ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೩೫೧
12351001 ಸೂರ್ಯ ಉವಾಚ|
12351001a ನೈಷ ದೇವೋಽನಿಲಸಖೋ ನಾಸುರೋ ನ ಚ ಪನ್ನಗಃ|
12351001c ಉಂಚವೃತ್ತಿವ್ರತೇ ಸಿದ್ಧೋ ಮುನಿರೇಷ ದಿವಂ ಗತಃ||
ಸೂರ್ಯನು ಹೇಳಿದನು: “ಇವನು ಅನಿಲಸಖ ಅಗ್ನಿದೇವನಲ್ಲ. ಅಸುರನೂ ಅಲ್ಲ. ಪನ್ನಗನೂ ಅಲ್ಲ. ಉಂಚವೃತ್ತಿವ್ರತದಿಂದ ಸಿದ್ಧಿಯನ್ನು ಪಡೆದ ಈ ಮುನಿಯು ನನ್ನ ಮೂಲಕವಾಗಿ ದಿವಕ್ಕೆ ಹೋದನು.
12351002a ಏಷ ಮೂಲಫಲಾಹಾರಃ ಶೀರ್ಣಪರ್ಣಾಶನಸ್ತಥಾ|
12351002c ಅಂಬ್ಭಕ್ಷೋ ವಾಯುಭಕ್ಷಶ್ಚ ಆಸೀದ್ವಿಪ್ರಃ ಸಮಾಹಿತಃ||
ಈ ವಿಪ್ರನು ಕಂದ-ಮೂಲ-ಫಲಗಳನ್ನೇ ಆಹಾರವನ್ನಾಗಿ ತಿನ್ನುತ್ತಿದ್ದನು. ಒಣಗಿದ ಎಲೆಗಳನ್ನು ತಿನ್ನುತ್ತಿದ್ದನು. ಏಕಾಗ್ರಚಿತ್ತನಾಗಿ ಕೇವಲ ನೀರನ್ನೇ ಕುಡಿಯುತ್ತಾ ಮತ್ತು ಗಾಳಿಯನ್ನೇ ಸೇವಿಸುತ್ತಾ ಇರುತ್ತಿದ್ದನು.
12351003a ಋಚಶ್ಚಾನೇನ ವಿಪ್ರೇಣ ಸಂಹಿತಾಂತರಭಿಷ್ಟುತಾಃ|
12351003c ಸ್ವರ್ಗದ್ವಾರಕೃತೋದ್ಯೋಗೋ ಯೇನಾಸೌ ತ್ರಿದಿವಂ ಗತಃ||
ಈ ವಿಪ್ರನು ಸಂಹಿತೆಯ ಮಂತ್ರಗಳ ಮೂಲಕ ಋಚನನ್ನು ಸ್ತೋತ್ರಮಾಡಿದನು. ಸ್ವರ್ಗಲೋಕವನ್ನು ಪಡೆಯಲು ಸತತವಾಗಿ ಪ್ರಯತ್ನಿಸಿ ಇವನು ಈಗ ಸ್ವರ್ಗಕ್ಕೆ ಹೋದನು.
12351004a ಅಸನ್ನಧೀರನಾಕಾಂಕ್ಷೀ ನಿತ್ಯಮುಂಚಶಿಲಾಶನಃ|
12351004c ಸರ್ವಭೂತಹಿತೇ ಯುಕ್ತ ಏಷ ವಿಪ್ರೋ ಭುಜಂಗಮ||
ಭುಜಂಗಮ! ಈ ವಿಪ್ರನು ಅಧೀರನೂ ಅನಾಕಾಂಕ್ಷಿಯೂ ಆಗಿದ್ದನು. ನಿತ್ಯವೂ ಉಂಚಶಿಲವೃತ್ತಿ[1]ಯಿಂದ ಪ್ರಾಪ್ತವಾದ ಅನ್ನದಿಂದಲೇ ಜೀವನವನ್ನು ನಿರ್ವಹಿಸುತ್ತಿದ್ದನು. ಸರ್ವಭೂತಹಿತರತನಾಗಿದ್ದನು.
12351005a ನ ಹಿ ದೇವಾ ನ ಗಂಧರ್ವಾ ನಾಸುರಾ ನ ಚ ಪನ್ನಗಾಃ|
12351005c ಪ್ರಭವಂತೀಹ ಭೂತಾನಾಂ ಪ್ರಾಪ್ತಾನಾಂ ಪರಮಾಂ ಗತಿಮ್||
ಇಂತಹ ಉಂಚವೃತ್ತಿವ್ರತಧಾರಿಗಳು ಪಡೆಯುವ ಉತ್ತಮ ಗತಿಯನ್ನು ದೇವತೆಗಳಾಗಲೀ, ಗಂಧರ್ವರಾಗಲೀ, ಅಸುರರಾಗಲೀ, ಪನ್ನಗರಾಗಲೀ ಪಡೆದುಕೊಳ್ಳಲಾರರು.””
12351006 ನಾಗ ಉವಾಚ|
12351006a ಏತದೇವಂವಿಧಂ ದೃಷ್ಟಮಾಶ್ಚರ್ಯಂ ತತ್ರ ಮೇ ದ್ವಿಜ|
12351006c ಸಂಸಿದ್ಧೋ ಮಾನುಷಃ ಕಾಯೋ ಯೋಽಸೌ ಸಿದ್ಧಗತಿಂ ಗತಃ|
12351006e ಸೂರ್ಯೇಣ ಸಹಿತೋ ಬ್ರಹ್ಮನ್ ಪೃಥಿವೀಂ ಪರಿವರ್ತತೇ||
ನಾಗನು ಹೇಳಿದನು: “ದ್ವಿಜ! ಬ್ರಹ್ಮನ್! ಅಲ್ಲಿ ನಾನು ಈ ವಿಧವಾದ ಆಶ್ಚರ್ಯವನ್ನು ನೋಡಿದೆನು. ಆ ಸಂಸಿದ್ಧ ಮನುಷ್ಯನು ಸಿದ್ಧರ ಗತಿಯನ್ನು ಪಡೆದು ಸೂರ್ಯನೊಡನೆ ಸೇರಿಕೊಂಡು ಪೃಥ್ವಿಯನ್ನು ಸುತ್ತುತ್ತಿದ್ದಾನೆ.”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಉಂಚವೃತ್ಯುನಪಾಖ್ಯಾನೇ ಏಕಪಂಚಾಶದಧಿಕತ್ರಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾಐವತ್ತೊಂದನೇ ಅಧ್ಯಾಯವು.
[1] ಹೊಲದ ಕೊಯಿಲಾದನಂತರ ಕೆಳಗೆ ಬಿದ್ದಿರುವ ಕಾಳುಗಳನ್ನೇ ಆರಿಸಿಕೊಂಡು ತಿನ್ನುವುದು.