Shanti Parva: Chapter 174

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೭೪

ಶುಭಾಶುಭ ಕರ್ಮಗಳ ಪರಿಣಾಮವನ್ನು ಕರ್ತನು ಅವಶ್ಯವಾಗಿ ಭೋಗಿಸಬೇಕಾಗುತ್ತದೆ ಎನ್ನುವುದರ ಪ್ರತಿಪಾದನೆ (೧-೨೦).

12174001 ಯುಧಿಷ್ಠಿರ ಉವಾಚ|

12174001a ಯದ್ಯಸ್ತಿ ದತ್ತಮಿಷ್ಟಂ ವಾ ತಪಸ್ತಪ್ತಂ ತಥೈವ ಚ|

12174001c ಗುರೂಣಾಂ ಚಾಪಿ ಶುಶ್ರೂಷಾ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ದಾನ, ಯಜ್ಞ, ತಪಸ್ಸು ಅಥವಾ ಗುರುಶುಶ್ರೂಷಾದಿಗಳು ಪುಣ್ಯಕರ್ಮಗಳಾಗಿದ್ದರೆ ಅವುಗಳ ಫಲಗಳ ಕುರಿತು ನನಗೆ ಹೇಳು.”

12174002 ಭೀಷ್ಮ ಉವಾಚ|

12174002a ಆತ್ಮನಾನರ್ಥಯುಕ್ತೇನ ಪಾಪೇ ನಿವಿಶತೇ ಮನಃ|

12174002c ಸ ಕರ್ಮ ಕಲುಷಂ ಕೃತ್ವಾ ಕ್ಲೇಶೇ ಮಹತಿ ಧೀಯತೇ[1]||

ಭೀಷ್ಮನು ಹೇಳಿದನು: “ಕಾಮ-ಕ್ರೋಧಾದಿ ದೋಷಗಳಿಂದ ಯುಕ್ತವಾದ ಮನುಷ್ಯನ ಮನಸ್ಸು ಪಾಪಕರ್ಮಗಳಲ್ಲಿ ತೊಡಗುತ್ತದೆ. ಕಲುಷ ಕರ್ಮಗಳನ್ನು ಮಾಡಿ ಅವನು ಮಹಾ ಕ್ಲೇಶಗಳನ್ನು ಅನುಭವಿಸುತ್ತಾನೆ.

12174003a ದುರ್ಭಿಕ್ಷಾದೇವ ದುರ್ಭಿಕ್ಷಂ ಕ್ಲೇಶಾತ್ಕ್ಲೇಶಂ ಭಯಾದ್ಭಯಮ್|

12174003c ಮೃತೇಭ್ಯಃ ಪ್ರಮೃತಂ ಯಾಂತಿ ದರಿದ್ರಾಃ ಪಾಪಕಾರಿಣಃ||

ಪಾಪಿಯು ದುರ್ಭಿಕ್ಷದಿಂದ ದುರ್ಭಿಕ್ಷ, ಕ್ಲೇಶದಿಂದ ಕ್ಲೇಶ, ಭಯದಿಂದ ಭಯವನ್ನು ಪಡೆದುಕೊಂಡು ಮೃತರಾದವರಿಗಿಂತಲೂ ಅಧಿಕ ಬಾರಿ ಸಾವನ್ನಪ್ಪುತ್ತಿರುತ್ತಾನೆ.

12174004a ಉತ್ಸವಾದುತ್ಸವಂ ಯಾಂತಿ ಸ್ವರ್ಗಾತ್ಸ್ವರ್ಗಂ ಸುಖಾತ್ಸುಖಮ್|

12174004c ಶ್ರದ್ಧದಾನಾಶ್ಚ ದಾಂತಾಶ್ಚ ಧನಾಢ್ಯಾಃ ಶುಭಕಾರಿಣಃ||

ಶ್ರದ್ಧದಾನ, ದಾಂತ, ಧನಾಢ್ಯ ಶುಭಕಾರಿಗಳು ಉತ್ಸವಕ್ಕಿಂತ ಹೆಚ್ಚಿನ ಉತ್ಸವವನ್ನು ಮತ್ತು ಸ್ವರ್ಗಕ್ಕಿಂತಲೂ ಅಧಿಕ ಸ್ವರ್ಗಸುಖವನ್ನು ಅನುಭವಿಸುತ್ತಾರೆ.

