Shanti Parva: Chapter 286

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೮೬

ಧರ್ಮ ಮತ್ತು ಕರ್ತವ್ಯಗಳ ಉಪದೇಶ (೧-೪೧).

12286001 ಪರಾಶರ ಉವಾಚ|

12286001a ಪಿತಾ ಸಖಾಯೋ ಗುರವಃ ಸ್ತ್ರಿಯಶ್ಚ

ನ ನಿರ್ಗುಣಾ ನಾಮ ಭವಂತಿ ಲೋಕೇ|

12286001c ಅನನ್ಯಭಕ್ತಾಃ ಪ್ರಿಯವಾದಿನಶ್ಚ

ಹಿತಾಶ್ಚ ವಶ್ಯಾಶ್ಚ ತಥೈವ ರಾಜನ್||

ಪರಾಶರನು ಹೇಳಿದನು: “ರಾಜನ್! ಸಂಸಾರದಲ್ಲಿ ನಿರ್ಗುಣನಾದವನಿಗೆ ತಂದೆ, ಸಖ, ಗುರುಗಳು ಮತ್ತು ಸ್ತ್ರೀಯರು – ಇವರ್ಯಾರೂ ಅವನವರಾಗುವುದಿಲ್ಲ. ಆದರೆ ಅವರು ಈಶ್ವರನ ಅನನ್ಯ ಭಕ್ತ, ಪ್ರಿಯವಾದಿ, ಹಿತೈಷಿ ಮತ್ತು ಇಂದ್ರಿಯವಿಜಯಿಯವನಾಗುತ್ತಾರೆ ಅರ್ಥಾತ್ ಅಂಥವನನ್ನು ಬಿಟ್ಟುಹೋಗುವುದಿಲ್ಲ[1].

12286002a ಪಿತಾ ಪರಂ ದೈವತಂ ಮಾನವಾನಾಂ

ಮಾತುರ್ವಿಶಿಷ್ಟಂ ಪಿತರಂ ವದಂತಿ|

12286002c ಜ್ಞಾನಸ್ಯ ಲಾಭಂ ಪರಮಂ ವದಂತಿ

ಜಿತೇಂದ್ರಿಯಾರ್ಥಾಃ ಪರಮಾಪ್ನುವಂತಿ||

ಮನುಷ್ಯರಿಗೆ ತಂದೆಯು ಪರಮ ದೇವತೆಯು. ತಾಯಿಗಿಂತಲೂ ತಂದೆಯೇ ಶ್ರೇಷ್ಠನೆಂದೂ ಹೇಳುತ್ತಾರೆ. ಜ್ಞಾನವೇ ಪರಮ ಲಾಭವೆಂದು ಹೇಳುತ್ತಾರೆ. ಇಂದ್ರಿಯಗಳನ್ನೂ ಇಂದ್ರಿಯಾರ್ಥಗಳನ್ನೂ ಜಯಿಸಿದವರು ಪರಮಪದವನ್ನು ಪಡೆಯುತ್ತಾರೆ.

12286003a ರಣಾಜಿರೇ ಯತ್ರ ಶರಾಗ್ನಿಸಂಸ್ತರೇ

ನೃಪಾತ್ಮಜೋ ಘಾತಮವಾಪ್ಯ ದಹ್ಯತೇ|

12286003c ಪ್ರಯಾತಿ ಲೋಕಾನಮರೈಃ ಸುದುರ್ಲಭಾನ್

ನಿಷೇವತೇ ಸ್ವರ್ಗಫಲಂ ಯಥಾಸುಖಮ್||

ರಣಾಂಗಣದಲ್ಲಿ ಗಾಯಗೊಂಡು ಶರಾಗ್ನಿಯಲ್ಲಿ ದಗ್ಧನಾಗುವ ನೃಪಾತ್ಮಜನು ಅಮರರಿಗೂ ದುರ್ಲಭವಾದ ಲೋಕಗಳಿಗೆ ಹೋಗುತ್ತಾನೆ ಮತ್ತು ಅಲ್ಲಿ ಆನಂದಪೂರ್ವಕವಾಗಿ ಸ್ವರ್ಗಸುಖವನ್ನು ಭೋಗಿಸುತ್ತಾನೆ.

12286004a ಶ್ರಾಂತಂ ಭೀತಂ ಭ್ರಷ್ಟಶಸ್ತ್ರಂ ರುದಂತಂ

ಪರಾಙ್ಮುಖಂ ಪರಿಬರ್ಹೈಶ್ಚ ಹೀನಮ್|

12286004c ಅನುದ್ಯತಂ ರೋಗಿಣಂ ಯಾಚಮಾನಂ

ನ ವೈ ಹಿಂಸ್ಯಾದ್ಬಾಲವೃದ್ಧೌ ಚ ರಾಜನ್||

ರಾಜನ್! ಬಳಲಿರುವವನನ್ನು, ಭೀತನಾಗಿರುವವನನ್ನು, ಶಸ್ತ್ರವನ್ನು ಕಳೆದುಕೊಂಡಿರುವವನನ್ನು, ರೋದಿಸುತ್ತಿರುವನನ್ನು, ಯುದ್ಧದಿಂದ ಪರಾಙ್ಮುಖನಾದವನನ್ನು, ಯುದ್ಧಪರಿಕರಗಳನ್ನು ಕಳೆದುಕೊಂಡಿರುವವನನ್ನು, ಯುದ್ಧಮಾಡುವುದನ್ನೇ ಬಿಟ್ಟಿರುವವನನ್ನು, ರೋಗಿಯನ್ನು, ಬೇಡುತ್ತಿರುವವನನ್ನು, ಬಾಲಕ-ವೃದ್ಧರನ್ನು ಹಿಂಸಿಸಬಾರದು.

