ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೨೭೭
ಅರಿಷ್ಟನೇಮಿ-ಸಗರ ಸಂವಾದ
ಅರಿಷ್ಟನೇಮಿಯು ಸಗರನಿಗೆ ವೈರಾಗ್ಯ ಮತ್ತು ಮೋಕ್ಷವನ್ನು ಉಪದೇಶಿಸಿದುದು (1-47).
12277001 ಯುಧಿಷ್ಠಿರ ಉವಾಚ|
12277001a ಕಥಂ ನು ಮುಕ್ತಃ[1] ಪೃಥಿವೀಂ ಚರೇದಸ್ಮದ್ವಿಧೋ ನೃಪಃ|
12277001c ನಿತ್ಯಂ ಕೈಶ್ಚ ಗುಣೈರ್ಯುಕ್ತಃ ಸಂಗಪಾಶಾದ್ವಿಮುಚ್ಯತೇ||
ಯುಧಿಷ್ಠಿರನು ಹೇಳಿದನು: “ನನ್ನಂಥಹ ನೃಪನು ಹೇಗೆ ಮುಕ್ತನಾಗಿ ಪೃಥ್ವಿಯಲ್ಲಿ ಸಂಚರಿಸಬಲ್ಲನು? ನಿತ್ಯ ಯಾವ ಗುಣಗಳಿಂದ ಯುಕ್ತನಾಗಿ ಸಂಗಪಾಶಗಳಿಂದ ಮುಕ್ತನಾಗಬಲ್ಲನು?”
12277002 ಭೀಷ್ಮ ಉವಾಚ|
12277002a ಅತ್ರ ತೇ ವರ್ತಯಿಷ್ಯಾಮಿ ಇತಿಹಾಸಂ ಪುರಾತನಮ್|
12277002c ಅರಿಷ್ಟನೇಮಿನಾ ಪ್ರೋಕ್ತಂ ಸಗರಾಯಾನುಪೃಚ್ಚತೇ||
ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಸಗರನು ಕೇಳಲು ಅರಿಷ್ಟನೇಮಿಯು ಹೇಳಿದ ಈ ಪುರಾತನ ಇತಿಹಾಸವನ್ನು ನಿನಗೆ ಹೇಳುತ್ತೇನೆ.
12277003 ಸಗರ ಉವಾಚ
12277003a ಕಿಂ ಶ್ರೇಯಃ ಪರಮಂ ಬ್ರಹ್ಮನ್ ಕೃತ್ವೇಹ ಸುಖಮಶ್ನುತೇ|
12277003c ಕಥಂ ನ ಶೋಚೇನ್ನ ಕ್ಷುಭ್ಯೇದೇತದಿಚ್ಚಾಮಿ ವೇದಿತುಮ್||
ಸಗರನು ಹೇಳಿದನು: “ಬ್ರಹ್ಮನ್! ಈ ಲೋಕದಲ್ಲಿ ಮನುಷ್ಯನು ಯಾವ ಶ್ರೇಯಸ್ಕರ ಕರ್ಮವನ್ನು ಮಾಡಿ ಪರಮ ಸುಖವನ್ನು ಹೊಂದುತ್ತಾನೆ? ಮನುಷ್ಯನು ಶೋಕಿಸದಿರಲು ಮತ್ತು ವ್ಯಾಕುಲಗೊಳ್ಳದಿರಲು ಹೇಗೆ ಸಾಧ್ಯವಾಗುತ್ತದೆ? ಇದನ್ನು ತಿಳಿಯಬಯಸುತ್ತೇನೆ.””
12277004 ಭೀಷ್ಮ ಉವಾಚ|
12277004a ಏವಮುಕ್ತಸ್ತದಾ ತಾರ್ಕ್ಷ್ಯಃ ಸರ್ವಶಾಸ್ತ್ರವಿಶಾರದಃ|
12277004c ವಿಬುಧ್ಯ ಸಂಪದಂ ಚಾಗ್ರ್ಯಾಂ ಸದ್ವಾಕ್ಯಮಿದಮಬ್ರವೀತ್||
ಭೀಷ್ಮನು ಹೇಳಿದನು: “ಹೀಗೆ ಕೇಳಲು ಸರ್ವಶಾಸ್ತ್ರವಿಶಾರದ ತಾರ್ಕ್ಷ್ಯ[2]ನು ಅವನಲ್ಲಿರುವ ಅಗ್ರ ದೈವೀಸಂಪತ್ತನ್ನು ತಿಳಿದು ಈ ಸದ್ವಾಕ್ಯಗಳನ್ನು ಹೇಳಿದನು”
12277005a ಸುಖಂ ಮೋಕ್ಷಸುಖಂ ಲೋಕೇ ನ ಚ ಲೋಕೋ[3]ಽವಗಚ್ಚತಿ|
12277005c ಪ್ರಸಕ್ತಃ ಪುತ್ರಪಶುಷು ಧನಧಾನ್ಯಸಮಾಕುಲಃ||
“ಲೋಕದಲ್ಲಿ ಮೋಕ್ಷಸುಖವೇ ಯಥಾರ್ಥ ಸುಖವು. ಧನ-ಧಾನ್ಯ ಮತ್ತು ಪುತ್ರ-ಪಶುಗಳ ಪಾಲನೆಯಲ್ಲಿ ಆಸಕ್ತನಾಗಿರುವ ಮನುಷ್ಯನು ಇದನ್ನು ತಿಳಿದುಕೊಳ್ಳಲಾರನು.
