ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೧೭೫
ಭೃಗು-ಭರದ್ವಾಜ ಸಂವಾದ
ಭೃಗು ಮತ್ತು ಭರದ್ವಾಜರ ಸಂವಾದದಲ್ಲಿ ಜಗತ್ತಿನ ಉತ್ಪತ್ತಿ ಮತ್ತು ವಿಬಿನ್ನ ತತ್ತ್ವಗಳ ವರ್ಣನೆ (೧-೩೭).
12175001 ಯುಧಿಷ್ಠಿರ ಉವಾಚ|
12175001a ಕುತಃ ಸೃಷ್ಟಮಿದಂ ವಿಶ್ವಂ ಜಗತ್ ಸ್ಥಾವರಜಂಗಮಮ್|
12175001c ಪ್ರಲಯೇ ಚ ಕಮಭ್ಯೇತಿ ತನ್ಮೇ ಬ್ರೂಹಿ ಪಿತಾಮಹ||
ಯುಧಿಷ್ಠಿರನು ಹೇಳಿದನು: “ಪಿತಾಮಹ! ಈ ಸಂಪೂರ್ಣ ಸ್ಥಾವರ-ಜಂಗಮ ಜಗತ್ತಿನ ಉತ್ಪತ್ತಿ ಯಾವುದರಿಂದ ಆಯಿತು? ಪ್ರಲಯಕಾಲದಲ್ಲಿ ಇದು ಯಾವುದರಲ್ಲಿ ಲೀನವಾಗುತ್ತದೆ? ಇದನ್ನು ನನಗೆ ಹೇಳು.
12175002a ಸಸಾಗರಃ ಸಗಗನಃ ಸಶೈಲಃ ಸಬಲಾಹಕಃ|
12175002c ಸಭೂಮಿಃ ಸಾಗ್ನಿಪವನೋ ಲೋಕೋಽಯಂ ಕೇನ ನಿರ್ಮಿತಃ||
ಸಮುದ್ರ, ಗಗನ, ಪರ್ವತ, ಮೇಘ, ಭೂಮಿ, ಅಗ್ನಿ, ಮತ್ತು ವಾಯುಸಹಿತ ಈ ಲೋಕವನ್ನು ಯಾರು ನಿರ್ಮಾಣಮಾಡಿದರು?
12175003a ಕಥಂ ಸೃಷ್ಟಾನಿ ಭೂತಾನಿ ಕಥಂ ವರ್ಣವಿಭಕ್ತಯಃ|
12175003c ಶೌಚಾಶೌಚಂ ಕಥಂ ತೇಷಾಂ ಧರ್ಮಾಧರ್ಮಾವಥೋ ಕಥಮ್||
ಭೂತಗಳ ಸೃಷ್ಟಿಯು ಹೇಗಾಯಿತು? ವರ್ಣವಿಭಕ್ತಿಯು ಹೇಗೆ ಉಂಟಾಯಿತು? ಹಾಗೂ ಶೌಚ-ಅಶೌಚಗಳ ವಿಭಜನೆಯು ಹೇಗಾಯಿತು? ಮತ್ತು ಧರ್ಮ-ಅಧರ್ಮಗಳ ವಿಭಜನೆಯೂ ಹೇಗಾಯಿತು?
12175004a ಕೀದೃಶೋ ಜೀವತಾಂ ಜೀವಃ ಕ್ವ ವಾ ಗಚ್ಚಂತಿ ಯೇ ಮೃತಾಃ|
12175004c ಅಸ್ಮಾಲ್ಲೋಕಾದಮುಂ ಲೋಕಂ ಸರ್ವಂ ಶಂಸತು ನೋ ಭವಾನ್||
ಜೀವಿತ ಪ್ರಾಣಿಗಳ ಜೀವವು ಹೇಗಿದೆ? ಮೃತರಾದವರು ಎಲ್ಲಿಗೆ ಹೋಗುತ್ತಾರೆ? ಈ ಲೋಕದಿಂದ ಆ ಲೋಕಕ್ಕೆ ಹೋಗುವ ಕ್ರಮವ್ಯಾವುದು? ಇವೆಲ್ಲವನ್ನೂ ನನಗೆ ಹೇಳಬೇಕು.”
12175005 ಭೀಷ್ಮ ಉವಾಚ|
12175005a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
12175005c ಭೃಗುಣಾಭಿಹಿತಂ ಶ್ರೇಷ್ಠಂ ಭರದ್ವಾಜಾಯ ಪೃಚ್ಚತೇ||
ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಭರದ್ವಾಜನ ಪ್ರಶ್ನೆಗೆ ಭೃಗುವು ನೀಡಿದ ಶ್ರೇಷ್ಠ ಉತ್ತರವನ್ನು ಉದಾಹರಿಸುತ್ತಾರೆ.
