ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೨೮೮
ಹಂಸಗೀತೆ[1]
ಹಂಸರೂಪಧರನಾದ ಬ್ರಹ್ಮನು ಸಾಧ್ಯರಿಗೆ ಆಧ್ಯಾತ್ಮೋಪದೇಶವನ್ನು ನೀಡಿದುದು (೧-೪೨).
12288001 ಯುಧಿಷ್ಠಿರ ಉವಾಚ|
12288001a ಸತ್ಯಂ ಕ್ಷಮಾಂ ದಮಂ ಪ್ರಜ್ಞಾಂ ಪ್ರಶಂಸಂತಿ ಪಿತಾಮಹ|
12288001c ವಿದ್ವಾಂಸೋ ಮನುಜಾ ಲೋಕೇ ಕಥಮೇತನ್ಮತಂ ತವ||
ಯುಧಿಷ್ಠಿರನು ಹೇಳಿದನು: “ಪಿತಾಮಹ! ಮನುಷ್ಯಲೋಕದಲ್ಲಿ ವಿದ್ವಾಂಸರು ಸತ್ಯ, ಕ್ಷಮೆ, ದಮೆ, ಮತ್ತು ಪ್ರಜ್ಞೆಗಳನ್ನು ಪ್ರಶಂಸಿಸುತ್ತಾರೆ. ಇದರಲ್ಲಿ ನಿನ್ನ ಮತವೇನು?”
12288002 ಭೀಷ್ಮ ಉವಾಚ|
12288002a ಅತ್ರ ತೇ ವರ್ತಯಿಷ್ಯೇಽಹಮಿತಿಹಾಸಂ ಪುರಾತನಮ್|
12288002c ಸಾಧ್ಯಾನಾಮಿಹ ಸಂವಾದಂ ಹಂಸಸ್ಯ ಚ ಯುಧಿಷ್ಠಿರ||
ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಸಾಧ್ಯರು ಮತ್ತು ಹಂಸದ ಸಂವಾದವನ್ನು ಹೇಳುತ್ತೇನೆ.
12288003a ಹಂಸೋ ಭೂತ್ವಾಥ ಸೌವರ್ಣಸ್ತ್ವಜೋ ನಿತ್ಯಃ ಪ್ರಜಾಪತಿಃ|
12288003c ಸ ವೈ ಪರ್ಯೇತಿ ಲೋಕಾಂಸ್ತ್ರೀನಥ ಸಾಧ್ಯಾನುಪಾಗಮತ್||
ಒಮ್ಮೆ ಅಜ, ನಿತ್ಯ, ಪ್ರಜಾಪತಿಯು ಸುವರ್ಣ ಹಂಸರೂಪವನ್ನು ಧರಿಸಿ ಮೂರು ಲೋಕಗಳಲ್ಲಿಯೂ ಸಂಚರಿಸುತ್ತಿರುವಾಗ ಅವನು ಸಾಧ್ಯರ ಬಳಿ ಹೋದನು.
12288004a ಶಕುನೇ ವಯಂ ಸ್ಮ ದೇವಾ ವೈ ಸಾಧ್ಯಾಸ್ತ್ವಾಮನುಯುಜ್ಮಹೇ|
12288004c ಪೃಚ್ಚಾಮಸ್ತ್ವಾಂ ಮೋಕ್ಷಧರ್ಮಂ ಭವಾಂಶ್ಚ ಕಿಲ ಮೋಕ್ಷವಿತ್||
ಸಾಧ್ಯರು ಹೇಳಿದರು: “ಪಕ್ಷಿಯೇ! ನಾವು ಸಾಧ್ಯರೆಂಬ ದೇವತೆಗಳು. ನಾವು ನಿನ್ನಿಂದ ಮೋಕ್ಷಧರ್ಮವನ್ನು ಕೇಳಿ ತಿಳಿಯ ಬಯಸುತ್ತೇವೆ. ನೀನಾದರೋ ಮೋಕ್ಷವಿದುವಾಗಿರುವೆ.
12288005a ಶ್ರುತೋಽಸಿ ನಃ ಪಂಡಿತೋ ಧೀರವಾದೀ
ಸಾಧುಶಬ್ದಃ ಪತತೇ ತೇ ಪತತ್ರಿನ್|
12288005c ಕಿಂ ಮನ್ಯಸೇ ಶ್ರೇಷ್ಠತಮಂ ದ್ವಿಜ ತ್ವಂ
ಕಸ್ಮಿನ್ಮನಸ್ತೇ ರಮತೇ ಮಹಾತ್ಮನ್||
ಪತತ್ರಿನ್! ನೀನು ಪಂಡಿತನೂ, ಧೀರವಾದಿಯೂ ಎಂದು ಕೇಳಿದ್ದೇವೆ. ನಿನ್ನ ಉತ್ತಮ ವಾಣಿಯು ಸರ್ವತ್ರ ಪ್ರಚಾರದಲ್ಲಿದೆ. ಪಕ್ಷಿಯೇ! ನೀನು ಯಾವುದನ್ನು ಎಲ್ಲವುದಕ್ಕಿಂತ ಶ್ರೇಷ್ಠವೆಂದು ಭಾವಿಸುತ್ತೀಯೆ? ಮಹಾತ್ಮನ್! ನಿನ್ನ ಮನಸ್ಸು ಯಾವುದರಲ್ಲಿ ರಮಿಸುತ್ತದೆ?
12288006a ತನ್ನಃ ಕಾರ್ಯಂ ಪಕ್ಷಿವರ ಪ್ರಶಾಧಿ
ಯತ್ಕಾರ್ಯಾಣಾಂ ಮನ್ಯಸೇ ಶ್ರೇಷ್ಠಮೇಕಮ್|
12288006c ಯತ್ ಕೃತ್ವಾ ವೈ ಪುರುಷಃ ಸರ್ವಬಂಧೈರ್
ವಿಮುಚ್ಯತೇ ವಿಹಗೇಂದ್ರೇಹ ಶೀಘ್ರಮ್||
ಪಕ್ಷಿಶ್ರೇಷ್ಠ! ವಿಹಗೇಂದ್ರ! ಯಾವ ಒಂದು ಕಾರ್ಯವನ್ನು ನೀನು ಎಲ್ಲ ಕಾರ್ಯಗಳಿಗಿಂತ ಶ್ರೇಷ್ಠವೆಂದು ಭಾವಿಸುತ್ತೀಯೋ ಮತ್ತು ಯಾವುದನ್ನು ಮಾಡಿದರೆ ಪುರುಷನು ಸರ್ವಬಂಧನಗಳಿಂದ ಮುಕ್ತನಾಗುವನೋ ಆ ಕಾರ್ಯವನ್ನು ಮಾಡಲು ಶೀಘ್ರವಾಗಿ ನಮಗೆ ಆಜ್ಞಾಪಿಸು.”
