ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೨೮೨
ವರ್ಣಾಶ್ರಮಧರ್ಮದ ಪಾಲನೆಯ ಮಹತ್ವ (1-21).
12282001 ಪರಾಶರ ಉವಾಚ|
12282001a ವೃತ್ತಿಃ ಸಕಾಶಾದ್ವರ್ಣೇಭ್ಯಸ್ತ್ರಿಭ್ಯೋ ಹೀನಸ್ಯ ಶೋಭನಾ|
12282001c ಪ್ರೀತ್ಯೋಪನೀತಾ ನಿರ್ದಿಷ್ಟಾ ಧರ್ಮಿಷ್ಠಾನ್ಕುರುತೇ ಸದಾ||
ಪರಾಶರನು ಹೇಳಿದನು: “ಮೂರು ವರ್ಣದವರ ಸೇವೆಯ ವೃತ್ತಿಯೇ ಶೂದ್ರನಿಗೆ ಶುಭದಾಯಕವಾದುದು. ಪ್ರೀತಿಯಿಂದ ಮಾಡುವ ಈ ವೃತ್ತಿಯೇ ಸದಾ ಅವನನ್ನು ಧರ್ಮಿಷ್ಠನನ್ನಾಗಿ ಮಾಡುತ್ತದೆ.
12282002a ವೃತ್ತಿಶ್ಚೇನ್ನಾಸ್ತಿ ಶೂದ್ರಸ್ಯ ಪಿತೃಪೈತಾಮಹೀ ಧ್ರುವಾ|
12282002c ನ ವೃತ್ತಿಂ ಪರತೋ ಮಾರ್ಗೇಚ್ಚುಶ್ರೂಷಾಂ ತು ಪ್ರಯೋಜಯೇತ್||
ಪಿತೃಪಿತಾಮಹರ ನಿರ್ದಿಷ್ಟವಾದ ಅನ್ಯ ವೃತ್ತಿಯು ಇಲ್ಲದಿದ್ದರೆ ಶೂದ್ರನು ಬೇರೆ ಯಾವ ವೃತ್ತಿಯನ್ನೂ ಅವಲಂಬಿಸಬಾರದು. ಮೂರು ವರ್ಣದವರ ಸೇವೆಯಲ್ಲಿಯೇ ತೊಡಗಿರಬೇಕು.
12282003a ಸದ್ಭಿಸ್ತು ಸಹ ಸಂಸರ್ಗಃ ಶೋಭತೇ ಧರ್ಮದರ್ಶಿಭಿಃ|
12282003c ನಿತ್ಯಂ ಸರ್ವಾಸ್ವವಸ್ಥಾಸು ನಾಸದ್ಭಿರಿತಿ ಮೇ ಮತಿಃ||
ಧರ್ಮದರ್ಶಿ ಸತ್ಪುರುಷರ ಸಂಸರ್ಗವು ಶೋಭಿಸುತ್ತದೆ. ನಿತ್ಯವೂ ಸರ್ವಾವಸ್ಥೆಗಳಲ್ಲಿಯೂ ಅಸತ್ಪುರುಷರ ಸಹವಾಸವನ್ನು ಮಾಡಬಾರದೆಂದು ನನ್ನ ಮತವು.
12282004a ಯಥೋದಯಗಿರೌ ದ್ರವ್ಯಂ ಸಂನಿಕರ್ಷೇಣ ದೀಪ್ಯತೇ|
12282004c ತಥಾ ಸತ್ಸಂನಿಕರ್ಷೇಣ ಹೀನವರ್ಣೋಽಪಿ ದೀಪ್ಯತೇ||
ಉದಯಪರ್ವತದಲ್ಲಿರುವ ವಸ್ತುವು ಸೂರ್ಯನ ನಿಕಟಸಾನ್ನಿಧ್ಯದಿಂದ ಹೇಗೆ ಪ್ರಕಾಶಿಸುತ್ತದೆಯೋ ಹಾಗೆ ಸತ್ಪುರುಷರ ಸಾನ್ನಿಧ್ಯದಿಂದ ಹೀನವರ್ಣದವರೂ ಶೋಭಿಸುತ್ತಾರೆ.