12174005a ವ್ಯಾಲಕುಂಜರದುರ್ಗೇಷು ಸರ್ಪಚೋರಭಯೇಷು ಚ|

12174005c ಹಸ್ತಾವಾಪೇನ ಗಚ್ಚಂತಿ ನಾಸ್ತಿಕಾಃ ಕಿಮತಃ ಪರಮ್||

ನಾಸ್ತಿಕರನ್ನು ಸಂಕೋಲೆಗಳಿಂದ ಕೈಕಟ್ಟಿ ದುಷ್ಟ ಆನೆಗಳಿಂದ ನಿಬಿಡವಾದ ಸರ್ಪ ಮತ್ತು ಕಳ್ಳಕಾಕರ ಭಯವಿರುವ ದುರ್ಗಮ ಪ್ರದೇಶದಲ್ಲಿ ಕಳುಹಿಸುತ್ತಾರೆ. ಇದಕ್ಕಿಂತಲೂ ಅಧಿಕ ದಂಡವು ಬೇರೆ ಯಾವುದಿದೆ?

12174006a ಪ್ರಿಯದೇವಾತಿಥೇಯಾಶ್ಚ ವದಾನ್ಯಾಃ ಪ್ರಿಯಸಾಧವಃ|

12174006c ಕ್ಷೇಮ್ಯಮಾತ್ಮವತಾಂ ಮಾರ್ಗಮಾಸ್ಥಿತಾ ಹಸ್ತದಕ್ಷಿಣಮ್[2]||

ದೇವಪೂಜೆ ಮತ್ತು ಅತಿಥಿಪೂಜೆಗಳು ಪ್ರಿಯವಾಗಿರುವ, ಉದಾರಬುದ್ಧಿಯುಳ್ಳ ಸತ್ಪುರುಷರನ್ನು ಪ್ರೀತಿಯಿಂದ ಕಾಣುವ ಪುಣ್ಯಾತ್ಮ ಮನುಷ್ಯರು ದಾನಾದಿ ಕರ್ಮಗಳಿಂದ ಕ್ಷೇಮಕರವಾದ ಆತ್ಮದರ್ಶಿಗಳ ಮಾರ್ಗವನ್ನು ಆಶ್ರಯಿಸುತ್ತಾರೆ.

12174007a ಪುಲಾಕಾ ಇವ ಧಾನ್ಯೇಷು ಪುತ್ತಿಕಾ ಇವ ಪಕ್ಷಿಷು|

12174007c ತದ್ವಿಧಾಸ್ತೇ ಮನುಷ್ಯೇಷು ಯೇಷಾಂ ಧರ್ಮೋ ನ ಕಾರಣಮ್||

ಧರ್ಮವು ಮುಖ್ಯ ಉದ್ದೇಶವಾಗಿಲ್ಲದವರು ಮನುಷ್ಯರ ಮಧ್ಯದಲ್ಲಿ ಧಾನ್ಯದಲ್ಲಿ ಬೆರೆತಿರುವ ಜೊಳ್ಳಿನಂತೆ ಮತ್ತು ಪಕ್ಷಿಗಳ ಮಧ್ಯೆ ಇರುವ ಹೆಣ್ಣು ಪತಂಗದ ಹುಳದಂತಿರುತ್ತಾರೆ.

12174008a ಸುಶೀಘ್ರಮಪಿ ಧಾವಂತಂ ವಿಧಾನಮನುಧಾವತಿ|

12174008c ಶೇತೇ ಸಹ ಶಯಾನೇನ ಯೇನ ಯೇನ ಯಥಾ ಕೃತಮ್||

12174009a ಉಪತಿಷ್ಠತಿ ತಿಷ್ಠಂತಂ ಗಚ್ಚಂತಮನುಗಚ್ಚತಿ|

12174009c ಕರೋತಿ ಕುರ್ವತಃ ಕರ್ಮ ಚಾಯೇವಾನುವಿಧೀಯತೇ||

ಮಾಡಿದ ಕರ್ಮಗಳ ಫಲವು ಯಾವಾಗಲೂ ಕರ್ತನನ್ನು ಹಿಂಬಾಲಿಸುತ್ತಲೇ ಇರುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಕರ್ತೃವು ವೇಗದಿಂದ ಓಡುತ್ತಿದ್ದರೆ ಕರ್ಮವೂ ಅಷ್ಟೇ ವೇಗದಿಂದ ಓಡುತ್ತಾ ಅವನನ್ನು ಅನುಸರಿಸಿ ಹೋಗುತ್ತದೆ. ಮಲಗಿದ್ದರೆ ಕರ್ಮಫಲವೂ ಜೊತೆಯಲ್ಲಿ ಮಲಗಿರುತ್ತದೆ. ನಿಂತಿದ್ದರೆ ತಾನೂ ನಿಂತಿರುತ್ತದೆ. ಹೋಗುತ್ತಿದ್ದರೆ ಅವನ ಜೊತೆಯಲ್ಲಿಯೇ ಹೋಗುತ್ತಿರುತ್ತದೆ. ಯಾವುದಾದರು ಕೆಲಸದಲ್ಲಿ ತೊಡಗಿದ್ದರೆ ಕರ್ಮಫಲವು ಜೊತೆಯಲ್ಲಿಯೇ ಇರುತ್ತದೆ. ನೆರಳಿನಂತೆ ಕರ್ಮಫಲವು ಯಾವಾಗಲೂ ಕರ್ತೃವನ್ನು ಅನುಸರಿಸಿಕೊಂಡಿರುತ್ತದೆ.

