ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೧೮೨
ನಾಲ್ಕೂ ವರ್ಣಗಳ ಪ್ರತ್ಯೇಕ ಕರ್ಮಗಳು ಮತ್ತು ಸದಾಚಾರಗಳ ವರ್ಣನೆ; ವೈರಾಗ್ಯದಿಂದ ಪರಬ್ರಹ್ಮಪ್ರಾಪ್ತಿ (೧-೧೭).
12182001 ಭರದ್ವಾಜ ಉವಾಚ|
12182001a ಬ್ರಾಹ್ಮಣಃ ಕೇನ ಭವತಿ ಕ್ಷತ್ರಿಯೋ ವಾ ದ್ವಿಜೋತ್ತಮ|
12182001c ವೈಶ್ಯಃ ಶೂದ್ರಶ್ಚ ವಿಪ್ರರ್ಷೇ ತದ್ಬ್ರೂಹಿ ವದತಾಂ ವರ||
ಭರದ್ವಾಜನು ಹೇಳಿದನು: “ದ್ವಿಜೋತ್ತಮ! ವಿಪ್ರರ್ಷೇ! ಮಾತನಾಡುವವರಲ್ಲಿ ಶ್ರೇಷ್ಠ! ಮನುಷ್ಯನು ಯಾವ ಕರ್ಮಗಳನ್ನು ಮಾಡುವುದರಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಅಥವಾ ಶೂದ್ರನಾಗುತ್ತಾನೆ ಎನ್ನುವುದನ್ನು ಹೇಳು.”
12182002 ಭೃಗುರುವಾಚ|
12182002a ಜಾತಕರ್ಮಾದಿಭಿರ್ಯಸ್ತು ಸಂಸ್ಕಾರೈಃ ಸಂಸ್ಕೃತಃ ಶುಚಿಃ|
12182002c ವೇದಾಧ್ಯಯನಸಂಪನ್ನಃ ಷಟ್ಸು ಕರ್ಮಸ್ವವಸ್ಥಿತಃ||
12182003a ಶೌಚಾಚಾರಸ್ಥಿತಃ ಸಮ್ಯಗ್ವಿಘಸಾಶೀ ಗುರುಪ್ರಿಯಃ|
12182003c ನಿತ್ಯವ್ರತೀ ಸತ್ಯಪರಃ ಸ ವೈ ಬ್ರಾಹ್ಮಣ ಉಚ್ಯತೇ||
ಭೃಗುವು ಹೇಳಿದನು: “ಜಾತಕರ್ಮಾದಿ ಸಂಸ್ಕಾರಗಳಿಂದ ಸಂಸ್ಕೃತನಾಗಿ ಶುಚಿಯಾಗಿರುವ, ವೇದಾಧ್ಯಯನ ಸಂಪನ್ನನಾಗಿ ಆರು ಕರ್ಮಗಳಲ್ಲಿ[1] ವ್ಯವಸ್ಥಿತನಾಗಿರುವ, ಶೌಚ ಮತ್ತು ಸದಾಚಾರಗಳಲ್ಲಿ ತೊಡಗಿರುವ, ಉತ್ತಮ ಯಜ್ಞಶಿಷ್ಠವನ್ನೇ ಉಣ್ಣುವ, ಗುರುಪ್ರಿಯ, ನಿತ್ಯವ್ರತಿ, ಸತ್ಯಪರನನ್ನೇ ಬ್ರಾಹ್ಮಣನೆನ್ನುತ್ತಾರೆ.
12182004a ಸತ್ಯಂ ದಾನಂ ದಮೋಽದ್ರೋಹ ಆನೃಶಂಸ್ಯಂ ಕ್ಷಮಾ[2] ಘೃಣಾ|
12182004c ತಪಶ್ಚ ದೃಶ್ಯತೇ ಯತ್ರ ಸ ಬ್ರಾಹ್ಮಣ ಇತಿ ಸ್ಮೃತಃ||
ಸತ್ಯ, ದಾನ, ದಮ, ಅದ್ರೋಹ, ಆನೃಶಂಸ್ಯತ್ವ, ಕ್ಷಮೆ, ದಯೆ ಮತ್ತು ತಪಗಳು ಯಾರಲ್ಲಿ ಕಾಣುತ್ತವೆಯೋ ಅವನೇ ಬ್ರಾಹ್ಮಣನೆಂದು ಹೇಳಿದ್ದಾರೆ.
