ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೧೮೫
ವಾನಪ್ರಸ್ಥ ಮತ್ತು ಸಂನ್ಯಾಸಾಶ್ರಮ ಧರ್ಮಗಳ ವರ್ಣನೆ, ಹಿಮಾಲಯದ ಉತ್ತರ ಪಾರ್ಶ್ವದಲ್ಲಿರುವ ಉತ್ಕೃಷ್ಠ ಲೋಕದ ವಿಲಕ್ಷಣತೆ ಮತ್ತು ಮಹತ್ತ್ವದ ಪ್ರತಿಪಾದನೆ, ಭೃಗು-ಭರದ್ವಾಜಸಂವಾದದ ಉಪಸಂಹಾರ (೧-೨೭).
12185001 ಭೃಗುರುವಾಚ
12185001A ವಾನಪ್ರಸ್ಥಾಃ ಖಲು ಋಷಿಧರ್ಮಮನುಸರಂತಃ ಪುಣ್ಯಾನಿ
ತೀರ್ಥಾನಿ ನದೀಪ್ರಸ್ರವಣಾನಿ ಸುವಿವಿಕ್ತೇಷ್ವರಣ್ಯೇಷು
ಮೃಗಮಹಿಷವರಾಹಸೃಮರಗಜಾಕೀರ್ಣೇಷು
ತಪಸ್ಯಂತೋಽನುಸಂಚರಂತಿ|
12185001B ತ್ಯಕ್ತಗ್ರಾಮ್ಯವಸ್ತ್ರಾಹಾರೋಪಭೋಗಾ
ವನ್ಯೌಷಧಿಮೂಲಫಲಪರ್ಣಪರಿಮಿತವಿಚಿತ್ರನಿಯತಾಹಾರಾಃ
ಸ್ಥಾನಾಸನಿನೋ
ಭೂಮಿಪಾಷಾಣಸಿಕತಾಶರ್ಕರಾವಾಲುಕಾಭಸ್ಮಶಾಯಿನಃ
ಕಾಶಕುಶಚರ್ಮವಲ್ಕಲಸಂವೃತಾಂಗಾಃ
ಕೇಶಶ್ಮಶ್ರುನಖರೋಮಧಾರಿಣೋ ನಿಯತಕಾಲೋಪಸ್ಪರ್ಶನಾ
ಅಸ್ಕನ್ನಹೋಮಬಲಿಕಾಲಾನುಷ್ಠಾಯಿನಃ
ಸಮಿತ್ಕುಶಕುಸುಮೋಪಹಾರಹೋಮಾರ್ಜನಲಬ್ಧವಿಶ್ರಾಮಾಃ
ಶೀತೋಷ್ಣಪವನನಿಷ್ಟಪ್ತವಿಭಿನ್ನಸರ್ವತ್ವಚೋ
ವಿವಿಧನಿಯಮಯೋಗಚರ್ಯಾವಿಹಿತಧರ್ಮಾನುಷ್ಠಾನಹೃತಮಾಂ
ಸಶೋಣಿತಾಸ್ತ್ವಗಸ್ಥಿಭೂತಾ ಧೃತಿಪರಾಃ
ಸತ್ತ್ವಯೋಗಾಚ್ಚರೀರಾಣ್ಯುದ್ವಹಂತಿ||
ಭೃಗುವು ಹೇಳಿದನು: “ಮೂರನೇ ಆಶ್ರಮ ವಾನಪ್ರಸ್ಥವನ್ನು ಪಾಲಿಸುವ ಮನುಷ್ಯರು ಧರ್ಮಾನುಸರಣೆಯನ್ನು ಮಾಡುತ್ತಾ ಪವಿತ್ರ ತೀರ್ಥಗಳಲ್ಲಿ, ನದೀತೀರಗಳಲ್ಲಿ, ಚಿಲುಮೆಗಳ ಬಳಿ ಹಾಗೂ ಜಿಂಕೆ, ಎಮ್ಮೆ, ಹಂದಿ, ಸಿಂಹ ಮತ್ತು ಕಾಡಾನೆಗಳಿಂದ ತುಂಬಿರುವ ಏಕಾಂತ ವನಗಳಲ್ಲಿ ತಪಸ್ಸನ್ನಾಚರಿಸುತ್ತಾ ತಿರುಗಾಡುತ್ತಿರುತ್ತಾರೆ. ಗೃಹಸ್ಥರ ಉಪಭೋಗಕ್ಕಾಗುವ ಗ್ರಾಮಜನೋಚಿತ ಸುಂದರ ವಸ್ತ್ರ, ಸ್ವಾದಿಷ್ಟ ಭೋಜನ ಮತ್ತು ವಿಷಯಭೋಗಗಳನ್ನು ಪರಿತ್ಯಜಿಸಿ ಅವರು ವನಗಳಲ್ಲಿ ತಮ್ಮಷ್ಟಕ್ಕೆ ತಾವೇ ದೊರೆಯುವ ಅನ್ನ, ಫಲ, ಮೂಲ ಹಾಗೂ ಎಲೆಗಳ ಪರಿಮಿತ, ವಿಚಿತ್ರ ಮತ್ತು ನಿಯತ ಆಹಾರವನ್ನು ಸೇವಿಸುತ್ತಾರೆ. ನೆಲದ ಮೇಲೆಯೇ ಕುಳಿತುಕೊಳ್ಳುತ್ತಾರೆ. ನೆಲ, ಕಲ್ಲು, ಮರಳು, ನುರುಜುಗಲ್ಲು, ಬೂದಿ – ಇವುಗಳ ಮೇಲೆಯೇ ಮಲಗುತ್ತಾರೆ. ಕಾಶ, ಕುಶ, ಮೃಗಚರ್ಮ ಮತ್ತು ವಲ್ಕಲಗಳಿಂದ ಮಾಡಿದ ವಸ್ತ್ರಗಳನ್ನೇ ಉಡುತ್ತಾರೆ. ಗಡ್ಡ-ಮೀಸೆ-ಉಗುರು-ಜಟೆಗಳನ್ನು ಯಥೇಚ್ಚವಾಗಿ ಬೆಳೆಯಲು ಬಿಡುತ್ತಾರೆ. ನಿಯತ ಸಮಯಗಳಲ್ಲಿ ಸ್ನಾನಮಾಡುತ್ತಾ ನಿಶ್ಚಿತ ಕಾಲಗಳನ್ನು ಉಲ್ಲಂಘಿಸದೇ ಬಲಿ ವೈಶ್ವದೇವ, ಅಗ್ನಿಹೋತ್ರಾದಿ ಕರ್ಮಗಳನ್ನು ಅನುಷ್ಠಾನಮಾಡುತ್ತಾರೆ. ಬೆಳಿಗ್ಗೆ ಅಗ್ನಿಹೋತ್ರ-ಪೂಜಾದಿಗಳಿಗೆ ಸಮಿತ್ತು-ದರ್ಭೆ-ಫಲ-ಪುಷ್ಪಾದಿಗಳನ್ನು ತಂದು ಆಶ್ರಮವನ್ನು ಸ್ವಚ್ಛಗೊಳಿಸಿದ ನಂತರ ಅವರಿಗೆ ಸ್ವಲ್ಪ ವಿಶ್ರಾಂತಿಯು ಸಿಗುತ್ತದೆ. ಶೀತೋಷ್ಣ-ವೃಷ್ಟಿ-ವಾತಗಳ ಪ್ರಖರತೆಯನ್ನು ಸದಾ ಸಹಿಸಿಕೊಳ್ಳುವ ವಾನಪ್ರಸ್ಥಾಶ್ರಮಿಗಳ ಚರ್ಮವು ಒಡೆದುಹೋಗಿರುತ್ತದೆ. ನಾನಾ ವಿಧದ ಕಠೋರ ನಿಯಮಗಳನ್ನು ಪಾಲಿಸುತ್ತಾ ಸತ್ಕರ್ಮಗಳನ್ನು ಅನುಷ್ಠಾನಮಾಡುವ ಅವರ ರಕ್ತ-ಮಾಂಸಗಳು ಒಣಗಿ ಹೋಗಿರುತ್ತವೆ. ಚರ್ಮ-ಮೂಳೆಗಳು ಮಾತ್ರವೇ ಉಳಿದುಕೊಂಡಿರುತ್ತವೆ. ಆದರೂ ಅವರು ಧೈರ್ಯಶಾಲಿಗಳಾಗಿ ಕೇವಲ ಸತ್ತ್ವಯೋಗದಿಂದ ಶರೀರಧಾರಣೆ ಮಾಡಿಕೊಂಡಿರುತ್ತಾರೆ.
12185002a ಯಸ್ತ್ವೇತಾಂ ನಿಯತಶ್ಚರ್ಯಾಂ ಬ್ರಹ್ಮರ್ಷಿವಿಹಿತಾಂ ಚರೇತ್|
12185002c ಸ ದಹೇದಗ್ನಿವದ್ದೋಷಾನ್ ಜಯೇಲ್ಲೋಕಾಂಶ್ಚ ದುರ್ಜಯಾನ್||
ಬ್ರಹ್ಮರ್ಷಿಗಳಿಂದಲೇ ವಿಹಿತವಾಗಿರುವ ಈ ವಾನಪ್ರಸ್ಥಾಶ್ರಮವನ್ನು ನಿಯಮಪೂರ್ವಕವಾಗಿ ಯಥಾವತ್ತಾಗಿ ಅನುಷ್ಠಾನಮಾಡುವವನು ಅಗ್ನಿಯಂತೆ ತನ್ನಲ್ಲಿರುವ ಪಾಪಗಳೆಲ್ಲವನ್ನೂ ಭಸ್ಮಮಾಡಿ ದುರ್ಲಭ ಲೋಕಗಳನ್ನು ಪಡೆಯುತ್ತಾನೆ.
