Shanti Parva: Chapter 352

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೫೨

12352001 ಬ್ರಾಹ್ಮಣ ಉವಾಚ|
12352001a ಆಶ್ಚರ್ಯಂ ನಾತ್ರ ಸಂದೇಹಃ ಸುಪ್ರೀತೋಽಸ್ಮಿ ಭುಜಂಗಮ|

12352001c ಅನ್ವರ್ಥೋಪಗತೈರ್ವಾಕ್ಯೈಃ ಪಂಥಾನಂ ಚಾಸ್ಮಿ ದರ್ಶಿತಃ||

ಬ್ರಾಹ್ಮಣನು ಹೇಳಿದನು: “ಭುಜಂಗಮ! ಇದು ಆಶ್ಚರ್ಯವೆನ್ನುವುದರಲ್ಲಿ ಸಂದೇಹವೇನೂ ಇಲ್ಲ. ಸುಪ್ರೀತನಾಗಿದ್ದೇನೆ. ಅನ್ವರ್ಥ ಮಾತುಗಳಿಂದ ನೀನು ನನಗೆ ಮಾರ್ಗವನ್ನು ತೋರಿಸಿಕೊಟ್ಟಿರುವೆ!

12352002a ಸ್ವಸ್ತಿ ತೇಽಸ್ತು ಗಮಿಷ್ಯಾಮಿ ಸಾಧೋ ಭುಜಗಸತ್ತಮ|

12352002c ಸ್ಮರಣೀಯೋಽಸ್ಮಿ ಭವತಾ ಸಂಪ್ರೇಷಣನಿಯೋಜನೈಃ||

ಸಾಧೋ! ಭುಜಗಸತ್ತಮ! ನಿನಗೆ ಮಂಗಳವಾಗಲಿ! ನಾನು ಹೊರಡುತ್ತೇನೆ. ನನ್ನನ್ನು ಎಲ್ಲಿಯಾದರೂ ಕಳುಹಿಸಬೇಕಾಗಿ ಬಂದರೆ ಅಥವಾ ಯಾವುದಾದರೂ ಕೆಲಸವನ್ನು ನನಗೆ ನಿಯೋಜಿಸಬೇಕಾಗಿ ಬಂದರೆ ನೀನು ನನ್ನನ್ನು ಸ್ಮರಿಸಿಕೊಳ್ಳಬೇಕು.”

12352003 ನಾಗ ಉವಾಚ|

12352003a ಅನುಕ್ತ್ವಾ ಮದ್ಗತಂ ಕಾರ್ಯಂ ಕ್ವೇದಾನೀಂ ಪ್ರಸ್ಥಿತೋ ಭವಾನ್|

12352003c ಉಚ್ಯತಾಂ ದ್ವಿಜ ಯತ್ಕಾರ್ಯಂ ಯದರ್ಥಂ ತ್ವಮಿಹಾಗತಃ||

ನಾಗನು ಹೇಳಿದನು: “ದ್ವಿಜ! ನನ್ನಲ್ಲಿರುವ ಕಾರ್ಯವನ್ನು ಹೇಳದೆಯೇ ನೀನು ಎಲ್ಲಿಗೆ ಹೋಗುತ್ತಿರುವೆ? ಯಾವ ಕಾರ್ಯಕ್ಕಾಗಿ ಮತ್ತು ಯಾವ ಉದ್ದೇಶದಿಂದ ನೀನು ಇಲ್ಲಿಗೆ ಬಂದಿರುವೆ ಎನ್ನುವುದನ್ನು ಹೇಳಬೇಕು.

12352004a ಉಕ್ತಾನುಕ್ತೇ ಕೃತೇ ಕಾರ್ಯೇ ಮಾಮಾಮಂತ್ರ್ಯ ದ್ವಿಜರ್ಷಭ|

12352004c ಮಯಾ ಪ್ರತ್ಯಭ್ಯನುಜ್ಞಾತಸ್ತತೋ ಯಾಸ್ಯಸಿ ಬ್ರಾಹ್ಮಣ||

ದ್ವಿಜರ್ಷಭ! ಬ್ರಾಹ್ಮಣ! ನೀನು ಹೇಳು ಅಥವಾ ಹೇಳದೆಯೇ ಇರು. ಆದರೆ ಕಾರ್ಯವು ಮುಗಿದನಂತರ ನನ್ನನ್ನು ಕೇಳಿ ನನ್ನ ಅನುಮತಿಯನ್ನು ಪಡೆದೇ ನೀನು ಇಲ್ಲಿಂದ ಹೊರಡಬೇಕು.

12352005a ನ ಹಿ ಮಾಂ ಕೇವಲಂ ದೃಷ್ಟ್ವಾ ತ್ಯಕ್ತ್ವಾ ಪ್ರಣಯವಾನಿಹ|

12352005c ಗಂತುಮರ್ಹಸಿ ವಿಪ್ರರ್ಷೇ ವೃಕ್ಷಮೂಲಗತೋ ಯಥಾ||

ವಿಪ್ರರ್ಷೇ! ನನ್ನ ಮೇಲೆ ಪ್ರೀತಿಯನ್ನು ಹೊಂದಿರುವ ನೀನು ಮರದ ಬುಡದಲ್ಲಿಯೇ ಕುಳಿತು ಹೊರಟುಹೋಗುವ ದಾರಿಹೋಕನಂತೆ ನನ್ನನ್ನು ಸುಮ್ಮನ್ನೇ ಸಂದರ್ಶಿಸಿ ಹೊರಟುಹೋಗುವುದು ಸರಿಯಲ್ಲ.