12277006a ಸಕ್ತಬುದ್ಧಿರಶಾಂತಾತ್ಮಾ ನ ಸ ಶಕ್ಯಶ್ಚಿಕಿತ್ಸಿತುಮ್|
12277006c ಸ್ನೇಹಪಾಶಸಿತೋ ಮೂಢೋ ನ ಸ ಮೋಕ್ಷಾಯ ಕಲ್ಪತೇ||
ವಿಷಯಾಸಕ್ತ ಬುದ್ಧಿ ಮತ್ತು ಅಶಾಂತಾತ್ಮ ಮನುಷ್ಯನಿಗೆ ಚಿಕಿತ್ಸೆಮಾಡಲು ಶಕ್ಯವಿಲ್ಲ. ಸ್ನೇಹಪಾಶಗಳಿಂದ ಬಂಧಿತನಾದ ಮೂಢನು ಮೋಕ್ಷಕ್ಕೆ ಹೇಳಿದವನಲ್ಲ.
12277007a ಸ್ನೇಹಜಾನಿಹ ತೇ ಪಾಶಾನ್ವಕ್ಷ್ಯಾಮಿ ಶೃಣು ತಾನ್ಮಮ|
12277007c ಸಕರ್ಣಕೇನ ಶಿರಸಾ ಶಕ್ಯಾಶ್ಚೇತ್ತುಂ ವಿಜಾನತಾ||
ಸ್ನೇಹದಿಂದ ಹುಟ್ಟುವ ಪಾಶಗಳ ಕುರಿತು ಹೇಳುತ್ತೇನೆ. ಅವುಗಳನ್ನು ನನ್ನಿಂದ ಕೇಳು. ಕಿವಿಗೊಟ್ಟು ಕೇಳುವವನು ಇದನ್ನು ಬುದ್ಧಿಯಿಂದ ತಿಳಿದುಕೊಳ್ಳಲು ಶಕ್ಯನಾಗುತ್ತಾನೆ.
12277008a ಸಂಭಾವ್ಯ ಪುತ್ರಾನ್ಕಾಲೇನ ಯೌವನಸ್ಥಾನ್ನಿವೇಶ್ಯ ಚ|
12277008c ಸಮರ್ಥಾನ್ ಜೀವನೇ ಜ್ಞಾತ್ವಾ ಮುಕ್ತಶ್ಚರ ಯಥಾಸುಖಮ್||
ಕಾಲಾನುಗುಣವಾಗಿ ಪುತ್ರರನ್ನು ಪಡೆದು, ಯೌವನಸ್ಥರಾಗಿ ತಮ್ಮ ಜೀವನವನ್ನು ನಡೆಸಲು ಸಮರ್ಥರಾಗಿದ್ದಾರೆ ಎಂದು ನೋಡಿ ಯಥಾಸುಖವಾಗಿ ಮುಕ್ತನಾಗಿ ಸಂಚರಿಸು.
12277009a ಭಾರ್ಯಾಂ ಪುತ್ರವತೀಂ ವೃದ್ಧಾಂ ಲಾಲಿತಾಂ ಪುತ್ರವತ್ಸಲಾಮ್|
12277009c ಜ್ಞಾತ್ವಾ ಪ್ರಜಹಿ ಕಾಲೇ ತ್ವಂ ಪರಾರ್ಥಮನುದೃಶ್ಯ ಚ||
ಪುತ್ರವತಿಯಾದ, ವೃದ್ಧೆಯಾದ, ಪುತ್ರವತ್ಸಲೆ ಭಾರ್ಯೆಯನ್ನು ಮಕ್ಕಳು ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ನೀನು ಮೋಕ್ಷವನ್ನೇ ಪರಮಾರ್ಥವೆಂದು ಭಾವಿಸಿ ಯೋಗ್ಯ ಸಮಯದಲ್ಲಿ ಅವಳನ್ನೂ ಪರಿತ್ಯಜಿಸು.
12277010a ಸಾಪತ್ಯೋ ನಿರಪತ್ಯೋ ವಾ ಮುಕ್ತಶ್ಚರ ಯಥಾಸುಖಮ್|
12277010c ಇಂದ್ರಿಯೈರಿಂದ್ರಿಯಾರ್ಥಾಂಸ್ತ್ವಮನುಭೂಯ ಯಥಾವಿಧಿ||
12277011a ಕೃತಕೌತೂಹಲಸ್ತೇಷು ಮುಕ್ತಶ್ಚರ ಯಥಾಸುಖಮ್|
12277011c ಉಪಪತ್ತ್ಯೋಪಲಬ್ಧೇಷು ಲಾಭೇಷು ಚ ಸಮೋ ಭವ||
ಮಕ್ಕಳಿರಲಿ ಅಥವಾ ಮಕ್ಕಳಿಲ್ಲದಿರಲಿ – ಯಥಾಸುಖವಾಗಿ ಮುಕ್ತನಾಗಿ ಸಂಚರಿಸು. ಇಂದ್ರಿಗಳ ಮೂಲಕ ಇಂದ್ರಿಯ ಸುಖಗಳನ್ನು ಯಥಾವಿಧಿಯಾಗಿ ಅನುಭವಿಸಿ ಅವುಗಳಲ್ಲಿರುವ ಕುತೂಹಲವನ್ನು ತೊರೆದು ಯಥಾಸುಖವಾಗಿ ಮುಕ್ತನಾಗಿ ಸಂಚರಿಸು. ಉಪಲಬ್ಧವಾಗುವ ಲಾಭ-ಅಲಾಭಗಳಲ್ಲಿ ಸಮಭಾವವನ್ನಿಡು.
12277012a ಏಷ ತಾವತ್ಸಮಾಸೇನ ತವ ಸಂಕೀರ್ತಿತೋ ಮಯಾ|
12277012c ಮೋಕ್ಷಾರ್ಥೋ ವಿಸ್ತರೇಣಾಪಿ ಭೂಯೋ ವಕ್ಷ್ಯಾಮಿ ತಚ್ಚೃಣು||
ಇದೂವರೆಗೆ ನಾನು ಮೋಕ್ಷದ ಕುರಿತಾಗಿ ಸಂಕ್ಷಿಪ್ತವಾಗಿ ಹೇಳಿದೆನು. ಈಗ ಇದರ ಕುರಿತು ವಿಸ್ತಾರವಾಗಿ ಹೇಳುತ್ತೇನೆ. ಕೇಳು.
