Shanti Parva: Chapter 332

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೩೨

ನರನಾರಾಯಣರು ನಾರದನಿಗೆ ವಾಸುದೇವನ ಮಾಹಾತ್ಮ್ಯವನ್ನು ಹೇಳಿದುದು (1-26).

12332001 ನರನಾರಾಯಣಾವೂಚತುಃ|

12332001a ಧನ್ಯೋಽಸ್ಯನುಗೃಹೀತೋಽಸಿ ಯತ್ತೇ ದೃಷ್ಟಃ ಸ್ವಯಂ ಪ್ರಭುಃ|

12332001c ನ ಹಿ ತಂ ದೃಷ್ಟವಾನ್ಕಶ್ಚಿತ್ಪದ್ಮಯೋನಿರಪಿ ಸ್ವಯಮ್||

ನರನಾರಾಯಣರು ಹೇಳಿದರು: “ಸ್ವಯಂ ಪ್ರಭುವನ್ನು ನೋಡಿದ ನೀನು ಧನ್ಯನು. ಅನುಗೃಹೀತನು. ಸ್ವಯಂ ಪದ್ಮಯೋನಿಯೂ ಅವನನ್ನು ಎಂದೂ ನೋಡಿರುವುದಿಲ್ಲ.

12332002a ಅವ್ಯಕ್ತಯೋನಿರ್ಭಗವಾನ್ದುರ್ದರ್ಶಃ ಪುರುಷೋತ್ತಮಃ|

12332002c ನಾರದೈತದ್ಧಿ ತೇ ಸತ್ಯಂ ವಚನಂ ಸಮುದಾಹೃತಮ್||

ಅವ್ಯಕ್ತಯೋನಿ ಭಗವಾನ್ ಪುರುಷೋತ್ತಮನು ಸುಲಭವಾಗಿ ನೋಡಲ್ಪಡತಕ್ಕವನಲ್ಲ. ನಾರದ! ನಿನಗೆ ಸತ್ಯವನ್ನೇ ಹೇಳುತ್ತಿದ್ದೇವೆ ಎಂದು ತಿಳಿ.

12332003a ನಾಸ್ಯ ಭಕ್ತೈಃ ಪ್ರಿಯತರೋ ಲೋಕೇ ಕಶ್ಚನ ವಿದ್ಯತೇ|

12332003c ತತಃ ಸ್ವಯಂ ದರ್ಶಿತವಾನ್ ಸ್ವಮಾತ್ಮಾನಂ ದ್ವಿಜೋತ್ತಮ||

ದ್ವಿಜೋತ್ತಮ! ಅವನಿಗೆ ಭಕ್ತರಿಗಿಂತಲೂ ಪ್ರಿಯತಮರು ಈ ಲೋಕದಲ್ಲಿ ಬೇರೆ ಯಾವುದೂ ಇಲ್ಲ. ಆದುದರಿಂದಲೇ ಅವನು ನಿನಗೆ ತಾನಾಗಿಯೇ ದರ್ಶನವನ್ನಿತ್ತಿದ್ದಾನೆ.

12332004a ತಪೋ ಹಿ ತಪ್ಯತಸ್ತಸ್ಯ ಯತ್ ಸ್ಥಾನಂ ಪರಮಾತ್ಮನಃ|

12332004c ನ ತತ್ಸಂಪ್ರಾಪ್ನುತೇ ಕಶ್ಚಿದೃತೇ ಹ್ಯಾವಾಂ ದ್ವಿಜೋತ್ತಮ||

ದ್ವಿಜೋತ್ತಮ! ಆ ಪರಮಾತ್ಮನು ಎಲ್ಲಿ ತಪಸ್ಸನ್ನು ತಪಿಸುತ್ತಿದ್ದನೋ ಆ ಸ್ಥಳಕ್ಕೆ ನಮ್ಮಿಬ್ಬರನ್ನು ಬಿಟ್ಟು ಬೇರೆ ಯಾರೂ ಹೋಗಲಾರರು.