12288007 ಹಂಸ ಉವಾಚ|
12288007a ಇದಂ ಕಾರ್ಯಮಮೃತಾಶಾಃ ಶೃಣೋಮಿ
ತಪೋ ದಮಃ ಸತ್ಯಮಾತ್ಮಾಭಿಗುಪ್ತಿಃ|
12288007c ಗ್ರಂಥೀನ್ವಿಮುಚ್ಯ ಹೃದಯಸ್ಯ ಸರ್ವಾನ್
ಪ್ರಿಯಾಪ್ರಿಯೇ ಸ್ವಂ ವಶಮಾನಯೀತ||[2]
ಹಂಸವು ಹೇಳಿತು: “ಅಮೃತ ಭೋಜಿಗಳೇ! ತಪಸ್ಸು, ಇಂದ್ರಿಯನಿಗ್ರಹ, ಸತ್ಯನಿಷ್ಠೆ ಮತ್ತು ಮನೋನಿಗ್ರಹ ಇವೇ ಎಲ್ಲ ಕಾರ್ಯಗಳಿಗಿಂತಲೂ ಶ್ರೇಷ್ಠವೆಂದು ನಾನು ಕೇಳಿದ್ದೇನೆ. ಹೃದಯದಲ್ಲಿರುವ ಸರ್ವ ಗ್ರಂಥಿಗಳನ್ನೂ ಕಿತ್ತುಹಾಕಿ ಪ್ರಿಯಾಪ್ರಿಯಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕು.
12288008a ನಾರುಂತುದಃ ಸ್ಯಾನ್ನ ನೃಶಂಸವಾದೀ
ನ ಹೀನತಃ ಪರಮಭ್ಯಾದದೀತ|
12288008c ಯಯಾಸ್ಯ ವಾಚಾ ಪರ ಉದ್ವಿಜೇತ
ನ ತಾಂ ವದೇದ್ರುಶತೀಂ ಪಾಪಲೋಕ್ಯಾಮ್||
ಯಾರಿಗೂ ನೋವನ್ನುಂಟುಮಾಡಬಾರದು. ನಿಷ್ಠುರವಾಗಿ ಮಾತನಾಡಬಾರದು. ಹೀನರಿಂದ ಪರಾವಿದ್ಯೆಯ ಉಪದೇಶವನ್ನು ಪಡೆದುಕೊಳ್ಳಬಾರದು. ಯಾವುದನ್ನು ಕೇಳಿ ಇತರರು ಉದ್ವೇಗಗೊಳ್ಳುತ್ತಾರೋ ಅಂತಹ ನರಕಪ್ರಾಪಕ, ಅಮಂಗಳಮಯ ಮಾತನ್ನು ಆಡಬಾರದು.
12288009a ವಾಕ್ಸಾಯಕಾ ವದನಾನ್ನಿಷ್ಪತಂತಿ
ಯೈರಾಹತಃ ಶೋಚತಿ ರಾತ್ರ್ಯಹಾನಿ|
12288009c ಪರಸ್ಯ ನಾಮರ್ಮಸು ತೇ ಪತಂತಿ
ತಾನ್ಪಂಡಿತೋ ನಾವಸೃಜೇತ್ಪರೇಷು||
ಕಠಿಣಮಾತುಗಳು ಮನುಷ್ಯನ ಬಾಯಿಂದ ಬಾಣಗಳೋಪಾದಿಯಲ್ಲಿ ಹೊರಬೀಳುತ್ತವೆ. ಅವುಗಳಿಂದ ಪ್ರಹೃತನಾದವನು ಹಗಲು-ರಾತ್ರಿಯೂ ದುಃಖಪಡುತ್ತಾನೆ. ಏಕೆಂದರೆ ಆ ವಾಗ್ಬಾಣಗಳು ಅವನ ಮರ್ಮಸ್ಥಾನದ ಹೊರತಾಗಿ ಬೇರೆ ಎಲ್ಲಿಯೂ ಬಿದ್ದಿರುವುದಿಲ್ಲ. ಆದುದರಿಂದ ಪಂಡಿತನಾದವನು ಅಂತಹ ಕಠಿಣ ವಾಗ್ಬಾಣಗಳನ್ನು ಇತರರ ಮೇಲೆ ಪ್ರಯೋಗಿಸಕೂಡದು.
12288010a ಪರಶ್ಚೇದೇನಮತಿವಾದಬಾಣೈರ್
ಭೃಶಂ ವಿಧ್ಯೇಚ್ಚಮ ಏವೇಹ ಕಾರ್ಯಃ|
12288010c ಸಂರೋಷ್ಯಮಾಣಃ ಪ್ರತಿಮೃಷ್ಯತೇ ಯಃ
ಸ ಆದತ್ತೇ ಸುಕೃತಂ ವೈ ಪರಸ್ಯ||
ಬೇರೆ ಯಾರಾದರೂ ನಿಂದಾರೂಪದ ವಾಗ್ಬಾಣಗಳನ್ನು ಬಲವಾಗಿ ಪ್ರಯೋಗಿಸಿದರೂ ವಿದ್ವಾಂಸನು ಅದಕ್ಕೆ ಪ್ರತಿಯಾಗಿ ವಾಗ್ಬಾಣಗಳನ್ನು ಪ್ರಹರಿಸದೆಯೇ ಶಾಂತನಾಗಿಯೇ ಇದ್ದುಬಿಡಬೇಕು. ಇನ್ನೊಬ್ಬನು ತನ್ನ ಮೇಲೆ ಕೋಪಗೊಂಡರೂ ಅಥವಾ ತನ್ನನ್ನು ಕೋಪಗೊಳ್ಳುವಂತೆ ಮಾಡುತ್ತಿದ್ದರೂ ಪ್ರಸನ್ನನಾಗಿಯೇ ಇರುವವನು ಕೋಪಗೊಂಡವನ ಅಥವಾ ನಿಂದಿಸಿದವನ ಪುಣ್ಯವನ್ನು ಸೆಳೆದುಕೊಳ್ಳುತ್ತಾನೆ.
12288011a ಕ್ಷೇಪಾಭಿಮಾನಾದಭಿಷಂಗವ್ಯಲೀಕಂ[3]
ನಿಗೃಹ್ಣಾತಿ ಜ್ವಲಿತಂ ಯಶ್ಚ ಮನ್ಯುಮ್|
12288011c ಅದುಷ್ಟಚೇತಾ ಮುದಿತೋಽನಸೂಯುಃ
ಸ ಆದತ್ತೇ ಸುಕೃತಂ ವೈ ಪರೇಷಾಮ್||
ಅಭಿಮಾನದಿಂದ ನಿಂದಿಸುವ ಮತ್ತು ಆವೇಶಗೊಳ್ಳುವ ಪ್ರಜ್ವಲಿತ ಕೋಪವನ್ನು ತಡೆದುಕೊಳ್ಳುವ, ಯಾವುದೇ ಚಿತ್ತವಿಕಾರದೋಷಗಳಿಗೂ ಎಡೆಮಾಡಿಕೊಡದ, ಮತ್ತು ಪ್ರಸನ್ನನಾಗಿದ್ದುಕೊಂಡು ಇತರರ ದೋಷವನ್ನು ನೋಡದ ಪುರುಷನು ತನ್ನ ಕುರಿತು ಶತ್ರುಭಾವವನ್ನಿಟ್ಟುಕೊಂಡಿರುವ ಜನರ ಪುಣ್ಯವನ್ನು ತೆಗೆದುಕೊಳ್ಳುತ್ತಾನೆ.
