ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೩೪೯
12349001 ಭೀಷ್ಮ ಉವಾಚ|
12349001a ಸ ಪನ್ನಗಪತಿಸ್ತತ್ರ ಪ್ರಯಯೌ ಬ್ರಾಹ್ಮಣಂ ಪ್ರತಿ|
12349001c ತಮೇವ ಮನಸಾ ಧ್ಯಾಯನ್ ಕಾರ್ಯವತ್ತಾಂ ವಿಚಾರಯನ್||
ಭೀಷ್ಮನು ಹೇಳಿದನು: “ಅವನು ಯಾವ ಕಾರ್ಯಕ್ಕಾಗಿ ಬಂದಿರಬಹುದೆಂದು ಮನಸ್ಸಿನಲ್ಲಿಯೇ ಧ್ಯಾನಿಸಿ ವಿಚಾರಿಸುತ್ತಾ ಆ ಪನ್ನಗಪತಿಯು ಬ್ರಾಹ್ಮಣನಿದ್ದಲ್ಲಿಗೆ ಹೋದನು.
12349002a ತಮಭಿಕ್ರಮ್ಯ ನಾಗೇಂದ್ರೋ ಮತಿಮಾನ್ಸ ನರೇಶ್ವರ|
12349002c ಪ್ರೋವಾಚ ಮಧುರಂ ವಾಕ್ಯಂ ಪ್ರಕೃತ್ಯಾ ಧರ್ಮವತ್ಸಲಃ||
ನರೇಶ್ವರ! ಸ್ವಭಾವತಃ ಧರ್ಮವತ್ಸಲನಾಗಿದ್ದ ಆ ಮತಿಮಂತ ನಾಗೇಂದ್ರನು ಅವನನ್ನು ಸಮೀಪಿಸಿ ಈ ಮಧುರ ಮಾತನ್ನಾಡಿದನು:
12349003a ಭೋ ಭೋ ಕ್ಷಾಮ್ಯಾಭಿಭಾಷೇ ತ್ವಾಂ ನ ರೋಷಂ ಕರ್ತುಮರ್ಹಸಿ|
12349003c ಇಹ ತ್ವಮಭಿಸಂಪ್ರಾಪ್ತಃ ಕಸ್ಯಾರ್ಥೇ ಕಿಂ ಪ್ರಯೋಜನಮ್||
“ಭೋ ಭೋ! ನಿನ್ನೊಡನೆ ಮಾತನಾಡುತ್ತಿರುವ ನನ್ನನ್ನು ಕ್ಷಮಿಸು. ರೋಷಗೊಳ್ಳಬೇಡ. ನೀನು ಯಾರ ಸಲುವಾಗಿ ಮತ್ತು ಯಾವ ಪ್ರಯೋಜನಕ್ಕಾಗಿ ಇಲ್ಲಿಗೆ ಆಗಮಿಸಿರುವೆ?
12349004a ಆಭಿಮುಖ್ಯಾದಭಿಕ್ರಮ್ಯ ಸ್ನೇಹಾತ್ ಪೃಚ್ಚಾಮಿ ತೇ ದ್ವಿಜ|
12349004c ವಿವಿಕ್ತೇ ಗೋಮತೀತೀರೇ ಕಿಂ ವಾ ತ್ವಂ ಪರ್ಯುಪಾಸಸೇ||
ದ್ವಿಜ! ನಿನ್ನ ಸಮ್ಮುಖದಲ್ಲಿ ನಿಂತು ಸ್ನೇಹದಿಂದ ನಿನ್ನನ್ನು ಕೇಳುತ್ತಿದ್ದೇನೆ. ಗೋಮತೀ ತೀರದಲ್ಲಿ ಏಕಾಂಗಿಯಾಗಿ ಯಾರನ್ನು ಉಪಾಸಿಸುತ್ತಿರುವೆ?”
