Shanti Parva: Chapter 190

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೯೦

ಜಪಯಜ್ಞದಲ್ಲಿ ದೋಷವುಂಟಾದರೆ ನರಕ (ಪುನರ್ಜನ್ಮ) ಪ್ರಾಪ್ತಿ (೧-೧೩).

12190001 ಯುಧಿಷ್ಠಿರ ಉವಾಚ|

12190001a ಗತೀನಾಮುತ್ತಮಾ ಪ್ರಾಪ್ತಿಃ ಕಥಿತಾ ಜಾಪಕೇಷ್ವಿಹ|

12190001c ಏಕೈವೈಷಾ ಗತಿಸ್ತೇಷಾಮುತ ಯಾಂತ್ಯಪರಾಮಪಿ||

ಯುಧಿಷ್ಠಿರನು ಹೇಳಿದನು: “ಜಾಪಕರಿಗೆ ಉತ್ತಮ ಗತಿಗಳು ಪ್ರಾಪ್ತವಾಗುತ್ತವೆ ಎಂದು ಹೇಳಿದೆ. ಅವರು ಎಲ್ಲರೂ ಒಂದೇ ಗತಿಯನ್ನು ಹೊಂದುತ್ತಾರೋ ಅಥವಾ ಬೇರೆ ಬೇರೆ ಗತಿಗಳನ್ನು ಹೊಂದುತ್ತಾರೋ[1]?”

12190002 ಭೀಷ್ಮ ಉವಾಚ|

12190002a ಶೃಣುಷ್ವಾವಹಿತೋ ರಾಜನ್ಜಾಪಕಾನಾಂ ಗತಿಂ ವಿಭೋ|

12190002c ಯಥಾ ಗಚ್ಚಂತಿ ನಿರಯಮನೇಕಂ ಪುರುಷರ್ಷಭ||

ಭೀಷ್ಮನು ಹೇಳಿದನು: “ರಾಜನ್! ಪುರುಷರ್ಷಭ! ವಿಭೋ! ಜಾಪಕರು ಹೇಗೆ ಅನೇಕ ನರಕಗಳಿಗೂ[2] ಹೋಗುತ್ತಾರೆ ಎನ್ನುವುದನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು.

12190003a ಯಥೋಕ್ತಮೇತತ್ಪೂರ್ವಂ ಯೋ ನಾನುತಿಷ್ಠತಿ ಜಾಪಕಃ|

12190003c ಏಕದೇಶಕ್ರಿಯಶ್ಚಾತ್ರ ನಿರಯಂ ಸ ನಿಗಚ್ಚತಿ||

ಹಿಂದೆ ಹೇಳಿರುವ ಎಲ್ಲ ನಿಯಮಗಳನ್ನೂ ಯಥಾವಿಧಿಯಾಗಿ ಅನುಷ್ಠಾನಮಾಡದೇ ಯಾವುದೇ ಒಂದು ನಿಯಮವನ್ನು ಮಾತ್ರ ಪಾಲಿಸುವವನು ನರಕಕ್ಕೆ ಹೋಗುತ್ತಾನೆ.

12190004a ಅವಜ್ಞಾನೇನ ಕುರುತೇ ನ ತುಷ್ಯತಿ ನ ಶೋಚತಿ[3]|

12190004c ಈದೃಶೋ ಜಾಪಕೋ ಯಾತಿ ನಿರಯಂ ನಾತ್ರ ಸಂಶಯಃ||

ಜಪವಿಧಿಯನ್ನು ತಿಳಿದುಕೊಳ್ಳದೇ ಜಪಮಾಡುವ, ತೃಪ್ತಿಯಿಲ್ಲದೇ ಜಪಮಾಡುವ, ಜಪಮಾಡಿ ಶೋಕಿಸುವ ಜಾಪಕನು ನರಕಕ್ಕೆ ಹೋಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

12190005a ಅಹಂಕಾರಕೃತಶ್ಚೈವ ಸರ್ವೇ ನಿರಯಗಾಮಿನಃ|

12190005c ಪರಾವಮಾನೀ ಪುರುಷೋ ಭವಿತಾ ನಿರಯೋಪಗಃ||

ಜಪದಿಂದ ಅಹಂಕಾರಪಡುವ ಎಲ್ಲರೂ ನರಕಕ್ಕೆ ಹೋಗುತ್ತಾರೆ. ಇತರರನ್ನು ಅಪಮಾನಿಸುವ ಪುರುಷನೂ ನರಕಕ್ಕೆ ಹೋಗುತ್ತಾನೆ.