12288012a ಆಕ್ರುಶ್ಯಮಾನೋ ನ ವದಾಮಿ ಕಿಂ ಚಿತ್
ಕ್ಷಮಾಮ್ಯಹಂ ತಾಡ್ಯಮಾನಶ್ಚ ನಿತ್ಯಮ್|
12288012c ಶ್ರೇಷ್ಠಂ ಹ್ಯೇತತ್ ಕ್ಷಮಮಪ್ಯಾಹುರಾರ್ಯಾಃ
ಸತ್ಯಂ ತಥೈವಾರ್ಜವಮಾನೃಶಂಸ್ಯಮ್||
ಇನ್ನೊಬ್ಬನು ನನ್ನನ್ನು ನಿಂದಿಸಿದರೂ ಅದಕ್ಕೆ ಪ್ರತಿಯಾಗಿ ನಾನು ಏನನ್ನೂ ಹೇಳುವುದಿಲ್ಲ. ಇನ್ನೊಬ್ಬನು ನನ್ನನ್ನು ಹೊಡೆದರೂ ನಿತ್ಯವೂ ಅವನನ್ನು ಕ್ಷಮಿಸುತ್ತೇನೆ. ಏಕೆಂದರೆ ಕ್ಷಮೆ, ಸತ್ಯ, ಸರಳತೆ ಮತ್ತು ದಯೆ ಇವು ಶ್ರೇಷ್ಠ ಗುಣಗಳೆಂದು ಆರ್ಯರು ಹೇಳುತ್ತಾರೆ.
12288013a ವೇದಸ್ಯೋಪನಿಷತ್ಸತ್ಯಂ ಸತ್ಯಸ್ಯೋಪನಿಷದ್ದಮಃ|
12288013c ದಮಸ್ಯೋಪನಿಷನ್ಮೋಕ್ಷ ಏತತ್ಸರ್ವಾನುಶಾಸನಮ್||
ವೇದಾಧ್ಯಯನದ ಸಾರವೇ ಸತ್ಯಭಾಷಣ. ಸತ್ಯಭಾಷದ ಸಾರವೇ ಇಂದ್ರಿಯ ಸಂಯಮ ಮತ್ತು ಇಂದ್ರಿಯ ಸಂಯಮದ ಫಲವು ಮೋಕ್ಷ. ಇದೇ ಸಂಪೂರ್ಣ ಶಾಸ್ತ್ರಗಳ ಉಪದೇಶ.
12288014a ವಾಚೋ ವೇಗಂ ಮನಸಃ ಕ್ರೋಧವೇಗಂ
ವಿವಿತ್ಸಾವೇಗ[4]ಮುದರೋಪಸ್ಥವೇಗಮ್|
12288014c ಏತಾನ್ವೇಗಾನ್ಯೋ ವಿಷಹತ್ಯುದೀರ್ಣಾಂಸ್
ತಂ ಮನ್ಯೇಽಹಂ ಬ್ರಾಹ್ಮಣಂ ವೈ ಮುನಿಂ ಚ||
ಮಾತಿನ ವೇಗ, ಮನಸ್ಸು ಮತ್ತು ಕ್ರೋಧದ ವೇಗ, ತೃಷ್ಣೆಯ ವೇಗ, ಹಸಿವೆಯ ವೇಗ ಮತ್ತು ಕಾಮದ ವೇಗ – ಈ ಪ್ರಚಂಡ ವೇಗಗಳನ್ನು ಸಹಿಸಿಕೊಳ್ಳುವವನನ್ನು ನಾನು ಬ್ರಾಹ್ಮಣ ಮತ್ತು ಮುನಿಯೆಂದು ಮನ್ನಿಸುತ್ತೇನೆ.
12288015a ಅಕ್ರೋಧನಃ ಕ್ರುಧ್ಯತಾಂ ವೈ ವಿಶಿಷ್ಟಸ್
ತಥಾ ತಿತಿಕ್ಷುರತಿತಿಕ್ಷೋರ್ವಿಶಿಷ್ಟಃ|
12288015c ಅಮಾನುಷಾನ್ಮಾನುಷೋ ವೈ ವಿಶಿಷ್ಟಸ್
ತಥಾಜ್ಞಾನಾಜ್ಜ್ಞಾನವಾನ್ವೈ ಪ್ರಧಾನಃ||
ಕ್ರೋಧಿಗಿಂತಲೂ ಕ್ರೋಧಪಡದೇ ಇರುವವನು ಶ್ರೇಷ್ಠನು. ಅಸಹನಶೀಲನಿಗಿಂತ ಸಹನಶೀಲನು ಶ್ರೇಷ್ಠನು. ಮನುಷ್ಯೇತರ ಪ್ರಾಣಿಗಳಿಗಿಂತ ಮನುಷ್ಯನು ಶ್ರೇಷ್ಠನು. ಹಾಗೆಯೇ ಅಜ್ಞಾನಿಗಳಿಗಿಂತ ಜ್ಞಾನಿಯೇ ಶ್ರೇಷ್ಠನು.
12288016a ಆಕ್ರುಶ್ಯಮಾನೋ ನಾಕ್ರೋಶೇನ್ಮನ್ಯುರೇವ ತಿತಿಕ್ಷತಃ|
12288016c ಆಕ್ರೋಷ್ಟಾರಂ ನಿರ್ದಹತಿ ಸುಕೃತಂ ಚಾಸ್ಯ ವಿಂದತಿ||
ತನ್ನನ್ನು ನಿಂದಿಸುತ್ತಿರುವವನನ್ನು ಸಹಿಸಿಕೊಂಡು ತಿರುಗಿ ನಿಂದಿಸದೇ ಇರುವವನು ತಡೆದಿಟ್ಟುಕೊಂಡ ಕೋಪವೇ ನಿಂದೆಮಾಡಿದವನನ್ನು ಸುಟ್ಟುಬಿಡುತ್ತದೆ ಮತ್ತು ಅವನಲ್ಲಿರುವ ಸುಕೃತಗಳನ್ನೂ ಕ್ಷಮಾವಂತನು ಪಡೆದುಕೊಳ್ಳುತ್ತಾನೆ.
12288017a ಯೋ ನಾತ್ಯುಕ್ತಃ ಪ್ರಾಹ ರೂಕ್ಷಂ ಪ್ರಿಯಂ ವಾ
ಯೋ ವಾ ಹತೋ ನ ಪ್ರತಿಹಂತಿ ಧೈರ್ಯಾತ್|
12288017c ಪಾಪಂ ಚ ಯೋ ನೇಚ್ಚತಿ ತಸ್ಯ ಹಂತುಸ್
ತಸ್ಮೈ ದೇವಾಃ ಸ್ಪೃಹಯಂತೇ ಸದೈವ||
ಇನ್ನೊಬ್ಬನಿಂದ ನಿಂದಿಸಲ್ಪಟ್ಟರೂ ಅಥವಾ ಸ್ತುತಿಸಲ್ಪಟ್ಟರೂ ಕಠೋರವಾದ ಅಥವಾ ಪ್ರಿಯವಾದ ಮಾತುಗಳನ್ನು ಯಾರು ಆಡುವುದಿಲ್ಲವೋ, ಮತ್ತು ಬೇರೆಯವರು ಹೊಡೆದರೂ ಮನಃಸ್ಥೈರ್ಯದಿಂದ ಅವನನ್ನು ಹೊಡೆಯಲು ಹೋಗುವುದಿಲ್ಲವೋ ಮತ್ತು ಹೊಡೆದವನಿಗೆ ಕೇಡನ್ನೂ ಬಯಸುವುದಿಲ್ಲವೋ ಅಂತಹ ಮಹಾತ್ಮನನ್ನು ಸಂದರ್ಶಿಸಲು ದೇವತೆಗಳೂ ಕೂಡ ಸದಾ ಆಸಕ್ತರಾಗಿರುತ್ತಾರೆ.
