Shanti Parva: Chapter 283

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೮೩

ಬ್ರಾಹ್ಮಣಾದಿ ವರ್ಣಗಳ ಜೀವಿಕೆ, ಮನುಷ್ಯರಲ್ಲಿ ಅಸುರೀಭಾವದ ಪ್ರಾದುರ್ಭಾವ, ಶಿವನಿಂದ ಅದರ ನಿವಾರಣೆ, ಸ್ವಧರ್ಮ ಪರಿಪಾಲನೆ (1-30).

12283001 ಪರಾಶರ ಉವಾಚ|

12283001a ಪ್ರತಿಗ್ರಹಾಗತಾ ವಿಪ್ರೇ ಕ್ಷತ್ರಿಯೇ ಶಸ್ತ್ರನಿರ್ಜಿತಾಃ[1]|

12283001c ವೈಶ್ಯೇ ನ್ಯಾಯಾರ್ಜಿತಾಶ್ಚೈವ ಶೂದ್ರೇ ಶುಶ್ರೂಷಯಾರ್ಜಿತಾಃ|

12283001e ಸ್ವಲ್ಪಾಪ್ಯರ್ಥಾಃ ಪ್ರಶಸ್ಯಂತೇ ಧರ್ಮಸ್ಯಾರ್ಥೇ ಮಹಾಫಲಾಃ||

ಪರಾಶರನು ಹೇಳಿದನು: “ವಿಪ್ರನಲ್ಲಿ ಪ್ರತಿಗ್ರಹಿಸಿದ, ಕ್ಷತ್ರಿಯನಲ್ಲಿ ಶಸ್ತ್ರದಿಂದ ಗೆದ್ದ, ವೈಶ್ಯನಲ್ಲಿ ನ್ಯಾಯಾರ್ಜಿತವಾದ ಮತ್ತು ಶೂದ್ರನಲ್ಲಿ ಶುಶ್ರೂಷೆಯಿಂದ ಗಳಿಸಿದ ಧನವು ಅಲ್ಪವಾದರೂ ಪ್ರಶಂಸನೀಯವಾಗಿರುತ್ತದೆ. ಇವುಗಳನ್ನು ಧರ್ಮಕಾರ್ಯಗಳಿಗೆ ಬಳಸಿದರೆ ಮಹಾಫಲವು ದೊರೆಯುತ್ತದೆ.

12283002a ನಿತ್ಯಂ ತ್ರಯಾಣಾಂ ವರ್ಣಾನಾಂ ಶೂದ್ರಃ ಶುಶ್ರೂಷುರುಚ್ಯತೇ|

12283002c ಕ್ಷತ್ರಧರ್ಮಾ ವೈಶ್ಯಧರ್ಮಾ ನಾವೃತ್ತಿಃ ಪತತಿ ದ್ವಿಜಃ|

12283002e ಶೂದ್ರಕರ್ಮಾ ಯದಾ ತು ಸ್ಯಾತ್ತದಾ ಪತತಿ ವೈ ದ್ವಿಜಃ||

ಮೂರು ವರ್ಣದವರನ್ನು ನಿತ್ಯವೂ ಶುಶ್ರೂಷೆಮಾಡುವವನನ್ನು ಶೂದ್ರ ಎನ್ನುತ್ತಾರೆ. ತನ್ನ ವೃತ್ತಿಯನ್ನು ನಡೆಸಿಕೊಂಡು ಹೋಗಲು ಆಗದೇ ಇದ್ದಾಗ ಬ್ರಾಹ್ಮಣನು ಕ್ಷತ್ರಧರ್ಮ ಅಥವಾ ವೈಶ್ಯಧರ್ಮದ ವೃತ್ತಿಯನ್ನು ಕೈಗೊಂಡರೆ ಪತಿತನಾಗುವುದಿಲ್ಲ. ಆದರೆ ಬ್ರಾಹ್ಮಣನು ಶೂದ್ರಕರ್ಮದಿಂದ ಪತಿತನಾಗುತ್ತಾನೆ.

