ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೧೮೬
ಶಿಷ್ಟಾಚಾರದ ವರ್ಣನೆ, ಪಾಪವನ್ನು ಮುಚ್ಚಿಡುವುದರ ಹಾನಿ ಮತ್ತು ಧರ್ಮದ ಪ್ರಶಂಸೆ (೧-೩೨).
12186001 ಯುಧಿಷ್ಠಿರ ಉವಾಚ|
12186001a ಆಚಾರಸ್ಯ ವಿಧಿಂ ತಾತ ಪ್ರೋಚ್ಯಮಾನಂ ತ್ವಯಾನಘ|
12186001c ಶ್ರೋತುಮಿಚ್ಚಾಮಿ ಧರ್ಮಜ್ಞ ಸರ್ವಜ್ಞೋ ಹ್ಯಸಿ ಮೇ ಮತಃ||
ಯುಧಿಷ್ಠಿರನು ಹೇಳಿದನು: “ತಾತ! ಅನಘ! ಧರ್ಮಜ್ಞ! ನೀನು ಹೇಳಿದ ಆಚಾರದ ವಿಧಿಯನ್ನು ತಿಳಿಯಬಯಸುತ್ತೇನೆ. ನನ್ನ ಪ್ರಕಾರ ನೀನು ಸರ್ವಜ್ಞನು.”
12186002 ಭೀಷ್ಮ ಉವಾಚ|
12186002a ದುರಾಚಾರಾ ದುರ್ವಿಚೇಷ್ಟಾ ದುಷ್ಪ್ರಜ್ಞಾಃ ಪ್ರಿಯಸಾಹಸಾಃ|
12186002c ಅಸಂತೋ ಹ್ಯಭಿವಿಖ್ಯಾತಾಃ ಸಂತಶ್ಚಾಚಾರಲಕ್ಷಣಾಃ||
ಭೀಷ್ಮನು ಹೇಳಿದನು: “ದುರಾಚಾರಿಗಳು, ದುರ್ವಿಚೇಷ್ಟರು, ದುಷ್ಪ್ರಜ್ಞರು ಮತ್ತು ಸಾಹಸಪ್ರಿಯರು ಅಸಂತರೆಂದು ವಿಖ್ಯಾತರಾಗುತ್ತಾರೆ. ಸದಾಚಾರವೇ ಸಂತರ ಲಕ್ಷಣ.
12186003a ಪುರೀಷಂ ಯದಿ ವಾ ಮೂತ್ರಂ ಯೇ ನ ಕುರ್ವಂತಿ ಮಾನವಾಃ|
12186003c ರಾಜಮಾರ್ಗೇ ಗವಾಂ ಮಧ್ಯೇ ಧಾನ್ಯಮಧ್ಯೇ ಚ ತೇ ಶುಭಾಃ||
ಮಾರ್ಗದಲ್ಲಿ, ಗೋವುಗಳ ಮಧ್ಯೆ ಮತ್ತು ಧಾನ್ಯಗಳ ಮಧ್ಯದಲ್ಲಿ ಮಲ ಅಥವಾ ಮೂತ್ರಗಳನ್ನು ವಿಸರ್ಜಿಸಿದೇ ಇರುವ ಮಾನವರು ಶುಭಮಾನವರು.
12186004a ಶೌಚಮಾವಶ್ಯಕಂ ಕೃತ್ವಾ ದೇವತಾನಾಂ ಚ ತರ್ಪಣಮ್|
12186004c ಧರ್ಮಮಾಹುರ್ಮನುಷ್ಯಾಣಾಮುಪಸ್ಪೃಶ್ಯ ನದೀಂ ತರೇತ್||
ಆವಶ್ಯಕ ಶೌಚವನ್ನು ಮಾಡಿಕೊಂಡು, ನದಿಯಲ್ಲಿ ಸ್ನಾನಮಾಡಿ ದೇವತೆಗಳಿಗೆ ತರ್ಪಣಗಳನ್ನು ನೀಡುವುದನ್ನು ಮನುಷ್ಯ ಧರ್ಮವೆಂದು ಹೇಳುತ್ತಾರೆ.
12186005a ಸೂರ್ಯಂ ಸದೋಪತಿಷ್ಠೇತ ನ ಸ್ವಪ್ಯಾದ್ಭಾಸ್ಕರೋದಯೇ|
12186005c ಸಾಯಂ ಪ್ರಾತರ್ಜಪನ್ಸಂಧ್ಯಾಂ ತಿಷ್ಠೇತ್ಪೂರ್ವಾಂ ತಥಾಪರಾಮ್||
ಸದಾ ಸೂರ್ಯೋಪಸ್ಥಾನವನ್ನು ಮಾಡಬೇಕು. ಸೂರ್ಯೋದಯದ ಸಮಯದಲ್ಲಿ ಮಲಗಬಾರದು. ಸಾಯಂಕಾಲ ಮತ್ತು ಪ್ರಾತಃಕಾಲ ಸಂಧ್ಯಾವಂದನೆ ಜಪಾದಿಗಳನ್ನು ಮಾಡಿ ನಂತರದ ಕರ್ಮಗಳನ್ನು ಮಾಡಬೇಕು.
