Shanti Parva: Chapter 319

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೧೯

ಶುಕನ ಊರ್ಧ್ವಗತಿಯ ವರ್ಣನೆ   (1-29).

12319001 ಭೀಷ್ಮ ಉವಾಚ|

12319001a ಗಿರಿಪೃಷ್ಠಂ[1] ಸಮಾರುಹ್ಯ ಸುತೋ ವ್ಯಾಸಸ್ಯ ಭಾರತ|

12319001c ಸಮೇ ದೇಶೇ ವಿವಿಕ್ತೇ ಚ ನಿಃಶಲಾಕ ಉಪಾವಿಶತ್||

ಭೀಷ್ಮನು ಹೇಳಿದನು: “ಭಾರತ! ವ್ಯಾಸನ ಸುತನು ಗಿರಿಪೃಷ್ಠವನ್ನೇರಿ ನಿರ್ಜನವಾದ ತೃಣರಹಿತವಾಗಿದ್ದ ಸಮಪ್ರದೇಶದಲ್ಲಿ ಕುಳಿತುಕೊಂಡನು.

12319002a ಧಾರಯಾಮಾಸ ಚಾತ್ಮಾನಂ ಯಥಾಶಾಸ್ತ್ರಂ ಮಹಾಮುನಿಃ|

12319002c ಪಾದಾತ್ ಪ್ರಭೃತಿಗಾತ್ರೇಷು ಕ್ರಮೇಣ ಕ್ರಮಯೋಗವಿತ್||

ಕ್ರಮಯೋಗವಿದು ಮಹಾಮುನಿಯು ಶಾಸ್ತ್ರಗಳಲ್ಲಿ ಹೇಳಿರುವಂತೆ ಪಾದಗಳಿಂದ ಹಿಡಿದು ಸರ್ವಾಯವಗಳಲ್ಲಿಯೂ ಕ್ರಮವಾಗಿ ಆತ್ಮನನ್ನು ಧಾರಣೆಮಾಡಿಕೊಂಡನು.

12319003a ತತಃ ಸ ಪ್ರಾಙ್ಮುಖೋ ವಿದ್ವಾನಾದಿತ್ಯೇ ನಚಿರೋದಿತೇ|

12319003c ಪಾಣಿಪಾದಂ ಸಮಾಧಾಯ ವಿನೀತವದುಪಾವಿಶತ್||

ಸ್ವಲ್ಪ ಸಮಯದಲ್ಲಿಯೇ ಸೂರ್ಯೋದಯವಾಗಲು ಅವನು ಕೈಕಾಲುಗಳನ್ನು ಸರಿಯಾಗಿಟ್ಟುಕೊಂಡು ವಿನೀತನಾಗಿ ಪೂರ್ವಾಭಿಮುಖವಾಗಿ ಕುಳಿತುಕೊಂಡನು.

12319004a ನ ತತ್ರ ಪಕ್ಷಿಸಂಘಾತೋ ನ ಶಬ್ದೋ ನಾಪಿ ದರ್ಶನಮ್|

12319004c ಯತ್ರ ವೈಯಾಸಕಿರ್ಧೀಮಾನ್ಯೋಕ್ತುಂ ಸಮುಪಚಕ್ರಮೇ||

ಆ ಧೀಮಾನನು ಯೋಗಯುಕ್ತನಾಗಿ ಆತ್ಮಸಂಧಾನವನ್ನು ಪ್ರಾರಂಭಿಸಿದ  ಸ್ಥಳದಲ್ಲಿ ಪಕ್ಷಿಗಳ ಸಮುದಾಯವಾಗಲೀ, ಶಬ್ದವಾಗಲೀ ಅಥವಾ ಯಾವುದೇ ದೃಶ್ಯವಾಗಲೀ ಇರಲಿಲ್ಲ.

12319005a ಸ ದದರ್ಶ ತದಾತ್ಮಾನಂ ಸರ್ವಸಂಗವಿನಿಃಸೃತಮ್|

12319005c ಪ್ರಜಹಾಸ ತತೋ ಹಾಸಂ ಶುಕಃ ಸಂಪ್ರೇಕ್ಷ್ಯ ಭಾಸ್ಕರಮ್||

ಸರ್ವಸಂಗಗಳಿಂದಲೂ ರಹಿತನಾದ ತನ್ನ ಆತ್ಮನನ್ನು ಅವನು ನೋಡಿದನು. ಅನಂತರ ಭಾಸ್ಕರನನ್ನು ನೋಡಿ ಶುಕನು ಜೋರಾಗಿ ನಗತೊಡಗಿದನು.

