ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೧೮೭
ಆಧ್ಯಾತ್ಮಕಥನ
ಅಧ್ಯಾತ್ಮಜ್ಞಾನದ ನಿರೂಪಣೆ (೧-೬೦).
12187001 ಯುಧಿಷ್ಠಿರ ಉವಾಚ|
12187001a ಅಧ್ಯಾತ್ಮಂ ನಾಮ ಯದಿದಂ ಪುರುಷಸ್ಯೇಹ ಚಿಂತ್ಯತೇ|
12187001c ಯದಧ್ಯಾತ್ಮಂ ಯತಶ್ಚೈತತ್ತನ್ಮೇ ಬ್ರೂಹಿ ಪಿತಾಮಹ[1]||
ಯುಧಿಷ್ಠಿರನು ಹೇಳಿದನು: “ಪಿತಾಮಹ! ಮನುಷ್ಯನಿಗಾಗಿ ಅಧ್ಯಾತ್ಮ ಎಂಬ ಹೆಸರಿನಿಂದ ಯಾವ ವಿಚಾರವಿದೆಯೋ ಆ ಅಧ್ಯಾತ್ಮ ಜ್ಞಾನವು ಯಾವುದು? ಅದನ್ನು ನನಗೆ ಹೇಳು.”
12187002 ಭೀಷ್ಮ ಉವಾಚ|
12187002a ಅಧ್ಯಾತ್ಮಮಿತಿ ಮಾಂ ಪಾರ್ಥ ಯದೇತದನುಪೃಚ್ಚಸಿ|
12187002c ತದ್ವ್ಯಾಖ್ಯಾಸ್ಯಾಮಿ ತೇ ತಾತ ಶ್ರೇಯಸ್ಕರತರಂ ಸುಖಮ್||
ಭೀಷ್ಮನು ಹೇಳಿದನು: “ಪಾರ್ಥ! ನೀನು ಯಾವ ಅಧ್ಯಾತ್ಮವಿಷಯದ ಕುರಿತು ಕೇಳಿತ್ತಿರುವೆಯೋ ನಿನಗಾಗಿ ಅದರ ವ್ಯಾಖ್ಯೆಯನ್ನು ಮಾಡುತ್ತೇನೆ. ಅಯ್ಯಾ! ಇದು ಪರಮ ಶ್ರೇಯಸ್ಕರವೂ ಸುಖಕರವೂ ಆಗಿದೆ.
[2]12187003a ಯಜ್ಜ್ಞಾತ್ವಾ ಪುರುಷೋ ಲೋಕೇ ಪ್ರೀತಿಂ ಸೌಖ್ಯಂ ಚ ವಿಂದತಿ|
12187003c ಫಲಲಾಭಶ್ಚ ಸದ್ಯಃ ಸ್ಯಾತ್ಸರ್ವಭೂತಹಿತಂ ಚ ತತ್||
ಇದನ್ನು ತಿಳಿದು ಪುರುಷನು ಲೋಕದಲ್ಲಿ ಸುಖ ಮತ್ತು ಪ್ರೀತಿಯನ್ನು ಹೊಂದುತ್ತಾನೆ. ಅವನಿಗೆ ಅಭೀಷ್ಟಫಲಗಳು ಲಭಿಸುತ್ತವೆ. ಈ ಅಧ್ಯಾತ್ಮಜ್ಞಾನವು ಸಮಸ್ತಪ್ರಾಣಿಗಳಿಗೂ ಹಿತಕರವಾಗಿದೆ.
12187004a ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್|
12187004c ಮಹಾಭೂತಾನಿ ಭೂತಾನಾಂ ಸರ್ವೇಷಾಂ ಪ್ರಭವಾಪ್ಯಯೌ||
ಪೃಥ್ವೀ, ವಾಯು, ಆಕಾಶ, ಜಲ ಮತ್ತು ಅಗ್ನಿ – ಈ ಐದು ಮಹಾಭೂತಗಳು ಸಂಪೂರ್ಣ ಪ್ರಾಣಿಗಳ ಉತ್ಪತ್ತಿ ಮತ್ತು ಪ್ರಯಲಗಳ ಸ್ಥಾನಗಳು.
12187005a ತತಃ ಸೃಷ್ಟಾನಿ ತತ್ರೈವ ತಾನಿ ಯಾಂತಿ ಪುನಃ ಪುನಃ|
12187005c ಮಹಾಭೂತಾನಿ ಭೂತೇಷು ಸಾಗರಸ್ಯೋರ್ಮಯೋ ಯಥಾ||
ಸಾಗರದಲ್ಲಿ ಹೇಗೆ ಅಲೆಗಳು ಉತ್ಪನ್ನವಾಗಿ ಪುನಃ ಅದರಲ್ಲಿಯೇ ಲೀನವಾಗುತ್ತವೆಯೋ ಹಾಗೆ ಈ ಪಂಚ ಮಹಾಭೂತಗಳೂ ಕೂಡ ಯಾವ ಪರಮಾತ್ಮನಿಂದ ಉತ್ಪನ್ನವಾಗಿವೆಯೋ ಅವನಲ್ಲಿಯೇ ಸರ್ವ ಪ್ರಾಣಿಗಳ ಸಹಿತ ಪುನಃ ಪುನಃ ಲೀನಗೊಳ್ಳುತ್ತವೆ.
12187006a ಪ್ರಸಾರ್ಯ ಚ ಯಥಾಂಗಾನಿ ಕೂರ್ಮಃ ಸಂಹರತೇ ಪುನಃ|
12187006c ತದ್ವದ್ಭೂತಾನಿ ಭೂತಾತ್ಮಾ ಸೃಷ್ಟ್ವಾ ಸಂಹರತೇ ಪುನಃ||
ಆಮೆಯು ಹೇಗೆ ತನ್ನ ಅಂಗಗಳನ್ನು ವಿಸ್ತರಿಸಿಕೊಂಡು ಪುನಃ ಒಳಕ್ಕೆಳೆದುಕೊಳ್ಳುತ್ತದೆಯೋ ಹಾಗೆಯೇ ಸಂಪೂರ್ಣ ಭೂತಾತ್ಮಾ ಪರಬ್ರಹ್ಮ ಪರಮೇಶ್ವರನು ತಾನು ರಚಿಸಿದ ಈ ಸಂಪೂರ್ಣ ಜಗತ್ತನ್ನು ವಿಸ್ತರಿಸಿ ಪುನಃ ತನ್ನ ಒಳಗೆ ಎಳೆದುಕೊಳ್ಳುತ್ತಾನೆ.
12187007a ಮಹಾಭೂತಾನಿ ಪಂಚೈವ ಸರ್ವಭೂತೇಷು ಭೂತಕೃತ್|
12187007c ಅಕರೋತ್ತೇಷು ವೈಷಮ್ಯಂ ತತ್ತು ಜೀವೋಽನು ಪಶ್ಯತಿ||
ಭೂತಕೃತುವು ಸರ್ವಭೂತಗಳಲ್ಲಿ ಐದೇ ಮಹಾಭೂತಗಳನ್ನು ಸ್ಥಾಪಿಸಿದ್ದಾನೆ. ಆದರೆ ಅವುಗಳಲ್ಲಿ ವೈಷಮ್ಯಗಳನ್ನು ಮಾಡಿದ್ದಾನೆ. ಆ ವೈಷಮ್ಯತೆಯು ಜೀವಕ್ಕೆ ಕಾಣಿಸುವುದಿಲ್ಲ.
12187008a ಶಬ್ದಃ ಶ್ರೋತ್ರಂ ತಥಾ ಖಾನಿ ತ್ರಯಮಾಕಾಶಯೋನಿಜಮ್|
12187008c ವಾಯೋಸ್ತ್ವಕ್ಸ್ಪರ್ಶಚೇಷ್ಟಾಶ್ಚ ವಾಗಿತ್ಯೇತಚ್ಚತುಷ್ಟಯಮ್[3]||
ಶಬ್ದ, ಶ್ರೋತ್ರ, ಮತ್ತು ಛಿದ್ರ – ಈ ಮೂರು ಆಕಾಶದ ಕಾರ್ಯಗಳು. ಸ್ಪರ್ಶ, ಚೇಷ್ಟಾ, ತ್ವಗಿಂದ್ರಿಯ ಮತ್ತು ಮಾತು – ಈ ನಾಲ್ಕು ವಾಯುವಿನ ಕಾರ್ಯಗಳು.
12187009a ರೂಪಂ ಚಕ್ಷುಸ್ತಥಾ ಪಕ್ತಿಸ್ತ್ರಿವಿಧಂ[4] ತೇಜ ಉಚ್ಯತೇ|
12187009c ರಸಃ ಕ್ಲೇದಶ್ಚ ಜಿಹ್ವಾ ಚ ತ್ರಯೋ ಜಲಗುಣಾಃ ಸ್ಮೃತಾಃ||
ರೂಪ, ಚಕ್ಷು ಮತ್ತು ಪಚನ ಈ ಮೂರು ತೇಜದ ಕಾರ್ಯಗಳೆಂದು ಹೇಳುತ್ತಾರೆ. ರಸ, ತೇವ ಮತ್ತು ನಾಲಿಗೆ ಈ ಮೂರು ಜಲದ ಗುಣಗಳೆಂದು ಹೇಳಿದ್ದಾರೆ.