12352006a ತ್ವಯಿ ಚಾಹಂ ದ್ವಿಜಶ್ರೇಷ್ಠ ಭವಾನ್ಮಯಿ ನ ಸಂಶಯಃ|

12352006c ಲೋಕೋಽಯಂ ಭವತಃ ಸರ್ವಃ ಕಾ ಚಿಂತಾ ಮಯಿ ತೇಽನಘ||

ದ್ವಿಜಶ್ರೇಷ್ಠ! ಅನಘ! ನೀನು ನನ್ನಲ್ಲಿ ಮತ್ತು ನೀನು ನನ್ನಲ್ಲಿ ಇದ್ದೀಯೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ಲೋಕವೆಲ್ಲವೂ ನಿನ್ನದೇ ಆಗಿರುವಾಗ ನನ್ನ ಮನೆಯಲ್ಲಿಯೇ ಇರಲು ನಿನಗೆ ಯಾವ ಚಿಂತೆಯಿದೆ?”

12352007 ಬ್ರಾಹ್ಮಣ ಉವಾಚ|

12352007a ಏವಮೇತನ್ಮಹಾಪ್ರಾಜ್ಞ ವಿಜ್ಞಾತಾರ್ಥ ಭುಜಂಗಮ|

12352007c ನಾತಿರಿಕ್ತಾಸ್ತ್ವಯಾ ದೇವಾಃ ಸರ್ವಥೈವ ಯಥಾತಥಮ್||

ಬ್ರಾಹ್ಮಣನು ಹೇಳಿದನು: “ಮಹಾಪ್ರಾಜ್ಞ! ಭುಜಂಗಮ! ನೀನು ಹೇಳಿದಂತೆಯೇ ಆಗಲಿ. ದೇವತೆಗಳೂ ನಿನ್ನನ್ನು ಮೀರಲಾರರು. ಈ ಮಾತು ಸರ್ವಥಾ ಯಥಾರ್ಹವಾದುದು.

12352008a ಯ ಏವಾಹಂ ಸ ಏವ ತ್ವಮೇವಮೇತದ್ ಭುಜಂಗಮ[1]|

12352008c ಅಹಂ ಭವಾಂಶ್ಚ ಭೂತಾನಿ ಸರ್ವೇ ಸರ್ವತ್ರಗಾಃ ಸದಾ||

ಭುಜಂಗಮ! ನಾನು ಯಾರೋ ಅವನು ನೀನೂ ಆಗಿರುವೆ. ನಾನು, ನೀನು ಮತ್ತು ಸರ್ವ ಭೂತಗಳೂ ಸದಾ ಸರ್ವತ್ರ ಸಂಚರಿಸುತ್ತಿರುತ್ತೇವೆ.

12352009a ಆಸೀತ್ತು ಮೇ ಭೋಗಪತೇ ಸಂಶಯಃ ಪುಣ್ಯಸಂಚಯೇ|

12352009c ಸೋಽಹಮುಂಚವ್ರತಂ ಸಾಧೋ ಚರಿಷ್ಯಾಮ್ಯರ್ಥದರ್ಶನಮ್||

ಭೋಗಪತೇ! ಪುಣ್ಯಸಂಚಯದ ಕುರಿತು ನನಗೆ ಸಂಶಯವಿದ್ದಿತು. ಸಾಧೋ! ನನ್ನ ಗುರಿಯನ್ನು ಕಾಣಲು ನಾನು ಉಂಚವ್ರತವನ್ನು ಆಚರಿಸುತ್ತೇನೆ.

12352010a ಏಷ ಮೇ ನಿಶ್ಚಯಃ ಸಾಧೋ ಕೃತಃ ಕಾರಣವತ್ತರಃ|

12352010c ಆಮಂತ್ರಯಾಮಿ ಭದ್ರಂ ತೇ ಕೃತಾರ್ಥೋಽಸ್ಮಿ ಭುಜಂಗಮ||

ಸಾಧೋ! ಭುಜಂಗಮ! ಇದು ನನ್ನ ನಿಶ್ಚಯವು. ನಾನು ಉದ್ದೇಶಿಸಿದ ಕಾರ್ಯವು ಮುಗಿಯಿತು. ನಿನಗೆ ಮಂಗಳವಾಗಲಿ. ಕೃತಾರ್ಥನಾಗಿದ್ದೇನೆ. ಹೊರಡಲು ಅನುಮತಿಯನ್ನು ನೀಡು.””

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ದ್ವಿಪಂಚಾಶದಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾಐವತ್ತೆರಡನೇ ಅಧ್ಯಾಯವು.

EPS Illustration - Blue jay bird. isolated on white background. Vector  Clipart gg100948343 - GoGraph

[1] ಸ ಏವ ತ್ವಂ ಸ ಏವಾಹಂ ಯೋಽಹಂ ಸ ತು ಭವಾನಪಿ| ಎಂಬ ಪಾಠಾಂತರವಿದೆ (ಭಾರತದರ್ಶನ).

Comments are closed.