Shanti Parva: Chapter 184

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೮೪

ಬ್ರಹ್ಮಚರ್ಯ ಮತ್ತು ಗೃಹಸ್ಥಾಶ್ರಮ ಧರ್ಮಗಳ ವರ್ಣನೆ (೧-೧೮).

12184001 ಭರದ್ವಾಜ ಉವಾಚ|

12184001a ದಾನಸ್ಯ ಕಿಂ ಫಲಂ ಪ್ರಾಹುರ್ಧರ್ಮಸ್ಯ ಚರಿತಸ್ಯ ಚ|

12184001c ತಪಸಶ್ಚ ಸುತಪ್ತಸ್ಯ ಸ್ವಾಧ್ಯಾಯಸ್ಯ ಹುತಸ್ಯ ಚ||

ಭರದ್ವಾಜನು ಹೇಳಿದನು: “ದಾನದ ಫಲವೇನು? ಧರ್ಮದಲ್ಲಿ ನಡೆದುಕೊಳ್ಳುವುದರ ಫಲವೇನು? ಚೆನ್ನಾಗಿ ತಪಿಸಿದ ತಪಸ್ಸಿನ, ಸ್ವಾಧ್ಯಾಯದ ಮತ್ತು ಅಗ್ನಿಹೋತ್ರದ ಫಲಗಳು ಏನೆಂದು ಹೇಳಿದ್ದಾರೆ?”

12184002 ಭೃಗುರುವಾಚ|

12184002a ಹುತೇನ ಶಾಮ್ಯತೇ ಪಾಪಂ ಸ್ವಾಧ್ಯಾಯೇ ಶಾಂತಿರುತ್ತಮಾ|

12184002c ದಾನೇನ ಭೋಗ ಇತ್ಯಾಹುಸ್ತಪಸಾ ಸರ್ವಮಾಪ್ನುಯಾತ್||

ಭೃಗುವು ಹೇಳಿದನು: “ಅಗ್ನಿಹೋತ್ರದಿಂದ ಪಾಪವು ಪರಿಹಾರವಾಗುತ್ತದೆ. ಸ್ವಾಧ್ಯಾಯದಿಂದ ಉತ್ತಮ ಶಾಂತಿಯು ದೊರೆಯುತ್ತದೆ. ದಾನದಿಂದ ಭೋಗ ಮತ್ತು ತಪಸ್ಸಿನಿಂದ ಎಲ್ಲವೂ ದೊರೆಯುತ್ತದೆ ಎಂದು ಹೇಳುತ್ತಾರೆ.

12184003a ದಾನಂ ತು ದ್ವಿವಿಧಂ ಪ್ರಾಹುಃ ಪರತ್ರಾರ್ಥಮಿಹೈವ ಚ|

12184003c ಸದ್ಭ್ಯೋ ಯದ್ದೀಯತೇ ಕಿಂ ಚಿತ್ತತ್ಪರತ್ರೋಪತಿಷ್ಠತಿ||

ದಾನದಲ್ಲಿ ಎರಡು ವಿಧಗಳನ್ನು ಹೇಳಿದ್ದಾರೆ: ಪರಲೋಕಕ್ಕಾಗಿ ಮತ್ತು ಇಹಲೋಕಕ್ಕಾಗಿ. ಸತ್ಪುರುಷರಿಗೆ ನೀಡುವ ಅಲ್ಪದಾನವೂ ಪರಲೋಕಕ್ಕೆ ಸಾಧನವಾಗುತ್ತದೆ.

12184004a ಅಸತ್ಸು ದೀಯತೇ ಯತ್ತು ತದ್ದಾನಮಿಹ ಭುಜ್ಯತೇ|

12184004c ಯಾದೃಶಂ ದೀಯತೇ ದಾನಂ ತಾದೃಶಂ ಫಲಮಾಪ್ಯತೇ||

ಅಸತ್ಪುರುಷರಿಗೆ ನೀಡುವ ದಾನವು ಈ ಲೋಕದಲ್ಲಿ ಮಾತ್ರ ಭೋಗಾದಿ ಫಲಗಳನ್ನು ಕೊಡುತ್ತದೆ. ದಾನವು ಹೇಗಿರುತ್ತದೆಯೋ ಅದರ ಫಲವೂ ಅದಕ್ಕೆ ಅನುಗುಣವಾಗಿರುತ್ತದೆ.”