12175006a ಕೈಲಾಸಶಿಖರೇ ದೃಷ್ಟ್ವಾ ದೀಪ್ಯಮಾನಮಿವೌಜಸಾ|
12175006c ಭೃಗುಂ ಮಹರ್ಷಿಮಾಸೀನಂ ಭರದ್ವಾಜೋಽನ್ವಪೃಚ್ಚತ||
ಕೈಲಾಸಶಿಖರದಲ್ಲಿ ಓಜಸ್ಸಿನಿಂದ ದೀಪ್ತಮಾನನಾಗಿದ್ದ ಮಹರ್ಷಿ ಭೃಗುವು ಕುಳಿತಿದ್ದುದನ್ನು ನೋಡಿ ಭರದ್ವಾಜನು ಕೇಳಿದನು:
12175007a ಸಸಾಗರಃ ಸಗಗನಃ ಸಶೈಲಃ ಸಬಲಾಹಕಃ|
12175007c ಸಭೂಮಿಃ ಸಾಗ್ನಿಪವನೋ ಲೋಕೋಽಯಂ ಕೇನ ನಿರ್ಮಿತಃ||
“ಸಮುದ್ರ, ಗಗನ, ಪರ್ವತ, ಮೇಘ, ಭೂಮಿ, ಅಗ್ನಿ, ಮತ್ತು ವಾಯುಸಹಿತ ಈ ಲೋಕವನ್ನು ಯಾರು ನಿರ್ಮಾಣಮಾಡಿದರು?
12175008a ಕಥಂ ಸೃಷ್ಟಾನಿ ಭೂತಾನಿ ಕಥಂ ವರ್ಣವಿಭಕ್ತಯಃ|
12175008c ಶೌಚಾಶೌಚಂ ಕಥಂ ತೇಷಾಂ ಧರ್ಮಾಧರ್ಮಾವಥೋ ಕಥಮ್||
ಭೂತಗಳ ಸೃಷ್ಟಿಯು ಹೇಗಾಯಿತು? ವರ್ಣವಿಭಕ್ತಿಯು ಹೇಗೆ ಉಂಟಾಯಿತು? ಹಾಗೂ ಶೌಚ-ಅಶೌಚಗಳ ವಿಭಜನೆಯು ಹೇಗಾಯಿತು? ಮತ್ತು ಧರ್ಮ-ಅಧರ್ಮಗಳ ವಿಭಜನೆಯೂ ಹೇಗಾಯಿತು?
12175009a ಕೀದೃಶೋ ಜೀವತಾಂ ಜೀವಃ ಕ್ವ ವಾ ಗಚ್ಚಂತಿ ಯೇ ಮೃತಾಃ|
12175009c ಪರಲೋಕಮಿಮಂ ಚಾಪಿ ಸರ್ವಂ ಶಂಸತು ನೋ ಭವಾನ್||
ಜೀವಿತ ಪ್ರಾಣಿಗಳ ಜೀವವು ಹೇಗಿದೆ? ಮೃತರಾದವರು ಎಲ್ಲಿಗೆ ಹೋಗುತ್ತಾರೆ? ಪರಲೋಕವು ಹೇಗಿರುತ್ತದೆ? ಇವೆಲ್ಲವನ್ನೂ ನನಗೆ ಹೇಳಬೇಕು.”
12175010a ಏವಂ ಸ ಭಗವಾನ್ ಪೃಷ್ಟೋ ಭರದ್ವಾಜೇನ ಸಂಶಯಮ್|
12175010c ಮಹರ್ಷಿರ್ಬ್ರಹ್ಮಸಂಕಾಶಃ ಸರ್ವಂ ತಸ್ಮೈ ತತೋಽಬ್ರವೀತ್||
ಭಗವಾನ್ ಭರದ್ವಾಜನು ಹೀಗೆ ತನ್ನ ಸಂಶಯವನ್ನು ಕೇಳಲು
ಬ್ರಹ್ಮಸಂಕಾಶ ಮಹರ್ಷಿಯು ಅವನಿಗೆ ಎಲ್ಲವನ್ನೂ ಹೇಳಿದನು.
[1]12175011a ಮಾನಸೋ ನಾಮ ವಿಖ್ಯಾತಃ ಶ್ರುತಪೂರ್ವೋ ಮಹರ್ಷಿಭಿಃ|
12175011c ಅನಾದಿನಿಧನೋ ದೇವಸ್ತಥಾಭೇದ್ಯೋಽಜರಾಮರಃ||
“ಹಿಂದೆ ಮಹರ್ಷಿಗಳು ಮಾನಸನೆಂದು ವಿಖ್ಯಾತನಾದ ಅನಾದಿನಿಧನ ಅಭೇದ್ಯ, ಅಜರಾಮರ ದೇವನ ಕುರಿತು ಕೇಳಿದ್ದಾರೆ.