12185003A ಪರಿವ್ರಾಜಕಾನಾಂ ಪುನರಾಚಾರಸ್ತದ್ಯಥಾ|
12185003B ವಿಮುಚ್ಯಾಗ್ನಿಧನಕಲತ್ರಪರಿಬರ್ಹಸಂಗಾನ್ ಆತ್ಮನಃ
ಸ್ನೇಹಪಾಶಾನ್ ಅವಧೂಯ ಪರಿವ್ರಜಂತಿ
ಸಮಲೋಷ್ಟಾಶ್ಮಕಾಂಚನಾಸ್ತ್ರಿವರ್ಗಪ್ರವೃತ್ತೇಷ್ವ್
ಆರಂಭೇಷ್ವಸಕ್ತಬುದ್ಧಯೋಽರಿಮಿತ್ರೋದಾಸೀನೇಷು ತುಲ್ಯವೃತ್ತಯಃ
ಸ್ಥಾವರಜರಾಯುಜಾಂಡಜಸ್ವೇದಜೋದ್ಭಿಜ್ಜಾನಾಂ ಭೂತಾನಾಂ
ವಾಘ್ಮನಃಕರ್ಮಭಿರನಭಿದ್ರೋಹಿಣೋಽನಿಕೇತಾಃ
ಪರ್ವತಪುಲಿನವೃಕ್ಷಮೂಲದೇವತಾಯತನಾನ್ಯನುಚರಂತೋ
ವಾಸಾರ್ಥಮುಪೇಯುರ್ನಗರಂ ಗ್ರಾಮಂ ವಾ ನಗರೇ
ಪಂಚರಾತ್ರಿಕಾ ಗ್ರಾಮೈಕರಾತ್ರಿಕಾಃ||
12185003C ಪ್ರವಿಶ್ಯ ಚ ಪ್ರಾಣಧಾರಣಮಾತ್ರಾರ್ಥಂ ದ್ವಿಜಾತೀನಾಂ
ಭವನಾನ್ಯಸಂಕೀರ್ಣಕರ್ಮಣಾಮುಪತಿಷ್ಠೇಯುಃ
ಪಾತ್ರಪತಿತಾಯಾಚಿತಭೈಕ್ಷಾಃ
ಕಾಮಕ್ರೋಧದರ್ಪಮೋಹಲೋಭಕಾರ್ಪಣ್ಯದಂಭಪರಿವಾದಾಭಿ
ಮಾನಹಿಂಸಾನಿವೃತ್ತಾ ಇತಿ|
ಈಗ ನಾನು ಸಂನ್ಯಾಸಿಗಳ ಆಚಾರ-ವ್ಯವಹಾರಗಳನ್ನು ಹೇಳುತ್ತೇನೆ. ಸಂನ್ಯಾಸಾಶ್ರಮವನ್ನು ಸ್ವೀಕರಿಸಿದವರು ಅಗ್ನಿಹೋತ್ರ, ಧನ, ಕಳತ್ರ ಮೊದಲಾದವುಗಳೆಲ್ಲವನ್ನೂ ಪರಿತ್ಯಜಿಸಿ, ಭೋಗಗಳನ್ನು ತೊರೆದು, ಸ್ನೇಹಪಾಶಗಳನ್ನು ಕಿತ್ತೊಗೆದು ಮನೆಯನ್ನು ಬಿಟ್ಟು ಹೋಗುತ್ತಾರೆ. ಮಣ್ಣುಹೆಂಟೆ, ಕಲ್ಲು ಮತ್ತು ಚಿನ್ನಗಳು ಸಮವೆಂದು ಅವರು ಭಾವಿಸುತ್ತಾರೆ. ಅವರ ಬುದ್ಧಿಯು ತ್ರಿವರ್ಗದಲ್ಲಿ ನಿರಾಸಕ್ತವಾಗಿರುತ್ತದೆ. ಶತ್ರು-ಮಿತ್ರ-ಉದಾಸೀನರಲ್ಲಿ ಅವರು ಸಮಾನದೃಷ್ಟಿಯುಳ್ಳವರಾಗಿರುತ್ತಾರೆ. ಸ್ಥಾವರ, ಜರಾಯುಜ, ಅಂಡಜ, ಸ್ವೇದಜ ಮತ್ತು ಉದ್ಭುಜ್ಜ ಪ್ರಾಣಿಗಳ ವಿಷಯದಲ್ಲಿ ಮಾತು-ಮನಸ್ಸು ಮತ್ತು ಕರ್ಮಗಳ ಮೂಲಕ ಯಾವುದೇ ವಿಧವಾದ ದ್ರೋಹವನ್ನು ಮಾಡುವುದಿಲ್ಲ. ಆಶ್ರಮ ಮಠಾದಿಗಳಲ್ಲಿ ವಾಸಿಸುವುದಿಲ್ಲ. ಸಂನ್ಯಾಸಿಗಳು ಯಾವಾಗಲೂ ಸಂಚರಿಸುತ್ತಲೇ ಇರುತ್ತಾರೆ. ರಾತ್ರಿಯ ಕಾಲದಲ್ಲಿ ಪರ್ವತಗುಹೆಗಳಲ್ಲಾಗಲೀ, ನದೀ ತೀರಗಳಲ್ಲಾಗಲೀ, ವೃಕ್ಷದ ಬುಡದಲ್ಲಾಗಲೀ, ದೇವಮಂದಿರಗಳಲ್ಲಾಗಲೀ, ನಗರಗಳಲ್ಲಾಗಲೀ ತಂಗುತ್ತಾರೆ. ನಗರಗಳಲ್ಲಿ ಐದು ರಾತ್ರಿಗಿಂತಲೂ ಹೆಚ್ಚು ಮತ್ತು ಗ್ರಾಮಗಳಲ್ಲಿ ಒಂದು ರಾತ್ರಿಗಿಂತಲು ಹೆಚ್ಚು ತಂಗುವುದಿಲ್ಲ. ವಿಶುದ್ಧ ಧರ್ಮವನ್ನು ಆಚರಿಸುವ ಮತ್ತು ತಮ್ಮ ವರ್ಣಾಶ್ರಮಧರ್ಮಗಳಿಗೆ ವಿರೋಧಕರ್ಮಗಳನ್ನು ಮಾಡದ ಬ್ರಾಹ್ಮಣ-ಕ್ಷತ್ರಿಯ-ವೈಶ್ಯರ ಮನೆಗಳ ಮುಂದೆ ನಿಂತು ತಮ್ಮ ಪ್ರಾಣಧಾರಣೆಗೆ ಭಿಕ್ಷೆಯನ್ನು ಕೇಳದೇ ಭಿಕ್ಷಾಪಾತ್ರೆಯಲ್ಲಿ ಎಷ್ಟು ಸಂಗ್ರಹವಾಗುವುದೋ ಅಷ್ಟನ್ನೇ ತಿಂದು ತೃಪ್ತರಾಗುತ್ತಾರೆ. ಕಾಮ-ಕ್ರೋಧ-ಲೋಭ-ಮೋಹ-ಕೃಪಣತೆ-ದಂಭ-ನಿಂದೆ-ಅಪಮಾನ-ಹಿಂಸೆಗಳನ್ನು ಸಂಪೂರ್ಣವಾಗಿ ತ್ಯಜಿಸಿರುತ್ತಾರೆ.