12288018a ಪಾಪೀಯಸಃ ಕ್ಷಮೇತೈವ ಶ್ರೇಯಸಃ ಸದೃಶಸ್ಯ ಚ|
12288018c ವಿಮಾನಿತೋ ಹತೋಽಽಕ್ರುಷ್ಟ ಏವಂ ಸಿದ್ಧಿಂ ಗಮಿಷ್ಯತಿ||
ಪಾಪಿಯು ತನಗಿಂತ ದೊಡ್ಡವನಾಗಿರಲಿ, ಸಣ್ಣವನಾಗಿರಲಿ ಅಥವಾ ತನ್ನ ಸಮನಾಗಿರಲಿ, ಅವನಿಂದ ಅಪಮಾನಿತನಾಗಿ, ಹೊಡೆತತಿಂದು ಮತ್ತು ನಿಂದೆಯನ್ನು ಕೇಳಿದ ನಂತರವೂ ಅವನನ್ನು ಕ್ಷಮಿಸಿಬಿಡಬೇಕು. ಹೀಗೆ ಮಾಡುವವನು ಪರಮ ಸಿದ್ಧಿಯನ್ನು ಪಡೆದುಕೊಳ್ಳುತ್ತಾನೆ.
12288019a ಸದಾಹಮಾರ್ಯಾನ್ನಿಭೃತೋಽಪ್ಯುಪಾಸೇ
ನ ಮೇ ವಿವಿತ್ಸಾ ನ ಚ ಮೇಽಸ್ತಿ ರೋಷಃ[5]|
12288019c ನ ಚಾಪ್ಯಹಂ ಲಿಪ್ಸಮಾನಃ ಪರೈಮಿ
ನ ಚೈವ ಕಿಂ ಚಿದ್ವಿಷಮೇಣ ಯಾಮಿ||
ನಾನು ಪರಿಪೂರ್ಣನಾಗಿದ್ದರೂ ಸದಾ ಆರ್ಯರನ್ನು ಉಪಾಸಿಸುತ್ತೇನೆ. ನನ್ನಲ್ಲಿ ತೃಷ್ಣೆಯಿಲ್ಲ ಮತ್ತು ನನ್ನಲ್ಲಿ ರೋಷವೂ ಇಲ್ಲ. ಯಾವುದನ್ನಾದರೂ ಪಡೆಯಬೇಕೆಂದು ನಾನು ಧರ್ಮವನ್ನು ಉಲ್ಲಂಘಿಸುವುದಿಲ್ಲ. ವಿಷಯಸುಖಗಳನ್ನರಸಿಕೊಂಡು ಹೋಗುವುದಿಲ್ಲ.
12288020a ನಾಹಂ ಶಪ್ತಃ ಪ್ರತಿಶಪಾಮಿ ಕಿಂ ಚಿದ್
ದಮಂ ದ್ವಾರಂ ಹ್ಯಮೃತಸ್ಯೇಹ ವೇದ್ಮಿ|
12288020c ಗುಹ್ಯಂ ಬ್ರಹ್ಮ ತದಿದಂ ವೋ ಬ್ರವೀಮಿ
ನ ಮಾನುಷಾಚ್ಚ್ರೇಷ್ಠತರಂ ಹಿ ಕಿಂ ಚಿತ್||
ಯಾರಾದರೂ ನನಗೆ ಶಪಿಸಿದರೂ ನಾನು ಪ್ರತಿಯಾಗಿ ಅವರನ್ನು ಶಪಿಸುವುದಿಲ್ಲ. ಇಂದ್ರಿಯ ಸಂಯಮವೇ ಮೋಕ್ಷಕ್ಕೆ ದ್ವಾರವೆಂದು ತಿಳಿದಿದ್ದೇನೆ. ಈಗ ನಾನು ನಿಮಗೆ ಒಂದು ಅತ್ಯಂತ ಗುಹ್ಯ ವಿಷಯವನ್ನು ಹೇಳುತ್ತೇನೆ. ಕೇಳಿ. ಮನುಷ್ಯಯೋನಿಗಿಂತಲೂ ಶ್ರೇಷ್ಠವಾದ ಯೋನಿಯು ಇನ್ನೊಂದಿಲ್ಲ.
12288021a ವಿಮುಚ್ಯಮಾನಃ ಪಾಪೇಭ್ಯೋ ಧನೇಭ್ಯ[6] ಇವ ಚಂದ್ರಮಾಃ|
12288021c ವಿರಜಾಃ ಕಾಲಮಾಕಾಂಕ್ಷನ್ಧೀರೋ ಧೈರ್ಯೇಣ ಸಿಧ್ಯತಿ||
ಮೋಡಗಳಿಂದ ಬಿಡುಗಡೆ ಹೊಂದಿದ ಚಂದ್ರನು ಆಕಾಶದಲ್ಲಿ ಪ್ರಕಾಶಿಸುವಂತೆ ಪಾಪಮುಕ್ತನಾದ ನಿರ್ಮಲ ಅಂತಃಕರಣಯುಕ್ತ ಧೀರ ಮನುಷ್ಯನು ಧೈರ್ಯದಿಂದ ಕಾಲವನ್ನು ಪ್ರತೀಕ್ಷಿಸಿ ಸಿದ್ಧಿಯನ್ನು ಹೊಂದುತ್ತಾನೆ.
12288022a ಯಃ ಸರ್ವೇಷಾಂ ಭವತಿ ಹ್ಯರ್ಚನೀಯ
ಉತ್ಸೇಚನೇ ಸ್ತಂಭ[7] ಇವಾಭಿಜಾತಃ|
12288022c ಯಸ್ಮೈ ವಾಚಂ ಸುಪ್ರಶಸ್ತಾಂ ವದಂತಿ
ಸ ವೈ ದೇವಾನ್ಗಚ್ಚತಿ ಸಂಯತಾತ್ಮಾ||
ಮೇಲ್ಮುಖವಾಗಿ ನಿಲ್ಲಿಸಿದ ಕಂಭದಂತೆ ಉಚ್ಚಕುಲದಲ್ಲಿ ಹುಟ್ಟಿ ಎಲ್ಲರ ಆದರ-ಗೌರವಗಳಿಗೂ ಮತ್ತು ಎಲ್ಲರ ಪ್ರಶಂಸೆಯ ಮಾತುಗಳಿಗೂ ಪಾತ್ರನಾದ ಆತ್ಮಸಂಯಮಿಯು ದೇವತೆಗಳನ್ನು ಸೇರುತ್ತಾನೆ.
12288023a ನ ತಥಾ ವಕ್ತುಮಿಚ್ಚಂತಿ ಕಲ್ಯಾಣಾನ್ಪುರುಷೇ ಗುಣಾನ್|
12288023c ಯಥೈಷಾಂ ವಕ್ತುಮಿಚ್ಚಂತಿ ನೈರ್ಗುಣ್ಯಮನುಯುಂಜಕಾಃ||
ಇನ್ನೊಬ್ಬನೊಂದಿಗೆ ಈರ್ಷೆಪಡುವವನು ಅವನ ದೋಷಗಳನ್ನು ವರ್ಣಿಸಲು ಎಷ್ಟು ಬಯಸುತ್ತಾನೋ ಅಷ್ಟು ಅವನ ಕಲ್ಯಾಣಮಯ ಗುಣಗಳನ್ನು ವರ್ಣಿಸಲು ಬಯಸುವುದಿಲ್ಲ.
