯದಹ್ನಾ ಕುರುತೇ ಪಾಪಮರಕ್ಷನ್ಭಯತಃ ಪ್ರಜಾಃ|

12072028c ರಾಜಾ ವರ್ಷಸಹಸ್ರೇಣ ತಸ್ಯಾಂತಮಧಿಗಚ್ಚತಿ||

ಪ್ರಜೆಗಳನ್ನು ಭಯದಿಂದ ಒಂದು ಹಗಲು ರಕ್ಷಿಸದೇ ಇದ್ದರೂ ರಾಜನಾದವನು ಒಂದು ಸಾವಿರ ವರ್ಷಗಳು ನರಕದಲ್ಲಿ ಕಳೆದನಂತರವೇ ಆ ಪಾಪವು ಕೊನೆಯಾಗುತ್ತದೆ.

12072029a ಯದಹ್ನಾ ಕುರುತೇ ಪುಣ್ಯಂ ಪ್ರಜಾ ಧರ್ಮೇಣ ಪಾಲಯನ್|

12072029c ದಶ ವರ್ಷಸಹಸ್ರಾಣಿ ತಸ್ಯ ಭುಂಕ್ತೇ ಫಲಂ ದಿವಿ||

ಪ್ರಜೆಗಳನ್ನು ಧರ್ಮದಿಂದ ಪರಿಪಾಲಿಸಿದ ಪುಣ್ಯವನ್ನು ಒಂದು ಹಗಲೇ ಮಾಡಿದರೂ ಅದರ ಫಲವನ್ನು ರಾಜನು ಹತ್ತು ಸಾವಿರ ವರ್ಷಗಳು ಸ್ವರ್ಗದಲ್ಲಿ ಭೋಗಿಸುತ್ತಾನೆ.

12072030a ಸ್ವಿಷ್ಟಿಃ ಸ್ವಧೀತಿಃ ಸುತಪಾ ಲೋಕಾನ್ಜಯತಿ ಯಾವತಃ|

12072030c ಕ್ಷಣೇನ ತಾನವಾಪ್ನೋತಿ ಪ್ರಜಾ ಧರ್ಮೇಣ ಪಾಲಯನ್||

ಆಶ್ರಮಧರ್ಮಗಳನ್ನು ಪಾಲಿಸುವವರು ಯಾಗಗಳು, ಸ್ವಾಧ್ಯಾಯ ಮತ್ತು ಮಹಾ ತಪಸ್ಸುಗಳಿಂದ ಯಾವ ಲೋಕವನ್ನು ಗೆಲ್ಲುತ್ತಾರೋ ಆ ಲೋಕಗಳನ್ನು ಪ್ರಜೆಗಳನ್ನು ಧರ್ಮದಿಂದ ಪಾಲಿಸುವ ರಾಜನು ಕ್ಷಣದಲ್ಲಿಯೇ ಪಡೆದುಕೊಳ್ಳುತ್ತಾನೆ.

12072031a ಏವಂ ಧರ್ಮಂ ಪ್ರಯತ್ನೇನ ಕೌಂತೇಯ ಪರಿಪಾಲಯನ್|

12072031c ಇಹ ಪುಣ್ಯಫಲಂ ಲಬ್ಧ್ವಾ ನಾಧಿಬಂಧೇನ ಯೋಕ್ಷ್ಯಸೇ||

ಕೌಂತೇಯ! ಹೀಗೆ ಪ್ರಯತ್ನಪಟ್ಟು ಧರ್ಮವನ್ನು ಪರಿಪಾಲಿಸು. ಇದರಿಂದ ಪುಣ್ಯಫಲವನ್ನು ಪಡೆದು ಮನೋವ್ಯಥೆಯ ಬಂಧನಕ್ಕೆ ಸಿಲುಕುವುದಿಲ್ಲ.

12072032a ಸ್ವರ್ಗಲೋಕೇ ಚ ಮಹತೀಂ ಶ್ರಿಯಂ ಪ್ರಾಪ್ಸ್ಯಸಿ ಪಾಂಡವ|

12072032c ಅಸಂಭವಶ್ಚ ಧರ್ಮಾಣಾಮೀದೃಶಾನಾಮರಾಜಸು|

12072032e ತಸ್ಮಾದ್ರಾಜೈವ ನಾನ್ಯೋಽಸ್ತಿ ಯೋ ಮಹತ್ಫಲಮಾಪ್ನುಯಾತ್||

ಪಾಂಡವ! ರಾಜರಲ್ಲದವರಿಗೆ ಈ ರೀತಿಯ ಧರ್ಮವು ಅಸಂಭವವು. ಸ್ವರ್ಗಲೋಕದಲ್ಲಿ ನೀನು ಮಹಾ ಶ್ರೀಯನ್ನು ಪಡೆದುಕೊಳ್ಳುತ್ತೀಯೆ. ಆದುದರಿಂದ ರಾಜ್ಯದಿಂದಲೇ ಈ ಮಹಾ ಫಲವು ಪ್ರಾಪ್ತವಾಗುತ್ತದೆ. ಅನ್ಯಥಾ ಅಲ್ಲ.

12072033a ಸ ರಾಜ್ಯಮೃದ್ಧಿಮತ್ಪ್ರಾಪ್ಯ ಧರ್ಮೇಣ ಪರಿಪಾಲಯನ್|

12072033c ಇಂದ್ರಂ ತರ್ಪಯ ಸೋಮೇನ ಕಾಮೈಶ್ಚ ಸುಹೃದೋ ಜನಾನ್||

ಧೈರ್ಯದಿಂದ ಪಡೆದುಕೊಂಡ ಈ ರಾಜ್ಯವನ್ನು ಧರ್ಮದಿಂದ ಪರಿಪಾಲಿಸಿ ಸೋಮದಿಂದ ಇಂದ್ರನನ್ನು ತೃಪ್ತಿಪಡಿಸಿ ಕಾಮಗಳಿಂದ ಸುಹೃದ ಜನರನ್ನು ತೃಪ್ತಿಗೊಳಿಸು.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ದ್ವಿಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಎಪ್ಪತ್ತೆರಡನೇ ಅಧ್ಯಾಯವು.

Image result for flowers against white background

Comments are closed.