12185004A ಭವತಿ ಚಾತ್ರ ಶ್ಲೋಕಃ||
12185004a ಅಭಯಂ ಸರ್ವಭೂತೇಭ್ಯೋ ದತ್ತ್ವಾ ಚರತಿ ಯೋ ಮುನಿಃ|
12185004c ನ ತಸ್ಯ ಸರ್ವಭೂತೇಭ್ಯೋ ಭಯಮುತ್ಪದ್ಯತೇ ಕ್ವ ಚಿತ್||
ಈ ವಿಷಯದ ಕುರಿತು ಒಂದು ಶ್ಲೋಕವಿದೆ: ಸರ್ವಪ್ರಾಣಿಗಳಿಗೂ ಅಭಯಪ್ರದಾನಮಾಡುತ್ತಾ ಸಂಚರಿಸುತ್ತಿರುವ ಮುನಿಗೆ ಪ್ರಪಂಚದಲ್ಲಿರುವ ಯಾವ ಪ್ರಾಣಿಗಳಿಂದಲೂ ಯಾವವಿಧದ ಭಯವೂ ಉಂಟಾಗುವುದಿಲ್ಲ.
12185005a ಕೃತ್ವಾಗ್ನಿಹೋತ್ರಂ ಸ್ವಶರೀರಸಂಸ್ಥಂ
ಶಾರೀರಮಗ್ನಿಂ ಸ್ವಮುಖೇ ಜುಹೋತಿ|
12185005c ಯೋ ಭೈಕ್ಷಚರ್ಯೋಪಗತೈರ್ಹವಿರ್ಭಿಶ್
ಚಿತಾಗ್ನಿನಾಂ ಸ ವ್ಯತಿಯಾತಿ ಲೋಕಾನ್||
ಅಗ್ನಿಹೋತ್ರವನ್ನು ತನ್ನ ಶರೀರದಲ್ಲಿ ಆರೋಪಿಸಿಕೊಂಡು ಶರೀರವನ್ನೇ ಇಷ್ಟಕಾಚಿತಿಯನ್ನಾಗಿ ಮಾಡಿಕೊಂಡು ತನ್ನ ಬಾಯಿಯ ಮೂಲಕ ಭಿಕ್ಷಾರೂಪದ ಹವಿಸ್ಸನ್ನು ಹೋಮಮಾಡುವ ಸಂನ್ಯಾಸಿಯು ಅಗ್ನಿಚಯನವನ್ನು ಮಾಡುವ ಅಗ್ನಿಹೋತ್ರಿಯು ಹೋಗುವ ಲೋಕಕ್ಕೆ ಹೋಗುತ್ತಾನೆ.
12185006a ಮೋಕ್ಷಾಶ್ರಮಂ ಯಃ ಕುರುತೇ ಯಥೋಕ್ತಂ
ಶುಚಿಃ ಸುಸಂಕಲ್ಪಿತಬುದ್ಧಿಯುಕ್ತಃ[1]|
12185006c ಅನಿಂಧನಂ ಜ್ಯೋತಿರಿವ ಪ್ರಶಾಂತಂ
ಸ ಬ್ರಹ್ಮಲೋಕಂ ಶ್ರಯತೇ ದ್ವಿಜಾತಿಃ[2]||
ಸುಸಂಕಲ್ಪಿತ ಬುದ್ಧಿಯುಕ್ತನಾಗಿ ಶುಚಿಯಾಗಿ ಯಥೋಕ್ತವಾದ ಮೋಕ್ಷಾಶ್ರಮ ಕರ್ಮಗಳನ್ನು ಮಾಡುವ ದ್ವಿಜಾತಿಯವನು ಇಂಧನ ರಹಿತವಾದ ಅಗ್ನಿಯಂತೆ ಪರಮಶಾಂತ ಜ್ಯೋತಿರ್ಮಯ ಬ್ರಹ್ಮಲೋಕವನ್ನು ಹೊಂದುತ್ತಾನೆ.”
12185007 ಭರದ್ವಾಜ ಉವಾಚ|
12185007a ಅಸ್ಮಾಲ್ಲೋಕಾತ್ಪರೋ ಲೋಕಃ ಶ್ರೂಯತೇ ನೋಪಲಭ್ಯತೇ|
12185007c ತಮಹಂ ಜ್ಞಾತುಮಿಚ್ಚಾಮಿ ತದ್ಭವಾನ್ವಕ್ತುಮರ್ಹತಿ||
ಭರದ್ವಾಜನು ಹೇಳಿದನು: “ಈ ಲೋಕಕ್ಕಿಂತಲೂ ಶ್ರೇಷ್ಠವಾದ ಲೋಕವಿದೆಯೆಂದು ಕೇಳಿದ್ದೇನೆ. ಆದರೆ ಅದು ನೋಡಲು ಸಿಗುವುದಿಲ್ಲ. ಅದರ ಕುರಿತು ತಿಳಿಯಲು ಬಯಸುತ್ತೇನೆ. ಅದನ್ನು ಹೇಳಬೇಕು.”