12282005a ಯಾದೃಶೇನ ಹಿ ವರ್ಣೇನ ಭಾವ್ಯತೇ ಶುಕ್ಲಮಂಬರಮ್|
12282005c ತಾದೃಶಂ ಕುರುತೇ ರೂಪಮೇತದೇವಮವೈಹಿ ಮೇ||
ಬಿಳೀ ಬಟ್ಟೆಯು ಯಾವ ಬಣ್ಣವನ್ನು ಹಾಕುತ್ತೇವೋ ಆ ಬಣ್ಣವನ್ನು ಪಡೆದುಕೊಳ್ಳುವಂತೆ, ಯಾರೊಂದಿಗೆ ಸಂಗಮಾಡುತ್ತೇವೋ ಅವರಂತೆಯೇ ನಾವೂ ಆಗುತ್ತೇವೆ ಎನ್ನುವುದನ್ನು ನನ್ನಿಂದ ತಿಳಿ.[1]
12282006a ತಸ್ಮಾದ್ಗುಣೇಷು ರಜ್ಯೇಥಾ ಮಾ ದೋಷೇಷು ಕದಾ ಚನ|
12282006c ಅನಿತ್ಯಮಿಹ ಮರ್ತ್ಯಾನಾಂ ಜೀವಿತಂ ಹಿ ಚಲಾಚಲಮ್||
ಆದುದರಿಂದ ಸದ್ಗುಣಗಳನ್ನು ಪ್ರೀತಿಸು. ದೋಷಗಳಲ್ಲಿ ಎಂದೂ ಪ್ರೀತಿಯಿರದಿರಲಿ. ಇಲ್ಲಿ ಮರ್ತ್ಯರ ಜೀವನವು ಅನಿತ್ಯವೂ ಚಂಚಲವೂ ಆಗಿರುತ್ತದೆ.
12282007a ಸುಖೇ ವಾ ಯದಿ ವಾ ದುಃಖೇ ವರ್ತಮಾನೋ ವಿಚಕ್ಷಣಃ|
12282007c ಯಶ್ಚಿನೋತಿ ಶುಭಾನ್ಯೇವ ಸ ಭದ್ರಾಣೀಹ[2] ಪಶ್ಯತಿ||
ಬುದ್ಧಿವಂತನು ಸುಖ ಅಥವಾ ದುಃಖದಲ್ಲಿರಲಿ, ಶುಭಕರ್ಮಗಳನ್ನೇ ಮಾಡುತ್ತಿದ್ದರೆ ಅವನು ಕಲ್ಯಾಣವನ್ನೇ ಕಾಣುತ್ತಾನೆ.
12282008a ಧರ್ಮಾದಪೇತಂ ಯತ್ಕರ್ಮ ಯದ್ಯಪಿ ಸ್ಯಾನ್ಮಹಾಫಲಮ್|
12282008c ನ ತತ್ಸೇವೇತ ಮೇಧಾವೀ ನ ತದ್ಧಿತಮಿಹೋಚ್ಯತೇ||
ಒಂದು ವೇಳೆ ಅದು ಮಹಾಫಲವನ್ನು ಕೊಡುತ್ತಾದಾದರೂ ಮೇಧಾವಿಯು ಧರ್ಮವಿರುದ್ಧ ಕರ್ಮಗಳನ್ನು ಮಾಡಬಾರದು. ಏಕೆಂದರೆ ಅಂತಹ ಕರ್ಮಗಳು ಅಹಿತವಾದವು ಎಂದು ಹೇಳಿದ್ದಾರೆ.
12282009a ಯೋ ಹೃತ್ವಾ ಗೋಸಹಸ್ರಾಣಿ ನೃಪೋ ದದ್ಯಾದರಕ್ಷಿತಾ|
12282009c ಸ ಶಬ್ದಮಾತ್ರಫಲಭಾಗ್ರಾಜಾ ಭವತಿ ತಸ್ಕರಃ||
ಪ್ರಜೆಗಳನ್ನು ರಕ್ಷಿಸದ ರಾಜನು ಸಹಾಸ್ರಾರು ಗೋವುಗಳನ್ನು ಅಪಹರಿಸಿ ದಾನಮಾಡಿದರೆ ಅವನು ಹೆಸರಿಗೆ ಮಾತ್ರ ದಾನಿಯೆನಿಸಿಕೊಳ್ಳುತ್ತಾನೆಯೇ ಹೊರತು ಅಂತಹ ರಾಜನು ಕಳ್ಳನೇ ಆಗುತ್ತಾನೆ.