12186006a ಪಂಚಾರ್ದ್ರೋ ಭೋಜನಂ ಕುರ್ಯಾತ್ಪ್ರಾಙ್ಮುಖೋ ಮೌನಮಾಸ್ಥಿತಃ|
12186006c ನ ನಿಂದೇದನ್ನಭಕ್ಷ್ಯಾಂಶ್ಚ ಸ್ವಾದ್ವಸ್ವಾದು ಚ ಭಕ್ಷಯೇತ್||
ಪಂಚ ಅಂಗಗಳನ್ನು[1] ತೊಳೆದು, ಪೂರ್ವಮುಖನಾಗಿ, ಮೌನವನ್ನಾಶ್ರಯಿಸಿ ಭೋಜನವನ್ನು ಮಾಡಬೇಕು. ಬಡಿಸಿದ ಅನ್ನ-ಭಕ್ಷ್ಯಗಳನ್ನು ನಿಂದಿಸಬಾರದು. ರುಚಿಯಾಗಿರಲಿ ರುಚಿಯಾಗದೇ ಇರಲಿ ತಿನ್ನಬೇಕು.
12186007a ನಾರ್ದ್ರಪಾಣಿಃ ಸಮುತ್ತಿಷ್ಠೇನ್ನಾರ್ದ್ರಪಾದಃ ಸ್ವಪೇನ್ನಿಶಿ|
12186007c ದೇವರ್ಷಿನಾರದಪ್ರೋಕ್ತಮೇತದಾಚಾರಲಕ್ಷಣಮ್||
ಭೋಜನಾನಂತರ ಕೈತೊಳೆದು ಏಳಬೇಕು. ರಾತ್ರಿ ಒದ್ದೆಕಾಲಿನಲ್ಲಿ ಮಲಗಬಾರದು. ದೇವರ್ಷಿ ನಾರದನು ಇವುಗಳನ್ನು ಸದಾಚಾರಲಕ್ಷಣಗಳೆಂದು ಹೇಳಿದ್ದಾನೆ.
12186008a ಶುಚಿಕಾಮಮನಡ್ವಾಹಂ ದೇವಗೋಷ್ಠಂ ಚತುಷ್ಪಥಮ್|
12186008c ಬ್ರಾಹ್ಮಣಂ ಧಾರ್ಮಿಕಂ ಚೈವ ನಿತ್ಯಂ ಕುರ್ಯಾತ್ಪ್ರದಕ್ಷಿಣಮ್||
ಯಜ್ಞಶಾಲಾದಿ ಪವಿತ್ರ ಸ್ಥಾನಗಳು, ಎತ್ತು, ದೇವಾಲಯ, ಚೌಕ, ಬ್ರಾಹ್ಮಣ, ಧರ್ಮಾತ್ಮಾ ಮನುಷ್ಯ ಮತ್ತು ಚೈತ್ಯ – ಇವುಗಳನ್ನು ಸದಾ ಎಡಭಾಗದಲ್ಲಿಟ್ಟುಕೊಂಡು ನಡೆಯಬೇಕು.
12186009a ಅತಿಥೀನಾಂ ಚ ಸರ್ವೇಷಾಂ ಪ್ರೇಷ್ಯಾಣಾಂ ಸ್ವಜನಸ್ಯ ಚ|
12186009c ಸಾಮಾನ್ಯಂ ಭೋಜನಂ ಭೃತ್ಯೈಃ ಪುರುಷಸ್ಯ ಪ್ರಶಸ್ಯತೇ||
ಮನೆಯಲ್ಲಿ ಅತಿಥಿಗಳಿಗೆ, ಎಲ್ಲ ಸೇವಕರಿಗೆ ಮತ್ತು ಸ್ವಜನರಿಗೆ ಸಾಮಾನ್ಯ ಭೋಜನವನ್ನು ಮಾಡಿಸುವ ಪುರುಷನನ್ನು ಪ್ರಶಂಸಿಸುತ್ತಾರೆ.
12186010a ಸಾಯಂ ಪ್ರಾತರ್ಮನುಷ್ಯಾಣಾಮಶನಂ ದೇವನಿರ್ಮಿತಮ್|
12186010c ನಾಂತರಾ ಭೋಜನಂ ದೃಷ್ಟಮುಪವಾಸೀ ತಥಾ ಭವೇತ್||
ಮನುಷ್ಯರಿಗೆ ಬೆಳಿಗ್ಗೆ ಮತ್ತು ಸಾಯಂಕಾಲ ಎರಡೇ ಹೊತ್ತಿನ ಭೋಜನವು ವೇದನಿರ್ಮಿತವಾಗಿದೆ. ಮಧ್ಯದಲ್ಲಿ ಭೋಜನಮಾಡುವುದು ಕಾಣುವುದಿಲ್ಲ. ಇದರ ಪಾಲನೆಯೇ ಉಪವಾಸವಾಗುತ್ತದೆ.