12190006a ಅಭಿಧ್ಯಾಪೂರ್ವಕಂ ಜಪ್ಯಂ ಕುರುತೇ ಯಶ್ಚ ಮೋಹಿತಃ|

12190006c ಯತ್ರಾಭಿಧ್ಯಾಂ ಸ ಕುರುತೇ ತಂ ವೈ ನಿರಯಮೃಚ್ಚತಿ||

ಮೋಹಿತನಾಗಿ ಫಲದ ಇಚ್ಛೆಯನ್ನಿಟ್ಟುಕೊಂಡು ಜಪಮಾಡುವವನು ಯಾವ ಫಲದ ಕುರಿತು ಚಿಂತಿಸುತ್ತಿರುತ್ತಾನೋ ಅದಕ್ಕೆ ಉಪಯುಕ್ತವಾದ ನರಕದಲ್ಲಿ ಬೀಳುತ್ತಾನೆ[4].

12190007a ಅಥೈಶ್ವರ್ಯಪ್ರವೃತ್ತಃ ಸಂಜಾಪಕಸ್ತತ್ರ ರಜ್ಯತೇ|

12190007c ಸ ಏವ ನಿರಯಸ್ತಸ್ಯ ನಾಸೌ ತಸ್ಮಾತ್ಪ್ರಮುಚ್ಯತೇ||

ಒಂದು ವೇಳೆ ಜಪಮಾಡುವ ಸಾಧಕನಿಗೆ ಅಣಿಮಾದಿ ಅಷ್ಟಸಿದ್ಧಿಗಳು ಪ್ರಾಪ್ತವಾದರೆ ಮತ್ತು ಅವನು ಅದರಲ್ಲಿಯೇ ಅನುರಕ್ತನಾದರೆ ಅದೇ ಅವನಿಗೆ ನರಕವಾಗುತ್ತದೆ. ಅದರಿಂದ ಅವನಿಗೆ ಎಂದೂ ಬಿಡುಗಡೆಯಾಗುವುದಿಲ್ಲ.

12190008a ರಾಗೇಣ ಜಾಪಕೋ ಜಪ್ಯಂ ಕುರುತೇ ತತ್ರ ಮೋಹಿತಃ|

12190008c ಯತ್ರಾಸ್ಯ ರಾಗಃ ಪತತಿ ತತ್ರ ತತ್ರೋಪಜಾಯತೇ||

ಮೋಹವಶನಾಗಿ ವಿಷಯಾಸಕ್ತಿಪೂರ್ವಕ ಜಪಮಾಡುವ ಜಾಪಕನ ಮನಸ್ಸು ಯಾವುದರಲ್ಲಿ ಆಸಕ್ತವಾಗಿರುವುದೋ ಅದಕ್ಕೆ ಅನುರೂಪವಾದ ಶರೀರವನ್ನೇ ಪಡೆದುಕೊಳ್ಳುತ್ತಾನೆ[5].

12190009a ದುರ್ಬುದ್ಧಿರಕೃತಪ್ರಜ್ಞಶ್ಚಲೇ ಮನಸಿ ತಿಷ್ಠತಿ|

12190009c ಚಲಾಮೇವ ಗತಿಂ ಯಾತಿ ನಿರಯಂ ವಾಧಿಗಚ್ಚತಿ||

ದುರ್ಬುದ್ಧಿ ಮತ್ತು ಅವಿವೇಕೀ ಜಾಪಕನು ಮನಸ್ಸು ಚಂಚಲವಾಗಿರುವಾಗ ಜಪವನ್ನು ಮಾಡಿದರೆ ಚಂಚಲ ಗತಿಯನ್ನೇ[6] ಪಡೆಯುತ್ತಾನೆ ಅಥವಾ ನರಕಗಳಲ್ಲಿ ಬೀಳುತ್ತಾನೆ.