12286005a ಪರಿಬರ್ಹೈಃ ಸುಸಂಪನ್ನಮುದ್ಯತಂ ತುಲ್ಯತಾಂ ಗತಮ್|

12286005c ಅತಿಕ್ರಮೇತ ನೃಪತಿಃ ಸಂಗ್ರಾಮೇ ಕ್ಷತ್ರಿಯಾತ್ಮಜಮ್||

ಯುದ್ಧಸಾಮಾಗ್ರಿಗಳಿಂದ ಕೂಡಿದ, ಯುದ್ಧಮಾಡಲು ಉತ್ಸುಕನಾಗಿರುವ ಮತ್ತು ತನ್ನ ಸಮನಾಗಿರುವ ಕ್ಷತ್ರಿಯಕುಮಾರನನ್ನು ರಾಜನು ಸಂಗ್ರಾಮದಲ್ಲಿ ಅವಶ್ಯವಾಗಿ ಗೆಲ್ಲಲು ಪ್ರಯತ್ನಿಸಬೇಕು.

12286006a ತುಲ್ಯಾದಿಹ ವಧಃ ಶ್ರೇಯಾನ್ವಿಶಿಷ್ಟಾಚ್ಚೇತಿ ನಿಶ್ಚಯಃ|

12286006c ನಿಹೀನಾತ್ಕಾತರಾಚ್ಚೈವ ನೃಪಾಣಾಂ ಗರ್ಹಿತೋ ವಧಃ||

ತನ್ನ ಸಮನಾಗಿರುವ ಅಥವಾ ತನಗಿಂತಲೂ ವಿಶಿಷ್ಟನಾಗಿರುವವನಿಂದ ಸಾಯುವುದು ಶೇಯಸ್ಕರವೆಂದು ನಿಶ್ಚಯವಿದೆ. ಹೀನರು ಮತ್ತು ಕಾಪುರುಷರಿಂದ ನೃಪರ ವಧೆಯಾಗುವುದು ನಿಂದನೀಯವು.

12286007a ಪಾಪಾತ್ಪಾಪಸಮಾಚಾರಾನ್ನಿಹೀನಾಚ್ಚ ನರಾಧಿಪ|

12286007c ಪಾಪ ಏವ ವಧಃ ಪ್ರೋಕ್ತೋ ನರಕಾಯೇತಿ ನಿಶ್ಚಯಃ||

ನರಾಧಿಪ! ಪಾಪಿ, ಪಾಪಚಾರೀ ಮತ್ತು ಹೀನ ಪುರುಷರಿಂದಾಗುವ ವಧೆಯನ್ನು ಪಾಪರೂಪವೆಂದೇ ಹೇಳಿದ್ದಾರೆ. ಅಂಥಹ ಸಾವು ನರಕಕ್ಕೆ ಕೊಂಡೊಯ್ಯುತ್ತದೆ ಎಂದು ನಿಶ್ಚಯವಿದೆ.

12286008a ನ ಕಶ್ಚಿತ್ತ್ರಾತಿ ವೈ ರಾಜನ್ದಿಷ್ಟಾಂತವಶಮಾಗತಮ್|

12286008c ಸಾವಶೇಷಾಯುಷಂ ಚಾಪಿ ಕಶ್ಚಿದೇವಾಪಕರ್ಷತಿ||

ರಾಜನ್! ಮೃತ್ಯುವಿನ ವಶದಲ್ಲಿರುವ ಪ್ರಾಣಿಯನ್ನು ಯಾರೂ ಉಳಿಸಲಾರರು ಮತ್ತು ಯಾರ ಆಯಸ್ಸು ಇನ್ನೂ ಉಳಿದಿದೆಯೋ ಅವರನ್ನು ಯಾರೂ ಕೊಲ್ಲಲಾರರು.

12286009a ಸ್ನಿಗ್ಧೈಶ್ಚ ಕ್ರಿಯಮಾಣಾನಿ ಕರ್ಮಾಣೀಹ ನಿವರ್ತಯೇತ್|

12286009c ಹಿಂಸಾತ್ಮಕಾನಿ ಕರ್ಮಾಣಿ ನಾಯುರಿಚ್ಚೇತ್ಪರಾಯುಷಾ||

ತನ್ನ ಪ್ರಿಯಜನರು ತನಗಾಗಿ ಯಾವುದಾದರೂ ಹಿಂಸಾತ್ಮಕ ಕರ್ಮಗಳನ್ನು ಮಾಡುತ್ತಿದ್ದರೆ ಅವನು ಅವರನ್ನು ತಡೆಯಬೇಕು. ಇನ್ನೊಬ್ಬರ ಆಯಸ್ಸಿನಿಂದ ತನ್ನ ಆಯಸ್ಸನ್ನು ಹೆಚ್ಚಿಸಿಕೊಳ್ಳಲು ಅರ್ಥಾತ್ ಇನ್ನೊಬ್ಬರ ಪ್ರಾಣವನ್ನು ತೆಗೆದು ತನ್ನ ಪ್ರಾಣವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಬಾರದು.

12286010a ಗೃಹಸ್ಥಾನಾಂ ತು ಸರ್ವೇಷಾಂ ವಿನಾಶಮಭಿಕಾಂಕ್ಷತಾಮ್|

12286010c ನಿಧನಂ ಶೋಭನಂ ತಾತ ಪುಲಿನೇಷು ಕ್ರಿಯಾವತಾಮ್||

ಅಯ್ಯಾ! ಮರಣವನ್ನು ಇಚ್ಛಿಸುವ ಸರ್ವ ಗೃಹಸ್ಥರಿಗೂ ನದೀತೀರಗಳಲ್ಲಿ ಪುಣ್ಯಕರ್ಮಗಳನ್ನು ಮಾಡುತ್ತಿರುವಾಗ ನಿಧನಹೊಂದುವುದು ಶೋಭನೀಯವು.

12286011a ಆಯುಷಿ ಕ್ಷಯಮಾಪನ್ನೇ ಪಂಚತ್ವಮುಪಗಚ್ಚತಿ|

12286011c ನಾಕಾರಣಾತ್ತದ್ಭವತಿ ಕಾರಣೈರುಪಪಾದಿತಮ್||

ಆಯಸ್ಸು ಕಳೆದಾಗ ದೇಹಧಾರೀ ಜೀವವು ಪಂಚತ್ವವನ್ನು ಪಡೆದುಕೊಳ್ಳುತ್ತದೆ. ಇದು ಯಾವುದೇ ಕಾರಣವಿಲ್ಲದೆಯೂ ಆಗಬಹುದು ಅಥವಾ ಯಾವುದಾದರೂ ಕಾರಣದಿಂದಲಾದರೂ ಆಗಬಹುದು.

