Shanti Parva: Chapter 322

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೨೨

ನಾರದನು ಶ್ವೇತದ್ವೀಪವನ್ನು ನೋಡಿದುದು (1-7); ಅಲ್ಲಿಯ ನಿವಾಸಿಗಳ ಸ್ವರೂಪವರ್ಣನೆ (8-12); ಉಪರಿಚರ ವಸುವಿನ ಚರಿತ್ರೆ (13-25); ಪಾಂಚರಾತ್ರದ ಉತ್ಪತ್ತಿಯ ಪ್ರಸಂಗ (26-52).

12322001 ಭೀಷ್ಮ ಉವಾಚ|

12322001a ಸ ಏವಮುಕ್ತೋ ದ್ವಿಪದಾಂ ವರಿಷ್ಠೋ

ನಾರಾಯಣೇನೋತ್ತಮಪೂರುಷೇಣ|

12322001c ಜಗಾದ ವಾಕ್ಯಂ ದ್ವಿಪದಾಂ ವರಿಷ್ಠಂ

ನಾರಾಯಣಂ ಲೋಕಹಿತಾಧಿವಾಸಮ್||

ಭೀಷ್ಮನು ಹೇಳಿದನು: “ಉತ್ತಮ ಪುರುಷ ನಾರಾಯಣನು ಹೀಗೆ ಹೇಳಲು ದ್ವಿಪದರಲ್ಲಿ ವರಿಷ್ಠ ನಾರದನು ಲೋಕಹಿತಾಧಿವಾಸ ದ್ವಿಪದರಲ್ಲಿ ವರಿಷ್ಠ ನಾರಾಯಣನಿಗೆ ಇಂತೆಂದನು:

12322002a ಯದರ್ಥಮಾತ್ಮಪ್ರಭವೇಹ ಜನ್ಮ

ತವೋತ್ತಮಂ ಧರ್ಮಗೃಹೇ ಚತುರ್ಧಾ|

12322002c ತತ್ಸಾಧ್ಯತಾಂ ಲೋಕಹಿತಾರ್ಥಮದ್ಯ

ಗಚ್ಚಾಮಿ ದ್ರಷ್ಟುಂ ಪ್ರಕೃತಿಂ ತವಾದ್ಯಾಮ್||

“ನೀನು ಯಾವ ಉದ್ದೇಶಕ್ಕಾಗಿ ಧರ್ಮನ ಗೃಹದಲ್ಲಿ ನಾಲ್ಕು ರೂಪಗಳಿಂದ ಅವತರಿಸಿರುವೆಯೋ ಅದು ಸಿದ್ಧಿಯಾಗಲಿ. ಲೋಕಹಿತಾರ್ಥಕ್ಕಾಗಿ ಇಂದು ನಾನು ನಿನ್ನ ಮೂಲ ಪ್ರಕೃತಿಯನ್ನು ನೋಡಲು ಹೋಗುತ್ತೇನೆ.

12322003a ವೇದಾಃ ಸ್ವಧೀತಾ ಮಮ ಲೋಕನಾಥ

ತಪ್ತಂ ತಪೋ ನಾನೃತಮುಕ್ತಪೂರ್ವಮ್|

12322003c ಪೂಜಾಂ ಗುರೂಣಾಂ ಸತತಂ ಕರೋಮಿ

ಪರಸ್ಯ ಗುಹ್ಯಂ ನ ಚ ಭಿನ್ನಪೂರ್ವಮ್||

ಲೋಕನಾಥ! ವೇದಗಳನ್ನು ಅಧ್ಯಯನ ಮಾಡಿದ್ದೇನೆ. ತಪಸ್ಸನ್ನೂ ತಪಿಸಿದ್ದೇನೆ. ಅನೃತವನ್ನು ಈ ಹಿಂದೆ ಎಂದೂ ಆಡಿಲ್ಲ. ಸತತವೂ ಗುರುಗಳ ಪೂಜೆಯನ್ನು ಮಾಡುತ್ತೇನೆ. ಇತರರ ರಹಸ್ಯವನ್ನು ಈ ಹಿಂದೆ ಎಂದೂ ಇತರರ ಎದಿರು ಬಹಿರಂಗಪಡಿಸಿಲ್ಲ.

12322004a ಗುಪ್ತಾನಿ ಚತ್ವಾರಿ ಯಥಾಗಮಂ ಮೇ

ಶತ್ರೌ ಚ ಮಿತ್ರೇ ಚ ಸಮೋಽಸ್ಮಿ ನಿತ್ಯಮ್|

12322004c ತಂ ಚಾದಿದೇವಂ ಸತತಂ ಪ್ರಪನ್ನ

ಏಕಾಂತಭಾವೇನ ವೃಣೋಮ್ಯಜಸ್ರಮ್||

12322004e ಏಭಿರ್ವಿಶೇಷೈಃ ಪರಿಶುದ್ಧಸತ್ತ್ವಃ

ಕಸ್ಮಾನ್ನ ಪಶ್ಯೇಯಮನಂತಮೀಶಮ್

ಆಗಮ ಶಾಸ್ತ್ರಗಳಿಗನುಗುಣವಾಗಿ ನಾನು ನಾಲ್ಕನ್ನು ರಕ್ಷಿಸಿಕೊಂಡಿದ್ದೇನೆ. ನಿತ್ಯವೂ ನನಗೆ ಶತ್ರು ಮತ್ತು ಮಿತ್ರರು ಒಂದೇ. ಆ ಆದಿದೇವನನ್ನು ಸತತವೂ ಪ್ರಪನ್ನಗೊಳಿಸುತ್ತಾ ಏಕಾಂತಭಾವದಿಂದ ಅವನನ್ನು ಭಜಿಸುತ್ತೇನೆ. ಈ ರೀತಿ ವಿಶೇಷವಾಗಿ ಪರಿಶುದ್ಧ ಸತ್ತ್ವನಾಗಿರುವ ನಾನು ಆ ಅನಂತ ಈಶನನ್ನು ಏಕೆ ಕಾಣಲಾರೆನು?”

12322005a ತತ್ಪಾರಮೇಷ್ಠ್ಯಸ್ಯ ವಚೋ ನಿಶಮ್ಯ

ನಾರಾಯಣಃ ಸಾತ್ವತಧರ್ಮಗೋಪ್ತಾ|

12322005c ಗಚ್ಚೇತಿ ತಂ ನಾರದಮುಕ್ತವಾನ್ಸ

ಸಂಪೂಜಯಿತ್ವಾತ್ಮವಿಧಿಕ್ರಿಯಾಭಿಃ||

ಪರಮೇಷ್ಠಿಯ ಮಗ ನಾರದನ ವಚನವನ್ನು ಕೇಳಿ ಸಾತ್ವತಧರ್ಮರಕ್ಷಕ ನಾರಾಯಣನು ನಾರದನನ್ನು ಆತ್ಮವಿಧಿಕ್ರಿಯೆಗಳಿಂದ ಸಂಪೂಜಿಸಿ ಹೋಗಲು ಹೇಳಿದನು.