12319006a ಸ ಪುನರ್ಯೋಗಮಾಸ್ಥಾಯ ಮೋಕ್ಷಮಾರ್ಗೋಪಲಬ್ಧಯೇ|

12319006c ಮಹಾಯೋಗೀಶ್ವರೋ ಭೂತ್ವಾ ಸೋಽತ್ಯಕ್ರಾಮದ್ವಿಹಾಯಸಮ್||

ಮೋಕ್ಷಮಾರ್ಗವನ್ನು ಪಡೆದುಕೊಳ್ಳಲು ಪುನಃ ಯೋಗವನ್ನು ಆಶ್ರಯಿಸಿ ಅವನು ಮಹಾಯೋಗೀಶ್ವರನಾಗಿ ಆಕಾಶವನ್ನೇ ಅತಿಕ್ರಮಿಸಿ ಹೋಗಲು ಸಿದ್ಧನಾದನು.

12319007a ತತಃ ಪ್ರದಕ್ಷಿಣಂ ಕೃತ್ವಾ ದೇವರ್ಷಿಂ ನಾರದಂ ತದಾ|

12319007c ನಿವೇದಯಾಮಾಸ ತದಾ ಸ್ವಂ ಯೋಗಂ ಪರಮರ್ಷಯೇ||

ಅನಂತರ ದೇವರ್ಷಿ ನಾರದನಿಗೆ ಪ್ರದಕ್ಷಿಣೆ ಮಾಡಿ ಆ ಪರಮ ಋಷಿಗೆ ತನ್ನ ಯೋಗದ ಕುರಿತು ಹೇಳಿದನು:

12319008a ದೃಷ್ಟೋ ಮಾರ್ಗಃ ಪ್ರವೃತ್ತೋಽಸ್ಮಿ ಸ್ವಸ್ತಿ ತೇಽಸ್ತು ತಪೋಧನ|

12319008c ತ್ವತ್ಪ್ರಸಾದಾದ್ಗಮಿಷ್ಯಾಮಿ ಗತಿಮಿಷ್ಟಾಂ ಮಹಾದ್ಯುತೇ||

“ತಪೋಧನ! ಮಹಾದ್ಯುತೇ! ನಿನಗೆ ಮಂಗಳವಾಗಲಿ! ನಿನ್ನ ಅನುಗ್ರಹದಿಂದ ಮೋಕ್ಷಮಾರ್ಗವು ಗೋಚರಿತು. ಈಗ ನಾನು ಅಲ್ಲಿಯೇ ಹೊರಡುವವನಿದ್ದೇನೆ. ಇಷ್ಟವಾದ ಅಲ್ಲಿಗೇ ಹೋಗುತ್ತೇನೆ.”

12319009a ನಾರದೇನಾಭ್ಯನುಜ್ಞಾತಸ್ತತೋ ದ್ವೈಪಾಯನಾತ್ಮಜಃ|

12319009c ಅಭಿವಾದ್ಯ ಪುನರ್ಯೋಗಮಾಸ್ಥಾಯಾಕಾಶಮಾವಿಶತ್||

ನಾರದನಿಂದ ಅನುಜ್ಞಾತನಾಗಿ ದ್ವೈಪಾಯನಾತ್ಮಜನು ಅವನನ್ನು ವಂದಿಸಿ, ಪುನಃ ಯೋಗವನ್ನಾಶ್ರಯಿಸಿ ಆಕಾಶವನ್ನು ಪ್ರವೇಶಿಸಿದನು.

12319010a ಕೈಲಾಸಪೃಷ್ಠಾದುತ್ಪತ್ಯ ಸ ಪಪಾತ ದಿವಂ ತದಾ|

12319010c ಅಂತರಿಕ್ಷಚರಃ ಶ್ರೀಮಾನ್ ವ್ಯಾಸಪುತ್ರಃ ಸುನಿಶ್ಚಿತಃ||

ಸುನಿಶ್ಚಿತನಾಗಿದ್ದ ಶ್ರೀಮಾನ್ ವ್ಯಾಸಪುತ್ರನು ಕೈಲಾಸಪೃಷ್ಠದಿಂದ ಹಾರಿ ಆಕಾಶವನ್ನು ಸೇರಿ ಅಂತರಿಕ್ಷಚರನಾದನು.

