ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೩೦೭
ಪಂಚಶಿಖ-ಜನಕ ಸಂವಾದ
ಜರಾಮೃತ್ಯುಗಳನ್ನು ಅತಿಕ್ರಮಿಸುವ ವಿಷಯದಲ್ಲಿ ಜನಕ ಮತ್ತು ಪಂಚಶಿಖರ ಸಂವಾದ (1-14).
12307001 ಯುಧಿಷ್ಠಿರ ಉವಾಚ|
12307001a ಐಶ್ವರ್ಯಂ ವಾ ಮಹತ್ಪ್ರಾಪ್ಯ ಧನಂ ವಾ ಭರತರ್ಷಭ|
12307001c ದೀರ್ಘಮಾಯುರವಾಪ್ಯಾಥ ಕಥಂ ಮೃತ್ಯುಮತಿಕ್ರಮೇತ್||
ಯುಧಿಷ್ಠಿರನು ಹೇಳಿದನು: “ಭರತರ್ಷಭ! ಮಹಾ ಐಶ್ವರ್ಯವನ್ನಾಗಲೀ ಧನವನ್ನಾಗಲೀ ಅಥವಾ ದೀರ್ಘ ಆಯುಷ್ಯವನ್ನಾಗಲೀ ಪಡೆದ ಬಳಿಕ ಮನುಷ್ಯನು ಹೇಗೆ ಮೃತ್ಯುವನ್ನು ದಾಟಬಲ್ಲನು?
12307002a ತಪಸಾ ವಾ ಸುಮಹತಾ ಕರ್ಮಣಾ ವಾ ಶ್ರುತೇನ ವಾ|
12307002c ರಸಾಯನಪ್ರಯೋಗೈರ್ವಾ ಕೈರ್ನೋಪೈತಿ ಜರಾಂತಕೌ||
ಮಹಾ ತಪಸ್ಸಿನಿಂದಾಗಲಿ ಅಥವಾ ಕರ್ಮಗಳಿಂದಾಗಲೀ ಅಥವಾ ವೇದಶಾಸ್ತ್ರಗಳ ಅಧ್ಯಯನದಿಂದಾಗಲೀ, ರಸಾಯನಗಳ ಪ್ರಯೋಗದಿಂದಾಗಲೀ ಅಥವಾ ಬೇರೆ ಯಾವುದರಿಂದಾಗಲೀ ಮನುಷ್ಯನು ಜರಾ-ಮೃತ್ಯುಗಳಿಂದ ತಪ್ಪಿಸಿಕೊಳ್ಳಬಲ್ಲನೇ?”
12307003 ಭೀಷ್ಮ ಉವಾಚ|
12307003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
12307003c ಭಿಕ್ಷೋಃ ಪಂಚಶಿಖಸ್ಯೇಹ ಸಂವಾದಂ ಜನಕಸ್ಯ ಚ||
ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಭಿಕ್ಷು ಪಂಚಶಿಖ ಮತ್ತು ಜನಕರ ಸಂವಾದವನ್ನು ಉದಾಹರಿಸುತ್ತಾರೆ.
12307004a ವೈದೇಹೋ ಜನಕೋ ರಾಜಾ ಮಹರ್ಷಿಂ ವೇದವಿತ್ತಮಮ್|
12307004c ಪರ್ಯಪೃಚ್ಚತ್ಪಂಚಶಿಖಂ ಚಿನ್ನಧರ್ಮಾರ್ಥಸಂಶಯಮ್||
ವಿದೇಹದ ರಾಜಾ ಜನಕನು ಮಹರ್ಷಿ ವೇದವಿತ್ತಮ ಪಂಚಶಿಖನನ್ನು ಕೆಲವು ಧರ್ಮಾರ್ಥಸಂಶಯಿಕ ಪ್ರಶ್ನೆಗಳನ್ನು ಕೇಳಿದನು.
12307005a ಕೇನ ವೃತ್ತೇನ ಭಗವನ್ನತಿಕ್ರಾಮೇಜ್ಜರಾಂತಕೌ|
12307005c ತಪಸಾ ವಾಥ ಬುದ್ಧ್ಯಾ ವಾ ಕರ್ಮಣಾ ವಾ ಶ್ರುತೇನ ವಾ||
“ಭಗವನ್! ಯಾವ ನಡತೆಯಿಂದ ತಪಸ್ಸು ಅಥವಾ ಬುದ್ಧಿ ಅಥವಾ ಕರ್ಮ ಅಥವಾ ವೇದಾಧ್ಯಯನನ – ಮುಪ್ಪು ಮತ್ತು ಸಾವುಗಳನ್ನು ಉಲ್ಲಂಘಿಸಲು ಸಾಧ್ಯವಾಗುತ್ತದೆ?”