12322006a ತತೋ ವಿಸೃಷ್ಟಃ ಪರಮೇಷ್ಠಿಪುತ್ರಃ

ಸೋಽಭ್ಯರ್ಚಯಿತ್ವಾ ತಮೃಷಿಂ ಪುರಾಣಮ್|

12322006c ಖಮುತ್ಪಪಾತೋತ್ತಮವೇಗಯುಕ್ತಸ್

ತತೋಽಧಿಮೇರೌ ಸಹಸಾ ನಿಲಿಲ್ಯೇ||

ಅನಂತರ ಪರಮೇಷ್ಠಿಪುತ್ರ ನಾರದನು ಆ ಪುರಾಣ ಋಷಿಯನ್ನು ಅರ್ಚಿಸಿ ಬೀಳ್ಕೊಂಡು ಉತ್ತಮ ವೇಗಯುಕ್ತನಾಗಿ ಆಕಾಶದಿಂದ ಹಾರಿ ಮೇರುಪರ್ವತಕ್ಕೆ ಹೋಗಿ ಅಲ್ಲಿಯೇ ಅಂತರ್ಧಾನನಾದನು.

12322007a ತತ್ರಾವತಸ್ಥೇ ಚ ಮುನಿರ್ಮುಹೂರ್ತಮ್

ಏಕಾಂತಮಾಸಾದ್ಯ ಗಿರೇಃ ಸ ಶೃಂಗೇ|

12322007c ಆಲೋಕಯನ್ನುತ್ತರಪಶ್ಚಿಮೇನ

ದದರ್ಶ ಚಾತ್ಯದ್ಭುತರೂಪಯುಕ್ತಮ್||

ಆ ಗಿರಿಶೃಂಗದ ಏಕಾಂತವನ್ನು ಸೇರಿ ಒಂದು ಮುಹೂರ್ತಕಾಲ ಅಲ್ಲಿಯೇ ವಿಶ್ರಾಂತಿಗೈಯುತ್ತಾ ವಾಯುವ್ಯ ದಿಕ್ಕಿನಲ್ಲಿ ಒಂದು ಅದ್ಭುತರೂಪವನ್ನು ಕಂಡನು.

12322008a ಕ್ಷೀರೋದಧೇರುತ್ತರತೋ ಹಿ ದ್ವೀಪಃ

ಶ್ವೇತಃ ಸ ನಾಮ್ನಾ ಪ್ರಥಿತೋ ವಿಶಾಲಃ|

12322008c ಮೇರೋಃ ಸಹಸ್ರೈಃ ಸ ಹಿ ಯೋಜನಾನಾಂ

ದ್ವಾತ್ರಿಂಶತೋರ್ಧ್ವಂ ಕವಿಭಿರ್ನಿರುಕ್ತಃ||

ಕ್ಷೀರಸಾಗರದ ಉತ್ತರದಲ್ಲಿದ್ದ ಶ್ವೇತದ್ವೀಪವೆಂದು ಪ್ರಸಿದ್ಧವಾಗಿದ್ದ ವಿಶಾಲ ಪ್ರದೇಶವು ಗೋಚರಿಸಿತು. ಅದು ಮೇರು ಪರ್ವತಕ್ಕಿಂತಲೂ ಮೂವತ್ತೆರಡು ಸಾವಿರ ಯೋಜನೆಗಳ ಎತ್ತರದಲ್ಲಿತ್ತು. 

12322009a ಅತೀಂದ್ರಿಯಾಶ್ಚಾನಶನಾಶ್ಚ ತತ್ರ

ನಿಷ್ಪಂದಹೀನಾಃ ಸುಸುಗಂಧಿನಶ್ಚ|

12322009c ಶ್ವೇತಾಃ ಪುಮಾಂಸೋ ಗತಸರ್ವಪಾಪಾಶ್

ಚಕ್ಷುರ್ಮುಷಃ ಪಾಪಕೃತಾಂ ನರಾಣಾಮ್||

ಅಲ್ಲಿರುವವರು ಅತೀಂದ್ರಿಯರೂ, ನಿರಾಹಾರಿಗಳೂ, ಚಲನೆಯಿಲ್ಲದವರೂ, ಜ್ಞಾನಸಂಪನ್ನರೂ, ಸುವಾಸನೆಯುಳ್ಳವರೂ ಆಗಿದ್ದರು. ಅಲ್ಲಿದ್ದವರು ಶ್ವೇತವರ್ಣದವರೂ, ಸರ್ವಪಾಪಗಳಿಂದ ವಿಮುಕ್ತರೂ, ಪಾಪಿ ನರರ ದೃಷ್ಟಿಯನ್ನು ಅಪಹರಿಸುವವರೂ ಆಗಿದ್ದರು.

12322010a ವಜ್ರಾಸ್ಥಿಕಾಯಾಃ ಸಮಮಾನೋನ್ಮಾನಾ

ದಿವ್ಯಾನ್ವಯರೂಪಾಃ[1] ಶುಭಸಾರೋಪೇತಾಃ|

12322010c ಚತ್ರಾಕೃತಿಶೀರ್ಷಾ ಮೇಘೌಘನಿನಾದಾಃ

ಸತ್ಪುಷ್ಕರಚತುಷ್ಕಾ[2] ರಾಜೀವಶತಪಾದಾಃ||

ವಜ್ರದ ಅಸ್ಥಿ-ಕಾಯಗಳನ್ನು ಹೊಂದಿದ್ದ ಅವರು ಮಾನಾಪಮಾನಗಳನ್ನು ಸಮನಾಗಿ ಕಾಣುತ್ತಿದ್ದವರಾಗಿದ್ದರು. ದಿವ್ಯಾನ್ವಯ ರೂಪರೂಪಗಳುಳ್ಳವರೂ, ಶುಭಬಲಸಂಪನ್ನರೂ ಆಗಿದ್ದರು. ಅವರ ಶಿರಗಳು ಚತ್ರದ ಆಕೃತಿಯಲ್ಲಿದ್ದವು. ಅವರ ಸ್ವರಗಳ ಮೇಘಗಳ ಧ್ವನಿಯಂತಿದ್ದವು. ನಾಲ್ಕು ಸುಂದರ ಪುಷ್ಕರಗಳಿದ್ದ ಅವರ ಪಾದಗಳು ಕಮಲದಳಗಳನ್ನು ಹೋಲುತ್ತಿದ್ದವು.