12319011a ತಮುದ್ಯಂತಂ ದ್ವಿಜಶ್ರೇಷ್ಠಂ ವೈನತೇಯಸಮದ್ಯುತಿಮ್|

12319011c ದದೃಶುಃ ಸರ್ವಭೂತಾನಿ ಮನೋಮಾರುತರಂಹಸಮ್||

ಹಾಗೆ ಮನಸ್ಸು ಮತ್ತು ವಾಯುವಿನ ವೇಗದಲ್ಲಿ ಮೇಲೆಹೋಗುತ್ತಿದ್ದ ವೈನತೇಯ ಸಮದ್ಯುತಿ ಆ ದ್ವಿಜಶ್ರೇಷ್ಠನನ್ನು ಸರ್ವಭೂತಗಳೂ ನೋಡಿದವು.

12319012a ವ್ಯವಸಾಯೇನ ಲೋಕಾಂಸ್ತ್ರೀನ್ಸರ್ವಾನ್ಸೋಽಥ ವಿಚಿಂತಯನ್|

12319012c ಆಸ್ಥಿತೋ ದಿವ್ಯಮಧ್ವಾನಂ ಪಾವಕಾರ್ಕಸಮಪ್ರಭಃ||

ಅಗ್ನಿ-ಸೂರ್ಯರ ಸಮಾನ ಪ್ರಭೆಯಿದ್ದ ಅವನು ಮೂರು ಲೋಕಗಳನ್ನೂ ಆತ್ಮಭಾವದಿಂದ ನೋಡುತ್ತಾ ಆ ದಿವ್ಯ ಮಾರ್ಗದಲ್ಲಿದ್ದುಕೊಂಡು ಪ್ರಯಾಣಿಸಿದನು.

12319013a ತಮೇಕಮನಸಂ ಯಾಂತಮವ್ಯಗ್ರಮಕುತೋಭಯಮ್|

12319013c ದದೃಶುಃ ಸರ್ವಭೂತಾನಿ ಜಂಗಮಾನೀತರಾಣಿ ಚ||

ಏಕಮನಸ್ಕನಾಗಿ ಹೋಗುತ್ತಿದ್ದ ಆ ಅವ್ಯಗ್ರ ಭಯರಹಿತ ಶುಕನನ್ನು ಸರ್ವಭೂತಗಳೂ – ಜಂಗಮ-ಸ್ಥಾವರಗಳು – ನೋಡಿದವು.

12319014a ಯಥಾಶಕ್ತಿ ಯಥಾನ್ಯಾಯಂ ಪೂಜಯಾಂ ಚಕ್ರಿರೇ ತದಾ|

12319014c ಪುಷ್ಪವರ್ಷೈಶ್ಚ ದಿವ್ಯೈಸ್ತಮವಚಕ್ರುರ್ದಿವೌಕಸಃ||

ಎಲ್ಲ ಭೂತಗಳೂ ಯಥಾಶಕ್ತಿಯಾಗಿ ಯಥಾನ್ಯಾಯವಾಗಿ ಅವನಿಗೆ ಪೂಜೆಗಳನ್ನು ಸಲ್ಲಿಸಿದವು. ದಿವೌಕಸರು ಅವನ ಮೇಲೆ ದಿವ್ಯ ಪುಷ್ಪವೃಷ್ಟಿಯನ್ನು ಸುರಿಸಿದರು.

12319015a ತಂ ದೃಷ್ಟ್ವಾ ವಿಸ್ಮಿತಾಃ ಸರ್ವೇ ಗಂಧರ್ವಾಪ್ಸರಸಾಂ ಗಣಾಃ|

12319015c ಋಷಯಶ್ಚೈವ ಸಂಸಿದ್ಧಾಃ ಪರಂ ವಿಸ್ಮಯಮಾಗತಾಃ||

ಅವನನ್ನು ನೋಡಿ ಸರ್ವ ಗಂಧರ್ವ-ಅಪ್ಸರಗಣಗಳೂ ವಿಸ್ಮಿತಗೊಂಡವು. ಸಂಸಿದ್ಧ ಋಷಿಗಳೂ ಪರಮ ವಿಸ್ಮಿತರಾದರು.