12184005 ಭರದ್ವಾಜ ಉವಾಚ|

12184005a ಕಿಂ ಕಸ್ಯ ಧರ್ಮಚರಣಂ ಕಿಂ ವಾ ಧರ್ಮಸ್ಯ ಲಕ್ಷಣಮ್|

12184005c ಧರ್ಮಃ ಕತಿವಿಧೋ ವಾಪಿ ತದ್ಭವಾನ್ವಕ್ತುಮರ್ಹತಿ||

ಭರದ್ವಾಜನು ಹೇಳಿದನು: “ಯಾವ ಧರ್ಮಾಚರಣೆಯು ಯಾರಿಗೆ ವಿಹಿತವಾಗಿದೆ? ಧರ್ಮದ ಲಕ್ಷಣವೇನು? ಧರ್ಮದಲ್ಲಿ ಎಷ್ಟು ವಿಧಗಳಿವೆ? ಇದನ್ನು ನೀನು ಹೇಳಬೇಕು.”

12184006 ಭೃಗುರುವಾಚ|

12184006a ಸ್ವಧರ್ಮಚರಣೇ ಯುಕ್ತಾ ಯೇ ಭವಂತಿ ಮನೀಷಿಣಃ|

12184006c ತೇಷಾಂ ಧರ್ಮ[1]ಫಲಾವಾಪ್ತಿರ್ಯೋಽನ್ಯಥಾ ಸ ವಿಮುಹ್ಯತಿ||

ಭೃಗುವು ಹೇಳಿದನು: “ಸ್ವಧರ್ಮಾಚರಣೆಯಲ್ಲಿ ನಿರತರಾಗಿರುವ ಮನೀಷಿಣರಿಗೆ ಧರ್ಮಫಲಗಳು ಪ್ರಾಪ್ತವಾಗುತ್ತವೆ. ಸ್ವಧರ್ಮಕ್ಕೆ ವಿರುದ್ಧವಾದ ಆಚರಣೆಯನ್ನು ಮಾಡುವವರು ಮೋಹವಶರಾಗುತ್ತಾರೆ[2].”

12184007 ಭರದ್ವಾಜ ಉವಾಚ|

12184007a ಯದೇತಚ್ಚಾತುರಾಶ್ರಮ್ಯಂ ಬ್ರಹ್ಮರ್ಷಿವಿಹಿತಂ ಪುರಾ|

12184007c ತೇಷಾಂ ಸ್ವೇ ಸ್ವೇ ಯ ಆಚಾರಾಸ್ತಾನ್ಮೇ ವಕ್ತುಮಿಹಾರ್ಹಸಿ||

ಭರದ್ವಾಜನು ಹೇಳಿದನು: “ಹಿಂದೆ ಬ್ರಹ್ಮರ್ಷಿಗಳು ವಿಂಘಡಿಸಿರುವ ನಾಲ್ಕು ಆಶ್ರಮಗಳಲ್ಲಿ ಒಂದೊಂದಕ್ಕೂ ಇರುವ ಪ್ರತ್ಯೇಕ ಧರ್ಮಗಳ ಕುರಿತು ನನಗೆ ಹೇಳಬೇಕು.”