12332005a ಯಾ ಹಿ ಸೂರ್ಯಸಹಸ್ರಸ್ಯ ಸಮಸ್ತಸ್ಯ ಭವೇದ್ದ್ಯುತಿಃ|

12332005c ಸ್ಥಾನಸ್ಯ ಸಾ ಭವೇತ್ತಸ್ಯ ಸ್ವಯಂ ತೇನ ವಿರಾಜತಾ||

ಸಹಸ್ರ ಸೂರ್ಯರು ಒಟ್ಟಾಗಿ ಸೇರಿದರೆ ಯಾವ ಪ್ರಕಾಶವುಂಟಾಗುತ್ತದೆಯೋ ಅಷ್ಟೇ ಕಾಂತಿಯಿಂದ ಸ್ವಯಂ ಪ್ರಕಾಶನಾದ ಭಗವಂತನು ವಿರಾಜಿಸುತ್ತಾನೆ.

12332006a ತಸ್ಮಾದುತ್ತಿಷ್ಠತೇ ವಿಪ್ರ ದೇವಾದ್ವಿಶ್ವಭುವಃ ಪತೇಃ|

12332006c ಕ್ಷಮಾ ಕ್ಷಮಾವತಾಂ ಶ್ರೇಷ್ಠ ಯಯಾ ಭೂಮಿಸ್ತು ಯುಜ್ಯತೇ||

ವಿಪ್ರ! ಕ್ಷಮಾವಂತರಲ್ಲಿ ಶ್ರೇಷ್ಠ! ವಿಶ್ವಭುವನಿಗೂ ಒಡೆಯನಾದ ಆ ದೇವನಿಂದಲೇ ಕ್ಷಮೆಯು ಹುಟ್ಟಿದೆ. ಕ್ಷಮಾಗುಣದಿಂದಲೇ ಭೂಮಿಯು ಸಂಯೋಜಿತವಾಗಿದೆ.

12332007a ತಸ್ಮಾಚ್ಚೋತ್ತಿಷ್ಠತೇ ದೇವಾತ್ಸರ್ವಭೂತಹಿತೋ ರಸಃ|

12332007c ಆಪೋ ಯೇನ ಹಿ ಯುಜ್ಯಂತೇ ದ್ರವತ್ವಂ ಪ್ರಾಪ್ನುವಂತಿ ಚ||

ಸರ್ವಭೂತಹಿತನಾದ ಆ ದೇವನಿಂದಲೇ ರಸವು ಹುಟ್ಟಿದೆ. ಅದು ಆಪದೊಂದಿಗೆ ಸಂಯೋಜಿಸಿ ದ್ರವತ್ವವನ್ನು ಪಡೆದುಕೊಂಡಿದೆ.

12332008a ತಸ್ಮಾದೇವ ಸಮುದ್ಭೂತಂ ತೇಜೋ ರೂಪಗುಣಾತ್ಮಕಮ್|

12332008c ಯೇನ ಸ್ಮ ಯುಜ್ಯತೇ ಸೂರ್ಯಸ್ತತೋ ಲೋಕಾನ್ವಿರಾಜತೇ||

ಆ ದೇವನಿಂದಲೇ ರೂಪಗುಣಾತ್ಮಕವಾದ ತೇಜಸ್ಸು ಹುಟ್ಟಿಕೊಂಡಿತು. ಅದರಿಂದ ಯುಕ್ತನಾದ ಸೂರ್ಯನು ಲೋಕಗಳನ್ನು ಬೆಳಗಿಸುತ್ತಾನೆ.

12332009a ತಸ್ಮಾದ್ದೇವಾತ್ಸಮುದ್ಭೂತಃ ಸ್ಪರ್ಶಸ್ತು ಪುರುಷೋತ್ತಮಾತ್|

12332009c ಯೇನ ಸ್ಮ ಯುಜ್ಯತೇ ವಾಯುಸ್ತತೋ ಲೋಕಾನ್ವಿವಾತ್ಯಸೌ||

ಆ ದೇವ ಪುರುಷೋತ್ತಮನಿಂದಲೇ ಸ್ಪರ್ಶವು ಹುಟ್ಟಿಕೊಂಡಿತು. ಅದರಿಂದ ಯುಕ್ತನಾದ ವಾಯುವು ಲೋಕಗಳಲ್ಲಿ ಬೀಸುತ್ತಿರುತ್ತಾನೆ.