12185008 ಭೃಗುರುವಾಚ|
12185008a ಉತ್ತರೇ ಹಿಮವತ್ಪಾರ್ಶ್ವೇ ಪುಣ್ಯೇ ಸರ್ವಗುಣಾನ್ವಿತೇ|
12185008c ಪುಣ್ಯಃ ಕ್ಷೇಮ್ಯಶ್ಚ ಕಾಮ್ಯಶ್ಚ ಸ ವರೋ ಲೋಕ ಉಚ್ಯತೇ||
ಭೃಗುವು ಹೇಳಿದನು: “ಉತ್ತರ ದಿಕ್ಕಿನಲ್ಲಿ ಹಿಮವತ್ಪರ್ವತದ ಪಕ್ಕದಲ್ಲಿ ಸರ್ವಗುಣಸಂಪನ್ನ ಪುಣ್ಯಮಯ ಪ್ರದೇಶವಿದೆ. ಅದನ್ನು ಲೋಕಗಳಲ್ಲಿಯೇ ಪರಮ ಶ್ರೇಷ್ಠ ಲೋಕವೆನ್ನುತ್ತಾರೆ. ಅದು ಪವಿತ್ರವೂ, ಕ್ಷೇಮ್ಯವೂ ಮತ್ತು ಕಾಮ್ಯವೂ ಆಗಿದೆ[3].
12185009a ತತ್ರ ಹ್ಯಪಾಪಕರ್ಮಾಣಃ ಶುಚಯೋಽತ್ಯಂತನಿರ್ಮಲಾಃ|
12185009c ಲೋಭಮೋಹಪರಿತ್ಯಕ್ತಾ ಮಾನವಾ ನಿರುಪದ್ರವಾಃ||
ಅಲ್ಲಿ ಪಾಪಕರ್ಮರಹಿತ, ಪವಿತ್ರ, ಅತ್ಯಂತ ನಿರ್ಮಲ, ಲೋಭ-ಮೋಹಶೂನ್ಯ ಮತ್ತು ಎಲ್ಲ ಪ್ರಕಾರದ ಉಪದ್ರವರಹಿತ ಮಾನವರು ವಾಸಿಸುತ್ತಾರೆ.
12185010a ಸ ಸ್ವರ್ಗಸದೃಶೋ ದೇಶಸ್ತತ್ರ ಹ್ಯುಕ್ತಾಃ ಶುಭಾ ಗುಣಾಃ|
12185010c ಕಾಲೇ ಮೃತ್ಯುಃ ಪ್ರಭವತಿ ಸ್ಪೃಶಂತಿ ವ್ಯಾಧಯೋ ನ ಚ||
ಸ್ವರ್ಗಸದೃಶವಾದ ಆ ದೇಶದಲ್ಲಿ ಸರ್ವ ಶುಭಗುಣಗಳೂ ಇವೆ ಎಂದು ಹೇಳುತ್ತಾರೆ. ಅಲ್ಲಿ ಕಾಲದಲ್ಲಿಯೇ ಮೃತ್ಯುವಾಗುತ್ತದೆ. ರೋಗ-ವ್ಯಾಧಿಗಳು ಯಾರನ್ನೂ ಸ್ಪರ್ಶಿಸುವುದೂ ಇಲ್ಲ.
12185011a ನ ಲೋಭಃ ಪರದಾರೇಷು ಸ್ವದಾರನಿರತೋ ಜನಃ|
12185011c ನ ಚಾನ್ಯೋನ್ಯವಧಸ್ತತ್ರ[4] ದ್ರವ್ಯೇಷು ನ ಚ ವಿಸ್ಮಯಃ|
12185011e ಪರೋಕ್ಷಧರ್ಮೋ[5] ನೈವಾಸ್ತಿ ಸಂದೇಹೋ ನಾಪಿ ಜಾಯತೇ||
ತಮ್ಮ ತಮ್ಮ ಪತ್ನಿಯರೊಡನೆ ಇರುವ ಆ ಜನರಲ್ಲಿ ಪರಸ್ತ್ರೀಯರ ಕುರಿತು ಲೋಭವಿಲ್ಲ. ಅಲ್ಲಿ ಧನಕ್ಕಾಗಿ ಅನ್ಯೋನ್ಯರನ್ನು ಕೊಲ್ಲುವುದಿಲ್ಲ. ಯಾರೂ ವಿಸ್ಮಿತರಾಗುವುದಿಲ್ಲ. ಪರೋಕ್ಷವಾಗಿಯೂ ಅಧರ್ಮವು ನಡೆಯುವುದಿಲ್ಲ. ಅಲ್ಲಿ ಯಾರಲ್ಲಿಯೂ ಸಂದೇಹವೂ ಉಂಟಾಗುವುದಿಲ್ಲ.