12184008 ಭೃಗುರುವಾಚ|

12184008A ಪೂರ್ವಮೇವ ಭಗವತಾ ಲೋಕಹಿತಮನುತಿಷ್ಠತಾ

ಧರ್ಮಸಂರಕ್ಷಣಾರ್ಥಮಾಶ್ರಮಾಶ್ಚತ್ವಾರೋಽಭಿನಿರ್ದಿಷ್ಟಾಃ|

12184008B ತತ್ರ ಗುರುಕುಲವಾಸಮೇವ

         ತಾವತ್ಪ್ರಥಮಮಾಶ್ರಮಮುದಾಹರಂತಿ||

12184008C ಸಮ್ಯಗತ್ರ ಶೌಚಸಂಸ್ಕಾರವಿನಯನಿಯಮಪ್ರಣೀತೋ

         ವಿನೀತಾತ್ಮಾ ಉಭೇ ಸಂಧ್ಯೇ         ಭಾಸ್ಕರಾಗ್ನಿದೈವತಾನ್ಯುಪಸ್ಥಾಯ ವಿಹಾಯ ತಂದ್ರಾಲಸ್ಯೇ

ಗುರೋರಭಿವಾದನವೇದಾಭ್ಯಾಸಶ್ರವಣಪವಿತ್ರೀಕೃತಾಂತರ        ತ್ಮಾ ತ್ರಿಷವಣಮುಪಸ್ಪೃಶ್ಯ

ಬ್ರಹ್ಮಚರ್ಯಾಗ್ನಿಪರಿಚರಣಗುರುಶುಶ್ರೂಷಾನಿತ್ಯೋ

ಭೈಕ್ಷಾದಿಸರ್ವನಿವೇದಿತಾಂತರಾತ್ಮಾ

ಗುರುವಚನನಿರ್ದೇಶಾನುಷ್ಠಾನಾಪ್ರತಿಕೂಲೋ

ಗುರುಪ್ರಸಾದಲಬ್ಧಸ್ವಾಧ್ಯಾಯತತ್ಪರಃ ಸ್ಯಾತ್|

ಭೃಗುವು ಹೇಳಿದನು: “ಜಗತ್ತಿನ ಕಲ್ಯಾಣಕ್ಕಾಗಿ ಭಗವಾನ್ ಬ್ರಹ್ಮನು ಪೂರ್ವಕಾಲದಲ್ಲಿಯೇ ಧರ್ಮವನ್ನು ರಕ್ಷಿಸಲೋಸುಗ ನಾಲ್ಕು ಆಶ್ರಮಗಳನ್ನು ನಿರ್ದೇಶಿಸಿದ್ದನು. ಅವುಗಳಲ್ಲಿ ಮೊದಲನೆಯದು -  ಬ್ರಹ್ಮಚರ್ಯಪಾಲನೆಯೊಂದಿಗೆ ಗುರುಕುಲವಾಸ. ಇದರಲ್ಲಿರುವ ಬ್ರಹ್ಮಚಾರಿಯು ಅಂತಃಶುದ್ಧಿ-ಬಹಿಃಶುದ್ಧಿ, ವೈದಿಕ ಸಂಸ್ಕಾರ ಮತ್ತು ವ್ರತ-ನಿಯಮಗಳನ್ನು ಪಾಲಿಸುತ್ತಾ ತನ್ನ ಮನಸ್ಸನ್ನು ವಶದಲ್ಲಿರಿಸಿಕೊಳ್ಳಬೇಕು. ಬೆಳಿಗ್ಗೆ ಮತ್ತು ಸಾಯಂಕಾಲ ಎರಡೂ ಸಮಯಗಳಲ್ಲಿ ಸಂಧ್ಯೋಪಾಸನೆ, ಸೂರ್ಯೋಪಸ್ಥಾನ ಮತ್ತು ಅಗ್ನಿಹೋತ್ರಗಳ ಮೂಲಕ ಅಗ್ನಿದೇವನನ್ನು ಆರಾಧಿಸಬೇಕು. ಆಯಾಸ ಮತ್ತು ಆಲಸ್ಯಗಳನ್ನು ತೊರೆದು ಪ್ರತಿದಿನ ಗುರುವನ್ನು ನಮಸ್ಕರಿಸಬೇಕು ಮತ್ತು ವೇದಗಳ ಅಭ್ಯಾಸ-ಶ್ರವಣಗಳಿಂದ ತನ್ನ ಅಂತರಾತ್ಮವನ್ನು ಪವಿತ್ರಗೊಳಿಸಿಕೊಳ್ಳಬೇಕು. ಬೆಳಿಗ್ಗೆ, ಸಾಯಂಕಾಲ ಮತ್ತು ಮಧ್ಯಾಹ್ನ ಮೂರೂ ಹೊತ್ತು ಸ್ನಾನಮಾಡಬೇಕು. ಬ್ರಹ್ಮಚರ್ಯದ ಪಾಲನೆ, ಅಗ್ನಿಯ ಉಪಾಸನೆ ಮತ್ತು ಗುರುವಿನ ಸೇವೆಯನ್ನು ಮಾಡಬೇಕು. ಪ್ರತಿದಿನ ಭಿಕ್ಷೆ ಬೇಡಿ ತರಬೇಕು. ಭಿಕ್ಷೆಯಲ್ಲಿ ದೊರಕಿದಷ್ಟನ್ನೂ ಗುರುವಿಗೆ ಅರ್ಪಿಸಬೇಕು. ತನ್ನ ಅಂತರಾತ್ಮವನ್ನೇ ಗುರುವಿನ ಚರಣಗಳಲ್ಲಿಡಬೇಕು. ಗುರುವು ಏನೇ ಹೇಳಿದರೂ, ಯಾವುದೇ ಸೂಚನೆಯನ್ನಿತ್ತರೂ ಮತ್ತು ಯಾವುದೇ ಕಾರ್ಯಕ್ಕೆ ಆಜ್ಞೆಯನ್ನಿತ್ತರೂ ಅದಕ್ಕೆ ವಿಪರೀತವಾಗಿ ನಡೆದುಕೊಳ್ಳಬಾರದು. ಗುರುವಿನ ಕೃಪಾಪ್ರಸಾದದಿಂದ ದೊರೆಯುವ ಸ್ವಾಧ್ಯಾಯದಲ್ಲಿ ತತ್ಪರನಾಗಿರಬೇಕು.