12283003a ವಾಣಿಜ್ಯಂ ಪಾಶುಪಾಲ್ಯಂ ಚ ತಥಾ ಶಿಲ್ಪೋಪಜೀವನಮ್|

12283003c ಶೂದ್ರಸ್ಯಾಪಿ ವಿಧೀಯಂತೇ ಯದಾ ವೃತ್ತಿರ್ನ ಜಾಯತೇ||

ಶೂದ್ರನಿಗೆ ಸೇವಾವೃತ್ತಿಯಿಂದ ಜೀವನವನ್ನು ನಡೆಸಲು ಸಾಧ್ಯವಾಗದೇ ಇದ್ದಾಗ ತನ್ನ ಜೀವಿಕೆಗಾಗಿ ವ್ಯಾಪಾರ, ಪಶುಪಾಲನೆ ಮತ್ತು ಶಿಲ್ಪಗಳನ್ನು ಅವಲಂಬಿಸಬಹುದೆಂದು ಶಾಸ್ತ್ರಗಳು ಹೇಳುತ್ತವೆ.

12283004a ರಂಗಾವತರಣಂ ಚೈವ ತಥಾ ರೂಪೋಪಜೀವನಮ್|

12283004c ಮದ್ಯಮಾಂಸೋಪಜೀವ್ಯಂ ಚ ವಿಕ್ರಯೋ ಲೋಹಚರ್ಮಣೋಃ||

12283005a ಅಪೂರ್ವಿಣಾ ನ ಕರ್ತವ್ಯಂ ಕರ್ಮ ಲೋಕೇ ವಿಗರ್ಹಿತಮ್|

12283005c ಕೃತಪೂರ್ವಿಣಸ್ತು ತ್ಯಜತೋ ಮಹಾನ್ ಧರ್ಮ ಇತಿ ಶ್ರುತಿಃ||

ವೇಷವನ್ನು ಧರಿಸಿ ರಂಗಮಂಟಪದಲ್ಲಿ ಕುಣಿಯುವುದು, ವೇಷಗಳನ್ನು ಧರಿಸಿ ಅದರಿಂದಲೇ ಜೀವನ ನಡೆಸುವುದು, ಮದ್ಯ-ಮಾಂಸಗಳಿಂದ ಜೀವನ ನಡೆಸುವುದು, ಲೋಹ ಮತ್ತು ಚರ್ಮಗಳನ್ನು ಮಾರಾಟಮಾಡುವುದು – ಮೊದಲಾದ ಲೋಕದಲ್ಲಿ ಅತಿ ನಿಂದನೀಯವಾದ ಕರ್ಮಗಳನ್ನು - ಹಿಂದಿನಿಂದ ನಡೆದುಕೊಂಡು ಬಂದಿದ್ದರೂ – ಮಾಡಬಾರದು. ಈ ವೃತ್ತಿಗಳು ಹಿಂದಿನಿಂದ ನಡೆದುಕೊಂಡು ಬಂದಿದ್ದರೂ ಅವನ್ನು ತ್ಯಜಿಸಿದರೆ ಮಹಾಧರ್ಮವುಂಟಾಗುತ್ತದೆ ಎಂದು ಶ್ರುತಿಗಳು ಹೇಳುತ್ತವೆ.

12283006a ಸಂಸಿದ್ಧಃ ಪುರುಷೋ ಲೋಕೇ ಯದಾಚರತಿ ಪಾಪಕಮ್|

12283006c ಮದೇನಾಭಿಪ್ಲುತಮನಾಸ್ತಚ್ಚ ನಗ್ರಾಹ್ಯಮುಚ್ಯತೇ||

ಲೋಕವಿಖ್ಯಾತ ಯಶಸ್ವೀ ಪುರುಷನು ಮದದಿಂದ ಅಥವಾ ಲೋಭದಿಂದ ಪಾಪಕರ್ಮಗಳನ್ನು ಮಾಡಿದರೆ ಅದು ಇತರರ ಆಚರಣೆಗೆ ಯೋಗ್ಯವಾಗುವುದಿಲ್ಲ.

12283007a ಶ್ರೂಯಂತೇ ಹಿ ಪುರಾಣೇ ವೈ ಪ್ರಜಾ ಧಿಗ್ದಂಡಶಾಸನಾಃ|

12283007c ದಾಂತಾ ಧರ್ಮಪ್ರಧಾನಾಶ್ಚ ನ್ಯಾಯಧರ್ಮಾನುವರ್ತಕಾಃ||

ಹಿಂದೆ ಪ್ರಜೆಗಳು ಹೆಚ್ಚಾಗಿ ದಾಂತರೂ ಧರ್ಮಪ್ರಧಾನರೂ ಆಗಿದ್ದು ನ್ಯಾಯಧರ್ಮಗಳಂತೆಯೇ ನಡೆದುಕೊಳ್ಳುತ್ತಿದ್ದರು ಮತ್ತು ಆಗ ಧಿಕ್ಕಾರವೆಂಬ ದಂಡಶಾಸನವೇ ಸಾಕಾಗುತ್ತಿತ್ತು ಎಂದು ಪುರಾಣಗಳಲ್ಲಿ ಕೇಳಿದ್ದೇವೆ.