12322011a ಷಷ್ಟ್ಯಾ ದಂತೈರ್ಯುಕ್ತಾಃ ಶುಕ್ಲೈರ್

ಅಷ್ಟಾಭಿರ್ದಂಷ್ಟ್ರಾಭಿರ್ಯೇ|

12322011c ಜಿಹ್ವಾಭಿರ್ಯೇ ವಿಷ್ವಗ್ವಕ್ತ್ರಂ

ಲೇಲಿಹ್ಯಂತೇ ಸೂರ್ಯಪ್ರಖ್ಯಮ್||

ಅರವತ್ತು ಹಲ್ಲುಗಳನ್ನೂ, ಬಿಳಿಯ ಎಂಟು ಕೋರೆದಾಡೆಗಳನ್ನೂ ಹೊಂದಿದ್ದರು. ಸೂರ್ಯನ ಕಾಂತಿಯಿಂದ ಕೂಡಿದ್ದರು. ವಿಶ್ವವೇ ಮುಖವಾಗಿದ್ದ ಕಾಲನನ್ನು ನಾಲಿಗೆಯಿಂದ ನೆಕ್ಕುತ್ತಿದ್ದರು.

12322012a ಭಕ್ತ್ಯಾ ದೇವಂ ವಿಶ್ವೋತ್ಪನ್ನಂ

ಯಸ್ಮಾತ್ಸರ್ವೇ ಲೋಕಾಃ ಸೂತಾಃ|

12322012c ವೇದಾ ಧರ್ಮಾ ಮುನಯಃ ಶಾಂತಾ

ದೇವಾಃ ಸರ್ವೇ ತಸ್ಯ ವಿಸರ್ಗಾಃ||

ವಿಶ್ವದ ಉತ್ಪನ್ನನ್ನಾಗಿದ್ದ, ಯಾರಿಂದ ಸರ್ವ ಲೋಕಗಳೂ, ವೇದಗಳೂ, ಧರ್ಮಗಳೂ, ಶಾಂತ ಮುನಿಗಳೂ, ಮತ್ತು ಸರ್ವ ದೇವತೆಗಳೂ ಹುಟ್ಟಿರುವರೋ ಆ ದೇವನನ್ನು ಅವರು ಭಕ್ತಿಯಿಂದ ಧರಿಸಿದ್ದರು.”

12322013 ಯುಧಿಷ್ಠಿರ ಉವಾಚ|

12322013a ಅತೀಂದ್ರಿಯಾ ನಿರಾಹಾರಾ ಅನಿಷ್ಪಂದಾಃ ಸುಗಂಧಿನಃ|

12322013c ಕಥಂ ತೇ ಪುರುಷಾ ಜಾತಾಃ ಕಾ ತೇಷಾಂ ಗತಿರುತ್ತಮಾ||

ಯುಧಿಷ್ಠಿರನು ಹೇಳಿದನು: “ಅತೀಂದ್ರಿಯರೂ, ನಿರಾಹಾರರೂ, ಚಲನೆಯಿಲ್ಲದವರೂ, ಸುಗಂಧಿಗಳೂ ಆದ ಆ ಪುರುಷರು ಹೇಗೆ ಹುಟ್ಟಿದರು? ಅವರ ಉತ್ತಮ ಗತಿಯಾವುದು?

12322014a ಯೇ ವಿಮುಕ್ತಾ ಭವಂತೀಹ ನರಾ ಭರತಸತ್ತಮ|

12322014c ತೇಷಾಂ ಲಕ್ಷಣಮೇತದ್ಧಿ ಯಚ್ಚ್ವೇತದ್ವೀಪವಾಸಿನಾಮ್||

ಭರತಸತ್ತಮ! ಈ ಲೋಕದಲ್ಲಿ ವಿಮುಕ್ತರಾದ ನರರಿಗೆ ಯಾವ ಲಕ್ಷಣಗಳಿವೆಯೆಂದು ತಿಳಿದಿದ್ದೇವೆಯೋ ಅವೇ ಲಕ್ಷಣಗಳು ಶ್ವೇತದ್ವೀಪನಿವಾಸಿಗಳಲ್ಲಿ ಇವೆಯೆಂದು ಹೇಳಿದೆ.

12322015a ತಸ್ಮಾನ್ಮೇ ಸಂಶಯಂ ಚಿಂಧಿ ಪರಂ ಕೌತೂಹಲಂ ಹಿ ಮೇ|

12322015c ತ್ವಂ ಹಿ ಸರ್ವಕಥಾರಾಮಸ್ತ್ವಾಂ ಚೈವೋಪಾಶ್ರಿತಾ ವಯಮ್||

ಅದರ ಕುರಿತು ನನಗೆ ಸಂದೇಹವೂ ಕುತೂಹಲವೂ ಉಂಟಾಗಿದೆ. ಈ ನನ್ನ ಸಂಶಯವನ್ನು ನಿವಾರಿಸು. ನೀನು ಸರ್ವ ಕಥೆಗಳಿಗೂ ಉದ್ಯಾನವನದಂತಿರುವೆ. ನಾವು ನಿನ್ನನ್ನೇ ಆಶ್ರಯಿಸಿದ್ದೇವೆ.”

12322016 ಭೀಷ್ಮ ಉವಾಚ|

12322016a ವಿಸ್ತೀರ್ಣೈಷಾ ಕಥಾ ರಾಜನ್ ಶ್ರುತಾ ಮೇ ಪಿತೃಸಂನಿಧೌ|

12322016c ಸೈಷಾ ತವ ಹಿ ವಕ್ತವ್ಯಾ ಕಥಾಸಾರೋ ಹಿ ಸ ಸ್ಮೃತಃ||

ಭೀಷ್ಮನು ಹೇಳಿದನು: “ರಾಜನ್! ಈ ಕಥೆಯು ಬಹಳ ವಿಸ್ತಾರವಾಗಿದೆ. ಇದನ್ನು ನನ್ನ ತಂದೆಯ ಬಳಿಯಿದ್ದಾಗ ಕೇಳಿದ್ದೆನು. ನಿನಗೆ ಹೇಳುವ ಈ ಕಥೆಯು ಕಥೆಗಳಲ್ಲಿಯೇ ಸಾರಭೂತವಾದುದೆಂದು ನಿಶ್ಚಯಿಸಲ್ಪಟ್ಟಿದೆ.

12322017a ರಾಜೋಪರಿಚರೋ ನಾಮ ಬಭೂವಾಧಿಪತಿರ್ಭುವಃ|

12322017c ಆಖಂಡಲಸಖಃ ಖ್ಯಾತೋ ಭಕ್ತೋ ನಾರಾಯಣಂ ಹರಿಮ್||

ಉಪರಿಚರ ಎಂಬ ಹೆಸರಿನ ರಾಜನು ಇಡೀ ಭೂಮಂಡಲಕ್ಕೇ ಅಧಿಪತಿಯಾಗಿದ್ದನು. ಇಂದ್ರನ ಸಖನಾಗಿದ್ದ ಆ ಖ್ಯಾತನು ಹರಿ ನಾರಾಯಣನ ಭಕ್ತನಾಗಿದ್ದನು.