12184009A ಭವತಿ ಚಾತ್ರ ಶ್ಲೋಕಃ||

12184009a ಗುರುಂ ಯಸ್ತು ಸಮಾರಾಧ್ಯ ದ್ವಿಜೋ ವೇದಮವಾಪ್ನುಯಾತ್|

12184009c ತಸ್ಯ ಸ್ವರ್ಗಫಲಾವಾಪ್ತಿಃ ಸಿಧ್ಯತೇ ಚಾಸ್ಯ ಮಾನಸಮ್||

ಈ ವಿಷಯದಲ್ಲಿ ಒಂದು ಶ್ಲೋಕವಿದೆ: ಯಾರು ಗುರುವನ್ನು ಆರಾಧಿಸಿ ವೇದಾಧ್ಯಯನ ಮಾಡುತ್ತಾನೋ ಅವನಿಗೆ ಸ್ವರ್ಗಲೋಕವು ಪ್ರಾಪ್ತವಾಗುತ್ತದೆ ಮತ್ತು ಅವನ ಮಾನಸಿಕ ಸಂಕಲ್ಪವು ಸಿದ್ಧವಾಗುತ್ತದೆ.

12184010A ಗಾರ್ಹಸ್ಥ್ಯಂ ಖಲು ದ್ವಿತೀಯಮಾಶ್ರಮಂ ವದಂತಿ|

12184010B ತಸ್ಯ ಸಮುದಾಚಾರಲಕ್ಷಣಂ ಸರ್ವಮನುವ್ಯಾಖ್ಯಾಸ್ಯಾಮಃ||

12184010C ಸಮಾವೃತ್ತಾನಾಂ ಸದಾರಾಣಾಂ

         ಸಹಧರ್ಮಚರ್ಯಾಫಲಾರ್ಥಿನಾಂ ಗೃಹಾಶ್ರಮೋ        ವಿಧೀಯತೇ|

12184010D ಧರ್ಮಾರ್ಥಕಾಮಾವಾಪ್ತಿರ್ಹ್ಯತ್ರ

         ತ್ರಿವರ್ಗಸಾಧನಮವೇಕ್ಷ್ಯಾಗರ್ಹಿತೇನ ಕರ್ಮಣಾ         ಧನಾನ್ಯಾದಾಯ

         ಸ್ವಾಧ್ಯಾಯಪ್ರಕರ್ಷೋಪಲಬ್ಧೇನ ಬ್ರಹ್ಮರ್ಷಿನಿರ್ಮಿತೇನ ವಾ

         ಅದ್ರಿಸಾರಗತೇನ ವಾ

         ಹವ್ಯನಿಯಮಾಭ್ಯಾಸದೈವತಪ್ರಸಾದೋಪಲಬ್ಧೇನ ವಾ   ಧನೇನ ಗೃಹಸ್ಥೋ ಗಾರ್ಹಸ್ಥ್ಯಂ ಪ್ರವರ್ತಯೇತ್||

12184010E ತದ್ಧಿ ಸರ್ವಾಶ್ರಮಾಣಾಂ ಮೂಲಮುದಾಹರಂತಿ|

12184010F ಗುರುಕುಲವಾಸಿನಃ ಪರಿವ್ರಾಜಕಾ ಯೇ ಚಾನ್ಯೇ

ಸಂಕಲ್ಪಿತವ್ರತನಿಯಮಧರ್ಮಾನುಷ್ಠಾಯಿನಸ್ತೇಷಾಮಪ್ಯತ          ಏವ ಭಿಕ್ಷಾಬಲಿಸಂವಿಭಾಗಾಃ ಪ್ರವರ್ತಂತೇ||

