Shanti Parva: Chapter 281

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೮೧

ಧರ್ಮೋಪಾರ್ಜಿತ ಧನದ ಶ್ರೇಷ್ಠತೆ; ಸದಾಚಾರ ಮತ್ತು ಗುರುಜನರ ಸೇವೆಯಿಂದ ಪ್ರಾಪ್ತವಾಗುವ ಲಾಭ (1-23).

12281001 ಪರಾಶರ ಉವಾಚ|

12281001a ಕಃ ಕಸ್ಯ ಚೋಪಕುರುತೇ ಕಶ್ಚ ಕಸ್ಮೈ ಪ್ರಯಚ್ಚತಿ|

12281001c ಪ್ರಾಣೀ ಕರೋತ್ಯಯಂ ಕರ್ಮ ಸರ್ವಮಾತ್ಮಾರ್ಥಮಾತ್ಮನಾ||

ಪರಾಶರನು ಹೇಳಿದನು: “ಯಾರು ಯಾರಿಗೆ ಉಪಕಾರ ಮಾಡುತ್ತಾರೆ? ಯಾರು ಯಾರಿಗೆ ಕೊಡುತ್ತಾರೆ? ಈ ಪ್ರಾಣಿಯು ಸರ್ವ ಕರ್ಮಗಳನ್ನೂ ತನ್ನ ಪ್ರಯೋಜಕ್ಕಾಗಿಯೇ ಮಾಡುತ್ತದೆ.

12281002a ಗೌರವೇಣ ಪರಿತ್ಯಕ್ತಂ ನಿಃಸ್ನೇಹಂ ಪರಿವರ್ಜಯೇತ್|

12281002c ಸೋದರ್ಯಂ ಭ್ರಾತರಮಪಿ ಕಿಮುತಾನ್ಯಂ ಪೃಥಗ್ಜನಮ್||

ಒಡಹುಟ್ಟಿದವನೇ ಆಗಿದ್ದರೂ ಮರ್ಯಾದೆಗೆಟ್ಟಿದ್ದರೆ ಮತ್ತು ಸ್ನೇಹರಹಿತನಾಗಿದ್ದರೆ ತ್ಯಜಿಸಬೇಕು. ಹೀಗಿರುವಾಗ ಸಾಧಾರಣ ಮನುಷ್ಯರ ವಿಷಯದಲ್ಲಿ ಹೇಳುವುದೇನಿದೆ?

12281003a ವಿಶಿಷ್ಟಸ್ಯ ವಿಶಿಷ್ಟಾಚ್ಚ ತುಲ್ಯೌ ದಾನಪ್ರತಿಗ್ರಹೌ|

12281003c ತಯೋಃ ಪುಣ್ಯತರಂ ದಾನಂ ತದ್ದ್ವಿಜಸ್ಯ ಪ್ರಯಚ್ಚತಃ||

ಶ್ರೇಷ್ಠ ಪುರುಷನು ಶ್ರೇಷ್ಠ ಪುರುಷನಿಗೆ ನೀಡುವ ದಾನ ಮತ್ತು ಶ್ರೇಷ್ಠ ಪುರುಷನು ಶ್ರೇಷ್ಠಪುರುಷನಿಂದ ಸ್ವೀಕರಿಸುವ ದಾನ – ಇವೆರಡೂ ಮಹತ್ವದಲ್ಲಿ ಸಮನಾಗಿರುತ್ತವೆ. ಆದರೂ ದ್ವಿಜನಿಗೆ ದಾನವನ್ನು ಸ್ವೀಕರಿಸುವುದಕ್ಕಿಂತ ದಾನವನ್ನು ನೀಡುವುದೇ ಪುಣ್ಯತರವು.