12288024a ಯಸ್ಯ ವಾಙ್ಮನಸೀ ಗುಪ್ತೇ ಸಮ್ಯಕ್ಪ್ರಣಿಹಿತೇ ಸದಾ|
12288024c ವೇದಾಸ್ತಪಶ್ಚ ತ್ಯಾಗಶ್ಚ ಸ ಇದಂ ಸರ್ವಮಾಪ್ನುಯಾತ್||
ಯಾರ ಮಾತು ಮತ್ತು ಮನಸ್ಸುಗಳು ಸರಕ್ಷಿತವಾಗಿ ಸದಾ ಎಲ್ಲ ರೀತಿಯಲ್ಲಿಯೂ ಪರಮಾತ್ಮನಲ್ಲಿ ಸೇರಿರುತ್ತವೆಯೋ ಅವರ ವೇದಾಧ್ಯಯನ, ತಪಸ್ಸು ಮತ್ತು ತ್ಯಾಗ – ಎಲ್ಲವೂ ಫಲಿಸುತ್ತವೆ.
12288025a ಆಕ್ರೋಶನಾವಮಾನಾಭ್ಯಾಮಬುಧಾದ್ವರ್ಧತೇ ಬುಧಃ|
12288025c ತಸ್ಮಾನ್ನ ವರ್ಧಯೇದನ್ಯಂ ನ ಚಾತ್ಮಾನಂ ವಿಹಿಂಸಯೇತ್||
ಆದುದರಿಂದ ತಿಳಿದವನು ಕಟುವಾಗಿ ಮಾತನಾಡುವ ಅಥವಾ ಅಪಮಾನಿಸುವ ಅಜ್ಞಾನಿಗಳಿಗೆ ಅವರ ಆ ದೋಷಗಳನ್ನು ತೋರಿಸಿ ತಿಳುವಳಿಕೆ ಹೇಳಲು ಪ್ರಯತ್ನಿಸಬಾರದು. ಅಂಥವರ ಎದಿರು ಇತರರನ್ನು ಹೊಗಳಿ ಅಥವಾ ಅವನನ್ನು ಆಕ್ಷೇಪಿಸಿ ಅವನಿಂದ ತನಗೇ ಹಿಂಸೆಯಾಗುವಂತೆ ಮಾಡಿಕೊಳ್ಳಬಾರದು.
12288026a ಅಮೃತಸ್ಯೇವ ಸಂತೃಪ್ಯೇದವಮಾನಸ್ಯ ವೈ ದ್ವಿಜಃ|
12288026c ಸುಖಂ ಹ್ಯವಮತಃ ಶೇತೇ ಯೋಽವಮಂತಾ ಸ ನಶ್ಯತಿ||
ದುಷ್ಟರಿಂದ ಅಪಮಾನಿತನಾದ ದ್ವಿಜನು ಅಮೃತವನ್ನು ಕುಡಿದವನಷ್ಟೇ ಸಂತುಷ್ಟನಾಗಿರಬೇಕು. ಏಕೆಂದರೆ ಅಪಮಾನಿತನು ಸುಖವಾಗಿ ನಿದ್ರಿಸುತ್ತಾನೆ. ಆದರೆ ಅಪಮಾನಮಾಡಿದವನು ವಿನಾಶಹೊಂದುತ್ತಾನೆ.
12288027a ಯತ್ಕ್ರೋಧನೋ ಯಜತೇ ಯದ್ದದಾತಿ
ಯದ್ವಾ ತಪಸ್ತಪ್ಯತಿ ಯಜ್ಜುಹೋತಿ|
12288027c ವೈವಸ್ವತಸ್ತದ್ಧರತೇಽಸ್ಯ ಸರ್ವಂ
ಮೋಘಃ ಶ್ರಮೋ ಭವತಿ ಕ್ರೋಧನಸ್ಯ||
ಕ್ರುದ್ಧಮನುಷ್ಯನು ಮಾಡಿದ ಯಜ್ಞ, ದಾನ, ತಪಸ್ಸು ಮತ್ತು ಹೋಮಗಳನ್ನು ವೈವಸ್ವತ ಯಮನು ಅಪಹರಿಸುತ್ತಾನೆ. ಆದುದರಿಂದ ಕೋಪಿಷ್ಠನ ಶ್ರಮವೆಲ್ಲವೂ ವ್ಯರ್ಥವೇ.
12288028a ಚತ್ವಾರಿ ಯಸ್ಯ ದ್ವಾರಾಣಿ ಸುಗುಪ್ತಾನ್ಯಮರೋತ್ತಮಾಃ|
12288028c ಉಪಸ್ಥಮುದರಂ ಹಸ್ತೌ ವಾಕ್ಚತುರ್ಥೀ ಸ ಧರ್ಮವಿತ್||
ಅಮರೋತ್ತಮರೇ! ಯಾರ ಉಪಸ್ಥ, ಉದರ, ಕೈಗಳು ಮತ್ತು ಮಾತು – ಈ ನಾಲ್ಕು ದ್ವಾರಗಳು ಸುರಕ್ಷಿತವಾಗಿರುವವೋ ಅವನೇ ಧರ್ಮಜ್ಞನು.
12288029a ಸತ್ಯಂ ದಮಂ ಹ್ಯಾರ್ಜವಮಾನೃಶಂಸ್ಯಂ
ಧೃತಿಂ ತಿತಿಕ್ಷಾಮಭಿಸೇವಮಾನಃ|
12288029c ಸ್ವಾಧ್ಯಾಯನಿತ್ಯೋಽಸ್ಪೃಹಯನ್ಪರೇಷಾಮ್
ಏಕಾಂತಶೀಲ್ಯೂರ್ಧ್ವಗತಿರ್ಭವೇತ್ಸಃ||
ಸತ್ಯ, ಇಂದ್ರಿಯಸಂಯಮ, ಸರಳತೆ, ದಯೆ, ಧೈರ್ಯ ಮತ್ತು ಕ್ಷಮೆ – ಇವುಗಳನ್ನು ಹೆಚ್ಚಾಗಿ ಆಶ್ರಯಿಸುವ ಮತ್ತು ಸದಾ ಸ್ವಾಧ್ಯಾಯದಲ್ಲಿ ನಿರತನಾಗಿರುವ, ಇತರರ ವಸ್ತುಗಳನ್ನು ಬಯಸದ, ಮತ್ತು ಏಕಾಂತದಲ್ಲಿ ವಾಸಿಸುವ ವ್ಯಕ್ತಿಯು ಊರ್ಧ್ವಗತಿಯನ್ನು ಹೊಂದುತ್ತಾನೆ.
12288030a ಸರ್ವಾನೇತಾನನುಚರನ್ವತ್ಸವಚ್ಚತುರಃ ಸ್ತನಾನ್|
12288030c ನ ಪಾವನತಮಂ ಕಿಂ ಚಿತ್ಸತ್ಯಾದಧ್ಯಗಮಂ ಕ್ವ ಚಿತ್||
ಹಸುವಿನ ಕರುವು ತನ್ನ ತಾಯಿಯ ನಾಲ್ಕೂ ಮೊಲೆಗಳಿಂದಲೂ ಸ್ತನಪಾನಮಾಡುವಂತೆ ಮನುಷ್ಯನು ಮೇಲೆ ಹೇಳಿರುವ ಎಲ್ಲ ಸದ್ಗುಣಗಳನ್ನೂ ಆಚರಣೆಯಲ್ಲಿಟ್ಟುಕೊಂಡಿರಬೇಕು. ಇದೂವರೆಗೆ ನಾನು ಸತ್ಯಕ್ಕಿಂತಲೂ ಪಾವನವಾದ ಬೇರೆ ಯಾವುದನ್ನೂ ಎಲ್ಲಿಯೂ ನೋಡಿಲ್ಲ.