12286012a ತಥಾ ಶರೀರಂ ಭವತಿ ದೇಹಾದ್ಯೇನೋಪಪಾದಿತಮ್|

12286012c ಅಧ್ವಾನಂ ಗತಕಶ್ಚಾಯಂ ಪ್ರಾಪ್ತಶ್ಚಾಯಂ ಗೃಹಾದ್ಗೃಹಮ್||

ಹಠದಿಂದ ದೇಹವನ್ನು ತ್ಯಜಿಸುವವರು ಹಿಂದಿನಂತಹುದೇ ಯಾತನಾಮಯ ದೇಹವನ್ನು ಪಡೆದುಕೊಳ್ಳುತ್ತಾರೆ. ಅಂಥವರು ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುವವರಂತೆ ಒಂದು ಶರೀರದಿಂದ ಇನ್ನೊಂದು ಶರೀರವನ್ನು ಪ್ರವೇಶಿಸುತ್ತಾರೆ.

12286013a ದ್ವಿತೀಯಂ ಕಾರಣಂ ತತ್ರ ನಾನ್ಯತ್ಕಿಂ ಚನ ವಿದ್ಯತೇ|

12286013c ತದ್ದೇಹಂ ದೇಹಿನಾಂ ಯುಕ್ತಂ ಮೋಕ್ಷಭೂತೇಷು ವರ್ತತೇ||

ಇದಕ್ಕೆ ಎರಡನೇ ಕಾರಣವ್ಯಾವುದೂ ಇಲ್ಲ. ಆಯುಸ್ಸಿನ ಶೇಷದ ವಾಸನೆಗಳಿಂದ ಕೂಡಿದ ಆ ದೇಹವು ಪಂಚಭೂತಮಯವೇ ಆಗಿರುತ್ತದೆ.

12286014a ಸಿರಾಸ್ನಾಯ್ವಸ್ಥಿಸಂಘಾತಂ ಬೀಭತ್ಸಾಮೇಧ್ಯಸಂಕುಲಮ್|

12286014c ಭೂತಾನಾಮಿಂದ್ರಿಯಾಣಾಂ ಚ ಗುಣಾನಾಂ ಚ ಸಮಾಗಮಮ್||

ಈ ಶರೀರವು ನರ-ನಾಡಿ-ಮೂಳೆಗಳ ಜೋಡಣೆಯಾಗಿದೆ. ಜುಗುಪ್ಸಿತ ಮಲ-ಮೂತ್ರಗಳಿಂದ ತುಂಬಿದೆ. ಪಂಚಮಹಾಭೂತಗಳು, ಇಂದ್ರಿಯಗಳು ಮತ್ತು ತ್ರಿಗುಣಗಳ ಸಮಾಗಮವಾಗಿದೆ.

12286015a ತ್ವಗಂತಂ ದೇಹಮಿತ್ಯಾಹುರ್ವಿದ್ವಾಂಸೋಽಧ್ಯಾತ್ಮಚಿಂತಕಾಃ|

12286015c ಗುಣೈರಪಿ ಪರಿಕ್ಷೀಣಂ ಶರೀರಂ ಮರ್ತ್ಯತಾಂ ಗತಮ್||

ಆಧ್ಯಾತ್ಮ ಚಿಂತಕ ವಿದ್ವಾಂಸರು ಚರ್ಮವೇ ಈ ಶರೀರದ ಕೊನೆಯೆಂದು ಹೇಳುತ್ತಾರೆ. ಅದು ಗುಣಹೀನವಾದುದು ಮತ್ತು ಮರಣಹೊಂದುವಂಥಹುದು.

12286016a ಶರೀರಿಣಾ ಪರಿತ್ಯಕ್ತಂ ನಿಶ್ಚೇಷ್ಟಂ ಗತಚೇತನಮ್|

12286016c ಭೂತೈಃ ಪ್ರಕೃತಿಮಾಪನ್ನೈಸ್ತತೋ ಭೂಮೌ ನಿಮಜ್ಜತಿ||

ಜೀವಾತ್ಮನು ಈ ಶರೀರವನ್ನು ಪರಿತ್ಯಜಿಸಿದಾಗ ಅದು ನಿಶ್ಚೇಷ್ಟವೂ ಚೇತಾನಾಶೂನ್ಯವೂ ಆಗುತ್ತದೆ. ಹೀಗೆ ಅದರಲ್ಲಿರುವ ಪಂಚ ಭೂತಗಳೂ ತಮ್ಮ ತಮ್ಮ ಪ್ರಕೃತಿಯೊಂದಿಗೆ ಸೇರಿಕೊಂಡು ಈ ಭೂಮಿಯಲ್ಲಿ ಕರಗಿಹೋಗುತ್ತವೆ.

12286017a ಭಾವಿತಂ ಕರ್ಮಯೋಗೇನ ಜಾಯತೇ ತತ್ರ ತತ್ರ ಹ|

12286017c ಇದಂ ಶರೀರಂ ವೈದೇಹ ಮ್ರಿಯತೇ ಯತ್ರ ತತ್ರ ಹ|

12286017e ತತ್ಸ್ವಭಾವೋಽಪರೋ ದೃಷ್ಟೋ ವಿಸರ್ಗಃ ಕರ್ಮಣಸ್ತಥಾ||

ವೈದೇಹ! ಶರೀರವು ಎಲ್ಲೆಲ್ಲಿಯೋ ಸಾಯುತ್ತದೆ ಮತ್ತು ಪುನಃ ಪ್ರಾರಬ್ಧಕರ್ಮದ ಯೋಗದಿಂದ ಬೇರೆ ಎಲ್ಲಿಯೋ ಹುಟ್ಟಿಕೊಳ್ಳುತ್ತದೆ. ಈ ಸ್ವಭಾವಸಿದ್ಧ ಪುನರ್ಜನ್ಮವು ಕರ್ಮಗಳ ಫಲಸ್ವರೂಪವೆಂದು ಕಂಡುಕೊಂಡಿದ್ದಾರೆ[2].