12182005a ಕ್ಷತ್ರಜಂ ಸೇವತೇ ಕರ್ಮ ವೇದಾಧ್ಯಯನಸಂಮತಃ|
12182005c ದಾನಾದಾನರತಿರ್ಯಶ್ಚ ಸ ವೈ ಕ್ಷತ್ರಿಯ ಉಚ್ಯತೇ||
ಕ್ಷತ್ರಿಯೋಚಿತ ಯುದ್ಧಾದಿ ಕರ್ಮಗಳಲ್ಲಿ ತೊಡಗಿರುವ, ವೇದಾಧ್ಯಯನ ಮಾಡುವ, ದಾನನೀಡುವ ಮತ್ತು ಪ್ರಜೆಗಳಿಂದ ಕರವನ್ನು ತೆಗೆದುಕೊಂಡು ಅವರ ರಕ್ಷಣೆಯನ್ನು ಮಾಡುವವನು ಕ್ಷತ್ರಿಯ ಎಂದು ಹೇಳುತ್ತಾರೆ.
12182006a ಕೃಷಿಗೋರಕ್ಷ್ಯವಾಣಿಜ್ಯಂ ಯೋ ವಿಶತ್ಯನಿಶಂ ಶುಚಿಃ[3]|
12182006c ವೇದಾಧ್ಯಯನಸಂಪನ್ನಃ ಸ ವೈಶ್ಯ ಇತಿ ಸಂಜ್ಞಿತಃ||
ಕೃಷಿ, ಗೋಪಾಲನೆ, ವಾಣಿಜ್ಯವನ್ನು ಮಾಡಿಕೊಂಡಿರುವ, ಸರ್ವದಾ ಶುಚಿಯಾಗಿರುವ, ವೇದಾಧ್ಯಯನ ಸಂಪನ್ನನನ್ನು ವೈಶ್ಯನೆಂದು ಕರೆಯುತ್ತಾರೆ.
12182007a ಸರ್ವಭಕ್ಷರತಿರ್ನಿತ್ಯಂ ಸರ್ವಕರ್ಮಕರೋಽಶುಚಿಃ|
12182007c ತ್ಯಕ್ತವೇದಸ್ತ್ವನಾಚಾರಃ ಸ ವೈ ಶೂದ್ರ ಇತಿ ಸ್ಮೃತಃ||
ವೇದಗಳನ್ನು ಮತ್ತು ಸದಾಚಾರಗಳನ್ನು ತ್ಯಜಿಸಿ ಎಲ್ಲವನ್ನೂ ತಿನ್ನುವ, ಎಲ್ಲ ಕರ್ಮಗಳನ್ನೂ ಮಾಡುವ, ಅಶುಚಿಯೂ ಅನಿತ್ಯನೂ ಆದವನನ್ನು ಶೂದ್ರ ಎಂದು ಕರೆಯುತ್ತಾರೆ.
12182008a ಶೂದ್ರೇ ಚೈತದ್ಭವೇಲ್ಲಕ್ಷ್ಯಂ ದ್ವಿಜೇ ಚೈತನ್ನ ವಿದ್ಯತೇ|
12182008c ನ ವೈ ಶೂದ್ರೋ ಭವೇಚ್ಚೂದ್ರೋ ಬ್ರಾಹ್ಮಣೋ ನ ಚ ಬ್ರಾಹ್ಮಣಃ||
ಮೇಲೆ ಹೇಳಿದ ಬ್ರಾಹ್ಮಣನ ಲಕ್ಷಣಗಳು ಶೂದ್ರನಲ್ಲಿದ್ದರೆ ಅವನು ಶೂದ್ರನಾಗಿಯೇ ಉಳಿಯುವುದಿಲ್ಲ. ಹಾಗೆಯೇ ಸತ್ಯಾದಿ ಗುಣಗಳು ಬ್ರಾಹ್ಮಣನಲ್ಲಿಲ್ಲದಿದ್ದರೆ ಅವನು ಬ್ರಾಹ್ಮಣನಾಗಿ ಉಳಿಯುವುದಿಲ್ಲ.