12190010a ಅಕೃತಪ್ರಜ್ಞಕೋ ಬಾಲೋ ಮೋಹಂ ಗಚ್ಚತಿ ಜಾಪಕಃ|

12190010c ಸ ಮೋಹಾನ್ನಿರಯಂ ಯಾತಿ ತತ್ರ ಗತ್ವಾನುಶೋಚತಿ||

ವಿವೇಕಶೂನ್ಯ ಮೂಢ ಜಾಪಕನು ಮೋಹಗ್ರಸ್ತನಾಗುತ್ತಾನೆ ಮತ್ತು ಅದೇ ಮೋಹದ ಕಾರಣದಿಂದಾಗಿ ಅವನು ನರಕಕ್ಕೆ ಹೋಗಿ ಅಲ್ಲಿ ಶೋಕಿಸುತ್ತಾನೆ.

12190011a ದೃಢಗ್ರಾಹೀ ಕರೋಮೀತಿ ಜಪ್ಯಂ ಜಪತಿ ಜಾಪಕಃ|

12190011c ನ ಸಂಪೂರ್ಣೋ ನ ವಾ ಯುಕ್ತೋ ನಿರಯಂ ಸೋಽಧಿಗಚ್ಚತಿ||

ಜಪವನ್ನು ಮಾಡುತ್ತೇನೆಂದು ದೃಢನಿಶ್ಚಯವನ್ನು ಮಾಡಿದ ಜಾಪಕನು ಜಪವನ್ನು ಪೂರ್ಣಗೊಳಿಸದೇ ಇದ್ದರೆ ಅಥವಾ ಜಪವನ್ನು ಮಾಡದೇ ಇದ್ದರೆ ನರಕಕ್ಕೆ ಹೋಗುತ್ತಾನೆ.”

12190012 ಯುಧಿಷ್ಠಿರ ಉವಾಚ|

12190012a ಅನಿಮಿತ್ತಂ[7] ಪರಂ ಯತ್ತದವ್ಯಕ್ತಂ ಬ್ರಹ್ಮಣಿ ಸ್ಥಿತಮ್|

12190012c ಸದ್ಭೂತೋ ಜಾಪಕಃ ಕಸ್ಮಾತ್ಸ ಶರೀರಮಥಾವಿಶೇತ್||

ಯುಧಿಷ್ಠಿರನು ಹೇಳಿದನು: “ಅನಿಮಿತ್ತವಾದ ಅವ್ಯಕ್ತ ಪರಬ್ರಹ್ಮನಲ್ಲಿ[8] ಸ್ಥಿತನಾದ ಜಾಪಕನು ಯಾವಕಾರಣದಿಂದ ಪುನರ್ಜನ್ಮವನ್ನು ಹೊಂದುತ್ತಾನೆ?”

12190013 ಭೀಷ್ಮ ಉವಾಚ|

12190013a ದುಷ್ಪ್ರಜ್ಞಾನೇನ ನಿರಯಾ ಬಹವಃ ಸಮುದಾಹೃತಾಃ|

12190013c ಪ್ರಶಸ್ತಂ ಜಾಪಕತ್ವಂ ಚ ದೋಷಾಶ್ಚೈತೇ ತದಾತ್ಮಕಾಃ||

ಭೀಷ್ಮನು ಹೇಳಿದನು: “ಕಾಮಾದಿ ಬುದ್ಧಿದೋಷಗಳಿಂದಾಗಿಯೇ ಜಾಪಕನಿಗೆ ಅನೇಕ ನರಕಗಳ ಪ್ರಾಪ್ತಿಯಾಗುತ್ತದೆ ಮತ್ತು ನಾನಾ ಯೋನಿಗಳಲ್ಲಿ ಜನ್ಮತಾಳಬೇಕಾಗುತ್ತದೆ. ಜಾಪಕತ್ವವು ಪ್ರಶಸ್ತವಾದುದು. ಆದರೆ ಮೇಲೆ ಹೇಳಿದ ದೋಷಗಳು ಜಾಪಕನಲ್ಲಿ ಉಂಟಾಗಬಹುದು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಜಾಪಕೋಪಾಖ್ಯಾನೇ ನವತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಜಾಪಕೋಪಾಖ್ಯಾನ ಎನ್ನುವ ನೂರಾತೊಂಭತ್ತನೇ ಅಧ್ಯಾಯವು.