12187010a ಘ್ರೇಯಂ ಘ್ರಾಣಂ ಶರೀರಂ ಚ ತೇ ತು ಭೂಮಿಗುಣಾಸ್ತ್ರಯಃ|
12187010c ಮಹಾಭೂತಾನಿ ಪಂಚೈವ ಷಷ್ಠಂ ತು ಮನ ಉಚ್ಯತೇ||
ಗಂಧ, ಘ್ರಾಣೇಂದ್ರಿಯ, ಮತ್ತು ಶರೀರ ಈ ಮೂರು ಭೂಮಿಯ ಗುಣಗಳು. ಮಹಾಭೂತಗಳು ಐದು ಮತ್ತು ಆರನೆಯದು ಮನಸ್ಸು ಎಂದು ಹೇಳಿದ್ದಾರೆ.
12187011a ಇಂದ್ರಿಯಾಣಿ ಮನಶ್ಚೈವ ವಿಜ್ಞಾನಾನ್ಯಸ್ಯ ಭಾರತ|
12187011c ಸಪ್ತಮೀ ಬುದ್ಧಿರಿತ್ಯಾಹುಃ ಕ್ಷೇತ್ರಜ್ಞಃ ಪುನರಷ್ಟಮಃ||
ಭಾರತ! ಇಂದ್ರಿಯಗಳು ಮತ್ತು ಮನಸ್ಸು ಜೀವಾತ್ಮನಿಗೆ ವಿಷಯಗಳ ಜ್ಞಾನವನ್ನುಂಟುಮಾಡುತ್ತವೆ. ಏಳನೆಯದು ಬುದ್ಧಿ ಮತ್ತು ಪುನಃ ಎಂಟನೆಯದು ಕ್ಷೇತ್ರಜ್ಞ ಎಂದು ಹೇಳುತ್ತಾರೆ.
12187012a ಚಕ್ಷುರಾಲೋಕನಾಯೈವ ಸಂಶಯಂ ಕುರುತೇ ಮನಃ|
12187012c ಬುದ್ಧಿರಧ್ಯವಸಾಯಾಯ ಕ್ಷೇತ್ರಜ್ಞಃ ಸಾಕ್ಷಿವತ್ ಸ್ಥಿತಃ||
ಚಕ್ಷು ಮೊದಲಾದ ಇಂದ್ರಿಯಗಳು ವಿಷಯಗಳನ್ನು ಗ್ರಹಿಸುತ್ತವೆ. ಮನಸ್ಸು ಸಂಶಯ ತಾಳುತ್ತದೆ. ಬುದ್ಧಿಯು ನಿಶ್ಚಯಿಸುತ್ತದೆ. ಕ್ಷೇತ್ರಜ್ಞನು ಸಾಕ್ಷಿಯು.
12187013a ಊರ್ಧ್ವಂ ಪಾದತಲಾಭ್ಯಾಂ ಯದರ್ವಾಗೂರ್ಧ್ವಂ ಚ ಪಶ್ಯತಿ|
12187013c ಏತೇನ ಸರ್ವಮೇವೇದಂ ವಿದ್ಧ್ಯಭಿವ್ಯಾಪ್ತಮಂತರಮ್||
ಪಾದತಲದಿಂದ ಹಿಡಿದು ಮೇಲಿನವರೆಗಿರುವ ಶರೀರವನ್ನು ಸಾಕ್ಷೀಭೂತ ಚೇತನವು ಮೇಲೆ-ಕೆಳಗೆ ಎಲ್ಲ ಕಡೆಗಳಿಂದ ನೋಡುತ್ತದೆ. ಅದು ಈ ಶರೀರದ ಒಳಗೆ ಮತ್ತು ಹೊರಗೆ ಎಲ್ಲ ಕಡೆ ವ್ಯಾಪ್ತವಾಗಿದೆ. ಇದನ್ನು ನೀನು ಚೆನ್ನಾಗಿ ತಿಳಿದುಕೋ.
12187014a ಪುರುಷೇ ಚೇಂದ್ರಿಯಾಣೀಹ ವೇದಿತವ್ಯಾನಿ ಕೃತ್ಸ್ನಶಃ|
12187014c ತಮೋ ರಜಶ್ಚ ಸತ್ತ್ವಂ ಚ ವಿದ್ಧಿ ಭಾವಾಂಸ್ತದಾಶ್ರಯಾನ್||
ಪುರುಷನು ಈ ಇಂದ್ರಿಯಗಳ, ಮನಸ್ಸು ಮತ್ತು ಬುದ್ಧಿಗಳ ವ್ಯವಹಾರಗಳನ್ನು ಸಂಪೂರ್ಣವಾಗಿ ತಿಳಿದುಕೊಂಡಿರಬೇಕು. ಏಕೆಂದರೆ ಸತ್ತ್ವ-ರಜ-ತಮೋ ಗುಣಗಳು ಇವುಗಳನ್ನೇ ಆಶ್ರಯಿಸಿವೆ ಎಂದು ತಿಳಿ.
12187015a ಏತಾಂ ಬುದ್ಧ್ವಾ ನರೋ ಬುದ್ಧ್ಯಾ ಭೂತಾನಾಮಾಗತಿಂ ಗತಿಮ್|
12187015c ಸಮವೇಕ್ಷ್ಯ ಶನೈಶ್ಚೈವ ಲಭತೇ ಶಮಮುತ್ತಮಮ್||
ಮನುಷ್ಯನು ತನ್ನ ಬುದ್ಧಿಯ ಬಲದಿಂದ ಪ್ರಾಣಿಗಳ ಹುಟ್ಟು-ಸಾವುಗಳ ಸ್ವರೂಪವನ್ನು ತಿಳಿದುಕೊಂಡು ಮೆಲ್ಲಮೆಲ್ಲನೇ ಉತ್ತಮ ಶಾಂತಿಯನ್ನು ಹೊಂದುತ್ತಾನೆ.
12187016a ಗುಣಾನ್ನೇನೀಯತೇ ಬುದ್ಧಿರ್ಬುದ್ಧಿರೇವೇಂದ್ರಿಯಾಣ್ಯಪಿ|
12187016c ಮನಃಷಷ್ಠಾನಿ ಸರ್ವಾಣಿ ಬುದ್ಧ್ಯಭಾವೇ ಕುತೋ ಗುಣಾಃ||
ಸತ್ತ್ವರಜಸ್ತಮೋಗುಣಗಳೇ ಬುದ್ಧಿಯನ್ನು ಪುನಃ ಪುನಃ ವಿಷಯಗಳ ಬಳಿ ಕೊಂಡೊಯ್ಯುತ್ತವೆ. ಬುದ್ಧಿಯೊಂದಿಗೆ ಮನಸ್ಸು-ಇಂದ್ರಿಯಗಳನ್ನೂ ಮತ್ತು ಅವುಗಳ ಸಮಸ್ತ ವೃತ್ತಿಗಳನ್ನೂ ವಿಷಯಗಳತ್ತ ಕೊಂಡೊಯ್ಯುತ್ತವೆ. ಬುದ್ಧಿಯಿಲ್ಲದೇ ಗುಣಗಳು ಹೇಗೆ ಇರಬಲ್ಲವು?
12187017a ಇತಿ ತನ್ಮಯಮೇವೈತತ್ಸರ್ವಂ ಸ್ಥಾವರಜಂಗಮಮ್|
12187017c ಪ್ರಲೀಯತೇ ಚೋದ್ಭವತಿ ತಸ್ಮಾನ್ನಿರ್ದಿಶ್ಯತೇ ತಥಾ||
ಸ್ಥಾವರಜಂಗಮ ಸಹಿತವಾದ ಎಲ್ಲವೂ ಬುದ್ಧಿಯ ಉದಯದಿಂದಲೇ ಉತ್ಪನ್ನವಾಗಿವೆ ಮತ್ತು ಬುದ್ಧಿಯ ಲಯದೊಡನೆಯೇ ಲೀನವಾಗುತ್ತವೆ. ಆದುದರಿಂದಲೇ ಈ ಸಕಲ ಪ್ರಪಂಚವೂ ಬುದ್ಧಿಮಯವೇ ಆಗಿದೆ. ಇದಕ್ಕಾಗಿಯೇ ಶ್ರುತಿಯಲ್ಲಿ ಎಲ್ಲವೂ ಬುದ್ಧಿರೂಪವಾಗಿರುವುದೆಂಬ ನಿರ್ದೇಶವಿದೆ.