12281004a ನ್ಯಾಯಾಗತಂ ಧನಂ ವರ್ಣೈರ್ನ್ಯಾಯೇನೈವ ವಿವರ್ಧಿತಮ್|

12281004c ಸಂರಕ್ಷ್ಯಂ ಯತ್ನಮಾಸ್ಥಾಯ ಧರ್ಮಾರ್ಥಮಿತಿ ನಿಶ್ಚಯಃ||

ನ್ಯಾಯವಾಗಿ ಸಂಗ್ರಹಿಸಿದ ಮತ್ತು ನ್ಯಾಯವಾಗಿಯೇ ವೃದ್ಧಿಗೊಳಿಸಿದ ಧನವನ್ನು ಧರ್ಮಕಾರ್ಯಗಳಿಗೆ ಬಳಸಲು ಪ್ರಯತ್ನಪಟ್ಟು ಸಂರಕ್ಷಿಸಿಕೊಳ್ಳಬೇಕು ಎಂಬ ನಿಶ್ಚಯವಿದೆ.

12281005a ನ ಧರ್ಮಾರ್ಥೀ ನೃಶಂಸೇನ ಕರ್ಮಣಾ ಧನಮರ್ಜಯೇತ್|

12281005c ಶಕ್ತಿತಃ ಸರ್ವಕಾರ್ಯಾಣಿ ಕುರ್ಯಾನ್ನರ್ದ್ಧಿಮನುಸ್ಮರೇತ್||

ಧರ್ಮಾಪೇಕ್ಷಿಯು ಕ್ರೂರಕರ್ಮಗಳಿಂದ ಧನವನ್ನು ಗಳಿಸಬಾರದು. ಸರ್ವಕಾರ್ಯಗಳನ್ನು ಶಕ್ತಿಪೂರ್ವಕವಾಗಿ ಮಾಡಬೇಕು. ಧನವನ್ನು ವೃದ್ಧಿಗೊಳಿಸುವುದರ ಕುರಿತೇ ಯಾವಾಗಲೂ ಚಿಂತಿಸುತ್ತಿರಬಾರದು.

12281006a ಅಪೋ ಹಿ ಪ್ರಯತಃ ಶೀತಾಸ್ತಾಪಿತಾ ಜ್ವಲನೇನ ವಾ|

12281006c ಶಕ್ತಿತೋಽತಿಥಯೇ ದತ್ತ್ವಾ ಕ್ಷುಧಾರ್ತಾಯಾಶ್ನುತೇ ಫಲಮ್||

ಹಸಿವೆಯಿಂದ ಬಳಲಿದ ಅತಿಥಿಗೆ ತಣ್ಣಗಿರುವ ನೀರನ್ನೋ, ಬೆಂಕಿಯಲ್ಲಿ ಕಾಯಿಸಿದ ಬಿಸಿನೀರನ್ನೋ, ಅನ್ನವನ್ನೋ ಯಥಾಶಕ್ತಿ ವಿನಯಶೀಲನಾಗಿ ನೀಡುವವನು ಫಲವನ್ನು ಹೊಂದುತ್ತಾನೆ.

12281007a ರಂತಿದೇವೇನ ಲೋಕೇಷ್ಟಾ ಸಿದ್ಧಿಃ ಪ್ರಾಪ್ತಾ ಮಹಾತ್ಮನಾ|

12281007c ಫಲಪತ್ರೈರಥೋ ಮೂಲೈರ್ಮುನೀನರ್ಚಿತವಾನಸೌ||

ಫಲ-ಪತ್ರ-ಮೂಲಗಳಿಂದ ಮುನಿಗಳನ್ನು ಅರ್ಚಿಸುತ್ತಿದ್ದ ಮಹಾತ್ಮ ರಂತಿದೇವನು ಲೋಕವು ಬಯಸುವ ಸಿದ್ಧಿಯನ್ನು ಪಡೆದುಕೊಂಡನು.

12281008a ತೈರೇವ ಫಲಪತ್ರೈಶ್ಚ ಸ ಮಾಠರಮತೋಷಯತ್|

12281008c ತಸ್ಮಾಲ್ಲೇಭೇ ಪರಂ ಸ್ಥಾನಂ ಶೈಬ್ಯೋಽಪಿ ಪೃಥಿವೀಪತಿಃ||

ಪೃಥಿವೀಪತಿ ಶೈಬ್ಯನೂ ಕೂಡ ಅದೇ ಫಲ-ಪತ್ರಗಳಿಂದ ಮಾಠರನನ್ನು ತೃಪ್ತಿಗೊಳಿಸಿದನು. ಅದರಿಂದಾಗಿ ಪರಮ ಸ್ಥಾನವನ್ನು ಪಡೆದುಕೊಂಡನು.