12319016a ಅಂತರಿಕ್ಷಚರಃ ಕೋಽಯಂ ತಪಸಾ ಸಿದ್ಧಿಮಾಗತಃ|

12319016c ಅಧಃಕಾಯೋರ್ಧ್ವವಕ್ತ್ರಶ್ಚ ನೇತ್ರೈಃ ಸಮಭಿವಾಹ್ಯತೇ||

“ತಪಸ್ಸಿನಿಂದ ಸಿದ್ಧಿಯನ್ನು ಪಡೆದುಕೊಂಡಿರುವ ಈ ಅಂತರಿಕ್ಷಚರನು ಯಾರು? ಇವನ ಶರೀರವು ಕೆಳಮುಖವಾಗಿದೆ. ಮುಖವು ಮೇಲ್ಮುಖವಾಗಿದೆ. ನಮ್ಮ ಕಣ್ಣುಗಳನ್ನು ಇವನು ತನ್ನೆಡೆಯೇ ಸೆಳೆದುಕೊಳ್ಳುತ್ತಿದ್ದಾನೆ!”

12319017a ತತಃ ಪರಮಧೀರಾತ್ಮಾ ತ್ರಿಷು ಲೋಕೇಷು ವಿಶ್ರುತಃ|

12319017c ಭಾಸ್ಕರಂ ಸಮುದೀಕ್ಷನ್ಸ ಪ್ರಾಙ್ಮುಖೋ ವಾಗ್ಯತೋಽಗಮತ್|

12319017e ಶಬ್ದೇನಾಕಾಶಮಖಿಲಂ ಪೂರಯನ್ನಿವ ಸರ್ವತಃ||

ಅನಂತರ ಮೂರು ಲೋಕಗಳಲ್ಲಿಯೂ ವಿಶ್ರುತನಾದ ಆ ಪರಮ ಧೀರಾತ್ಮನು ಭಾಸ್ಕರನನ್ನೇ ನೋಡುತ್ತಾ ಪೂರ್ವಾಭಿಮುಖವಾಗಿ ಅಖಿಲ ಆಕಾಶವನ್ನೂ ಎಲ್ಲಕಡೆಗಳಲ್ಲಿ ಶಬ್ದದಿಂದ ತುಂಬುತ್ತಾ ಮುಂದೆ ಸಾರಿದನು.

12319018a ತಮಾಪತಂತಂ ಸಹಸಾ ದೃಷ್ಟ್ವಾ ಸರ್ವಾಪ್ಸರೋಗಣಾಃ|

12319018c ಸಂಭ್ರಾಂತಮನಸೋ ರಾಜನ್ನಾಸನ್ ಪರಮವಿಸ್ಮಿತಾಃ|

12319018e ಪಂಚಚೂಡಾಪ್ರಭೃತಯೋ ಭೃಶಮುತ್ಫುಲ್ಲಲೋಚನಾಃ||

ರಾಜನ್! ಒಮ್ಮೆಲೇ ತಮ್ಮಕಡೆ ಬರುತ್ತಿದ್ದ ಅವನನ್ನು ನೋಡಿ ಪಂಚಚೂಡಳೇ ಮೊದಲಾದ ಸರ್ವ ಅಪ್ಸರಗಣಗಳೂ ಸಂಭ್ರಾಂತಮನಸ್ಕರಾಗಿ ಪರಮವಿಸ್ಮಿತರಾಗಿ ವಿಕಸಿತ ಕಣ್ಣುಗಳಿಂದ ಅವನನ್ನು ನೋಡುತ್ತಾ ಪರಸ್ಪರರಲ್ಲಿ ಹೇಳಿಕೊಂಡವು:  

12319019a ದೈವತಂ ಕತಮಂ ಹ್ಯೇತದುತ್ತಮಾಂ ಗತಿಮಾಸ್ಥಿತಮ್|

12319019c ಸುನಿಶ್ಚಿತಮಿಹಾಯಾತಿ ವಿಮುಕ್ತಮಿವ ನಿಃಸ್ಪೃಹಮ್||

“ಉತ್ತಮ ಗತಿಯನ್ನಾಶ್ರಯಿಸಿ ಯಾವ ದೇವತೆಯು ಇತ್ತ ಕಡೆ ಬರುತ್ತಿದೆ? ಇದು ಸುನಿಶ್ಚಿತ ಜ್ಞಾನದಿಂದ ಕೂಡಿ ಸಕಲ ಬಂಧನಗಳಿಂದಲೂ ಸಂಶಯಗಳಿಂದಲೂ ಮುಕ್ತವಾಗಿರುವಂತಿದೆ. ಇದರ ಮನಸ್ಸಿನಲ್ಲಿ ಆಸೆ ಎಂಬುದೇ ಇಲ್ಲವೆಂದು ತೋರುತ್ತದೆ!”.