12277013a ಮುಕ್ತಾ ವೀತಭಯಾ ಲೋಕೇ ಚರಂತಿ ಸುಖಿನೋ ನರಾಃ|
12277013c ಸಕ್ತಭಾವಾ ವಿನಶ್ಯಂತಿ ನರಾಸ್ತತ್ರ ನ ಸಂಶಯಃ||
12277014a ಆಹಾರಸಂಚಯಾಶ್ಚೈವ ತಥಾ ಕೀಟಪಿಪೀಲಿಕಾಃ|
12277014c ಅಸಕ್ತಾಃ ಸುಖಿನೋ ಲೋಕೇ ಸಕ್ತಾಶ್ಚೈವ ವಿನಾಶಿನಃ||
ಮುಕ್ತ ನರರು ಭಯವನ್ನು ಕಳೆದುಕೊಂಡು ಸುಖಿಗಳಾಗಿ ಸಂಚರಿಸುತ್ತಾರೆ. ಕೀಟ-ಇರುವೆಗಳಂತೆ ಆಹಾರಸಂಚಯದಲ್ಲಿಯೇ ಸಕ್ತರಾದ ನರರು ನಾಶಹೊಂದುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಆದುದರಿಂದ ಲೋಕದಲ್ಲಿ ಅಸಕ್ತರು ಸುಖಿಗಳು ಮತ್ತು ಸಕ್ತರು ವಿನಾಶಹೊಂದುವವರು.
12277015a ಸ್ವಜನೇ ನ ಚ ತೇ ಚಿಂತಾ ಕರ್ತವ್ಯಾ ಮೋಕ್ಷಬುದ್ಧಿನಾ|
12277015c ಇಮೇ ಮಯಾ ವಿನಾಭೂತಾ ಭವಿಷ್ಯಂತಿ ಕಥಂ ತ್ವಿತಿ||
ಮೋಕ್ಷಬುದ್ಧಿಯುಳ್ಳವರು “ನಾನಿಲ್ಲದೇ ಇವರು ಹೇಗೆ ಜೀವಿಸುವರು?” ಎಂದು ಸ್ವಜನರ ವಿಷಯದಲ್ಲಿ ಚಿಂತಿಸಬಾರದು.
12277016a ಸ್ವಯಮುತ್ಪದ್ಯತೇ ಜಂತುಃ ಸ್ವಯಮೇವ ವಿವರ್ಧತೇ|
12277016c ಸುಖದುಃಖೇ ತಥಾ ಮೃತ್ಯುಂ ಸ್ವಯಮೇವಾಧಿಗಚ್ಚತಿ||
ಜಂತುವು ಸ್ವಯಂ ಹುಟ್ಟಿಕೊಳ್ಳುತ್ತದೆ. ಸ್ವಯಂ ತಾನೇ ಬೆಳೆಯುತ್ತದೆ. ಸುಖ-ದುಃಖಗಳನ್ನು ಮತ್ತು ಮೃತ್ಯುವನ್ನೂ ಸ್ವಯಂ ತಾನೇ ಪಡೆದುಕೊಳ್ಳುತ್ತದೆ.
12277017a ಭೋಜನಾಚ್ಚಾದನೇ ಚೈವ ಮಾತ್ರಾ ಪಿತ್ರಾ ಚ ಸಂಗ್ರಹಮ್|
12277017c ಸ್ವಕೃತೇನಾಧಿಗಚ್ಚಂತಿ ಲೋಕೇ ನಾಸ್ತ್ಯಕೃತಂ ಪುರಾ||
ಮನುಷ್ಯನು ತನ್ನ ಪೂರ್ವ ಜನ್ಮದ ಕರ್ಮಾನುಸಾರವಾಗಿ ಊಟ-ಉಪಚಾರಗಳನ್ನೂ, ಉಡುಗೆ-ತೊಡುಗೆಗಳನ್ನೂ, ಮತ್ತು ತಾಯಿ-ತಂದೆಯರು ಸಂಗ್ರಹಿಸಿದ ಐಶ್ವರ್ಯವನ್ನೂ ಪಡೆದುಕೊಳ್ಳುತ್ತಾನೆ. ಈ ಲೋಕದಲ್ಲಿ ತನ್ನದೇ ಕರ್ಮದಿಂದ ಎಲ್ಲವನ್ನೂ ಪಡೆದುಕೊಳ್ಳುತ್ತಾನೆಯೇ ಹೊರತು ಹಿಂದೆ ಮಾಡದೇ ಇದ್ದುದರ ಯಾವ ಫಲವನ್ನೂ ಪಡೆದುಕೊಳ್ಳುವುದಿಲ್ಲ.
12277018a ಧಾತ್ರಾ ವಿಹಿತಭಕ್ಷ್ಯಾಣಿ ಸರ್ವಭೂತಾನಿ ಮೇದಿನೀಮ್|
12277018c ಲೋಕೇ ವಿಪರಿಧಾವಂತಿ ರಕ್ಷಿತಾನಿ ಸ್ವಕರ್ಮಭಿಃ||
ಎಲ್ಲ ಪ್ರಾಣಿಗಳೂ ಸ್ವಕರ್ಮಫಲಗಳ ರಕ್ಷಣೆಯಿಂದಲೇ ಲೋಕದಲ್ಲಿ ಸಂಚರಿಸುತ್ತವೆ. ಸರ್ವಭೂತಗಳೂ ವಿಧಾತೃವು ಈ ಮೇದಿನಿಯಲ್ಲಿ ಯಾವ ಕಾಲಕ್ಕೆ ಯಾವ ಆಹಾರವನ್ನು ಕಲ್ಪಿಸಿರುವನೋ ಅದನ್ನೇ ಹೊಂದುತ್ತವೆ.