12185012a ಕೃತಸ್ಯ ತು ಫಲಂ ತತ್ರ ಪ್ರತ್ಯಕ್ಷಮುಪಲಭ್ಯತೇ|
12185012c ಶಯ್ಯಾಯಾನಾಸನೋಪೇತಾಃ ಪ್ರಾಸಾದಭವನಾಶ್ರಯಾಃ|
12185012e ಸರ್ವಕಾಮೈರ್ವೃತಾಃ ಕೇ ಚಿದ್ಧೇಮಾಭರಣಭೂಷಿತಾಃ||
12185013a ಪ್ರಾಣಧಾರಣಮಾತ್ರಂ ತು ಕೇಷಾಂ ಚಿದುಪಪದ್ಯತೇ|
12185013c ಶ್ರಮೇಣ ಮಹತಾ ಕೇ ಚಿತ್ಕುರ್ವಂತಿ ಪ್ರಾಣಧಾರಣಮ್||
ಅಲ್ಲಿ ಮಾಡಿದ ಕರ್ಮಗಳ ಫಲಗಳು ಪ್ರತ್ಯಕ್ಷವಾಗಿ ಉಪಲಬ್ಧವಾಗುತ್ತವೆ. ಅಲ್ಲಿಯ ಕೆಲವು ಜನರು ದೊಡ್ಡ ದೊಡ್ಡ ಭವನಗಳಲ್ಲಿ ವಾಸಿಸುತ್ತಾರೆ. ಉತ್ತಮ ಆಸನಗಳಲ್ಲಿ ಕುಳಿತುಕೊಳ್ಳುತ್ತಾರೆ ಮತ್ತು ಉತ್ತಮೋತ್ತಮ ಪದಾರ್ಥಗಳನ್ನು ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ. ಸಮಸ್ತ ಕಾಮನಾಸಂಪನ್ನರಾಗಿ ಸುವರ್ಣಮಯ ಆಭೂಷಣಗಳಿಂದ ವಿಭೂಷಿತರಾಗಿರುತ್ತಾರೆ. ಇನ್ನು ಕೆಲವು ಜನರಿಗೆ ಪ್ರಾಣಧಾರಣೆಗೆ ಮಾತ್ರ ಸಾಕಾಗುವಷ್ಟು ಭೋಜನವು ದೊರೆಯುತ್ತದೆ. ಇನ್ನು ಕೆಲವು ಜನರು ಬಹಳ ಪರಿಶ್ರಮಯುಕ್ತ ತಪೋಮಯ ಜೀವನವನ್ನು ನಡೆಸುತ್ತಾ ಪ್ರಾಣವನ್ನು ಹಿಡಿದುಕೊಂಡಿರುತ್ತಾರೆ.
12185014a ಇಹ ಧರ್ಮಪರಾಃ ಕೇ ಚಿತ್ಕೇ ಚಿನ್ನೈಕೃತಿಕಾ ನರಾಃ|
12185014c ಸುಖಿತಾ ದುಃಖಿತಾಃ ಕೇ ಚಿನ್ನಿರ್ಧನಾ ಧನಿನೋಽಪರೇ||
ಆದರೆ ಈ ಮನುಷ್ಯಲೋಕದಲ್ಲಿ ಕೆಲವರು ಧರ್ಮಪರಾಯಣರಾಗಿರುತ್ತಾರೆ. ಕೆಲವರು ವಂಚಕರಾಗಿರುತ್ತಾರೆ. ಕೆಲವರು ಸುಖಿಗಳಾಗಿರುತ್ತಾರೆ. ಕೆಲವರು ಧನಿಕರಾಗಿರುತ್ತಾರೆ. ಮತ್ತು ಇನ್ನು ಕೆಲವರು ದರಿದ್ರರಾಗಿರುತ್ತಾರೆ.
12185015a ಇಹ ಶ್ರಮೋ ಭಯಂ ಮೋಹಃ ಕ್ಷುಧಾ ತೀವ್ರಾ ಚ ಜಾಯತೇ|
12185015c ಲೋಭಶ್ಚಾರ್ಥಕೃತೋ ನೃಣಾಂ ಯೇನ ಮುಹ್ಯಂತಿ ಪಂಡಿತಾಃ||
ಈ ಲೋಕದಲ್ಲಿ ಶ್ರಮವಿದೆ. ಭಯವಿದೆ. ಮೋಹವಿದೆ. ತೀವ್ರವಾದ ಹಸಿವೆಯಾಗುತ್ತದೆ. ಧನದ ವಿಷಯದಲ್ಲಿ ಅತ್ಯಂತ ಲೋಭಿಗಳಾಗುತ್ತಾರೆ. ಇದರಿಂದಲೇ ಪಂಡಿತರೂ ಮೋಹಿತರಾಗುತ್ತಾರೆ.
12185016a ಇಹ ಚಿಂತಾ[6] ಬಹುವಿಧಾ ಧರ್ಮಾಧರ್ಮಸ್ಯ ಕರ್ಮಣಃ|
12185016c ಯಸ್ತದ್ವೇದೋಭಯಂ ಪ್ರಾಜ್ಞಃ ಪಾಪ್ಮನಾ ನ ಸ ಲಿಪ್ಯತೇ||
ಇಲ್ಲಿ ಧರ್ಮಾಧರ್ಮ ಕರ್ಮಗಳ ಕುರಿತು ಬಹುವಿಧದ ಚಿಂತನೆಗಳು ನಡೆಯುತ್ತವೆ. ಇವೆರಡರ ಸ್ವರೂಪ-ಪರಿಣಾಮಗಳನ್ನು ತಿಳಿದಿರುವವನು ಪಾಪದಿಂದ ಲಿಪ್ತನಾಗುವುದಿಲ್ಲ.
12185017a ಸೋಪಧಂ ನಿಕೃತಿಃ ಸ್ತೇಯಂ ಪರಿವಾದೋಽಭ್ಯಸೂಯತಾ|
12185017c ಪರೋಪಘಾತೋ ಹಿಂಸಾ ಚ ಪೈಶುನ್ಯಮನೃತಂ ತಥಾ||
12185018a ಏತಾನಾಸೇವತೇ ಯಸ್ತು ತಪಸ್ತಸ್ಯ ಪ್ರಹೀಯತೇ|
12185018c ಯಸ್ತ್ವೇತಾನ್ನಾಚರೇದ್ವಿದ್ವಾಂಸ್ತಪಸ್ತಸ್ಯಾಭಿವರ್ಧತೇ||
ಕಪಟ, ವಂಚನೆ, ಚೌರ್ಯ, ಪರನಿಂದೆ, ಅಸೂಯೆ, ಮತ್ತೊಬ್ಬರಿಗೆ ಹಾನಿಯನ್ನುಂಟುಮಾಡುವುದು, ಪ್ರಾಣಿಹಿಂಸೆ, ಚಾಡಿಹೇಳುವುದು, ಸುಳ್ಳು ಹೇಳುವುದು – ಈ ದುರ್ಗುಣಗಳನ್ನು ಸೇವಿಸುವವನು ಮಾಡಿದ ತಪಸ್ಸೆಲ್ಲವೂ ಹಾಳಾಗುತ್ತದೆ. ಈ ದುರ್ಗುಣಗಳನ್ನು ಆಚರಿಸದೇ ಇರುವ ವಿದ್ವಾಂಸನ ತಪಸ್ಸು ವೃದ್ಧಿಯಾಗುತ್ತದೆ.