[1] ಏಕೈವೈಷಾ ಗತಿಸ್ತೇಷಾಮುತ ಯಾಂತ್ಯಪರಾಮಪಿ| ಎನ್ನುವುದಕ್ಕೆ ಇತರ ಅನುವಾದಗಳೂ ಇವೆ: ಅವರೆಲ್ಲರಿಗೂ ಪ್ರಾಪ್ತವಾಗುವುದು ಇದೊಂದೇ ಸ್ಥಾನವೇ? ಬೇರೆ ಯಾವುದಾದರೂ ಸ್ಥಾನಕ್ಕೂ ಅವರು ಹೋಗುವರೇ? (ಭಾರತ ದರ್ಶನ). ಅವರಿಗೆ ಏಕಮಾತ್ರ ಗತಿಯುಂಟಾಗುತ್ತದೆಯೇ? ಅಥವಾ ಅವರು ಬೇರೆ ಯಾವುದೇ ಗತಿಯನ್ನೂ ಹೊಂದುತ್ತಾರೆಯೇ? (ಗೀತಾ ಪ್ರೆಸ್).

[2] ಈ ಅಧ್ಯಾಯದಲ್ಲಿ ಬಂದಿರುವ ನಿರಯ ಎಂಬ ಶಬ್ದಕ್ಕೆ ಭೋಗೈಶ್ವರ್ಯದ ಗತಿ ಅಥವಾ ಪುನರ್ಜನ್ಮ ಎಂದು ಅರ್ಥೈಸುವುದು ಒಳ್ಳೆಯದು. ಫಲಾಭಿಸಂಧಿಯಿಲ್ಲದೇ ಮಹಾಮಂತ್ರಗಳ ಜಪದ ಮೂಲಕ ಧ್ಯಾನಯೋಗದಲ್ಲಿ ನಿಷ್ಠನಾದರೆ ಅಂತಹ ಯೋಗಿಗೆ ಆತ್ಮಸಾಕ್ಷಾತ್ಕಾರವಾಗುತ್ತದ ಅಥವಾ ಬ್ರಹ್ಮಲೋಕವು ಪ್ರಾಪ್ತವಾಗುತ್ತದೆ ಎಂದು ಹಿಂದಿನ ಅಧ್ಯಾಯದಲ್ಲಿ ಹೇಳಿದೆ. ಈ ಅಧ್ಯಾಯದಲ್ಲಿ ಜಪದ ದೋಷಗಳನ್ನು ಹೇಳುವಾಗ ಕಾಮ್ಯಫಲಗಳಲ್ಲಿ ಆಸಕ್ತನಾಗಿ ಜಪಮಾಡಿದರೆ ಬ್ರಹ್ಮಸಾಕ್ಷಾತ್ಕಾರವಾಗುವುದಿಲ್ಲ. ಅಣಿಮಾದಿ ಅಷ್ಟಸಿದ್ಧಿಗಳನ್ನೂ ಜಪದಿಂದಲೇ ಪಡೆದುಕೊಳ್ಳಬಹುದು. ಈ ಜನ್ಮದಲ್ಲಿ ಯಾವುದೋ ಫಲಾಭಿಸಂಧಿಯಿಂದ ಜಪಮಾಡಿದರೆ ಮುಂದಿನ ಜನ್ಮಕ್ಕಾಗಿಯಾದರೂ ಅದು ಲಭ್ಯವಾಗುತ್ತದೆ. ಆದರೆ ಹೀಗೆ ಫಲಾಭಿಲಾಷೆಯಿಂದ ಜಪಮಾಡುವವನು ಬ್ರಹ್ಮಭಾವದಿಂದ ಬಹಳ ದೂರವಿರುತ್ತಾನೆ. ಅಂಥವನಿಗೆ ಸಾಂಸಾರಚಕ್ರವು ತಪ್ಪಿದ್ದಲ್ಲ – ಎಂಬ ಅಭಿಪ್ರಾಯವನ್ನು ಈ ಅಧ್ಯಾಯವು ಸೂಚಿಸುತ್ತದೆ. ಯೋಗಿಯ ದೃಷ್ಟಿಯಿಂದ ಸಂಸಾರವೇ ನರಕಪ್ರಾಯವಾಗಿರುತ್ತದೆ. (ಭಾರತ ದರ್ಶನ). ಆದುದರಿಂದ ಈ ಅಧ್ಯಾಯದಲ್ಲಿ ಬರುವ ನಿರಯ ಎಂಬ ಶಬ್ದಕ್ಕೆ ಪುನರ್ಜನ್ಮ ಎಂದು ಅರ್ಥೈಸಿದ್ದಾರೆ. (ಗೀತಾ ಪ್ರೆಸ್). ಮುಂದಿನ ಅಧ್ಯಾಯದಲ್ಲಿ ಭೀಷ್ಮನು ಪರಂಧಾಮಕ್ಕೆ ಹೋಲಿಸಿದರೆ ದೇವಲೋಕವೂ ನರಕವೇ ಸರಿ ಎಂದು ಪ್ರತಿಪಾದಿಸುತ್ತಾನೆ.