12277019a ಸ್ವಯಂ ಮೃತ್ಪಿಂಡಭೂತಸ್ಯ ಪರತಂತ್ರಸ್ಯ ಸರ್ವದಾ|
12277019c ಕೋ ಹೇತುಃ ಸ್ವಜನಂ ಪೋಷ್ಟುಂ ರಕ್ಷಿತುಂ ವಾದೃಢಾತ್ಮನಃ||
ಸ್ವಯಂ ತಾನೇ ಮಣ್ಣಿನ ಮುದ್ದೆಯಂತೆ ಸರ್ವದಾ ಪರತಂತ್ರನಾಗಿರುವಾಗ ಅಂಥದ ಅದೃಢಾತ್ಮ ಯಾರು ತಾನೇ ಸ್ವಜನರ ಪೋಷಣೆ-ರಕ್ಷಣೆಗಳಿಗೆ ಕಾರಣನಾಗುತ್ತಾನೆ?
12277020a ಸ್ವಜನಂ ಹಿ ಯದಾ ಮೃತ್ಯುರ್ಹಂತ್ಯೇವ ತವ ಪಶ್ಯತಃ|
12277020c ಕೃತೇಽಪಿ ಯತ್ನೇ ಮಹತಿ ತತ್ರ ಬೋದ್ಧವ್ಯಮಾತ್ಮನಾ||
ನೀನು ಎಷ್ಟೇ ಮಹಾಪ್ರಯತ್ನಗಳನ್ನು ಮಾಡಿದರೂ ನಿನ್ನ ಕಣ್ಣಮುಂದೆಯೇ ನಿನ್ನ ಸ್ವಜನರನ್ನು ಮೃತ್ಯುವು ಕೊಂಡೊಯ್ಯುತ್ತದೆ ಎನ್ನುವಾಗಲಾದರೂ ನಿನ್ನ ಸಾಮರ್ಥ್ಯವು ಎಷ್ಟೆನ್ನುವುದನ್ನು ನೀನು ತಿಳಿದುಕೊಳ್ಳಬೇಕು.
12277021a ಜೀವಂತಮಪಿ ಚೈವೈನಂ ಭರಣೇ ರಕ್ಷಣೇ ತಥಾ|
12277021c ಅಸಮಾಪ್ತೇ ಪರಿತ್ಯಜ್ಯ ಪಶ್ಚಾದಪಿ ಮರಿಷ್ಯಸಿ||
ನೀನು ಭರಣ-ಪೋಷಣ ಮಾಡಬೇಕಾಗಿರುವವರು ಜೀವಂತವಿರುವಾಗಲೇ ಅದನ್ನು ಮುಗಿಸದೆಯೇ ನೀನು ಬಿಟ್ಟು ಸತ್ತುಹೋಗಬಹುದು.
12277022a ಯದಾ ಮೃತಶ್ಚ ಸ್ವಜನಂ ನ ಜ್ಞಾಸ್ಯಸಿ ಕಥಂ ಚನ|
12277022c ಸುಖಿತಂ ದುಃಖಿತಂ ವಾಪಿ ನನು ಬೋದ್ಧವ್ಯಮಾತ್ಮನಾ||
ಮೃತನಾದ ನಿನ್ನವನೂ ಮರಣಾನಂತರ ಸುಖವಾಗಿರುತ್ತಾನೋ ಅಥವಾ ದುಃಖಿತನಾಗಿರುತ್ತಾನೋ ಎನ್ನುವುದು ನಿನಗೆ ಎಂದೂ ತಿಳಿಯುವುದಿಲ್ಲ. ಆದುದರಿಂದ ಈ ವಿಷಯದಲ್ಲಿ ನೀನು ಯೋಚನೆಮಾಡಬೇಕಾಗಿದೆ.
12277023a ಮೃತೇ ವಾ ತ್ವಯಿ ಜೀವೇ ವಾ ಯದಿ ಭೋಕ್ಷ್ಯತಿ ವೈ ಜನಃ|
12277023c ಸ್ವಕೃತಂ ನನು ಬುದ್ಧ್ವೈವಂ ಕರ್ತವ್ಯಂ ಹಿತಮಾತ್ಮನಃ||
ನೀನು ಮೃತನಾಗು ಅಥವಾ ಜೀವಂತವಿರು. ಜನರು ಅವರ ಕರ್ಮಫಲಗಳನ್ನು ಭೋಗಿಸಿಯೇ ತೀರುತ್ತಾರೆ. ಅವರ ಭರಣ-ಪೋಷಣೆಯು ನನ್ನ ಕರ್ತ್ಯವ್ಯ ಎಂದು ತಿಳಿಯದೇ ನಿನ್ನ ಹಿತದ ಕುರಿತು ಯೋಚಿಸು.
12277024a ಏವಂ ವಿಜಾನಽಲ್ಲೋಕೇಽಸ್ಮಿನ್ಕಃ ಕಸ್ಯೇತ್ಯಭಿನಿಶ್ಚಿತಃ|
12277024c ಮೋಕ್ಷೇ ನಿವೇಶಯ ಮನೋ ಭೂಯಶ್ಚಾಪ್ಯುಪಧಾರಯ||
ಇದನ್ನು ತಿಳಿದು ಈ ಲೋಕದಲ್ಲಿ ಯಾರು ಯಾರವನು ಎಂದು ನಿಶ್ಚಯಿಸಿ ಮೋಕ್ಷಮಾರ್ಗದಲ್ಲಿಯೇ ಬುದ್ಧಿಯನ್ನಿಡು. ಪುನಃ ಪುನಃ ಮನಸ್ಸಿನಲ್ಲಿ ಈ ವಿಷಯವನ್ನು ಆಲೋಚಿಸುತ್ತಿರು.