12187018a ಯೇನ ಪಶ್ಯತಿ ತಚ್ಚಕ್ಷುಃ ಶೃಣೋತಿ ಶ್ರೋತ್ರಮುಚ್ಯತೇ|
12187018c ಜಿಘ್ರತಿ ಘ್ರಾಣಮಿತ್ಯಾಹೂ ರಸಂ ಜಾನಾತಿ ಜಿಹ್ವಯಾ||
ಬುದ್ಧಿಯು ಯಾವುದರಿಂದ ನೋಡುತ್ತದೆಯೋ ಅದನ್ನು ಕಣ್ಣು, ಮತ್ತು ಯಾವುದರಿಂದ ಕೇಳುತ್ತದೆಯೋ ಅದನ್ನು ಶ್ರೋತ್ರ ಎಂದು ಕರೆಯುತ್ತಾರೆ. ಅದು ಯಾವುದರಿಂದ ಮೂಸುತ್ತದೆಯೋ ಅದನ್ನು ಮೂಗೆಂದೂ ಮತ್ತು ಯಾವುದರಿಂದ ಅದು ರಸವನ್ನು ತಿಳಿಯುತ್ತದೆಯೋ ಅದನ್ನು ನಾಲಿಗೆಯೆಂದೂ ಹೇಳುತ್ತಾರೆ.
12187019a ತ್ವಚಾ ಸ್ಪೃಶತಿ ಚ ಸ್ಪರ್ಶಾನ್ಬುದ್ಧಿರ್ವಿಕ್ರಿಯತೇಽಸಕೃತ್|
12187019c ಯೇನ ಸಂಕಲ್ಪಯತ್ಯರ್ಥಂ ಕಿಂ ಚಿದ್ಭವತಿ ತನ್ಮನಃ||
ಬುದ್ಧಿಯು ತ್ವಚೆಯಿಂದ ಸ್ಪರ್ಶದ ಜ್ಞಾನವನ್ನು ಪಡೆಯುತ್ತದೆ. ಹೀಗೆ ಪುನಃ ಪುನಃ ವಿಕಾರಗೊಳ್ಳುತ್ತಿರುತ್ತದೆ. ಅದು ಯಾವ ಕರಣದಿಂದ ಯಾವ ಅನುಭವವನ್ನು ಪಡೆಯ ಬಯಸುತ್ತದೆಯೋ ಮನಸ್ಸು ಅದರದ್ದೇ ರೂಪವನ್ನು ಧರಿಸುತ್ತದೆ.
12187020a ಅಧಿಷ್ಠಾನಾನಿ ಬುದ್ಧೇರ್ಹಿ ಪೃಥಗರ್ಥಾನಿ ಪಂಚಧಾ|
12187020c ಪಂಚೇಂದ್ರಿಯಾಣಿ ಯಾನ್ಯಾಹುಸ್ತಾನ್ಯದೃಶ್ಯೋಽಧಿತಿಷ್ಠತಿ||
ಬುದ್ಧಿಗೆ ಭಿನ್ನ ಭಿನ್ನ ವಿಷಯಗಳನ್ನು ಗ್ರಹಿಸಲು ಇರುವ ಐದು ಅಧಿಷ್ಠಾನಗಳನ್ನೇ ಪಂಚೇಂದ್ರಿಯಗಳೆಂದು ಕರೆಯುತ್ತಾರೆ. ಅದೃಶ್ಯ ಜೀವಾತ್ಮನು ಇವೆಲ್ಲವುಗಳ ಅಧಿಷ್ಠಾತಾ ಅಥವಾ ಪ್ರೇರಕ ಎನ್ನುತ್ತಾರೆ.
12187021a ಪುರುಷಾಧಿಷ್ಠಿತಾ[5] ಬುದ್ಧಿಸ್ತ್ರಿಷು ಭಾವೇಷು ವರ್ತತೇ|
12187021c ಕದಾ ಚಿಲ್ಲಭತೇ ಪ್ರೀತಿಂ ಕದಾ ಚಿದನುಶೋಚತಿ||
12187022a ನ ಸುಖೇನ ನ ದುಃಖೇನ ಕದಾ ಚಿದಪಿ ವರ್ತತೇ|
ಪುರುಷನಿಂದ ಪ್ರೇರಿತವಾದ ಬುದ್ಧಿಯು ಮೂರು ಭಾವಗಳಲ್ಲಿ ವರ್ತಿಸುತ್ತದೆ. ಒಮ್ಮೊಮ್ಮೆ ಪ್ರೀತಿಯನ್ನು ಹೊಂದುತ್ತದೆ. ಒಮ್ಮೊಮ್ಮೆ ಶೋಕಿಸುತ್ತದೆ. ಇನ್ನು ಕೆಲವೊಮ್ಮೆ ಸುಖ-ದುಃಖಗಳನ್ನು ಅನುಭವಿಸದೇ ಇರುತ್ತದೆ.
12187022c ಏವಂ ನರಾಣಾಂ ಮನಸಿ ತ್ರಿಷು ಭಾವೇಷ್ವವಸ್ಥಿತಾ||
12187023a ಸೇಯಂ ಭಾವಾತ್ಮಿಕಾ ಭಾವಾಂಸ್ತ್ರೀನೇತಾನ್ನಾತಿವರ್ತತೇ|
12187023c ಸರಿತಾಂ ಸಾಗರೋ ಭರ್ತಾ ಮಹಾವೇಲಾಮಿವೋರ್ಮಿಮಾನ್||
ಹೀಗೆ ಮನುಷ್ಯರ ಮನಸ್ಸಿನಲ್ಲಿ ಮೂರು ಭಾವಗಳಿವೆ. ಈ ಭಾವಾತ್ಮಿಕ ಬುದ್ಧಿಯು ನದಿಗಳ ಒಡೆಯ ಊರ್ಮಿಮಂತ ಸಾಗರವು ಕೆಲವೊಮ್ಮೆ[6] ತೀರವನ್ನೂ ಅತಿಕ್ರಮಿಸಿ ಹೋಗುವಂತೆ ಈ ಮೂರು ಭಾವಗಳನ್ನೂ ಅತಿಕ್ರಮಿಸಿ ಹೋಗುತ್ತದೆ.
12187024a ಅತಿಭಾವಗತಾ ಬುದ್ಧಿರ್ಭಾವೇ ಮನಸಿ ವರ್ತತೇ|
12187024c ಪ್ರವರ್ತಮಾನಂ ಹಿ ರಜಸ್ತದ್ಭಾವಮನುವರ್ತತೇ||
ಹೀಗೆ ಭಾವಗಳನ್ನು ಅತಿಕ್ರಮಿಸಿದರೂ ಬುದ್ಧಿಯು ಮನಸ್ಸಿನಲ್ಲಿಯೇ ಇರುತ್ತದೆ. ಮರಳಿ ಬಂದನಂತರ ಬುದ್ಧಿಯು ರಜೋಗುಣದ ಸ್ವಭಾವವನ್ನು ಅನುಸರಿಸುತ್ತದೆ[7].
12187025a ಇಂದ್ರಿಯಾಣಿ ಹಿ ಸರ್ವಾಣಿ ಪ್ರದರ್ಶಯತಿ ಸಾ ಸದಾ[8]|
[9]12187025c ಪ್ರೀತಿಃ ಸತ್ತ್ವಂ ರಜಃ ಶೋಕಸ್ತಮೋ ಮೋಹಶ್ಚ ತೇ ತ್ರಯಃ||
ಸರ್ವ ಇಂದ್ರಿಯಗಳೂ ಅದೇ ಮೂರು ಭಾವಗಳನ್ನು ಪ್ರದರ್ಶಿಸುತ್ತವೆ. ಪ್ರೀತಿಯು ಸತ್ತ್ವಗುಣ. ಶೋಕವು ರಜೋಗುಣ, ಮತ್ತು ಮೋಹವು ತಮೋಗುಣ.
12187026a ಯೇ ಯೇ ಚ ಭಾವಾ ಲೋಕೇಽಸ್ಮಿನ್ಸರ್ವೇಷ್ವೇತೇಷು ತೇ ತ್ರಿಷು|
12187026c ಇತಿ ಬುದ್ಧಿಗತಿಃ ಸರ್ವಾ ವ್ಯಾಖ್ಯಾತಾ ತವ ಭಾರತ||
ಭಾರತ! ಈ ಲೋಕದಲ್ಲಿ ಯಾವ ಯಾವ ಭಾವಗಳಿವೆಯೋ ಅವೆಲ್ಲವೂ ಈ ಮೂರು ಭಾವಗಳಲ್ಲಿಯೇ ಅಂತರ್ಗತವಾಗಿವೆ. ಭಾರತ! ಹೀಗೆ ನಾನು ನಿನಗೆ ಬುದ್ಧಿಯು ಪ್ರವಹಿಸುವ ಮಾರ್ಗಗಳೆಲ್ಲವನ್ನೂ ವರ್ಣಿಸಿದ್ದೇನೆ.