ಗಾರ್ಹಸ್ಥ್ಯವು ಎರಡನೇ ಆಶ್ರಮವೆಂದು ಹೇಳಿದ್ದಾರೆ. ಈಗ ನಾನು ಅದರಲ್ಲಿ ಪಾಲಿಸಬೇಕಾದ ಸಮಸ್ತ ಉತ್ತಮ ಆಚರಣೆಗಳನ್ನು ವರ್ಣಿಸುತ್ತೇನೆ. ವಿದ್ಯೆಯನ್ನು ಮುಗಿಸಿ ಗುಲಕುಲದಿಂದ ಸ್ನಾತಕನಾಗಿ ಹಿಂದಿರುಗಿದ ಸದಾಚಾರೀ ಬ್ರಹ್ಮಚಾರಿಗೆ ಒಂದುವೇಳೆ ಸಹಧರ್ಮಿಣಿಯೊಂದಿಗೆ ಧರ್ಮಾಚರಣೆಮಾಡುವ ಮತ್ತು ಅದರ ಫಲದ ಇಚ್ಛೆಯಾದರೆ ಅವನಿಗೆ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ವಿಧಿಯಿದೆ. ಈ ಆಶ್ರಮದಲ್ಲಿ ಧರ್ಮ, ಅರ್ಥ ಮತ್ತು ಕಾಮ ಈ ಮೂರರ ಪ್ರಾಪ್ತಿಯಾಗುತ್ತದೆ. ಆದುದರಿಂದ ತ್ರಿವರ್ಗಸಾಧನೆಯನ್ನು ಬಯಸಿ ಗೃಹಸ್ಥನಾದವನು ಉತ್ತಮ ಕರ್ಮಗಳಿಂದ ಧನಸಂಗ್ರಹ ಮಾಡಬೇಕು ಅರ್ಥಾತ್ ಅವನು ಸ್ವಾಧ್ಯಾಯದಿಂದ ಪಡೆದುಕೊಂಡ ವಿಶಿಷ್ಠ ಯೋಗ್ಯತೆಯಿಂದ ಬ್ರಹ್ಮರ್ಷಿಗಳು ಧರ್ಮಶಾಸ್ತ್ರಗಳಲ್ಲಿ ನಿಶ್ಚಯಿಸಿದ ಮಾರ್ಗದಲ್ಲಿ ಅಥವಾ ಪರ್ವತದಿಂದ ಉಪಲಬ್ಧವಾಗುವ ಅದರ ಸಾರಭೂತ ಮಣಿ-ರತ್ನ, ದಿವ್ಯೌಷಧಿ, ಮತ್ತು ಚಿನ್ನ ಮೊದಲಾದ ಧನವನ್ನು ಸಂಗ್ರಹಿಸಬೇಕು. ಅಥವಾ ಹವ್ಯ, ಕವ್ಯ, ನಿಯಮ, ವೇದಾಭ್ಯಾಸ ಮತ್ತು ದೇವತೆಗಳ ಪ್ರಸನ್ನತೆಯಿಂದ ದೊರೆತ ಧನದ ಮೂಲಕ ಗೃಹಸ್ಥನು ತನ್ನ ಗೃಹಸ್ತಿಯನ್ನು ನಿರ್ವಹಿಸಬೇಕು. ಏಕೆಂದರೆ ಗಾರ್ಹಸ್ಥ್ಯ ಆಶ್ರಮವು ಎಲ್ಲ ಆಶ್ರಮಗಳ ಮೂಲವೆಂದು ಹೇಳುತ್ತಾರೆ. ಗುರುಕುಲದಲ್ಲಿ ವಾಸಿಸುವ ಬ್ರಹ್ಮಚಾರಿ, ವನದಲ್ಲಿದ್ದುಕೊಂಡು ಸಂಕಲ್ಪಾನುಸಾರ ವ್ರತ, ನಿಯಮ ಮತ್ತು ಧರ್ಮಪಾಲನೆ ಮಾಡುವ ವಿವಿಧ ವಾನಪ್ರಸ್ಥರು ಮತ್ತು ಸರ್ವವನ್ನೂ ತ್ಯಜಿಸಿ ಸರ್ವತ್ರ ಸಂಚರಿಸುವ ಸಂನ್ಯಾಸೀ ಇವರೆಲ್ಲರೂ ಗೃಹಸ್ಥಾಶ್ರಮಿಯಿಂದಲೇ ಭಿಕ್ಷಾ, ಉಡುಗೊರೆ, ಉಪಹಾರ ಮತ್ತು ದಾನಾದಿಗಳನ್ನು ಪಡೆದು ತಮ್ಮ ತಮ್ಮ ಧರ್ಮಗಳನ್ನು ಪಾಲಿಸುವುದರಲ್ಲಿ ಪ್ರವೃತ್ತರಾಗುತ್ತಾರೆ.