12332010a ತಸ್ಮಾಚ್ಚೋತ್ತಿಷ್ಠತೇ ಶಬ್ದಃ ಸರ್ವಲೋಕೇಶ್ವರಾತ್ಪ್ರಭೋಃ|

12332010c ಆಕಾಶಂ ಯುಜ್ಯತೇ ಯೇನ ತತಸ್ತಿಷ್ಠತ್ಯಸಂವೃತಮ್||

ಸರ್ವಲೋಕೇಶ್ವರನಾದ ಆ ಪ್ರಭುವಿನಿಂದ ಶಬ್ದವೂ ಹುಟ್ಟಿಕೊಂಡಿತು. ಅದರಿಂದ ಆಕಾಶವು ಯುಕ್ತವಾಗಿ ಯಾವಾಗಲೂ ಅನಾವೃತವಾಗಿಯೇ ಇರುತ್ತದೆ.

12332011a ತಸ್ಮಾಚ್ಚೋತ್ತಿಷ್ಠತೇ ದೇವಾತ್ಸರ್ವಭೂತಗತಂ ಮನಃ|

12332011c ಚಂದ್ರಮಾ ಯೇನ ಸಂಯುಕ್ತಃ ಪ್ರಕಾಶಗುಣಧಾರಣಃ||

ಅವನಿಂದಲೇ ಎಲ್ಲ ಪ್ರಾಣಿಗಳಿಗೂ ಅಂತರ್ಗತವಾಗಿರುವ ಮನಸ್ಸು ಹುಟ್ಟಿದೆ. ಅದರಿಂದ ಸಂಯುಕ್ತನಾದ ಚಂದ್ರನು ಪ್ರಕಾಶಗುಣವನ್ನು ಧರಿಸಿರುತ್ತಾನೆ.

12332012a ಷಡ್ಭೂತೋತ್ಪಾದಕಂ[1] ನಾಮ ತತ್ಸ್ಥಾನಂ ವೇದಸಂಜ್ಞಿತಮ್|

12332012c ವಿದ್ಯಾಸಹಾಯೋ ಯತ್ರಾಸ್ತೇ ಭಗವಾನ್ ಹವ್ಯಕವ್ಯಭುಕ್||

ಹವ್ಯಕವ್ಯಭುಕ್ ಭಗವಾನನು ವಿದ್ಯಾಶಕ್ರಿಯೊಡನಿರುವ ಆ ಸ್ಥಾನವು “ಷಡ್ಭೂತೋತ್ಪಾದಕಂ” ಎಂದು ವೇದಗಳಲ್ಲಿ ಸಂಜ್ಞಿತವಾಗಿದೆ.

12332013a ಯೇ ಹಿ ನಿಷ್ಕಲ್ಮಷಾ ಲೋಕೇ ಪುಣ್ಯಪಾಪವಿವರ್ಜಿತಾಃ|

12332013c ತೇಷಾಂ ವೈ ಕ್ಷೇಮಮಧ್ವಾನಂ ಗಚ್ಚತಾಂ ದ್ವಿಜಸತ್ತಮ|

12332013e ಸರ್ವಲೋಕತಮೋಹಂತಾ ಆದಿತ್ಯೋ ದ್ವಾರಮುಚ್ಯತೇ||

ದ್ವಿಜಸತ್ತಮ! ಲೋಕದಲ್ಲಿ ಪುಣ್ಯಪಾಪವಿವರ್ಜಿತರಾಗಿ ನಿಷ್ಕಲ್ಮಷರಾಗಿ ಕ್ಷೇಮಕರ ಮಾರ್ಗದಿಂದ ಅಲ್ಲಿಗೆ ಹೋಗುವವರಿಗೆ ಸರ್ಮಲೋಕಗಳ ಕತ್ತಲೆಯನ್ನೂ ಹೋಗಲಾಡಿಸುವ ಆದಿತ್ಯನೇ ದ್ವಾರವೆಂದು ಹೇಳುತ್ತಾರೆ.