12307006a ಏವಮುಕ್ತಃ ಸ ವೈದೇಹಂ ಪ್ರತ್ಯುವಾಚ ಪರೋಕ್ಷವಿತ್|
12307006c ನಿವೃತ್ತಿರ್ನೈತಯೋರಸ್ತಿ ನಾನಿವೃತ್ತಿಃ ಕಥಂ ಚನ||
ಈ ಪ್ರಶ್ನೆಗೆ ಪರೋಕ್ಷಜ್ಞಾನಿ ಪಂಚಶಿಖನು ವೈದೇಹನಿಗೆ ಉತ್ತರಿಸಿದನು: “ಮುಪ್ಪು ಮತ್ತು ಮೃತ್ಯುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಅವುಗಳಿಂದ ನಿವೃತ್ತಿಯಾಗುವುದಿಲ್ಲ ಎನ್ನುವುದೂ ಇಲ್ಲ.
12307007a ನ ಹ್ಯಹಾನಿ ನಿವರ್ತಂತೇ ನ ಮಾಸಾ ನ ಪುನಃ ಕ್ಷಪಾಃ|
12307007c ಸೋಽಯಂ ಪ್ರಪದ್ಯತೇಽಧ್ವಾನಂ ಚಿರಾಯ ಧ್ರುವಮಧ್ರುವಃ||
ದಿನಗಳು, ಮಾಸಗಳು ಮತ್ತು ಕ್ಷಣಗಳು ಚಲಿಸುತ್ತಲೇ ಇರುತ್ತವೆ. ಯಾವುವೂ ಹಿಂದಿರುಗಿ ಬರುವುದಿಲ್ಲ. ಆದರೆ ದೀರ್ಘಕಾಲದ ನಂತರ ಮನುಷ್ಯನು ಶಾಶ್ವತ ಮೋಕ್ಷಮಾರ್ಗವನ್ನು ಆಶ್ರಯಿಸುತ್ತಾನೆ.
12307008a ಸರ್ವಭೂತಸಮುಚ್ಚೇದಃ ಸ್ರೋತಸೇವೋಹ್ಯತೇ ಸದಾ|
12307008c ಉಹ್ಯಮಾನಂ ನಿಮಜ್ಜಂತಮಪ್ಲವೇ ಕಾಲಸಾಗರೇ|
12307008e ಜರಾಮೃತ್ಯುಮಹಾಗ್ರಾಹೇ ನ ಕಶ್ಚಿದಭಿಪದ್ಯತೇ||
ನದಿಯ ಪ್ರವಾಹವು ವಸ್ತುಗಳನ್ನು ತೇಲಿಸಿಕೊಂಡು ಹೋಗುವಂತೆ ಸರ್ವಪ್ರಾಣಿಗಳನ್ನೂ ವಿನಾಶಗೊಳಿಸುವ ಕಾಲನು ತನ್ನ ಪ್ರವಾಹದಲ್ಲಿ ಪ್ರಾಣಿಗಳನ್ನು ಒಯ್ಯುತ್ತಿರುತ್ತಾನೆ. ಮುಪ್ಪು ಮತ್ತು ಸಾವುಗಳೆಂಬ ಮೊಸಳೆಗಳಿಂದ ಕೂಡಿರುವ ಮತ್ತು ನೌಕೆಯಿಲ್ಲದ ಕಾಲಸಮುದ್ರದಲ್ಲಿ ಮುಳುಗುತ್ತಿರುವ ಜೀವನನ್ನು ಯಾರೂ ಪಾರುಮಾಡಲಾರರು.
12307009a ನೈವಾಸ್ಯ ಭವಿತಾ ಕಶ್ಚಿನ್ನಾಸೌ ಭವತಿ ಕಸ್ಯ ಚಿತ್|
12307009c ಪಥಿ ಸಂಗತಮೇವೇದಂ ದಾರೈರನ್ಯೈಶ್ಚ ಬಂಧುಭಿಃ|
12307009e ನಾಯಮತ್ಯಂತಸಂವಾಸೋ ಲಬ್ಧಪೂರ್ವೋ ಹಿ ಕೇನ ಚಿತ್||
ಈ ಜೀವಕ್ಕೆ ತನ್ನದೆಂಬುದು ಯಾವುದೂ ಇಲ್ಲ. ಇದು ಬೆರೆ ಯಾರಿಗೂ ಸೇರಿಲ್ಲ. ದಾರಿಹೋಕರು ಒಂದೆಡೆಯಲ್ಲಿ ಸೇರುವಂತೆ ಪತ್ನಿ ಮತ್ತು ಇತರ ಬಂಧುಗಳು ಜೀವನೊಂದಿಗೆ ಸೇರಿಕೊಂಡಿರುತ್ತಾರೆ. ಆದರೆ ಇದೂವರೆಗೆ ಯಾರೂ ಯಾರೊಡನೆಯೂ ಅಂತ್ಯವಿಲ್ಲದ ಸಹವಾಸವನ್ನು ಮಾಡಿಕೊಂಡಿರುವುದು ಇಲ್ಲವೇ ಇಲ್ಲ.