12184011A ವಾನಪ್ರಸ್ಥಾನಾಂ ದ್ರವ್ಯೋಪಸ್ಕಾರ ಇತಿ ಪ್ರಾಯಶಃ ಖಲ್ವೇತೇ

         ಸಾಧವಃ ಸಾಧುಪಥ್ಯದರ್ಶನಾಃ

         ಸ್ವಾಧ್ಯಾಯಪ್ರಸಂಗಿನಸ್ತೀರ್ಥಾಭಿಗಮನದೇಶದರ್ಶನಾರ್ಥಂ

         ಪೃಥಿವೀಂ ಪರ್ಯಟಂತಿ|

12184011B ತೇಷಾಂ

ಪ್ರತ್ಯುತ್ಥಾನಾಭಿವಾದನಾನಸೂಯಾವಾಕ್ಪ್ರದಾನಸೌಮುಖ್ಯಶ        ಕ್ತ್ಯಾಸನ ಶಯನಾಭ್ಯವಹಾರಸತ್ಕ್ರಿಯಾಶ್ಚೇತಿ||

ವಾನಪ್ರಸ್ಥಿಗಳಿಗೆ ಧನಸಂಗ್ರಹವು ನಿಷಿದ್ಧವು. ಈ ಶ್ರೇಷ್ಠ ಪುರುಷರು ಹೆಚ್ಚಾಗಿ ಶುದ್ಧ-ಹಿತಕರ ಅನ್ನಮಾತ್ರವನ್ನೇ ಬಯಸುತ್ತಾ ಸ್ವಾಧ್ಯಾಯ-ತೀರ್ಥಯಾತ್ರೆ-ದೇಶ ದರ್ಶನದ ನಿಮಿತ್ತ ಭೂಮಿಯಲ್ಲಿ ಸಂಚರಿಸುತ್ತಿರುತ್ತಾರೆ. ಇವರು ಮನೆಗೆ ಬಂದರೆ ಗೃಹಸ್ಥನು ಎದ್ದು ಮುಂದೆ ಹೋಗಿ ಅವರನ್ನು ಸ್ವಾಗತಿಸಬೇಕು. ಅವರ ಚರಣಗಳಲ್ಲಿ ತಲೆಯನ್ನಿಡಬೇಕು. ದೋಷದೃಷ್ಟಿಯನ್ನಿಡದೇ ಅವರೊಡನೆ ಉತ್ತಮವಾಗಿ ಮಾತನಾಡಬೇಕು. ಯಥಾಶಕ್ತಿ ಸುಖಕರ ಆಸನವನ್ನು ನೀಡಬೇಕು. ಸುಖಕರ ಹಾಸಿಗೆಯ ಮೇಲೆ ಅವರನ್ನು ಮಲಗಿಸಬೇಕು ಮತ್ತು ಉತ್ತಮ ಭೋಜನವನ್ನು ನೀಡಬೇಕು. ಹೀಗೆ ಅವರಿಗೆ ಪೂರ್ಣ ಸತ್ಕಾರವನ್ನು ನೀಡಬೇಕು. ಇದೇ ಆ ಶ್ರೇಷ್ಠ ಪುರುಷರ ಕುರಿತು ಗೃಹಸ್ಥನ ಕರ್ತವ್ಯಗಳಾಗಿವೆ.

12184012A ಭವತಿ ಚಾತ್ರ ಶ್ಲೋಕಃ|

12184012a ಅತಿಥಿರ್ಯಸ್ಯ ಭಗ್ನಾಶೋ ಗೃಹಾತ್ ಪ್ರತಿನಿವರ್ತತೇ|

12184012c ಸ ದತ್ತ್ವಾ ದುಷ್ಕೃತಂ ತಸ್ಮೈ ಪುಣ್ಯಮಾದಾಯ ಗಚ್ಚತಿ||

ಈ ವಿಷಯದಲ್ಲಿ ಶ್ಲೋಕವೊಂದಿದೆ: ಯಾವ ಗೃಹಸ್ಥನ ಮನೆಯ ಬಾಗಿಲಿನಿಂದ ಯಾರೇ ಅತಿಥಿಯು ಭಿಕ್ಷೆಯು ದೊರೆಯದೇ ನಿರಾಶನಾಗಿ ಹಿಂದಿರುಗುತ್ತಾನೋ ಆ ಗೃಹಸ್ಥನಿಗೆ ಅವನು ತನ್ನ ಪಾಪವನ್ನು ಕೊಟ್ಟು ಅವನ ಪುಣ್ಯವನ್ನು ತೆಗೆದುಕೊಂಡು ಹೋಗುತ್ತಾನೆ.