12349005 ಬ್ರಾಹ್ಮಣ ಉವಾಚ|
12349005a ಧರ್ಮಾರಣ್ಯಂ ಹಿ ಮಾಂ ವಿದ್ಧಿ ನಾಗಂ ದ್ರಷ್ಟುಮಿಹಾಗತಮ್|
12349005c ಪದ್ಮನಾಭಂ ದ್ವಿಜಶ್ರೇಷ್ಠಂ ತತ್ರ ಮೇ ಕಾರ್ಯಮಾಹಿತಮ್||
ಬ್ರಾಹ್ಮಣನು ಹೇಳಿದನು: “ನನ್ನನ್ನು ಧರ್ಮಾರಣ್ಯನೆಂದು ತಿಳಿ. ಪದ್ಮನಾಭನೆಂಬ ದ್ವಿಜಶ್ರೇಷ್ಠ ನಾಗನನ್ನು ನೋಡಲು ಇಲ್ಲಿಗೆ ಬಂದಿದ್ದೇನೆ. ಅವನಲ್ಲಿ ನನಗೆ ಸ್ವಲ್ಪ ಕೆಲಸವಿದೆ.
12349006a ತಸ್ಯ ಚಾಹಮಸಾಂನಿಧ್ಯಂ ಶ್ರುತವಾನಸ್ಮಿ ತಂ ಗತಮ್|
12349006c ಸ್ವಜನಂ ತಂ ಪ್ರತೀಕ್ಷಾಮಿ ಪರ್ಜನ್ಯಮಿವ ಕರ್ಷಕಃ||
ಅವನು ಇಲ್ಲಿಲ್ಲವೆಂದೂ ಹೊರಗೆ ಹೋಗಿದ್ದಾನೆಂದೂ ಅವನ ಸ್ವಜನರಿಂದ ತಿಳಿದುಕೊಂಡೆ. ಕೃಷಿಕನು ಮಳೆಯನ್ನು ಹೇಗೋ ಹಾಗೆ ಅವನ ಪ್ರತೀಕ್ಷೆಯಲ್ಲಿದ್ದೇನೆ.
12349007a ತಸ್ಯ ಚಾಕ್ಲೇಶಕರಣಂ ಸ್ವಸ್ತಿಕಾರಸಮಾಹಿತಮ್|
12349007c ವರ್ತಯಾಮ್ಯಯುತಂ ಬ್ರಹ್ಮ ಯೋಗಯುಕ್ತೋ ನಿರಾಮಯಃ||
ಅವನಿಗೆ ಯಾವ ವಿಧದ ಕ್ಲೇಶವೂ ಉಂಟಾಗದೇ ಕುಶಲನಾಗಿ ಹಿಂದಿರುಗಲೆಂದು ನಾನು ನಿರಾಮಯನಾಗಿ ಯೋಗಯುಕ್ತನಾಗಿ ವೇದಪಾರಾಯಣವನ್ನು ಮಾಡುತ್ತಿದ್ದೇನೆ.”
12349008 ನಾಗ ಉವಾಚ|
12349008a ಅಹೋ ಕಲ್ಯಾಣವೃತ್ತಸ್ತ್ವಂ ಸಾಧು ಸಜ್ಜನವತ್ಸಲಃ|
12349008c ಶ್ರವಾಢ್ಯಸ್ತ್ವಂ[1] ಮಹಾಭಾಗ ಪರಂ ಸ್ನೇಹೇನ ಪಶ್ಯಸಿ||
ನಾಗನು ಹೇಳಿದನು: “ನಿನ್ನ ಆಚರಣೆಯು ಕಲ್ಯಾಣಮಯವಾಗಿದೆ. ನೀನು ಸಾಧು ಮತ್ತು ಸಜ್ಜನವತ್ಸಲನು. ಮಹಾಭಾಗ! ಯಾವುದೇ ಕಾರಣದಿಂದಲೂ ನೀನು ನಿಂದನೀಯನಲ್ಲ. ಇತರರನ್ನು ನೀನು ಪರಮ ಸ್ನೇಹದಿಂದ ಕಾಣುತ್ತಿದ್ದೀಯೆ.