12186011a ಹೋಮಕಾಲೇ ತಥಾ ಜುಹ್ವನ್ನೃತುಕಾಲೇ ತಥಾ ವ್ರಜನ್|
12186011c ಅನನ್ಯಸ್ತ್ರೀಜನಃ ಪ್ರಾಜ್ಞೋ ಬ್ರಹ್ಮಚಾರೀ ತಥಾ ಭವೇತ್||
ಹೋಮಕಾಲದಲ್ಲಿ ಹೋಮಮಾಡುತ್ತಾ ಋತುಕಾಲದಲ್ಲಿ ಅನನ್ಯ ಸ್ತ್ರೀಯನ್ನು ಸೇರುವ ಪ್ರಾಜ್ಞನು ಬ್ರಹ್ಮಚಾರಿಯಾಗುತ್ತಾನೆ.
12186012a ಅಮೃತಂ ಬ್ರಾಹ್ಮಣೋಚ್ಚಿಷ್ಟಂ ಜನನ್ಯಾ ಹೃದಯಂ ಕೃತಮ್|
12186012c ಉಪಾಸೀತ ಜನಃ ಸತ್ಯಂ ಸತ್ಯಂ ಸಂತ ಉಪಾಸತೇ[2]||
ಬ್ರಾಹ್ಮಣರು ಊಟಮಾಡಿ ಉಳಿದ ಅನ್ನವು ಅಮೃತಸಮಾನವು. ಅದು ಜನನಿಯ ಸ್ತನಪಾನದಷ್ಟು ಹಿತಕರವು. ಅದನ್ನು ಉಪಾಸಿಸುವ ಶ್ರೇಷ್ಠ ಪುರುಷರು ಸತ್ಯಸ್ವರೂಪ ಪರಬ್ರಹ್ಮ ಪರಮಾತ್ಮನನ್ನು ಉಪಾಸಿಸಿದಂತೆ.
[3]12186013a ಯಜುಷಾ ಸಂಸ್ಕೃತಂ ಮಾಂಸಂ ನಿವೃತ್ತೋ ಮಾಂಸಭಕ್ಷಣಾತ್|
12186013c ನ ಭಕ್ಷಯೇದ್ವೃಥಾಮಾಂಸಂ ಪೃಷ್ಠಮಾಂಸಂ ಚ ವರ್ಜಯೇತ್||
ಮಾಂಸವನ್ನು ತಿನ್ನದೇ ಇರುವವನು ಯಜುರ್ವೇದ ಮಂತ್ರಗಳಿಂದ ಸಂಸ್ಕಾರಗೊಳಿಸಿದ ಮಾಂಸವನ್ನೂ ತಿನ್ನಬಾರದು. ವ್ಯರ್ಥ ಮಾಂಸ ಮತ್ತು ಶ್ರಾದ್ಧಶೇಷ ಮಾಂಸವನ್ನೂ ಅವನು ತ್ಯಜಿಸಬೇಕು.
12186014a ಸ್ವದೇಶೇ ಪರದೇಶೇ ವಾ ಅತಿಥಿಂ ನೋಪವಾಸಯೇತ್|
12186014c ಕಾಮ್ಯಂ ಕರ್ಮಫಲಂ ಲಬ್ಧ್ವಾ ಗುರೂಣಾಮುಪಪಾದಯೇತ್||
ಸ್ವದೇಶದಲ್ಲಿಯಾಗಲೀ ಅಥವಾ ಪರದೇಶದಲ್ಲಿಯಾಗಲೀ ಅತಿಥಿಯನ್ನು ಉಪವಾಸವಿಡಬಾರದು. ತಾನು ಪಡೆದ ಕಾಮ್ಯಕರ್ಮಗಳ ಫಲವನ್ನು ಗುರುಗಳಿಗೆ ಅರ್ಪಿಸಬೇಕು.
12186015a ಗುರುಭ್ಯ ಆಸನಂ ದೇಯಂ ಕರ್ತವ್ಯಂ ಚಾಭಿವಾದನಮ್|
12186015c ಗುರೂನಭ್ಯರ್ಚ್ಯ ಯುಜ್ಯಂತೇ ಆಯುಷಾ ಯಶಸಾ ಶ್ರಿಯಾ||
ಗುರುಗಳಿಗೆ ಆಸನವನ್ನು ನೀಡಬೇಕು. ಅವರನ್ನು ನಮಸ್ಕರಿಸಬೇಕು. ಗುರುಗಳನ್ನು ಪೂಜಿಸುವುದರಿಂದ ಮನುಷ್ಯನು ಆಯಸ್ಸು, ಯಶಸ್ಸು ಮತ್ತು ಶ್ರೀ ಸಂಪನ್ನನಾಗುತ್ತಾನೆ.