12286018a ನ ಜಾಯತೇ ತು ನೃಪತೇ ಕಂ ಚಿತ್ಕಾಲಮಯಂ ಪುನಃ|

12286018c ಪರಿಭ್ರಮತಿ ಭೂತಾತ್ಮಾ ದ್ಯಾಮಿವಾಂಬುಧರೋ ಮಹಾನ್||

ನೃಪತೇ! ವಿಶಾಲ ಮೋಡವು ಹೇಗೆ ಆಕಾಶದಲ್ಲಿ ಎಲ್ಲಕಡೆ ಸುತ್ತಾಡುತ್ತಿರುತ್ತದೆಯೋ ಹಾಗೆ ಜೀವಾತ್ಮನು ಒಂದು ಶರೀರವನ್ನು ತ್ಯಜಿಸಿದ ನಂತರ ಸ್ವಲ್ಪ ಸಮಯ ಸುತ್ತುತ್ತಿರುತ್ತದೆ. ಒಡನೆಯೇ ಅದು ಪುನರ್ಜನ್ಮವನ್ನು ಪಡೆಯುವುದಿಲ್ಲ.

12286019a[3] ಪುನರ್ಜಾಯತೇ ರಾಜನ್ ಪ್ರಾಪ್ಯೇಹಾಯತನಂ ನೃಪ|

12286019c ಮನಸಃ ಪರಮೋ ಹ್ಯಾತ್ಮಾ ಇಂದ್ರಿಯೇಭ್ಯಃ ಪರಂ ಮನಃ||

ರಾಜನ್! ನೃಪ! ಯಾವುದಾದರೂ ಆಧಾರವನ್ನು ಪಡೆದುಕೊಂಡು ಪುನಃ ಅದು ಜನ್ಮತಾಳುತ್ತದೆ. ಮನಕ್ಕಿಂತಲೂ ಆತ್ಮವು ಶ್ರೇಷ್ಠವಾದುದು ಮತ್ತು ಇಂದ್ರಿಯಗಳಿಗಿಂತಲೂ ಮನಸ್ಸು ಶ್ರೇಷ್ಠವಾದುದು[4].

12286020a ದ್ವಿವಿಧಾನಾಂ[5] ಚ ಭೂತಾನಾಂ ಜಂಗಮಾಃ ಪರಮಾ ನೃಪ|

12286020c ಜಂಗಮಾನಾಮಪಿ ತಥಾ ದ್ವಿಪದಾಃ ಪರಮಾ ಮತಾಃ|

12286020e ದ್ವಿಪದಾನಾಮಪಿ ತಥಾ ದ್ವಿಜಾ ವೈ ಪರಮಾಃ ಸ್ಮೃತಾಃ||

ನೃಪ! ಸ್ಥಾವರ ಜಂಗಮಗಳೆಂಬ ಎರಡು ವಿಧದ ಭೂತಗಳಲ್ಲಿ ಜಂಗಮ ಭೂತಗಳೇ ಶ್ರೇಷ್ಟವಾದವು. ಜಂಗಮಗಳಲ್ಲಿಯೂ ಮನುಷ್ಯರು ಶ್ರೇಷ್ಠರು ಎಂಬ ಮತವಿದೆ. ಮನುಷ್ಯರಲ್ಲಿಯೂ ದ್ವಿಜರು ಶ್ರೇಷ್ಠರು ಎಂದು ಹೇಳಿದ್ದಾರೆ.

12286021a ದ್ವಿಜಾನಾಮಪಿ ರಾಜೇಂದ್ರ ಪ್ರಜ್ಞಾವಂತಃ ಪರಾ ಮತಾಃ|

12286021c ಪ್ರಾಜ್ಞಾನಾಮಾತ್ಮಸಂಬುದ್ಧಾಃ ಸಂಬುದ್ಧಾನಾಮಮಾನಿನಃ||

ರಾಜೇಂದ್ರ! ದ್ವಿಜರಲ್ಲಿಯೂ ಕೂಡ ಪ್ರಜ್ಞಾವಂತನು ಶ್ರೇಷ್ಠನೆಂಬ ಮತವಿದೆ. ಪ್ರಾಜ್ಞರಲ್ಲಿ ಆತ್ಮಜ್ಞಾನಿಯು ಶ್ರೇಷ್ಠನೆಂದೂ ಅವರಲ್ಲಿಯೂ ಅಹಂಕಾರರಹಿತನು ಶ್ರೇಷ್ಠನೆಂಬ ಮತವಿದೆ.

12286022a ಜಾತಮನ್ವೇತಿ ಮರಣಂ ನೃಣಾಮಿತಿ ವಿನಿಶ್ಚಯಃ|

12286022c ಅಂತವಂತಿ ಹಿ ಕರ್ಮಾಣಿ ಸೇವಂತೇ ಗುಣತಃ ಪ್ರಜಾಃ||

ಹುಟ್ಟಿನಿಂದಲೇ ಮರಣವು ಮನುಷ್ಯರನ್ನು ಅನುಸರಿಸುತ್ತಿರುತ್ತದೆ ಎನ್ನುವುದು ನಿಶ್ಚಯವು. ಗುಣಗಳ ಪ್ರೇರಣೆಯಿಂದ ಹುಟ್ಟಿದವು ನಾಶಹೊಂದುವ ಕರ್ಮಗಳನ್ನು ಮಾಡುತ್ತಿರುತ್ತವೆ.

12286023a ಆಪನ್ನೇ ತೂತ್ತರಾಂ ಕಾಷ್ಠಾಂ ಸೂರ್ಯೇ ಯೋ ನಿಧನಂ ವ್ರಜೇತ್|

12286023c ನಕ್ಷತ್ರೇ ಚ ಮುಹೂರ್ತೇ ಚ ಪುಣ್ಯೇ ರಾಜನ್ಸ ಪುಣ್ಯಕೃತ್||

ರಾಜನ್! ಸೂರ್ಯನು ಉತ್ತರಾಯಣದಲ್ಲಿದ್ದಾಗ ಉತ್ತಮ ನಕ್ಷತ್ರ ಮತ್ತು ಪವಿತ್ರ ಮುಹೂರ್ತದಲ್ಲಿ ಮೃತ್ಯುವನ್ನು ಹೊಂದಿದವನು ಪುಣ್ಯಾತ್ಮನು.