12187027a ಇಂದ್ರಿಯಾಣಿ ಚ ಸರ್ವಾಣಿ ವಿಜೇತವ್ಯಾನಿ ಧೀಮತಾ|
12187027c ಸತ್ತ್ವಂ ರಜಸ್ತಮಶ್ಚೈವ ಪ್ರಾಣಿನಾಂ ಸಂಶ್ರಿತಾಃ ಸದಾ||
12187028a ತ್ರಿವಿಧಾ ವೇದನಾ ಚೈವ ಸರ್ವಸತ್ತ್ವೇಷು ದೃಶ್ಯತೇ|
12187028c ಸಾತ್ತ್ವಿಕೀ ರಾಜಸೀ ಚೈವ ತಾಮಸೀ ಚೇತಿ ಭಾರತ||
ಭಾರತ! ಬುದ್ಧಿವಂತನಾದವನು ಸರ್ವ ಇಂದ್ರಿಯಗಳನ್ನೂ ಗೆಲ್ಲಬೇಕು. ಸತ್ತ್ವ, ರಜ ಮತ್ತು ತಮೋಗುಣಗಳು ಸದಾ ಪ್ರಾಣಿಗಳನ್ನಾಶ್ರಯಿಸಿಯೇ ಇರುತ್ತವೆ. ಈ ಕಾರಣದಿಂದಲೇ ಸರ್ವ ಜೀವಿಗಳಲ್ಲಿ – ಸಾತ್ವಿಕೀ, ರಾಜಸೀ ಮತ್ತು ತಾಮಸೀ – ಎಂಬ ಮೂರು ರೀತಿಯ ಅನುಭೂತಿಗಳು ಕಂಡುಬರುತ್ತವೆ.
12187029a ಸುಖಸ್ಪರ್ಶಃ ಸತ್ತ್ವಗುಣೋ ದುಃಖಸ್ಪರ್ಶೋ ರಜೋಗುಣಃ|
12187029c ತಮೋಗುಣೇನ ಸಂಯುಕ್ತೌ ಭವತೋಽವ್ಯಾವಹಾರಿಕೌ||
ಸುಖಸ್ಪರ್ಶವು ಸತ್ತ್ವಗುಣ. ದುಃಖಸ್ಪರ್ಶವು ರಜೋಗುಣ. ಇವೆರಡೂ ತಮೋಗುಣದಲ್ಲಿ ಸೇರಿದಾಗ ಸುಖ-ದುಃಖಗಳೆರಡೂ ಉಳಿಯುವುದಿಲ್ಲ.
12187030a ತತ್ರ ಯತ್ಪ್ರೀತಿಸಂಯುಕ್ತಂ ಕಾಯೇ ಮನಸಿ ವಾ ಭವೇತ್|
12187030c ವರ್ತತೇ ಸಾತ್ತ್ವಿಕೋ ಭಾವ ಇತ್ಯವೇಕ್ಷೇತ ತತ್ತದಾ||
ಶರೀರ ಅಥವಾ ಮನಸ್ಸಿನಲ್ಲಿ ಪ್ರೀತಿಯುಂಟಾದರೆ ಸಾತ್ತ್ವಿಕ ಭಾವವು ಉದಯವಾಗಿದೆ ಎಂದು ತಿಳಿಯಬೇಕು.
12187031a ಅಥ ಯದ್ದುಃಖಸಂಯುಕ್ತಮತುಷ್ಟಿಕರ[10]ಮಾತ್ಮನಃ|
12187031c ಪ್ರವೃತ್ತಂ ರಜ ಇತ್ಯೇವ ತನ್ನಸಂರಭ್ಯ ಚಿಂತಯೇತ್||
ಆತ್ಮನಲ್ಲಿ ದುಃಖಸಂಯುಕ್ತ ಅಸಂತೃಪ್ತಿಯುಂಟಾದಾಗ ರಜೋಗುಣವು ಪ್ರವೃತ್ತವಾಗಿದೆ ಎಂದು ತಿಳಿಯಬೇಕು. ಅದರ ಕುರಿತು ಚಿಂತಿಸಬಾರದು.
12187032a ಅಥ ಯನ್ಮೋಹಸಂಯುಕ್ತಮವ್ಯಕ್ತಮಿವ ಯದ್ಭವೇತ್|
12187032c ಅಪ್ರತರ್ಕ್ಯಮವಿಜ್ಞೇಯಂ ತಮಸ್ತದುಪಧಾರಯೇತ್||
ಯಾವಾಗ ಮೋಹಸಂಯುಕ್ತವಾದ ಏನೊಂದೂ ತಿಳಿಯದಂತಾಗುತ್ತದೆಯೋ ಆಗ ತಮೋಗುಣವು ವೃದ್ಧಿಯಾಗಿದೆಯೆಂದು ತಿಳಿಯಬೇಕು.
12187033a ಪ್ರಹರ್ಷಃ ಪ್ರೀತಿರಾನಂದಃ ಸುಖಂ ಸಂಶಾಂತಚಿತ್ತತಾ|
12187033c ಕಥಂ ಚಿದಭಿವರ್ತಂತ ಇತ್ಯೇತೇ ಸಾತ್ತ್ವಿಕಾ ಗುಣಾಃ||
ಅತಿ ಹರ್ಷ, ಪ್ರೀತಿ, ಆನಂದ, ಸುಖ, ಮತ್ತು ಪ್ರಸನ್ನತೆಗಳುಂಟಾದಾಗ ಇವು ಸಾತ್ತ್ವಿಕಗುಣಗಳೆನಿಸಿಕೊಳ್ಳುತ್ತವೆ.
12187034a ಅತುಷ್ಟಿಃ ಪರಿತಾಪಶ್ಚ ಶೋಕೋ ಲೋಭಸ್ತಥಾಕ್ಷಮಾ|
12187034c ಲಿಂಗಾನಿ ರಜಸಸ್ತಾನಿ ದೃಶ್ಯಂತೇ ಹೇತ್ವಹೇತುಭಿಃ||
ಕಾರಣದೊಂದಿಗೆ ಅಥವಾ ಅಕಾರಣವಾಗಿ ಅತೃಪ್ತಿ, ಪರಿತಾಪ, ಶೋಕ, ಲೋಭ ಮತ್ತು ಅಕ್ಷಮೆಗಳ ಲಕ್ಷಣಗಳುಂಟಾದರೆ ಅವು ರಜೋಗುಣವನ್ನು ತೋರಿಸುತ್ತವೆ.
12187035a ಅಭಿಮಾನ[11]ಸ್ತಥಾ ಮೋಹಃ ಪ್ರಮಾದಃ ಸ್ವಪ್ನತಂದ್ರಿತಾ|
12187035c ಕಥಂ ಚಿದಭಿವರ್ತಂತೇ ವಿವಿಧಾಸ್ತಾಮಸಾ ಗುಣಾಃ||
ಅಭಿಮಾನ, ಮೋಹ, ಪ್ರಮಾದ, ಸ್ವಪ್ನ ಮತ್ತು ಆಲಸ್ಯ – ಇವುಗಳು ಮನುಷ್ಯನನ್ನು ಹೇಗೋ ಆವರಿಸಿಕೊಳ್ಳುತ್ತವೆ. ಇವು ವಿವಿಧ ತಾಮಸ ಗುಣಗಳು.
12187036a ದೂರಗಂ ಬಹುಧಾಗಾಮಿ ಪ್ರಾರ್ಥನಾಸಂಶಯಾತ್ಮಕಮ್|
12187036c ಮನಃ ಸುನಿಯತಂ ಯಸ್ಯ ಸ ಸುಖೀ ಪ್ರೇತ್ಯ ಚೇಹ ಚ||
ದೂರಹೋಗುವ, ಅನೇಕ ವಿಷಯಗಳ ಕಡೆಗೆ ಹೋಗುವ, ಅನೇಕ ವಸ್ತುಗಳನ್ನು ಬಯಸುವ ಮತ್ತು ಸಂಶಯಾತ್ಮಕ ಮನಸ್ಸನ್ನು ಯಾರು ಸಂಯಮದಲ್ಲಿಟ್ಟುಕೊಳ್ಳುತ್ತಾನೋ ಅವನು ಇಹ ಮತ್ತು ಪರಗಳಲ್ಲೆರಡರಲ್ಲಿಯೂ ಸುಖಿಯಾಗಿರುತ್ತಾನೆ.