12282010a ಸ್ವಯಂಭೂರಸೃಜಚ್ಚಾಗ್ರೇ ಧಾತಾರಂ ಲೋಕಪೂಜಿತಮ್|
12282010c ಧಾತಾಸೃಜತ್ ಪುತ್ರಮೇಕಂ ಪ್ರಜಾನಾಂ ಧಾರಣೇ ರತಮ್||
ಸ್ವಯಂಭುವು ಮೊದಲು ಲೋಕ ಪೂಜಿತ ಬ್ರಹ್ಮನನ್ನು ಸೃಷ್ಟಿಸಿದನು. ಬ್ರಹ್ಮನು ಸರ್ವಲೋಕಗಳ ಧಾರಣೆಮಾಡಲು ಪರ್ಜನ್ಯ ಎಂಬ ಪುತ್ರನನ್ನು ಸೃಷ್ಟಿಸಿದನು.
12282011a ತಮರ್ಚಯಿತ್ವಾ ವೈಶ್ಯಸ್ತು ಕುರ್ಯಾದತ್ಯರ್ಥಮೃದ್ಧಿಮತ್|
12282011c ರಕ್ಷಿತವ್ಯಂ ತು ರಾಜನ್ಯೈರುಪಯೋಜ್ಯಂ ದ್ವಿಜಾತಿಭಿಃ||
12282012a ಅಜಿಹ್ಮೈರಶಠಕ್ರೋಧೈರ್ಹವ್ಯಕವ್ಯಪ್ರಯೋಕ್ತೃಭಿಃ|
12282012c ಶೂದ್ರೈರ್ನಿರ್ಮಾರ್ಜನಂ ಕಾರ್ಯಮೇವಂ ಧರ್ಮೋ ನ ನಶ್ಯತಿ||
ಅವನನ್ನು ಅರ್ಚಿಸಿ ವೈಶ್ಯರು ಜೀವಿಕೆಗಾಗಿ ಕೃಷಿ-ವಾಣಿಜ್ಯ-ಪಶುಪಾಲನೆ ಮೊದಲಾದವುಗಳನ್ನು ಮಾಡಿಕೊಂಡು ಸಮೃದ್ಧಶಾಲಿಯಾಗುತ್ತಾರೆ. ಕ್ಷತ್ರಿಯರು ಆ ಸಂಪತ್ತನ್ನು ರಕ್ಷಿಸುವವರಾಗುತ್ತಾರೆ. ಬ್ರಾಹ್ಮಣರು ಕುಟಿಲತೆ, ಶಠತ್ವ ಮತ್ತು ಕ್ರೋಧರಹಿತರಾಗಿ ಹವ್ಯಕವ್ಯಗಳಲ್ಲಿ ನಿಪುಣರಾಗಿ ವೈಶ್ಯರ ಸಂಪತ್ತನ್ನು ಸದುಪಯೋಗಕ್ಕೆ ತೊಡಗಿಸಲಿ. ಶೂದ್ರರು ಭೂಮಿಶುದ್ಧಿ ಮೊದಲಾದ ಕಾರ್ಯಗಳನ್ನು ಮಾಡಲಿ. ಹೀಗೆ ಎಲ್ಲರೂ ಸ್ವಕರ್ಮಗಳನ್ನು ಮಾಡಿದರೆ ಧರ್ಮಭ್ರಷ್ಟವಾಗುವುದಿಲ್ಲ.
12282013a ಅಪ್ರನಷ್ಟೇ ತತೋ ಧರ್ಮೇ ಭವಂತಿ ಸುಖಿತಾಃ ಪ್ರಜಾಃ|
12282013c ಸುಖೇನ ತಾಸಾಂ ರಾಜೇಂದ್ರ ಮೋದಂತೇ ದಿವಿ ದೇವತಾಃ||
ಧರ್ಮವು ನಷ್ಟವಾಗಿರದೇ ಇದ್ದರೆ ಪ್ರಜೆಗಳು ಸುಖಿಗಳಾಗುತ್ತಾರೆ. ರಾಜೇಂದ್ರ! ಅವರ ಸುಖದಿಂದ ದಿವಿಯಲ್ಲಿ ದೇವತೆಗಳು ಮೋದಿಸುತ್ತಾರೆ.