12174010a ಯೇನ ಯೇನ ಯಥಾ ಯದ್ಯತ್ಪುರಾ ಕರ್ಮ ಸಮಾಚಿತಮ್|

12174010c ತತ್ತದೇವ ನರೋ ಭುಂಕ್ತೇ ನಿತ್ಯಂ ವಿಹಿತಮಾತ್ಮನಾ||

ಯಾವ ಯಾವ ಮನುಷ್ಯನು ತಮ್ಮ ತಮ್ಮ ಪೂರ್ವಜನ್ಮಗಳಲ್ಲಿ ಹೇಗೆ ಹೇಗೆ ಕರ್ಮಗಳನ್ನು ಮಾಡಿದ್ದರೋ ಅವರು ತಾವೇ ಮಾಡಿದ ಕರ್ಮಗಳ ಫಲವನ್ನು ಯಾವಾಗಲೂ ತಾವೊಬ್ಬರೇ ಅನುಭವಿಸುತ್ತಾರೆ.

12174011a ಸ್ವಕರ್ಮಫಲವಿಕ್ಷಿಪ್ತಂ ವಿಧಾನಪರಿರಕ್ಷಿತಮ್[3]|

12174011c ಭೂತಗ್ರಾಮಮಿಮಂ ಕಾಲಃ ಸಮಂತಾತ್ಪರಿಕರ್ಷತಿ||

ತಮ್ಮ ತಮ್ಮ ಕರ್ಮಫಲಗಳು ಒಂದು ನಿಕ್ಷೇಪರೂಪದಲ್ಲಿರುತ್ತವೆ. ಆ ನಿಧಿಯು ವಿಧಿಯಿಂದ ರಕ್ಷಿಸಲ್ಪಟ್ಟಿರುತ್ತದೆ. ಉಪಯುಕ್ತ ಅವಕಾಶವು ಬಂದಾಗ ಕಾಲವು ಆ ಕರ್ಮಫಲವನ್ನು ಪ್ರಾಣಿಯ ಬಳಿ ಎಳೆದು ತರುತ್ತದೆ.

12174012a ಅಚೋದ್ಯಮಾನಾನಿ ಯಥಾ ಪುಷ್ಪಾಣಿ ಚ ಫಲಾನಿ ಚ|

12174012c ಸ್ವಕಾಲಂ ನಾತಿವರ್ತಂತೇ ತಥಾ ಕರ್ಮ ಪುರಾಕೃತಮ್||

ಯಾರ ಪ್ರಚೋದನೆಯೂ ಇಲ್ಲದೇ ಪುಷ್ಪ-ಫಲಗಳು ತಮ್ಮ ತಮ್ಮ ಕಾಲಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಹಾಗೆ ಹಿಂದೆ ಮಾಡಿದ ಕರ್ಮಗಳು ತಮ್ಮ ಫಲಭೋಗದ ಸಮಯವನ್ನು ಉಲ್ಲಂಘಿಸುವುದಿಲ್ಲ.

12174013a ಸಂಮಾನಶ್ಚಾವಮಾನಶ್ಚ ಲಾಭಾಲಾಭೌ ಕ್ಷಯೋದಯೌ|

12174013c ಪ್ರವೃತ್ತಾ ವಿನಿವರ್ತಂತೇ ವಿಧಾನಾಂತೇ ಪುನಃ ಪುನಃ||

ಸನ್ಮಾನ-ಅಪಮಾನ, ಲಾಭ-ನಷ್ಟ, ಉನ್ನತಿ-ಅವನತಿ ಇವುಗಳು ಕರ್ಮಕ್ಕೆ ಅನುಸಾರವಾಗಿ ಪುನಃ ಪುನಃ ಆಗುತ್ತಲೇ ಇರುತ್ತವೆ. ಕರ್ಮಫಲಾನುಭವಗಳು ಮುಗಿದನಂತರ ಎಲ್ಲವೂ ನಿವೃತ್ತಿಹೊಂದುತ್ತವೆ.