12349009a ಅಹಂ ಸ ನಾಗೋ ವಿಪ್ರರ್ಷೇ ಯಥಾ ಮಾಂ ವಿಂದತೇ ಭವಾನ್|
12349009c ಆಜ್ಞಾಪಯ ಯಥಾ ಸ್ವೈರಂ ಕಿಂ ಕರೋಮಿ ಪ್ರಿಯಂ ತವ||
ವಿಪ್ರರ್ಷೇ! ಯಾರನ್ನು ನೀನು ಕಾಯುತ್ತಿದ್ದೀಯೋ ಆ ನಾಗನೇ ನಾನು. ನಿನಗೆ ಪ್ರಿಯವಾದ ಏನನ್ನು ಮಾಡಲಿ? ಆಜ್ಞಾಪಿಸು.
12349010a ಭವಂತಂ ಸ್ವಜನಾದಸ್ಮಿ ಸಂಪ್ರಾಪ್ತಂ ಶ್ರುತವಾನಿಹ|
12349010c ಅತಸ್ತ್ವಾಂ ಸ್ವಯಮೇವಾಹಂ ದ್ರಷ್ಟುಮಭ್ಯಾಗತೋ ದ್ವಿಜ||
ದ್ವಿಜ! ಸ್ವಜನರ ಮೂಲಕ ನಿನ್ನ ಆಗಮನದ ಕುರಿತು ಕೇಳಿದೆ. ಆದುದರಿಂದ ನಾನಾಗಿಯೇ ನಿನ್ನನ್ನು ಸಂದರ್ಶಿಸಲು ಬಂದಿದ್ದೇನೆ.
12349011a ಸಂಪ್ರಾಪ್ತಶ್ಚ ಭವಾನದ್ಯ ಕೃತಾರ್ಥಃ ಪ್ರತಿಯಾಸ್ಯತಿ|
12349011c ವಿಸ್ರಬ್ಧೋ ಮಾಂ ದ್ವಿಜಶ್ರೇಷ್ಠ ವಿಷಯೇ ಯೋಕ್ತುಮರ್ಹಸಿ||
ಇಲ್ಲಿಗೆ ಬಂದಿರುವ ನೀನು ಇಂದು ಕೃತಾರ್ಥನಾಗಿಯೇ ಹಿಂದಿರುಗುತ್ತೀಯೆ. ದ್ವಿಜಶ್ರೇಷ್ಠ! ಸಂದೇಹವಿಲ್ಲದೇ ವಿಷಯವನ್ನು ನನ್ನಲ್ಲಿ ಹೇಳಬೇಕು.
12349012a ವಯಂ ಹಿ ಭವತಾ ಸರ್ವೇ ಗುಣಕ್ರೀತಾ ವಿಶೇಷತಃ|
12349012c ಯಸ್ತ್ವಮಾತ್ಮಹಿತಂ ತ್ಯಕ್ತ್ವಾ ಮಾಮೇವೇಹಾನುರುಧ್ಯಸೇ||
ಆತ್ಮಹಿತವನ್ನೂ ಪರಿತ್ಯಜಿಸಿ ನನ್ನ ಕಲ್ಯಾಣವನ್ನೇ ಚಿಂತಿಸುತ್ತಿರುವ ನೀನು ನನ್ನನ್ನೂ ನನ್ನ ಬಂಧುಗಳನ್ನೂ ನಿನ್ನ ವಿಶೇಷ ಗುಣಗಳಿಂದ ಕೊಂಡುಕೊಂಡುಬಿಟ್ಟಿರುವೆ.”
12349013 ಬ್ರಾಹ್ಮಣ ಉವಾಚ|
12349013a ಆಗತೋಽಹಂ ಮಹಾಭಾಗ ತವ ದರ್ಶನಲಾಲಸಃ|
12349013c ಕಂ ಚಿದರ್ಥಮನರ್ಥಜ್ಞಃ ಪ್ರಷ್ಟುಕಾಮೋ ಭುಜಂಗಮ||
ಬ್ರಾಹ್ಮಣನು ಹೇಳಿದನು: “ಭುಜಂಗಮ! ಮಹಾಭಾಗ! ನಿನ್ನ ದರ್ಶನಲಾಲಸನಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನನಗೆ ತಿಳಿಯದೇ ಇರುವ ಒಂದು ವಿಷಯವನ್ನು ಕೇಳಲು ಬಯಸಿದ್ದೇನೆ.