12322018a ಧಾರ್ಮಿಕೋ ನಿತ್ಯಭಕ್ತಶ್ಚ ಪಿತೃನ್ನಿತ್ಯಮತಂದ್ರಿತಃ|

12322018c ಸಾಮ್ರಾಜ್ಯಂ ತೇನ ಸಂಪ್ರಾಪ್ತಂ ನಾರಾಯಣವರಾತ್ಪುರಾ||

ಧಾರ್ಮಿಕನೂ ನಿತ್ಯಭಕ್ತನೂ ನಿತ್ಯವೂ ಆಲಸ್ಯವಿಲ್ಲದೇ ಪಿತೃಭಕ್ತನೂ ಆಗಿದ್ದ ಅವನು ಹಿಂದಿ ನಾರಾಯಣನ ವರದಿಂದ ಸಾಮ್ರಾಜ್ಯವನ್ನು ಪಡೆದುಕೊಂಡನು.

12322019a ಸಾತ್ವತಂ ವಿಧಿಮಾಸ್ಥಾಯ ಪ್ರಾಕ್ಸೂರ್ಯಮುಖನಿಃಸೃತಮ್|

12322019c ಪೂಜಯಾಮಾಸ ದೇವೇಶಂ ತಚ್ಚೇಷೇಣ ಪಿತಾಮಹಾನ್||

ಮೊದಲು ಅವನು ಸೂರ್ಯನ ಮುಖದಿಂದ ಪ್ರಕಟವಾದ ಸಾತ್ವತ ವಿಧಿಯನ್ನು ಆಶ್ರಯಿಸಿ ದೇವೇಶನನ್ನು ಪೂಜಿಸುತ್ತಿದ್ದನು. ಅನಂತರ ಉಳಿದವುಗಳಿಂದ ಪಿತೃಗಳನ್ನು ಪೂಜಿಸುತ್ತಿದ್ದನು.

12322020a ಪಿತೃಶೇಷೇಣ ವಿಪ್ರಾಂಶ್ಚ ಸಂವಿಭಜ್ಯಾಶ್ರಿತಾಂಶ್ಚ ಸಃ|

12322020c ಶೇಷಾನ್ನಭುಕ್ಸತ್ಯಪರಃ ಸರ್ವಭೂತೇಷ್ವಹಿಂಸಕಃ|

12322020e ಸರ್ವಭಾವೇನ ಭಕ್ತಃ ಸ ದೇವದೇವಂ ಜನಾರ್ದನಮ್||

 ಪಿತೃಶೇಷದಿಂದ ವಿಪ್ರರಿಗೂ ಆಶ್ರಿತರಿಗೂ ಹಂಚಿಕೊಟ್ಟು ಉಳಿದ ಅನ್ನವನ್ನು ತಾನು ಭುಂಜಿಸುತ್ತಿದ್ದನು. ಆ ಸತ್ಯಪರನು ಸರ್ವಭೂತಗಳಿಗೂ ಅಹಿಂಸಕನಾಗಿದ್ದನು. ಆ ಭಕ್ತನು ಸರ್ವಭಾವದಿಂದ ದೇವದೇವ ಜನಾರ್ದನನನ್ನು ಪೂಜಿಸುತ್ತಿದ್ದನು.

12322021a ತಸ್ಯ ನಾರಾಯಣೇ ಭಕ್ತಿಂ ವಹತೋಽಮಿತ್ರಕರ್ಶನ|

12322021c ಏಕಶಯ್ಯಾಸನಂ ಶಕ್ರೋ ದತ್ತವಾನ್ದೇವರಾಟ್ಸ್ವಯಮ್||

ಅಮಿತ್ರಕರ್ಶನ! ನಾರಾಯಣನಲ್ಲಿ ಅವನಿಗಿದ್ದ ಭಕ್ತಿಗೆ ಮೆಚ್ಚಿ ಸ್ವಯಂ ದೇವರಾಜ ಶಕ್ರನು ಅವನಿಗೆ ಏಕಶಯ್ಯಾಸನ[3]ವನ್ನಿತ್ತನು.

12322022a ಆತ್ಮಾ ರಾಜ್ಯಂ ಧನಂ ಚೈವ ಕಲತ್ರಂ ವಾಹನಾನಿ ಚ|

12322022c ಏತದ್ಭಗವತೇ ಸರ್ವಮಿತಿ ತತ್ಪ್ರೇಕ್ಷಿತಂ ಸದಾ||

ಉಪರಿಚರನು ತಾನೂ, ರಾಜ್ಯವೂ, ಧನವೂ, ಕಲತ್ರ ವಾಹನಗಳೂ ಎಲ್ಲವೂ ಭಗವಂತನದ್ದೇ ಎಂದು ಭಾವಿಸಿ ಎಲ್ಲವನ್ನೂ ಅವನಿಗೇ ಸಮರ್ಪಿಸಿದ್ದನು.

12322023a ಕಾಮ್ಯನೈಮಿತ್ತಿಕಾಜಸ್ರಂ ಯಜ್ಞಿಯಾಃ ಪರಮಕ್ರಿಯಾಃ|

12322023c ಸರ್ವಾಃ ಸಾತ್ವತಮಾಸ್ಥಾಯ ವಿಧಿಂ ಚಕ್ರೇ ಸಮಾಹಿತಃ||

ಅವನು ಸಮಾಹಿತನಾಗಿ ಕಾಮ್ಯ, ನೈಮಿತ್ತಿಕ, ಹಾಗೂ ಯಜ್ಞವೇ ಮೊದಲಾದ ಪರಮ ಕ್ರಿಯೆಗಳು ಎಲ್ಲವನ್ನೂ ಸಾತ್ವತ ವಿಧಿಯನ್ನೇ ಬಳಸಿ ಮಾಡುತ್ತಿದ್ದನು.

12322024a ಪಂಚರಾತ್ರವಿದೋ ಮುಖ್ಯಾಸ್ತಸ್ಯ ಗೇಹೇ ಮಹಾತ್ಮನಃ|

12322024c ಪ್ರಾಯಣಂ ಭಗವತ್ಪ್ರೋಕ್ತಂ ಭುಂಜತೇ ಚಾಗ್ರಭೋಜನಮ್||

ಆ ಮಹಾತ್ಮನ ಮನೆಯಲ್ಲಿ ಭಗವಂತನಿಗೆ ನಿವೇದಿಸಿದ ಪ್ರಸಾದವನ್ನು ಪಂಚರಾತ್ರಾಗಮದಲ್ಲಿ ನಿಷ್ಣಾತರಾದ ವಿಪ್ರಶ್ರೇಷ್ಠರು ಮೊದಲು ಭುಂಜಿಸುತ್ತಿದ್ದರು.