12187037a ಸತ್ತ್ವಕ್ಷೇತ್ರಜ್ಞಯೋರೇತದಂತರಂ ಪಶ್ಯ ಸೂಕ್ಷ್ಮಯೋಃ|
12187037c ಸೃಜತೇ ತು ಗುಣಾನೇಕ ಏಕೋ ನ ಸೃಜತೇ ಗುಣಾನ್||
ಸತ್ತ್ವ ಅಥವಾ ಬುದ್ಧಿ ಮತ್ತು ಕ್ಷೇತ್ರಜ್ಞ ಅಥವಾ ಆತ್ಮ ಈ ಸೂಕ್ಷ್ಮತತ್ತ್ವಗಳಲ್ಲಿನ ಅಂತರವನ್ನು ನೋಡು. ಒಂದು ಅನೇಕ ಗುಣಗಳನ್ನು ಹುಟ್ಟಿಸುತ್ತದೆ. ಇನ್ನೊಂದು ಗುಣಗಳನ್ನು ಹುಟ್ಟಿಸುವುದಿಲ್ಲ.
12187038a ಮಶಕೋದುಂಬರೌ ಚಾಪಿ ಸಂಪ್ರಯುಕ್ತೌ ಯಥಾ ಸದಾ|
12187038c ಅನ್ಯೋನ್ಯಮನ್ಯೌ ಚ ಯಥಾ ಸಂಪ್ರಯೋಗಸ್ತಥಾ ತಯೋಃ||
ಅತ್ತಿಯ ಹಣ್ಣಿನಲ್ಲಿ ತಿರುಳು ಮತ್ತು ಹುಳಗಳು ಹೇಗೆ ಏಕತ್ರವಿದ್ದರೂ ಪ್ರತ್ಯೇಕ ಅಸ್ತಿತ್ವಗಳನ್ನು ಹೊಂದಿರುವವೋ ಹಾಗೆ ಬುದ್ಧಿ ಮತ್ತು ಆತ್ಮ ಇವೆರಡೂ ಒಟ್ಟಿಗೇ ಇದ್ದರೂ ಪ್ರತ್ಯೇಕವಾಗಿವೆ.
12187039a ಪೃಥಗ್ಭೂತೌ ಪ್ರಕೃತ್ಯಾ ತೌ ಸಂಪ್ರಯುಕ್ತೌ ಚ ಸರ್ವದಾ|
12187039c ಯಥಾ ಮತ್ಸ್ಯೋ ಜಲಂ ಚೈವ ಸಂಪ್ರಯುಕ್ತೌ ತಥೈವ ತೌ||
ನೀರು ಮತ್ತು ಮೀನು ಪ್ರತ್ಯೇಕವಾದರೂ ಹೇಗೆ ಒಂದಕ್ಕೊಂದು ಸೇರಿಕೊಂಡಿರುವವೋ ಹಾಗೆ ಬುದ್ಧಿ ಮತ್ತು ಆತ್ಮಗಳು ಸ್ವಭಾವತಃ ಪ್ರತ್ಯೇಕವಾಗಿದ್ದರೂ ಸದಾ ಒಂದಕ್ಕೊಂದು ಸೇರಿಕೊಂಡಿರುತ್ತವೆ[12].
12187040a ನ ಗುಣಾ ವಿದುರಾತ್ಮಾನಂ ಸ ಗುಣಾನ್ವೇತ್ತಿ ಸರ್ವಶಃ|
12187040c ಪರಿದ್ರಷ್ಟಾ ಗುಣಾನಾಂ ಚ ಸಂಸ್ರಷ್ಟಾ ಮನ್ಯತೇ ಸದಾ||
ಸತ್ತ್ವಾದಿ ಗುಣಗಳು ಜಡವಾಗಿರುವುದರಿಂದ ಅವು ಆತ್ಮನನ್ನು ತಿಳಿಯಲಾರವು. ಆದರೆ ಆತ್ಮವು ಚೇತನವು. ಆದುದರಿಂದ ಅದು ಗುಣಗಳನ್ನು ಚೆನ್ನಾಗಿ ತಿಳಿದಿರುತ್ತದೆ. ಆತ್ಮವು ಗುಣಗಳಿಗೆ ಸಾಕ್ಷಿಯಾಗಿ ಅವುಗಳಿಂದ ಸರ್ವಥಾ ಭಿನ್ನವಾಗಿದ್ದರೂ ಅದು ತನ್ನನ್ನು ಗುಣಗಳಿಂದ ಕೂಡಿದವನೆಂದು ಭಾವಿಸುತ್ತದೆ.
12187041a ಇಂದ್ರಿಯೈಸ್ತು ಪ್ರದೀಪಾರ್ಥಂ ಕುರುತೇ ಬುದ್ಧಿಸಪ್ತಮೈಃ|
12187041c ನಿರ್ವಿಚೇಷ್ಟೈರಜಾನದ್ಭಿಃ ಪರಮಾತ್ಮಾ ಪ್ರದೀಪವತ್||
ಗಡಿಗೆಯಲ್ಲಿಟ್ಟ ದೀಪವು ಗಡಿಗೆಯ ರಂಧ್ರಗಳ ಮೂಲಕ ಹೇಗೆ ಹೊರಗಿನ ಪದಾರ್ಥಗಳನ್ನು ಪ್ರಕಾಶಗೊಳಿಸುತ್ತದೆಯೋ ಹಾಗೆ ಮನುಷ್ಯನ ಶರೀರದಲ್ಲಿರುವ ಚೈತನ್ಯರೂಪ ಆತ್ಮನು ಚೇಷ್ಟಾರಹಿತವಾದ ಮತ್ತು ಜ್ಞಾನಶೂನ್ಯವಾದ ಪಂಚೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ – ಈ ಏಳು ರಂಧ್ರಗಳ ಮೂಲಕ ಹೊರಗಿನ ಎಲ್ಲ ಪದಾರ್ಥಗಳನ್ನೂ ಅನುಭವಿಸುತ್ತಾನೆ.
12187042a ಸೃಜತೇ ಹಿ ಗುಣಾನ್ಸತ್ತ್ವಂ ಕ್ಷೇತ್ರಜ್ಞಃ ಪರಿಪಶ್ಯತಿ|
12187042c ಸಂಪ್ರಯೋಗಸ್ತಯೋರೇಷ ಸತ್ತ್ವಕ್ಷೇತ್ರಜ್ಞಯೋರ್ಧ್ರುವಃ||
ಬುದ್ಧಿಯು ಗುಣಗಳನ್ನು ಸೃಷ್ಟಿಸುತ್ತಿರುತ್ತದೆ[13] ಮತ್ತು ಆತ್ಮವು ಅದನ್ನು ನೋಡುತ್ತಿರುತ್ತದೆ. ಬುದ್ಧಿ ಮತ್ತು ಆತ್ಮಗಳ ಈ ಸಂಯೋಗವು ಅನಾದಿಯು.
12187043a ಆಶ್ರಯೋ ನಾಸ್ತಿ ಸತ್ತ್ವಸ್ಯ ಕ್ಷೇತ್ರಜ್ಞಸ್ಯ ಚ ಕಶ್ಚನ|
12187043c ಸತ್ತ್ವಂ ಮನಃ ಸಂಸೃಜತಿ ನ ಗುಣಾನ್ವೈ ಕದಾ ಚನ||
ಬುದ್ಧಿಗೆ ಆತ್ಮನನ್ನು ಬಿಟ್ಟು ಬೇರೆ ಆಶ್ರಯವಿಲ್ಲ. ಕ್ಷೇತ್ರಜ್ಞನಿಗೂ ಬುದ್ಧಿಯನ್ನು ಬಿಟ್ಟು ಬೇರೆ ಆಶ್ರಯವಿಲ್ಲ. ಬುದ್ಧಿಯು ಮನಸ್ಸಿನೊಡನೆ ನಿಕಟ ಸಂಬಂಧವನ್ನು ಹೊಂದಿದೆ. ಆದರೆ ಬುದ್ಧಿಗೆ ಗುಣಗಳೊಡನೆ ನೇರ ಸಂಬಂಧವಿಲ್ಲ.
12187044a ರಶ್ಮೀಂಸ್ತೇಷಾಂ ಸ ಮನಸಾ ಯದಾ ಸಮ್ಯಙ್ನಿಯಚ್ಚತಿ|
12187044c ತದಾ ಪ್ರಕಾಶತೇಽಸ್ಯಾತ್ಮಾ ಘಟೇ ದೀಪೋ ಜ್ವಲನ್ನಿವ||
ಬುದ್ಧಿಯ ರಶ್ಮಿಗಳಂತಿರುವ ಇಂದ್ರಿಯಗಳನ್ನು ಮನಸ್ಸಿನಿಂದ ನಿಯಂತ್ರಿಸಿದಾಗ ಘಟಸ್ಥವಾಗಿರುವ ದೀಪವು ಪ್ರಕಾಶಿಸುವಂತೆ ಆತ್ಮನು ಪ್ರಕಾಶಿಸುತ್ತಾನೆ.