12283008a ಧರ್ಮ ಏವ ಸದಾ ನೃಣಾಮಿಹ ರಾಜನ್ ಪ್ರಶಸ್ಯತೇ|

12283008c ಧರ್ಮವೃದ್ಧಾ ಗುಣಾನೇವ ಸೇವಂತೇ ಹಿ ನರಾ ಭುವಿ||

ರಾಜನ್! ಇಲ್ಲಿ ಮನುಷ್ಯರಿಗೆ ಸದಾ ಧರ್ಮವೇ ಪ್ರಶಸ್ತವಾಗಿದೆ. ಧರ್ಮವೃದ್ಧ ನರರು ಭುವಿಯಲ್ಲಿ ಸದ್ಗುಣಗಳನ್ನೇ ಆಶ್ರಯಿಸುತ್ತಾರೆ.

12283009a ತಂ ಧರ್ಮಮಸುರಾಸ್ತಾತ ನಾಮೃಷ್ಯಂತ ಜನಾಧಿಪ|

12283009c ವಿವರ್ಧಮಾನಾಃ ಕ್ರಮಶಸ್ತತ್ರ ತೇಽನ್ವಾವಿಶನ್ ಪ್ರಜಾಃ||

ಅಯ್ಯಾ! ಜನಾಧಿಪ! ಅಂತಹ ಧರ್ಮವನ್ನು ಅಸುರರು ಸಹಿಸದಾದರು. ಕ್ರಮಶಃ ಅವರು ವೃದ್ಧಿಹೊಂದಿ ಪ್ರಜೆಗಳನ್ನು ಆವೇಶಿಸಿಕೊಂಡರು.

12283010a ತೇಷಾಂ ದರ್ಪಃ ಸಮಭವತ್ ಪ್ರಜಾನಾಂ ಧರ್ಮನಾಶನಃ|

12283010c ದರ್ಪಾತ್ಮನಾಂ ತತಃ ಕ್ರೋಧಃ ಪುನಸ್ತೇಷಾಮಜಾಯತ||

ಅಂತಹ ಪ್ರಜೆಗಳಲ್ಲಿ ಧರ್ಮನಾಶಕವಾದ ದರ್ಪವು ಹುಟ್ಟಿಕೊಂಡಿತು. ಅನಂತರ ದರ್ಪಾತ್ಮರಾದ ಅವರಲ್ಲಿ ಪುನಃ ಕ್ರೋಧವು ಹುಟ್ಟಿಕೊಂಡಿತು.

12283011a ತತಃ ಕ್ರೋಧಾಭಿಭೂತಾನಾಂ ವೃತ್ತಂ ಲಜ್ಜಾಸಮನ್ವಿತಮ್|

12283011c ಹ್ರೀಶ್ಚೈವಾಪ್ಯನಶದ್ರಾಜಂಸ್ತತೋ ಮೋಹೋ ವ್ಯಜಾಯತ||

ರಾಜನ್! ಕ್ರೋಧದಿಂದ ಅಭಿಭೂತರಾದ ಅವರಲ್ಲಿ ಲಜ್ಜಾಯುಕ್ತವಾದ ಸದಾಚಾರವೂ ಲುಪ್ತವಾಯಿತು. ಸಂಕೋಚವೇ ಇಲ್ಲದ ಅವರಲ್ಲಿ ಮೋಹವುಂಟಾಯಿತು.

12283012a ತತೋ ಮೋಹಪರೀತಾಸ್ತೇ ನಾಪಶ್ಯಂತ ಯಥಾ ಪುರಾ|

12283012c ಪರಸ್ಪರಾವಮರ್ದೇನ ವರ್ತಯಂತಿ ಯಥಾಸುಖಮ್||

ಮೋಹವಶರಾದ ಅವರು ಹಿಂದಿನಂತೆ ನೋಡುತ್ತಿರಲಿಲ್ಲ. ಪರಸ್ಪರರನ್ನು ತುಳಿಯುತ್ತಾ ತಮ್ಮದೇ ಸುಖವನ್ನು ಹೆಚ್ಚಿಸಿಕೊಳ್ಳತೊಡಗಿದರು.