12349014a ಅಹಮಾತ್ಮಾನಮಾತ್ಮಸ್ಥೋ ಮಾರ್ಗಮಾಣೋಽತ್ಮನೋ ಹಿತಮ್[2]|
12349014c ವಾಸಾರ್ಥಿನಂ ಮಹಾಪ್ರಾಜ್ಞ ಬಲವಂತಮುಪಾಸ್ಮಿ[3] ಹ||
ಮಹಾಪ್ರಾಜ್ಞ! ನಾನು ಆತ್ಮನನ್ನು ಆತ್ಮನಲ್ಲಿಯೇ ಸ್ಥಿರೀಕರಿಸಿ ಆತ್ಮಹಿತ ಮಾರ್ಗವನ್ನು ಅನುಸರಿಸಲು ಬಯಸುತ್ತೇನೆ. ಆದರೆ ಗೃಹಸ್ಥಾಶ್ರಮದಲ್ಲಿಯೇ ಇರುವ ಬಲವಾದ ಬಯಕೆಯನ್ನೂ ಹೊಂದಿದ್ದೇನೆ.
12349015a ಪ್ರಕಾಶಿತಸ್ತ್ವಂ ಸ್ವಗುಣೈರ್ಯಶೋಗರ್ಭಗಭಸ್ತಿಭಿಃ|
12349015c ಶಶಾಂಕಕರಸಂಸ್ಪರ್ಶೈರ್ಹೃದ್ಯೈರಾತ್ಮಪ್ರಕಾಶಿತೈಃ||
ಚಂದ್ರನಂತೆ ಸುಖಸ್ಪರ್ಶಿಗಳಾದ ಯಶೋಗರ್ಭ ಕಿರಣಗಳಂಥಹ ಸ್ವಗುಣಗಳಿಂದ ಕೂಡಿದ್ದು ನೀನು ಆತ್ಮಪ್ರಕಾಶದಿಂದ ಪ್ರಕಾಶಿತನಾಗಿರುವೆ.
12349016a ತಸ್ಯ ಮೇ ಪ್ರಶ್ನಮುತ್ಪನ್ನಂ ಚಿಂಧಿ ತ್ವಮನಿಲಾಶನ|
12349016c ಪಶ್ಚಾತ್ಕಾರ್ಯಂ ವದಿಷ್ಯಾಮಿ ಶ್ರೋತುಮರ್ಹತಿ ಮೇ ಭವಾನ್||
ಅನಿಲಾಶನ! ನನ್ನಲ್ಲಿ ಒಂದು ಪ್ರಶ್ನೆಯು ಉತ್ಪನ್ನವಾಗಿದೆ. ಅದನ್ನು ಹೋಗಲಾಡಿಸು. ಅನಂತರ ನಾನು ಬಂದ ಕಾರ್ಯದ ಕುರಿತು ಹೇಳುತ್ತೇನೆ. ಅದನ್ನು ನೀನು ಕೇಳಬೇಕು.”
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ಏಕೋನಪಂಚಾಶದಧಿಕತ್ರಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ತೊಂಭತ್ತನೇ ಅಧ್ಯಾಯವು.
[1] ಅವಾಚ್ಯಸ್ತ್ವಂ ಎಂಬ ಪಾಠಾಂತರವಿದೆ (ಭಾರತದರ್ಶನ).
[2] ಗತಿಮ್| ಎಂಬ ಪಾಠಾಂತರವಿದೆ (ಭಾರತದರ್ಶನ).
[3] ಚಲಚ್ಚಿತ್ತಮುಪಾಸ್ಮಿ ಎಂಬ ಪಾಠಾಂತರವಿದೆ (ಭಾರತದರ್ಶನ).