12186016a ನೇಕ್ಷೇತಾದಿತ್ಯಮುದ್ಯಂತಂ ನ ಚ ನಗ್ನಾಂ ಪರಸ್ತ್ರಿಯಮ್|
12186016c ಮೈಥುನಂ ಸಮಯೇ ಧರ್ಮ್ಯಂ ಗುಹ್ಯಂ ಚೈವ ಸಮಾಚರೇತ್||
ಉದಯವಾಗುತ್ತಿರುವ ಸೂರ್ಯನನ್ನು ನೋಡಬಾರದು. ನಗ್ನ ಪರಸ್ತ್ರೀಯನ್ನೂ ನೋಡಬಾರದು. ಧರ್ಮಾನುಸಾರ ಋತುಕಾಲದ ಸಮಯದಲ್ಲಿ ಏಕಾಂತದಲ್ಲಿಯೇ ಮೈಥುನವನ್ನು ಮಾಡಬೇಕು.
12186017a ತೀರ್ಥಾನಾಂ ಹೃದಯಂ ತೀರ್ಥಂ ಶುಚೀನಾಂ ಹೃದಯಂ ಶುಚಿಃ|
12186017c ಸರ್ವಮಾರ್ಯಕೃತಂ ಶೌಚಂ ವಾಲಸಂಸ್ಪರ್ಶನಾನಿ ಚ||
ಹೃದಯವು ತೀರ್ಥಗಳಲ್ಲಿಯೇ ತೀರ್ಥವು ಮತ್ತು ಹೃದಯವು ಶುಚಿಯಾದವುಗಳಲ್ಲಿಯೇ ಶುಚಿಯು. ಆರ್ಯರು ಮಾಡುವ ಸರ್ವವೂ ಶೌಚವೇ. ಹಸುವಿನ ಬಾಲವನ್ನು ಸ್ಪರ್ಶಿಸುವುದೂ ಶೌಚವೇ.
12186018a ದರ್ಶನೇ ದರ್ಶನೇ ನಿತ್ಯಂ ಸುಖಪ್ರಶ್ನಮುದಾಹರೇತ್|
12186018c ಸಾಯಂ ಪ್ರಾತಶ್ಚ ವಿಪ್ರಾಣಾಂ ಪ್ರದಿಷ್ಟಮಭಿವಾದನಮ್||
ನಿತ್ಯವೂ ಕಂಡಾಗಲೆಲ್ಲಾ ಕುಶಲ ಪ್ರಶ್ನೆಯನ್ನು ಕೇಳಬೇಕು. ಸಾಯಂಕಾಲ ಮತ್ತು ಪ್ರಾತಃಕಾಲ ಬ್ರಾಹ್ಮಣರನ್ನು ನಮಸ್ಕರಿಸಬೇಕು. ಇದು ಶಾಸ್ತ್ರದ ಆದೇಶ.
12186019a ದೇವಗೋಷ್ಠೇ ಗವಾಂ ಮಧ್ಯೇ ಬ್ರಾಹ್ಮಣಾನಾಂ ಕ್ರಿಯಾಪಥೇ|
12186019c ಸ್ವಾಧ್ಯಾಯೇ ಭೋಜನೇ ಚೈವ ದಕ್ಷಿಣಂ ಪಾಣಿಮುದ್ಧರೇತ್||
ದೇವಮಂದಿರದಲ್ಲಿ, ಗೋವುಗಳ ಮಧ್ಯೆ, ಬ್ರಾಹ್ಮಣರ ಕ್ರಿಯಾಪಥದಲ್ಲಿ, ಸ್ವಾಧ್ಯಾಯದಲ್ಲಿ ಮತ್ತು ಭೋಜನದಲ್ಲಿ ಬಲಗೈಯನ್ನು ಬಳಸಬೇಕು.
[4]12186020a ಪಣ್ಯಾನಾಂ ಶೋಭನಂ ಪಣ್ಯಂ ಕೃಷೀಣಾಂ ಬಾದ್ಯತೇ ಕೃಷಿಃ|
12186020c ಬಹುಕಾರಂ ಚ ಸಸ್ಯಾನಾಂ ವಾಹ್ಯೇ ವಾಹ್ಯಂ ತಥಾ ಗವಾಮ್||
ವರ್ತಕರಿಗೆ ವ್ಯಾಪಾರವೇ ಶೋಭನೀಯವು ಮತ್ತು ಕೃಷಿಕರಿಗೆ ಕೃಷಿಯೇ ಫಲವನ್ನೀಯುತ್ತದೆ. ಸಸ್ಯಗಳು ಅಧಿಕ ಬೆಳೆಯನ್ನು ನೀಡುತ್ತವೆ ಮತ್ತು ವಾಹನಗಳಲ್ಲಿ ಎತ್ತಿನ ವಾಹನವು ದೊರೆಯುತ್ತದೆ[5].