12288031a ಆಚಕ್ಷೇಽಹಂ ಮನುಷ್ಯೇಭ್ಯೋ ದೇವೇಭ್ಯಃ ಪ್ರತಿಸಂಚರನ್|
12288031c ಸತ್ಯಂ ಸ್ವರ್ಗಸ್ಯ ಸೋಪಾನಂ ಪಾರಾವಾರಸ್ಯ ನೌರಿವ||
ನಾನು ಎಲ್ಲ ಕಡೆ ಸಂಚರಿಸುತ್ತಾ ದೇವತೆಗಳಿಗೂ ಮತ್ತು ಮನುಷ್ಯರಿಗೂ – ಸಮುದ್ರವನ್ನು ದಾಟಲು ನೌಕೆಯು ಸಾಧನವಾಗಿರುವಂತೆ ಸತ್ಯವು ಸ್ವರ್ಗದ ಸೋಪಾನವೆಂದು ಹೇಳುತ್ತಿರುತ್ತೇನೆ.
12288032a ಯಾದೃಶೈಃ ಸಂನಿವಸತಿ ಯಾದೃಶಾಂಶ್ಚೋಪಸೇವತೇ|
12288032c ಯಾದೃಗಿಚ್ಚೇಚ್ಚ ಭವಿತುಂ ತಾದೃಗ್ಭವತಿ ಪೂರುಷಃ||
ಮನುಷ್ಯನು ಎಂತಹ ಮನುಷ್ಯರೊಡನೆ ವಾಸಮಾಡುತ್ತಾನೋ, ಎಂಥವರ ಸೇವೆಮಾಡುತ್ತಾನೋ ಮತ್ತು ಹೇಗೆ ಇರಬೇಕೆಂದು ಇಚ್ಛಿಸುತ್ತಾನೋ ಹಾಗೆಯೇ ಆಗುತ್ತಾನೆ.
12288033a ಯದಿ ಸಂತಂ ಸೇವತೇ ಯದ್ಯಸಂತಂ
ತಪಸ್ವಿನಂ ಯದಿ ವಾ ಸ್ತೇನಮೇವ|
12288033c ವಾಸೋ ಯಥಾ ರಂಗವಶಂ ಪ್ರಯಾತಿ
ತಥಾ ಸ ತೇಷಾಂ ವಶಮಭ್ಯುಪೈತಿ||
ಯಾವ ಬಣ್ಣದಲ್ಲಿ ಬಟ್ಟೆಯನ್ನು ಅದ್ದುತ್ತೇವೋ ಅದೇ ಬಣ್ಣವನ್ನು ಬಟ್ಟೆಯು ಪಡೆದುಕೊಳ್ಳುವಂತೆ ಮನುಷ್ಯನು ಸಂತರನ್ನು ಸೇವಿಸಿದರೆ ಸಂತನಾಗುತ್ತಾನೆ, ಕೆಟ್ಟವರ ಸಹವಾಸವನ್ನು ಮಾಡಿದರೆ ಕೆಟ್ಟವನಾಗುತ್ತಾನೆ, ತಪಸ್ವಿಯ ಸಹವಾಸದಿಂದ ತಪಸ್ವಿಯಾಗುತ್ತಾನೆ ಮತ್ತು ಕಳ್ಳರ ಸಹವಾಸದಿಂದ ಕಳ್ಳನಾಗುತ್ತಾನೆ.
12288034a ಸದಾ ದೇವಾಃ ಸಾಧುಭಿಃ ಸಂವದಂತೇ
ನ ಮಾನುಷಂ ವಿಷಯಂ ಯಾಂತಿ ದ್ರಷ್ಟುಮ್|
12288034c ನೇಂದುಃ ಸಮಃ ಸ್ಯಾದಸಮೋ ಹಿ ವಾಯುರ್
ಉಚ್ಚಾವಚಂ ವಿಷಯಂ ಯಃ ಸ ವೇದ||
ದೇವತೆಗಳು ಸದಾ ಸಾಧುಜನರ ಸಹವಾಸವನ್ನೇ ಮಾಡುತ್ತಾ ಅವರೊಂದಿಗೆ ಮಾತನಾಡುತ್ತಿರುತ್ತಾರೆ. ಅವರು ಮನುಷ್ಯರ ಕ್ಷಣಿಕ ಸುಖಗಳನ್ನು ನೋಡಿಯೂ ಅರಿಯರು. ವಿಷಯಗಳ ನಶ್ವರ ಸ್ವಭಾವವನ್ನು ಸರಿಯಾಗಿ ತಿಳಿದವನ ಸಮಾನತೆಯನ್ನು ಚಂದ್ರನೂ ಅಥವಾ ವಾಯುವೂ ಹೊಂದಲಾರರು.
12288035a ಅದುಷ್ಟಂ ವರ್ತಮಾನೇ ತು ಹೃದಯಾಂತರಪೂರುಷೇ|
12288035c ತೇನೈವ ದೇವಾಃ ಪ್ರೀಯಂತೇ ಸತಾಂ ಮಾರ್ಗಸ್ಥಿತೇನ ವೈ||
ಹೃದಯಾಂತರಾಳದಲ್ಲಿರುವ ಜೀವಾತ್ಮನು ದೋಷರಹಿತನಾದಾಗ ಮತ್ತು ವ್ಯಕ್ತಿಯು ಸನ್ಮಾರ್ಗಸ್ಥಿತನಾಗಿರುವಾಗ ದೇವತೆಗಳು ಅವನ ಮೇಲೆ ಪ್ರಸನ್ನರಾಗುತ್ತಾರೆ.
12288036a ಶಿಶ್ನೋದರೇ ಯೇಽಭಿರತಾಃ ಸದೈವ
ಸ್ತೇನಾ ನರಾ ವಾಕ್ಪರುಷಾಶ್ಚ ನಿತ್ಯಮ್|
12288036c ಅಪೇತದೋಷಾನಿತಿ ತಾನ್ವಿದಿತ್ವಾ
ದೂರಾದ್ದೇವಾಃ ಸಂಪರಿವರ್ಜಯಂತಿ||
ಸದೈವ ಶಿಶ್ನೋದರಪರಾಯಣರಾಗಿರುವ, ಕಳ್ಳರೂ, ಕಠೋರವಾಗಿ ಮಾತನಾಡುವವರೂ ಆದ ನರರನ್ನು ಪ್ರಾಯಶ್ಚಿತ್ತಾದಿಗಳಿಂದ ಪಾಪಗಳನ್ನು ಕಳೆದುಕೊಂಡಿದ್ದಾರೆಂದು ತಿಳಿದರೂ ದೇವತೆಗಳು ದೂರದಿಂದಲೇ ಪರಿತ್ಯಜಿಸುತ್ತಾರೆ.
12288037a ನ ವೈ ದೇವಾ ಹೀನಸತ್ತ್ವೇನ ತೋಷ್ಯಾಃ
ಸರ್ವಾಶಿನಾ ದುಷ್ಕೃತಕರ್ಮಣಾ ವಾ|
12288037c ಸತ್ಯವ್ರತಾ ಯೇ ತು ನರಾಃ ಕೃತಜ್ಞಾ
ಧರ್ಮೇ ರತಾಸ್ತೈಃ ಸಹ ಸಂಭಜಂತೇ||
ಸತ್ತ್ವಗುಣಹೀನನೂ, ಎಲ್ಲವನ್ನೂ ತಿನ್ನುವವನೂ ಮತ್ತು ದುಷ್ಕೃತಕರ್ಮಿಗಳು ದೇವತೆಗಳನ್ನು ತೃಪ್ತಿಪಡಿಸಲಾರರು. ಸತ್ಯವ್ರತರೂ, ಕೃತಜ್ಞರೂ, ಧರ್ಮರತರೂ ಆದ ನರರೊಂದಿಗೆ ದೇವತೆಗಳು ಉತ್ತಮ ಸಂಬಂಧವನ್ನಿಟ್ಟುಕೊಂಡಿರುತ್ತಾರೆ.