12286024a ಅಯೋಜಯಿತ್ವಾ ಕ್ಲೇಶೇನ ಜನಂ ಪ್ಲಾವ್ಯ ಚ ದುಷ್ಕೃತಮ್|

12286024c ಮೃತ್ಯುನಾಪ್ರಾಕೃತೇನೇಹ ಕರ್ಮ ಕೃತ್ವಾತ್ಮಶಕ್ತಿತಃ||

ಯಾರಿಗೂ ಕಷ್ಟವನ್ನು ಕೊಡದೇ, ಪ್ರಾಯಶ್ಚಿತ್ತಗಳಿಂದ ತನ್ನ ಪಾಪಗಳನ್ನು ಕಳೆದುಕೊಂಡು ತನ್ನ ಶಕ್ತ್ಯಾನುಸಾರ ಶುಭಕರ್ಮಗಳನ್ನು ಮಾಡಿ ಅವನು ಸ್ವೇಚ್ಛೆಯಿಂದ ಮೃತ್ಯುವನ್ನು ಅಂಗೀಕರಿಸುತ್ತಾನೆ[6].

12286025a ವಿಷಮುದ್ಬಂಧನಂ ದಾಹೋ ದಸ್ಯುಹಸ್ತಾತ್ತಥಾ ವಧಃ|

12286025c ದಂಷ್ಟ್ರಿಭ್ಯಶ್ಚ ಪಶುಭ್ಯಶ್ಚ ಪ್ರಾಕೃತೋ ವಧ ಉಚ್ಯತೇ||

ವಿಷವನ್ನು ಕುಡಿದು ಪ್ರಾಣಬಿಡುವುದು, ನೇಣುಹಾಕಿಕೊಂಡು ಪ್ರಾಣಬಿಡುವುದು, ಬೆಂಕಿಯಲ್ಲಿ ಬಿದ್ದು ಸಾಯುವುದು, ದರೋಡೆಕೋರರಿಂದ ಸಾಯುವುದು, ಕೋರೇಹಲ್ಲುಗಳಿರುವ ಪ್ರಾಣಿಗಳಿಂದ ಸಾಯುವುದು – ಇವು ಅಧಮಶ್ರೇಣಿಯ ಮೃತ್ಯುವೆಂದು ಹೇಳುತ್ತಾರೆ.

12286026a ನ ಚೈಭಿಃ ಪುಣ್ಯಕರ್ಮಾಣೋ ಯುಜ್ಯಂತೇ ನಾಭಿಸಂಧಿಜೈಃ|

12286026c ಏವಂವಿಧೈಶ್ಚ ಬಹುಭಿರಪರೈಃ ಪ್ರಾಕೃತೈರಪಿ||

ಪುಣ್ಯಕರ್ಮಿಗಳು ಈ ರೀತಿಯಲ್ಲಿ ಪ್ರಾಣಗಳನ್ನು ಬಿಡುವುದಿಲ್ಲ ಮತ್ತು ಇಂಥಾ ಇತರ ಅಧಮ ವಿಧಾನಗಳಿಂದಲೂ ಮೃತ್ಯುವನ್ನು ಬಯಸುವುದಿಲ್ಲ.

12286027a ಊರ್ಧ್ವಂ ಹಿತ್ವಾ ಪ್ರತಿಷ್ಠಂತೇ ಪ್ರಾಣಾಃ ಪುಣ್ಯಕೃತಾಂ ನೃಪ|

12286027c ಮಧ್ಯತೋ ಮಧ್ಯಪುಣ್ಯಾನಾಮಧೋ ದುಷ್ಕೃತಕರ್ಮಣಾಮ್||

ನೃಪ! ಪುಣ್ಯಾತ್ಮರ ಪ್ರಾಣವು ಬ್ರಹ್ಮರಂಧ್ರವನ್ನು ಭೇದಿಸಿಕೊಂಡು ಹೋಗುತ್ತದೆ. ಮಧ್ಯಮ ಶ್ರೇಣಿಯ ಪುಣ್ಯಾತ್ಮರ ಪ್ರಾಣವು ಮಧ್ಯದಿಂದ (ಕಣ್ಣು, ಮುಖ, ಮೂಗು, ಕಿವಿಗಳ ಮೂಲಕ) ಹೋಗುತ್ತದೆ. ದುಷ್ಕೃತಕರ್ಮಿಗಳ ಪ್ರಾಣವು ಅಧೋಭಾಗದಿಂದ (ಶಿಶ್ನ ಅಥವಾ ಗುದಗಳ ಮೂಲಕ) ಹೋಗುತ್ತದೆ.

12286028a ಏಕಃ ಶತ್ರುರ್ನ ದ್ವಿತೀಯೋಽಸ್ತಿ ಶತ್ರುರ್

ಅಜ್ಞಾನತುಲ್ಯಃ ಪುರುಷಸ್ಯ ರಾಜನ್|

12286028c ಯೇನಾವೃತಃ ಕುರುತೇ ಸಂಪ್ರಯುಕ್ತೋ

ಘೋರಾಣಿ ಕರ್ಮಾಣಿ ಸುದಾರುಣಾನಿ||

ರಾಜನ್! ಮನುಷ್ಯನಿಗೆ ಅಜ್ಞಾನವೆಂಬ ಒಂದೇ ಒಂದು ಶತ್ರುವಿದೆ. ಅದಕ್ಕೆ ಸಮನಾದ ಎರಡನೇ ಶತ್ರುವಿಲ್ಲ. ಅಜ್ಞಾನದಿಂದ ಆವೃತನಾಗಿ ಮತ್ತು ಅದರಿಂದ ಪ್ರೇರಿತನಾಗಿ ಮನುಷ್ಯನು ಸುದಾರುಣ ಘೋರ ಕರ್ಮಗಳನ್ನು ಮಾಡುತ್ತಾನೆ.