12283013a ತಾನ್ ಪ್ರಾಪ್ಯ ತು ಸ ಧಿಗ್ದಂಡೋ ನಕಾರಣಮತೋಽಭವತ್|

12283013c ತತೋಽಭ್ಯಗಚ್ಚನ್ದೇವಾಂಶ್ಚ ಬ್ರಾಹ್ಮಣಾಂಶ್ಚಾವಮನ್ಯ ಹ||

ದಿಗ್ದಂಡವು ಅಂಥವರನ್ನು ಸನ್ಮಾರ್ಗಕ್ಕೆ ತರಲು ಅಸಮರ್ಥವಾಯಿತು. ಜನರು ದೇವತೆಗಳನ್ನೂ ಬ್ರಾಹ್ಮಣರನ್ನೂ ಅಪಮಾನಿಸತೊಡಗಿದರು.

12283014a ಏತಸ್ಮಿನ್ನೇವ ಕಾಲೇ ತು ದೇವಾ ದೇವವರಂ ಶಿವಮ್|

12283014c ಅಗಚ್ಚನ್ ಶರಣಂ ವೀರಂ ಬಹುರೂಪಂ ಗಣಾಧಿಪಮ್[2]||

ಅದೇ ಸಮಯದಲ್ಲಿ ದೇವತೆಗಳು ದೇವವರ ವೀರ ಬಹುರೂಪ ಗಣಾಧಿಪ ಶಿವವನ್ನು ಶರಣು ಹೊಕ್ಕರು.

12283015a ತೇನ ಸ್ಮ ತೇ ಗಗನಗಾಃ ಸಪುರಾಃ ಪಾತಿತಾಃ ಕ್ಷಿತೌ|

12283015c ತಿಸ್ರೋಽಪ್ಯೇಕೇನ ಬಾಣೇನ ದೇವಾಪ್ಯಾಯಿತತೇಜಸಾ||

ದೇವತೆಗಳ ಮೂಲಕ ತೇಜಸ್ಸನ್ನು ವೃದ್ಧಿಪಡಿಸಿಕೊಂಡ ಶಿವನು ಆಗ ಒಂದೇ ಬಾಣದಿಂದ ಮೂರು ಪುರಗಳ ಸಮೇತ ಆಕಾಶದಲ್ಲಿ ಸಂಚರಿಸುತ್ತಿದ್ದ ಅಸುರರನ್ನು ಭೂಮಿಯ ಮೇಲೆ ಬೀಳಿಸಿದನು.

12283016a ತೇಷಾಮಧಿಪತಿಸ್ತ್ವಾಸೀದ್ಭೀಮೋ ಭೀಮಪರಾಕ್ರಮಃ|

12283016c ದೇವತಾನಾಂ ಭಯಕರಃ ಸ ಹತಃ ಶೂಲಪಾಣಿನಾ||

ದೇವತೆಗಳಿಗೆ ಭಯವನ್ನುಂಟುಮಾಡುತ್ತಿದ್ದ, ಆ ಭೀಮ ಭೀಮಪರಾಕ್ರಮಿ ಅಸುರರ ಅಧಿಪತಿಯು ಶೂಲಪಾಣಿಯಿಂದ ಹತನಾದನು.

12283017a ತಸ್ಮಿನ್ ಹತೇಽಥ ಸ್ವಂ ಭಾವಂ ಪ್ರತ್ಯಪದ್ಯಂತ ಮಾನವಾಃ|

12283017c ಪ್ರಾವರ್ತಂತ[3] ಚ ವೇದಾ ವೈ ಶಾಸ್ತ್ರಾಣಿ ಚ ಯಥಾ ಪುರಾ||

ಹೀಗೆ ಅಸುರಾಧಿಪನು ಹತನಾಗಲು ಪ್ರಜೆಗಳು ತಮ್ಮ ಪೂರ್ವ ಸ್ವಭಾವವನ್ನು ಪಡೆದುಕೊಂಡರು. ಹಿಂದಿನಂತೆಯೇ ವೇದ-ಶಾಸ್ತ್ರಗಳಂತೆ ನಡೆದುಕೊಳ್ಳತೊಡಗಿದರು.