12288038a ಅವ್ಯಾಹೃತಂ ವ್ಯಾಹೃತಾಚ್ಚ್ರೇಯ ಆಹುಃ
ಸತ್ಯಂ ವದೇದ್ವ್ಯಾಹೃತಂ ತದ್ದ್ವಿತೀಯಮ್|
12288038c ಧರ್ಮಂ ವದೇದ್ವ್ಯಾಹೃತಂ ತತ್ತೃತೀಯಂ
ಪ್ರಿಯಂ ವದೇದ್ವ್ಯಾಹೃತಂ ತಚ್ಚತುರ್ಥಮ್||
ವ್ಯರ್ಥಾಲಾಪಕ್ಕಿಂತ ಮಾತನಾಡದಿರುವುದೇ ಶ್ರೇಯಸ್ಕರವೆಂದು ಹೇಳುತ್ತಾರೆ. ಮಾತನಾಡಬೇಕಾಗಿ ಬಂದರೆ ಸತ್ಯವನ್ನೇ ಆಡಬೇಕು ಎನ್ನುವುದು ಮಾತಿನ ಎರಡನೆಯ ನಿಯಮ. ಸತ್ಯವಾದುದನ್ನೂ ಪ್ರಿಯವಾದುದನ್ನೂ ಹೇಳಬೇಕು. ಇದು ಮಾತಿನ ಮೂರನೇ ನಿಯಮ. ಸತ್ಯವಾಗಿಯೂ, ಪ್ರಿಯವಾಗಿಯೂ ಮತ್ತು ಧರ್ಮಸಮ್ಮತವಾಗಿಯೂ ಇರುವ ಮಾತನ್ನೇ ಹೇಳಬೇಕು. ಇದು ಮಾತಿನ ನಾಲ್ಕನೆಯ ನಿಯಮ.[8]”
12288039 ಸಾಧ್ಯಾ ಊಚುಃ|
12288039a ಕೇನಾಯಮಾವೃತೋ ಲೋಕಃ ಕೇನ ವಾ ನ ಪ್ರಕಾಶತೇ|
12288039c ಕೇನ ತ್ಯಜತಿ ಮಿತ್ರಾಣಿ ಕೇನ ಸ್ವರ್ಗಂ ನ ಗಚ್ಚತಿ||
ಸಾಧ್ಯರು ಹೇಳಿದರು: “ಈ ಲೋಕವು ಯಾವುದರಿಂದ ಆವೃತವಾಗಿದೆ? ಏಕೆ ಇದು ಪ್ರಕಾಶಿಸುವುದಿಲ್ಲ? ಯಾವ ಕಾರಣದಿಂದಾಗಿ ಮಿತ್ರರನ್ನು ತ್ಯಜಿಸುತ್ತಾರೆ? ಮತ್ತು ಯಾವ ಕಾರಣದಿಂದಾಗಿ ಸ್ವರ್ಗಕ್ಕೆ ಹೋಗುವುದಿಲ್ಲ?”
12288040 ಹಂಸ ಉವಾಚ|
12288040a ಅಜ್ಞಾನೇನಾವೃತೋ ಲೋಕೋ ಮಾತ್ಸರ್ಯಾನ್ನ ಪ್ರಕಾಶತೇ|
12288040c ಲೋಭಾತ್ತ್ಯಜತಿ ಮಿತ್ರಾಣಿ ಸಂಗಾತ್ಸ್ವರ್ಗಂ ನ ಗಚ್ಚತಿ||
ಹಂಸವು ಹೇಳಿತು: “ಲೋಕವು ಅಜ್ಞಾನದಿಂದ ಆವೃತವಾಗಿದೆ. ಅಸೂಯೆಪಡುವವರು ಪ್ರಕಾಶಿಸುವುದಿಲ್ಲ. ಲೋಭದಿಂದ ಮಿತ್ರರನ್ನು ತ್ಯಜಿಸುತ್ತಾರೆ. ಸಂಗದೋಷದಿಂದ ಸ್ವರ್ಗಕ್ಕೆ ಹೋಗಲು ಸಾಧ್ಯವಾಗುವುದಿಲ್ಲ.”
12288041 ಸಾಧ್ಯಾ ಊಚುಃ|
12288041a ಕಃ ಸ್ವಿದೇಕೋ ರಮತೇ ಬ್ರಾಹ್ಮಣಾನಾಂ
ಕಃ ಸ್ವಿದೇಕೋ ಬಹುಭಿರ್ಜೋಷಮಾಸ್ತೇ|
12288041c ಕಃ ಸ್ವಿದೇಕೋ ಬಲವಾನ್ದುರ್ಬಲೋಽಪಿ
ಕಃ ಸ್ವಿದೇಷಾಂ ಕಲಹಂ ನಾನ್ವವೈತಿ||
ಸಾಧ್ಯರು ಹೇಳಿದರು: “ಬ್ರಾಹ್ಮಣರಲ್ಲಿ ಸುಖಿಯಾಗಿರುವ ಒಬ್ಬನು ಯಾರು? ಅನೇಕರ ಜೊತೆಯಲ್ಲಿದ್ದರೂ ಮೌನಿಯಾಗಿರಬಲ್ಲ ಒಬ್ಬನು ಯಾರು? ದುರ್ಬಲನಾಗಿದ್ದರೂ ಬಲಿಷ್ಠನಾಗಿರುವ ಒಬ್ಬನು ಯಾರು? ಯಾರೊಡನೆಯೂ ಜಗಳವಾಡದೇ ಇರುವವನು ಯಾರು?”
12288042 ಹಂಸ ಉವಾಚ|
12288042a ಪ್ರಾಜ್ಞ ಏಕೋ ರಮತೇ ಬ್ರಾಹ್ಮಣಾನಾಂ
ಪ್ರಾಜ್ಞ ಏಕೋ ಬಹುಭಿರ್ಜೋಷಮಾಸ್ತೇ|
12288042c ಪ್ರಾಜ್ಞ ಏಕೋ ಬಲವಾನ್ದುರ್ಬಲೋಽಪಿ
ಪ್ರಾಜ್ಞ ಏಷಾಂ ಕಲಹಂ ನಾನ್ವವೈತಿ||
ಹಂಸವು ಹೇಳಿತು: “ಬ್ರಾಹ್ಮಣರಲ್ಲಿ ಪ್ರಾಜ್ಞನಾಗಿರುವವನೇ ಸುಖಿಯು. ಪ್ರಾಜ್ಞನು ಅನೇಕರ ಜೊತೆಯಲ್ಲಿದ್ದರೂ ಮೌನಿಯಾಗಿರುತ್ತಾನೆ. ಪ್ರಾಜ್ಞನೊಬ್ಬನೇ ದುರ್ಬಲನಾಗಿದ್ದರೂ ಬಲಿಷ್ಠನು. ಪ್ರಾಜ್ಞನು ಯಾರೊಡನೆಯೂ ಜಗಳವಾಡುವುದಿಲ್ಲ.”