12322025a ತಸ್ಯ ಪ್ರಶಾಸತೋ ರಾಜ್ಯಂ ಧರ್ಮೇಣಾಮಿತ್ರಘಾತಿನಃ|

12322025c ನಾನೃತಾ ವಾಕ್ಸಮಭವನ್ಮನೋ ದುಷ್ಟಂ ನ ಚಾಭವತ್|

12322025e ನ ಚ ಕಾಯೇನ ಕೃತವಾನ್ಸ ಪಾಪಂ ಪರಮಣ್ವಪಿ||

ಧರ್ಮದಿಂದ ರಾಜ್ಯವನ್ನು ಆಳುತ್ತಿದ್ದ ಆ ಅಮಿತ್ರಘಾತಿನಿಯ ಬಾಯಿಂದ ಅಸತ್ಯವಾದ ಮಾತು ಹೊರಡುತ್ತಿರಲಿಲ್ಲ. ಯು ಎಂದೂ ಸುಳ್ಳನ್ನು ಹೇಳಲಿಲ್ಲ. ಅವನ ಮನಸ್ಸು ದುಷ್ಟವಿಚಾರಗಳಲ್ಲಿ ತೊಡಗಿರಲಿಲ್ಲ. ಅವನು ತನ್ನ ಕಾಯದಿಂದ ಪರಮಾಣುವಿನಷ್ಟು ಸಣ್ಣ ಪಾಪವನ್ನೂ ಮಾಡಿರಲಿಲ್ಲ.

12322026a ಯೇ ಹಿ ತೇ ಮುನಯಃ ಖ್ಯಾತಾಃ ಸಪ್ತ ಚಿತ್ರಶಿಖಂಡಿನಃ|

12322026c ತೈರೇಕಮತಿಭಿರ್ಭೂತ್ವಾ ಯತ್ಪ್ರೋಕ್ತಂ ಶಾಸ್ತ್ರಮುತ್ತಮಮ್||

ಚಿತ್ರಶಿಖಂಡಿಗಳೆಂದು ಖ್ಯಾತರಾದ ಏಳು ಮುನಿಗಳ ಒಂದೇ ಮತದಿಂದ ಈ ಉತ್ತಮ ಪಂಚರಾತ್ರ ಶಾಸ್ತ್ರವು ಹೇಳಲ್ಪಟ್ಟಿದೆ.

[4]12322027a ಮರೀಚಿರತ್ರ್ಯಂಗಿರಸೌ ಪುಲಸ್ತ್ಯಃ ಪುಲಹಃ ಕ್ರತುಃ|

12322027c ವಸಿಷ್ಠಶ್ಚ ಮಹಾತೇಜಾ ಏತೇ ಚಿತ್ರಶಿಖಂಡಿನಃ||

ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತು, ಮತ್ತು ಮಹಾತೇಜಸ್ವೀ ವಸಿಷ್ಠ – ಇವರೇ ಆ ಚಿತ್ರಶಿಖಂಡಿಗಳು.

12322028a ಸಪ್ತ ಪ್ರಕೃತಯೋ ಹ್ಯೇತಾಸ್ತಥಾ ಸ್ವಾಯಂಭುವೋಽಷ್ಟಮಃ|

12322028c ಏತಾಭಿರ್ಧಾರ್ಯತೇ ಲೋಕಸ್ತಾಭ್ಯಃ ಶಾಸ್ತ್ರಂ ವಿನಿಃಸೃತಮ್||

ಲೋಕಕ್ಕೇ ಕಾರಣೀಭೂತರಾದ ಮತ್ತು ಲೋಕಗಳನ್ನು ಧರಿಸಿರುವ ಈ ಸಪ್ತ ಋಷಿಗಳು ಮತ್ತು ಎಂಟನೆಯವನಾಗಿ ಸ್ವಾಯಂಭುವ ಮನು ಇವರಿಂದ ಪಂಚರಾತ್ರ ಶಾಸ್ತ್ರವು ಹೊರಹೊಮ್ಮಿತು.

12322029a ಏಕಾಗ್ರಮನಸೋ ದಾಂತಾ ಮುನಯಃ ಸಂಯಮೇ ರತಾಃ|

[5]12322029c ಇದಂ ಶ್ರೇಯ ಇದಂ ಬ್ರಹ್ಮ ಇದಂ ಹಿತಮನುತ್ತಮಮ್|

12322029e ಲೋಕಾನ್ಸಂಚಿಂತ್ಯ ಮನಸಾ ತತಃ ಶಾಸ್ತ್ರಂ ಪ್ರಚಕ್ರಿರೇ||

ಏಕಾಗ್ರಮನಸ್ಕರಾದ ಮತ್ತು ಸಂಯಮರತರಾದ ಈ ದಾಂತ ಮುನಿಗಳು ಇದು ಶ್ರೇಯ, ಇದು ಬ್ರಹ್ಮ, ಇದು ಅನುತ್ತಮ ಹಿತ ಎಂದು ಲೋಕಗಳ ಕುರಿತು ಮನಸಾ ಚಿಂತಿಸಿ ಪಂಚರಾತ್ರ ಶಾಸ್ತ್ರವನ್ನು ಪ್ರಕಟಿಸಿದರು.

12322030a ತತ್ರ ಧರ್ಮಾರ್ಥಕಾಮಾ ಹಿ ಮೋಕ್ಷಃ ಪಶ್ಚಾಚ್ಚ ಕೀರ್ತಿತಃ|

12322030c ಮರ್ಯಾದಾ ವಿವಿಧಾಶ್ಚೈವ ದಿವಿ ಭೂಮೌ ಚ ಸಂಸ್ಥಿತಾಃ||

ಇದರಲ್ಲಿ ಧರ್ಮಾರ್ಥ ಕಾಮಗಳ ಕುರಿತೂ ನಂತರ ಮೋಕ್ಷದ ಕುರಿತೂ ವಿವರಿಸಿದ್ದಾರೆ. ಇದರಲ್ಲಿ ದಿವಿ-ಭೂಮಿಗಳಲ್ಲಿರುವ ವಿವಿಧ ಮರ್ಯಾದೆಗಳನ್ನೂ ಅಳವಡಿಸಿದ್ದಾರೆ.