12332014a ಆದಿತ್ಯದಗ್ಧಸರ್ವಾಂಗಾ ಅದೃಶ್ಯಾಃ ಕೇನ ಚಿತ್ಕ್ವ ಚಿತ್|

12332014c ಪರಮಾಣುಭೂತಾ ಭೂತ್ವಾ ತು ತಂ ದೇವಂ ಪ್ರವಿಶಂತ್ಯುತ||

ಆದಿತ್ಯನಿಂದ ಸರ್ವಾಂಗಗಳೂ ಸುಟ್ಟು ಯಾರಿಗೂ ಕಾಣಿಸದೇ ಪರಮಾಣುಗಳಾಗಿ ಅವರು ದೇವ ಆದಿತ್ಯನನ್ನು ಪ್ರವೇಶಿಸುತ್ತಾರೆ ಎಂದು ಹೇಳುತ್ತಾರೆ.

12332015a ತಸ್ಮಾದಪಿ ವಿನಿರ್ಮುಕ್ತಾ ಅನಿರುದ್ಧತನೌ ಸ್ಥಿತಾಃ|

12332015c ಮನೋಭೂತಾಸ್ತತೋ ಭೂಯಃ ಪ್ರದ್ಯುಮ್ನಂ ಪ್ರವಿಶಂತ್ಯುತ||

ಅಲ್ಲಿಂದಲೂ ನಿರ್ಮುಕ್ತರಾಗಿ ಅನಿರುದ್ಧನ ಶರೀರದಲ್ಲಿ ಸೇರುತ್ತಾರೆ. ಅನಂತರ ಅವರು ಮನೋಭೂತರಾಗಿ ಪುನಃ ಪ್ರದ್ಯುಮ್ನನನ್ನು ಪ್ರವೇಶಿಸುತ್ತಾರೆ.

12332016a ಪ್ರದ್ಯುಮ್ನಾಚ್ಚಾಪಿ ನಿರ್ಮುಕ್ತಾ ಜೀವಂ ಸಂಕರ್ಷಣಂ ತಥಾ|

12332016c ವಿಶಂತಿ ವಿಪ್ರಪ್ರವರಾಃ ಸಾಂಖ್ಯಾ ಭಾಗವತೈಃ ಸಹ||

ಪ್ರದ್ಯುಮ್ನನಿಂದಲೂ ಹೊರಬಂದು ಆ ವಿಪ್ರಪ್ರವರರು ಸಾಖ್ಯಜ್ಞಾನಿಗಳು ಮತ್ತು ಭಾಗವತರೊಂದಿಗೆ ಜೀವ ಸಂಕರ್ಷಣನನ್ನು ಪ್ರವೇಶಿಸುತ್ತಾರೆ.

12332017a ತತಸ್ತ್ರೈಗುಣ್ಯಹೀನಾಸ್ತೇ ಪರಮಾತ್ಮಾನಮಂಜಸಾ|

12332017c ಪ್ರವಿಶಂತಿ ದ್ವಿಜಶ್ರೇಷ್ಠ ಕ್ಷೇತ್ರಜ್ಞಂ ನಿರ್ಗುಣಾತ್ಮಕಮ್|

12332017e ಸರ್ವಾವಾಸಂ ವಾಸುದೇವಂ ಕ್ಷೇತ್ರಜ್ಞಂ ವಿದ್ಧಿ ತತ್ತ್ವತಃ||

ದ್ವಿಜಶ್ರೇಷ್ಠ! ಅನಂತರ ತ್ರಿಗುಣಗಳಿಂದ ವಿಹೀನರಾದ ಅವರು ನಿರ್ಗುಣಾತ್ಮಕ ಕ್ಷೇತ್ರಜ್ಞನನ್ನು ಅನಾಯಾಸವಾಗಿ ಪ್ರವೇಶಿಸುತ್ತಾರೆ. ಸರ್ವಕ್ಕೂ ಆವಾಸಸ್ಥಾನನಾಗಿರುವ ವಾಸುದೇವನೇ ಕ್ಷೇತ್ರಜ್ಞನೆಂದು ತತ್ತ್ವತಃ ತಿಳಿದುಕೋ.