12286029a ಪ್ರಬೋಧನಾರ್ಥಂ[7] ಶ್ರುತಿಧರ್ಮಯುಕ್ತಂ

ವೃದ್ಧಾನುಪಾಸ್ಯಂ ಚ ಭವೇತ ಯಸ್ಯ|

12286029c ಪ್ರಯತ್ನಸಾಧ್ಯೋ ಹಿ ಸ ರಾಜಪುತ್ರ

ಪ್ರಜ್ಞಾಶರೇಣೋನ್ಮಥಿತಃ ಪರೈತಿ||

ರಾಜಪುತ್ರ! ಅರ್ಥವನ್ನು ಅರಿತುಕೊಂಡ, ಶೃತಿಧರ್ಮಯುಕ್ತನಾದ ಮತ್ತು ವೃದ್ಧರ ಸೇವೆಯನ್ನು ಮಾಡಿದವನಿಗೇ ಪ್ರಯತ್ನಪಟ್ಟು ಪ್ರಜ್ಞೆಯೆಂಬ ಶರದಿಂದ ಅಜ್ಞಾನವೆಂಬ ಆ ಶತ್ರುವನ್ನು ಪರಾಜಿತಗೊಳಿಸಲು ಸಾಧ್ಯವಿದೆ.

12286030a ಅಧೀತ್ಯ ವೇದಾಂಸ್ತಪಸಾ ಬ್ರಹ್ಮಚಾರೀ

ಯಜ್ಞಾನ್ ಶಕ್ತ್ಯಾ ಸಂನಿಸೃಜ್ಯೇಹ ಪಂಚ|

12286030c ವನಂ ಗಚ್ಚೇತ್ಪುರುಷೋ ಧರ್ಮಕಾಮಃ

ಶ್ರೇಯಶ್ಚಿತ್ವಾ ಸ್ಥಾಪಯಿತ್ವಾ ಸ್ವವಂಶಮ್||

ಬ್ರಹ್ಮಚಾರಿಯಾಗಿದ್ದುಕೊಂಡು ತಪಸ್ಸಿನ ಮೂಲಕ ವೇದಾಧ್ಯಯನ ಮಾಡಿ, [8]ಯಥಾಶಕ್ತಿ ಪಂಚ ಮಹಾಯಜ್ಞಗಳನ್ನು ಮಾಡುತ್ತಾ, ಧರ್ಮವನ್ನು ಬಯಸುವ ಪುರುಷನು ತನ್ನ ವಂಶದ ಶ್ರೇಯಸ್ಸನ್ನು ಸ್ಥಾಪಿಸಿ ವನಕ್ಕೆ ತೆರಳಬೇಕು.

12286031a ಉಪಭೋಗೈರಪಿ ತ್ಯಕ್ತಂ ನಾತ್ಮಾನಮವಸಾದಯೇತ್|

12286031c ಚಂಡಾಲತ್ವೇಽಪಿ ಮಾನುಷ್ಯಂ ಸರ್ವಥಾ ತಾತ ದುರ್ಲಭಮ್||

ಉಪಭೋಗಗಳ ಸಾಧನಗಳಿಂದ ವಂಚಿತನಾದರೂ ಮನುಷ್ಯನು ತನ್ನನ್ನು ತಾನೇ ಹೀನನೆಂದು ತಿಳಿದುಕೊಳ್ಳಬಾರದು. ಚಂಡಾಲತ್ವದಲ್ಲಿ ಹುಟ್ಟಿದರೂ ಕೂಡ ಮನುಷ್ಯ ಜನ್ಮವು ಸರ್ವಥಾ ದುರ್ಲಭವು.

12286032a ಇಯಂ ಹಿ ಯೋನಿಃ ಪ್ರಥಮಾ ಯಾಂ ಪ್ರಾಪ್ಯ ಜಗತೀಪತೇ|

12286032c ಆತ್ಮಾ ವೈ ಶಕ್ಯತೇ ತ್ರಾತುಂ ಕರ್ಮಭಿಃ ಶುಭಲಕ್ಷಣೈಃ||

ಜಗತೀಪತೇ! ಈ ಮನುಷ್ಯಯೋನಿಯೇ ಅದ್ವಿತೀಯವಾದುದು; ಇದನ್ನು ಪಡೆದುಕೊಂಡು ಶುಭಕರ್ಮಗಳ ಮೂಲಕ ಆತ್ಮೋದ್ಧಾರವನ್ನು ಮಾಡಿಕೊಳ್ಳಬಹುದು.

12286033a ಕಥಂ ನ ವಿಪ್ರಣಶ್ಯೇಮ ಯೋನಿತೋಽಸ್ಯಾ ಇತಿ ಪ್ರಭೋ|

12286033c ಕುರ್ವಂತಿ ಧರ್ಮಂ ಮನುಜಾಃ ಶ್ರುತಿಪ್ರಾಮಾಣ್ಯದರ್ಶನಾತ್||

ಪ್ರಭೋ! “ಮನುಷ್ಯಯೋನಿಯಿಂದ ಕೆಳಗೆ ಬೀಳದಂತಾಗಲಿ!” ಎಂದು ಯೋಚಿಸಿ, ಶ್ರುತಿಪ್ರಮಾಣಗಳನ್ನು ನೋಡಿ ಮನುಷ್ಯರು ಧರ್ಮಕರ್ಮಗಳನ್ನೇ ಮಾಡುತ್ತಾರೆ.

12286034a ಯೋ ದುರ್ಲಭತರಂ ಪ್ರಾಪ್ಯ ಮಾನುಷ್ಯಮಿಹ ವೈ ನರಃ|

12286034c ಧರ್ಮಾವಮಂತಾ ಕಾಮಾತ್ಮಾ ಭವೇತ್ಸ ಖಲು ವಂಚ್ಯತೇ||

ಅತ್ಯಂತ ದುರ್ಲಭವಾದ ಈ ಮನುಷ್ಯ ಶರೀರವನ್ನು ಪಡೆದುಕೊಂಡೂ ಇತರರನ್ನು ದ್ವೇಷಿಸುವವನು ಮತ್ತು ಧರ್ಮವನ್ನು ಅನಾದರಿಸುವ ಕಾಮಾತ್ಮನು ಮನುಷ್ಯಜನ್ಮದಿಂದ ದೊರೆಯಬಹುದಾದ ಮಹಾಲಾಭದಿಂದ ವಂಚಿತನಾಗುತ್ತಾನೆ.