12322031a ಆರಾಧ್ಯ ತಪಸಾ ದೇವಂ ಹರಿಂ ನಾರಾಯಣಂ ಪ್ರಭುಮ್|

12322031c ದಿವ್ಯಂ ವರ್ಷಸಹಸ್ರಂ ವೈ ಸರ್ವೇ ತೇ ಋಷಿಭಿಃ ಸಹ||

ಆ ಎಲ್ಲ ಋಷಿಗಳೂ ಒಟ್ಟಾಗಿ ಸಹಸ್ರ ದಿವ್ಯ ವರ್ಷಗಳ ಪರ್ಯಂತ ತಪಸ್ಸಿನಿಂದ ಪ್ರಭು ದೇವ ಹರಿ ನಾರಾಯಣನನ್ನು ಆರಾಧಿಸಿದರು.

12322032a ನಾರಾಯಣಾನುಶಾಸ್ತಾ ಹಿ ತದಾ ದೇವೀ ಸರಸ್ವತೀ|

12322032c ವಿವೇಶ ತಾನೃಷೀನ್ಸರ್ವಾಽಲ್ಲೋಕಾನಾಂ ಹಿತಕಾಮ್ಯಯಾ||

ಆಗ ನಾರಾಯಣನ ಆದೇಶದಂತೆ ದೇವೀ ಸರಸ್ವತಿಯು ಸರ್ವ ಲೋಕಗಳಿಗೆ ಹಿತವನ್ನುಂಟುಮಾಡಲು ಬಯಸಿ ಆ ಋಷಿಗಳನ್ನು ಪ್ರವೇಶಿಸಿದಳು.

12322033a ತತಃ ಪ್ರವರ್ತಿತಾ ಸಮ್ಯಕ್ತಪೋವಿದ್ಭಿರ್ದ್ವಿಜಾತಿಭಿಃ|

12322033c ಶಬ್ದೇ ಚಾರ್ಥೇ ಚ ಹೇತೌ ಚ ಏಷಾ ಪ್ರಥಮಸರ್ಗಜಾ||

ಅನಂತರ ಆ ತಪಸ್ವೀ ಬ್ರಾಹ್ಮಣರು ಶಬ್ದ, ಅರ್ಥ ಮತ್ತು ಕಾರಣಳಿಂದ ಯುಕ್ತವಾದ ಆ ಶಾಸ್ತ್ರವನ್ನು ಲೋಕದಲ್ಲಿ ಪ್ರಚರಿಸಿದರು. ಇದು ಪ್ರಥಮಸೃಷ್ಟಿಯಲ್ಲಿಯೇ ರಚಿತಗೊಂಡಿತು.

12322034a ಆದಾವೇವ ಹಿ ತಚ್ಚಾಸ್ತ್ರಮೋಂಕಾರಸ್ವರಭೂಷಿತಮ್|

12322034c ಋಷಿಭಿರ್ಭಾವಿತಂ ತತ್ರ ಯತ್ರ ಕಾರುಣಿಕೋ ಹ್ಯಸೌ||

ಆದಿಯಲ್ಲಿಯೇ ಓಂಕಾರ ಸ್ವರವಿಭೂಷಿತಗೊಂಡು ಋಷಿಗಳಿಂದ ಅವಿರ್ಭಾವಗೊಂಡ ಅದರಲ್ಲಿ ಪರಮ ಕಾರಣಿಕ ಭಗವಂತನೇ ವಿರಾಜಮಾನನಾಗಿದ್ದನು.

12322035a ತತಃ ಪ್ರಸನ್ನೋ ಭಗವಾನನಿರ್ದಿಷ್ಟಶರೀರಗಃ|

12322035c ಋಷೀನುವಾಚ ತಾನ್ಸರ್ವಾನದೃಶ್ಯಃ ಪುರುಷೋತ್ತಮಃ||

ಬಳಿಕ ಅನಿರ್ದಿಷ್ಟ ಶರೀರಗನಾದ ಭಗವಾನ್ ಪುರುಷೋತ್ತಮನು ಅದೃಶ್ಯನಾಗಿದ್ದುಕೊಂಡೇ ಆ ಋಷಿಗಳಿಗೆ ಹೇಳಿದನು:

12322036a ಕೃತಂ ಶತಸಹಸ್ರಂ ಹಿ ಶ್ಲೋಕಾನಾಮಿದಮುತ್ತಮಮ್|

12322036c ಲೋಕತಂತ್ರಸ್ಯ ಕೃತ್ಸ್ನಸ್ಯ ಯಸ್ಮಾದ್ಧರ್ಮಃ ಪ್ರವರ್ತತೇ||

“ನೀವು ರಚಿಸಿರುವ ಈ ಒಂದು ಲಕ್ಷ ಶ್ಲೋಕಗಳು ಲೋಕತಂತ್ರಗಳೆಲ್ಲವನ್ನೂ ಒಳಗೊಂಡಿವೆ ಮತ್ತು ಇದರಿಂದ ಧರ್ಮವು ಪ್ರಚಲಿತವಾಗಿರುತ್ತದೆ.

12322037a ಪ್ರವೃತ್ತೌ ಚ ನಿವೃತ್ತೌ ಚ ಯೋನಿರೇತದ್ಭವಿಷ್ಯತಿ|

12322037c ಋಗ್ಯಜುಃಸಾಮಭಿರ್ಜುಷ್ಟಮಥರ್ವಾಂಗಿರಸೈಸ್ತಥಾ||

ಇದು ಪ್ರವೃತ್ತಿ ಮತ್ತು ನಿವೃತ್ತಿಮಾರ್ಗಳ ಮತ್ತು ಋಗ್ಯಜುಃಸಾಮ ಅರ್ಥರ್ವಾಂಗಿರಸಗಳ ಮೂಲವಾಗಿದೆ.