[7]12185019a ಕರ್ಮಭೂಮಿರಿಯಂ ಲೋಕ ಇಹ ಕೃತ್ವಾ ಶುಭಾಶುಭಮ್|
12185019c ಶುಭೈಃ ಶುಭಮವಾಪ್ನೋತಿ ಕೃತ್ವಾಶುಭಮತೋಽನ್ಯಥಾ||
ಈ ಲೋಕವು ಕರ್ಮಭೂಮಿಯು. ಇಲ್ಲಿ ಶುಭಾಶುಭ ಕರ್ಮಗಳನ್ನು ಮಾಡಿ ಶುಭಕರ್ಮಗಳಿಂದ ಶುಭವನ್ನೂ ಅಶುಭಕರ್ಮಗಳಿಂದ ಅಶುಭವನ್ನೂ ಪಡೆಯುತ್ತಾರೆ.
12185020a ಇಹ ಪ್ರಜಾಪತಿಃ ಪೂರ್ವಂ ದೇವಾಃ ಸರ್ಷಿಗಣಾಸ್ತಥಾ|
12185020c ಇಷ್ಟ್ವೇಷ್ಟತಪಸಃ ಪೂತಾ ಬ್ರಹ್ಮಲೋಕಮುಪಾಶ್ರಿತಾಃ||
ಹಿಂದೆ ಇಲ್ಲಿಯೇ ಪ್ರಜಾಪತಿ, ದೇವತೆಗಳು ಮತ್ತು ಋಷಿಗಣಗಳು ಯಜ್ಞವನ್ನೂ ಅಭೀಷ್ಟ ತಪಸ್ಸನ್ನೂ ಮಾಡಿ ಪವಿತ್ರಾತ್ಮರಾಗಿ ಬ್ರಹ್ಮಲೋಕವನ್ನು ಸೇರಿದರು.
12185021a ಉತ್ತರಃ ಪೃಥಿವೀಭಾಗಃ ಸರ್ವಪುಣ್ಯತಮಃ ಶುಭಃ|
12185021c ಇಹತ್ಯಾಸ್ತತ್ರ ಜಾಯಂತೇ ಯೇ ವೈ ಪುಣ್ಯಕೃತೋ ಜನಾಃ||
ಪೃಥ್ವಿಯ ಉತ್ತರಭಾಗವು ಎಲ್ಲಕ್ಕಿಂತಲೂ ಪುಣ್ಯತಮ ಮತ್ತು ಶುಭವಾದುದು. ಇಲ್ಲಿ ಪುಣ್ಯವನ್ನು ಮಾಡಿದವರು ಅಲ್ಲಿಗೆ ಹೋಗುತ್ತಾರೆ.
12185022a ಅಸತ್ಕರ್ಮಾಣಿ ಕುರ್ವಂತಸ್ತಿರ್ಯಗ್ಯೋನಿಷು ಚಾಪರೇ|
12185022c ಕ್ಷೀಣಾಯುಷಸ್ತಥೈವಾನ್ಯೇ ನಶ್ಯಂತಿ ಪೃಥಿವೀತಲೇ||
ಪಾಪಕರ್ಮಿಗಳು ಪಶು-ಪಕ್ಷಿಗಳ ಯೋನಿಗಳಲ್ಲಿ ಹುಟ್ಟುತ್ತಾರೆ. ಇನ್ನು ಕೆಲವರು ಆಯುಷ್ಯ ಕಳೆದನಂತರ ಭೂಮಿಯಲ್ಲಿ ಬಿದ್ದು ನಾಶಹೊಂದುತ್ತಾರೆ.
12185023a ಅನ್ಯೋನ್ಯಭಕ್ಷಣೇ ಸಕ್ತಾ ಲೋಭಮೋಹಸಮನ್ವಿತಾಃ|
12185023c ಇಹೈವ ಪರಿವರ್ತಂತೇ ನ ತೇ ಯಾಂತ್ಯುತ್ತರಾಂ ದಿಶಮ್||
ಲೋಭ-ಮೋಹವಶರಾಗಿ ಅನ್ಯೋನ್ಯರನ್ನು ತಿನ್ನಲು ಆಸಕ್ತರಾಗಿರುವವರು ಇಲ್ಲಿಯೇ ಹುಟ್ಟಿ ಇಲ್ಲಿಯೇ ಸಾಯುತ್ತಿರುತ್ತಾರೆ. ಅವರೆಂದಿಗೂ ಉತ್ಕೃಷ್ಟವಾದ ಉತ್ತರದಿಕ್ಕಿನ ಲೋಕಕ್ಕೆ ಹೋಗುವುದಿಲ್ಲ.
12185024a ಯೇ ಗುರೂನುಪಸೇವಂತೇ ನಿಯತಾ ಬ್ರಹ್ಮಚಾರಿಣಃ|
12185024c ಪಂಥಾನಂ ಸರ್ವಲೋಕಾನಾಂ ತೇ ಜಾನಂತಿ ಮನೀಷಿಣಃ||
ಗುರುವನ್ನು ಸೇವಿಸುವ ನಿಯತ ಬ್ರಹ್ಮಚಾರೀ ಮನೀಷಿಣರು ಸರ್ವಲೋಕಗಳ ಮಾರ್ಗಗಳನ್ನೂ ತಿಳಿದುಕೊಳ್ಳುತ್ತಾರೆ.