12182009a ಸರ್ವೋಪಾಯೈಸ್ತು ಲೋಭಸ್ಯ ಕ್ರೋಧಸ್ಯ ಚ ವಿನಿಗ್ರಹಃ|
12182009c ಏತತ್ಪವಿತ್ರಂ ಜ್ಞಾತವ್ಯಂ ತಥಾ ಚೈವಾತ್ಮಸಂಯಮಃ||
ಸರ್ವೋಪಾಯಗಳಿಂದ ಲೋಭ ಮತ್ತು ಕ್ರೋಧಗಳನ್ನು ನಿಗ್ರಹಿಸಿಕೊಂಡಿರುವುದು ಮತ್ತು ಆತ್ಮಸಂಯಮವು ಪವಿತ್ರವೆಂದು ತಿಳಿದುಕೊಳ್ಳಬೇಕು.
[4]12182010a ನಿತ್ಯಂ ಕ್ರೋಧಾತ್ತಪೋ ರಕ್ಷೇಚ್ಚ್ರಿಯಂ ರಕ್ಷೇತ ಮತ್ಸರಾತ್[5]|
12182010c ವಿದ್ಯಾಂ ಮಾನಾವಮಾನಾಭ್ಯಾಮಾತ್ಮಾನಂ ತು ಪ್ರಮಾದತಃ||
ನಿತ್ಯವೂ ತಪಸ್ಸನ್ನು ಕ್ರೋಧದಿಂದ ರಕ್ಷಿಸಬೇಕು ಮತ್ತು ಸಂಪತ್ತನ್ನು ಮತ್ಸರದಿಂದ ರಕ್ಷಿಸಿಕೊಳ್ಳಬೇಕು. ವಿದ್ಯೆಯನ್ನು ಮಾನಾಪಮಾನದಿಂದ ಮತ್ತು ತನ್ನನ್ನು ತಾನು ಪ್ರಮಾದದಿಂದ ರಕ್ಷಿಸಿಕೊಳ್ಳಬೇಕು.
12182011a ಯಸ್ಯ ಸರ್ವೇ ಸಮಾರಂಭಾ ನಿರಾಶೀರ್ಬಂಧನಾಸ್ತ್ವಿಹ|
12182011c ತ್ಯಾಗೇ ಯಸ್ಯ ಹುತಂ ಸರ್ವಂ ಸ ತ್ಯಾಗೀ ಸ ಚ ಬುದ್ಧಿಮಾನ್||
ಎಲ್ಲ ಕಾರ್ಯಗಳನ್ನೂ ಕಾಮನೆಗಳ ಬಂಧನರಹಿತವನ್ನಾಗಿಸಿ ತ್ಯಾಗದ ಅಗ್ನಿಯಲ್ಲಿ ಸರ್ವವನ್ನೂ ಹೋಮಮಾಡಿದವನೇ ತ್ಯಾಗಿ ಮತ್ತು ಅವನೇ ಬುದ್ಧಿವಂತನು.
12182012a ಅಹಿಂಸ್ರಃ ಸರ್ವಭೂತಾನಾಂ ಮೈತ್ರಾಯಣಗತಶ್ಚರೇತ್|
12182012c ಅವಿಸ್ರಂಭೇ ನ ಗಂತವ್ಯಂ ವಿಸ್ರಂಭೇ ಧಾರಯೇನ್ಮನಃ||
ಸರ್ವಭೂತಗಳಿಗೂ ಹಿಂಸೆಮಾಡದೇ ಮೈತ್ರೀಭಾವದಿಂದ ವ್ಯವಹರಿಸಬೇಕು. ವಿಶ್ವಾಸಕ್ಕೆ ಅರ್ಹವಲ್ಲದ ಮಾರ್ಗದಲ್ಲಿ ಹೋಗಬಾರದು. ವಿಶ್ವಾಸಾರ್ಹ ಮಾರ್ಗದಲ್ಲಿ ಮನಸ್ಸನ್ನಿರಿಸಿಕೊಂಡಿರಬೇಕು.