12322038a ತಥಾ[6] ಪ್ರಮಾಣಂ ಹಿ ಮಯಾ ಕೃತೋ ಬ್ರಹ್ಮಾ ಪ್ರಸಾದಜಃ|

12322038c ರುದ್ರಶ್ಚ ಕ್ರೋಧಜೋ ವಿಪ್ರಾ ಯೂಯಂ ಪ್ರಕೃತಯಸ್ತಥಾ||

12322039a ಸೂರ್ಯಾಚಂದ್ರಮಸೌ ವಾಯುರ್ಭೂಮಿರಾಪೋಽಗ್ನಿರೇವ ಚ|

12322039c ಸರ್ವೇ ಚ ನಕ್ಷತ್ರಗಣಾ ಯಚ್ಚ ಭೂತಾಭಿಶಬ್ದಿತಮ್||

12322040a ಅಧಿಕಾರೇಷು ವರ್ತಂತೇ ಯಥಾಸ್ವಂ ಬ್ರಹ್ಮವಾದಿನಃ|

12322040c ಸರ್ವೇ ಪ್ರಮಾಣಂ ಹಿ ಯಥಾ ತಥೈತಚ್ಚಾಸ್ತ್ರಮುತ್ತಮಮ್||

12322041a ಭವಿಷ್ಯತಿ ಪ್ರಮಾಣಂ ವೈ ಏತನ್ಮದನುಶಾಸನಮ್|

ವಿಪ್ರರೇ! ನನ್ನ ಪ್ರಸಾದದಿಂದ ಹೇಗೆ ಬ್ರಹ್ಮನು ಪ್ರಮಾಣರೂಪವಾಗಿ ಮಾಡಲ್ಪಟ್ಟಿರುವನೋ, ಮತ್ತು ಕ್ರೋಧದಿಂದ ರುದ್ರನು ಹೇಗೆ ಹುಟ್ಟಿರುವನೋ ಮತ್ತು ಹೇಗೆ ನನ್ನ ಪ್ರಕೃತಿಯಿಂದದ ನೀವುಗಳೂ ಹುಟ್ಟಿರುವಿರೋ, ಸೂರ್ಯ-ಚಂದ್ರರು, ಭೂತಗಳಿಂದ ಕರೆಯಲ್ಪಟ್ಟಿರುವ ವಾಯು-ಭೂಮಿ-ಜಲ-ಅಗ್ನಿಗಳೂ, ಸರ್ವ ನಕ್ಷತ್ರಗಣಗಳೂ ಹುಟ್ಟಿರುವವೋ ಮತ್ತು ತಮ್ಮತ ಮ್ಮ ಅಧಿಕಾರದಲಿದ್ದು ಪ್ರಮಾಣಭೂತರಾಗಿರುವರೋ ಹಾಗೆ ಬ್ರಹ್ಮವಾದಿಗಳಾದ ನೀವು ರಚಿಸಿರುವ ಶಾಸ್ತ್ರವೂ ಲೋಕದಲ್ಲಿ ಪ್ರಮಾಣಭೂತವಾಗಿರಲಿ. ಇದು ನನ್ನ ಆಜ್ಞೆ.

12322041c ಅಸ್ಮಾತ್ಪ್ರವಕ್ಷ್ಯತೇ ಧರ್ಮಾನ್ಮನುಃ ಸ್ವಾಯಂಭುವಃ ಸ್ವಯಮ್||

12322042a ಉಶನಾ ಬೃಹಸ್ಪತಿಶ್ಚೈವ ಯದೋತ್ಪನ್ನೌ ಭವಿಷ್ಯತಃ|

12322042c ತದಾ ಪ್ರವಕ್ಷ್ಯತಃ ಶಾಸ್ತ್ರಂ ಯುಷ್ಮನ್ಮತಿಭಿರುದ್ಧೃತಮ್||

ನೀವು ರಚಿಸಿರುವ ಈ ಧರ್ಮಶಾಸ್ತ್ರವನ್ನು ಸ್ವಯಂ ಸ್ವಾಯಂಭುವ ಮನುವು ಉಪದೇಶಿಸುತ್ತಾನೆ. ಭವಿಷ್ಯದಲ್ಲಿ ಉತ್ಪನ್ನರಾಗುವ ಉಶನ-ಬೃಹಸ್ಪತಿಳೂ ನಿಮ್ಮಿಂದ ಹೊರಹೊಮ್ಮಿರುವ ಈ ಶಾಸ್ತ್ರದ ಕುರಿತು ಪ್ರವಚನ ಮಾಡುತ್ತಾರೆ.

12322043a ಸ್ವಾಯಂಭುವೇಷು ಧರ್ಮೇಷು ಶಾಸ್ತ್ರೇ ಚೋಶನಸಾ ಕೃತೇ|

12322043c ಬೃಹಸ್ಪತಿಮತೇ ಚೈವ ಲೋಕೇಷು ಪ್ರವಿಚಾರಿತೇ||

ಸ್ವಾಯಂಭುವ ಮನುವಿನಿಂದ ಹಾಗೂ ಉಶನ-ಬೃಹಸ್ಪತಿಗಳಿಂದ ರಚಿತಗೊಂಡ ಈ ಶಾಸ್ತ್ರವು ಲೋಕಗಳಲ್ಲಿ ಪ್ರಚಾರಗೊಳ್ಳುತ್ತದೆ.

12322044a ಯುಷ್ಮತ್ಕೃತಮಿದಂ ಶಾಸ್ತ್ರಂ ಪ್ರಜಾಪಾಲೋ ವಸುಸ್ತತಃ|

12322044c ಬೃಹಸ್ಪತಿಸಕಾಶಾದ್ವೈ ಪ್ರಾಪ್ಸ್ಯತೇ ದ್ವಿಜಸತ್ತಮಾಃ||

ದ್ವಿಜಸತ್ತಮರೇ! ನೀವು ರಚಿಸಿದ ಈ ಶಾತ್ರವನ್ನು ಪ್ರಜಾಪಾಲ ವಸುವು ಮುಂದೆ ಬೃಹಸ್ಪತಿಯಿಂದ ಪಡೆದುಕೊಳ್ಳುತ್ತಾನೆ.

12322045a ಸ ಹಿ ಮದ್ಭಾವಿತೋ ರಾಜಾ ಮದ್ಭಕ್ತಶ್ಚ ಭವಿಷ್ಯತಿ|

12322045c ತೇನ ಶಾಸ್ತ್ರೇಣ ಲೋಕೇಷು ಕ್ರಿಯಾಃ ಸರ್ವಾಃ ಕರಿಷ್ಯತಿ||

ಆ ರಾಜನು ನನ್ನ ಭಾವಿತನೂ ನನ್ನ ಭಕ್ತನೂ ಆಗುತ್ತಾನೆ. ಅವನು ಇದೇ ಶಾಸ್ತ್ರದಿಂದ ಲೋಕದ ಎಲ್ಲ ಕ್ರಿಯೆಗಳನ್ನೂ ಮಾಡುತ್ತಾನೆ.

12322046a ಏತದ್ಧಿ ಸರ್ವಶಾಸ್ತ್ರಾಣಾಂ ಶಾಸ್ತ್ರಮುತ್ತಮಸಂಜ್ಞಿತಮ್|

12322046c ಏತದರ್ಥ್ಯಂ ಚ ಧರ್ಮ್ಯಂ ಚ ಯಶಸ್ಯಂ[7] ಚೈತದುತ್ತಮಮ್||

ಇದೇ ಸರ್ವಶಾಸ್ತ್ರಗಳಲ್ಲಿ ಉತ್ತಮ ಶಾಸ್ತ್ರವೆಂದು ಪರಿಗಣಿಸಲ್ಪಡುತ್ತದೆ. ಇದರಲ್ಲಿ ಅರ್ಥ, ಧರ್ಮ ಮತ್ತು ಯಶಸ್ಸಿನಿಂದ ಕೂಡಿರುವ ಉತ್ತಮ ಗ್ರಂಥವಾಗುತ್ತದೆ.