12174014a ಆತ್ಮನಾ ವಿಹಿತಂ ದುಃಖಮಾತ್ಮನಾ ವಿಹಿತಂ ಸುಖಮ್|

12174014c ಗರ್ಭಶಯ್ಯಾಮುಪಾದಾಯ ಭುಜ್ಯತೇ ಪೌರ್ವದೇಹಿಕಮ್||

ದುಃಖವು ತಾನೇ ಮಾಡಿದ ಕರ್ಮಗಳ ಫಲ ಮತ್ತು ಸುಖವೂ ತಾನೇ ಮಾಡಿದ ಕರ್ಮಗಳ ಫಲ. ಜೀವವು ಗರ್ಭವನ್ನು ಸೇರಿದೊಡನೆಯೇ ಪೂರ್ವಶರೀರದಲ್ಲಿ ಮಾಡಿದ ಕರ್ಮಫಲಗಳನ್ನು ಉಪಭೋಗಿಸಲು ಪ್ರಾರಂಭಿಸುತ್ತದೆ.

12174015a ಬಾಲೋ ಯುವಾ ಚ ವೃದ್ಧಶ್ಚ ಯತ್ಕರೋತಿ ಶುಭಾಶುಭಮ್|

12174015c ತಸ್ಯಾಂ ತಸ್ಯಾಮವಸ್ಥಾಯಾಂ ಭುಂಕ್ತೇ ಜನ್ಮನಿ ಜನ್ಮನಿ||

ಬಾಲಕನಾಗಿರಲಿ, ಯುವಕನಾಗಿರಲಿ ಅಥವಾ ವೃದ್ಧನಾಗಿರಲಿ – ಮಾಡಿದ ಶುಭಾಶುಭ ಕರ್ಮಗಳ ಫಲಗಳನ್ನು ಇನ್ನೊಂದು ಜನ್ಮದಲ್ಲಿ ಅದೇ ಅವಸ್ಥೆಯಲ್ಲಿ ಅನುಭವಿಸುತ್ತಾನೆ.

12174016a ಯಥಾ ಧೇನುಸಹಸ್ರೇಷು ವತ್ಸೋ ವಿಂದತಿ ಮಾತರಮ್|

12174016c ತಥಾ ಪೂರ್ವಕೃತಂ ಕರ್ಮ ಕರ್ತಾರಮನುಗಚ್ಚತಿ[4]||

ಸಾವಿರ ಹಸುಗಳ ಮಧ್ಯದಲ್ಲಿಯೂ ಕರುವು ಹೇಗೆ ತನ್ನ ತಾಯಿಯನ್ನೇ ಹೋಗಿ ಸೇರುವುದೋ ಹಾಗೆ ಹಿಂದೆ ಮಾಡಿದ ಕರ್ಮಫಲವು ತನ್ನ ಕರ್ತೃವನ್ನೇ ಅನುಸರಿಸಿ ಬರುತ್ತದೆ.

12174017a ಸಮುನ್ನಮಗ್ರತೋ ವಸ್ತ್ರಂ ಪಶ್ಚಾಚ್ಚುಧ್ಯತಿ ಕರ್ಮಣಾ|

12174017c ಉಪವಾಸೈಃ ಪ್ರತಪ್ತಾನಾಂ ದೀರ್ಘಂ ಸುಖಮನಂತಕಮ್||

ಉಪ್ಪುನೀರಿನಲ್ಲಿ ನೆನೆಸಿದ್ದ ಬಟ್ಟೆಯನ್ನು ತೊಳೆಯುವುದರಿಂದ ಹೇಗೆ ಶುದ್ಧವಾಗುತ್ತದೆಯೋ ಹಾಗೆ ವಿಷಯತ್ಯಾಗವೆಂಬ ಉಪವಾಸದ ಮೂಲಕ ತಪಸ್ಸುಮಾಡಿದವರ ಸುಖವು ಸುದೀರ್ಘವೂ ಕೊನೆಯಿಲ್ಲದುದೂ ಆಗುತ್ತದೆ.

12174018a ದೀರ್ಘಕಾಲೇನ ತಪಸಾ ಸೇವಿತೇನ ತಪೋವನೇ|

12174018c ಧರ್ಮನಿರ್ಧೂತಪಾಪಾನಾಂ ಸಂಸಿಧ್ಯಂತೇ ಮನೋರಥಾಃ||

ತಪೋವನದಲ್ಲಿ ದೀರ್ಘಕಾಲದ ತಪಸ್ಸು ಮತ್ತು ಧರ್ಮಗಳಿಂದ ಯಾರ ಪಾಪವು ತೊಳೆದುಹೋಗುವುದೋ ಅವರ ಸಂಪೂರ್ಣ ಮನೋರಥಗಳು ಸಿದ್ಧಿಸುತ್ತವೆ.