12286035a ಯಸ್ತು ಪ್ರೀತಿಪುರೋಗೇಣ ಚಕ್ಷುಷಾ ತಾತ ಪಶ್ಯತಿ|

12286035c ದೀಪೋಪಮಾನಿ ಭೂತಾನಿ ಯಾವದರ್ಚಿರ್ನ ನಶ್ಯತಿ||

ಅಯ್ಯಾ! ಸಮಸ್ತ ಭೂತಗಳನ್ನೂ ದೀಪಗಳಂತೆ ಸ್ನೇಹಪೂರ್ವಕವಾಗಿ ಬೆಳಗಿಸಲು ಯೋಗ್ಯವಾದವುಗಳೆಂದು ತಿಳಿದು ಅವುಗಳನ್ನು ಪ್ರೀತಿಪೂರ್ವಕ ದೃಷ್ಟಿಯಿಂದ ಕಾಣುವವನು ಮತ್ತು ಇಂದ್ರಿಯ ವಿಷಯಗಳ ಮೇಲೆ ದೃಷ್ಟಿಯನ್ನು ಬೀರದಿರುವವನು ಪರಲೋಕದಲ್ಲಿ ಸಮ್ಮಾನಿತನಾಗುತ್ತಾನೆ.

12286036a ಸಾಂತ್ವೇನಾನುಪ್ರದಾನೇನ[9] ಪ್ರಿಯವಾದೇನ ಚಾಪ್ಯುತ|

12286036c ಸಮದುಃಖಸುಖೋ ಭೂತ್ವಾ ಸ ಪರತ್ರ ಮಹೀಯತೇ||

ಸಾಂತ್ವನವನ್ನೀಯುವ, ದಾನಗಳನ್ನೀಯುವ, ಮತ್ತು ಪ್ರಿಯಮಾತುಗಳನ್ನಾಡುವವನು ಸುಖದುಃಖಗಳಲ್ಲಿ ಸಮಾನವಾಗಿದ್ದುಕೊಂಡು ಪರಲೋಕಗಳಲ್ಲಿ ಮೆರೆಯುತ್ತಾನೆ.

12286037a ದಾನಂ ತ್ಯಾಗಃ ಶೋಭನಾ ಮೂರ್ತಿರದ್ಭ್ಯೋ

ಭೂಯಃ ಪ್ಲಾವ್ಯಂ ತಪಸಾ ವೈ ಶರೀರಮ್|

12286037c ಸರಸ್ವತೀನೈಮಿಷಪುಷ್ಕರೇಷು

ಯೇ ಚಾಪ್ಯನ್ಯೇ ಪುಣ್ಯದೇಶಾಃ ಪೃಥಿವ್ಯಾಮ್||

ಸರಸ್ವತೀ ನದೀ, ನೈಮಿಷಾರಣ್ಯ ಕ್ಷೇತ್ರ, ಪುಷ್ಕರಕ್ಷೇತ್ರ, ಮತ್ತು ಭೂಮಿಯಲ್ಲಿರುವ ಇನ್ನೂ ಇತರ ಪುಣ್ಯಪ್ರದೇಶಗಳಿಗೆ ಹೋಗಿ ಅಲ್ಲಿ ದಾನವನ್ನಿತ್ತು, ಭೋಗಗಳನ್ನು ತ್ಯಜಿಸಿ, ಶಾಂತಭಾವದಿಂದಿದ್ದು ತಪಸ್ಸು-ತೀರ್ಥಜಲಗಳಿಂದ ತನು-ಮನಗಳನ್ನು ಪವಿತ್ರಗೊಳಿಸಬೇಕು.

12286038a ಗೃಹೇಷು ಯೇಷಾಮಸವಃ ಪತಂತಿ

ತೇಷಾಮಥೋ ನಿರ್ಹರಣಂ ಪ್ರಶಸ್ತಮ್|

12286038c ಯಾನೇನ ವೈ ಪ್ರಾಪಣಂ ಚ ಶ್ಮಶಾನೇ

ಶೌಚೇನ ನೂನಂ ವಿಧಿನಾ ಚೈವ ದಾಹಃ||

ಮನೆಗಳಲ್ಲಿ ಪ್ರಾಣಹೋಗುವಂತಿರುವವರನ್ನು ಶೀಘ್ರವಾಗಿ ಮನೆಯಿಂದ ಹೊರಗೆ ಇಡುವುದು ಪ್ರಶಸ್ತವು. ಮೃತ್ಯುವಿನ ನಂತರ ಯಾನದಲ್ಲಿ ಅವರನ್ನು ಶ್ಮಶಾನಕ್ಕೆ ಕರೆದುಕೊಂಡು ಹೋಗಿ ಪರಿಶುದ್ಧ ಹೃದಯದಿಂದ ಮತ್ತು ಶಾಸ್ತ್ರವಿಧಿಗಳಿಂದ ಅವರ ದಹನಸಂಸ್ಕಾರಮಾಡುವುದು ಉತ್ತಮ ಕರ್ತವ್ಯವಾಗಿದೆ.

12286039a ಇಷ್ಟಿಃ ಪುಷ್ಟಿರ್ಯಜನಂ ಯಾಜನಂ ಚ

ದಾನಂ ಪುಣ್ಯಾನಾಂ ಕರ್ಮಣಾಂ ಚ ಪ್ರಯೋಗಃ|

12286039c ಶಕ್ತ್ಯಾ ಪಿತ್ರ್ಯಂ ಯಚ್ಚ ಕಿಂ ಚಿತ್ಪ್ರಶಸ್ತಂ

ಸರ್ವಾಣ್ಯಾತ್ಮಾರ್ಥೇ ಮಾನವೋ ಯಃ ಕರೋತಿ||

ಮನುಷ್ಯನು ಯಥಾಶಕ್ತಿ ಮಾಡುವ ಇಷ್ಟಿ, ಪುಷ್ಟಿ, ಯಜನ, ಯಾಜನ, ದಾನ ಮತ್ತು ಪುಣ್ಯ ಕರ್ಮಗಳ ಪ್ರಯೋಗಗಳನ್ನು, ಪಿತೃಕಾರ್ಯಗಳನ್ನು ಮತ್ತು ಪ್ರಶಸ್ತವಾದ ಏನೆಲ್ಲ ಕರ್ಮಗಳನ್ನು ಮಾಡುತ್ತಾನೋ ಅವುಗಳನ್ನು ತನಗಾಗಿಯೇ ಮಾಡುತ್ತಾನೆ.

