ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೩೪೩
12343001 ಅತಿಥಿರುವಾಚ|
12343001a ಉಪದೇಶಂ ತು ತೇ ವಿಪ್ರ ಕರಿಷ್ಯೇಽಹಂ ಯಥಾಗಮಮ್|
12343001c ಗುರುಣಾ ಮೇ ಯಥಾಖ್ಯಾತಮರ್ಥತಸ್ತಚ್ಚ ಮೇ ಶೃಣು||
ಅತಿಥಿಯು ಹೇಳಿದನು: “ವಿಪ್ರ! ನನ್ನ ಗುರುವು ಈ ವಿಷಯದಲ್ಲಿ ನನಗೆ ಯಾವ ತತ್ತ್ವಾರ್ಥಯುಕ್ತ ಮಾತುಗಳನ್ನು ಹೇಳಿದ್ದನೋ ಅದನ್ನೇ ನಿನಗೆ ಹೇಳುತ್ತೇನೆ. ಕೇಳು.
12343002a ಯತ್ರ ಪೂರ್ವಾಭಿಸರ್ಗೇಣ ಧರ್ಮಚಕ್ರಂ ಪ್ರವರ್ತಿತಮ್|
12343002c ನೈಮಿಷೇ ಗೋಮತೀತೀರೇ ತತ್ರ ನಾಗಾಹ್ವಯಂ ಪುರಮ್||
ಎಲ್ಲಿ ಹಿಂದಿನ ಕಲ್ಪದಂತೆ ಧರ್ಮಚಕ್ರವು ಉರುಳಿತೋ ಆ ಗೋಮತಿ ತೀರದ ನೈಮಿಷದಲ್ಲಿ ನಾಗ ಎಂಬ ಪುರವಿದೆ.
12343003a ಸಮಗ್ರೈಸ್ತ್ರಿದಶೈಸ್ತತ್ರ ಇಷ್ಟಮಾಸೀದ್ದ್ವಿಜರ್ಷಭ|
12343003c ಯತ್ರೇಂದ್ರಾತಿಕ್ರಮಂ ಚಕ್ರೇ ಮಾಂಧಾತಾ ರಾಜಸತ್ತಮಃ||
ದ್ವಿಜರ್ಷಭ! ಅಲ್ಲಿ ದೇವತೆಗಳೆಲ್ಲರೂ ಯಾಗವನ್ನು ಮಾಡಿದ್ದರು. ಅಲ್ಲಿಯೇ ರಾಜಸತ್ತಮ ಮಾಂಧಾತನೂ ಕೂಡ ಇಂದ್ರನನ್ನೂ ಮೀರಿಸಿ ಯಜ್ಞಮಾಡಿದ್ದನು.
12343004a ಕೃತಾಧಿವಾಸೋ ಧರ್ಮಾತ್ಮಾ ತತ್ರ ಚಕ್ಷುಃಶ್ರವಾ ಮಹಾನ್|
12343004c ಪದ್ಮನಾಭೋ ಮಹಾಭಾಗಃ ಪದ್ಮ ಇತ್ಯೇವ ವಿಶ್ರುತಃ||
ಅಲ್ಲಿ ಪದ್ಮನಾಭ ಎನ್ನುವ ಮಹಾಭಾಗ ಧರ್ಮಾತ್ಮಾ ಮಹಾ ನಾಗನು ವಾಸಿಸುತ್ತಿದ್ದಾನೆ. ಅವನು ಪದ್ಮ ಎಂದೇ ವಿಶ್ರುತನಾಗಿದ್ದಾನೆ.
12343005a ಸ ವಾಚಾ ಕರ್ಮಣಾ ಚೈವ ಮನಸಾ ಚ ದ್ವಿಜರ್ಷಭ|
12343005c ಪ್ರಸಾದಯತಿ ಭೂತಾನಿ ತ್ರಿವಿಧೇ ವರ್ತ್ಮನಿ ಸ್ಥಿತಃ||
ದ್ವಿಜರ್ಷಭ! ಅವನು ಮಾತು, ಕರ್ಮ ಮತ್ತು ಮನಸ್ಸುಗಳ ಮೂಲಕ ಕರ್ಮ, ಉಪಾಸನೆ ಮತ್ತು ಜ್ಞಾನ ಈ ಮೂರು ವಿಧದ ಮಾರ್ಗಗಳನ್ನೂ ಆಶ್ರಯಿಸಿ ಸರ್ವಭೂತಗಳನ್ನೂ ಪ್ರಸನ್ನಗೊಳಿಸಿದ್ದಾನೆ.
12343006a ಸಾಮ್ನಾ ದಾನೇನ ಭೇದೇನ ದಂಡೇನೇತಿ ಚತುರ್ವಿಧಮ್|
12343006c ವಿಷಮಸ್ಥಂ ಜನಂ ಸ್ವಂ ಚ ಚಕ್ಷುರ್ಧ್ಯಾನೇನ ರಕ್ಷತಿ||
ಕುಮಾರ್ಗಿ ಜನರನ್ನು ಸಾಮ, ದಾನ, ಭೇದ ಮತ್ತು ದಂಡವೆನ್ನುವ ನಾಲ್ಕು ವಿಧದ ಉಪಾಯಗಳಿಂದ ಸನ್ಮಾರ್ಗಕ್ಕೆ ತರುತ್ತಾನೆ. ಧ್ಯಾನ ಚಕ್ಷುವಿನಿಂದ ರಕ್ಷಿಸುತ್ತಾನೆ.