12281009a ದೇವತಾತಿಥಿಭೃತ್ಯೇಭ್ಯಃ ಪಿತೃಭ್ಯೋಽಥಾತ್ಮನಸ್ತಥಾ|

12281009c ಋಣವಾನ್ ಜಾಯತೇ ಮರ್ತ್ಯಸ್ತಸ್ಮಾದನೃಣತಾಂ ವ್ರಜೇತ್||

ಮರ್ತ್ಯನು ದೇವತೆಗಳ, ಅತಿಥಿಗಳ, ಕುಟುಂಬದ ಜನರ, ಪಿತೃಗಳ ಮತ್ತು ತನ್ನದೇ ಆದ ಋಣಗಳನ್ನು ಹೊತ್ತು ಹುಟ್ಟುತ್ತಾನೆ. ಆದುದರಿಂದ ಮನುಷ್ಯನು ಆ ಋಣಗಳನ್ನು ತೀರಿಸಿಕೊಳ್ಳಬೇಕು.

12281010a ಸ್ವಾಧ್ಯಾಯೇನ ಮಹರ್ಷಿಭ್ಯೋ ದೇವೇಭ್ಯೋ ಯಜ್ಞಕರ್ಮಣಾ|

12281010c ಪಿತೃಭ್ಯಃ ಶ್ರಾದ್ಧದಾನೇನ ನೃಣಾಮಭ್ಯರ್ಚನೇನ ಚ||

ಸ್ವಾಧ್ಯಾಯದಿಂದ ಮಹರ್ಷಿಗಳ, ಯಜ್ಞಕರ್ಮಗಳಿಂದ ದೇವತೆಗಳ, ಶ್ರಾದ್ಧ-ದಾನಗಳಿಂದ ಪಿತೃಗಳ ಮತ್ತು ಸ್ವಾಗತ-ಸತ್ಕಾರ-ಸೇವೆಗಳಿಂದ ಮನುಷ್ಯರ ಋಣವನ್ನು ಪರಿಹರಿಸಿಕೊಳ್ಳಬೇಕು.

12281011a ವಾಚಃ ಶೇಷಾವಹಾರ್ಯೇಣ ಪಾಲನೇನಾತ್ಮನೋಽಪಿ ಚ|

12281011c ಯಥಾವದ್ ಭೃತ್ಯವರ್ಗಸ್ಯ ಚಿಕೀರ್ಷೇದ್ಧರ್ಮಮಾದಿತಃ||

ಹೀಗೆಯೇ ವೇದಶಾಸ್ತ್ರದ ಪಠಣ-ಮನನಗಳಿಂದ, ಯಜ್ಞಶೇಷವನ್ನು ಭುಂಜಿಸುವುದರಿಂದ ಮತ್ತು ಆತ್ಮ ರಕ್ಷಣೆಯಿಂದ ಆತ್ಮಋಣದಿಂದ ಮುಕ್ತನಾಗುತ್ತಾನೆ. ಯಥಾವತ್ತಾಗಿ ಕುಟುಂಬದ ಜನರ ಭರಣ-ಪೋಷಣೆಗಳನ್ನು[1] ಮಾಡಿ ಭೃತ್ಯಋಣದಿಂದ ಮುಕ್ತನಾಗಬೇಕು.