12175012a ಅವ್ಯಕ್ತ ಇತಿ ವಿಖ್ಯಾತಃ ಶಾಶ್ವತೋಽಥಾಕ್ಷರೋಽವ್ಯಯಃ|
12175012c ಯತಃ ಸೃಷ್ಟಾನಿ ಭೂತಾನಿ ಜಾಯಂತೇ ಚ ಮ್ರಿಯಂತಿ ಚ||
ಅವನೇ ಅವ್ಯಕ್ತ ಎಂದೂ ವಿಖ್ಯಾತನಾಗಿದ್ದಾನೆ. ಅವನೇ ಶಾಶ್ವತ, ಅಕ್ಷಯ, ಮತ್ತು ಅವಿನಾಶಿಯು. ಅವನು ಸೃಷ್ಟಿಸಿದ ಭೂತಗಳು ಹುಟ್ಟುತ್ತಿರುತ್ತವೆ ಮತ್ತು ನಾಶವಾಗುತ್ತಿರುತ್ತವೆ.
12175013a ಸೋಽಸೃಜತ್ಪ್ರಥಮಂ ದೇವೋ ಮಹಾಂತಂ ನಾಮ ನಾಮತಃ|
[2]12175013c ಆಕಾಶಮಿತಿ ವಿಖ್ಯಾತಂ ಸರ್ವಭೂತಧರಃ ಪ್ರಭುಃ||
ಆ ದೇವನು ಪ್ರಥಮವಾಗಿ ಮಹತ್ತತ್ತ್ವವನ್ನು ಸೃಷ್ಟಿಸಿದನು. ಸರ್ವಭೂತಧರನಾದ ಅವನು ಆಕಾಶವೆಂದು ವಿಖ್ಯಾತವಾದುದನ್ನು ಸೃಷ್ಟಿಸಿದನು.
12175014a ಆಕಾಶಾದಭವದ್ವಾರಿ ಸಲಿಲಾದಗ್ನಿಮಾರುತೌ|
12175014c ಅಗ್ನಿಮಾರುತಸಂಯೋಗಾತ್ತತಃ ಸಮಭವನ್ಮಹೀ||
ಆಕಾಶದಿಂದ ಜಲ ಮತು ಜಲದಿಂದ ಅಗ್ನಿ-ವಾಯುಗಳ ಉತ್ಪತ್ತಿಯಾಯಿತು. ಅಗ್ನಿ ಮತ್ತು ವಾಯುವಿನ ಸಂಯೋಗದಿಂದ ಪೃಥ್ವಿಯು ಹುಟ್ಟಿಕೊಂಡಿತು[3].
12175015a ತತಸ್ತೇಜೋಮಯಂ ದಿವ್ಯಂ ಪದ್ಮಂ ಸೃಷ್ಟಂ ಸ್ವಯಂಭುವಾ|
12175015c ತಸ್ಮಾತ್ಪದ್ಮಾತ್ಸಮಭವದ್ಬ್ರಹ್ಮಾ ವೇದಮಯೋ ನಿಧಿಃ||
ಅನಂತರ ಸ್ವಯಂಭು ಮಾನಸದೇವನು ತೇಜೋಮಯವಾದ ದಿವ್ಯ ಪದ್ಮವನ್ನು ಸೃಷ್ಟಿಸಿದನು. ಅದರಿಂದ ವೇದಮಯ ನಿಧಿ ಬ್ರಹ್ಮನು ಹುಟ್ಟಿದನು.
12175016a ಅಹಂಕಾರ ಇತಿ ಖ್ಯಾತಃ ಸರ್ವಭೂತಾತ್ಮಭೂತಕೃತ್|
12175016c ಬ್ರಹ್ಮಾ ವೈ ಸುಮಹಾತೇಜಾ ಯ ಏತೇ ಪಂಚ ಧಾತವಃ||
ಮಹಾತೇಜಸ್ವಿಯಾದ ಅಹಂಕಾರ ಎಂದು ಖ್ಯಾತನಾದ ಸರ್ವಭೂತಾತ್ಮಕೃತ್ ಬ್ರಹ್ಮನು ಈ ಐದು ಧಾತುಗಳಿಂದ ಕೂಡಿದ್ದಾನೆ.