12343007a ತಮಭಿಕ್ರಮ್ಯ ವಿಧಿನಾ ಪ್ರಷ್ಟುಮರ್ಹಸಿ ಕಾಂಕ್ಷಿತಮ್|
12343007c ಸ ತೇ ಪರಮಕಂ ಧರ್ಮಂ ನಮಿಥ್ಯಾ ದರ್ಶಯಿಷ್ಯತಿ||
ಅವನ ಬಳಿಸಾರಿ ನಿನಗಿಷ್ಟವಾದುದನ್ನು ವಿಧಿಪೂರ್ವಕವಾಗಿ ಕೇಳಬಹುದು. ಅವನು ನಿನಗೆ ಪರಮ ಧರ್ಮವನ್ನೇ ತೋರಿಸಿಕೊಡುತ್ತಾನೆ. ಮಿಥ್ಯಾಧರ್ಮವನ್ನಲ್ಲ.
12343008a ಸ ಹಿ ಸರ್ವಾತಿಥಿರ್ನಾಗೋ ಬುದ್ಧಿಶಾಸ್ತ್ರವಿಶಾರದಃ|
12343008c ಗುಣೈರನವಮೈರ್ಯುಕ್ತಃ ಸಮಸ್ತೈರಾಭಿಕಾಮಿಕೈಃ||
ಆ ಬುದ್ಧಿಶಾಸ್ತ್ರವಿಶಾರದ ನಾಗನು ಸರ್ವ ಅತಿಥಿಗಳನ್ನೂ ಸತ್ಕರಿಸುತ್ತಾನೆ. ಅನುಪಮ ಗುಣಯುಕ್ತನೂ ಸಮಸ್ತರ ಪ್ರೀತಿಪಾತ್ರನೂ ಆಗಿದ್ದಾನೆ.
12343009a ಪ್ರಕೃತ್ಯಾ ನಿತ್ಯಸಲಿಲೋ ನಿತ್ಯಮಧ್ಯಯನೇ ರತಃ|
12343009c ತಪೋದಮಾಭ್ಯಾಂ ಸಂಯುಕ್ತೋ ವೃತ್ತೇನಾನವರೇಣ ಚ||
ಸ್ವಭಾವದಲ್ಲಿ ಅವನು ನೀರಿನಂತೆ ನಿತ್ಯ ನಿರ್ಮಲನು. ನಿತ್ಯವೂ ಅಧ್ಯಯನದಲ್ಲಿ ನಿರತನಾಗಿರುವವನು. ತಪಸ್ಸು ಮತ್ತು ಇಂದ್ರಿಯನಿಗ್ರಹ ಸಂಯುಕ್ತನಾಗಿರುವವನು. ಉತ್ತಮವಾಗಿ ನಡೆದುಕೊಳ್ಳುವವನು.
12343010a ಯಜ್ವಾ ದಾನರುಚಿಃ ಕ್ಷಾಂತೋ ವೃತ್ತೇ ಚ ಪರಮೇ ಸ್ಥಿತಃ|
12343010c ಸತ್ಯವಾಗನಸೂಯುಶ್ಚ ಶೀಲವಾನಭಿಸಂಶ್ರಿತಃ||
ಅವನು ಯಜ್ಞಶೀಲನು. ದಾನಿಗಳಲ್ಲಿ ಶ್ರೇಷ್ಠನು. ಕ್ಷಮಾಶೀಲನು. ಸದಾಚಾರಿಯು. ಸತ್ಯವಾನನು. ಅಸೂಯಾರಹಿತನು. ಶೀಲವಂತನು ಮತ್ತು ಜಿತೇಂದ್ರಿಯನು.
12343011a ಶೇಷಾನ್ನಭೋಕ್ತಾ ವಚನಾನುಕೂಲೋ
ಹಿತಾರ್ಜವೋತ್ಕೃಷ್ಟಕೃತಾಕೃತಜ್ಞಃ|
12343011c ಅವೈರಕೃದ್ ಭೂತಹಿತೇ ನಿಯುಕ್ತೋ
ಗಂಗಾಹ್ರದಾಂಭೋಽಭಿಜನೋಪಪನ್ನಃ||
ಶೇಷಾನ್ನವನ್ನೇ ಅವನು ಉಣ್ಣುತ್ತಾನೆ. ಅನುಕೂಲಕರ ಮಾತುಗಳನ್ನೇ ಆಡುತ್ತಾನೆ. ಸರ್ವಹಿತನು. ಸರಳನು. ಉತ್ಕೃಷ್ಟ ಕರ್ಮಗಳು ಮತ್ತು ಅಕರ್ಮಗಳ ಕುರಿತು ತಿಳಿದವನು. ವೈರವಿಲ್ಲದವನು. ಸರ್ವಭೂತಗಳಿಗೂ ಹಿತನಾಗಿರುವವನು. ಗಂಗಾನದಿಯಂಥ ಪಾವನ ಕುಲದಲ್ಲಿ ಹುಟ್ಟಿದವನು.”
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ತ್ರಿಚತ್ವಾರಿಂಶಾಧಿಕತ್ರಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ಮೂರನೇ ಅಧ್ಯಾಯವು.