12281012a ಪ್ರಯತ್ನೇನ ಚ ಸಂಸಿದ್ಧಾ ಧನೈರಪಿ ವಿವರ್ಜಿತಾಃ|

12281012c ಸಮ್ಯಗ್ ಹುತ್ವಾ ಹುತವಹಂ ಮುನಯಃ ಸಿದ್ಧಿಮಾಗತಾಃ||

ಧನಗಳಿಂದ ವಿವರ್ಜಿತರಾಗಿದ್ದರೂ ಪ್ರಯತ್ನದಿಂದಲೇ ಸಂಸಿದ್ಧರಾಗಿದ್ದಾರೆ. ಮುನಿಗಳು ಚೆನ್ನಾಗಿ ಅಗ್ನಿಹೋತ್ರವನ್ನು ಮಾಡಿಕೊಂಡೇ ಸಿದ್ಧಿಯನ್ನು ಪಡೆದುಕೊಂಡಿದ್ದಾರೆ.

12281013a ವಿಶ್ವಾಮಿತ್ರಸ್ಯ ಪುತ್ರತ್ವಮೃಚೀಕತನಯೋಽಗಮತ್|

12281013c ಋಗ್ಭಿಃ ಸ್ತುತ್ವಾ ಮಹಾಭಾಗೋ ದೇವಾನ್ವೈ ಯಜ್ಞಭಾಗಿನಃ||

ಋಚೀಕನ ಮಗ ಮಹಾಭಾಗ ಶುನಶ್ಶೇಫನು ಯಜ್ಞಭಾಗಿಗಳಾಗಿದ್ದ ದೇವತೆಗಳನ್ನು ಋಕ್ಕುಗಳಿಂದ ಸ್ತುತಿಸಿಯೇ ವಿಶ್ವಾಮಿತ್ರನ ಪುತ್ರತ್ವವನ್ನು ಪಡೆದುಕೊಂಡನು.

12281014a ಗತಃ ಶುಕ್ರತ್ವಮುಶನಾ ದೇವದೇವಪ್ರಸಾದನಾತ್|

12281014c ದೇವೀಂ ಸ್ತುತ್ವಾ ತು ಗಗನೇ ಮೋದತೇ ತೇಜಸಾ ವೃತಃ||

ದೇವದೇವನ ಪ್ರಸಾದದಿಂದ ಉಶನಸನು ಶುಕ್ರತ್ವವನ್ನು ಪಡೆದುಕೊಂಡನು. ದೇವಿಯನ್ನು ಸ್ತುತಿಸಿ ಅವನು ಗಗನದಲ್ಲಿ ತೇಜೋಯುಕ್ತನಾಗಿ ಮೋದಿಸುತ್ತಾನೆ.