12187045a ತ್ಯಕ್ತ್ವಾ ಯಃ ಪ್ರಾಕೃತಂ ಕರ್ಮ ನಿತ್ಯಮಾತ್ಮರತಿರ್ಮುನಿಃ|
12187045c ಸರ್ವಭೂತಾತ್ಮಭೂತಃ ಸ್ಯಾತ್ಸ ಗಚ್ಚೇತ್ಪರಮಾಂ ಗತಿಮ್||
ಪ್ರಕೃತಿಸಂಬಂಧ ಕರ್ಮಗಳನ್ನು ತ್ಯಜಿಸಿ ನಿತ್ಯವೂ ಆತ್ಮರತಿಯಾಗಿರುವ ಮುನಿಯು ಸರ್ವಭೂತಾತ್ಮನಾಗಿ ಪರಮ ಗತಿಯನ್ನು ಪಡೆಯುತ್ತಾನೆ.
12187046a ಯಥಾ ವಾರಿಚರಃ ಪಕ್ಷೀ ಲಿಪ್ಯಮಾನೋ ನ ಲಿಪ್ಯತೇ|
12187046c ಏವಮೇವ ಕೃತಪ್ರಜ್ಞೋ ಭೂತೇಷು ಪರಿವರ್ತತೇ||
ನೀರಿನಲ್ಲಿ ನಡೆಯುವ ಪಕ್ಷಿಯು ಹೇಗೆ ನೀರಿನಿಂದ ನೆನೆಯುವುದಿಲ್ಲವೋ ಹಾಗೆ ಕೃತಪ್ರಜ್ಞನು ಪ್ರಾಣಿಗಳ ಮಧ್ಯದಲ್ಲಿದ್ದರೂ ನಿರ್ಲಿಪ್ತನಾಗಿ ವರ್ತಿಸುತ್ತಾನೆ.
12187047a ಏವಂಸ್ವಭಾವಮೇವೈತತ್ ಸ್ವಬುದ್ಧ್ಯಾ ವಿಹರೇನ್ನರಃ|
12187047c ಅಶೋಚನ್ನಪ್ರಹೃಷ್ಯಂಶ್ಚ ಚರೇದ್ವಿಗತಮತ್ಸರಃ||
ಆತ್ಮತತ್ತ್ವವು ಹೀಗೆ ನಿರ್ಲಿಪ್ತ ವಿಶುದ್ಧ ಸ್ವಭಾವದ್ದೆಂದು ಬುದ್ಧಿಯ ಮೂಲಕ ತಿಳಿದು ನರನು ಶೋಕ-ಹರ್ಷ-ಮಾತ್ಸರ್ಯರಹಿತನಾಗಿ ಸರ್ವತ್ರ ಸಮಭಾವದಿಂದಿರಬೇಕು.
12187048a ಸ್ವಭಾವಸಿದ್ಧ್ಯಾ ಸಂಸಿದ್ಧಾನ್ಸ[14] ನಿತ್ಯಂ ಸೃಜತೇ ಗುಣಾನ್|
12187048c ಊರ್ಣನಾಭಿರ್ಯಥಾ ಸ್ರಷ್ಟಾ ವಿಜ್ಞೇಯಾಸ್ತಂತುವದ್ಗುಣಾಃ||
ಜೇಡರ ಹುಳವು ಹೇಗೆ ತನ್ನ ಸುತ್ತಲೂ ಬಲೆಯನ್ನು ಹೆಣೆದುಕೊಂಡು ಅದರ ಮಧ್ಯದಲ್ಲಿ ಕುಳಿತುಕೊಳ್ಳುವುದೋ ಹಾಗೆ ಅತ್ಮನು ತನ್ನ ಸ್ವಭಾವಯುಕ್ತನಾಗಿ ನಿತ್ಯವೂ ಗುಣಗಳನ್ನು ಸೃಷ್ಟಿಸುತ್ತಿರುತ್ತಾನೆ. ಗುಣಗಳೇ ಆ ಬಲೆಯ ತಂತುಗಳೆಂದು ತಿಳಿಯಬೇಕು.
12187049a ಪ್ರಧ್ವಸ್ತಾ ನ ನಿವರ್ತಂತೇ ನಿವೃತ್ತಿರ್ನೋಪಲಭ್ಯತೇ|
12187049c ಪ್ರತ್ಯಕ್ಷೇಣ ಪರೋಕ್ಷಂ ತದನುಮಾನೇನ ಸಿಧ್ಯತಿ||
12187050a ಏವಮೇಕೇ ವ್ಯವಸ್ಯಂತಿ ನಿವೃತ್ತಿರಿತಿ ಚಾಪರೇ|
12187050c ಉಭಯಂ ಸಂಪ್ರಧಾರ್ಯೈತದಧ್ಯವಸ್ಯೇದ್ಯಥಾಮತಿ||
ಆತ್ಮಸಾಕ್ಷಾತ್ಕಾರವಾದಾಗ ಗುಣಗಳು ನಷ್ಟವಾಗಿಬಿಡುತ್ತದೆಯಾದರೂ ಅವು ಸರ್ವಥಾ ನಿರ್ವೃತ್ತಗೊಳ್ಳುವುದಿಲ್ಲ. ಏಕೆಂದರೆ ಅವುಗಳ ನಿವೃತ್ತಿಯನ್ನು ಪ್ರತ್ಯಕ್ಷ ನೋಡಲಿಕ್ಕಾಗುವುದಿಲ್ಲ. ಯಾವುದು ಪರೋಕ್ಷವೋ ಅದನ್ನು ಕೇವಲ ಅನುಮಾನದಿಂದಲೇ ಸಿದ್ಧಗೊಳಿಸಬೇಕಾಗುತ್ತದೆ. ಇದು ಒಂದು ಶ್ರೇಣಿಯ ವಿದ್ವಾಂಸರ ನಿಶ್ಚಯವು. ಇತರರು ಆತ್ಮಸಾಕ್ಷಾತ್ಕಾರದೊಂದಿಗೆ ಗುಣಗಳು ಸರ್ವಥಾ ನಿವೃತ್ತಿಯಾಗುತ್ತವೆ ಎಂದು ಅಭಿಪ್ರಾಯಪಡುತ್ತಾರೆ. ಈ ಎರಡೂ ಮತಗಳ ಕುರಿತು ಚೆನ್ನಾಗಿ ವಿಚಾರಮಾಡಿಯೇ ತನ್ನ ಬುದ್ಧಿಯ ಅನುಸಾರ ಯಥಾರ್ಥ ವಸ್ತುವನ್ನು ನಿಶ್ಚಯಿಸಬೇಕು.
12187051a ಇತೀಮಂ ಹೃದಯಗ್ರಂಥಿಂ ಬುದ್ಧಿಭೇದಮಯಂ ದೃಢಮ್|
12187051c ವಿಮುಚ್ಯ ಸುಖಮಾಸೀತ ನ ಶೋಚೇಚ್ಚಿನ್ನಸಂಶಯಃ||
ಬುದ್ಧಿಯು ಕಲ್ಪಿಸಿದ ಈ ಭೇದವೇ ಹೃದಯದ ಸುದೃಢ ಗಂಟು. ಅದನ್ನು ಬಿಚ್ಚಿ ಸಂಶಯರಹಿತನಾದ ಜ್ಞಾನೀ ಪುರುಷನು ಸುಖದಿಂದಿರುತ್ತಾನೆ. ಎಂದೂ ಶೋಕಿಸುವುದಿಲ್ಲ.
12187052a ಮಲಿನಾಃ ಪ್ರಾಪ್ನುಯುಃ ಶುದ್ಧಿಂ ಯಥಾ ಪೂರ್ಣಾಂ ನದೀಂ ನರಾಃ|
12187052c ಅವಗಾಹ್ಯ ಸುವಿದ್ವಂಸೋ ವಿದ್ಧಿ ಜ್ಞಾನಮಿದಂ ತಥಾ||
ಶರೀರವು ಕೊಳೆಯಾದಾಗ ಮನುಷ್ಯರು ತುಂಬಿದ ನದಿಯಲ್ಲಿ ಹೇಗೆ ಶುದ್ಧಿಯನ್ನು ಹೊಂದುತ್ತಾರೋ ಹಾಗೆ ಅಜ್ಞಾನಿಗಳು ಜ್ಞಾನಮಯವಾದ ಈ ನದಿಯಲ್ಲಿ ಅವಗಾಹನಮಾಡಿದರೆ ಶುದ್ಧರೂ ಜ್ಞಾನಸಂಪನ್ನರೂ ಆಗುತ್ತಾರೆಂದು ತಿಳಿ.