12185025a ಇತ್ಯುಕ್ತೋಽಯಂ ಮಯಾ ಧರ್ಮಃ ಸಂಕ್ಷೇಪಾದ್ಬ್ರಹ್ಮನಿರ್ಮಿತಃ|
12185025c ಧರ್ಮಾಧರ್ಮೌ ಹಿ ಲೋಕಸ್ಯ ಯೋ ವೈ ವೇತ್ತಿ ಸ ಬುದ್ಧಿಮಾನ್||
ಹೀಗೆ ನಾನು ಬ್ರಹ್ಮನಿಂದಲೇ ನಿರ್ಮಿತವಾದ ಧರ್ಮವನ್ನು ಸಂಕ್ಷೇಪವಾಗಿ ಹೇಳಿದ್ದೇನೆ. ಈ ಲೋಕದಲ್ಲಿ ಧರ್ಮ-ಅಧರ್ಮಗಳನ್ನು ತಿಳಿದಿರುವವನೇ ಬುದ್ಧಿವಂತನು.””
12185026 ಭೀಷ್ಮ ಉವಾಚ|
12185026a ಇತ್ಯುಕ್ತೋ ಭೃಗುಣಾ ರಾಜನ್ ಭರದ್ವಾಜಃ ಪ್ರತಾಪವಾನ್|
12185026c ಭೃಗುಂ ಪರಮಧರ್ಮಾತ್ಮಾ ವಿಸ್ಮಿತಃ ಪ್ರತ್ಯಪೂಜಯತ್||
ಭೀಷ್ಮನು ಹೇಳಿದನು: “ರಾಜನ್! ಭೃಗುವು ಹೀಗೆ ಹೇಳಲು ಪ್ರತಾಪವಾನ್ ಪರಮಧರ್ಮಾತ್ಮಾ ಭರದ್ವಾಜನು ವಿಸ್ಮಿತನಾಗಿ ಭೃಗುವನ್ನು ಪ್ರತಿಪೂಜಿಸಿದನು.
12185027a ಏಷ ತೇ ಪ್ರಭವೋ ರಾಜನ್ ಜಗತಃ ಸಂಪ್ರಕೀರ್ತಿತಃ|
12185027c ನಿಖಿಲೇನ ಮಹಾಪ್ರಾಜ್ಞ ಕಿಂ ಭೂಯಃ ಶ್ರೋತುಮಿಚ್ಚಸಿ||
ರಾಜನ್! ಇದೋ ಜಗತ್ತಿನ ಸೃಷ್ಟಿಯ ಕುರಿತು ಸಂಪೂರ್ಣವಾಗಿ ಹೇಳಿಯಾಯಿತು. ಮಹಾಪ್ರಾಜ್ಞ! ಇನ್ನೂ ಏನನ್ನು ಕೇಳಬಯಸುತ್ತೀಯೆ?”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಭೃಗುಭರದ್ವಾಜಸಂವಾದೇ ಪಂಚಾಶೀತ್ಯಧಿಕಶತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಭೃಗುಭರದ್ವಾಜಸಂವಾದ ಎನ್ನುವ ನೂರಾಎಂಭತ್ತೈದನೇ ಅಧ್ಯಾಯವು.
[1] ಸುಸಂಕಲ್ಪಿತಮುಕ್ತಬುದ್ಧಿಃ| (ಗೀತಾ ಪ್ರೆಸ್/ಭಾರತ ದರ್ಶನ).
[2] ಮನುಷ್ಯಃ (ಗೀತಾ ಪ್ರೆಸ್/ಭಾರತ ದರ್ಶನ).
[3] ಆಚಾರ್ಯ ನೀಲಕಂಠನು ಶ್ಲೋಕ ಮತ್ತು ಮುಂದಿನ ಐದು ಶ್ಲೋಕಗಳನ್ನು ಆಧ್ಯಾತ್ಮಿಕವಾಗಿ ಅರ್ಥೈಸಿದ್ದಾನೆ. ಅವನು ಪರಲೋಕ ಅಥವಾ ಉತ್ಕೃಷ್ಠ ಲೋಕದ ಅರ್ಥವು ಪರಮಾತ್ಮ ಎಂದು ತಿಳಿದು ಅದೇ ದೃಷ್ಟಿಯಲ್ಲಿ ಶ್ರುತಿ ಮತ್ತು ಯುಕ್ತಿಯನ್ನಾಶ್ರಯಿಸಿ ಸಂಪೂರ್ಣಪ್ರಕರಣವನ್ನು ಅರ್ಥೈಸಿದ್ದಾನೆ (ಗೀತಾ ಪ್ರೆಸ್).
[4] ನಾನ್ಯೋನ್ಯಂ ವಧ್ಯತೇ ತತ್ರ| (ಗೀತಾ ಪ್ರೆಸ್/ಭಾರತ ದರ್ಶನ).
[5] ಪರೋ ಹ್ಯಧರ್ಮೋ (ಗೀತಾ ಪ್ರೆಸ್/ಭಾರತ ದರ್ಶನ).
[6] ವಾರ್ತಾ (ಗೀತಾ ಪ್ರೆಸ್/ಭಾರತ ದರ್ಶನ).
[7] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಇಹ ಚಿಂತಾ ಬಹುವಿಧಾ ಧರ್ಮಾಧರ್ಮಸ್ಯ ಕರ್ಮಣಃ| (ಗೀತಾ ಪ್ರೆಸ್/ಭಾರತ ದರ್ಶನ).