12184013A ಅಪಿ ಚಾತ್ರ ಯಜ್ಞಕ್ರಿಯಾಭಿರ್ದೇವತಾಃ ಪ್ರೀಯಂತೇ       ನಿವಾಪೇನ ಪಿತರೋ ವೇದಾಭ್ಯಾಸಶ್ರವಣಧಾರಣೇನ       ಋಷಯಃ||

12184013B ಅಪತ್ಯೋತ್ಪಾದನೇನ ಪ್ರಜಾಪತಿರಿತಿ|

ಇದಲ್ಲದೇ ಗೃಹಸ್ಥಾಶ್ರಮದಲ್ಲಿದ್ದುಕೊಂಡು ಯಜ್ಞಮಾಡುವುದರಿಂದ ದೇವತೆಗಳು, ಶ್ರಾದ್ಧ-ತರ್ಪಣಗಳನ್ನು ಮಾಡುವುದರಿಂದ ಪಿತೃಗಳು, ವೇದ-ಶಾಸ್ತ್ರಗಳ ಶ್ರವಣ, ಅಭ್ಯಾಸ ಮತ್ತು ಧಾರಣೆಗಳಿಂದ ಋಷಿಗಳು ಹಾಗೂ ಸಂತಾನೋತ್ಪತಿಯಿಂದ ಪ್ರಜಾಪತಿ – ಇವರು ಪ್ರಸನ್ನರಾಗುತ್ತಾರೆ.

12184014A ಶ್ಲೋಕೌ ಚಾತ್ರ ಭವತಃ||

12184014a ವತ್ಸಲಾಃ ಸರ್ವಭೂತಾನಾಂ ವಾಚ್ಯಾಃ ಶ್ರೋತ್ರಸುಖಾ ಗಿರಃ|

12184014c ಪರಿವಾದೋಪಘಾತೌ ಚ[3] ಪಾರುಷ್ಯಂ ಚಾತ್ರ ಗರ್ಹಿತಮ್||

ಈ ವಿಷಯದಲ್ಲಿ ಎರಡು ಶ್ಲೋಕಗಳಿವೆ: ಸರ್ವಭೂತಗಳಲ್ಲಿ ವಾತ್ಸಲ್ಯವಿರುವ ಮತ್ತು ಕೇಳಲು ಸುಖಕರವಾಗಿರುವ ಮಾತನ್ನು ಆಡಬೇಕು. ಇನ್ನೊಬ್ಬರಿಗೆ ನೋವನ್ನುಂಟುಮಾಡುವುದು, ಘಾತಿಯನ್ನುಂಟುಮಾಡುವುದು ಮತ್ತು ಕಠೋರ ಮಾತನಾಡುವುದು ನಿಂದನೀಯವು.

12184015a ಅವಜ್ಞಾನಮಹಂಕಾರೋ ದಂಭಶ್ಚೈವ ವಿಗರ್ಹಿತಃ|

12184015c ಅಹಿಂಸಾ ಸತ್ಯಮಕ್ರೋಧಃ ಸರ್ವಾಶ್ರಮಗತಂ ತಪಃ||

ಪರತಿರಸ್ಕಾರ, ಅಹಂಕಾರ ಮತ್ತು ದಾಂಭಿಕತೆ – ಇವುಗಳು ನಿಂದನೀಯವು. ಅಹಿಂಸೆ, ಸತ್ಯ, ಅಕ್ರೋಧ – ಇವುಗಳು ಎಲ್ಲ ಆಶ್ರಮಿಗಳಿಗೂ ಹೇಳಿರುವ ತಪಸ್ಸು.

12184016A ಅಪಿ ಚಾತ್ರ

ಮಾಲ್ಯಾಭರಣವಸ್ತ್ರಾಭ್ಯಂಗಗಂಧೋಪಭೋಗನೃತ್ತಗೀತವಾದಿತ್ರ          ಶ್ರುತಿಸುಖನಯನಾಭಿರಾಮಸಂದರ್ಶನಾನಾಂ

ಪ್ರಾಪ್ತಿರ್ಭಕ್ಷ್ಯಭೋಜ್ಯಪೇಯಲೇಹ್ಯಚೋಷ್ಯಾಣಾಮಭ್ಯವಹಾರ್ಯಾಣಾಂ           ವಿವಿಧಾನಾಮುಪಭೋಗಃ ಸ್ವದಾರವಿಹಾರಸಂತೋಷಃ