12286040a ಧರ್ಮಶಾಸ್ತ್ರಾಣಿ ವೇದಾಶ್ಚ ಷಡಂಗಾನಿ ನರಾಧಿಪ|

12286040c ಶ್ರೇಯಸೋಽರ್ಥೇ ವಿಧೀಯಂತೇ ನರಸ್ಯಾಕ್ಲಿಷ್ಟಕರ್ಮಣಃ||

ನರಾಧಿಪ! ಧರ್ಮಶಾಸ್ತ್ರಗಳು, ವೇದಗಳು ಮತ್ತು ಆರು ವೇದಾಂಗಗಳು ಪುಣ್ಯಕರ್ಮಿ ನರರ ಶ್ರೇಯಸ್ಸಿಗಾಗಿಯೇ ವಿಹಿತವಾಗಿವೆ.”

12286041 ಭೀಷ್ಮ ಉವಾಚ|

12286041a ಏವದ್ವೈ ಸರ್ವಮಾಖ್ಯಾತಂ ಮುನಿನಾ ಸುಮಹಾತ್ಮನಾ|

12286041c ವಿದೇಹರಾಜಾಯ ಪುರಾ ಶ್ರೇಯಸೋಽರ್ಥೇ ನರಾಧಿಪ||

ಭೀಷ್ಮನು ಹೇಳಿದನು: “ನರಾಧಿಪ! ಹಿಂದೆ ಮಹಾತ್ಮ ಮುನಿ ಪರಾಶರನು ವಿದೇಹರಾಜನ ಶ್ರೇಯಸ್ಸಿಗಾಗಿ ಈ ಎಲ್ಲವನ್ನೂ ಉಪದೇಶಿಸಿದನು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಪರಾಶರಗೀತಾಯಾಂ ಷಡಾಶೀತ್ಯತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಪರಾಶರಗೀತಾ ಎನ್ನುವ ಇನ್ನೂರಾಎಂಭತ್ತಾರನೇ ಅಧ್ಯಾಯವು.

[1] ನಿರ್ಗುಣರಾದವರಿಗೆ ತಂದೆಯಾಗಲೀ ಸ್ನೇಹಿತರಾಗಲೀ, ಗುರುಗಳಾಗಲೀ, ಭಾರ್ಯೆಯರಾಗಲೀ ಹಿತರೂ ಆಗುವುದಿಲ್ಲ, ಅಧೀನರೂ ಆಗುವುದಿಲ್ಲ. ಆದರೆ ಯಾರು ತಂದೆ-ತಾಯಿಗಳಲ್ಲಿ ಅನನ್ಯಭಕ್ತಿಯುಳ್ಳವರಾಗಿರುವರೋ, ಪ್ರಿಯವಾದ ಮಾತುಗಳನ್ನಾಡುವರೋ, ಅಂಥವರಿಗೆ ತಂದೆ-ತಾಯಿಗಳು ಹಿತರೂ ಆಗುತ್ತಾರೆ. ಸ್ನೇಹಿತರು ಮತ್ತು ಭಾರ್ಯೆಯರು ಅಧೀನರೂ ಆಗುತ್ತಾರೆ (ಭಾರತ ದರ್ಶನ).

[2] ಕರ್ಮಫಲಯೋಗದಿಂದ ಯುಕ್ತವಾದ ಈ ಶರೀರವು ಎಲ್ಲೆಲ್ಲಿಯೋ ಹುಟ್ಟುತ್ತದೆ. ಎಲ್ಲೆಲ್ಲಿಯೋ ಸಾಯುತ್ತದೆ. (ಹುಟ್ಟುವುದೇ ಒಂದು ಕಡೆ; ಸಾಯುವುದೇ ಒಂದು ಕಡೆ.) ಕರ್ಮಗಳ ಫಲಸ್ವರೂಪವಾದ ಈ ಸ್ವಭಾವಸಿದ್ಧವಾದ ಇಂತಹ ಪುನರ್ಜನ್ಮವನ್ನು ನಾವು ಪ್ರಾಣಿಗಳಲ್ಲಿ ಕಾಣಬಹುದಾಗಿದೆ (ಭಾರತ ದರ್ಶನ).

[3] ನ (ಭಾರತ ದರ್ಶನ).

[4] ಜೀವವು ಆತ್ಮದ ಅಧಿಷ್ಠಾನವನ್ನು ಹೊಂದಿದ ನಂತರ ಪುನಃ ಹುಟ್ಟುವುದಿಲ್ಲ. ಇಂದ್ರಿಯಗಳಿಗೂ ಅತೀತವಾದುದು ಮನಸ್ಸು. ಮನಸ್ಸಿಗೂ ಅತೀತವಾದುದು ಆತ್ಮ. ಅದೇ ಅಧಿಷ್ಠಾನ (ಭಾರತ ದರ್ಶನ).

[5] ವಿವಿಧಾನಾಂ (ಗೀತಾ ಪ್ರೆಸ್/ಭಾರತ ದರ್ಶನ).

[6] ಯಾರಿಗೂ ಕಷ್ಟವನ್ನು ಕೊಡದೇ, ಪ್ರಾಯಶ್ಚಿತ್ತಗಳ ಮೂಲಕ ಪಾಪಗಳನ್ನು ಕಳೆದುಕೊಂಡು, ಶಕ್ತಿಗೆ ಅನುಸಾರವಾಗಿ ಶುಭಕರ್ಮಗಳನ್ನು ಮಾಡುವವನು ಕಾಲಾನುಗುಣವಾಗಿ ಬರುವ ಮೃತ್ಯುವಿಗೆ ಭಯಪಡುವುದಿಲ್ಲ (ಭಾರತ ದರ್ಶನ).

[7] ಪ್ರಬಾಧನಾರ್ಥಂ (ಗೀತಾ ಪ್ರೆಸ್/ಭಾರತ ದರ್ಶನ).

[8] ಗೃಹಸ್ಥಾಶ್ರಮದಲ್ಲಿ.

[9] ಸಾಂತ್ವೇನಾನ್ನಪ್ರದಾನೇನ (ಗೀತಾ ಪ್ರೆಸ್/ಭಾರತ ದರ್ಶನ).

Comments are closed.