12182013a ಪರಿಗ್ರಹಾನ್ಪರಿತ್ಯಜ್ಯ ಭವೇದ್ಬುದ್ಧ್ಯಾ ಜಿತೇಂದ್ರಿಯಃ|
12182013c ಅಶೋಕಂ ಸ್ಥಾನಮಾತಿಷ್ಠೇದಿಹ ಚಾಮುತ್ರ ಚಾಭಯಮ್||
ಮಮತೆ ಮತ್ತು ಆಸಕ್ತಿಗಳನ್ನು ಪರಿತ್ಯಜಿಸಿ ಬುದ್ಧಿಯ ಮೂಲಕ ಇಂದ್ರಿಯಗಳನ್ನು ಜಯಿಸಿ, ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ಭಯ-ಶೋಕರಹಿತವಾದ ಸ್ಥಾನವನ್ನು ಹೊಂದಬೇಕು.
12182014a ತಪೋನಿತ್ಯೇನ ದಾಂತೇನ ಮುನಿನಾ ಸಂಯತಾತ್ಮನಾ|
12182014c ಅಜಿತಂ ಜೇತುಕಾಮೇನ ಭಾವ್ಯಂ ಸಂಗೇಷ್ವಸಂಗಿನಾ||
ಗೆಲ್ಲಲು ಅಸಾಧ್ಯವಾದ ಸಂಸಾರವನ್ನು ಜಯಿಸಲಿಚ್ಛಿಸುವ ಮುನಿಯು ನಿತ್ಯವೂ ತಪಸ್ಸಿನಲ್ಲಿಯೇ ನಿರತನಾಗಿ ಇಂದ್ರಿಯಗಳನ್ನು ದಮನಮಾಡಿ ಮನಸ್ಸನ್ನು ಸಂಯಮಗೊಳಿಸಬೇಕು. ಆಸಕ್ತಿಗೆ ಆಶ್ರಯಭೂತಗಳಾದವುಗಳಲ್ಲಿ ಅನಾಸಕ್ತನಾಗಿರಬೇಕು.
12182015a ಇಂದ್ರಿಯೈರ್ಗೃಹ್ಯತೇ ಯದ್ಯತ್ತತ್ತದ್ವ್ಯಕ್ತಮಿತಿ ಸ್ಥಿತಿಃ|
12182015c ಅವ್ಯಕ್ತಮಿತಿ ವಿಜ್ಞೇಯಂ ಲಿಂಗಗ್ರಾಹ್ಯಮತೀಂದ್ರಿಯಮ್||
ಇಂದ್ರಿಯಗಳಿಂದ ಗ್ರಹಿಸಲು ಸಾಧ್ಯವಾದವುಗಳನ್ನು ವ್ಯಕ್ತವೆಂದು ತಿಳಿಯಬೇಕು. ಯಾವುದು ಇಂದ್ರಿಯಗಳಿಗೆ ಅತೀತವಾದುದೋ ಮತ್ತು ಯಾವುದನ್ನು ಅನುಮಾನದಿಂದ ಮಾತ್ರ ತಿಳಿಯಬಹುದೋ ಅದನ್ನು ಅವ್ಯಕ್ತವೆಂದು ತಿಳಿಯಬೇಕು.