12186021a ಸಂಪನ್ನಂ ಭೋಜನೇ ನಿತ್ಯಂ ಪಾನೀಯೇ ತರ್ಪಣಂ ತಥಾ|
12186021c ಸುಶೃತಂ ಪಾಯಸೇ ಬ್ರೂಯಾದ್ಯವಾಗ್ವಾಂ ಕೃಸರೇ ತಥಾ||
ನಿತ್ಯವೂ ಬ್ರಾಹ್ಮಣನು ಭೋಜನ ಮಾಡಿದ ನಂತರ ಯಜಮಾನನು ಬ್ರಾಹ್ಮಣನನ್ನು “ಭೋಜನವು ಸಂಪನ್ನವಾಯಿತೇ?” ಎಂದು ಪ್ರಶ್ನಿಸಬೇಕು. ಅದಕ್ಕೆ ಉತ್ತರವಾಗಿ ಬ್ರಾಹ್ಮಣನು “ಸುಸಂಪನ್ನಂ” ಅರ್ಥಾತ್ “ಪೂರ್ಣವಾಯಿತು” ಎಂದು ಹೇಳಬೇಕು. ಅದೇರೀತಿ ನೀರು ಕುಡಿದ ನಂತರ ಬ್ರಾಹ್ಮಣನಿಗೆ “ತೃಪ್ತಿಯಾಯಿತೇ?” ಎಂದು ಯಜಮಾನನು ಕೇಳಬೇಕು ಮತ್ತು ಬ್ರಾಹ್ಮಣನು “ತೃಪ್ತಿಯಾಯಿತು” ಎಂದು ಹೇಳಬೇಕು. ಹಾಗೆಯೇ ಬ್ರಾಹ್ಮಣನು ಪಾಯಸವನ್ನು ಕುಡಿದನಂತರ ಯಜಮಾನನು “ಪಾಯಸವು ರುಚಿಕರವಾಗಿದೆಯೇ? ಚೆನ್ನಾಗಿ ಮಾಡಿದ್ದಾರೆಯೇ?” ಎಂದು ಪ್ರಶ್ನಿಸಬೇಕು. ಬ್ರಾಹ್ಮಣನು “ಅತ್ಯಂತ ರುಚಿಕರವಾಗಿದೆ. ಬಹಳ ಶ್ರದ್ಧೆಯಿಂದ ಮಾಡಿದ್ದಾರೆ” ಎಂದು ಹೇಳಬೇಕು. ಹೀಗೆಯೇ ಸಜ್ಜಿಗೆ-ಎಳ್ಳನ್ನಗಳನ್ನು ತಿಂದನಂತರವೂ ಯಜಮಾನನು ಬ್ರಾಹ್ಮಣನನ್ನು “ರುಚಿಯಾಗಿದೆಯೇ?” ಎಂದು ಕೇಳಬೇಕು ಮತ್ತು ಬ್ರಾಹ್ಮಣನು “ಬಹಳ ರುಚಿಯಾಗಿದೆ” ಎಂದು ಉತ್ತರಿಸಬೇಕು.
12186022a ಶ್ಮಶ್ರುಕರ್ಮಣಿ ಸಂಪ್ರಾಪ್ತೇ ಕ್ಷುತೇ ಸ್ನಾನೇಽಥ ಭೋಜನೇ|
12186022c ವ್ಯಾಧಿತಾನಾಂ ಚ ಸರ್ವೇಷಾಮಾಯುಷ್ಯಮಭಿನಂದನಮ್||
ಚೌರವನ್ನು ಮಾಡಿಸಿಕೊಂಡ ನಂತರ, ಶೀನಿದಾಗ ಮತ್ತು ಭೋಜನವಾದನಂತರ ಸ್ವಸ್ತಿ, ಸುಸ್ನಾತಂ, ಸುಭುಕ್ತಂ, ಲಘುಶರೀರಂ – ಶುಭವಾಗಲಿ, ಸ್ನಾನವು ಶುಭವಾಯಿತೇ? ಶುಭವಾದ ಭೋಜನವಾಯಿತೇ? ದೇಹವು ಲಘುವಾಗಿದೆಯೇ? ಇತ್ಯಾದಿ ವಚನಗಳಿಂದ ಅಭಿನಂದಿಸಬೇಕು. ಇದರಿಂದ ಅವರ ರೋಗವು ಪರಿಹಾರವಾಗುತ್ತದೆ. ಆಯುಸ್ಸೂ ಹೆಚ್ಚಾಗುತ್ತದೆ.