ಕಾಮಸುಖಾವಾಪ್ತಿರಿತಿ

ಇವಲ್ಲದೇ ಗೃಹಸ್ಥಾಶ್ರಮದಲ್ಲಿ ಪುಷ್ಪಮಾಲೆಗಳು, ನಾನಾ ವಿಧದ ಆಭೂಷಣಗಳು, ವಸ್ತ್ರ, ಅಭ್ಯಂಗ, ಗಂಧೋಪಭೋಗ, ನೃತ್ಯ-ಗೀತ-ವಾದ್ಯಗಳು, ಕಣ್ಣು-ಕಿವಿಗಳಿಗೆ ಆನಂದವನ್ನುಂಟುಮಾಡುವ ದೃಶ್ಯಗಳು, ಭಕ್ಷ-ಭೋಜ್ಯ-ಪೇಯ-ಲೇಹ ಮತ್ತು ಚೋಷ್ಯಗಳು ದೊರೆಯುತ್ತವೆ. ಉದ್ಯಾನವನಗಳಲ್ಲಿ ಸಂಚರಿಸುತ್ತಾ ಆನಂದವನ್ನು ಪಡೆಯಬಹುದು. ಭಾರ್ಯೆಯೊಡನೆ ಕಾಮಸುಖವನ್ನೂ ಅನುಭವಿಸಬಹುದು.

12184017a ತ್ರಿವರ್ಗಗುಣನಿರ್ವೃತ್ತಿರ್ಯಸ್ಯ ನಿತ್ಯಂ ಗೃಹಾಶ್ರಮೇ|

12184017c ಸ ಸುಖಾನ್ಯನುಭೂಯೇಹ ಶಿಷ್ಟಾನಾಂ ಗತಿಮಾಪ್ನುಯಾತ್||

ಗೃಹಸ್ಥಾಶ್ರಮದಲ್ಲಿ ಯಾರಿಗೆ ಧರ್ಮಾರ್ಥಕಾಮಗಳು ನಿತ್ಯವೂ ಸಿದ್ಧಿಸುತ್ತವೆಯೋ ಅವನು ಈ ಲೋಕದಲ್ಲಿ ಎಲ್ಲ ವಿಧದ ಸುಖಗಳನ್ನೂ ಅನುಭವಿಸಿ ಕಡೆಯಲ್ಲಿ ಶಿಷ್ಟ ಪುರುಷನು ಹೊಂದುವ ಸದ್ಗತಿಯನ್ನು ಹೊಂದುತ್ತಾನೆ.

12184018a ಉಂಚವೃತ್ತಿರ್ಗೃಹಸ್ಥೋ ಯಃ ಸ್ವಧರ್ಮಚರಣೇ ರತಃ|

12184018c ತ್ಯಕ್ತಕಾಮಸುಖಾರಂಭಸ್ತಸ್ಯ ಸ್ವರ್ಗೋ ನ ದುರ್ಲಭಃ||

ಸ್ವಧರ್ಮಾಚರಣೆಯಲ್ಲಿಯೇ ಇದ್ದುಕೊಂಡು ಉಂಛವೃತ್ತಿಯ ಜೀವನವನ್ನು ನಡೆಸುವ ಮತ್ತು ಕಾಮಸುಖಗಳನ್ನು ಪರಿತ್ಯಜಿಸಿದ ಗೃಹಸ್ಥನಿಗೆ ಸ್ವರ್ಗವು ದುರ್ಲಭವಲ್ಲ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಭೃಗುಭರದ್ವಾಜಸಂವಾದೇ ಚತುರಾಶೀತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಭೃಗುಭರದ್ವಾಜಸಂವಾದ ಎನ್ನುವ ನೂರಾಎಂಭತ್ನಾಲ್ಕನೇ ಅಧ್ಯಾಯವು.

[1] ಸ್ವರ್ಗ (ಗೀತಾ ಪ್ರೆಸ್/ಭಾರತ ದರ್ಶನ)

[2] ಈ ಶ್ಲೋಕದಲ್ಲಿ ಭರದ್ವಾಜನ ಮೂರೂ ಪ್ರಶ್ನೆಗಳಿಗೆ ಉತ್ತರವಿದೆ: (೧) ಸ್ವಧರ್ಮಾಚರಣೆಯೇ ಎಲ್ಲರ ಧರ್ಮವು. (೨) ವರ್ಣಾಶ್ರಮಧರ್ಮಗಳ ಅನುಷ್ಠಾನವೇ ಧರ್ಮದ ಲಕ್ಷಣ ಮತ್ತು (೩) ಎಷ್ಟು ವರ್ಣಗಳಿವೆಯೋ ಮತ್ತು ಎಷ್ಟು ಆಶ್ರಮಗಳಿವೆಯೋ ಅಷ್ಟು ವಿಧದ ಧರ್ಮಗಳಿವೆ (ಭಾರತ ದರ್ಶನ).

[3] ಪರಿತಾಪೋಪಘಾತಶ್ಚ (ಗೀತಾ ಪ್ರೆಸ್/ ಭಾರತ ದರ್ಶನ).

Comments are closed.