12277025a ಕ್ಷುತ್ಪಿಪಾಸಾದಯೋ ಭಾವಾ ಜಿತಾ ಯಸ್ಯೇಹ ದೇಹಿನಃ|
12277025c ಕ್ರೋಧೋ ಲೋಭಸ್ತಥಾ ಮೋಹಃ ಸತ್ತ್ವವಾನ್ಮುಕ್ತ ಏವ ಸಃ||
ಹಸಿವು, ಬಾಯಾರಿಕೆ, ಕ್ರೋಧ, ಲೋಭ, ಮೋಹ ಮೊದಲಾದ ಭಾವಗಳನ್ನು ಜಯಿಸಿರುವ ಸತ್ತ್ವಸಂಪನ್ನನು ಮುಕ್ತನೇ ಸರಿ.
12277026a ದ್ಯೂತೇ ಪಾನೇ ತಥಾ ಸ್ತ್ರೀಷು ಮೃಗಯಾಯಾಂ ಚ ಯೋ ನರಃ|
12277026c ನ ಪ್ರಮಾದ್ಯತಿ ಸಂಮೋಹಾತ್ಸತತಂ ಮುಕ್ತ ಏವ ಸಃ||
ದ್ಯೂತ, ಮದ್ಯಪಾನ, ಸ್ತ್ರೀಯರು ಮತ್ತು ಬೇಟೆಗಳಲ್ಲಿ ಯಾವ ನರನು ಸಮ್ಮೋಹದಿಂದ ಪ್ರಮಾದಗೊಳ್ಳುವುದಿಲ್ಲವೋ ಅವನು ಮುಕ್ತನೇ ಸರಿ.
12277027a ದಿವಸೇ ದಿವಸೇ ನಾಮ ರಾತ್ರೌ ರಾತ್ರೌ ಸದಾ ಸದಾ|
12277027c ಭೋಕ್ತವ್ಯಮಿತಿ ಯಃ ಖಿನ್ನೋ ದೋಷಬುದ್ಧಿಃ ಸ ಉಚ್ಯತೇ||
ಪ್ರತಿ ದಿನವೂ ಮತ್ತು ಪ್ರತಿ ರಾತ್ರಿಯೂ ಸದಾ ನಾನು ಏನನ್ನು ಭೋಗಿಸಲಿ ಎಂದು ಚಿಂತಿಸಿ ಖಿನ್ನನಾಗುವವನನ್ನು ದೋಷಬುದ್ಧಿಯೆಂದು ಕರೆಯುತ್ತಾರೆ.
12277028a ಆತ್ಮಭಾವಂ ತಥಾ ಸ್ತ್ರೀಷು ಮುಕ್ತಮೇವ ಪುನಃ ಪುನಃ|
12277028c ಯಃ ಪಶ್ಯತಿ ಸದಾ ಯುಕ್ತೋ ಯಥಾವನ್ಮುಕ್ತ ಏವ ಸಃ||
ಸದಾ ಸಾವಧಾನಯುಕ್ತನಾಗಿದ್ದುಕೊಂಡು ಅವಳು ತನ್ನವಳೆಂಬ ಆತ್ಮಭಾವವನ್ನು ತಾಳದೇ ಸ್ತ್ರೀಯರನ್ನು ನೋಡುವವನು ಮುಕ್ತನೇ ಸರಿ.
12277029a ಸಂಭವಂ ಚ ವಿನಾಶಂ ಚ ಭೂತಾನಾಂ ಚೇಷ್ಟಿತಂ ತಥಾ|
12277029c ಯಸ್ತತ್ತ್ವತೋ ವಿಜಾನಾತಿ ಲೋಕೇಽಸ್ಮಿನ್ಮುಕ್ತ ಏವ ಸಃ||
ಈ ಲೋಕದಲ್ಲಿ ಭೂತಗಳ ಹುಟ್ಟು, ಮರಣ ಮತ್ತು ಜೀವನ ಕ್ಲೇಷಗಳನ್ನು ಯಥಾರ್ಥರೂಪದಲ್ಲಿ ತಿಳಿದಿರುವವನೇ ಮುಕ್ತನು.
12277030a ಪ್ರಸ್ಥಂ ವಾಹಸಹಸ್ರೇಷು ಯಾತ್ರಾರ್ಥಂ ಚೈವ ಕೋಟಿಷು|
12277030c ಪ್ರಾಸಾದೇ ಮಂಚಕಸ್ಥಾನಂ ಯಃ ಪಶ್ಯತಿ ಸ ಮುಚ್ಯತೇ||
ಸಾವಿರಾರು-ಕೋಟ್ಯಾನುಕೋಟಿ ಬಂಡಿಗಳಲ್ಲಿ ತುಂಬಿರುವ ಧಾನ್ಯದಲ್ಲಿ ತನಗೆ ಅಂದಿನ ಊಟಕ್ಕೆ ಬೇಕಾಗುವಷ್ಟೇ ಧಾನ್ಯವು ಸಾಕು ಎಂದು ಭಾವಿಸುವವನು ಹಾಗೂ ವಿಶಾಲ ಭವನದಲ್ಲಿ ಹಾಸಿಗೆ ಹಾಸುವಷ್ಟು ಜಾಗವು ಸಾಕು ಎನ್ನುವವನು ಮುಕ್ತನೇ ಸರಿ.