12186023a ಪ್ರತ್ಯಾದಿತ್ಯಂ ನ ಮೇಹೇತ ನ ಪಶ್ಯೇದಾತ್ಮನಃ ಶಕೃತ್|
12186023c ಸುತಸ್ತ್ರಿಯಾ ಚ ಶಯನಂ ಸಹಭೋಜ್ಯಂ ಚ ವರ್ಜಯೇತ್||
ಸೂರ್ಯನ ಅಭಿಮುಖವಾಗಿ ಕುಳಿತು ಮಲ-ಮೂತ್ರಾದಿಗಳನ್ನು ವಿಸರ್ಜಿಸಬಾರದು. ತನ್ನ ಮಲವನ್ನು ನೋಡಬಾರದು. ಸ್ತ್ರೀಯೊಡನೆ ಒಂದೇ ಹಾಸಿಗೆಯಲ್ಲಿ ಮಲಗಬಾರದು. ಸ್ತ್ರೀಯ ಜೊತೆಯಲ್ಲಿಯೇ ಕುಳಿತು ಊಟಮಾಡಬಾರದು.
12186024a ತ್ವಂಕಾರಂ ನಾಮಧೇಯಂ ಚ ಜ್ಯೇಷ್ಠಾನಾಂ ಪರಿವರ್ಜಯೇತ್|
12186024c ಅವರಾಣಾಂ ಸಮಾನಾನಾಮುಭಯೇಷಾಂ ನ ದುಷ್ಯತಿ||
ತನಗಿಂತಲೂ ದೊಡ್ಡವರ ಹೆಸರನ್ನು ಕೂಗಿ ಕರೆಯುವುದಾಗಲೀ ಅವರನ್ನು “ನೀನು” ಎಂದು ಸಂಬೋಧಿಸುವುದಾಗಲೀ ಕೂಡದು. ತನಗೆ ಸಮಾನರಾದವರನ್ನೂ ಮತ್ತು ತನಗಿಂತಲೂ ಚಿಕ್ಕವರನ್ನು ಹೆಸರು ಹಿಡಿದು ಕರೆದರೆ ಮತ್ತು “ನೀನು” ಎಂದು ಸಂಬೋಧಿಸಿದರೆ ದೋಷವಿಲ್ಲ.
12186025a ಹೃದಯಂ ಪಾಪವೃತ್ತಾನಾಂ ಪಾಪಮಾಖ್ಯಾತಿ ವೈಕೃತಮ್|
12186025c ಜ್ಞಾನಪೂರ್ವಂ ವಿನಶ್ಯಂತಿ ಗೂಹಮಾನಾ ಮಹಾಜನೇ||
ಪಾಪಿಗಳ ಹೃದಯ ಮತ್ತು ಅವರ ಕಣ್ಣು-ಮುಖಗಳೇ ಅವರು ಮಾಡಿದ ಪಾಪಗಳ ಕುರಿತು ಹೇಳುತ್ತವೆ. ತಿಳಿದೂ ಮಾಡಿದ ಪಾಪವನ್ನು ಮಹಾಪುರುಷರಿಂದ ಮುಚ್ಚಿಡುವವರು ನಾಶಹೊಂದುತ್ತಾರೆ.
12186026a ಜ್ಞಾನಪೂರ್ವಂ ಕೃತಂ ಪಾಪಂ ಚಾದಯಂತ್ಯಬಹುಶ್ರುತಾಃ|
12186026c ನೈನಂ ಮನುಷ್ಯಾಃ ಪಶ್ಯಂತಿ ಪಶ್ಯಂತಿ ತ್ರಿದಿವೌಕಸಃ||
ತಿಳಿದೂ ಮಾಡಿದ ಪಾಪವನ್ನು ಮೂರ್ಖನು ಮಾತ್ರ ಬಚ್ಚಿಡುತ್ತಾನೆ. ಅದು ಮನುಷ್ಯರಿಗೆ ಕಾಣದಿದ್ದರೂ ದೇವತೆಗಳಿಗೆ ಕಾಣಿಸುತ್ತದೆ.
12186027a ಪಾಪೇನ ಹಿ ಕೃತಂ ಪಾಪಂ ಪಾಪಮೇವಾನುವರ್ತತೇ|
[6]12186027c ಧಾರ್ಮಿಕೇಣ ಕೃತೋ ಧರ್ಮಃ ಕರ್ತಾರಮನುವರ್ತತೇ||
ಪಾಪಿಯು ತನ್ನ ಪಾಪಗಳನ್ನು ಬಚ್ಚಿಟ್ಟುಕೊಂದರೆ ಅವನ ಪಾಪವು ಇನ್ನೂ ಹೆಚ್ಚಾಗುತ್ತಾ ಹೋಗುತ್ತದೆ. ಅದು ನಂತರದ ಪಾಪಗಳಿಗೆ ಕಾರಣವಾಗುತ್ತದೆ. ಧಾರ್ಮಿಕನು ಆಚರಿಸಿದ ಧರ್ಮವು ಧರ್ಮವೃದ್ಧಿಗೇ ಕಾರಣವಾಗಿ ಧರ್ಮವನ್ನೇ ಅನುಸರಿಸುತ್ತದೆ.