12319020a ತತಃ ಸಮತಿಚಕ್ರಾಮ ಮಲಯಂ ನಾಮ ಪರ್ವತಮ್|

12319020c ಉರ್ವಶೀ ಪೂರ್ವಚಿತ್ತಿಶ್ಚ ಯಂ ನಿತ್ಯಮುಪಸೇವತೇ|

12319020e ತೇ ಸ್ಮ ಬ್ರಹ್ಮರ್ಷಿಪುತ್ರಸ್ಯ ವಿಸ್ಮಯಂ ಯಯತುಃ ಪರಮ್||

ಅನಂತರ ಅವನು ಊರ್ವಶೀ ಮತ್ತು ಪೂರ್ವಚಿತ್ತಿಯರು ನಿತ್ಯವೂ ಸೇವಿಸುವ ಮಲಯ ಎಂಬ ಪರ್ವತದ ಕಡೆಗೆ ಹೋದನು. ಆ ಬ್ರಹ್ಮರ್ಷಿಪುತ್ರನನ್ನು ನೋಡಿ ಅವರು ಪರಮ ವಿಸ್ಮಿತರಾದರು.

12319021a ಅಹೋ ಬುದ್ಧಿಸಮಾಧಾನಂ ವೇದಾಭ್ಯಾಸರತೇ ದ್ವಿಜೇ|

12319021c ಅಚಿರೇಣೈವ ಕಾಲೇನ ನಭಶ್ಚರತಿ ಚಂದ್ರವತ್|

12319021e ಪಿತೃಶುಶ್ರೂಷಯಾ ಸಿದ್ಧಿಂ ಸಂಪ್ರಾಪ್ತೋಽಯಮನುತ್ತಮಾಮ್||

“ಆಹಾ! ವೇದಾಭ್ಯಾಸರತನಾಗಿರುವ ಈ ದ್ವಿಜನ ಬುದ್ಧಿಸಮಾಧಾನವೇ! ಪಿತೃಶುಶ್ರೂಷೆಯಿಂದ ಅನುತ್ತಮ ಸಿದ್ಧಿಯನ್ನು ಪಡೆದು ಇವನು ಅತ್ಯಂತ ಸ್ವಲ್ಪವೇ ಕಾಲದಲ್ಲಿ ಚಂದ್ರನಂತೆ ನಭಕ್ಕೇರುತ್ತಿದ್ದಾನೆ!

12319022a ಪಿತೃಭಕ್ತೋ ದೃಢತಪಾಃ ಪಿತುಃ ಸುದಯಿತಃ ಸುತಃ|

12319022c ಅನನ್ಯಮನಸಾ ತೇನ ಕಥಂ ಪಿತ್ರಾ ವಿವರ್ಜಿತಃ||

ಪಿತೃಭಕ್ತನೂ, ದೃಢತಪಸ್ವಿಯೂ, ತಂದೆಯ ಮುದ್ದಿನ ಮಗನೂ ಆದ ಇವನನ್ನು ಅನನ್ಯಮನಸ್ಕನಾದ ತಂದೆಯು ಹೇಗೆ ಕಳುಹಿಸಿಕೊಟ್ಟನು?”

12319023a ಉರ್ವಶ್ಯಾ ವಚನಂ ಶ್ರುತ್ವಾ ಶುಕಃ ಪರಮಧರ್ಮವಿತ್|

12319023c ಉದೈಕ್ಷತ ದಿಶಃ ಸರ್ವಾ ವಚನೇ ಗತಮಾನಸಃ||

ಊರ್ವಶಿಯ ಮಾತನ್ನು ಕೇಳಿ ಪರಮಧರ್ಮವಿದು ಶುಕನು ಎಲ್ಲ ದಿಕ್ಕುಗಳನ್ನೂ ವೀಕ್ಷಿಸಿ, ಅವಳ ಮಾತಿನ ಕುರಿತು ಯೋಚಿಸಿದನು.

12319024a ಸೋಽಂತರಿಕ್ಷಂ ಮಹೀಂ ಚೈವ ಸಶೈಲವನಕಾನನಾಮ್|

12319024c ಆಲೋಕಯಾಮಾಸ ತದಾ ಸರಾಂಸಿ ಸರಿತಸ್ತಥಾ||

ಅವನು ಅಂತರಿಕ್ಷವನ್ನೂ, ಶೈಲ-ವನ-ಕಾನನಗಳೊಂದಿಗೆ ಮಹಿಯನ್ನೂ, ಸರೋವರ-ನದಿಗಳನ್ನೂ ಅವಲೋಕಿಸಿದನು.