[3] ಅವಮಾನೇನ ಕುರುತೇ ನ ಪ್ರೀಯತಿ ನ ಹೃಷ್ಯತಿ| (ಗೀತಾ ಪ್ರೆಸ್/ಭಾರತ ದರ್ಶನ).

[4] ಯಾರು ವರ್ಣ-ರತಿ-ಪ್ರಮೋದ ಮೊದಲಾದ ಭೋಗಗಳನ್ನು ಧ್ಯಾನಿಸುತ್ತಾ ಮೋಹವಶನಾಗಿ ಜಪಮಾಡುವನೋ ಮತ್ತು ಹೊಂದಬೇಕಾದ ಫಲವನ್ನೇ ಯಾವಾಗಲೂ ಮನಸ್ಸಿನಲ್ಲಿ ಚಿಂತಿಸುವನೋ ಅಂಥವನು ನರಕಕ್ಕೆ ಹೋಗುತ್ತಾನೆ (ಭಾರತ ದರ್ಶನ).

[5] ದೊಡ್ಡದೊಂದು ಅರಮನೆಯು ಬೇಕೆಂದು ಜಪಮಾಡಿದರೆ ಪುನರ್ಜನ್ಮದಲ್ಲಿ ಅವನು ರಾಜನಾಗಿ ಅರಮನೆಯ ಸುಖವನ್ನೇ ಪಡೆಯುತ್ತಾನೆ. ಜಾಪಕನು ಪರಮಾತ್ಮನ ಚಿಂತನೆಯಿಂದ ಅವನನ್ನು ಸೇರುವಂತೆ, ವಿಷಯ ಚಿಂತನೆಯಿಂದ ವಿಷಯೋಪಭೋಗಗಳಿಗೆ ಅನುಕೂಲವಾದ ಜನ್ಮವನ್ನೇ ಪಡೆಯುತ್ತಾನೆ. (ಭಾರತ ದರ್ಶನ)

[6] ಚಲಾಮೇವ ಗತಿಂ ಎನ್ನುವುದಕ್ಕೆ ವಿನಾಶಶೀಲ ಅಥವಾ ಸ್ವರ್ಗಾದಿ ವಿಚಲಿತ ಸ್ವಭಾವವಿರುವ ಲೋಕಗಳು ಎಂಬ ಅನುವಾದವಿದೆ (ಗೀತಾ ಪ್ರೆಸ್).

[7] ಅನಿವೃತ್ತಂ (ಗೀತಾ ಪ್ರೆಸ್/ಭಾರತ ದರ್ಶನ).

[8] ಭಾರತ ದರ್ಶನದಲ್ಲಿ ಓಂಕಾರ ಎಂದಿದೆ ಮತ್ತು ಗೀತಾ ಪ್ರೆಸ್ ನಲ್ಲಿ ಗಾಯತ್ರೀ ಎಂದಿದೆ.

Comments are closed.