12175017a ಶೈಲಾಸ್ತಸ್ಯಾಸ್ಥಿಸಂಜ್ಞಾಸ್ತು ಮೇದೋ ಮಾಂಸಂ ಚ ಮೇದಿನೀ|
12175017c ಸಮುದ್ರಾಸ್ತಸ್ಯ ರುಧಿರಮಾಕಾಶಮುದರಂ ತಥಾ||
ಪರ್ವತಗಳು ಅವನ ಎಲುಬುಗಳು ಮತ್ತು ಮೇದಿನಿಯು ಅವನ ಮೇದ-ಮಾಂಸವು. ಸಮುದ್ರವು ಅವನ ರಕ್ತ ಮತ್ತು ಆಕಾಶವು ಅವನ ಹೊಟ್ಟೆ.
12175018a ಪವನಶ್ಚೈವ ನಿಃಶ್ವಾಸಸ್ತೇಜೋಽಗ್ನಿರ್ನಿಮ್ನಗಾಃ ಸಿರಾಃ|
12175018c ಅಗ್ನೀಷೋಮೌ ತು ಚಂದ್ರಾರ್ಕೌ ನಯನೇ ತಸ್ಯ ವಿಶ್ರುತೇ||
ವಾಯುವು ಅವನ ನಿಃಶ್ವಾಸ, ಅಗ್ನಿಯು ತೇಜಸ್ಸು, ನದಿಗಳು ನಾಡಿಗಳು ಹಾಗೂ ಯಾರನ್ನು ಅಗ್ನಿ-ಸೋಮರೆಂದೂ ಕರೆಯುತ್ತಾರೋ ಆ ಸೂರ್ಯ-ಚಂದ್ರರು ಅವನ ಕಣ್ಣುಗಳು.
12175019a ನಭಶ್ಚೋರ್ಧ್ವಂ ಶಿರಸ್ತಸ್ಯ ಕ್ಷಿತಿಃ ಪಾದೌ ದಿಶೋ ಭುಜೌ|
12175019c ದುರ್ವಿಜ್ಞೇಯೋ ಹ್ಯನಂತತ್ವಾತ್ಸಿದ್ಧೈರಪಿ[4] ನ ಸಂಶಯಃ||
ಆಕಾಶದ ಮೇಲ್ಭಾಗವು ಅವನ ಶಿರಸ್ಸು, ಭೂಮಿಯು ಪಾದಗಳು, ಮತ್ತು ದಿಕ್ಕುಗಳು ಭುಜಗಳು. ಅವನ ಅನಂತತ್ವದಿಂದಗಿ ಅವನು ಸಿದ್ಧಪುರುಷರಿಗೂ ತಿಳಿಯಲು ಅಸಾಧ್ಯನು ಎನ್ನುವುದರಲ್ಲಿ ಸಂಶಯವಿಲ್ಲ.
12175020a ಸ ಏವ ಭಗವಾನ್ವಿಷ್ಣುರನಂತ ಇತಿ ವಿಶ್ರುತಃ|
12175020c ಸರ್ವಭೂತಾತ್ಮಭೂತಸ್ಥೋ ದುರ್ವಿಜ್ಞೇಯೋಽಕೃತಾತ್ಮಭಿಃ||
ಆ ಸ್ವಯಂಭುವೇ ಭಗವಾನ್ ವಿಷ್ಣು. ಅವನು ಅನಂತನೆಂದು ಪ್ರಸಿದ್ಧನಾಗಿದ್ದಾನೆ. ಅವನೇ ಸರ್ವಭೂತಗಳಲ್ಲಿ ನೆಲೆಸಿದ್ದಾನೆ. ಅಕೃತಾತ್ಮರಿಗೆ ಅವನು ತಿಳಿಯಲಸಾಧ್ಯನು.
12175021a ಅಹಂಕಾರಸ್ಯ ಯಃ ಸ್ರಷ್ಟಾ ಸರ್ವಭೂತಭವಾಯ ವೈ|
12175021c ಯತಃ ಸಮಭವದ್ವಿಶ್ವಂ ಪೃಷ್ಟೋಽಹಂ ಯದಿಹ ತ್ವಯಾ||
ಅವನೇ ಸರ್ವಭೂತಗಳ ಉತ್ಪತ್ತಿಗಾಗಿ ಅಹಂಕಾರವನ್ನು ಸೃಷ್ಟಿಸಿದನು. ಈ ಜಗತ್ತು ಯಾವುದರಿಂದ ಉಂಟಾಯಿತು ಎಂಬ ನಿನ್ನ ಪ್ರಶ್ನೆಗೆ ನಾನು ಹೇಳಿದ್ದೇನೆ.”