12319025a ತತೋ ದ್ವೈಪಾಯನಸುತಂ ಬಹುಮಾನಪುರಃಸರಮ್|

12319025c ಕೃತಾಂಜಲಿಪುಟಾಃ ಸರ್ವಾ ನಿರೀಕ್ಷಂತೇ ಸ್ಮ ದೇವತಾಃ||

12319026a ಅಬ್ರವೀತ್ತಾಸ್ತದಾ ವಾಕ್ಯಂ ಶುಕಃ ಪರಮಧರ್ಮವಿತ್|

12319026c ಪಿತಾ ಯದ್ಯನುಗಚ್ಚೇನ್ಮಾಂ ಕ್ರೋಶಮಾನಃ ಶುಕೇತಿ ವೈ||

12319027a ತತಃ ಪ್ರತಿವಚೋ ದೇಯಂ ಸರ್ವೈರೇವ ಸಮಾಹಿತೈಃ|

12319027c ಏತನ್ಮೇ ಸ್ನೇಹತಃ ಸರ್ವೇ ವಚನಂ ಕರ್ತುಮರ್ಹಥ||

ಆಗ ಅಲ್ಲಿಯ ಸರ್ವ ದೇವತೆಗಳೂ ಬದ್ಧಾಂಜಲಿಗಳಾಗಿ ಎಲ್ಲ ಕಡೆಗಳಿಂದಲೂ ಆದರಪೂರ್ವಕವಾಗಿ ಅವನನ್ನೇ ನೋಡುತ್ತಿದ್ದರು. ಪರಮ ಧರ್ಮವಿದು ಶುಕನು ಬಹುಮಾನದಿಂದ ತನ್ನನ್ನೇ ನೋಡುತ್ತಿದ್ದ ದೇವತೆಗಳಿಗೆ ಈ ಮಾತನ್ನಾಡಿದನು: “ಶುಕಾ! ಎಂದು ಕೂಗುತ್ತಾ ನನ್ನ ತಂದೆಯೇನಾದರೂ ಇಲ್ಲಿಗೆ ಬಂದರೆ ನೀವೆಲ್ಲರೂ ಒಟ್ಟಾಗಿ ಅವನಿಗೆ ಪ್ರತಿಧ್ವನಿಯನ್ನು ನೀಡಬೇಕು. ನನ್ನ ಮೇಲಿನ ಸ್ನೇಹದಿಂದ ನೀವೆಲ್ಲರೂ ಈ ವಚನದಂತೆ ಮಾಡಬೇಕು.”

12319028a ಶುಕಸ್ಯ ವಚನಂ ಶ್ರುತ್ವಾ ದಿಶಃ ಸವನಕಾನನಾಃ|

12319028c ಸಮುದ್ರಾಃ ಸರಿತಃ ಶೈಲಾಃ ಪ್ರತ್ಯೂಚುಸ್ತಂ ಸಮಂತತಃ||

12319029a ಯಥಾಜ್ಞಾಪಯಸೇ ವಿಪ್ರ ಬಾಢಮೇವಂ ಭವಿಷ್ಯತಿ|

12319029c ಋಷೇರ್ವ್ಯಾಹರತೋ ವಾಕ್ಯಂ ಪ್ರತಿವಕ್ಷ್ಯಾಮಹೇ ವಯಮ್||

ಶುಕನ ವಚನವನ್ನು ಕೇಳಿ ವನ-ಕಾನನಗಳೊಂದಿಗೆ ದಿಕ್ಕುಗಳು, ಸಮುದ್ರಗಳು, ನದಿಗಳು, ಶೈಲಗಳು ಎಲ್ಲಕಡೆಗಳಿಂದ ಪ್ರತ್ಯುತ್ತರಿಸಿದವು: “ವಿಪ್ರ! ನೀನು ಆಜ್ಞಾಪಿಸಿದಂತೆಯೇ ಆಗುತ್ತದೆ. ಋಷಿಯು ಆಡಿದ ಮಾತನ್ನೇ ನಾವು ಪ್ರತಿಧ್ವನಿಸುತ್ತೇವೆ!””

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಶುಕಾಭಿಪತನೇ ಏಕೋನವಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಶುಕಾಭಿಪತನ ಎನ್ನುವ ಮುನ್ನೂರಾಹತ್ತೊಂಭತ್ತನೇ ಅಧ್ಯಾಯವು.

Mountain White Background Images, Stock Photos & Vectors | Shutterstock

[1] ಗಿರಿಶೃಂಗಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.