12332018a ಸಮಾಹಿತಮನಸ್ಕಾಶ್ಚ ನಿಯತಾಃ ಸಂಯತೇಂದ್ರಿಯಾಃ|

12332018c ಏಕಾಂತಭಾವೋಪಗತಾ ವಾಸುದೇವಂ ವಿಶಂತಿ ತೇ||

ಸಮಾಹಿತ ಮನಸ್ಸುಳ್ಳವರಾಗಿ ನಿಯತರಾಗಿ ಇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡು ಏಕಾಂತಭಾವವನ್ನು ಹೊಂದಿದ ಅವರು ವಸುದೇವನನ್ನು ಪ್ರವೇಶಿಸುತ್ತಾರೆ.

12332019a ಆವಾಮಪಿ ಚ ಧರ್ಮಸ್ಯ ಗೃಹೇ ಜಾತೌ ದ್ವಿಜೋತ್ತಮ|

12332019c ರಮ್ಯಾಂ ವಿಶಾಲಾಮಾಶ್ರಿತ್ಯ ತಪ ಉಗ್ರಂ ಸಮಾಸ್ಥಿತೌ||

ದ್ವಿಜೋತ್ತಮ! ನಾವಾದರೋ ಧರ್ಮನ ಮನೆಯಲ್ಲಿ ಹುಟ್ಟಿದ್ದೇವೆ. ರಮ್ಯವಾದ ವಿಶಾಲ ಬದರಿಕಾಶ್ರಮದಲ್ಲಿ ಉಗ್ರತಪಸ್ಸಿನಲ್ಲಿ ನಿರತರಾಗಿದ್ದೇವೆ.

12332020a ಯೇ ತು ತಸ್ಯೈವ ದೇವಸ್ಯ ಪ್ರಾದುರ್ಭಾವಾಃ ಸುರಪ್ರಿಯಾಃ|

12332020c ಭವಿಷ್ಯಂತಿ ತ್ರಿಲೋಕಸ್ಥಾಸ್ತೇಷಾಂ ಸ್ವಸ್ತೀತ್ಯತೋ ದ್ವಿಜ||

ದ್ವಿಜ! ಮೂರು ಲೋಕಗಳಲ್ಲಿಯೂ ಆಗುವ ಆ ದೇವನ ಸುರಪ್ರಿಯ ಅವತಾರಗಳು ಮಂಗಳಕರವಾಗಿರಲಿ ಎಂಬುದೇ ನಮ್ಮ ಈ ತಪಸ್ಸಿನ ಉದ್ದೇಶವಾಗಿದೆ.

12332021a ವಿಧಿನಾ ಸ್ವೇನ ಯುಕ್ತಾಭ್ಯಾಂ ಯಥಾಪೂರ್ವಂ ದ್ವಿಜೋತ್ತಮ|

12332021c ಆಸ್ಥಿತಾಭ್ಯಾಂ ಸರ್ವಕೃಚ್ಚ್ರಂ ವ್ರತಂ ಸಮ್ಯಕ್ತದುತ್ತಮಮ್||

ದ್ವಿಜೋತ್ತಮ! ನಾವು ಹಿಂದಿನಂತೆಯೇ ನಮ್ಮ ವಿಧ್ಯುಕ್ತ ಕರ್ಮಗಳಲ್ಲಿ ತೊಡಗಿದ್ದು ಶ್ರೇಷ್ಠವಾದ ಸರ್ವಕೃಚ್ಛ್ರವೆಂಬ ವ್ರತವನ್ನು ಆಶ್ರಯಿಸಿದ್ದೇವೆ.