12288043 ಸಾಧ್ಯಾ ಊಚುಃ|
12288043a ಕಿಂ ಬ್ರಾಹ್ಮಣಾನಾಂ ದೇವತ್ವಂ ಕಿಂ ಚ ಸಾಧುತ್ವಮುಚ್ಯತೇ|
12288043c ಅಸಾಧುತ್ವಂ ಚ ಕಿಂ ತೇಷಾಂ ಕಿಮೇಷಾಂ ಮಾನುಷಂ ಮತಮ್||
ಸಾಧ್ಯರು ಹೇಳಿದರು: “ಬ್ರಾಹ್ಮಣರ ದೇವತ್ವವು ಯಾವುದು? ಅವರ ಸಾಧುತ್ವವು ಏನೆಂದು ಹೇಳುತ್ತಾರೆ? ಅವರ ಅಸಾಧುತ್ವವು ಯಾವುದು? ಮತ್ತು ಅವರಲ್ಲಿರುವ ಮನುಷ್ಯತ್ವವು ಯಾವುದು?”
12288044 ಹಂಸ ಉವಾಚ|
12288044a ಸ್ವಾಧ್ಯಾಯ ಏಷಾಂ ದೇವತ್ವಂ ವ್ರತಂ ಸಾಧುತ್ವಮುಚ್ಯತೇ|
12288044c ಅಸಾಧುತ್ವಂ ಪರೀವಾದೋ ಮೃತ್ಯುರ್ಮಾನುಷಮುಚ್ಯತೇ||
ಹಂಸವು ಹೇಳಿತು: “ಸ್ವಾಧ್ಯಾಯವೇ ಬ್ರಾಹ್ಮಣರಿಗೆ ದೇವತ್ವಸಾಧಕವು. ವ್ರತಗಳನ್ನು ಪಾಲಿಸುವುದೇ ಅವರ ಸಾಧುತ್ವ. ಇತರರ ನಿಂದನೆಯೇ ಅವರ ಅಸಾಧುತ್ವ ಮತ್ತು ಮರಣಧರ್ಮವಿರುವುದರಿಂದಲೇ ಅವರನ್ನು ಮನುಷ್ಯರು ಎಂದು ಕರೆಯುತ್ತಾರೆ.”
12288045 ಭೀಷ್ಮ ಉವಾಚ|
12288045a ಸಂವಾದ ಇತ್ಯಯಂ ಶ್ರೇಷ್ಠಃ ಸಾಧ್ಯಾನಾಂ ಪರಿಕೀರ್ತಿತಃ|
12288045c ಕ್ಷೇತ್ರಂ ವೈ ಕರ್ಮಣಾಂ ಯೋನಿಃ ಸದ್ಭಾವಃ ಸತ್ಯಮುಚ್ಯತೇ||
ಭೀಷ್ಮನು ಹೇಳಿದನು: “ಹೀಗೆ ಸಾಧ್ಯರು ಮತ್ತು ಹಂಸಗಳ ನಡುವೆ ನಡೆದ ಈ ಶ್ರೇಷ್ಠಸಂವಾದವನ್ನು ಹೇಳಿದ್ದೇನೆ. ಕರ್ಮಗಳಿಗೆ ಈ ಶರೀರವೇ ಮೂಲಕಾರಣವು ಮತ್ತು ಸದ್ಭಾವವನ್ನೇ ಸತ್ಯ ಎಂದು ಹೇಳುತ್ತಾರೆ.”
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಹಂಸಗೀತಾಯಾಂ ಅಷ್ಟಾಶೀತ್ಯತ್ಯಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಹಂಸಗೀತಾ ಎನ್ನುವ ಇನ್ನೂರಾಎಂಭತ್ತೆಂಟನೇ ಅಧ್ಯಾಯವು.
[1] ಉದ್ಯೋಗ ಪರ್ವದ ಪ್ರಜಾಗರ ಪರ್ವದ ಅಧ್ಯಾಯ ೩೬ ರಲ್ಲಿ ವಿದುರನು ಧೃತರಾಷ್ಟ್ರನಿಗೆ ಹಂಸ ಮತ್ತು ಸಾಧ್ಯರ ನಡುವೆ ನಡೆದ ಸಂವಾದವನ್ನು ಉದಾಹರಿಸಿದ್ದನು. ಅಲ್ಲಿ ಅತ್ರಿಯ ಮಗ ದತ್ತಾತ್ರೇಯನು ಹಂಸದ ರೂಪವನ್ನು ಧರಿಸಿದ್ದನು. ಅಲ್ಲಿರುವ ಸಂವಾದದ ವಿಷಯ ಮತ್ತು ಇಲ್ಲಿ ಭೀಷ್ಮನು ಹೇಳಿರುವ ಹಂಸ-ಸಾಧ್ಯರ ಸಂವಾದದ ವಿಷಯವು ಸಾಧಾರಣ ಒಂದೇ ಎಂದು ತೋರುತ್ತದೆ.
[2] ಉದ್ಯೋಗಪರ್ವದ ಅಧ್ಯಾಯ ೩೬ ರ ೪ನೇ ಶ್ಲೋಕವು ಇದೇ ಶ್ಲೋಕವನ್ನು ಹೋಲುತ್ತದೆ: ಏತತ್ಕಾರ್ಯಮಮರಾಃ ಸಂಶ್ರುತಂ ಮೇ| ಧೃತಿಃ ಶಮಃ ಸತ್ಯಧರ್ಮಾನುವೃತ್ತಿಃ| ಗ್ರಂಥಿಂ ವಿನೀಯ ಹೃದಯಸ್ಯ ಸರ್ವಂ| ಪ್ರಿಯಾಪ್ರಿಯೇ ಚಾತ್ಮವಶಂ ನಯೀತ||
[3] ಕ್ಷೇಪಾಯಮಾಣಮಣಿಷಂಗ್ಯಲೀಕಂ (ಗೀತಾ ಪ್ರೆಸ್/ಭಾರತ ದರ್ಶನ).
[4] ವಿಧಿತ್ಸಾವೇಗ (ಗೀತಾ ಪ್ರೆಸ್/ಭಾರತ ದರ್ಶನ).
[5] ನ ಮೇ ವಿಧಿತ್ಸೋತ್ಸಹತೇ ನ ರೋಷಃ| (ಗೀತಾ ಪ್ರೆಸ್/ಭಾರತ ದರ್ಶನ).
[6] ಘನೇಭ್ಯ (ಗೀತಾ ಪ್ರೆಸ್/ಭಾರತ ದರ್ಶನ).
[7] ಉತ್ಸೈಧನಸ್ತಂಭ (ಭಾರತ ದರ್ಶನ); ಉತ್ಸೇಧನಸ್ತಂಭ (ಗೀತಾ ಪ್ರೆಸ್).
[8] ಇವುಗಳಲ್ಲಿ ಮೊದಲನೆಯದಕ್ಕಿಂತಲೂ ಎರಡನೇ ನಿಯಮವು ಶ್ರೇಷ್ಠವಾದುದು. ಎರಡನೆಯದಕ್ಕಿಂತಲೂ ಮೂರನೆಯದು ಶ್ರೇಷ್ಠವಾದುದು. ಮೂರನೆಯದಕ್ಕಿಂತಲೂ ನಾಲ್ಕನೆಯದು ಶ್ರೇಷ್ಠವಾದುದು (ಭಾರತ ದರ್ಶನ).