12174019a ಶಕುನೀನಾಮಿವಾಕಾಶೇ ಮತ್ಸ್ಯಾನಾಮಿವ ಚೋದಕೇ|

12174019c ಪದಂ ಯಥಾ ನ ದೃಶ್ಯೇತ ತಥಾ ಜ್ಞಾನವಿದಾಂ ಗತಿಃ||

ಹೇಗೆ ಆಕಾಶದಲ್ಲಿ ಪಕ್ಷಿಗಳ ಮತ್ತು ನೀರಿನಲ್ಲಿ ಮೀನುಗಳ ಪಾದಚಿಹ್ನೆಗಳು ಕಾಣುವುದಿಲ್ಲವೋ ಅದೇ ರೀತಿ ಜ್ಞಾನಿಗಳ ಗತಿಯನ್ನು ತಿಳಿಯುವುದಕ್ಕಾಗುವುದಿಲ್ಲ.

12174020a ಅಲಮನ್ಯೈರುಪಾಲಂಭೈಃ ಕೀರ್ತಿತೈಶ್ಚ ವ್ಯತಿಕ್ರಮೈಃ|

12174020c ಪೇಶಲಂ ಚಾನುರೂಪಂ ಚ ಕರ್ತವ್ಯಂ ಹಿತಮಾತ್ಮನಃ||

ಇತರರನ್ನು ನಿಂದಿಸುವುದರಿಂದಾಗಲೀ, ಇತರರು ಮಾಡಿದ ಅಪರಾಧವನ್ನು ಚರ್ಚಿಸುವುದರಿಂದಾಗಲೀ ಯಾವ ಪ್ರಯೋಜನವೂ ಇಲ್ಲ. ಯಾವ ಕಾರ್ಯವು ಮನೋಹರವೂ ಅನುಕೂಲವೂ ಮತ್ತು ಹಿತಕರವೂ ಆಗಿರುವುದೋ ಅಂತಹ ಕರ್ಮಗಳನ್ನು ಮಾಡುವುದೇ ಯೋಗ್ಯವಾಗಿದೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಚತುಃಸಪ್ತತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ನೂರಾಎಪ್ಪತ್ನಾಲ್ಕನೇ ಅಧ್ಯಾಯವು.

[1] ಸ್ವಕರ್ಮಕಲುಷಂ ಕೃತ್ವಾ ಕೃಚ್ಛ್ರೇ ಲೋಕೇ ವಿಧೀಯತೇ| (ಗೀತಾ ಪ್ರೆಸ್/ಭಾರತ ದರ್ಶನ).

[2] ಹಸ್ತದಕ್ಷಿಣಂ ಎನ್ನುವುದಕ್ಕೆ ವ್ಯಾಖ್ಯಾನಕಾರೌ ಹಸ್ತೋಪಲಕ್ಷಿತೇನ ತತ್ಕರ್ತವ್ಯೇನ ದಾನಾದಿನಾ ಕರ್ಮಣಾ ದಕ್ಷಿಣಂ ಅನುಕೂಲಂ ಅರ್ಥಾತ್ ಹಸ್ತೋಪಲಕ್ಷಿತವಾದ ದಾನಾದಿ ಕರ್ಮಗಳಿಂದ ಅನುಕೂಲವಾದ ಎಂದು ಅರ್ಥೈಸಿರುತ್ತಾರೆ (ಭಾರತ ದರ್ಶನ).

[3] ವಿಧಾನಪರಿರಕ್ಷಿತಮ್ ಎನ್ನುವುದಕ್ಕೆ ಕರ್ಮಜನಿತ ಅದೃಷ್ಟದಿಂದ ಸುರಕ್ಷಿತವಾಗಿರುವ ಎಂಬ ಅನುವಾದವೂ ಇದೆ (ಗೀತಾ ಪ್ರೆಸ್).

[4] ಇದೇ ಶ್ಲೋಕವು ಪುನಃ ಮುಂದೆ ಅನುಶಾಸನ ಪರ್ವದ ದಾನಧರ್ಮಪರ್ವದ ಅಧ್ಯಾಯ ೭ ರಲ್ಲಿ ಬರುತ್ತದೆ (ಶ್ಲೋಕ ೨೨).

Comments are closed.