12322047a ಅಸ್ಯ ಪ್ರವರ್ತನಾಚ್ಚೈವ ಪ್ರಜಾವಂತೋ ಭವಿಷ್ಯಥ|

12322047c ಸ ಚ ರಾಜಾ ಶ್ರಿಯಾ ಯುಕ್ತೋ ಭವಿಷ್ಯತಿ ಮಹಾನ್ವಸುಃ||

ಇದನ್ನು ಪ್ರಚುರಪಡಿಸುವುದರಿಂದ ನೀವು ಪ್ರಜಾವಂತರಾಗುವಿರಿ. ರಾಜ ವಸುವೂ ಕೂಡ ಇದರಿಂದ ಮಹಾ ಶ್ರೀಯನ್ನು ಪದುಕೊಳುತ್ತಾನೆ.

12322048a ಸಂಸ್ಥಿತೇ ತು ನೃಪೇ ತಸ್ಮಿನ್ ಶಾಸ್ತ್ರಮೇತತ್ಸನಾತನಮ್|

12322048c ಅಂತರ್ಧಾಸ್ಯತಿ ತತ್ಸತ್ಯಮೇತದ್ವಃ ಕಥಿತಂ ಮಯಾ||

ಆ ನೃಪನು ದಿವಂಗತನಾದ ಬಳಿದ ಈ ಸನಾತನ ಶಾಸ್ತ್ರವೂ ಲುಪ್ತವಾಗಿ ಹೋಗುತ್ತದೆ. ನೀವು ರಚಿಸಿರುವ ಈ ಶಾಸ್ತ್ರದ ಕುರಿತು ಎಲ್ಲವನ್ನೂ ನಿಮಗೆ ಹೇಳಿದ್ದೇನೆ.”

12322049a ಏತಾವದುಕ್ತ್ವಾ ವಚನಮದೃಶ್ಯಃ ಪುರುಷೋತ್ತಮಃ|

12322049c ವಿಸೃಜ್ಯ ತಾನೃಷೀನ್ಸರ್ವಾನ್ಕಾಮಪಿ ಪ್ರಸ್ಥಿತೋ ದಿಶಮ್||

ಅದೃಷ್ಯ ಪುರುಷೋತ್ತಮನು ಈ ಮಾತುಗಳನ್ನಾಡಿ, ಆ ಎಲ್ಲ ಋಷಿಗಳನ್ನು ಅಲ್ಲಿಯೇ ಬಿಟ್ಟು ಬಯಸಿದ ದಿಕ್ಕಿನಲ್ಲಿ ಹೊರಟುಹೋದನು.

12322050a ತತಸ್ತೇ ಲೋಕಪಿತರಃ ಸರ್ವಲೋಕಾರ್ಥಚಿಂತಕಾಃ|

12322050c ಪ್ರಾವರ್ತಯಂತ ತಚ್ಚಾಸ್ತ್ರಂ ಧರ್ಮಯೋನಿಂ ಸನಾತನಮ್||

ಅನಂತರ ಸರ್ವಲೋಕಗಳ ಹಿತಚಿಂತಕರಾದ ಆ ಲೋಕಪಿತೃಗಳು ಸನಾತನ ಧರ್ಮದ ಮೂಲವಾದ ಆ ಶಾಸ್ತ್ರವನ್ನು ಪ್ರಚುರಗೊಳಿಸಿದರು.

12322051a ಉತ್ಪನ್ನೇಽಂಗಿರಸೇ ಚೈವ ಯುಗೇ ಪ್ರಥಮಕಲ್ಪಿತೇ|

12322051c ಸಾಂಗೋಪನಿಷದಂ ಶಾಸ್ತ್ರಂ ಸ್ಥಾಪಯಿತ್ವಾ ಬೃಹಸ್ಪತೌ||

12322052a ಜಗ್ಮುರ್ಯಥೇಪ್ಸಿತಂ ದೇಶಂ ತಪಸೇ ಕೃತನಿಶ್ಚಯಾಃ|

12322052c ಧಾರಣಾತ್ಸರ್ವಲೋಕಾನಾಂ ಸರ್ವಧರ್ಮಪ್ರವರ್ತಕಾಃ||

ಪ್ರಥಮ ಕಲ್ಪದ ಪ್ರಥಮ ಯುಗದಲ್ಲಿ ಸಪ್ರಋಷಿಗಳಲ್ಲೊಬ್ಬನಾದ ಅಂಗಿರಸನಿಗೆ ಬೃಹಸ್ಪತಿಯು ಹುಟ್ಟಿದನು. ಸರ್ವಧರ್ಮಪ್ರವರ್ತಕರಾದ ಸರ್ವಲೋಕಗಳನ್ನೂ ಧರಿಸಿರುವ  ಆ ಋಷಿಗಳು ತಪಸ್ಸನ್ನಾಚರಿಸಲು ನಿಶ್ಚಯಿಸಿ   ಉಪನಿಷತ್ತುಗಳೇ ಮೊದಲಾದ ಅಂಗಗಳಿಂದ ಕೂಡಿದ್ದ ಆ ಶಾಸ್ತ್ರವನ್ನು ಬೃಹಸ್ಪತಿಯಲ್ಲಿ ಸ್ಥಾಪಿಸಿ ಬಯಸಿದ ಪ್ರದೇಶಕ್ಕೆ ಹೊರಟುಹೋದರು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ದ್ವಾವಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಇಪ್ಪತ್ತೆರಡನೇ ಅಧ್ಯಾಯವು.

Close-up of two pink gerbera flowers against white background Wall ...

[1] ದಿವ್ಯಾವಯರೂಪಾಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಸಮಮುಷ್ಕಚತುಷ್ಕಾ ಅರ್ಥಾತ ಒಂದೇ ಸಮನಾದ ನಾಲ್ಕು ವೃಷಣಗಳುಳ್ಳವರು ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ತನ್ನ ಹಾಸಿಗೆಯಲ್ಲಿಯೂ ಸಿಂಹಾಸನದಲ್ಲಿಯೂ ಅವನಿಗೆ ಸ್ಥಾನವನ್ನಿತ್ತನು.

[4] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ವೈದೈಶ್ಚತುರ್ಭಿಃ ಸಮಿತಂ ಕೃತಂ ಮೇರೌ ಮಹಾಗಿರೌ| ಅಸ್ಮೈಃ ಸಪ್ತಭಿರುದ್ಗೀರ್ಣಂ ಲೋಕಧರ್ಮಮನುತ್ತಮಮ್||

[5] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಭೂತಭವ್ಯಭವಿಷ್ಯಜ್ಞಾಃ ಸತ್ಯಧರ್ಮಪರಾಯಣಾಃ|

[6] ಯಥಾ ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ರಹಸ್ಯಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.