12277031a ಮೃತ್ಯುನಾಭ್ಯಾಹತಂ ಲೋಕಂ ವ್ಯಾಧಿಭಿಶ್ಚೋಪಪೀಡಿತಮ್|
12277031c ಅವೃತ್ತಿಕರ್ಶಿತಂ ಚೈವ ಯಃ ಪಶ್ಯತಿ ಸ ಮುಚ್ಯತೇ||
ಲೋಕವು ಮೃತ್ಯುವಿನ ಆಕ್ರಮಣಕ್ಕೊಳಪಟ್ಟಿದೆಯೆಂದೂ, ವ್ಯಾಧಿಗಳಿಂದ ಪೀಡಿತವಾಗಿದೆಯೆಂದೂ, ಜೀವಿಕೆಯ ಅಭಾವದಿಂದ ದುರ್ಬಲವು ಎಂದು ಯಾರು ಕಾಣುತ್ತಾನೋ ಅವನು ಮುಕ್ತನಾಗುತ್ತಾನೆ.
12277032a ಯಃ ಪಶ್ಯತಿ ಸುಖೀ ತುಷ್ಟೋ[4] ನಪಶ್ಯಂಶ್ಚ ವಿಹನ್ಯತೇ|
12277032c ಯಶ್ಚಾಪ್ಯಲ್ಪೇನ ಸಂತುಷ್ಟೋ ಲೋಕೇಽಸ್ಮಿನ್ಮುಕ್ತ ಏವ ಸಃ||
ಹೀಗೆ ನೋಡುವವನು ಸುಖಿಯೂ ಸಂತುಷ್ಟನೂ ಆಗುತ್ತಾನೆ. ಹೀಗೆ ನೋಡದಿರುವವನು ನಷ್ಟನಾಗುತ್ತಾನೆ[5]. ಈ ಲೋಕದಲ್ಲಿ ಅಲ್ಪದಿಂದಲೇ ಸಂತುಷ್ಟರಾಗಿರುವವರು ಮುಕ್ತರೇ ಸರಿ.
12277033a ಅಗ್ನೀಷೋಮಾವಿದಂ ಸರ್ವಮಿತಿ ಯಶ್ಚಾನುಪಶ್ಯತಿ|
12277033c ನ ಚ ಸಂಸ್ಪೃಶ್ಯತೇ ಭಾವೈರದ್ಭುತೈರ್ಮುಕ್ತ ಏವ ಸಃ||
ಯಾರು ಈ ಎಲ್ಲವೂ ಅಗ್ನೀಷೋಮಗಳ[6] ಸ್ವರೂಪವೆಂದು ತಿಳಿಯುವನೋ ಅವನನ್ನು ಮಾಯೆಯ ಅದ್ಭುತಭಾವಗಳು ತಗಲುವುದಿಲ್ಲ. ಅಂಥವನು ಮುಕ್ತನೇ ಸರಿ.
12277034a ಪರ್ಯಂಕಶಯ್ಯಾ ಭೂಮಿಶ್ಚ ಸಮಾನೇ ಯಸ್ಯ ದೇಹಿನಃ|
12277034c ಶಾಲಯಶ್ಚ ಕದನ್ನಂ ಚ ಯಸ್ಯ ಸ್ಯಾನ್ಮುಕ್ತ ಏವ ಸಃ||
ಯಾರಿಗೆ ಪರ್ಯಂಕಶಯನವೂ ಭೂಮಿಯ ಮೇಲೆ ಮಲಗುವುದೂ ಸಮಾನವೋ, ಹಾಗೆಯೇ ಮೃಷ್ಟಾನ್ನವೂ ತಂಗಳನ್ನವೂ ಸಮಾನವೋ ಅವನು ಮುಕ್ತನೇ ಸರಿ.
12277035a ಕ್ಷೌಮಂ ಚ ಕುಶಚೀರಂ ಚ ಕೌಶೇಯಂ ವಲ್ಕಲಾನಿ ಚ|
12277035c ಆವಿಕಂ ಚರ್ಮ ಚ ಸಮಂ ಯಸ್ಯ ಸ್ಯಾನ್ಮುಕ್ತ ಏವ ಸಃ||
ಯಾರಿಗೆ ಸುವರ್ಣದ ಜರಿಯಿಂದ ಕೂಡಿರುವ ರೇಷ್ಮೆಯ ಪಟ್ಟೇವಸ್ತ್ರವೂ-ದರ್ಭೆಯ ಬಟ್ಟೆಯೂ ಸಮಾನವೋ, ರೇಷ್ಮೆಯ ವಸ್ತ್ರವೂ-ನಾರು ಮಡಿಯೂ ಸಮಾನವೋ, ಮತ್ತು ಉಣ್ಣೆಯ ಬಟ್ಟೆಯೂ-ಮೃಗಚರ್ಮವೂ ಸಮಾನವೋ ಅವನು ಮುಕ್ತನೇ ಸರಿ.
12277036a ಪಂಚಭೂತಸಮುದ್ಭೂತಂ ಲೋಕಂ ಯಶ್ಚಾನುಪಶ್ಯತಿ|
12277036c ತಥಾ ಚ ವರ್ತತೇ ದೃಷ್ಟ್ವಾ ಲೋಕೇಽಸ್ಮಿನ್ಮುಕ್ತ ಏವ ಸಃ||
ಪಂಚಭೂತಗಳಿಂದ ಉಂಟಾದುದೆಂದು ಲೋಕವನ್ನು ಕಾಣುವವನು ಮತ್ತು ಲೋಕದ ಎಲ್ಲ ಪ್ರಾಣಿಗಳನ್ನೂ ಸಮನಾಗಿ ಕಾಣುವವನು ಮುಕ್ತನೇ ಸರಿ.
12277037a ಸುಖದುಃಖೇ ಸಮೇ ಯಸ್ಯ ಲಾಭಾಲಾಭೌ ಜಯಾಜಯೌ|
12277037c ಇಚ್ಚಾದ್ವೇಷೌ ಭಯೋದ್ವೇಗೌ ಸರ್ವಥಾ ಮುಕ್ತ ಏವ ಸಃ||
ಸುಖ-ದುಃಖಗಳಲ್ಲಿ, ಲಾಭಾಲಾಭಗಳಲ್ಲಿ, ಜಯಾಜಯಗಳಲ್ಲಿ, ಇಚ್ಚಾದ್ವೇಷಗಳಲ್ಲಿ, ಮತ್ತು ಭಯೋದ್ವೇಗಗಳಲ್ಲಿ ಸಮಭಾವದಿಂದಿರುವವನು ಮುಕ್ತನೇ ಸರಿ.