12332022a ಆವಾಭ್ಯಾಮಪಿ ದೃಷ್ಟಸ್ತ್ವಂ ಶ್ವೇತದ್ವೀಪೇ ತಪೋಧನ|

12332022c ಸಮಾಗತೋ ಭಗವತಾ ಸಂಜಲ್ಪಂ ಕೃತವಾನ್ಯಥಾ||

ತಪೋಧನ! ನಾವೂ ಕೂಡ ನಿನ್ನನ್ನು ಶ್ವೇತದ್ವೀಪದಲ್ಲಿ ನೋಡಿದೆವು. ಸ್ತೊತ್ರಮಾಡುತ್ತಿದ್ದ ನಿನ್ನೊಡನೆ ಭಗವಂತನು ಮಾತನಾಡಿದನು.

12332023a ಸರ್ವಂ ಹಿ ನೌ ಸಂವಿದಿತಂ ತ್ರೈಲೋಕ್ಯೇ ಸಚರಾಚರೇ|

12332023c ಯದ್ಭವಿಷ್ಯತಿ ವೃತ್ತಂ ವಾ ವರ್ತತೇ ವಾ ಶುಭಾಶುಭಮ್||

ಮೂರುಲೋಕಗಳ ಚರಾಚರಗಳಲ್ಲಿ ಭವಿಷ್ಯದಲ್ಲಿ ಏನು ಆಗುತ್ತದೆ, ಹಿಂದೆ ಏನು ಆಗಿತ್ತು ಮತ್ತು ಈಗ ಏನು ಆಗುತ್ತಿದೆ ಎಂಬ ಶುಭಾಶುಭಗಳೆಲ್ಲವೂ ನಮಗೆ ತಿಳಿದಿದೆ.”

12332024 ವೈಶಂಪಾಯನ ಉವಾಚ|

12332024a ಏತಚ್ಚ್ರುತ್ವಾ ತಯೋರ್ವಾಕ್ಯಂ ತಪಸ್ಯುಗ್ರೇಽಭ್ಯವರ್ತತ|

12332024c ನಾರದಃ ಪ್ರಾಂಜಲಿರ್ಭೂತ್ವಾ ನಾರಾಯಣಪರಾಯಣಃ||

ವೈಶಂಪಾಯನನು ಹೇಳಿದನು: “ಅವರಿಬ್ಬರ ಮಾತನ್ನು ಕೇಳಿ ನಾರಾಯಣಪರಾಯಣನಾದ ನಾರದನು ಅಂಜಲೀಬದ್ಧನಾಗಿ ಉಗ್ರ ತಪಸ್ಸಿನಲ್ಲಿ ತೊಡಗಿದನು.

12332025a ಜಜಾಪ ವಿಧಿವನ್ಮಂತ್ರಾನ್ನಾರಾಯಣಗತಾನ್ಬಹೂನ್|

12332025c ದಿವ್ಯಂ ವರ್ಷಸಹಸ್ರಂ ಹಿ ನರನಾರಾಯಣಾಶ್ರಮೇ||

ನಾರಾಯಣನಿಗೆ ಸಂಬಂಧಿಸಿದ ಮಂತ್ರಗಳನ್ನು ವಿಧಿವತ್ತಾಗಿ ಜಪಿಸುತ್ತಾ ನರನಾರಾಯಣರ ಆಶ್ರಮದಲ್ಲಿ ಅವನು ಒಂದು ದಿವ್ಯ ಸಹಸ್ರವರ್ಷಗಳ ಪರ್ಯಂತ ಇದ್ದನು.

12332026a ಅವಸತ್ಸ ಮಹಾತೇಜಾ ನಾರದೋ ಭಗವಾನೃಷಿಃ|

12332026c ತಮೇವಾಭ್ಯರ್ಚಯನ್ದೇವಂ ನರನಾರಾಯಣೌ ಚ ತೌ||

ಮಹಾತೇಜಸ್ವೀ ಭಗವಾನ್ ಋಷಿ ನಾರದನು ಆ ದೇವನನ್ನೂ ನರನಾರಾಯಣರನ್ನೂ ಅರ್ಚಿಸುತ್ತಿದ್ದನು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ದ್ವಾತ್ರಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಮೂವತ್ತೆರಡನೇ ಅಧ್ಯಾಯವು.

Peacock feather on white background | Peacock feather, Peacock, White  background

[1] ಸದ್ಭೂತೋತ್ಪಾದಕಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.