12187053a ಮಹಾನದೀಂ ಹಿ ಪಾರಜ್ಞಸ್ತಪ್ಯತೇ ನ ತರನ್ಯಥಾ|
12187053c ಏವಂ ಯೇ ವಿದುರಧ್ಯಾತ್ಮಂ ಕೈವಲ್ಯಂ ಜ್ಞಾನಮುತ್ತಮಮ್||
ಮಹಾನದಿಯ ಮತ್ತೊಂದು ದಡಕ್ಕೆ ಹೇಗೆ ಹೋಗಬೇಕೆಂಬುದು ತಿಳಿದಿದ್ದರೂ ಅದನ್ನು ದಾಟಲು ನೌಕೆ-ನಾವಿಕನ ಸಾಧನವು ಬೇಕಾಗುತ್ತದೆ. ಸಾಧನಗಳು ದೊರೆಯುವವರೆಗೆ ಪರಿತಪಿಸುತ್ತಲೇ ಇರುತ್ತಾನೆ. ಆದರೆ ತತ್ತ್ವಜ್ಞನು ಸಂಸಾರಸಾಗರವನ್ನು ದಾಟಲು ಯಾವುದೇ ಬಾಹ್ಯ ಸಾಧನಕ್ಕಾಗಿ ಕಾಯಬೇಕಾಗುವುದಿಲ್ಲ. ತತ್ತ್ವವನ್ನು ತಿಳಿದಮಾತ್ರದಿಂದಲೇ ಅವನು ಸಂಸಾರಸಾಗರವನ್ನು ದಾಟಿಬಿಡುತ್ತಾನೆ. ಸಂಸಾರದ ಸರಪಳಿಗಳು ತಾವಾಗಿಯೇ ಕಳಚಿಬೀಳುತ್ತವೆ. ತತ್ತ್ವಜ್ಞಾನವು ಸ್ವಯಂ ಫಲಸ್ವರೂಪವೇ ಆಗಿದೆ.
[15]12187054a ಏತಾಂ ಬುದ್ಧ್ವಾ ನರಃ ಸರ್ವಾಂ ಭೂತಾನಾಮಾಗತಿಂ ಗತಿಮ್|
12187054c ಅವೇಕ್ಷ್ಯ ಚ ಶನೈರ್ಬುದ್ಧ್ಯಾ ಲಭತೇ ಶಂ ಪರಂ ತತಃ||
ಈ ರೀತಿ ಬುದ್ಧಿಪೂರ್ವಕವಾಗಿ ಸರ್ವ ಭೂತಗಳ ಹುಟ್ಟು-ಸಾವುಗಳ ಕುರಿತು ವಿಚಾರಿಸಿದರೆ ಮೆಲ್ಲಮೆಲ್ಲನೇ ಅವನಿಗೆ ಶಾಂತಿಯುಂಟಾಗುತ್ತದೆ.
12187055a ತ್ರಿವರ್ಗೋ ಯಸ್ಯ ವಿದಿತಃ ಪ್ರಾಗ್ಜ್ಯೋತಿಃ ಸ ವಿಮುಚ್ಯತೇ[16]|
12187055c ಅನ್ವಿಷ್ಯ ಮನಸಾ ಯುಕ್ತಸ್ತತ್ತ್ವದರ್ಶೀ ನಿರುತ್ಸುಕಃ||
ತ್ರಿವರ್ಗವನ್ನು ತಿಳಿದಿರುವ, ಮೊದಲೇ ಇವುಗಳನ್ನು ಪರಿತ್ಯಜಿಸಿದ ಮತ್ತು ಮನಸ್ಸಿನ ಮೂಲಕ ಆತ್ಮತತ್ತ್ವವನ್ನು ಅನುಸಂಧಾನ ಮಾಡಿ ಯೋಗಯುಕ್ತನಾಗಿರುವ ಹಾಗೂ ಆತ್ಮಕ್ಕಿಂತ ಭಿನ್ನ ವಸ್ತುಗಳಲ್ಲಿ ನಿರುತ್ಸಾಹಿಯಾಗಿರುವವನು ತತ್ತ್ವದರ್ಶಿಯು.
12187056a ನ ಚಾತ್ಮಾ ಶಕ್ಯತೇ ದ್ರಷ್ಟುಮಿಂದ್ರಿಯೇಷು ವಿಭಾಗಶಃ|
12187056c ತತ್ರ ತತ್ರ ವಿಸೃಷ್ಟೇಷು ದುರ್ಜಯೇಷ್ವಕೃತಾತ್ಮಭಿಃ||[17]
ಮನಸ್ಸನ್ನು ತನ್ನ ವಶದಲ್ಲಿಟ್ಟುಕೊಂಡಿರದ, ಭಿನ್ನ ಭಿನ್ನ ವಿಷಯಗಳ ಕುರಿತು ಪ್ರೇರಿತರಾದ ಮತ್ತು ಇಂದ್ರಿಯಗಳನ್ನು ನಿಯಂತ್ರಿಸಲು ಶಕ್ಯರಾಗದವರು ಆತ್ಮಸಾಕ್ಷಾತ್ಕಾರಮಾಡಿಕೊಳ್ಳಲು ಸಮರ್ಥರಾಗುವುದಿಲ್ಲ.
12187057a ಏತದ್ಬುದ್ಧ್ವಾ ಭವೇದ್ಬುದ್ಧಃ ಕಿಮನ್ಯದ್ಬುದ್ಧಲಕ್ಷಣಮ್|
12187057c ವಿಜ್ಞಾಯ ತದ್ಧಿ ಮನ್ಯಂತೇ ಕೃತಕೃತ್ಯಾ ಮನೀಷಿಣಃ||
ಇದನ್ನು ತಿಳಿದು ಅದರಂತೆ ಮನಸ್ಸು-ಇಂದ್ರಿಯಗಳನ್ನು ವಶಪಡಿಸಿಕೊಂಡವನು ಬುದ್ಧನಾಗುತ್ತಾನೆ. ಜ್ಞಾನಿಯ ಲಕ್ಷಣವು ಬೇರೆ ಯಾವುದಿದೆ? ಮನೀಷಿಣರು ಇದನ್ನು ತಿಳಿದುಕೊಂಡರೇ ಕೃತಕೃತ್ಯರಾದೆವೆಂದು ಭಾವಿಸುತ್ತಾರೆ.
12187058a ನ ಭವತಿ ವಿದುಷಾಂ ತತೋ ಭಯಂ
ಯದವಿದುಷಾಂ ಸುಮಹದ್ಭಯಂ ಭವೇತ್|
12187058c ನ ಹಿ ಗತಿರಧಿಕಾಸ್ತಿ ಕಸ್ಯ ಚಿತ್
ಸತಿ ಹಿ ಗುಣೇ ಪ್ರವದಂತ್ಯತುಲ್ಯತಾಮ್||
ಅಜ್ಞಾನಿಗಳಿಗಿರುವ ಮಹಾಭಯವು ಜ್ಞಾನಿಗಳಿಗಿರುವುದಿಲ್ಲ. ಆತ್ಮಜ್ಞಾನವಾದಕೂಡಲೇ ಎಲ್ಲರಿಗೂ ಒಂದೇ ವಿಧದ ಮುಕ್ತಿಯುಂಟಾಗುತ್ತದೆ. ಒಬ್ಬರಿಗೆ ಹೆಚ್ಚಿನ ಅಥವಾ ಒಬ್ಬರಿಗೆ ಕಡಿಮೆ ಉತ್ಕೃಷ್ಟತೆಯ ಗತಿಯು ದೊರೆಯುವುದಿಲ್ಲ. ಆತ್ಮಜ್ಞಾನಿಗಳೆಲ್ಲರೂ ತ್ರಿಗುಣಾತೀತರಾಗುತ್ತಾರೆ. ಗುಣಗಳ ಸಂಬಂಧವಿರುವವರೆಗೆ ತಾರತಮ್ಯ. ಗುಣಗಳನ್ನು ಮೀರಿದರೆ ಸಾಮ್ಯ.
12187059a ಯತ್ಕರೋತ್ಯನಭಿಸಂಧಿಪೂರ್ವಕಂ
ತಚ್ಚ ನಿರ್ಣುದತಿ ಯತ್ಪುರಾ ಕೃತಮ್|
12187059c ನಾಪ್ರಿಯಂ ತದುಭಯಂ ಕುತಃ ಪ್ರಿಯಂ
ತಸ್ಯ ತಜ್ಜನಯತೀಹ ಕುರ್ವತಃ||
ನಿಷ್ಕಾಮಭಾವದಿಂದ ಮಾಡುವ ಕರ್ಮಫಲಗಳು ಕರ್ತೃವು ಹಿಂದೆ ಮಾಡಿದ ಪಾಪಕರ್ಮಗಳ ಫಲಗಳೆಲ್ಲವನ್ನೂ ತೊಳೆದುಹಾಕುತ್ತದೆ. ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳು ಅವನಿಗೆ ಪ್ರಿಯವಾದ ಅಥವಾ ಅಪ್ರಿಯವಾದ ಫಲಗಳನ್ನು ಕೊಡುವುದಿಲ್ಲ.