12175022 ಭರದ್ವಾಜ ಉವಾಚ|
12175022a ಗಗನಸ್ಯ ದಿಶಾಂ ಚೈವ ಭೂತಲಸ್ಯಾನಿಲಸ್ಯ ಚ|
12175022c ಕಾನ್ಯತ್ರ ಪರಿಮಾಣಾನಿ ಸಂಶಯಂ ಚಿಂಧಿ ಮೇಽರ್ಥತಃ||
ಭರದ್ವಾಜನು ಹೇಳಿದನು: “ಆಕಾಶ, ದಿಕ್ಕುಗಳು, ಭೂತಲ ಮತ್ತು ವಾಯುವಿನ ಪರಿಮಾಣಗಳೇನು? ಅರ್ಥತಃ ಇದನ್ನು ಹೇಳಿ ನನ್ನ ಸಂಶಯವನ್ನು ಹೋಗಲಾಡಿಸು.”
12175023 ಭೃಗುರುವಾಚ|
12175023a ಅನಂತಮೇತದಾಕಾಶಂ ಸಿದ್ಧಚಾರಣಸೇವಿತಮ್|
12175023c ರಮ್ಯಂ ನಾನಾಶ್ರಯಾಕೀರ್ಣಂ ಯಸ್ಯಾಂತೋ ನಾಧಿಗಮ್ಯತೇ||
ಭೃಗುವು ಹೇಳಿದನು: “ಈ ಆಕಾಶವು ಅನಂತವು. ಇದರಲ್ಲಿ ಸಿದ್ಧ-ಚಾರಣರು ವಾಸಿಸುತ್ತಾರೆ. ನಾನಾ ಲೋಕಗಳಿಗೆ ಆಶ್ರಯವಾಗಿರುವ ಇದು ರಮ್ಯವಾಗಿದೆ ಮತ್ತು ಇದರ ಕೊನೆಯೇ ಸಿಗುವುದಿಲ್ಲ.
12175024a ಊರ್ಧ್ವಂ ಗತೇರಧಸ್ತಾತ್ತು ಚಂದ್ರಾದಿತ್ಯೌ ನ ದೃಶ್ಯತಃ|
12175024c ತತ್ರ ದೇವಾಃ ಸ್ವಯಂ ದೀಪ್ತಾ ಭಾಸ್ವರಾಶ್ಚಾಗ್ನಿವರ್ಚಸಃ||
ಅದರ ಮೇಲೆ ಮತ್ತು ಕೆಳಗೆ ಹೋದರೆ ಚಂದ್ರ-ಸೂರ್ಯರು ಕಾಣಿಸುವುದಿಲ್ಲ. ಅಲ್ಲಿ ಅಗ್ನಿವರ್ಚಸ ದೇವತೆಗಳು ಸ್ವಯಂ ಪ್ರಭೆಯಿಂದ ಬೆಳಗುತ್ತಿರುತ್ತಾರೆ.
12175025a ತೇ ಚಾಪ್ಯಂತಂ ನ ಪಶ್ಯಂತಿ ನಭಸಃ ಪ್ರಥಿತೌಜಸಃ|
12175025c ದುರ್ಗಮತ್ವಾದನಂತತ್ವಾದಿತಿ ಮೇ ವಿದ್ಧಿ ಮಾನದ||
ಮಾನದ! ಆದರೆ ಆ ತೇಜಸ್ವೀ ನಕ್ಷತ್ರ ಸ್ವರೂಪೀ ದೇವತೆಗಳಿಗೂ ಕೂಡ ಆಕಾಶದ ಕೊನೆಯನ್ನು ನೋಡಲಿಕ್ಕಾಗುವುದಿಲ್ಲ. ಏಕೆಂದರೆ ಅದು ದುರ್ಗಮ ಮತ್ತು ಅನಂತವಾಗಿದೆ. ಇದನ್ನು ನನ್ನಿಂದ ಚೆನ್ನಾಗಿ ತಿಳಿದುಕೋ.
12175026a ಉಪರಿಷ್ಟೋಪರಿಷ್ಟಾತ್ತು ಪ್ರಜ್ವಲದ್ಭಿಃ ಸ್ವಯಂಪ್ರಭೈಃ|
12175026c ನಿರುದ್ಧಮೇತದಾಕಾಶಮಪ್ರಮೇಯಂ ಸುರೈರಪಿ||
ಮೇಲೆ ಮೇಲೆ ಪ್ರಕಾಶಿತವಾಗುವ ಸ್ವಯಂ ಪ್ರಕಾಶ ದೇವತೆಗಳಿಂದ ಈ ಅಪ್ರಮೇಯ ಆಕಾಶವು ತುಂಬಿರುವಂತೆ ತೋರುತ್ತದೆ.