12307010a ಕ್ಷಿಪ್ಯಂತೇ ತೇನ ತೇನೈವ ನಿಷ್ಟನಂತಃ ಪುನಃ ಪುನಃ|
12307010c ಕಾಲೇನ ಜಾತಾ ಜಾತಾ ಹಿ ವಾಯುನೇವಾಭ್ರಸಂಚಯಾಃ||
ಗಾಳಿಯು ಮೇಘಸಂಕುಲಗಳನ್ನು ಹೇಗೋ ಹಾಗೆ ಕಾಲನು ಜೀವಿಗಳನ್ನು ತನ್ನ ಚಕ್ರದಲ್ಲಿ ಸಿಲುಕಿಸಿ ಕಾಲಾಗ್ನಿಯಲ್ಲಿ ಬೇಯಿಸಿ ಅನಂತರ ಎಲ್ಲೆಲ್ಲಿಗೋ ಎಸೆದುಬಿಡುತ್ತಾನೆ.
12307011a ಜರಾಮೃತ್ಯೂ ಹಿ ಭೂತಾನಾಂ ಖಾದಿತಾರೌ ವೃಕಾವಿವ|
12307011c ಬಲಿನಾಂ ದುರ್ಬಲಾನಾಂ ಚ ಹ್ರಸ್ವಾನಾಂ ಮಹತಾಮಪಿ||
ಬಲಶಾಲಿಗಳಾಗಿರಲಿ, ದುರ್ಬಲರಾಗಿರಲಿ, ಕುಬ್ಜರಾಗಿರಲಿ, ದೊಡ್ಡದೇಹದವರಾಗಿರಲಿ ಜೀವಿಗಳನ್ನು ತೋಳಗಳಂತಿರುವ ಜರಾ-ಮೃತ್ಯುಗಳು ತಿಂದುಹಾಕುತ್ತವೆ.
12307012a ಏವಂಭೂತೇಷು ಭೂತೇಷು ನಿತ್ಯಭೂತಾಧ್ರುವೇಷು ಚ|
12307012c ಕಥಂ ಹೃಷ್ಯೇತ ಜಾತೇಷು ಮೃತೇಷು ಚ ಕಥಂ ಜ್ವರೇತ್||
ಹೀಗೆ ಇರುವವೆಲ್ಲವೂ ಅಶಾಶ್ವತವಾಗಿರುವಾ ನಿತ್ಯನಾದ ಆತ್ಮನು ಹುಟ್ಟಿದರೆ ಎಕೆ ಸಂತೋಷಪಡಬೇಕು? ಮತ್ತು ಸತ್ತರೆ ಏಕೆ ದುಃಖಿಸಬೇಕು?
12307013a ಕುತೋಽಹಮಾಗತಃ ಕೋಽಸ್ಮಿ ಕ್ವ ಗಮಿಷ್ಯಾಮಿ ಕಸ್ಯ ವಾ|
12307013c ಕಸ್ಮಿನ್ ಸ್ಥಿತಃ ಕ್ವ ಭವಿತಾ ಕಸ್ಮಾತ್ಕಿಮನುಶೋಚಸಿ||
ನಾನು ಯಾರು? ಎಲ್ಲಿಂದ ಬಂದೆನು? ಎಲ್ಲಿಗೆ ಹೋಗುತ್ತೇನೆ? ನಾನು ಯಾರಿಗೆ ಸಂಬಂಧಿಸಿದವನು? ನಾನೀಗ ಎಲ್ಲಿದ್ದೇನೆ? ಪುನಃ ಎಲ್ಲಿ ಹುಟ್ಟುತ್ತೇನೆ? ಇವೆಲ್ಲವನ್ನೂ ಯೊಚಿಸಿದರೆ ಯಾರಿಗೋಸ್ಕರ ಏಕೆ ಶೋಕಿಸಬೇಕು?
12307014a ದ್ರಷ್ಟಾ ಸ್ವರ್ಗಸ್ಯ ನ ಹ್ಯಸ್ತಿ ತಥೈವ ನರಕಸ್ಯ ಚ|
12307014c ಆಗಮಾಂಸ್ತ್ವನತಿಕ್ರಮ್ಯ ದದ್ಯಾಚ್ಚೈವ ಯಜೇತ ಚ||
ಜ್ಞಾನಿಗಳಲ್ಲದೇ ಬೇರೆ ಯಾರು ತಾನೇ ಸ್ವರ್ಗ ಅಥವಾ ನರಕವನ್ನು ನೋಡಿದ್ದಾರೆ? ಆದರೆ ಆಗಮಗಳನ್ನು ಉಲ್ಲಂಘಿಸಿದದೇ ದಾನಮಾಡಬೇಕು ಮತ್ತು ಯಜಿಸಬೇಕು.”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಪಂಚಶಿಖಜನಕಸಂವಾದೇ ಸಪ್ತಾಧಿಕತ್ರಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಪಂಚಶಿಖಜನಕಸಂವಾದ ಎನ್ನುವ ಮುನ್ನೂರಾಏಳನೇ ಅಧ್ಯಾಯವು.