12187060a ಲೋಕ ಆತುರಜನಾನ್ವಿರಾವಿಣಸ್
ತತ್ತದೇವ ಬಹು ಪಶ್ಯ ಶೋಚತಃ|
12187060c ತತ್ರ ಪಶ್ಯ ಕುಶಲಾನಶೋಚತೋ
ಯೇ ವಿದುಸ್ತದುಭಯಂ ಪದಂ ಸದಾ[18]||
ಲೋಕದಲ್ಲಿ ಆತುರಜನರು ಪ್ರಿಯವಾದುದನ್ನು ಕಳೆದುಕೊಂಡು ಬಹುವಾಗಿ ಶೋಕಿಸುವುದನ್ನು ನೋಡು. ಇನ್ನೊಂದೆಡೆ ಶೋಕಿಸದೇ ಇರುವ ಕುಶಲರನ್ನು ನೋಡು. ಅಜ್ಞಾನಿಗಳು ಶೋಕಪಡುವುದಕ್ಕೆ ಕಾರಣ ಮತ್ತು ಸುಜ್ಞಾನಿಗಳು ಶೋಕಪಡದೇ ಇರಲು ಕಾರಣ – ಇವೆರಡನ್ನೂ ಯಾರು ಸತತ ಚಿಂತನೆಯಿಂದ ತಿಳಿದುಕೊಳ್ಳುವರೋ ಅವರು ಉತ್ತಮ ಪದವನ್ನು ಪಡೆಯುತ್ತಾರೆ.”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಆಧ್ಯಾತ್ಮಕಥನೇ ಸಪ್ತಾಶೀತ್ಯಧಿಕಶತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಆಧ್ಯಾತ್ಮಕಥನ ಎನ್ನುವ ನೂರಾಎಂಭತ್ತೇಳನೇ ಅಧ್ಯಾಯವು.
[1] ಇದರ ನಂತರ ಇನ್ನೊಂದು ಅಧಿಕ ಶ್ಲೋಕವಿದೆ: ಕೃತಃ ಸೃಷ್ಟಮಿದಂ ವಿಶ್ವಂ ಬ್ರಹ್ಮನ್ ಸ್ಥಾವರಜಂಗಮಮ್| ಪ್ರಲಯೇ ಕಥಮಭ್ಯೇತಿ ತನ್ಮೇ ವಕ್ತುಮಿಹಾರ್ಹಸಿ|| (ಗೀತಾ ಪ್ರೆಸ್).
[2] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಸೃಷ್ಟಿಪ್ರಲಯಸಂಯುಕ್ತಮಾಚಾರ್ಯಃ ಪರಿದರ್ಶಿತಮ್| (ಗೀತಾ ಪ್ರೆಸ್).
[3] ವಾಯೋಃ ಸ್ಪರ್ಶಸ್ತಥಾ ಚೇಷ್ಟಾ ತ್ವಕ್ಚೈವ ತ್ರಿತಯಂ ಸ್ಮೃತಮ್| (ಗೀತಾ ಪ್ರೆಸ್).
[4] ಪಾಕಸ್ತ್ರಿವಿಧಂ (ಗೀತಾ ಪ್ರೆಸ್).
[5] ಪುರುಷೇ ತಿಷ್ಠತೀ (ಗೀತಾ ಪ್ರೆಸ್).
[6] ಸಮಾಧಿಸ್ಥಿತಿಯಲ್ಲಿ ಬುದ್ಧಿಯು ಗುಣ-ಭಾವಗಳನ್ನು ಅತಿಕ್ರಮಿಸಿ ಹೋಗುತ್ತದೆ (ಗೀತಾ ಪ್ರೆಸ್/ಭಾರತ ದರ್ಶನ).
[7] ಹೀಗೆ ಸಮಾಧಿಸ್ಥಿತಿಯಲ್ಲಿ ಸುಖ-ದುಃಖ-ಮೋಹಗಳೆಂಬ ಅಥವಾ ಸತ್ತ್ವ-ರಜಸ್ಸು-ತಮಸ್ಸುಗಳೆಂಬ ಮೂರು ಭಾಗಗಳನ್ನು ಅತಿಕ್ರಮಿಸಿ ಹೋದಾಗಲೂ ಬುದ್ಧಿಯು ಭಾವಾತ್ಮಕ ಮನಸ್ಸಿನಲ್ಲಿ ಸೂಕ್ಷ್ಮರೂಪದಲ್ಲಿ ಇದ್ದೇ ಇರುತ್ತದೆ. ಸಮಾಧಿಯಿಂದ ಎದ್ದ ನಂತರ ಪ್ರವೃತ್ತ್ಯಾತ್ಮಕವಾದ ರಜೋಗುಣವು ಬುದ್ಧಿಭಾವವನ್ನು ಅನುಸರಿಸುತ್ತದೆ (ಭಾರತ ದರ್ಶನ).
[8] ಪ್ರವರ್ತಯತಿ ಸಾ ತದಾ (ಭಾರತ ದರ್ಶನ/ಗೀತಾ ಪ್ರೆಸ್).
[9] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ತತಃ ಸತ್ತ್ವಂ ತಮೋಭಾವಃ ಪ್ರೀತಿಯೋಗಾತ್ಪ್ರವರ್ತತೇ| (ಭಾರತ ದರ್ಶನ/ಗೀತಾ ಪ್ರೆಸ್).
[10] ಅಪ್ರೀತಿಕರ (ಭಾರತ ದರ್ಶನ/ಗೀತಾ ಪ್ರೆಸ್).
[11] ಅವಮಾನ (ಭಾರತ ದರ್ಶನ/ಗೀತಾ ಪ್ರೆಸ್).
[12] ನೀರಿಲ್ಲದೇ ಹೇಗೆ ಮೀನು ಇರುವುದಿಲ್ಲವೋ ಹಾಗೆ ಬುದ್ಧಿಗೆ ಆಧಾರಭೂತವಾದ ಆತ್ಮನಿಲ್ಲದಿದ್ದರೆ ಬುದ್ಧಿಯು ಉಳಿಯುವುದಿಲ್ಲ (ಭಾರತ ದರ್ಶನ).
[13] ಬುದ್ಧಿಯು ಗುಣಗಳನ್ನು ಸೃಷ್ಟಿಸುತ್ತವೆ ಎನ್ನುವುದು ಮುಂದೆ ಬುದ್ಧಿಗೆ ಗುಣಗಳೊಡನೆ ನೇರ ಸಂಬಂಧವಿಲ್ಲ ಎನ್ನುವ ಮುಂದಿನ ಶ್ಲೋಕದ ಅರ್ಥಕ್ಕೆ ವಿರುದ್ಧವಾಗಿರುವಂತೆ ತೋರುತ್ತದೆ. ಆದರೆ ಗೀತಾ ಪ್ರೆಸ್ ಮತ್ತು ಭಾರತ ದರ್ಶನ ಎರಡರಲ್ಲಿಯೂ ಇಲ್ಲಿ ಕೊಟ್ಟಿರುವ ಹಾಗೆಯೇ ಅನುವಾದವನ್ನು ಮಾಡಿದ್ದಾರೆ. ಬಹುಷಃ ಇಲ್ಲಿ ಕ್ಷೇತ್ರಜ್ಞನು ಗುಣಗಳನ್ನು ಸೃಷ್ಟಿಸುತ್ತಾನೆ ಎನ್ನುವುದು ಸರಿಯೆಂದು ತೋರುತ್ತದೆ. ಏಕೆಂದರೆ ಇದೇ ಅಧ್ಯಾಯದ ೪೮ ನೇ ಶ್ಲೋಕದ ಪ್ರಕಾರ ಆತ್ಮವೇ ಗುಣಗಳನ್ನು ಜೇಡರ ಬಲೆಯಂತೆ ಹೆಣೆಯುತ್ತಾನೆ ಎಂದಿದೆ.
[14] ಸ್ವಭಾವಯುಕ್ತ್ಯಾ ಯುಕ್ತಸ್ತು (ಭಾರತ ದರ್ಶನ/ಗೀತಾ ಪ್ರೆಸ್).
[15] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಏವಂ ಯೇ ವಿದುರಾಧ್ಯಾತ್ಮಂ ಕೇವಲಂ ಜ್ಞಾನಮುತ್ತಮಮ್| (ಭಾರತ ದರ್ಶನ/ಗೀತಾ ಪ್ರೆಸ್).
[16] ಪ್ರೇಕ್ಷ್ಯ ಯಶ್ಚ ವಿಮುಂಚತಿ| (ಭಾರತ ದರ್ಶನ/ಗೀತಾ ಪ್ರೆಸ್).
[17] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಲೋಕಮಾತುರಮಸೂಯತೇಜನಸ್ತಸ್ಯ ತಜ್ಜನಯತೀಹ ಸರ್ವತಃ| (ಭಾರತ ದರ್ಶನ/ಗೀತಾ ಪ್ರೆಸ್).
[18] ಸತಾಂ (ಭಾರತ ದರ್ಶನ/ಗೀತಾ ಪ್ರೆಸ್).