12277038a ರಕ್ತಮೂತ್ರಪುರೀಷಾಣಾಂ ದೋಷಾಣಾಂ ಸಂಚಯಂ ತಥಾ|
12277038c ಶರೀರಂ ದೋಷಬಹುಲಂ ದೃಷ್ಟ್ವಾ ಚೇದಂ ವಿಮುಚ್ಯತೇ||
ಶರೀರವು ರಕ್ತ-ಮೂತ್ರ-ಮಲಗಳ ಆವಾಸಸ್ಥಾನವಾಗಿರುವುದನ್ನೂ, ವಾತ-ಪಿತ್ತ-ಕಫಗಳೆಂಬ ದೋಷಯುಕ್ತವಾಗಿರುವುದನ್ನೂ ಕಂಡುಕೊಂಡವನು ಮುಕ್ತನಾಗುತ್ತಾನೆ.
12277039a ವಲೀಪಲಿತಸಂಯೋಗಂ ಕಾರ್ಶ್ಯಂ ವೈವರ್ಣ್ಯಮೇವ ಚ|
12277039c ಕುಬ್ಜಭಾವಂ ಚ ಜರಯಾ ಯಃ ಪಶ್ಯತಿ ಸ ಮುಚ್ಯತೇ||
ಮುಪ್ಪು ಆವರಿಸಿದೊಡನೆಯೇ ಚರ್ಮವು ಸುಕ್ಕಿಹೋಗುವುದು, ತಲೆಗೂದಲು ನೆರೆಯುವುದು, ದೇಹವು ಕೃಶವಾಗಿ ಕಾಂತಿಹೀನವಾಗುವುದು, ಸೊಂಟವು ಬಗ್ಗುವುದು – ಇವುಗಳನ್ನು ಮನಗಾಣುವವನು ಮುಕ್ತನಾಗುತ್ತಾನೆ.
12277040a ಪುಂಸ್ತ್ವೋಪಘಾತಂ ಕಾಲೇನ ದರ್ಶನೋಪರಮಂ ತಥಾ|
12277040c ಬಾಧಿರ್ಯಂ ಪ್ರಾಣಮಂದತ್ವಂ ಯಃ ಪಶ್ಯತಿ ಸ ಮುಚ್ಯತೇ||
ಕಾಲಕ್ರಮೇಣವಾಗಿ ಆಗುವ ಪುರುಷತ್ವದ ನಾಶ, ದೃಷ್ಟಿಯು ಮಂದವಾಗುವುದು, ಕಿವಿ ಕೇಳಿಸದೇ ಇರುವುದು, ಮತ್ತು ಪ್ರಾಣಶಕ್ತಿಯು ಕ್ಷೀಣಿಸುವುದು – ಇವುಗಳನ್ನು ಮುಂದಾಗಿಯೇ ಮನಗಂಡವನು ಮುಕ್ತನಾಗುತ್ತಾನೆ.
12277041a ಗತಾನೃಷೀಂಸ್ತಥಾ ದೇವಾನಸುರಾಂಶ್ಚ ತಥಾ ಗತಾನ್|
12277041c ಲೋಕಾದಸ್ಮಾತ್ಪರಂ ಲೋಕಂ ಯಃ ಪಶ್ಯತಿ ಸ ಮುಚ್ಯತೇ||
ಎಷ್ಟೋ ಮಂದಿ ಋಷಿಗಳು, ದೇವತೆಗಳು ಮತ್ತು ಅಸುರರು ಈ ಲೋಕದಿಂದ ಪರಲೋಕಕ್ಕೆ ಹೊರಟುಹೋದರು ಎನ್ನುವುದನ್ನು ನೋಡುವವನು ಮುಕ್ತನಾಗುತ್ತಾನೆ.
12277042a ಪ್ರಭಾವೈರನ್ವಿತಾಸ್ತೈಸ್ತೈಃ ಪಾರ್ಥಿವೇಂದ್ರಾಃ ಸಹಸ್ರಶಃ|
12277042c ಯೇ ಗತಾಃ ಪೃಥಿವೀಂ ತ್ಯಕ್ತ್ವಾ ಇತಿ ಜ್ಞಾತ್ವಾ ವಿಮುಚ್ಯತೇ||
ಸಹಸ್ರಾರು ಪ್ರಭಾವಯುಕ್ತ ಪಾರ್ಥಿವೇಂದ್ರರು ಈ ಪೃಥ್ವಿಯನ್ನು ತೊರೆದು ಹೊರಟುಹೋಗಿದ್ದಾರೆ ಎಂದು ತಿಳಿದುಕೊಂಡವನು ಮುಕ್ತನಾಗುತ್ತಾನೆ.
12277043a ಅರ್ಥಾಂಶ್ಚ ದುರ್ಲಭಾಽಲ್ಲೋಕೇ ಕ್ಲೇಶಾಂಶ್ಚ ಸುಲಭಾಂಸ್ತಥಾ|
12277043c ದುಃಖಂ ಚೈವ ಕುಟುಂಬಾರ್ಥೇ ಯಃ ಪಶ್ಯತಿ ಸ ಮುಚ್ಯತೇ||
ಈ ಲೋಕದಲ್ಲಿ ಅರ್ಥಪ್ರಾಪ್ತಿಯು ದುರ್ಲಭವಾದುದು, ಕ್ಲೇಷಗಳು ಸುಲಭವಾಗಿ ದೊರೆಯುತ್ತವೆ ಮತ್ತು ಕುಟುಂಬದ ಕಾರಣದಿಂದ ಅನೇಕ ದುಃಖಗಳುಂಟಾಗುತ್ತದೆ ಎನ್ನುವುದನ್ನು ಕಂಡವನು ಮುಕ್ತನಾಗುತ್ತಾನೆ.