12283018a ತತೋಽಭ್ಯಷಿಂಚನ್ರಾಜ್ಯೇನ ದೇವಾನಾಂ ದಿವಿ ವಾಸವಮ್|

12283018c ಸಪ್ತರ್ಷಯಶ್ಚಾನ್ವಯುಂಜನ್ನರಾಣಾಂ ದಂಡಧಾರಣೇ||

ಅನಂತರ ದಿವಿಯಲ್ಲಿ ವಾಸವನನ್ನು ದೇವತೆಗಳ ರಾಜ್ಯದಲ್ಲಿ ಅಭಿಷೇಕಿಸಿ ಸಪ್ತರ್ಷಿಗಳು ತಾವೇ ನರರ ದಂಢಧಾರಿಗಳಾದರು.

12283019a ಸಪ್ತರ್ಷೀಣಾಮಥೋರ್ಧ್ವಂ ಚ ವಿಪೃಥುರ್ನಾಮ ಪಾರ್ಥಿವಃ|

12283019c ರಾಜಾನಃ ಕ್ಷತ್ರಿಯಾಶ್ಚೈವ ಮಂಡಲೇಷು ಪೃಥಕ್ ಪೃಥಕ್||

ಸಪ್ತರ್ಷಿಗಳ ಶಾಸನದ ನಂತರ ವಿಪೃಥು ಎಂಬ ಹೆಸರಿನವನು ಪಾರ್ಥಿವನಾದನು. ಕ್ಷತ್ರಿಯ ರಾಜರು ಬೇರೆ ಬೇರೆ ಮಂಡಲಗಳಲ್ಲಿ ಶಾಸನ ಮಾಡತೊಡಗಿದರು.

12283020a ಮಹಾಕುಲೇಷು ಯೇ ಜಾತಾ ವೃತ್ತಾಃ ಪೂರ್ವತರಾಶ್ಚ ಯೇ|

12283020c ತೇಷಾಮಥಾಸುರೋ ಭಾವೋ ಹೃದಯಾನ್ನಾಪಸರ್ಪತಿ||

ಮಹಾಕುಲಗಳಲ್ಲಿ ಹುಟ್ಟಿದ್ದ ಅವರಲ್ಲಿ ಹಿಂದಿನಂತೆಯೇ ನಡೆದುಕೊಳ್ಳುವವರಿದ್ದರು. ಆದರೂ ಅಸುರಭಾವವು ಅವರ ಹೃದಯದಿಂದ ಸಂಪೂರ್ಣವಾಗಿ ಹೋಗಿರಲಿಲ್ಲ.

12283021a ತಸ್ಮಾತ್ತೇನೈವ ಭಾವೇನ ಸಾನುಷಂಗೇನ ಪಾರ್ಥಿವಾಃ|

12283021c ಆಸುರಾಣ್ಯೇವ ಕರ್ಮಾಣಿ ನ್ಯಷೇವನ್ ಭೀಮವಿಕ್ರಮಾಃ||

ಆದುದರಿಂದ ಭೀಮವಿಕ್ರಮಿಗಳಾಗಿದ್ದ ಆ ಪಾರ್ಥಿವರು ಹೃದಯಾಂತರ್ಗತವಾಗಿದ್ದ ಅಸುರಭಾವದಲ್ಲಿಯೇ ಇದ್ದುಕೊಂಡು ಅಸುರೋಚಿತ ಕರ್ಮಗಳನ್ನೇ ಮಾಡುತ್ತಿದ್ದರು.

12283022a ಪ್ರತ್ಯತಿಷ್ಠಂಶ್ಚ ತೇಷ್ವೇವ ತಾನ್ಯೇವ ಸ್ಥಾಪಯಂತಿ ಚ|

12283022c ಭಜಂತೇ ತಾನಿ ಚಾದ್ಯಾಪಿ ಯೇ ಬಾಲಿಶತಮಾ ನರಾಃ||

ಮೂರ್ಖರಾದ ಅಂತರ ನರರು ಈಗಲೂ ಅಸುರಭಾವದಲ್ಲಿಯೇ ಸುಸ್ಥಿರರಾಗಿದ್ದಾರೆ. ಅದನ್ನೇ ಸ್ಥಾಪಿಸುತ್ತಿದ್ದಾರೆ. ಅದನ್ನೇ ಪ್ರೀತಿಸುತ್ತಿದ್ದಾರೆ.