12175027a ಪೃಥಿವ್ಯಂತೇ ಸಮುದ್ರಾಸ್ತು ಸಮುದ್ರಾಂತೇ ತಮಃ ಸ್ಮೃತಮ್|
12175027c ತಮಸೋಽಂತೇ ಜಲಂ ಪ್ರಾಹುರ್ಜಲಸ್ಯಾಂತೇಽಗ್ನಿರೇವ ಚ||
ಪೃಥ್ವಿಯ ಅಂತ್ಯದಲ್ಲಿ ಸಮುದ್ರವಿದೆ. ಸಮುದ್ರದ ಅಂತ್ಯದಲ್ಲಿ ಘೋರ ಅಂಧಕಾರವಿದೆ. ಅಂಧಕಾರದ ಅಂತ್ಯದಲ್ಲಿ ಜಲವಿದೆ ಮತ್ತು ಜಲದ ಅಂತ್ಯದಲ್ಲಿ ಅಗ್ನಿಯಿದೆಯೆಂದು ಹೇಳುತ್ತಾರೆ.
12175028a ರಸಾತಲಾಂತೇ ಸಲಿಲಂ ಜಲಾಂತೇ ಪನ್ನಗಾಧಿಪಃ|
12175028c ತದಂತೇ ಪುನರಾಕಾಶಮಾಕಾಶಾಂತೇ ಪುನರ್ಜಲಮ್||
ರಸಾತಲದ ಕೊನೆಯಲ್ಲಿ ನೀರಿದೆ. ನೀರಿನ ಅಂತ್ಯದಲ್ಲಿ ನಾಗರಾಜ ಶೇಷನಿದ್ದಾನೆ. ಅವನ ನಂತರ ಪುನಃ ಆಕಾಶವಿದೆ ಮತ್ತು ಆಕಾಶದ ಅಂತ್ಯದಲ್ಲಿ ಪುನಃ ಜಲವಿದೆ.
12175029a ಏವಮಂತಂ ಭಗವತಃ ಪ್ರಮಾಣಂ ಸಲಿಲಸ್ಯ ಚ|
12175029c ಅಗ್ನಿಮಾರುತತೋಯೇಭ್ಯೋ ದುರ್ಜ್ಞೇಯಂ ದೈವತೈರಪಿ||
ಹೀಗೆ ಭಗವಂತ, ಆಕಾಶ, ಜಲ, ಮತ್ತು ಅಗ್ನಿ-ವಾಯುಗಳ ಪರಿಮಾಣವನ್ನು ತಿಳಿಯಲು ದೇವತೆಗಳಿಗೂ ಅತ್ಯಂತ ಕಠಿಣವಿದೆ.
12175030a ಅಗ್ನಿಮಾರುತತೋಯಾನಾಂ ವರ್ಣಾಃ ಕ್ಷಿತಿತಲಸ್ಯ ಚ|
12175030c ಆಕಾಶಸದೃಶಾ ಹ್ಯೇತೇ ಭಿದ್ಯಂತೇ ತತ್ತ್ವದರ್ಶನಾತ್||
ಅಗ್ನಿ, ವಾಯು, ಜಲ ಮತ್ತು ಪೃಥ್ವೀ – ಇವುಗಳ ವರ್ಣ-ರೂಪಗಳು ಆಕಾಶದಂತೆಯೇ ಇರುತ್ತದೆ. ಆದುದರಿಂದ ಇವು ಆಕಾಶಕ್ಕಿಂತ ಭಿನ್ನವಲ್ಲ. ತತ್ತ್ವಜ್ಞಾನವಿಲ್ಲದ ಕಾರಣದಿಂದಲೇ ಅವುಗಳಲ್ಲಿ ಭೇದವು ಕಾಣಿಸುತ್ತದೆ.