12186028a ಪಾಪಂ ಕೃತಂ ನ ಸ್ಮರತೀಹ ಮೂಢೋ
ವಿವರ್ತಮಾನಸ್ಯ ತದೇತಿ ಕರ್ತುಃ|
12186028c ರಾಹುರ್ಯಥಾ ಚಂದ್ರಮುಪೈತಿ ಚಾಪಿ
ತಥಾಬುಧಂ ಪಾಪಮುಪೈತಿ ಕರ್ಮ||
ಮೂರ್ಖನು ತಾನು ಮಾಡಿದ ಪಾಪಕರ್ಮಗಳನ್ನು ಸ್ಮರಣೆಯಲ್ಲಿಟ್ಟುಕೊಂಡಿರುವುದಿಲ್ಲ. ಆದರೆ ಕರ್ತೃವು ಅದನ್ನು ನೆನಪಿನಲ್ಲಿಟ್ಟುಕೊಳ್ಳದಿದ್ದರೂ ರಾಹುವು ಚಂದ್ರನನ್ನು ಅನುಸರಿಸಿ ಹೋಗುವಂತೆ ಪಾಪಕರ್ಮವು ಮೂರ್ಖನನ್ನು ಅನುಸರಿಸಿ ಹೋಗುತ್ತಿರುತ್ತದೆ.
12186029a ಆಶಯಾ ಸಂಚಿತಂ ದ್ರವ್ಯಂ ಯತ್ಕಾಲೇ ನೇಹ ಭುಜ್ಯತೇ[7]|
12186029c ತದ್ಬುಧಾ ನ ಪ್ರಶಂಸಂತಿ ಮರಣಂ ನ ಪ್ರತೀಕ್ಷತೇ||
ಆಶೆಯಿಂದ ಸಂಗ್ರಹಿಸಿದ ದ್ರವ್ಯವನ್ನು ಮರಣದ ಮೊದಲೇ ಬೋಗಿಸಲಿಕ್ಕಾಗುವುದಿಲ್ಲ. ಆದುದರಿಂದ ವಿದ್ವಾಂಸರು ದ್ರವ್ಯಸಂಗ್ರಹವನ್ನು ಪ್ರಶಂಸಿಸುವುದಿಲ್ಲ. ಏಕೆಂದರೆ ಆಸೆಯು ಪೂರ್ಣವಾಗುವ ವರೆಗೆ ಮರಣವು ಕಾಯುತ್ತಿರುವುದಿಲ್ಲ.
12186030a ಮಾನಸಂ ಸರ್ವಭೂತಾನಾಂ ಧರ್ಮಮಾಹುರ್ಮನೀಷಿಣಃ|
12186030c ತಸ್ಮಾತ್ಸರ್ವೇಷು ಭೂತೇಷು ಮನಸಾ ಶಿವಮಾಚರೇತ್||
ಸರ್ವಭೂತಗಳಿಗೂ ಮನಃಪೂರ್ವಕವಾಗಿ ಮಾಡಿದ ಧರ್ಮವೇ ಶ್ರೇಷ್ಠವೆಂದು ಮನೀಷಿಣರು ಹೇಳುತ್ತಾರೆ. ಆದುದರಿಂದ ಸರ್ವಭೂತಗಳ ಕಲ್ಯಾಣವನ್ನೂ ಮನಸ್ಸಿನಲ್ಲಿ ಆಶಿಸುತ್ತಿರಬೇಕು.
12186031a ಏಕ ಏವ ಚರೇದ್ಧರ್ಮಂ ನಾಸ್ತಿ ಧರ್ಮೇ ಸಹಾಯತಾ|
12186031c ಕೇವಲಂ ವಿಧಿಮಾಸಾದ್ಯ ಸಹಾಯಃ ಕಿಂ ಕರಿಷ್ಯತಿ||
ಏಕಾಕಿಯಾಗಿಯೇ ಧರ್ಮವನ್ನು ಆಚರಿಸಬೇಕು. ಧರ್ಮದಲ್ಲಿ ಯಾರೊಬ್ಬರ ಸಹಾಯವೂ ಬೇಕಾಗುವುದಿಲ್ಲ. ಅದರಲ್ಲಿ ಇನ್ನೊಬ್ಬನು ಹೇಗೆ ತಾನೇ ಸಹಾಯಮಾಡಬಲ್ಲನು?
12186032a ದೇವಾ ಯೋನಿರ್ಮನುಷ್ಯಾಣಾಂ ದೇವಾನಾಮಮೃತಂ ದಿವಿ|
12186032c ಪ್ರೇತ್ಯಭಾವೇ ಸುಖಂ ಧರ್ಮಾಚ್ಚಶ್ವತ್ತೈರುಪಭುಜ್ಯತೇ||
ಧರ್ಮವೇ ಮನುಷ್ಯರ ಯೋನಿ. ಅದೇ ಧರ್ಮವೇ ದಿವಿಯಲ್ಲಿರುವ ದೇವತೆಗಳಿಗೆ ಅಮೃತವಾಗಿದೆ. ಧರ್ಮಾತ್ಮರು ಧರ್ಮದ ಬಲದಿಂದಲೇ ಮರಣಾನಂತರ ಸುಖವನ್ನು ಅನುಭವಿಸುತ್ತಾರೆ.”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಭೀಷ್ಮಯುಧಿಷ್ಠಿರಸಂವಾದೇ ಆಚಾರವಿಧೌ ಷಷ್ಟ್ಯಾಶೀತ್ಯಧಿಕಶತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಭೀಷ್ಮಯುಧಿಷ್ಠಿರಸಂವಾದೇ ಆಚಾರವಿಧಿ ಎನ್ನುವ ನೂರಾಎಂಭತ್ತಾರನೇ ಅಧ್ಯಾಯವು.