12281015a ಅಸಿತೋ ದೇವಲಶ್ಚೈವ ತಥಾ ನಾರದಪರ್ವತೌ|

12281015c ಕಕ್ಷೀವಾನ್ ಜಾಮದಗ್ನ್ಯಶ್ಚ ರಾಮಸ್ತಾಂಡ್ಯಸ್ತಥಾಂಶುಮಾನ್[2]||

12281016a ವಸಿಷ್ಠೋ ಜಮದಗ್ನಿಶ್ಚ ವಿಶ್ವಾಮಿತ್ರೋಽತ್ರಿರೇವ ಚ|

12281016c ಭರದ್ವಾಜೋ ಹರಿಶ್ಮಶ್ರುಃ ಕುಂಡಧಾರಃ ಶ್ರುತಶ್ರವಾಃ||

12281017a ಏತೇ ಮಹರ್ಷಯಃ ಸ್ತುತ್ವಾ ವಿಷ್ಣುಮೃಗ್ಭಿಃ ಸಮಾಹಿತಾಃ|

12281017c ಲೇಭಿರೇ ತಪಸಾ ಸಿದ್ಧಿಂ ಪ್ರಸಾದಾತ್ತಸ್ಯ ಧೀಮತಃ||

ಅಸಿತ-ದೇವಲ, ನಾರದ-ಪರ್ವತರು, ಕಕ್ಷೀವಾನ್, ಜಾಮದಗ್ನಿ ರಾಮ, ತಾಂಡ್ಯ, ಅಂಶುಮಾನ್, ವಸಿಷ್ಠ, ಜಮದಗ್ನಿ, ವಿಶ್ವಾಮಿತ್ರ, ಅತ್ರಿ, ಭರದ್ವಾಜ, ಹರಿಶ್ಮಶ್ರು, ಕುಂಡಧಾರ, ಶ್ರುತಶ್ರವ – ಈ ಮಹರ್ಷಿಗಳು ಸಮಾಹಿತರಾಗಿ ವಿಷ್ಣುವನ್ನು ಋಕ್ಕುಗಳಿಂದ ಸ್ತುತಿಸಿ ಆ ಧೀಮತನ ಪ್ರಸಾದದಿಂದ ತಪಸ್ಸಿನ ಮೂಲಕ ಸಿದ್ಧಿಯನ್ನು ಪಡೆದರು.

12281018a ಅನರ್ಹಾಶ್ಚಾರ್ಹತಾಂ ಪ್ರಾಪ್ತಾಃ ಸಂತಃ ಸ್ತುತ್ವಾ ತಮೇವ ಹ|

12281018c ನ ತು ವೃದ್ಧಿಮಿಹಾನ್ವಿಚ್ಚೇತ್ಕರ್ಮ ಕೃತ್ವಾ ಜುಗುಪ್ಸಿತಮ್||

ವಿಷ್ಣುವನ್ನು ಸ್ತುತಿಸಿ ಅನರ್ಹರೂ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಜುಗುಪ್ಸಿತ ಕರ್ಮವನ್ನು ಮಾಡಿ ವೃದ್ಧಿಯನ್ನು ಬಯಸಬಾರದು.

12281019a ಯೇಽರ್ಥಾ ಧರ್ಮೇಣ ತೇ ಸತ್ಯಾ ಯೇಽಧರ್ಮೇಣ ಧಿಗಸ್ತು ತಾನ್|

12281019c ಧರ್ಮಂ ವೈ ಶಾಶ್ವತಂ ಲೋಕೇ ನ ಜಹ್ಯಾದ್ಧನಕಾಂಕ್ಷಯಾ||

ಧರ್ಮದಿಂದ ಸಂಗ್ರಹಿಸಿದ ಧನವೇ ಸತ್ಯವಾದುದು. ಅಧರ್ಮದಿಂದ ಪಡೆದ ಧನಕ್ಕೆ ಧಿಕ್ಕಾರವಿರಲಿ. ಈ ಲೋಕದಲ್ಲಿ ಧರ್ಮವೇ ಶಾಶ್ವತವು. ಧನಾಕಾಂಕ್ಷೆಯಿಂದ ಅದನ್ನು ಬಿಡಬಾರದು.

12281020a ಆಹಿತಾಗ್ನಿರ್ಹಿ ಧರ್ಮಾತ್ಮಾ ಯಃ ಸ ಪುಣ್ಯಕೃದುತ್ತಮಃ|

12281020c ವೇದಾ ಹಿ ಸರ್ವೇ ರಾಜೇಂದ್ರ ಸ್ಥಿತಾಸ್ತ್ರಿಷ್ವಗ್ನಿಷು ಪ್ರಭೋ||

ರಾಜೇಂದ್ರ! ಪ್ರಭೋ! ಅಗ್ನಿಕಾರ್ಯಗಳನ್ನು ಮಾಡುವವನೇ ಧರ್ಮಾತ್ಮನು. ಅವನೇ ಪುಣ್ಯಕರ್ಮಿಗಳಲ್ಲಿ ಉತ್ತಮನು. ಸರ್ವ ವೇದಗಳೂ ದಕ್ಷಿಣಾಗ್ನಿ, ಗಾರ್ಹಪತ್ಯಾಗ್ನಿ ಮತ್ತು ಆಹವನೀಯ ಅಗ್ನಿ – ಈ ಮೂರು ಅಗ್ನಿಗಳಲ್ಲಿ ವಾಸಿಸುತ್ತವೆ.