12182016a ಮನಃ ಪ್ರಾಣೇ ನಿಗೃಹ್ಣೀಯಾತ್ಪ್ರಾಣಂ ಬ್ರಹ್ಮಣಿ ಧಾರಯೇತ್|
12182016c ನಿರ್ವಾಣಾದೇವ ನಿರ್ವಾಣೋ[6] ನ ಚ ಕಿಂ ಚಿದ್ವಿಚಿಂತಯೇತ್|
12182016e ಸುಖಂ ವೈ ಬ್ರಾಹ್ಮಣೋ ಬ್ರಹ್ಮ ಸ ವೈ ತೇನಾಧಿಗಚ್ಚತಿ||
ಮನಸ್ಸನ್ನು ಪ್ರಾಣದಲ್ಲಿ ಹಿಡಿದಿಟ್ಟಿರಬೇಕು. ಪ್ರಾಣವನ್ನು ಬ್ರಹ್ಮನಲ್ಲಿ ಸ್ಥಾಪಿಸಬೇಕು. ವೈರಾಗ್ಯದಿಂದಲೇ ನಿರ್ವಾಣವು ದೊರೆಯುತ್ತದೆ. ಇದನ್ನು ಪಡೆದವನು ಯಾವುದೇ ಅನಾತ್ಮ ವಿಷಯದ ಕುರಿತು ಯೋಚಿಸುವುದೂ ಇಲ್ಲ.
12182017a ಶೌಚೇನ ಸತತಂ ಯುಕ್ತಸ್ತಥಾಚಾರಸಮನ್ವಿತಃ|
12182017c ಸಾನುಕ್ರೋಶಶ್ಚ ಭೂತೇಷು ತದ್ದ್ವಿಜಾತಿಷು ಲಕ್ಷಣಮ್||
ಯಾವಾಗಲೂ ಶೌಚ ಮತ್ತು ಸದಾಚಾರಗಳಿಂದ ಯುಕ್ತನಾಗಿ ಪ್ರಾಣಿಗಳ ವಿಷಯದಲ್ಲಿ ದಯಾಭಾವದಿಂದಿರುವುದು ಬ್ರಾಹ್ಮಣರ ಲಕ್ಷಣ.”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಭೃಗುಭರದ್ವಾಜಸಂವಾದೇ ವರ್ಣಸ್ವರೂಪಕಥನೇ ದ್ವಾಶೀತ್ಯಧಿಕಶತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಭೃಗುಭರದ್ವಾಜಸಂವಾದೇ ವರ್ಣಸ್ವರೂಪಕಥನ ಎನ್ನುವ ನೂರಾಎಂಭತ್ತೆರಡನೇ ಅಧ್ಯಾಯವು.
[1] ಅಧ್ಯಯನ, ಅಧ್ಯಾಪನ, ಯಜ್ಞ, ಯಾಜನ, ದಾನ ಮತ್ತು ಪರಿಗ್ರಹಗಳು ಆರು ಕರ್ಮಗಳು.
[2] ತ್ರಪಾ (ಗೀತಾ ಪ್ರೆಸ್/ಭಾರತ ದರ್ಶನ).
[3] ವಾಣಿಜ್ಯಪಶುರಕ್ಷಾ ಚ ಕೃಷ್ಯಾದಾನರತಿಃ ಶುಚಿಃ| (ಗೀತಾ ಪ್ರೆಸ್/ಭಾರತ ದರ್ಶನ).
[4] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ವಾರ್ಯೋ ಸರ್ವಾತ್ಮನಾ ತೌ ಹಿ ಶ್ರೇಯೋಘಾತಾರ್ಥಮುಚ್ಛ್ರಿತೌ| (ಗೀತಾ ಪ್ರೆಸ್/ಭಾರತ ದರ್ಶನ).
[5] ನಿತ್ಯಂ ಕ್ರೋಧಾಚ್ಛ್ರಿಯಂ ರಕ್ಷೇತ್ತಪೋ ರಕ್ಷೇಚ್ಚ ಮತ್ಸರಾತ್| (ಗೀತಾ ಪ್ರೆಸ್/ಭಾರತ ದರ್ಶನ).
[6] ನಿರ್ವೇದಾದೇವ ನಿರ್ವಾಣಂ (ಗೀತಾ ಪ್ರೆಸ್/ಭಾರತ ದರ್ಶನ).