12283023a ತಸ್ಮಾದಹಂ ಬ್ರವೀಮಿ ತ್ವಾಂ ರಾಜನ್ಸಂಚಿಂತ್ಯ ಶಾಸ್ತ್ರತಃ|

12283023c ಸಂಸಿದ್ಧಾಧಿಗಮಂ ಕುರ್ಯಾತ್ಕರ್ಮ ಹಿಂಸಾತ್ಮಕಂ ತ್ಯಜೇತ್||

ರಾಜನ್! ಆದುದರಿಂದ ಶಾಸ್ತ್ರತಃ ಯೋಚಿಸಿ ನಾನು ನಿನಗೆ ಇದನ್ನು ಹೇಳುತ್ತಿದ್ದೇನೆ. ಉತ್ತಮ ಸಿದ್ಧಿಯುಂಟಾಗುವ ಕರ್ಮಗಳನ್ನೇ ಮಾಡಬೇಕು. ಹಿಂಸಾತ್ಮಕ ಕರ್ಮಗಳನ್ನು ತ್ಯಜಿಸಬೇಕು.

12283024a ನ ಸಂಕರೇಣ ದ್ರವಿಣಂ ವಿಚಿನ್ವೀತ ವಿಚಕ್ಷಣಃ|

12283024c ಧರ್ಮಾರ್ಥಂ ನ್ಯಾಯಮುತ್ಸೃಜ್ಯ ನ ತತ್ಕಲ್ಯಾಣಮುಚ್ಯತೇ||

ವಿಚಕ್ಷಣನು ಧರ್ಮಸಂಕರ ಕ್ರಮದಲ್ಲಿ ಸಂಪಾದಿಸಿದ ದ್ರವ್ಯವನ್ನು ಧರ್ಮಾರ್ಥಕ್ಕೆ ಉಪಯೋಗಿಸಬಾರದು. ಅನ್ಯಾಯದಿಂದ ಸಂಪಾದಿಸಿದ ಧನವು ಕಲ್ಯಾಣಕಾರಿಯಾಗುವುದಿಲ್ಲ ಎಂದಿದ್ದಾರೆ.

12283025a ಸ ತ್ವಮೇವಂವಿಧೋ ದಾಂತಃ ಕ್ಷತ್ರಿಯಃ ಪ್ರಿಯಬಾಂಧವಃ|

12283025c ಪ್ರಜಾ ಭೃತ್ಯಾಂಶ್ಚ ಪುತ್ರಾಂಶ್ಚ ಸ್ವಧರ್ಮೇಣಾನುಪಾಲಯ||

ನೀನೂ ಕೂಡ ನ್ಯಾಯವಿಧದಲ್ಲಿಯೇ ಧನವನ್ನು ಸಂಗ್ರಹಿಸುತ್ತಾ, ಜಿತೇಂದ್ರಿಯ ಕ್ಷತ್ರಿಯನೂ, ಪ್ರಿಯಬಾಂಧವನೂ ಆಗಿ ಪ್ರಜೆಗಳು-ಸೇವಕರು ಮತ್ತು ಪುತ್ರರನ್ನು ಸ್ವಧರ್ಮದಿಂದ ಪರಿಪಾಲಿಸು.

12283026a ಇಷ್ಟಾನಿಷ್ಟಸಮಾಯೋಗೋ ವೈರಂ ಸೌಹಾರ್ದಮೇವ ಚ|

12283026c ಅಥ ಜಾತಿಸಹಸ್ರಾಣಿ ಬಹೂನಿ ಪರಿವರ್ತತೇ||

ಇಷ್ಟಾನಿಷ್ಟಗಳನ್ನು ಮತ್ತು ವೈರ-ಸೌಹಾರ್ದತೆಗಳನ್ನು ಪಡೆದುಕೊಳ್ಳುತ್ತಾ ಈ ಜೀವವು ಅನೇಕ ಸಹಸ್ರ ಜನ್ಮಗಳನ್ನು ಕಳೆದಿದೆ.