12281021a ಸ ಚಾಪ್ಯಗ್ನ್ಯಾಹಿತೋ ವಿಪ್ರಃ ಕ್ರಿಯಾ ಯಸ್ಯ ನ ಹೀಯತೇ|

12281021c ಶ್ರೇಯೋ ಹ್ಯನಾಹಿತಾಗ್ನಿತ್ವಮಗ್ನಿಹೋತ್ರಂ ನ ನಿಷ್ಕ್ರಿಯಮ್||

ಕ್ರಿಯೆಗಳು ನಷ್ಟವಾಗದ ವಿಪ್ರನು ಅಗ್ನಿಹೋತ್ರಿಯೇ ಆಗುತ್ತಾನೆ. ಕ್ರಿಯಾವಂತನು ಅಗ್ನಿಹೋತ್ರವನ್ನು ಮಾಡದಿದ್ದರೂ ಶ್ರೇಯಸ್ಸನ್ನು ಪಡೆಯುತ್ತಾನೆ. ಆದರೆ ಅಗ್ನಿಹೋತ್ರಿಯಾಗಿದ್ದರೂ ನಿಷ್ಕ್ರಿಯನಾದವನಿಗೆ ಶ್ರೇಯಸ್ಸುಂಟಾಗುವುದಿಲ್ಲ.

12281022a ಅಗ್ನಿರಾತ್ಮಾ ಚ ಮಾತಾ ಚ ಪಿತಾ ಜನಯಿತಾ ತಥಾ|

12281022c ಗುರುಶ್ಚ ನರಶಾರ್ದೂಲ ಪರಿಚರ್ಯಾ ಯಥಾತಥಮ್||

ನರಶಾರ್ದೂಲ! ಅಗ್ನಿ, ಆತ್ಮ, ತಾಯಿ, ಜನ್ಮದಾತ ತಂದೆ ಮತ್ತು ಗುರುವನ್ನು ಯಥಾಯೋಗ್ಯವಾಗಿ ಸತ್ಕರಿಸಬೇಕು.

12281023a ಮಾನಂ ತ್ಯಕ್ತ್ವಾ ಯೋ ನರೋ ವೃದ್ಧಸೇವೀ

ವಿದ್ವಾನ್ ಕ್ಲೀಬಃ ಪಶ್ಯತಿ ಪ್ರೀತಿಯೋಗಾತ್|

12281023c ದಾಕ್ಷ್ಯೇಣಾಹೀನೋ ಧರ್ಮಯುಕ್ತೋ ನದಾಂತೋ

ಲೋಕೇಽಸ್ಮಿನ್ವೈ ಪೂಜ್ಯತೇ ಸದ್ಭಿರಾರ್ಯಃ||

ಮಾನವನ್ನು ತೊರೆದು ವೃದ್ಧರ ಸೇವೆಮಾಡುವ, ಪ್ರೀತಿಯೋಗದಿಂದ ಕಾಣುವ ಕಾಮರಹಿತ ವಿದ್ವಾಂಸ, ಆಲಸ್ಯರಹಿತ, ಧರ್ಮಯುಕ್ತ, ಹಿಂಸಹೀನ ಆರ್ಯನನ್ನು ಈ ಲೋಕದಲ್ಲಿ ಸತ್ಪುರುಷರೂ ಪೂಜಿಸುತ್ತಾರೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಪರಾಶರಗೀತಾಯಾಂ ಏಕಾಶೀತ್ಯತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಪರಾಶರಗೀತಾ ಎನ್ನುವ ಇನ್ನೂರಾಎಂಭತ್ತೊಂದನೇ ಅಧ್ಯಾಯವು.

[1] ಕುಟುಂಬದ ಜನರ ಜಾತಕರ್ಮಾದಿ ಕಾರ್ಯಗಳು ಎಂದೂ ಅನುವಾದಿಸಿದ್ದಾರೆ (ದಾಮೋದರ್ ಸಾತ್ವಾಲೇಕರ್).

[2] ರಾಮಸ್ತಾಂಡ್ಯಸ್ಥಥಾತ್ಮವಾನ್| (ಭಾರತ ದರ್ಶನ).

Comments are closed.