12282014a ತಸ್ಮಾದ್ಯೋ ರಕ್ಷತಿ ನೃಪಃ ಸ ಧರ್ಮೇಣಾಭಿಪೂಜ್ಯತೇ|
12282014c ಅಧೀತೇ ಚಾಪಿ ಯೋ ವಿಪ್ರೋ ವೈಶ್ಯೋ ಯಶ್ಚಾರ್ಜನೇ ರತಃ||
12282015a ಯಶ್ಚ ಶುಶ್ರೂಷತೇ ಶೂದ್ರಃ ಸತತಂ ನಿಯತೇಂದ್ರಿಯಃ|
12282015c ಅತೋಽನ್ಯಥಾ ಮನುಷ್ಯೇಂದ್ರ ಸ್ವಧರ್ಮಾತ್ಪರಿಹೀಯತೇ||
ಮನುಷ್ಯೇಂದ್ರ! ಆದುದರಿಂದ ಸತತವೂ ನಿಯತೇಂದ್ರಿಯನಾಗಿ ಪ್ರಜೆಗಳನ್ನು ರಕ್ಷಿಸುವ ನೃಪ, ವೇದಾಧ್ಯಯನ ಮಾಡುವ ವಿಪ್ರ, ಧನಸಂಪಾದನೆಯಲ್ಲಿರುವ ವೈಶ್ಯ, ಮತ್ತು ಶುಶ್ರೂಷಣೆಯಲ್ಲಿರುವ ಶೂದ್ರ – ಎಲ್ಲರೂ ತಮ್ಮ ಧರ್ಮದಲ್ಲಿರುವುದರಿಂದ ಲೋಕಮಾನ್ಯರಾಗುತ್ತಾರೆ. ಅನ್ಯಥಾ ಅವರು ಸ್ವಧರ್ಮದಿಂದ ಚ್ಯುತರಾಗುತ್ತಾರೆ.
12282016a ಪ್ರಾಣಸಂತಾಪನಿರ್ದಿಷ್ಟಾಃ ಕಾಕಿಣ್ಯೋಽಪಿ ಮಹಾಫಲಾಃ|
12282016c ನ್ಯಾಯೇನೋಪಾರ್ಜಿತಾ ದತ್ತಾಃ ಕಿಮುತಾನ್ಯಾಃ ಸಹಸ್ರಶಃ||
ಪ್ರಾಣಸಂತಾಪ ಪೂರ್ವಕ ನ್ಯಾಯದಿಂದ ಗಳಿಸಿದ ಒಂದು ಕವಡೆಯ ನಾಣ್ಯವನ್ನಾದರೂ ದಾನವಾಗಿತ್ತರೆ ಅದೇ ಮಹಾಫಲವನ್ನು ನೀಡುತ್ತದೆ. ಹೀಗಿರುವಾಗ ನ್ಯಾಯದಿಂದ ಗಳಿಸಿದ ಸಹಸ್ರಾರು ಅನ್ಯ ಪದಾರ್ಥಗಳನ್ನು ದಾನಮಾಡಿದರೆ ಅದರ ಫಲದ ಕುರಿತು ಹೇಳುವುದೇನಿದೆ?
12282017a ಸತ್ಕೃತ್ಯ ತು ದ್ವಿಜಾತಿಭ್ಯೋ ಯೋ ದದಾತಿ ನರಾಧಿಪ|
12282017c ಯಾದೃಶಂ ತಾದೃಶಂ ನಿತ್ಯಮಶ್ನಾತಿ ಫಲಮೂರ್ಜಿತಮ್||
ನರಾಧಿಪ! ಬ್ರಾಹ್ಮಣರನ್ನು ಸತ್ಕರಿಸಿ ದಾನಮಾಡುವವನು ಏನನ್ನು ಹೇಗೆ ದಾನಮಾಡುತ್ತಾನೋ ಅದರ ಫಲವನ್ನು ನಿತ್ಯವೂ ಹಾಗೆಯೇ ಬೋಗಿಸುತ್ತಾನೆ.