12283027a ತಸ್ಮಾದ್ಗುಣೇಷು ರಜ್ಯೇಥಾ ಮಾ ದೋಷೇಷು ಕದಾ ಚನ|

12283027c ನಿರ್ಗುಣೋ ಯೋ ಹಿ ದುರ್ಬುದ್ಧಿರಾತ್ಮನಃ ಸೋಽರಿರುಚ್ಯತೇ||

ಆದುದರಿಂದ ನಿನಗೆ ಸದ್ಗುಣಗಳಲ್ಲಿಯೇ ಅನುರಾಗವುಂಟಾಗಲಿ. ದೋಷಗಳಲ್ಲಿ ಎಂದೂ ಅನುರಾಗವಿಲ್ಲದಿರಲಿ. ನಿರ್ಗುಣನಾದ ದುರ್ಬುದ್ಧಿಯು ತನಗೆ ತಾನೇ ಶತ್ರುವೆಂದು ಹೇಳಿದ್ದಾರೆ.

12283028a ಮಾನುಷೇಷು ಮಹಾರಾಜ ಧರ್ಮಾಧರ್ಮೌ ಪ್ರವರ್ತತಃ|

12283028c ನ ತಥಾನ್ಯೇಷು ಭೂತೇಷು ಮನುಷ್ಯರಹಿತೇಷ್ವಿಹ||

ಮಹಾರಾಜ! ಧರ್ಮಾಧರ್ಮಗಳು ಕೇವಲ ಮನುಷ್ಯರಲ್ಲಿ ಮಾತ್ರ ಇರುತ್ತದೆ. ಮನುಷ್ಯರಲ್ಲಿ ಧರ್ಮಾಧರ್ಮಗಳು ಇರುವಂತೆ ಅನ್ಯ ಪ್ರಾಣಿಗಳಲ್ಲಿ ಇರುವುದಿಲ್ಲ.

12283029a ಧರ್ಮಶೀಲೋ ನರೋ ವಿದ್ವಾನೀಹಕೋಽನೀಹಕೋಽಪಿ ವಾ|

12283029c ಆತ್ಮಭೂತಃ ಸದಾ ಲೋಕೇ ಚರೇದ್ಭೂತಾನ್ಯಹಿಂಸಯನ್||

ಧರ್ಮಶೀಲ ವಿದ್ವಾಂಸ ನರನು – ಇಲ್ಲಿಯ ಸುಖದಲ್ಲಿ ಅಪೇಕ್ಷೆಯುಳ್ಳವನಾಗಿರಲಿ ಅಥವಾ ಅಪೇಕ್ಷೆಯಿಲ್ಲದವನಾಗಿರಲಿ – ಸದಾ ಲೋಕದಲ್ಲಿ ಎಲ್ಲರನ್ನೂ ಆತ್ಮಭಾವದಿಂದ ಕಾಣುತ್ತಾ ಹಿಂಸಿಸದೇ ಇರಬೇಕು.

12283030a ಯದಾ ವ್ಯಪೇತಹೃಲ್ಲೇಖಂ ಮನೋ ಭವತಿ ತಸ್ಯ ವೈ|

12283030c ನಾನೃತಂ ಚೈವ ಭವತಿ ತದಾ ಕಲ್ಯಾಣಮೃಚ್ಚತಿ||

ಯಾರ ಮನಸ್ಸು ಕಾಮನೆಗಳು ಮತ್ತು ಪೂರ್ವಜನ್ಮದ ವಾಸನೆಗಳನ್ನು ಕಳೆದುಕೊಂಡು ಮಿಥ್ಯಾಭಾವ ರಹಿತವಾಗಿರುವುದೋ ಅವನು ಸದಾ ಕಲ್ಯಾಣವನ್ನು ಹೊಂದುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಪರಾಶರಗೀತಾಯಾಂ ತ್ರ್ಯಾಶೀತ್ಯತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಪರಾಶರಗೀತಾ ಎನ್ನುವ ಇನ್ನೂರಾಎಂಭತ್ಮೂರನೇ ಅಧ್ಯಾಯವು.

[1] ಯುಧಿ ನಿರ್ಜಿತಾಃ (ಭಾರತ ದರ್ಶನ).

[2] ಗುಣಾಧಿಕಮ್ (ಭಾರತ ದರ್ಶನ).

[3] ಪ್ರಾಪದ್ಯಂತ (ಭಾರತ ದರ್ಶನ).

Comments are closed.