12175031a ಪಠಂತಿ ಚೈವ ಮುನಯಃ ಶಾಸ್ತ್ರೇಷು ವಿವಿಧೇಷು ಚ|
12175031c ತ್ರೈಲೋಕ್ಯೇ ಸಾಗರೇ ಚೈವ ಪ್ರಮಾಣಂ ವಿಹಿತಂ ಯಥಾ|
12175031e ಅದೃಶ್ಯಾಯ ತ್ವಗಮ್ಯಾಯ ಕಃ ಪ್ರಮಾಣಮುದಾಹರೇತ್||
12175032a ಸಿದ್ಧಾನಾಂ ದೇವತಾನಾಂ ಚ ಯದಾ ಪರಿಮಿತಾ ಗತಿಃ|
ಋಷಿಗಳು ವಿವಿಧ ಶಾಸ್ತ್ರಗಳಲ್ಲಿ ಮೂರು ಲೋಕಗಳು ಮತ್ತು ಸಮುದ್ರಗಳ ಕುರಿತು ಕೆಲವು ನಿಶ್ಚಿತ ಪ್ರಮಾಣಗಳನ್ನು ಹೇಳಿದ್ದಾರೆ. ಆದರೆ ಯಾವುದು ದೃಷ್ಟಿಗೆ ಸಿಗುವುದಿಲ್ಲವೋ ಮತ್ತು ಎಲ್ಲಿ ಇಂದ್ರಿಯಗಳು ತಲುಪುವುದಿಲ್ಲವೋ ಆ ಪರಮಾತ್ಮನ ಪರಿಮಾಣವನ್ನು ಯಾರಾದರೂ ಹೇಗೆ ಹೇಳಬಲ್ಲರು? ಈ ಸಿದ್ಧರು ಮತ್ತು ದೇವತೆಗಳ ಜ್ಞಾನವೂ ಕೂಡ ಪರಿಮಿತವಾದುದಲ್ಲವೇ?
12175032c ತದಾ ಗೌಣಮನಂತಸ್ಯ ನಾಮಾನಂತೇತಿ ವಿಶ್ರುತಮ್|
12175032e ನಾಮಧೇಯಾನುರೂಪಸ್ಯ ಮಾನಸಸ್ಯ ಮಹಾತ್ಮನಃ||
ಆದುದರಿಂದ ಪರಮಾತ್ಮ ಮಾನಸದೇವನು ತನ್ನ ನಾಮಕ್ಕೆ ಅನುಗುಣವಾಗಿಯೇ ಅನಂತನು. ಅವನ ಸುಪ್ರಸಿದ್ಧ ಅನಂತ ನಾಮವು ಅವನ ಗುಣಕ್ಕೆ ಅನುಸಾರವಾಗಿಯೇ ಇದೆ.
12175033a ಯದಾ ತು ದಿವ್ಯಂ ತದ್ರೂಪಂ ಹ್ರಸತೇ ವರ್ಧತೇ ಪುನಃ|
12175033c ಕೋಽನ್ಯಸ್ತದ್ವೇದಿತುಂ ಶಕ್ತೋ ಯೋಽಪಿ ಸ್ಯಾತ್ತದ್ವಿಧೋಽಪರಃ||
ಪರಮಾತ್ಮನ ದಿವ್ಯ ರೂಪವು ಚಿಕ್ಕದಾದಾಗ ಮತ್ತು ಪುನಃ ದೊಡ್ಡದಾದಾಗ ಅವನ ಪರಿಮಾಣವನ್ನು ಯಥಾರ್ಥ ತಿಳಿಯಲು ಶಕ್ಯನಾದ, ಅವನಿಗಿಂತಲೂ ಭಿನ್ನನಾದ ಬೇರೆ ಯಾವ ಪ್ರತಿಭಾಶಾಲಿಯಿದ್ದಾನೆ?
12175034a ತತಃ ಪುಷ್ಕರತಃ ಸೃಷ್ಟಃ ಸರ್ವಜ್ಞೋ ಮೂರ್ತಿಮಾನ್ಪ್ರಭುಃ|
12175034c ಬ್ರಹ್ಮಾ ಧರ್ಮಮಯಃ ಪೂರ್ವಃ ಪ್ರಜಾಪತಿರನುತ್ತಮಃ||
ಅನಂತರ ಪದ್ಮದಿಂದ ಸರ್ವಜ್ಞ, ಮೂರ್ತಿಮಾನ್, ಪ್ರಭಾವಶಾಲೀ, ಪರಮ ಉತ್ತಮ ಮತ್ತು ಪ್ರಥಮ ಪ್ರಜಾಪತಿ ಧರ್ಮಮಯ ಬ್ರಹ್ಮನ ಪ್ರಾದುರ್ಭಾವವಾಯಿತು.”
12175035 ಭರದ್ವಾಜ ಉವಾಚ|
12175035a ಪುಷ್ಕರಾದ್ಯದಿ ಸಂಭೂತೋ ಜ್ಯೇಷ್ಠಂ ಭವತಿ ಪುಷ್ಕರಮ್|
12175035c ಬ್ರಹ್ಮಾಣಂ ಪೂರ್ವಜಂ ಚಾಹ ಭವಾನ್ಸಂದೇಹ ಏವ ಮೇ||
ಭರದ್ವಾಜನು ಹೇಳಿದನು: “ಬ್ರಹ್ಮನು ಕಮಲದಲ್ಲಿ ಹುಟ್ಟಿದನೆಂದರೆ ಕಮಲವೇ ಜ್ಯೇಷ್ಠವಾದಂತಾಯಿತು. ಆದರೆ ನೀನು ಬ್ರಹ್ಮನನ್ನು ಪೂರ್ವಜ ಎಂದು ಹೇಳಿದ್ದೀಯೆ. ಆದುದರಿಂದ ನನಗೆ ಈ ಸಂದೇಹವು ಉಳಿದುಕೊಂಡಿಬಿಟ್ಟಿದೆ.”