[1] ಊಟಕ್ಕೆ ಮೊದಲು ಎರಡು ಕೈಗಳು, ಎರಡು ಕಾಲುಗಳು ಮತ್ತು ಮುಖ ಈ ಐದು ಅಂಗಗಳನ್ನು ತೊಳೆದುಕೊಳ್ಳಬೇಕು.
[2] ಸಮಾಸತೇ (ಗೀತಾ ಪ್ರೆಸ್/ಭಾರತ ದರ್ಶನ).
[3] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಲೋಷ್ಟಮದಾ ತೃಣಚ್ಛೇತಾ ನಖಖಾದೀ ತು ಯೋ ನರಃ| ನಿತ್ಯೋಚ್ಛಿಷ್ಟಃ ಶಂಕುಶುಕೋ ನೇಹಾಯುರ್ವಿಂದತೇ ಮಹತ್|| (ಗೀತಾ ಪ್ರೆಸ್).
[4] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಸಾಯಂ ಪ್ರಾತಶ್ಚ ವಿಪ್ರಾಣಾಂ ಪೂಜನಂ ಚ ಯಥಾವಿಧಿ| (ಗೀತಾ ಪ್ರೆಸ್).
[5] ಈ ಶ್ಲೋಕಕ್ಕೆ ಇತರ ಅನುವಾದವೂ ಇದೆ: ಪ್ರಾತಃಕಾಲ-ಸಾಯಂಕಾಲಗಳಲ್ಲಿ ಶ್ರೋತ್ರೀಯ ಬ್ರಾಹ್ಮಣರನ್ನು ಯಥಾವಿಧಿಯಾಗಿ ಸತ್ಕರಿಸಬೇಕು. ಅದರಿಂದ ಪ್ರತ್ಯಕ್ಷಫಲವು ಲಭ್ಯವಾಗುತ್ತದೆ. ಬ್ರಾಹ್ಮಣರನ್ನು ಸತ್ಕರಿಸಿದವನ ವಾಣಿಜ್ಯ-ವ್ಯವಹಾರಗಳು ಇತರರ ವಾಣಿಜ್ಯ-ವ್ಯವಹಾರಗಳಿಗಿಂತಲೂ ಶೋಭಾಯಮಾನವಾಗುತ್ತದೆ. ಅವನ ಹೊಲ-ಗದ್ದೆಗಳು ಇತರರ ಹೊಲ-ಗದ್ದೆಗಳಿಗಿಂತಲೂ ಹೆಚ್ಚು ಫಲವತ್ತಾಗುತ್ತವೆ. ಅವನ ಸಸ್ಯಸಮೃದ್ಧಿಯು ಇತರರ ಸಸ್ಯಸಮೃದ್ಧಿಗಿಂತ ಅಧಿಕವಾಗಿರುತ್ತದೆ. ವಾಹನಗಳಲ್ಲಿ ಶ್ರೇಷ್ಠವಾದ ಎತ್ತಿನ ಗಾಡಿಯಂತಹ ಶ್ರೇಷ್ಠ ವಾಹನವು ಬ್ರಾಹ್ಮಣಪೂಜಕನಿಗೆ ಲಭ್ಯವಾಗುತ್ತದೆ. (ಭಾರತ ದರ್ಶನ)
[6] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಧರ್ಮೇಣಾಪಿಹಿತೋ ಧರ್ಮೋ ಧರ್ಮಮೇವಾನುವರ್ತತೇ| ಅರ್ಥಾತ್ ಧರ್ಮಿಷ್ಠನು ತನ್ನ ಧರ್ಮವನ್ನು ಬಹಿರಂಗಗೊಳಿಸದೇ ಗುಟ್ಟಾಗಿರಿಸಿಕೊಂಡರೆ ಅದರಿಂದ ಅವನ ಧರ್ಮವು ವೃದ್ಧಿಸುತ್ತದೆ. ಅನಂತರದ ಧರ್ಮಕಾರ್ಯಗಳಿಗೆ ಅದು ಕಾರಣವಾಗುತ್ತದೆ (ಭಾರತ ದರ್ಶನ/ಗೀತಾ ಪ್ರೆಸ್).
[7] ದುಃಖೇನೈವೋಪಭುಜ್ಯತೇ| (ಭಾರತ ದರ್ಶನ/ಗೀತಾ ಪ್ರೆಸ್).