12282018a ಅಭಿಗಮ್ಯ ದತ್ತಂ ತುಷ್ಟ್ಯಾ ಯದ್ಧನ್ಯಮಾಹುರಭಿಷ್ಟುತಮ್|
12282018c ಯಾಚಿತೇನ ತು ಯದ್ದತ್ತಂ ತದಾಹುರ್ಮಧ್ಯಮಂ ಬುಧಾಃ||
ಸ್ವಯಂ ಹೋಗಿ ದಾನವನ್ನಿತ್ತು ಸಂತುಷ್ಟಗೊಳಿಸುವುದನ್ನು ಉತ್ತಮ ದಾನವೆಂದು ಪ್ರಶಂಸಿಸುತ್ತಾರೆ. ಕೇಳಿದ ನಂತರ ಕೊಡುವ ದಾನಕ್ಕೆ ಮಧ್ಯಮ ಶ್ರೇಣಿಯ ದಾನವೆಂದು ತಿಳಿದವರು ಹೇಳುತ್ತಾರೆ.
12282019a ಅವಜ್ಞಯಾ ದೀಯತೇ ಯತ್ತಥೈವಾಶ್ರದ್ಧಯಾಪಿ ಚ|
12282019c ತದಾಹುರಧಮಂ ದಾನಂ ಮುನಯಃ ಸತ್ಯವಾದಿನಃ||
ಅನಾದರಣೆ ಮತ್ತು ಅಶ್ರದ್ಧೆಯಿಂದ ಮಾಡಿದ ದಾನವನ್ನು ಸತ್ಯವಾದೀ ಮುನಿಗಳು ಅಧಮಶ್ರೇಣಿಯ ದಾನವೆನ್ನುತ್ತಾರೆ.
12282020a ಅತಿಕ್ರಮೇ ಮಜ್ಜಮಾನೋ ವಿವಿಧೇನ ನರಃ ಸದಾ|
12282020c ತಥಾ ಪ್ರಯತ್ನಂ ಕುರ್ವೀತ ಯಥಾ ಮುಚ್ಯೇತ ಸಂಶಯಾತ್||
ನೀರಿನಲ್ಲಿ ಮುಳುಗುತ್ತಿರುವನು ಮೇಲೇಳಲು ವಿವಿಧ ಪ್ರಯತ್ನಗಳನ್ನು ಮಾಡುವಂತೆ, ಮನುಷ್ಯನು ಸಂಸಾರಸಮುದ್ರದಿಂದ ಪಾರಾಗಲು ಸದಾ ಪ್ರಯತ್ನವನ್ನು ಮಾಡುತ್ತಿರಬೇಕು.
12282021a ದಮೇನ ಶೋಭತೇ ವಿಪ್ರಃ ಕ್ಷತ್ರಿಯೋ ವಿಜಯೇನ ತು|
12282021c ಧನೇನ ವೈಶ್ಯಃ ಶೂದ್ರಸ್ತು ನಿತ್ಯಂ ದಾಕ್ಷ್ಯೇಣ ಶೋಭತೇ||
ವಿಪ್ರನು ದಮೆಯಿಂದ ಶೋಭಿಸುತ್ತಾನೆ. ಕ್ಷತ್ರಿಯನು ವಿಜಯದಿಂದ, ವೈಶ್ಯನು ಧನದಿಂದ ಮತ್ತು ಶೂದ್ರನು ನಿತ್ಯ ದಕ್ಷತೆಯಿಂದ ಶೋಭಿಸುತ್ತಾರೆ.”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಪರಾಶರಗೀತಾಯಾಂ ದ್ವಾಶೀತ್ಯತ್ಯಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಪರಾಶರಗೀತಾ ಎನ್ನುವ ಇನ್ನೂರಾಎಂಭತ್ತೆರಡನೇ ಅಧ್ಯಾಯವು.
[1] ಬೆಳ್ಳಗಿರುವ ಬಟ್ಟೆಯು ಯಾವ ಬಣ್ಣವನ್ನಾದರೂ ಹೊಂದುವಂತೆ, ಮನುಷ್ಯನು ಸತ್ಪುರುಷರ ಸಹವಾಸವನ್ನು ಮಾಡಿದರೆ ಸದ್ಗುಣಿಯಾಗುತ್ತಾನೆ. ದುಷ್ಟರ ಸಹವಾಸವನ್ನು ಮಾಡಿದರೆ ದುರ್ಗುಣಿಯಾಗುತ್ತಾನೆ. (ಭಾರತ ದರ್ಶನ).
[2] ತಂತ್ರಾಣೀಹ (ಭಾರತ ದರ್ಶನ).