12175036 ಭೃಗುರುವಾಚ|
12175036a ಮಾನಸಸ್ಯೇಹ ಯಾ ಮೂರ್ತಿರ್ಬ್ರಹ್ಮತ್ವಂ ಸಮುಪಾಗತಾ|
12175036c ತಸ್ಯಾಸನವಿಧಾನಾರ್ಥಂ ಪೃಥಿವೀ ಪದ್ಮಮುಚ್ಯತೇ||
ಭೃಗುವು ಹೇಳಿದನು: “ಮಾನಸದೇವನ ಸ್ವರೂಪವನ್ನೇನು ಹೇಳಿದೆನೋ ಅದೇ ಬ್ರಹ್ಮರೂಪದಲ್ಲಿ ಪ್ರಕಟವಾಗಿದೆ. ಅದೇ ಬ್ರಹ್ಮನ ಆಸನವಾದುದಕ್ಕಾಗಿ ಪೃಥ್ವಿಯನ್ನು ಪದ್ಮ ಎಂದು ಕರೆಯುತ್ತಾರೆ.
12175037a ಕರ್ಣಿಕಾ ತಸ್ಯ ಪದ್ಮಸ್ಯ ಮೇರುರ್ಗಗನಮುಚ್ಚ್ರಿತಃ|
12175037c ತಸ್ಯ ಮಧ್ಯೇ ಸ್ಥಿತೋ ಲೋಕಾನ್ ಸೃಜತೇ ಜಗತಃ ಪ್ರಭುಃ||
ಈ ಕಮಲದ ದಂಟು ಆಕಾಶದ ಎತ್ತರದ ವರೆಗೂ ಹೋಗಿರುವ ಮೇರು ಪರ್ವತವು. ಅದರ ಮಧ್ಯದಲ್ಲಿ ಸ್ಥಿತನಾಗಿ ಪ್ರಭುವು ಲೋಕಗಳನ್ನು ಸೃಷ್ಟಿಸುತ್ತಾನೆ.”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಭೃಗುಭರದ್ವಾಜಸಂವಾದೇ ಪಂಚಸಪ್ತತ್ಯಧಿಕಶತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಭೃಗುಭರದ್ವಾಜಸಂವಾದ ಎನ್ನುವ ನೂರಾಎಪ್ಪತ್ತೈದನೇ ಅಧ್ಯಾಯವು.
[1] ಇದಕ್ಕೆ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ನಾರಾಯಣೋ ಜಗನ್ಮೂರ್ತಿರಂತರಾತ್ಮಾ ಸನಾತನಃ| ಕೂಟಸ್ಥೋಽಕ್ಷರ ಅವ್ಯಕ್ತೋ ನಿರ್ಲೇಪೋ ವ್ಯಾಪಕಃ ಪ್ರಭುಃ|| ಪ್ರಕೃತೇಃ ಪರತೋ ನಿತ್ಯಮಿಂದ್ರಿಯೈರಪ್ಯಗೋಚರಃ| ಸ ಸಿಸೃಕ್ಷುಃ ಸಹಸ್ರಾಂಶಾದಸೃಜತ್ ಪುರುಷಂ ಪ್ರಭುಃ|| (ಗೀತಾ ಪ್ರೆಸ್).
[2] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಮಹಾನ್ಸಸರ್ಜಾಹಂಕಾರಂ ಸ ಚಾಪಿ ಭಗವಾನಥ| (ಗೀತಾ ಪ್ರೆಸ್).
[3] ತೈತ್ತರೀಯ ಉಪನಿಷತ್ತಿನಲ್ಲಿ ಆಕಾಶಾದ್ವಾಯುಃ| ವಾಯೋರಗ್ನಿಃ| ಅಗ್ನೇರಾಪಃ| ಅದ್ಭ್ಯಃ ಪೃಥಿವೀ| ಪೃಥಿವ್ಯಾ ಓಷಧಯಃ| ಎಂದು ಸೃಷ್ಟಿಕ್ರಮವನ್ನು ಹೇಳಿದೆ (ಭಾರತ ದರ್ಶನ).
[4] ಹ್ಯಚಿಂತಾತ್ಮಾ ಸಿದ್ಧೈರಪಿ (ಗೀತಾ ಪ್ರೆಸ್).