12277044a ಅಪತ್ಯಾನಾಂ ಚ ವೈಗುಣ್ಯಂ ಜನಂ ವಿಗುಣಮೇವ ಚ|
12277044c ಪಶ್ಯನ್ಭೂಯಿಷ್ಠಶೋ ಲೋಕೇ ಕೋ ಮೋಕ್ಷಂ ನಾಭಿಪೂಜಯೇತ್||
ಮಕ್ಕಳಲ್ಲಿರುವ ಗುಣಹೀನತೆ ಮತ್ತು ಜನರಲ್ಲಿರುವ ದುರ್ಗುಣಗಳನ್ನು ಲೋಕದಲ್ಲಿ ಹೆಚ್ಚು ಹೆಚ್ಚು ನೋಡುತ್ತಿರುವ ಯಾರು ತಾನೇ ಮೋಕ್ಷವನ್ನು ಆದರಿಸುವುದಿಲ್ಲ?
12277045a ಶಾಸ್ತ್ರಾಲ್ಲೋಕಾಚ್ಚ ಯೋ ಬುದ್ಧಃ ಸರ್ವಂ ಪಶ್ಯತಿ ಮಾನವಃ|
12277045c ಅಸಾರಮಿವ ಮಾನುಷ್ಯಂ ಸರ್ವಥಾ ಮುಕ್ತ ಏವ ಸಃ||
ಶಾಸ್ತ್ರಗಳ ಅಧ್ಯಯನದಿಂದ ಮತ್ತು ಲೌಕಿಕ ಅನುಭವದಿಂದ ಜ್ಞಾನಸಂಪನ್ನನಾಗಿ ಮನುಷ್ಯತ್ವವೇ ನಿಸ್ಸಾರವೆಂದು ಕಂಡುಕೊಳ್ಳುವ ಮಾನವನು ಸರ್ವಥಾ ಮುಕ್ತನಾದಂತೆಯೇ.
12277046a ಏತಚ್ಚ್ರುತ್ವಾ ಮಮ ವಚೋ ಭವಾಂಶ್ಚರತು ಮುಕ್ತವತ್|
12277046c ಗಾರ್ಹಸ್ಥ್ಯೇ ಯದಿ ತೇ ಮೋಕ್ಷೇ ಕೃತಾ ಬುದ್ಧಿರವಿಕ್ಲವಾ||
ನನ್ನ ಈ ಮಾತನ್ನು ಕೇಳಿ ನಿನ್ನ ಬುದ್ಧಿಯ ವ್ಯಾಕುಲತೆಯನ್ನು ದೂರೀಕರಿಸಿ, ಗೃಹಸ್ಥಾಶ್ರಮದಲ್ಲಾಗಲೀ ಸಂನ್ಯಾಸಾಶ್ರಮದಲ್ಲಾಗಲೀ ಇದ್ದುಕೊಂಡು ಮುಕ್ತನಂತೆ ವ್ಯವಹರಿಸು.”
12277047a ತತ್ತಸ್ಯ ವಚನಂ ಶ್ರುತ್ವಾ ಸಮ್ಯಕ್ಸ ಪೃಥಿವೀಪತಿಃ|
12277047c ಮೋಕ್ಷಜೈಶ್ಚ ಗುಣೈರ್ಯುಕ್ತಃ ಪಾಲಯಾಮಾಸ ಚ ಪ್ರಜಾಃ||
ಅವನ ಆ ಮಾತನ್ನು ಶ್ರದ್ಧೆಯಿಂದ ಕೇಳಿ ಪೃಥಿವೀಪತಿ ಸಗರನು ಮೋಕ್ಷೋಪಯೋಗೀ ಗುಣಗಳಿಂದ ಯುಕ್ತನಾಗಿ ಪ್ರಜೆಗಳನ್ನು ಪಾಲಿಸುತ್ತಿದ್ದನು.”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಸಗರಾರಿಷ್ಟನೇಮಿಸಂವಾದೇ ಸಪ್ತಸಪ್ತತ್ಯಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಸಗರಾರಿಷ್ಟನೇಮಿಸಂವಾದ ಎನ್ನುವ ಇನ್ನೂರಾಎಪ್ಪತ್ತೇಳನೇ ಅಧ್ಯಾಯವು.
[1] ಯುಕ್ತಃ (ಭಾರತ ದರ್ಶನ).
[2] ಅರಿಷ್ಟನೇಮಿಯ ಇನ್ನೊಂದು ಹೆಸರು ತಾರ್ಕ್ಷ್ಯ.
[3] ಮೂಢೋ (ಭಾರತ ದರ್ಶನ).
[4] ಯಃ ಪಶ್ಯತಿ ಸ ಸಂತುಷ್ಟೋ (ಭಾರತ ದರ್ಶನ).
[5] ತನ್ನನ್ನು ಸಂತುಷ್ಟನನ್ನಾಗಿ ಕಾಣುವವನು ಮುಕ್ತನು. ತಾನು ಸಂತುಷ್ಟನೆಂದು ಯಾರು ಕಾಣುವುದಿಲ್ಲವೋ ಅವನು ಹಾಳಾಗಿಹೋಗುತ್ತಾನೆ. (ಭಾರತ ದರ್ಶನ)
[6] ಅಗ್ನಿ – ಜಠರಾಗ್ನಿ, ಭೋಕ್ತಾ ಮತ್ತು ಸೋಮ – ಅನ್ನ, ಭೋಜ್ಯ (ಭಾರತ ದರ್ಶನ).